ಯೋಬ 5:1-27

  • ಎಲೀಫಜನ ಮಾತು ಮುಂದುವರಿಯುತ್ತೆ (1-27)

    • ‘ವಿವೇಕಿಗಳು ತಮ್ಮ ಕುತಂತ್ರಗಳಲ್ಲೇ ಸಿಕ್ಕಿಹಾಕೊಳ್ಳೋ ಹಾಗೆ ದೇವರು ಮಾಡ್ತಾನೆ’ (13)

    • ದೇವರ ಶಿಕ್ಷೆಯನ್ನ ಬೇಡ ಅನ್ನಬೇಡ (17)

5  ಸಹಾಯಕ್ಕಾಗಿ ಕೂಗು, ಯಾರಾದ್ರೂ ಬರ್ತಾರಾ ನೋಡೋಣ,ಪವಿತ್ರ ದೇವದೂತರಲ್ಲಿ ಯಾರ ಹತ್ರ ಸಹಾಯ ಕೇಳ್ತೀಯಾ?   ಮನಸ್ಸಲ್ಲಿ ಸಿಟ್ಟು ಇಟ್ಕೊಳ್ಳೋ ಮೂರ್ಖ ಅದ್ರಿಂದಾನೇ ಸಾಯ್ತಾನೆ,ಹೊಟ್ಟೆಕಿಚ್ಚು ಪಡೋ ಮೂಢ ಅದ್ರಿಂದಾನೇ ಪ್ರಾಣ ಕಳ್ಕೊಳ್ತಾನೆ.   ಮೂರ್ಖನಿಗೆ ಒಳ್ಳೇದು ಆಗೋದನ್ನ ನಾನು ನೋಡ್ದೆ,ಆದ್ರೆ ಅಚಾನಕ್ಕಾಗಿ ಅವನ ಮನೆ ಶಾಪಕ್ಕೆ ತುತ್ತಾಗುತ್ತೆ.   ಅವನ ಮಕ್ಕಳಿಗೆ ಸಂರಕ್ಷಣೆನೇ ಇಲ್ಲ,ಪಟ್ಟಣದ ಬಾಗಿಲಲ್ಲಿ+ ಜನ್ರು ಅವ್ರನ್ನ ತುಳಿತಾರೆ, ಕಾಪಾಡೋಕೆ ಯಾರೂ ಇಲ್ಲ.   ಮೂರ್ಖ ಕೊಯ್ದ ಬೆಳೆಯನ್ನ ಹಸಿದವನು ತಿಂತಾನೆ,ಅದು ಮುಳ್ಳುಗಳ ಮಧ್ಯ ಇದ್ರೂ ತಗೊಂಡು ತಿಂತಾನೆ,ಮೂರ್ಖನ, ಅವನ ಮಕ್ಕಳ ಆಸ್ತಿಪಾಸ್ತಿ ಬೇರೆಯವ್ರ ಪಾಲಾಗುತ್ತೆ.   ಕೆಟ್ಟದು ಮಣ್ಣಿಂದ ಮೊಳೆಕೆ ಒಡೆಯಲ್ಲ,ಕಷ್ಟ ನೆಲದಿಂದ ಚಿಗುರಲ್ಲ.   ಬೆಂಕಿ ಇದ್ರೆ ಕಿಡಿಗಳು ಹಾರೇ ಹಾರುತ್ತೆ,ಮನುಷ್ಯನಾಗಿ ಹುಟ್ಟಿದ ಮೇಲೆ ಕಷ್ಟ ಬಂದೇ ಬರುತ್ತೆ.   ನಾನೇನಾದ್ರೂ ನಿನ್ನ ಜಾಗದಲ್ಲಿ ಇದ್ರೆ ದೇವರ ಸಹಾಯ ಕೇಳ್ತಿದ್ದೆ,ನನ್ನ ಮೊಕದ್ದಮೆಯನ್ನ ದೇವರ ಮುಂದೆ ಇಡ್ತಿದ್ದೆ,   ದೊಡ್ಡದೊಡ್ಡ ವಿಷ್ಯಗಳನ್ನ, ಅದ್ಭುತಗಳನ್ನ,ಲೆಕ್ಕ ಇಲ್ಲದಷ್ಟು ಆಶ್ಚರ್ಯ ವಿಷ್ಯಗಳನ್ನ ಮಾಡೋ ದೇವರಿಗೆ ಅದನ್ನ ತಿಳಿಸ್ತಿದ್ದೆ. 10  ಆತನು ಭೂಮಿಗೆ ಮಳೆ ಕೊಡ್ತಾನೆ,ಜಮೀನಿಗೆ ನೀರು ಸುರಿಸ್ತಾನೆ. 11  ಬಡವರನ್ನ ಒಳ್ಳೇ ಸ್ಥಿತಿಗೆ ತರ್ತಾನೆ,ನೊಂದಿರುವವರನ್ನ ಮೇಲಕ್ಕೆತ್ತಿ ರಕ್ಷಿಸ್ತಾನೆ. 12  ವಂಚಕರ ಸಂಚುಗಳನ್ನ ಕೆಡಿಸ್ತಾನೆ,ಅವ್ರ ಕೆಲಸಗಳು ಯಾವುದೂ ನಡಿಯಲ್ಲ. 13  ವಿವೇಕಿಗಳು ತಮ್ಮ ಕುತಂತ್ರಗಳಲ್ಲೇ ಸಿಕ್ಕಿಹಾಕೊಳ್ಳೋ ಹಾಗೆ ಮಾಡ್ತಾನೆ,+ಬುದ್ಧಿವಂತರ ಉಪಾಯಗಳು ಮಣ್ಣುಮುಕ್ಕುತ್ತೆ. 