ಯೋಬ 6:1-30

  • ಯೋಬನ ಉತ್ತರ (1-30)

    • ತನ್ನ ವಾದಕ್ಕೆ ಕಾರಣ ಇದೆ (2-6)

    • ಸಾಂತ್ವನ ಕೊಡೋಕೆ ಬಂದವರು ನಂಬಿಕೆ ದ್ರೋಹಿಗಳು (15-18)

    • “ಇದ್ದದ್ದನ್ನ ಇದ್ದ ಹಾಗೆ ಹೇಳಿದ್ರೆ ಮನಸ್ಸಿಗೆ ನೋವಾಗಲ್ಲ” (25)

6  ಅದಕ್ಕೆ ಯೋಬ ಹೀಗಂದ:   “ನನ್ನ ನೋವನ್ನ+ ತಕ್ಕಡಿಯಲ್ಲಿ ಇಟ್ಟು ತೂಗಿ ನೋಡಿ,ಅದ್ರ ಜೊತೆ ನನ್ನ ಕಷ್ಟವನ್ನ ಇಟ್ಟು ತೂಕ ಮಾಡಿ!   ಅದು ಸಮುದ್ರದ ಮರಳಿಗಿಂತ ಭಾರ ಇದೆ. ಅದಕ್ಕೇ ಹಿಂದೆಮುಂದೆ ಯೋಚ್ನೆ ಮಾಡದೆ ಏನೇನೋ* ಮಾತಾಡಿಬಿಟ್ಟೆ.+   ಸರ್ವಶಕ್ತನ ಬಾಣಗಳು ನನ್ನನ್ನ ತಿವಿದಿವೆ,ಅವುಗಳ ವಿಷವನ್ನ ನನ್ನ ದೇಹ ಹೀರಿಕೊಳ್ತಿದೆ,+ದೇವರು ಕಳಿಸಿದ ಕಷ್ಟ, ಅಪಾಯಗಳು ನನ್ನನ್ನ ಸುತ್ಕೊಂಡಿವೆ,ಹಾಗಾಗಿ ನಾನು ತುಂಬ ಹೆದರಿ ಹೋಗಿದ್ದೀನಿ.   ತಿನ್ನೋಕೆ ಹುಲ್ಲು ಇದ್ದಾಗ ಕಾಡುಕತ್ತೆ+ ಕೂಗುತ್ತಾ? ಮೇವು ಇದ್ದಾಗ ಎತ್ತು ಕೂಗುತ್ತಾ?   ರುಚಿಯಿಲ್ಲದ ಊಟಕ್ಕೆ ಉಪ್ಪು ಹಾಕದೆ ತಿನ್ನಕ್ಕಾಗುತ್ತಾ? ರುಚಿಯಿಲ್ಲದ ಗಿಡದ ರಸವನ್ನ ಕುಡಿಯಕ್ಕಾಗುತ್ತಾ?   ಅಂಥದ್ದನ್ನ ನಾನು ಮುಟ್ಟಿನೂ ನೋಡಲ್ಲ. ಅವು ನನಗೆ ಕೆಟ್ಟು ಹೋದ ಆಹಾರದ ತರ ಇದೆ.   ದೇವರು ನನ್ನ ಕೋರಿಕೆ ಕೇಳಿ,ನನ್ನ ಆಸೆ ಈಡೇರಿಸಬಾರದಾ?   ದೇವರು ನನ್ನನ್ನ ಜಜ್ಜಿಬಿಡಬಾರದಾ? ಆತನು ಕೈಚಾಚಿ ನನ್ನನ್ನ ಸಾಯಿಸಬಾರದಾ?