ಯೋನ 1:1-17

  • ಯೋನ ಯೆಹೋವನಿಂದ ದೂರ ಓಡಿಹೋಗೋಕೆ ಪ್ರಯತ್ನಿಸ್ತಾನೆ (1-3)

  • ಜೋರಾಗಿ ಬಿರುಗಾಳಿ ಬೀಸೋ ತರ ಯೆಹೋವ ಮಾಡ್ತಾನೆ (4-6)

  • ಸಮಸ್ಯೆಗೆ ಯೋನ ಕಾರಣ (7-13)

  • ಯೋನನನ್ನ ಸಮುದ್ರಕ್ಕೆ ಹಾಕಲಾಗುತ್ತೆ (14-16)

  • ಒಂದು ದೊಡ್ಡ ಮೀನು ಯೋನನನ್ನ ನುಂಗುತ್ತೆ (17)

1  ಯೆಹೋವ ಅಮಿತೈಯ ಮಗ ಯೋನನಿಗೆ*+  “ನೀನು ದೊಡ್ಡ ಪಟ್ಟಣವಾದ ನಿನೆವೆಗೆ+ ಹೋಗು. ಅಲ್ಲಿನ ಜನ ಎಷ್ಟು ಕೆಟ್ಟ ಕೆಲಸ ಮಾಡ್ತಿದ್ದಾರಂತ ನಾನು ನೋಡಿದ್ದೀನಿ. ಅವರು ನಾಶ ಆಗ್ತಾರೆ ಅಂತ ಅವ್ರಿಗೆ ಸಾರಿ ಹೇಳು” ಅಂದನು.  ಆದ್ರೆ ಯೋನ ಯೆಹೋವನಿಂದ ದೂರ ಓಡಿಹೋಗಬೇಕಂತ ನೆನಸಿ ತಾರ್ಷೀಷಿಗೆ ಹೊರಟ. ಅವನು ಯೊಪ್ಪಕ್ಕೆ ಇಳಿದು ಅಲ್ಲಿ ತಾರ್ಷೀಷಿಗೆ ಹೋಗೋ ಹಡಗು ನಿಂತಿರೋದನ್ನ ನೋಡಿದ. ಅವನು ಪ್ರಯಾಣಕ್ಕೆ ದುಡ್ಡುಕೊಟ್ಟು ಆ ಹಡಗು ಹತ್ತಿದ. ಹೀಗೆ ಯೆಹೋವನಿಂದ ದೂರ ಹೋಗಬೇಕಂತ ಹಡಗಲ್ಲಿ ಇದ್ದವ್ರ ಜೊತೆ ತಾರ್ಷೀಷಿಗೆ ಹೋದ.  ಆಮೇಲೆ ಯೆಹೋವ ಸಮುದ್ರದಲ್ಲಿ ಜೋರಾಗಿ ಗಾಳಿ ಬೀಸೋ ತರ ಮಾಡಿದನು. ಆ ಬಿರುಗಾಳಿ ಎಷ್ಟು ಜೋರಾಗಿತ್ತಂದ್ರೆ ಹಡಗೇ ಒಡೆದುಹೋಗೋ ತರ ಇತ್ತು.  ಆಗ ನಾವಿಕರು ತುಂಬ ಹೆದರಿದ್ರು. ಪ್ರತಿಯೊಬ್ರು ಸಹಾಯಕ್ಕಾಗಿ ತಮ್ಮತಮ್ಮ ದೇವರಿಗೆ ಪ್ರಾರ್ಥಿಸೋಕೆ ಶುರು ಮಾಡಿದ್ರು. ಅಷ್ಟೇ ಅಲ್ಲ ಅವರು ಹಡಗಿನ ಭಾರ ಕಡಿಮೆ ಮಾಡೋಕೆ ಹಡಗಲ್ಲಿದ್ದ ಸರಕು ಸಾಮಾನುಗಳನ್ನ ಸಮುದ್ರಕ್ಕೆ ಎಸೆಯೋಕೆ ಶುರು ಮಾಡಿದ್ರು.