ಯೆಹೋಶುವ 4:1-24

  • ನೆನಪಿಟ್ಕೊಳ್ಳೋಕೆ ಕಲ್ಲುಗಳನ್ನ ಇಟ್ರು (1-24)

4  ಎಲ್ಲ ಇಸ್ರಾಯೇಲ್ಯರು ಯೋರ್ದನ್‌ ನದಿ ದಾಟಿದ ಕೂಡ್ಲೇ ಯೆಹೋವ ಯೆಹೋಶುವನಿಗೆ:  “ಪ್ರತಿಯೊಂದು ಕುಲದಿಂದ ಒಬ್ಬೊಬ್ಬರಂತೆ 12 ಗಂಡಸ್ರನ್ನ ಕರೆದು+  ‘ಪುರೋಹಿತರು ನಿಂತ ಜಾಗದಿಂದ+ ಅಂದ್ರೆ ಯೋರ್ದನಿನ ಮಧ್ಯದಿಂದ 12 ಕಲ್ಲು ತಗೊಳ್ಳಿ. ಅವುಗಳನ್ನ ಹೊತ್ಕೊಂಡು ಹೋಗಿ ರಾತ್ರಿ ನೀವು ಉಳ್ಕೊಳ್ಳೋ ಜಾಗದಲ್ಲಿಡಿ’”ಅಂದನು.+  ಆಗ ಯೆಹೋಶುವ ಇಸ್ರಾಯೇಲ್ಯರ ಪ್ರತಿಯೊಂದು ಕುಲದಿಂದ ಒಬ್ಬೊಬ್ಬರಂತೆ ಆರಿಸ್ಕೊಂಡ 12 ಗಂಡಸ್ರನ್ನ ಕರೆದು  ಹೀಗಂದ: “ನಿಮ್ಮ ದೇವರಾಗಿರೋ ಯೆಹೋವನ ಮಂಜೂಷದ ಮುಂದೆಯಿಂದ ಹಾದು ಯೋರ್ದನ್‌ ನದಿ ಮಧ್ಯ ಹೋಗಿ, ಇಸ್ರಾಯೇಲ್ಯರ ಕುಲಗಳ ಸಂಖ್ಯೆಗೆ ಸರಿಯಾಗಿ ಪ್ರತಿಯೊಬ್ಬ ಒಂದೊಂದು ಕಲ್ಲನ್ನ ಹೆಗಲ ಮೇಲೆ ಹೊತ್ಕೊಂಡು ಬರಬೇಕು.  ದೇವರು ನಿಮಗಾಗಿ ಏನು ಮಾಡಿದ್ದಾನೆ ಅಂತ ಆ ಕಲ್ಲುಗಳು ನಿಮಗೆ ನೆನಪಿಸುತ್ತೆ. ಮುಂದೊಂದು ದಿನ ನಿಮ್ಮ ಮಕ್ಕಳು* ‘ಈ ಕಲ್ಲುಗಳನ್ನ ಯಾಕೆ ಇಲ್ಲಿ ಇಟ್ಟಿದ್ದೀರ?’ ಅಂತ ಕೇಳಿದ್ರೆ+  ‘ಯೆಹೋವನ ಒಪ್ಪಂದದ ಮಂಜೂಷ ಯೋರ್ದನ್‌ ನದಿ ದಾಟುವಾಗ ನದಿ ಹರಿಯದೆ ನಿಂತೋಯ್ತು.+ ಅದನ್ನ ಇಸ್ರಾಯೇಲ್‌ ಜನ ಯಾವಾಗ್ಲೂ ನೆನಪಲ್ಲಿಡೋಕೆ* ಈ ಕಲ್ಲುಗಳನ್ನ ಇಲ್ಲಿ ಇಟ್ಟಿದ್ದಾರೆ’ ಅಂತ ಹೇಳಬೇಕು.”+  ಯೆಹೋವ ಯೆಹೋಶುವನಿಗೆ ಹೇಳಿದ ಹಾಗೆನೇ ಇಸ್ರಾಯೇಲ್ಯರು ಯೋರ್ದನಿನ ಮಧ್ಯ ಹೋಗಿ ಇಸ್ರಾಯೇಲ್ಯರ ಕುಲಗಳ ಸಂಖ್ಯೆಗೆ ಸರಿಯಾಗಿ 12 ಕಲ್ಲು ತಗೊಂಡು ರಾತ್ರಿ ಉಳ್ಕೊಳ್ಳೋ ಜಾಗಕ್ಕೆ ಹೋಗಿ ಇಟ್ರು.  