14  ಅವ್ರ ಬಾಳಲ್ಲಿ ಹಗಲು ಕತ್ತಲೆ ಆಗುತ್ತೆ,ಮಧ್ಯಾಹ್ನದಲ್ಲೇ ರಾತ್ರಿ ತರ ತಡಕಾಡ್ತಾರೆ. 15  ಕತ್ತಿಯಷ್ಟು ಹರಿತವಾದ ನಾಲಿಗೆಯಿಂದ ತಪ್ಪಿಸಿ ಜನ್ರನ್ನ ಕಾಪಾಡ್ತಾನೆ,ಬಲಿಷ್ಠರ ಕೈಯಿಂದ ಬಡವರನ್ನ ತಪ್ಪಿಸಿ ರಕ್ಷಿಸ್ತಾನೆ. 16  ಅದಕ್ಕೇ ಬಡವರಿಗೆ ನಿರೀಕ್ಷೆ ಇದೆ,ಅನೀತಿವಂತರ ಬಾಯಿ ಮುಚ್ಚಿಹೋಗುತ್ತೆ. 17  ನೋಡು! ದೇವರು ಯಾರನ್ನ ತಿದ್ದುತ್ತಾನೋ ಅವನು ಖುಷಿಯಾಗಿ ಇರ್ತಾನೆ,ಹಾಗಾಗಿ ನೀನು ಸರ್ವಶಕ್ತನ ಶಿಕ್ಷೆಯನ್ನ ಬೇಡ ಅನ್ನಬೇಡ. 18  ಆತನೇ ಗಾಯ ಮಾಡ್ತಾನೆ, ಆತನೇ ಗಾಯ ಕಟ್ತಾನೆ,ಆತನೇ ಹೊಡಿತಾನೆ, ಆತನ ಕೈಗಳೇ ವಾಸಿ ಮಾಡುತ್ತೆ. 19  ಆರು ಕಷ್ಟ ಬಂದ್ರೂ ನಿನ್ನನ್ನ ಕಾಪಾಡ್ತಾನೆ,ಏಳನೇ ಕಷ್ಟ ಬಂದ್ರೂ ನಿನಗೇನೂ ಆಗಲ್ಲ. 20  ಬರಗಾಲದಲ್ಲಿ ನೀನು ಹಸಿವೆಯಿಂದ ಸಾಯದ ಹಾಗೆ,ಯುದ್ಧದಲ್ಲಿ ನೀನು ಕತ್ತಿಯಿಂದ ಸಾಯದ ಹಾಗೆ ಕಾಪಾಡ್ತಾನೆ. 21  ಮಾತಿನ ಚಾಟಿಯಿಂದ+ ನಿನ್ನನ್ನ ತಪ್ಪಿಸ್ತಾನೆ. ವಿನಾಶ ಬಂದಾಗ ನೀನು ಭಯಪಡಲ್ಲ. 22  ಕಷ್ಟ ಬಂದ್ರೂ, ಊಟ ಇಲ್ಲದಿದ್ರೂ ನೀನು ಚಿಂತೆ ಮಾಡಲ್ಲ,ಕಾಡುಪ್ರಾಣಿಗಳಿಗೆ ನೀನು ಹೆದರಲ್ಲ. 23  ಹೊಲದಲ್ಲಿರೋ ಕಲ್ಲುಗಳು ನಿನಗೆ ಹಾನಿ ಮಾಡಲ್ಲ,*ಕಾಡುಪ್ರಾಣಿಗಳು ನಿನಗೆ ಕೇಡು ಮಾಡಲ್ಲ. 24  ನಿನ್ನ ಡೇರೆ ಸುರಕ್ಷಿತವಾಗಿದೆ ಅಂತ ನೆಮ್ಮದಿಯಾಗಿ ಇರ್ತಿಯ,ಹುಲ್ಲುಗಾವಲಿಗೆ ಹೋಗಿ ನೋಡಿದಾಗ ನಿನ್ನ ಪ್ರಾಣಿಗಳಲ್ಲಿ ಒಂದೂ ಕಡಿಮೆ ಆಗಿರಲ್ಲ. 25  ನಿನಗೆ ತುಂಬ ಮಕ್ಕಳು ಇರ್ತಾರೆ,ನಿನ್ನ ವಂಶದವರು ಭೂಮಿ ಮೇಲೆ ಹುಲ್ಲಿನಷ್ಟು ಹೆಚ್ಚಾಗ್ತಾರೆ. 26  ಕೊಯ್ಲಿಗೆ ಮುಂಚೆ ತುಂಬಿ ನಿಂತಿರೋ ತೆನೆಗಳ ತರನೀನು ಸಮಾಧಿ ಸೇರುವಾಗ್ಲೂ ಗಟ್ಟಿಮುಟ್ಟಾಗಿ ಇರ್ತಿಯ. 27  ನೋಡು! ಇದನ್ನೆಲ್ಲ ನಾವು ಪರಿಶೀಲಿಸಿ ತಿಳ್ಕೊಂಡ್ವಿ, ಇದೆಲ್ಲ ಸತ್ಯ. ಹಾಗಾಗಿ ನೀನೇ ಯೋಚ್ನೆ ಮಾಡಿ ನಾವು ಹೇಳಿದ ಹಾಗೆ ಮಾಡು.”

ಪಾದಟಿಪ್ಪಣಿ

ಅಥವಾ “ಹೊಲದ ಕಲ್ಲುಗಳು ನಿನ್ನ ಜೊತೆ ಒಪ್ಪಂದ ಮಾಡ್ಕೊಂಡಿರುತ್ತೆ.”