ಯೋಬ 15:1-35

  • ಎಲೀಫಜನ ಎರಡನೇ ಸಲದ ಮಾತುಗಳು (1-35)

    • ಯೋಬನಿಗೆ ದೇವಭಯ ಇಲ್ಲ (4)

    • ಯೋಬ ಒಬ್ಬ ಅಹಂಕಾರಿ (7-9)

    • ‘ದೇವರಿಗೆ ತನ್ನ ದೇವದೂತರಲ್ಲಿ ನಂಬಿಕೆ ಇಲ್ಲ’ (15)

    • ‘ಕೆಟ್ಟವನು ನೋವನ್ನ ಅನುಭವಿಸ್ತಾನೆ’ (20-24)

15  ಅದಕ್ಕೆ ತೇಮಾನ್ಯನಾದ ಎಲೀಫಜ+ ಹೀಗಂದ:   “ಬುದ್ಧಿ ಇರೋನು ತಲೆಬುಡ ಇಲ್ಲದೆ ವಾದ ಮಾಡ್ತಾನಾ? ಮನಸ್ಸಲ್ಲಿ ಕೆಟ್ಟ ಯೋಚನೆಗಳನ್ನ ತುಂಬಿಸ್ಕೊಳ್ತಾನಾ?*   ವಟವಟ ಅಂತ ಮಾತಾಡಿ ಬೈದ್ರೆ ಪ್ರಯೋಜನ ಇಲ್ಲ,ದೊಡ್ಡ ದೊಡ್ಡ ಮಾತುಗಳನ್ನ ಹೇಳೋದ್ರಿಂದ ಕೂಡ ಪ್ರಯೋಜನ ಇಲ್ಲ.   ನಿನ್ನಿಂದಾಗಿ ಬೇರೆಯವ್ರಿಗೆ ದೇವರ ಮೇಲೆ ಭಯ ಕಮ್ಮಿ ಆಗಿದೆ,ದೇವರ ಬಗ್ಗೆ ಯೋಚ್ನೆ ಮಾಡೋದನ್ನೇ ಬಿಟ್ಟುಬಿಟ್ಟಿದ್ದಾರೆ.   ನೀನು ತಪ್ಪು ಮಾಡಿರೋದ್ರಿಂದ ಹೀಗೆಲ್ಲ ಮಾತಾಡ್ತೀಯ,ಕುತಂತ್ರದಿಂದ ಮಾತಾಡ್ತೀಯ.   ನೀನು ತಪ್ಪು ಮಾಡಿದ್ದೀಯ ಅಂತ ನಾನು ಹೇಳಬೇಕಾಗಿಲ್ಲ, ನಿನ್ನ ಮಾತಿಂದಾನೇ ಗೊತ್ತಾಗುತ್ತೆ,ನಿನ್ನ ಮಾತುಗಳೇ ನಿನ್ನ ವಿರುದ್ಧ ಸಾಕ್ಷಿ ಹೇಳ್ತಿವೆ.+   ಮನುಷ್ಯರಲ್ಲಿ ನೀನೇನಾ ಮೊದ್ಲು ಹುಟ್ಟಿದ್ದು? ಬೆಟ್ಟಗಳು ಸೃಷ್ಟಿ ಆಗೋ ಮುಂಚೆನೇ ನೀನು ಹುಟ್ಟಿದ್ಯಾ?   ದೇವರು ನಿನ್ನ ಹತ್ರ ಗುಟ್ಟಾಗಿ ಮಾತಾಡ್ತಾನಾ? ನೀನೊಬ್ಬನೇ ತುಂಬ ಬುದ್ಧಿವಂತನಾ?   ನಮಗೆ ಗೊತ್ತಿಲ್ಲದೇ ಇರೋ ಯಾವ ವಿಷ್ಯ ನಿನಗೆ ಗೊತ್ತು?+ ನಮಗೆ ಅರ್ಥವಾಗದೇ ಇರೋ ಯಾವ ವಿಷ್ಯ ನಿನಗೆ ಅರ್ಥ ಆಗಿದೆ? 10  ತಲೆನರೆತವರು, ವಯಸ್ಸಾದವರು ನಮ್ಮ ಜೊತೆ ಇದ್ದಾರೆ,+ನಿನ್ನ ಅಪ್ಪನಿಗಿಂತ ದೊಡ್ಡವರೂ ಇಲ್ಲಿದ್ದಾರೆ. 11  ದೇವರು ಸಮಾಧಾನ ಹೇಳಿದ್ದು ನಿನಗೆ ಸಾಕಾಗಿಲ್ವಾ? ಮೃದುವಾಗಿ ಹೇಳಿದ್ದನ್ನ ನೀನು ಕೇಳಲ್ವಾ? 12  ನಿನ್ನ ಹೃದಯ ಯಾಕೆ ನೀನೇ ಸರಿ ಅಂತ ಹೇಳ್ತಿದೆ? ಕೋಪದಿಂದ ಯಾಕೆ ಕಣ್ಣು ಕೆಂಡದ ಹಾಗೆ ಕೆಂಪಾಗಿದೆ? 