ಯೋಬ 21:1-34

  • ಯೋಬನ ಉತ್ತರ (1-34)

    • ಕೆಟ್ಟವರು ಯಾಕೆ ಸುಖವಾಗಿ ಬದುಕ್ತಾರೆ? (7-13)

    • ಸಮಾಧಾನ ಮಾಡುವವರ ಬಣ್ಣ ಬಯಲು (27-34)

21  ಅದಕ್ಕೆ ಯೋಬ ಏನು ಉತ್ತರ ಕೊಟ್ಟ ಅಂದ್ರೆ,   “ನಾನು ಹೇಳೋದನ್ನ ಸ್ವಲ್ಪ ಗಮನಕೊಟ್ಟು ಕೇಳಿ,ಅದೇ ನೀವು ನನಗೆ ಕೊಡೋ ಸಾಂತ್ವನ.   ಸ್ವಲ್ಪ ಇರಿ, ನನಗೂ ಮಾತಾಡೋಕೆ ಬಿಡಿ,ಆಮೇಲೆ ಬೇಕಾದ್ರೆ ನೀವು ನನ್ನನ್ನ ಗೇಲಿ ಮಾಡಿದ್ರೂ ಪರ್ವಾಗಿಲ್ಲ.+   ನಾನು ಮನುಷ್ಯನ ಹತ್ರ ನನ್ನ ಕಷ್ಟ ಹೇಳ್ತಾ ಇದ್ದೀನಾ? ಹಾಗಿದ್ರೆ ಇಷ್ಟು ಹೊತ್ತಿಗೆ ನನ್ನ ತಾಳ್ಮೆ ಕಟ್ಟೆ ಒಡೆದು ಹೋಗ್ತಿತ್ತು.   ನನ್ನನ್ನ ಸ್ವಲ್ಪ ಚೆನ್ನಾಗಿ ನೋಡಿ, ಆಗ ನೀವೇ ಆಶ್ಚರ್ಯಪಡ್ತೀರ,ನಿಮ್ಮ ಬಾಯಿ ಮೇಲೆ ಕೈ ಇಟ್ಕೊಳ್ತೀರ.   ಇಲ್ಲಿ ತನಕ ಆಗಿರೋ ವಿಷ್ಯ ನೆನಸ್ಕೊಂಡ್ರೆನನ್ನ ಮನಸ್ಸು ಚಡಪಡಿಸುತ್ತೆ, ಮೈಯೆಲ್ಲಾ ನಡುಗುತ್ತೆ.   ಕೆಟ್ಟವರು ಯಾಕೆ ಜಾಸ್ತಿ ದಿನ ಬದುಕ್ತಾರೆ?+ ಶ್ರೀಮಂತರಾಗಿ, ಸುಖವಾಗಿ ಬದುಕ್ತಾರೆ?+   ಅವ್ರ ಮಕ್ಕಳು ಯಾವಾಗ್ಲೂ ಅವ್ರ ಕಣ್ಮುಂದೆ ಇರ್ತಾರೆ,ಅವರು ಅನೇಕ ಪೀಳಿಗೆಯವ್ರನ್ನ ನೋಡುವಷ್ಟು ಕಾಲ ಬದುಕಿರ್ತಾರೆ.   ಅವರು ತಮ್ಮ ಮನೇಲಿ ಸುರಕ್ಷಿತವಾಗಿ, ಭಯ ಇಲ್ಲದೆ ಇರ್ತಾರೆ,+ದೇವರು ಕೋಲು ಹಿಡಿದು ಅವ್ರಿಗೆ ಶಿಕ್ಷೆ ಕೊಡಲ್ಲ. 10  ಅವ್ರ ಹೋರಿಗಳಿಗೆ ತುಂಬ ಮರಿ ಆಗುತ್ತೆ,*ಹಸುಗಳಿಗೆ ಗರ್ಭಪಾತ ಆಗಲ್ಲ, ಅವುಗಳಿಗೆ ಕರುಗಳು ಹುಟ್ಟೇ ಹುಟ್ಟುತ್ತೆ. 11  ಹಟ್ಟಿಯಿಂದ ಹೊರಗೆ ಬಿಟ್ಟ ಆಡು-ಕುರಿಗಳ ತರ ಅವ್ರ ಮಕ್ಕಳುಮನೆಯಿಂದ ಹೊರಗೆ ಓಡಿ, ಕುಣಿದು ಕುಪ್ಪಳಿಸ್ತಾರೆ. 12  ದಮ್ಮಡಿ, ತಂತಿವಾದ್ಯ ನುಡಿಸ್ತಾ ಹಾಡ್ತಾರೆ,ಕೊಳಲಿನ ಸ್ವರಕ್ಕೆ ಕುಣಿದಾಡ್ತಾರೆ.