ಯೋನ 4:1-11

  • ಯೋನ ಕೋಪ ಮಾಡ್ಕೊಂಡು ಸಾಯೋಕೆ ಬಯಸಿದ್ದು (1-3)

  • ಯೋನನಿಗೆ ಕರುಣೆಯ ಪಾಠ (4-11)

    • “ನೀನು ಇಷ್ಟು ಕೋಪ ಮಾಡ್ಕೊಳ್ಳೋದು ಸರಿನಾ?” (4)

    • ಸೋರೆಬಳ್ಳಿಯ ಪಾಠ (6-10)

4  ಆದ್ರೆ ಇದು ಯೋನನಿಗೆ ಸ್ವಲ್ಪನೂ ಇಷ್ಟ ಆಗಲಿಲ್ಲ, ಅವನ ಕೋಪ ನೆತ್ತಿಗೇರಿತು.  ಅವನು ಯೆಹೋವನಿಗೆ ಪ್ರಾರ್ಥಿಸ್ತಾ “ಯೆಹೋವನೇ, ಹೀಗೇ ಆಗುತ್ತೆ ಅಂತ ನಾನು ನನ್ನ ದೇಶದಲ್ಲಿ ಇದ್ದಾಗ್ಲೇ ಗೊತ್ತಿತ್ತು. ಅದಕ್ಕೇ ನಾನು ತಾರ್ಷೀಷಿಗೆ ಓಡಿ ಹೋದೆ.+ ಯಾಕಂದ್ರೆ ನೀನು ಕನಿಕರ ಮತ್ತು ಕರುಣೆ ಇರೋ ದೇವರು, ಬೇಗ ಕೋಪ ಮಾಡ್ಕೊಳ್ಳಲ್ಲ, ಶಾಶ್ವತ ಪ್ರೀತಿಯನ್ನ ಧಾರಾಳವಾಗಿ ತೋರಿಸ್ತೀಯ,+ ಮನಸ್ಸು ಬದಲಾಯಿಸ್ಕೊಂಡು ಕಷ್ಟವನ್ನ ತರಲ್ಲ ಅಂತ ನಂಗೊತ್ತಿತ್ತು.  ಈಗ ಯೆಹೋವನೇ, ದಯವಿಟ್ಟು ನನ್ನನ್ನ ಸಾಯಿಸಿಬಿಡು. ನಾನು ಬದುಕಿರೋದಕ್ಕಿಂತ ಸಾಯೋದೇ ಒಳ್ಳೇದು” ಅಂದ.+  ಆಗ ಯೆಹೋವ “ನೀನು ಇಷ್ಟು ಕೋಪ ಮಾಡ್ಕೊಳೋದು ಸರಿನಾ?” ಅಂತ ಕೇಳಿದನು.  ಆಮೇಲೆ ಯೋನ ಪಟ್ಟಣದಿಂದ ಹೊರಗೆ ಹೋಗಿ ಅದ್ರ ಪೂರ್ವ ದಿಕ್ಕಲ್ಲಿ ಕೂತ. ಅಲ್ಲಿ ಅವನೊಂದು ಚಪ್ಪರ ಕಟ್ಟಿ ಅದ್ರ ನೆರಳಲ್ಲಿ ಕೂತು ಪಟ್ಟಣಕ್ಕೆ ಏನಾಗುತ್ತೆ ಅಂತ ನೋಡ್ತಾ ಇದ್ದ.+  ಆಗ ಯೆಹೋವ ದೇವರು ಯೋನನಿಗೆ ನೆರಳು ಕೊಡೋಕೆ, ಅವನ ಕೋಪವನ್ನ ಕಡಿಮೆ ಮಾಡೋಕೆ ಒಂದು ಸೋರೆಬಳ್ಳಿ* ಬೆಳೆದು ಚಪ್ಪರದ ಮೇಲೆ ಹಬ್ಬೋ ತರ ಮಾಡಿದನು. ಆ ಬಳ್ಳಿಯನ್ನ ನೋಡಿದಾಗ ಯೋನನಿಗೆ ತುಂಬ ಸಂತೋಷ ಆಯ್ತು.  