13  ನಿನ್ನ ಕೋಪವನ್ನ ದೇವರ ಮೇಲೆ ತೋರಿಸ್ತಾ ಇದ್ದೀಯ,ಅದಕ್ಕೇ ನಿನ್ನ ಬಾಯಿಂದ ಇಂಥ ಮಾತು ಬರ್ತಿದೆ. 14  ಇವತ್ತು ಇದ್ದು ನಾಳೆ ಸಾಯೋ ಮನುಷ್ಯ ತಪ್ಪು ಮಾಡದೇ ಇರೋಕೆ ಆಗುತ್ತಾ? ಸ್ತ್ರೀಗೆ ಹುಟ್ಟಿದವನು ನೀತಿವಂತನಾಗಿ ಇರೋಕೆ ಆಗುತ್ತಾ?+ 15  ನೋಡು, ಆತನಿಗೆ ತನ್ನ ದೇವದೂತರಲ್ಲಿ* ನಂಬಿಕೆ ಇಲ್ಲ,ಸ್ವರ್ಗ ಸಹ ಆತನ ದೃಷ್ಟಿಯಲ್ಲಿ ಪರಿಶುದ್ಧ ಅಲ್ಲ.+ 16  ಹೀಗಿರುವಾಗ ನೀರು ಕುಡಿದಷ್ಟು ಸುಲಭವಾಗಿ ಕೆಟ್ಟದು ಮಾಡೋ ಮನುಷ್ಯ,ಭ್ರಷ್ಟನಾದ ಅಸಹ್ಯನಾದ ಮನುಷ್ಯ ಯಾವ ಲೆಕ್ಕಕ್ಕೆ?+ 17  ನಾನು ಹೇಳೋದನ್ನ ಸ್ವಲ್ಪ ಕೇಳು! ನಾನು ನೋಡಿದ್ದನ್ನ ಹೇಳ್ತೀನಿ, 18  ವಿವೇಕಿಗಳು ತಾತಮುತ್ತಾತರಿಂದ ತಿಳ್ಕೊಂಡ ವಿಷ್ಯವನ್ನ,+ಗುಟ್ಟಾಗಿಡದೆ ಹೇಳಿದ ವಿಚಾರವನ್ನ ಹೇಳ್ತೀನಿ, ಕೇಳು! 19  ಅವ್ರಿಗೆ ಮಾತ್ರ ದೇಶ ಸಿಕ್ತು,ಅಲ್ಲಿ ಯಾವ ಅಪರಿಚಿತರಿಗೂ ಜಾಗ ಸಿಗಲಿಲ್ಲ. 20  ಕೆಟ್ಟವರು ಜೀವನಪೂರ್ತಿ ದುಃಖದಲ್ಲೇ ನರಳಾಡ್ತಾರೆ,ಕ್ರೂರಿಗಳು ಇಡೀ ಜೀವನ ಕಷ್ಟಪಡ್ತಾರೆ. 21  ಭಯಾನಕ ಸದ್ದು ಅವರ ಕಿವಿಗೆ ಬೀಳುತ್ತೆ,+ನೆಮ್ಮದಿಯಿಂದ ಇರುವಾಗ ಲೂಟಿಗಾರರು ದಾಳಿ ಮಾಡ್ತಾರೆ. 22  ಕತ್ತಲೆಯಿಂದ ಬಿಡುಗಡೆ ಸಿಗುತ್ತೆ ಅನ್ನೋ ನಂಬಿಕೆ ಅವ್ರಿಗಿಲ್ಲ,+ಕತ್ತಿಯಿಂದ ಸಾಯೋದು ಖಂಡಿತ. 23  ‘ಊಟ ಎಲ್ಲಿ? ಎಲ್ಲಿ?’ ಅಂತ ಕೇಳ್ತಾ ಆಹಾರಕ್ಕಾಗಿ ಅಲೆದಾಡ್ತಾರೆ,ಆಗ ಜೀವನ ಕತ್ತಲೆಯಲ್ಲಿ ಮುಳುಗುತ್ತೆ ಅಂತ ಅವ್ರಿಗೆ ಗೊತ್ತಾಗುತ್ತೆ. 24  ನೋವು, ಆತಂಕ ಅವ್ರನ್ನ ಹೆದರಿಸಿ ಬೆದರಿಸುತ್ತೆ,ಅವು ರಾಜನು ಸೈನ್ಯದ ಜೊತೆ ಬಂದು ದಾಳಿ ಮಾಡೋ ಹಾಗೆ ಮುತ್ಕೊಳ್ಳುತ್ತೆ. 25  ಯಾಕಂದ್ರೆ ಅವರು ದೇವರ ವಿರುದ್ಧ ತಿರುಗಿಬಿದ್ದಿದ್ದಾರೆ,ಸರ್ವಶಕ್ತನ ಜೊತೆ ಜಗಳ ಮಾಡೋಕೆ* ಧೈರ್ಯ ಮಾಡಿದ್ದಾರೆ. 