ರೋಮನ್ನರಿಗೆ ಬರೆದ ಪತ್ರ 13:1-14
13 ಎಲ್ರೂ ಅಧಿಕಾರಿಗಳ ಮಾತು ಕೇಳಬೇಕು.+ ಯಾಕಂದ್ರೆ ದೇವರು ಅಧಿಕಾರ ಕೊಡದಿದ್ರೆ ಯಾರಿಗೂ ಅಧಿಕಾರದ ಸ್ಥಾನದಲ್ಲಿ ಇರೋಕೆ ಆಗಲ್ಲ.+ ಈಗಿರೋ ಅಧಿಕಾರಿಗಳು ಬೇರೆ ಬೇರೆ ಸ್ಥಾನದಲ್ಲಿ ಇರೋದು ದೇವರ ಅನುಮತಿ ಇರೋದ್ರಿಂದಾನೇ.+
2 ಹಾಗಾಗಿ ಅಧಿಕಾರಿಗಳನ್ನ ವಿರೋಧಿಸುವವನು ದೇವರು ಮಾಡಿರೋ ಏರ್ಪಾಡನ್ನ ವಿರೋಧಿಸ್ತಾನೆ. ದೇವರ ಏರ್ಪಾಡನ್ನ ವಿರೋಧಿಸುವವನಿಗೆ ಶಿಕ್ಷೆ* ಆಗುತ್ತೆ.
3 ಒಳ್ಳೇದು ಮಾಡುವವನು ಅಧಿಕಾರಿಗಳಿಗೆ ಭಯಪಡಲ್ಲ, ಕೆಟ್ಟದು ಮಾಡುವವನು ಭಯಪಡ್ತಾನೆ.+ ನೀನು ಅಧಿಕಾರಿಗಳಿಗೆ ಭಯಪಡದೆ ಇರಬೇಕಾ? ಹಾಗಾದ್ರೆ ಒಳ್ಳೇದನ್ನ ಮಾಡ್ತಾ ಇರು.+ ಆಗ ಅವರು ನಿನ್ನನ್ನ ಹೊಗಳ್ತಾರೆ.
4 ಅಧಿಕಾರಿಗಳು ದೇವರ ಸೇವಕರು. ಅವ್ರನ್ನ ನೇಮಿಸಿರೋದು ನಿನ್ನ ಒಳ್ಳೇದಕ್ಕೇ. ಕೆಟ್ಟದು ಮಾಡಿದ್ರೆ ನೀನು ಭಯಪಡಬೇಕಾಗುತ್ತೆ. ಯಾಕಂದ್ರೆ ಕೆಟ್ಟದು ಮಾಡಿದವನಿಗೆ ಶಿಕ್ಷೆ ಕೊಡೋ ಹಕ್ಕು, ಅಧಿಕಾರ ಅವ್ರಿಗಿದೆ. ಅವರು ಕೆಟ್ಟದು ಮಾಡ್ತಿರುವವನಿಗೆ ಶಿಕ್ಷೆ ಕೊಡೋಕೇ ಇರೋ ದೇವರ ಸೇವಕರು.
5 ಶಿಕ್ಷೆ ಆಗಬಾರದು ಅನ್ನೋ ಕಾರಣಕ್ಕೆ ಅಷ್ಟೇ ಅಲ್ಲ, ಒಳ್ಳೇ ಮನಸ್ಸಾಕ್ಷಿ ಇರಬೇಕಂದ್ರೂ ನೀವು ಅಧಿಕಾರಿಗಳ ಮಾತು ಕೇಳಬೇಕು.+
6 ಅದಕ್ಕೇ ನೀವು ತೆರಿಗೆ ಕಟ್ತೀರ. ಅಧಿಕಾರಿಗಳು ಯಾವಾಗ್ಲೂ ಜನಸೇವೆ ಮಾಡೋ ದೇವರ ಸೇವಕರು. ಇದಕ್ಕೇ ಅವರು ಯಾವಾಗ್ಲೂ ಕೆಲಸ ಮಾಡ್ತಿದ್ದಾರೆ.