+ 13  ಅವ್ರ ಬಾಳು ಸಂತೋಷ ತೃಪ್ತಿಯಿಂದ ತುಂಬಿರುತ್ತೆ,ಅವ್ರಿಗೆ ಒಳ್ಳೇ ಸಾವು ಬರುತ್ತೆ. 14  ಆದ್ರೆ ಅವರು ಸತ್ಯ ದೇವ್ರಿಗೆ ‘ನಮ್ಮನ್ನ ಬಿಟ್ಟುಬಿಡು,ನಿನ್ನ ಮಾರ್ಗಗಳ ಬಗ್ಗೆ ತಿಳ್ಕೊಳ್ಳೋಕೆ ನಮಗೆ ಸ್ವಲ್ಪನೂ ಇಷ್ಟ ಇಲ್ಲ.+ 15  ಯಾರು ಆ ಸರ್ವಶಕ್ತ? ನಾವ್ಯಾಕೆ ಅವನ ಸೇವೆ ಮಾಡಬೇಕು?+ ಅವನ ಬಗ್ಗೆ ತಿಳ್ಕೊಂಡ್ರೆ ನಮಗೇನು ಲಾಭ?’ ಅಂತ ಕೇಳ್ತಾರೆ.+ 16  ಆದ್ರೆ ನಂಗೊತ್ತು, ಅವ್ರಿಗೆ ಎಷ್ಟೇ ಆಸ್ತಿ, ಐಶ್ವರ್ಯ ಇದ್ರೂ ಅದು ಅವ್ರ ಕೈಯಲ್ಲಿ ನಿಲ್ಲಲ್ಲ.+ ನಾನಂತೂ ಆ ಕೆಟ್ಟವ್ರ ತರ ಯೋಚ್ನೆ* ಮಾಡಲ್ಲ.+ 17  ಕೆಟ್ಟವ್ರ ದೀಪ ಯಾವತ್ತಾದ್ರೂ ಆರಿಹೋಗಿದ್ಯಾ?+ ಅವ್ರಿಗೆ ಯಾವತ್ತಾದ್ರೂ ಕಷ್ಟ ಬಂದಿದ್ಯಾ? ದೇವರು ಕೋಪದಿಂದ ಅವ್ರನ್ನ ಯಾವತ್ತಾದ್ರೂ ನಾಶ ಮಾಡಿದ್ದಾನಾ? 18  ಗಾಳಿಗೆ ಹಾರಿಹೋಗೋ ಹುಲ್ಲಿನ ಹಾಗೆ ಕಣ್ಮರೆ ಆಗಿದ್ದಾರಾ? ಬಿರುಗಾಳಿಗೆ ಬಡಿದ್ಕೊಂಡು ಹೋಗೋ ಹೊಟ್ಟಿನ ತರ ಇಲ್ಲದೆ ಹೋಗಿದ್ದಾರಾ? 19  ಕೆಟ್ಟವ್ರ ಪಾಪದ ಫಲವನ್ನ ಅವ್ರ ಮಕ್ಕಳು ಅನುಭವಿಸೋ ಹಾಗೆ ದೇವರು ಮಾಡ್ತಾನೆ. ಆದ್ರೆ ಆ ಪಾಪದ ಫಲವನ್ನ ಕೆಟ್ಟವನೇ ತಿನ್ನೋ ಹಾಗೆ ದೇವರು ಮಾಡಬೇಕು,ಆಗ ಅವನಿಗೆ ಆ ನೋವು ಅರ್ಥ ಆಗುತ್ತೆ.+ 20  ಅವನಿಗೆ ಬರೋ ಕಷ್ಟವನ್ನ ಅವನೇ ಕಣ್ಣಾರೆ ನೋಡ್ಲಿ,ಸರ್ವಶಕ್ತನ ಕಡುಕೋಪದ ಪಾತ್ರೆಯಲ್ಲಿ ಇರೋದನ್ನ ಅವನೇ ಕುಡಿಲಿ.+ 21  ಅವನ ಆಯಸ್ಸನ್ನ ಕಡಿಮೆ ಮಾಡಿದ್ರೆಅವನ ಮಕ್ಕಳ ಗತಿ ಏನು ಅನ್ನೋ ಚಿಂತೆ ಅವನಿಗೆ ಇದ್ಯಾ?+ 22  ದೇವರು ದೊಡ್ಡ ದೊಡ್ಡ ವ್ಯಕ್ತಿಗಳಿಗೆ ನ್ಯಾಯತೀರಿಸ್ತಾನೆ,+ಹೀಗಿರುವಾಗ ಆತನಿಗೆ ಯಾರಾದ್ರೂ ಏನನ್ನಾದ್ರೂ* ಕಲಿಸಕ್ಕಾಗುತ್ತಾ?+ 23  ಗಟ್ಟಿಮುಟ್ಟಾಗಿರೋ,+ನೆಮ್ಮದಿಯಿಂದ ಬದುಕ್ತಿರೋ,+ 24  ತೊಡೆಗಳು ಕೊಬ್ಬಿರೋ,ಮೂಳೆಗಳು ಗಟ್ಟಿಯಾಗಿರೋ* ಒಬ್ಬ ವ್ಯಕ್ತಿ ಸಾಯೋ ತರಾನೇ, 25  ಬಾಳಲ್ಲಿ ತುಂಬ ನೊಂದಿರೋ, ಸುಖವನ್ನೇ ಕಾಣದವ್ಯಕ್ತಿ ಕೂಡ ಸತ್ತು ಹೋಗ್ತಾನೆ. 