ಯೆಹೋಶುವ ಸಹ 12 ಕಲ್ಲುಗಳನ್ನ ತಗೊಂಡು ಪುರೋಹಿತರು ಒಪ್ಪಂದದ ಮಂಜೂಷನ ಹೊತ್ಕೊಂಡು ನಿಂತಿದ್ದ ಯೋರ್ದನಿನ ಮಧ್ಯದಲ್ಲಿ ಇಟ್ಟ.+ ಇವತ್ತಿಗೂ ಅವು ಅಲ್ಲೇ ಇವೆ. 10  ಮೋಶೆ ಯೆಹೋಶುವನಿಗೆ ಅಪ್ಪಣೆ ಕೊಟ್ಟಿದ್ದ ಎಲ್ಲವನ್ನ ಅಂದ್ರೆ ಯೆಹೋವ ಯೆಹೋಶುವನ ಮೂಲಕ ಜನ್ರಿಗೆ ಹೇಳಿದ ಎಲ್ಲವನ್ನ ಸಂಪೂರ್ಣವಾಗಿ ಮಾಡಿ ಮುಗಿಸೋ ತನಕ ಮಂಜೂಷ ಹೊತ್ಕೊಂಡಿದ್ದ ಪುರೋಹಿತರು ಯೋರ್ದನಿನ ಮಧ್ಯದಲ್ಲಿ ಹಾಗೇ ನಿಂತಿದ್ರು. ಅಷ್ಟರಲ್ಲಿ ಜನ್ರು ಬೇಗಬೇಗ ನದಿ ದಾಟಿದ್ರು. 11  ಜನ್ರೆಲ್ಲ ನದಿ ದಾಟಿದ ಕೂಡ್ಲೇ ಯೆಹೋವನ ಮಂಜೂಷ ಹೊತ್ಕೊಂಡಿದ್ದ ಪುರೋಹಿತರು ಜನ್ರ ಕಣ್ಮುಂದೆನೇ ನದಿ ದಾಟಿದ್ರು.+ 12  ಮೋಶೆ ತಮಗೆ ಹೇಳಿದ ಹಾಗೆ+ ರೂಬೇನ್ಯರು, ಗಾದ್ಯರು, ಮನಸ್ಸೆಯ ಅರ್ಧ ಕುಲದವರು ಸೈನ್ಯ ಕಟ್ಟಿ ಉಳಿದ ಇಸ್ರಾಯೇಲ್ಯರಿಗಿಂತ ಮುಂದೆ ಹೋಗಿ ನದಿ ದಾಟಿದ್ರು.+ 13  ಯುದ್ಧಕ್ಕಾಗಿ ತಯಾರಾಗಿದ್ದ ಸುಮಾರು 40,000 ಸೈನಿಕರು ಯೆಹೋವನ ಮುಂದೆ ನದಿ ದಾಟಿ ಯೆರಿಕೋವಿನ ಬಯಲು ಪ್ರದೇಶಕ್ಕೆ ಬಂದ್ರು. 14  ಆ ದಿನ ಯೆಹೋವ ಯೆಹೋಶುವನನ್ನ ಎಲ್ಲ ಇಸ್ರಾಯೇಲ್ಯರ ಕಣ್ಣಿಗೆ ದೊಡ್ಡ ನಾಯಕನಾಗಿ ಮಾಡಿದನು.+ ಜನ್ರು ಮೋಶೆಗೆ ಹೇಗೆ ತುಂಬಾ ಗೌರವ ಕೊಟ್ರೋ*+ ಹಾಗೇ ಯೆಹೋಶುವ ಬದುಕಿರೋ ತನಕ ಅವನಿಗೆ ತುಂಬಾ ಗೌರವ ಕೊಟ್ರು. 15  ಯೆಹೋವ ಯೆಹೋಶುವನಿಗೆ 16  “ಒಪ್ಪಂದದ ಮಂಜೂಷವನ್ನ+ ಹೊತ್ತು ನಿಂತಿರೋ ಪುರೋಹಿತರಿಗೆ ಯೋರ್ದನಿಂದ ಆಚೆ ಬನ್ನಿ ಅಂತ ಆಜ್ಞೆ ಕೊಡು” ಅಂದನು. 