+ ಆದ್ರೆ ಯೋನ ಹಡಗಿನ* ಒಳಭಾಗಕ್ಕೆ ಇಳಿದುಹೋಗಿ ಮಲಗಿದ್ದ. ಗಾಢವಾಗಿ ನಿದ್ದೆ ಮಾಡ್ತಿದ್ದ.  ಹಡಗಿನ ನಾಯಕ ಯೋನನ ಹತ್ರ ಬಂದು “ಇಂಥ ಸಂದರ್ಭದಲ್ಲೂ ನಿದ್ದೆ ಮಾಡ್ತಿದ್ದೀಯಾ? ಏಳು, ನಿನ್ನ ದೇವರಿಗೆ ಪ್ರಾರ್ಥಿಸು. ಒಂದುವೇಳೆ ನಿನ್ನ ದೇವರು ನಮಗೆ ಗಮನ ಕೊಟ್ಟು ನಮ್ಮನ್ನ ಉಳಿಸಬಹುದು”+ ಅಂದ.  ಆಮೇಲೆ ನಾವಿಕರು ಒಬ್ರಿಗೊಬ್ರು “ಈ ಕಷ್ಟಕ್ಕೆ ಕಾರಣ ಯಾರಂತ ಚೀಟು ಹಾಕಿ+ ತಿಳ್ಕೊಳ್ಳೋಣ” ಅಂತ ಮಾತಾಡ್ಕೊಂಡ್ರು. ಹಾಗೇ ಚೀಟಿ ಹಾಕಿದಾಗ ಚೀಟು ಯೋನನ ಹೆಸ್ರಿಗೆ ಬಿತ್ತು.+  ಅವರು ಯೋನನಿಗೆ “ನಮಗೆ ಈ ಕಷ್ಟ ಬಂದಿರೋದಕ್ಕೆ ಯಾರು ಕಾರಣ ಅಂತ ದಯವಿಟ್ಟು ಹೇಳು. ನೀನು ಏನು ಕೆಲಸ ಮಾಡ್ತೀಯಾ? ಎಲ್ಲಿಂದ ಬಂದಿದ್ದೀಯಾ? ನಿನ್ನ ದೇಶ ಯಾವುದು? ನೀನು ಯಾವ ಜನಾಂಗದವನು?” ಅಂತ ಕೇಳಿದ್ರು.  ಅದಕ್ಕೆ ಯೋನ “ನಾನು ಇಬ್ರಿಯ. ಸ್ವರ್ಗದಲ್ಲಿರೋ ದೇವರಾದ ಯೆಹೋವನನ್ನ ನಾನು ಆರಾಧಿಸ್ತೀನಿ.* ಸಮುದ್ರವನ್ನೂ ಒಣನೆಲವನ್ನೂ ಸೃಷ್ಟಿ ಮಾಡಿದ್ದು ಆತನೇ” ಅಂದ. 10  ಆಗ ಅವ್ರಿಗೆ ಹೆದರಿಕೆ ಇನ್ನೂ ಜಾಸ್ತಿ ಆಯ್ತು. ಯೋನ ಅವ್ರಿಗೆ ತಾನು ಯೆಹೋವನಿಂದ ದೂರ ಓಡಿ ಹೋಗ್ತಿದ್ದೀನಂತ ಮೊದ್ಲೇ ಹೇಳಿದ್ದ. ಅದಕ್ಕೆ ಅವರು “ನೀನು ಎಂಥ ಕೆಲಸ ಮಾಡಿದೆ?” ಅಂದ್ರು. 11  ಸಮುದ್ರ ಇನ್ನೂ ಜಾಸ್ತಿ ಅಲ್ಲೋಲ ಕಲ್ಲೋಲ ಆಗ್ತಿತ್ತು. ಹಾಗಾಗಿ ಅವರು ಯೋನನಿಗೆ “ಈ ಸಮುದ್ರ ಶಾಂತವಾಗಬೇಕಂದ್ರೆ ನಾವು ನಿನ್ನನ್ನ ಏನು ಮಾಡಬೇಕು?” ಅಂತ ಕೇಳಿದ್ರು. 