ಆದ್ರೆ ಮಾರನೇ ದಿನ ಸೂರ್ಯೋದಯದ ಸಮಯದಲ್ಲಿ ಸತ್ಯ ದೇವರು ಒಂದು ಹುಳ ಕಳಿಸಿದನು. ಅದು ಸೋರೆಬಳ್ಳಿಯನ್ನ ತಿಂದಿದ್ರಿಂದ ಆ ಬಳ್ಳಿ ಬಾಡಿಹೋಯ್ತು.  ಬಿಸಿಲು ಬರೋಕೆ ಶುರು ಆದಾಗ ದೇವರು ಪೂರ್ವ ದಿಕ್ಕಿಂದ ಬಿಸಿಗಾಳಿ ಬೀಸೋ ತರ ಮಾಡಿದನು. ಆ ಬಿಸಿಲು ಯೋನನ ನೆತ್ತಿಗೆ ಹೊಡಿತು. ಆಗ ಯೋನನಿಗೆ ತಲೆ ಸುತ್ತು ಬರೋ ತರ ಆಯ್ತು. ಆಗ ಅವನು ತನ್ನ ಸಾವಿಗಾಗಿ ಬೇಡ್ತಾ “ನಾನು ಬದುಕಿರೋದಕ್ಕಿಂತ ಸಾಯೋದೇ ಒಳ್ಳೇದು” ಅಂತ ಹೇಳ್ತಿದ್ದ.+  ದೇವರು ಯೋನನಿಗೆ “ನೀನು ಆ ಸೋರೆಬಳ್ಳಿಗಾಗಿ ಇಷ್ಟು ಕೋಪ ಮಾಡ್ಕೊಳ್ಳೋದು ಸರಿನಾ?” ಅಂತ ಕೇಳಿದನು.+ ಅದಕ್ಕೆ ಅವನು “ಹೌದು, ಸರಿ. ನನಗೆಷ್ಟು ಕೋಪ ಬರ್ತಿದೆ ಅಂದ್ರೆ ಬದುಕೋದೇ ಬೇಡ ಅನಿಸ್ತಿದೆ” ಅಂದ. 10  ಆಗ ಯೆಹೋವ “ನೀನು ಆ ಸೋರೆಬಳ್ಳಿಗಾಗಿ ಏನೂ ಮಾಡಲಿಲ್ಲ, ಅದನ್ನ ಬೆಳೆಸಲೂ ಇಲ್ಲ, ಅದು ಒಂದು ರಾತ್ರಿಯಲ್ಲಿ ಹುಟ್ಟಿ ಇನ್ನೊಂದು ರಾತ್ರಿ ಒಣಗಿಹೋಯ್ತು. ಅದಕ್ಕೆ ನೀನು ದುಃಖಪಡ್ತಿದ್ದೀಯ. ಆ ಸೋರೆಬಳ್ಳಿಗೇ ನೀನು ಇಷ್ಟು ಕನಿಕರ ತೋರಿಸಿದ್ರೆ, 11  ಯಾವುದು ಒಳ್ಳೇದು ಯಾವುದು ಕೆಟ್ಟದು ಅಂತ ಗೊತ್ತಿಲ್ಲದ* 1,20,000ಕ್ಕಿಂತ ಜಾಸ್ತಿ ಜನ್ರಿರೋ, ತುಂಬ ಪ್ರಾಣಿಗಳಿರೋ ಆ ದೊಡ್ಡ ಪಟ್ಟಣ+ ನಿನೆವೆಗೆ ನಾನು ಕನಿಕರ ತೋರಿಸಬಾರದಾ?”+ ಅಂದನು.

ಪಾದಟಿಪ್ಪಣಿ

ಬಹುಶಃ “ಹರಳೆಣ್ಣೆ ಗಿಡ.”
ಅಥವಾ “ಎಡಗೈ ಬಲಗೈ ತಿಳಿಯದ.”