26  ಇಬ್ರೂ ಹೋಗೋದು ಮಣ್ಣಿಗೇ,+ಅವರಿಬ್ರನ್ನ ಹುಳಗಳು ಮುತ್ತಿಕೊಳ್ಳುತ್ತೆ.+ 27  ಹಾ! ನಿಮ್ಮ ಮನಸ್ಸಲ್ಲಿ ಏನು ಓಡ್ತಿದೆ ಅಂತ ನನಗೆ ಚೆನ್ನಾಗಿ ಗೊತ್ತು,ನನ್ನ ಜೊತೆ ದಯೆಯಿಲ್ಲದೆ ನಡ್ಕೊಳ್ಳೋಕೆ* ಸಂಚು ಮಾಡ್ತಾ ಇದ್ದೀರ ಅಂತ ನಂಗೊತ್ತು.+ 28  ‘ಯಾವ ಪ್ರಖ್ಯಾತ ವ್ಯಕ್ತಿಯ ಮನೆ ಉಳ್ಕೊಂಡಿದೆ? ಯಾವ ಕೆಟ್ಟವನ ಡೇರೆ ಬೀಳದೆ ನಿಂತಿದೆ?’ ಅಂತ ನೀವು ಕೇಳ್ತೀರ.+ 29  ಬೇರೆ ಬೇರೆ ಊರಿಗೆ ಪ್ರಯಾಣ ಮಾಡುವವರನ್ನ ನೀವು ಕೇಳಿ ತಿಳ್ಕೊಳ್ಳಲಿಲ್ವಾ? ಅವರು ಹೇಳಿದಕ್ಕೆ ಜಾಗ್ರತೆಯಿಂದ ಗಮನಕೊಡಲಿಲ್ವಾ? 30  ಕಷ್ಟದ ದಿನದಲ್ಲಿ ಪಾರಾಗೋದುಕೋಪದ ದಿನದಲ್ಲಿ ಬದುಕಿ ಉಳಿಯೋದು ಕೆಟ್ಟವ್ರೇ ಅಂತ ನಿಮಗೆ ಗೊತ್ತಾಗ್ತಿತ್ತು. 31  ‘ನೀನು ಮಾಡ್ತಿರೋದು ತಪ್ಪು’ ಅಂತ ಕೆಟ್ಟವನ ಮುಖ ನೋಡಿ ಹೇಳೋ ಧೈರ್ಯ ಯಾರಿಗಿದೆ? ಅವನಿಗೆ ಶಿಕ್ಷೆ ಯಾರು ಕೊಡ್ತಾರೆ? 32  ಅವನು ಸತ್ತ ಮೇಲೆ ಅವನನ್ನ ಸಮಾಧಿ ಮಾಡ್ತಾರೆ,ಅವನ ಸಮಾಧಿಗೆ ಕಾವಲು ಕಾಯ್ತಾರೆ. 33  ಸಮಾಧಿಯ ಮಣ್ಣು ಕೂಡ ಅವನು ಹಾಯಾಗಿರೋ ಹಾಗೆ ನೋಡ್ಕೊಳ್ಳುತ್ತೆ,+ಅವನಿಗಿಂತ ಮುಂಚೆ ಲೆಕ್ಕ ಇಲ್ಲದಷ್ಟು ಜನ್ರು ಅಲ್ಲಿಗೆ ಹೋಗಿದ್ದಾರೆ,ಇನ್ನು ಎಷ್ಟೋ ಜನ್ರು ಅಲ್ಲಿಗೆ ಹೋಗ್ತಾರೆ.+ 34  ಹೀಗಿರುವಾಗ ಯಾಕೆ ಸುಮ್ಮನೆ ನನ್ನನ್ನ ಸಮಾಧಾನ ಮಾಡ್ತೀರ?+ ನಿಮ್ಮ ಬಾಯಿಂದ ಬರೀ ಸುಳ್ಳು, ಮೋಸದ ಮಾತುಗಳು ಬಿಟ್ರೆ ಬೇರೇನೂ ಬರಲ್ಲ.”

ಪಾದಟಿಪ್ಪಣಿ

ಅಥವಾ “ಹೋರಿಗಳು ಹಸುಗಳನ್ನ ಸಂಗಮಿಸುತ್ತೆ.”
ಅಥವಾ “ಸಂಚು; ಸಲಹೆ ಕೊಡಲ್ಲ.”
ಅಥವಾ “ಜ್ಞಾನವನ್ನ.”
ಅಕ್ಷ. “ಅಸ್ಥಿಮಜ್ಜೆ ತೇವವಾಗಿರೋ.”
ಬಹುಶಃ, “ನನ್ನನ್ನ ಹಿಂಸಿಸೋಕೆ.”