12  ಅದಕ್ಕೆ ಅವನು “ನೀವು ಈ ಬಿರುಗಾಳಿಗೆ ಸಿಕ್ಕಿಬೀಳೋಕೆ ನಾನೇ ಕಾರಣ ಅಂತ ನಂಗೊತ್ತು. ನನ್ನನ್ನ ಸಮುದ್ರದಲ್ಲಿ ಬಿಸಾಕಿ. ಆಗ ಸಮುದ್ರ ಶಾಂತ ಆಗುತ್ತೆ” ಅಂದ. 13  ನಾವಿಕರು ಅದಕ್ಕೆ ಒಪ್ಪದೆ ಹಡಗನ್ನ ದಡಕ್ಕೆ ತರೋಕೆ ತಮ್ಮ ಶಕ್ತಿಯನ್ನೆಲ್ಲ ಬಳಸಿ ಹುಟ್ಟುಹಾಕಿದ್ರು. ಆದ್ರೆ ಏನೂ ಪ್ರಯೋಜನ ಆಗಲಿಲ್ಲ, ಯಾಕಂದ್ರೆ ಅವ್ರ ಹಡಗಿನ ಸುತ್ತಮುತ್ತ ಸಮುದ್ರ ಇನ್ನೂ ಹೆಚ್ಚು ಅಲ್ಲೋಲ ಕಲ್ಲೋಲ ಆಯ್ತು. 14  ಆಗ ಅವರು ಯೆಹೋವನಿಗೆ ಪ್ರಾರ್ಥನೆ ಮಾಡ್ತಾ “ಯೆಹೋವನೇ, ಈ ಮನುಷ್ಯನಿಂದಾಗಿ ದಯವಿಟ್ಟು ನಮ್ಮನ್ನ ನಾಶ ಮಾಡಬೇಡ. ನಿರಪರಾಧಿಯ ಕೊಲೆಯ ಅಪರಾಧವನ್ನ ನಮ್ಮ ಮೇಲೆ ಬರೋ ಹಾಗೆ ಮಾಡಬೇಡ. ಯಾಕಂದ್ರೆ ಯೆಹೋವನೇ, ನೀನು ಇದನ್ನೆಲ್ಲ ನಿನ್ನ ಇಷ್ಟದ ಹಾಗೆ ಮಾಡಿದ್ದೀಯಲ್ಲಾ” ಅಂದ್ರು. 15  ಆಮೇಲೆ ಯೋನನನ್ನ ಎತ್ತಿ ಸಮುದ್ರದಲ್ಲಿ ಹಾಕಿದ್ರು. ಆಗ ಸಮುದ್ರದ ಆರ್ಭಟ ನಿಂತುಹೋಯ್ತು. 16  ಇದನ್ನ ನೋಡಿ ಅವರು ಯೆಹೋವನಿಗೆ ತುಂಬ ಭಯಪಟ್ರು.+ ಅವರು ಯೆಹೋವನಿಗೆ ಬಲಿ ಅರ್ಪಿಸಿ ಹರಕೆ ಮಾಡ್ಕೊಂಡ್ರು. 17  ಆಮೇಲೆ ಯೋನನನ್ನ ನುಂಗೋಕೆ ಯೆಹೋವ ಒಂದು ತುಂಬ ದೊಡ್ಡ ಮೀನನ್ನ ಕಳಿಸಿದನು. ಅದು ಯೋನನನ್ನ ನುಂಗಿತು. ಅವನು ಮೂರು ದಿನ ಹಗಲೂ ರಾತ್ರಿ ಆ ಮೀನಿನ ಹೊಟ್ಟೆಯಲ್ಲೇ ಇದ್ದ.+

ಪಾದಟಿಪ್ಪಣಿ

ಈ ಹೆಸ್ರಿನ ಅರ್ಥ “ಪಾರಿವಾಳ.”
ಅಥವಾ “ಇಳಿದಾಣವಿರೋ ಹಡಗಿನ.”
ಅಥವಾ “ಭಯಪಡ್ತೀನಿ.”