26  ದೊಡ್ಡ ಗುರಾಣಿ ಹಿಡ್ಕೊಂಡುಆತನ ವಿರುದ್ಧ ಮೊಂಡನ ಹಾಗೇ ನುಗ್ಗಿದ್ದಾರೆ, 27  ಅವ್ರ ಮುಖದಲ್ಲೆಲ್ಲ ಕೊಬ್ಬು ಬಂದಿದೆ,ಸೊಂಟದ ಸುತ್ತ ಬೊಜ್ಜು ತುಂಬಿದೆ.* 28  ಅವ್ರಿದ್ದ ಪಟ್ಟಣಗಳು ಬೇಗ ನಾಶ ಆಗುತ್ತೆ,ಅವ್ರಿದ್ದ ಮನೆಗಳು ಹಾಳು ಕುಪ್ಪೆಯಾಗುತ್ತೆ,ಅಲ್ಲಿ ಯಾರೂ ಇರಲ್ಲ. 29  ಅವರು ಶ್ರೀಮಂತರಾಗಲ್ಲ, ಅವ್ರಿಂದ ಹಣ-ಆಸ್ತಿಯನ್ನ ಕೂಡಿಸಿಡೋಕೆ ಆಗಲ್ಲ,ಅವ್ರ ಆಸ್ತಿ ಹೆಚ್ಚಾಗದೇ ಇರೋದ್ರಿಂದ ಅದು ದೇಶದಲ್ಲೆಲ್ಲ ತುಂಬ್ಕೊಳ್ಳಲ್ಲ. 30  ಕತ್ತಲೆಯಿಂದ ತಪ್ಪಿಸ್ಕೊಳ್ಳೋಕೆ ಅವ್ರಿಂದಾಗಲ್ಲ,ಅವರು ರೆಂಬೆಕೊಂಬೆಗಳು ಸುಟ್ಟು ಹೋಗಿರೋ ಮರದ ಹಾಗೇ,*ದೇವರು ಬಾಯಿಂದ ಜೋರಾಗಿ ಊದಿದಾಗ ಸತ್ತು ಹೋಗ್ತಾರೆ.+ 31  ಕೆಲಸಕ್ಕೆ ಬಾರದ ವಿಷ್ಯಗಳ ಮೇಲೆ ನಂಬಿಕೆ ಇಟ್ಟು ದಾರಿ ತಪ್ಪಬಾರದು,ದಾರಿ ತಪ್ಪಿದ್ರೆ ಸಿಗೋದು ಬರೀ ನಿರಾಶೆ. 32  ಅದು ಬೇಗ ಆಗುತ್ತೆ,ಅವರು ಯಾವತ್ತೂ ರೆಂಬೆಕೊಂಬೆಗಳು ಸೊಂಪಾಗಿ ಬೆಳೆಯದ ಮರ ತರ,+ 33  ಹಣ್ಣಾಗೋದಕ್ಕೆ ಮುಂಚೆನೇ ದ್ರಾಕ್ಷಿಗಳು ಉದುರಿಹೋದ ದ್ರಾಕ್ಷಿಬಳ್ಳಿ ತರ,ಹೂವೆಲ್ಲ ಉದುರಿಹೋದ ಆಲಿವ್‌ ಮರ ತರ. 34  ದೇವರನ್ನ ನಂಬದವ್ರ* ಸಭೆ ಬೆಳೆಯಲ್ಲ,+ಲಂಚಕೋರರ ಡೇರೆಗಳನ್ನ ಬೆಂಕಿ ಸುಟ್ಟುಬಿಡುತ್ತೆ. 35  ಅವರು ಕೆಟ್ಟದ್ದನ್ನೇ ಯೋಚಿಸ್ತಾರೆ, ಕೆಟ್ಟದ್ದನ್ನೇ ಮಾಡ್ತಾರೆ,ಹೇಗೆ ಮೋಸ ಮಾಡೋದು ಅಂತ ಸಂಚು ಮಾಡ್ತಾರೆ.”

ಪಾದಟಿಪ್ಪಣಿ

ಅಕ್ಷ. “ಪೂರ್ವದ ಗಾಳಿಯನ್ನ ಹೊಟ್ಟೆಯಲ್ಲಿ ತುಂಬಿಸ್ಕೊಳ್ತಾನಾ?”
ಅಥವಾ “ಪವಿತ್ರರಲ್ಲಿ.”
ಅಥವಾ “ಸೋಲಿಸೋಕೆ.”
ಇಲ್ಲಿ ಕೊಬ್ಬು ಅನ್ನೋದು ಏಳಿಗೆ, ಜಾಸ್ತಿ ಮಜಾ ಮಾಡೋದು, ದುರಹಂಕಾರವನ್ನ ಸೂಚಿಸುತ್ತೆ.
ಅಂದ್ರೆ, ಮುಂಚಿನ ತರ ಜೀವನ ಮಾಡ್ತೀನಿ ಅನ್ನೋ ನಂಬಿಕೆ ಸ್ವಲ್ಪನೂ ಇರಲ್ಲ.
ಅಥವಾ “ಧರ್ಮಭ್ರಷ್ಟರ.”