7 ಯಾರಿಗೆ ಏನೇನು ಕೊಡಬೇಕೋ ಅದನ್ನ ಕೊಡಿ. ಯಾರಿಗೆ ತೆರಿಗೆ ಕೊಡಬೇಕೋ ಅವ್ರಿಗೆ ತೆರಿಗೆಯನ್ನ,+ ಯಾರಿಗೆ ಸುಂಕ ಕೊಡಬೇಕೋ ಅವ್ರಿಗೆ ಸುಂಕವನ್ನ, ಯಾರಿಗೆ ಗೌರವ ಕೊಡಬೇಕೋ ಅವ್ರಿಗೆ ಗೌರವವನ್ನ,+ ಯಾರಿಗೆ ಮರ್ಯಾದೆ ಕೊಡಬೇಕೋ ಅವ್ರಿಗೆ ಮರ್ಯಾದೆಯನ್ನ ಕೊಡಿ.+
8 ಒಬ್ರನ್ನೊಬ್ರು ಪ್ರೀತಿಸೋದೇ ನೀವು ತೀರಿಸಬೇಕಾದ ಸಾಲ.+ ಅದನ್ನ ಬಿಟ್ಟು ಬೇರೆ ಯಾವ ಸಾಲನೂ ನಿಮಗೆ ಇರಬಾರದು. ಬೇರೆಯವನನ್ನ ಪ್ರೀತಿಸುವವನು ನಿಯಮ ಪಾಲಿಸಿದ್ದಾನೆ.+
9 “ವ್ಯಭಿಚಾರ ಮಾಡಬಾರದು,+ ಕೊಲೆ ಮಾಡಬಾರದು,+ ಕದಿಬಾರದು,+ ಅತಿಯಾಸೆ ಪಡಬಾರದು”+ ಅನ್ನೋ ಆಜ್ಞೆಗಳ ಮತ್ತು ನಿಯಮ ಪುಸ್ತಕದಲ್ಲಿರೋ ಬೇರೆಲ್ಲ ಆಜ್ಞೆಗಳ ಸಾರಾಂಶ “ನೀವು ನಿಮ್ಮನ್ನ ಪ್ರೀತಿಸೋ ಹಾಗೇ ಬೇರೆಯವ್ರನ್ನೂ ಪ್ರೀತಿಸಬೇಕು” ಅನ್ನೋ ಒಂದೇ ಆಜ್ಞೆಯಲ್ಲಿದೆ.+
10 ಒಬ್ಬನಲ್ಲಿ ಪ್ರೀತಿಯಿದ್ರೆ ಅವನು ಬೇರೆಯವ್ರಿಗೆ ಕೆಟ್ಟದು ಮಾಡಲ್ಲ.+ ಹಾಗಾಗಿ ಬೇರೆಯವ್ರನ್ನ ಪ್ರೀತಿಸುವವನು ನಿಯಮವನ್ನ ಪಾಲಿಸ್ತಿದ್ದಾನೆ.+
11 ಎಂಥ ಕಾಲದಲ್ಲಿ ಜೀವಿಸ್ತಿದ್ದೀರ ಅಂತ ನಿಮಗೆ ಗೊತ್ತಿರೋದ್ರಿಂದ ಇದನ್ನೆಲ್ಲ ಮಾಡಿ. ಇದು, ನೀವು ನಿದ್ದೆಯಿಂದ ಎದ್ದೇಳಬೇಕಾದ ಸಮಯ.+ ಯಾಕಂದ್ರೆ ನಮ್ಮ ರಕ್ಷಣೆ ನಾವು ಕ್ರೈಸ್ತರಾದ ಸಮಯಕ್ಕಿಂತ ಈಗ ಇನ್ನೂ ತುಂಬ ಹತ್ರ ಇದೆ.
12 ರಾತ್ರಿ ಮುಗಿತಾ ಬಂತು, ಇನ್ನೇನು ಬೆಳಕಾಗುತ್ತೆ. ಹಾಗಾಗಿ ಕತ್ತಲೆಗೆ ಸೇರಿದ ಕೆಲಸಗಳನ್ನ ಬಿಟ್ಟುಬಿಡೋಣ.+ ಬೆಳಕಿನ ಆಯುಧಗಳನ್ನ ಹಾಕೊಳ್ಳೋಣ.+
13 ಲಂಗುಲಗಾಮಿಲ್ಲದ ಮೋಜು, ಕುಡಿದು ಅಮಲೇರೋದು, ಅನೈತಿಕ ಸಂಬಂಧ, ನಾಚಿಕೆಗೆಟ್ಟ ನಡತೆ,*+ ಜಗಳ, ಹೊಟ್ಟೆಕಿಚ್ಚು+ ಇಂಥ ವಿಷ್ಯಗಳಲ್ಲಿ ನಾವು ಮುಳುಗಿರದೆ ಹಗಲಲ್ಲಿ ಜನ್ರು ನಡ್ಕೊಳ್ಳೋ ಹಾಗೆ ಸಭ್ಯವಾಗಿ ನಡ್ಕೊಳ್ಳೋಣ.+
14 ದೇಹದ ಆಸೆಗಳನ್ನ ತೀರಿಸ್ಕೊಳ್ಳೋಕೆ ಮೊದ್ಲೇ ಯೋಜನೆ ಮಾಡಬೇಡಿ.+ ಪ್ರಭು ಯೇಸು ಕ್ರಿಸ್ತನನ್ನ+ ತುಂಬ ಹತ್ರದಿಂದ ಹಿಂಬಾಲಿಸಿ.*