+ 10  ಆಗಲಾದ್ರೂ ನನಗೆ ಸಮಾಧಾನ ಸಿಗುತ್ತೆ,ನನಗೆ ತುಂಬ ದುಃಖ ಇದ್ರೂ ಖುಷಿಯಿಂದ ಸಾವನ್ನ ಸ್ವೀಕರಿಸ್ತೀನಿ,ಯಾಕಂದ್ರೆ ಪವಿತ್ರನಾದ ದೇವರ+ ಮಾತುಗಳನ್ನ ನಾನು ಯಾವತ್ತೂ ತಿರಸ್ಕರಿಸಲ್ಲ. 11  ಇನ್ನು ಸಹಿಸ್ಕೊಳ್ಳೋಕೆ ನನ್ನಲ್ಲಿ ಶಕ್ತಿ ಇಲ್ಲ.+ ಮುಂದೆ ಒಳ್ಳೆದಾಗುತ್ತೆ ಅನ್ನೋ ಭರವಸೆನೇ ಇಲ್ಲದಿರುವಾಗ ನಾನ್ಯಾಕೆ ಬದುಕಿರಬೇಕು? 12  ನನಗೇನು ಬಂಡೆಯಷ್ಟು ಶಕ್ತಿ ಇದ್ಯಾ? ನನ್ನ ದೇಹವೇನು ತಾಮ್ರದ್ದಾ? 13  ನನಗಿರೋ ಆಸರೆಯನ್ನೆಲ್ಲ ಕಿತ್ತು ಹಾಕಿದ ಮೇಲೆನನ್ನನ್ನ ನಾನೇ ಹೇಗೆ ನೋಡ್ಕೊಳ್ಳೋದು? 14  ಸ್ನೇಹಿತನಿಗೆ ಪ್ರೀತಿ ತೋರಿಸದವನಿಗೆ+ ಸರ್ವಶಕ್ತನ ಮೇಲೆ ಭಯ ಎಲ್ಲಿರುತ್ತೆ?+ 15  ನನ್ನ ಸ್ವಂತ ಸಹೋದರರು ಚಳಿಗಾಲದ ನದಿಗಳ ತರ ಕೈಕೊಡ್ತಾರೆ,ನೀರು ಬೇಕಾಗಿದ್ದಾಗಲೇ ಅವು ಒಣಗಿ ಹೋಗ್ತವೆ.+ 16  ಆ ನದಿಗಳು ಮಂಜುಗಡ್ಡೆಯಿಂದ ಕಪ್ಪಾಗಿವೆ,ಕರಗೋ ಹಿಮ ಅವುಗಳಲ್ಲಿ ಅಡಗಿದೆ. 17  ಆದ್ರೆ ಬೇಸಿಗೆಯ ಬೇಗೆಗೆ ಅದ್ರ ನೀರು ಒಣಗಿ ಹೋಗುತ್ತೆ,ಬಿಸಿಲು ಬಂದಾಗ ಬತ್ತಿ ಹೋಗುತ್ತೆ. 18  ಅವು ಹರಿಯೋ ದಿಕ್ಕು ಬದಲಾಗುತ್ತೆ,ಮರುಭೂಮಿಗೆ ಹರಿದು ಹೋಗಿ ಕಾಣೆ ಆಗುತ್ತೆ. 19  ಆ ನದಿ ಎಲ್ಲಿ ಅಂತ ತೇಮಾದ+ ವ್ಯಾಪಾರಿಗಳ ಗುಂಪು ಹುಡುಕುತ್ತೆ,ಶೆಬದ+ ಪ್ರಯಾಣಿಕರು ಅವುಗಳಿಗಾಗಿ ಕಾಯ್ತಾರೆ. 20  ಅವ್ರ ನಂಬಿಕೆ ಸುಳ್ಳಾದ ಕಾರಣ ತಲೆತಗ್ಗಿಸ್ತಾರೆ,ಅವ್ರಿಗೆ ಬರೀ ನಿರಾಶೆನೇ ಸಿಗುತ್ತೆ. 