17  ಆಗ ಯೆಹೋಶುವ ಪುರೋಹಿತರಿಗೆ “ಯೋರ್ದನಿಂದ ಆಚೆ ಬನ್ನಿ” ಅಂದ. 18  ಯೆಹೋವನ ಒಪ್ಪಂದದ ಮಂಜೂಷವನ್ನ ಹೊತ್ತಿದ್ದ+ ಪುರೋಹಿತರು ಯೋರ್ದನಿನ ಮಧ್ಯದಿಂದ ದಡಕ್ಕೆ ಬಂದು ಒಣನೆಲದ ಮೇಲೆ ಕಾಲಿಟ್ಟ ತಕ್ಷಣ ಯೋರ್ದನ್‌ ನದಿ ಮುಂಚೆ ತರ ದಡ ಮೀರಿ ಹರಿತು.+ 19  ಮೊದಲ್ನೇ ತಿಂಗಳ ಹತ್ತನೇ ದಿನ ಜನ್ರು ಯೋರ್ದನಿಂದ ಯೆರಿಕೋವಿನ ಪೂರ್ವದ ಗಡಿಯಲ್ಲಿದ್ದ ಗಿಲ್ಗಾಲಿಗೆ ಬಂದು ಪಾಳೆಯ ಹೂಡಿದ್ರು.+ 20  ಯೋರ್ದನ್‌ ನದಿಯಿಂದ ಅವರು ತಗೊಂಡು ಬಂದಿದ್ದ 12 ಕಲ್ಲುಗಳನ್ನ ಯೆಹೋಶುವ ಗಿಲ್ಗಾಲಲ್ಲಿ ನಿಲ್ಲಿಸಿದ.+ 21  ಆಮೇಲೆ ಅವನು ಇಸ್ರಾಯೇಲ್ಯರಿಗೆ “ಮುಂದೆ ನಿಮ್ಮ ಮಕ್ಕಳು ‘ಈ ಕಲ್ಲುಗಳನ್ನ ಯಾಕೆ ಇಲ್ಲಿಟ್ಟಿದ್ದಾರೆ?’ ಅಂತ ಕೇಳಿದ್ರೆ,+ 22  ಹೀಗೆ ಹೇಳಬೇಕು: ‘ಇಸ್ರಾಯೇಲ್ಯರು ಯೋರ್ದನಿನ ಒಣನೆಲದ ಮೇಲೆ ನಡೆದು ಅದನ್ನ ದಾಟಿದ್ರು.+ 23  ಕೆಂಪು ಸಮುದ್ರ ದಾಟೋಕೆ ನಿಮ್ಮ ದೇವರಾದ ಯೆಹೋವ ನಮಗಾಗಿ ಅದನ್ನ ಹೇಗೆ ಒಣಗಿಸಿಬಿಟ್ನೋ ಅದೇ ತರ ಯೋರ್ದನ್‌ ನದಿ ದಾಟೋಕೆ ನಿಮ್ಮ ದೇವರಾದ ಯೆಹೋವ ಅದನ್ನ ಒಣಗಿಸಿಬಿಟ್ಟನು.+ 24  ಯೆಹೋವನಿಗೆ ಎಷ್ಟು ಶಕ್ತಿ ಇದೆ ಅಂತ ಭೂಮಿಯಲ್ಲಿರೋ ಎಲ್ಲ ಜನ್ರಿಗೆ ಗೊತ್ತಾಗಬೇಕು,+ ನಿಮ್ಮ ದೇವರಾದ ಯೆಹೋವನಿಗೆ ನೀವು ಯಾವಾಗ್ಲೂ ಭಯಪಡಬೇಕು ಅಂತ ಆತನು ಇದನ್ನ ಮಾಡಿದ್ದಾನೆ.’”

ಪಾದಟಿಪ್ಪಣಿ

ಅಕ್ಷ. “ಗಂಡು ಮಕ್ಕಳು.”
ಅಥವಾ “ಸ್ಮರಿಸೋಕೆ.”
ಅಕ್ಷ. “ಭಯಪಟ್ರೋ.”