21  ನನ್ನ ವಿಷ್ಯದಲ್ಲಿ ನೀವು ಕೂಡ ಹಾಗೆನೇ,+ನನಗೆ ಬಂದಿರೋ ಕಷ್ಟ ನೋಡಿ ಹೆದರಿದ್ದೀರ.+ 22  ‘ಏನಾದ್ರೂ ಕೊಡಿ’ ಅಂತ ನಾನು ನಿಮ್ಮನ್ನ ಕೇಳಿದ್ನಾ? ನಿಮ್ಮ ಆಸ್ತಿಯಿಂದ ಉಡುಗೊರೆ ಕೊಡಿ ಅಂತ ಕೇಳಿದ್ನಾ? 23  ಶತ್ರು ಕೈಯಿಂದ ನನ್ನನ್ನ ಬಿಡಿಸಿ,ಪೀಡಕರ ಕೈಯಿಂದ ಬಿಡಿಸಿ ಅಂತ ಕೇಳಿದ್ನಾ? 24  ನಾನೇನು ತಪ್ಪು ಮಾಡಿದೆ ಅಂತ ಹೇಳಿ,ನನಗೆ ಅರ್ಥಮಾಡಿಸಿ. ಸುಮ್ಮನಿದ್ದು ಕೇಳಿಸ್ಕೊಳ್ತೀನಿ.+ 25  ಇದ್ದದ್ದನ್ನ ಇದ್ದ ಹಾಗೆ ಹೇಳಿದ್ರೆ ಮನಸ್ಸಿಗೆ ನೋವಾಗಲ್ಲ,+ಆದ್ರೆ ನೀವು ಬೈದು ಮಾತಾಡಿದ್ರೆ ನನಗೇನೂ ಪ್ರಯೋಜನ ಆಗಲ್ಲ.+ 26  ನಾನಾಡಿದ ಮಾತುಗಳಲ್ಲಿ ತಪ್ಪು ಹುಡುಕೋದೇ ನಿಮ್ಮ ಉದ್ದೇಶನಾ? ಬೇಜಾರಲ್ಲಿ ಇರುವವರು ಹೇಳೋ ಮಾತುಗಳನ್ನ+ ಗಾಳಿ ಬಡಿದ್ಕೊಂಡು ಹೋಗುತ್ತಲ್ವಾ? 27  ನೀವು ಅನಾಥನಿಗಾಗಿ ಚೀಟು ಹಾಕುವುದಕ್ಕೂ+ನಿಮ್ಮ ಸ್ನೇಹಿತನನ್ನೇ ಮಾರುವುದಕ್ಕೂ ಹೇಸಲ್ಲ!+ 28  ಈಗ ಸ್ವಲ್ಪ ತಿರುಗಿ ನನ್ನನ್ನ ನೋಡಿ,ನಾನೇನು ನಿಮಗೆ ಸುಳ್ಳು ಹೇಳ್ತಿಲ್ಲ. 29  ಇನ್ನೊಂದು ಸಾರಿ ಯೋಚಿಸಿ ನೋಡಿ,ದಯವಿಟ್ಟು ನನ್ನ ಬಗ್ಗೆ ತಪ್ಪು ತೀರ್ಮಾನಕ್ಕೆ ಬರಬೇಡಿ,ಮತ್ತೆ ಯೋಚಿಸಿ, ಯಾಕಂದ್ರೆ ನಾನಿನ್ನೂ ದೇವರ ದೃಷ್ಟಿಯಲ್ಲಿ ನೀತಿವಂತ. 30  ಏನಾದ್ರೂ ತಪ್ಪಾಗಿ ಮಾತಾಡ್ತಾ ಇದ್ದೀನಾ? ನನಗೆ ಬಂದಿರೋ ಕಷ್ಟಗಳನ್ನ ಅರ್ಥಮಾಡ್ಕೊಳ್ಳದೆ ಮಾತಾಡ್ತಾ ಇದ್ದೀನಾ?

ಪಾದಟಿಪ್ಪಣಿ

ಅಥವಾ “ದುಡುಕಿ.”