ರೋಮನ್ನರಿಗೆ ಬರೆದ ಪತ್ರ 4:1-25

  • ನಂಬಿಕೆಯಿದ್ದ ಕಾರಣ ಅಬ್ರಹಾಮನನ್ನ ನೀತಿವಂತ ಅಂತ ನೋಡಲಾಯ್ತು (1-12)

    • ಅಬ್ರಹಾಮ ನಂಬಿಕೆ ಇರುವವ್ರಿಗೆ ತಂದೆ (11)

  • ನಂಬಿಕೆ ಕಾರಣ ಸಿಕ್ಕಿದ ವಾಗ್ದಾನ (13-25)

4  ಹೀಗಿರುವಾಗ ನಮ್ಮ ಪೂರ್ವಜ ಅಬ್ರಹಾಮನ ಬಗ್ಗೆ ಏನು ಹೇಳೋಣ?  ಅಬ್ರಹಾಮ ಮಾಡಿದ ಕೆಲಸಗಳಿಂದ ದೇವರು ಅವನನ್ನ ನೀತಿವಂತ ಅಂತ ನೋಡಿದ್ರೆ ಅವನಿಗೆ ಕೊಚ್ಕೊಳ್ಳೋಕೆ ಕಾರಣ ಇರ್ತಿತ್ತು, ಆದ್ರೆ ದೇವರ ಮುಂದೆ ಕೊಚ್ಕೊಳ್ಳೋಕೆ ಕಾರಣ ಇರ್ತಿರಲಿಲ್ಲ.  ವಚನ ಏನು ಹೇಳುತ್ತೆ? “ಅಬ್ರಹಾಮ ಯೆಹೋವನ* ಮೇಲೆ ನಂಬಿಕೆ ಇಟ್ಟ. ಹಾಗಾಗಿ ದೇವರ ದೃಷ್ಟಿಯಲ್ಲಿ ಅವನು ನೀತಿವಂತನಾಗಿದ್ದ.”+  ಕೆಲಸ ಮಾಡಿದವನಿಗೆ ಸಿಗೋ ಸಂಬಳ ಅಪಾರ ಕೃಪೆಯಿಂದ ಸಿಕ್ಕಿದ್ದು ಅಂತ ಹೇಳೋಕೆ ಆಗಲ್ಲ, ಅದು ಅವನ ಶ್ರಮಕ್ಕೆ ಸಿಗಬೇಕಾದ ಕೂಲಿ.  ಆದ್ರೆ ಒಬ್ಬ ತನ್ನ ಕೆಲಸಗಳ ಮೇಲೆ ನಂಬಿಕೆ ಇಡದೆ, ಪಾಪಿಯನ್ನ ನೀತಿವಂತ ಅಂತ ನೋಡೋ ದೇವರಲ್ಲಿ ನಂಬಿಕೆ ಇಟ್ರೆ ಆ ನಂಬಿಕೆಯಿಂದಾಗಿ ದೇವರು ಅವನನ್ನ ನೀತಿವಂತ ಅಂತ ನೋಡ್ತಾನೆ.+  ಒಬ್ಬ ನಿಯಮ ಪುಸ್ತಕವನ್ನ ಪೂರ್ತಿ ಪಾಲಿಸದಿದ್ರೂ ದೇವರು ಅವನನ್ನ ನೀತಿವಂತ ಅಂತ ನೋಡಿದಾಗ ಅವನಿಗೆಷ್ಟು ಖುಷಿ ಆಗುತ್ತೆ ಅಂತ ದಾವೀದನೂ ಹೇಳಿದ.  “ಯಾರ ಕೆಟ್ಟ ಕೆಲಸಗಳನ್ನ, ಪಾಪಗಳನ್ನ ದೇವರು ಕ್ಷಮಿಸಿದ್ದಾನೋ* ಅವರು ಖುಷಿಯಾಗಿ ಇರ್ತಾರೆ.  ಯಾರ ಪಾಪವನ್ನ ಯೆಹೋವ* ಲೆಕ್ಕ ಇಡಲ್ವೋ ಅವನು ಸಂತೋಷವಾಗಿ ಇರ್ತಾನೆ”+ ಅಂತ ಅವನು ಹೇಳಿದ.  ಹಾಗಾದ್ರೆ ಈ ಸಂತೋಷ ಸುನ್ನತಿ ಆದವ್ರಿಗೆ ಮಾತ್ರ ಸಿಗುತ್ತಾ? ಅಥವಾ ಸುನ್ನತಿ ಆಗದೇ ಇರುವವ್ರಿಗೂ ಸಿಗುತ್ತಾ?+ ಯಾಕಂದ್ರೆ “ಅಬ್ರಹಾಮನಲ್ಲಿ ನಂಬಿಕೆ ಇದ್ದಿದ್ರಿಂದ ದೇವರ ದೃಷ್ಟಿಯಲ್ಲಿ ನೀತಿವಂತನಾದ”+ ಅಂತ ನಾವು ಹೇಳ್ತೀವಿ. 10  ದೇವರು ಅವನನ್ನ ನೀತಿವಂತನಾಗಿ ನೋಡಿದ್ದು ಯಾವಾಗ? ಅವನಿಗೆ ಸುನ್ನತಿ ಆದಾಗ್ಲಾ, ಆಗದೇ ಇದ್ದಾಗ್ಲಾ? ಅವನಿಗೆ ಸುನ್ನತಿ ಆಗದೆ ಇದ್ದಾಗ್ಲೇ. 11  ದೇವರು ಅವನಿಗೆ ಸುನ್ನತಿ ಮಾಡ್ಕೊ ಅಂತ ಹೇಳಿದನು. ಸುನ್ನತಿಯಾಗೋ ಮುಂಚೆ ಅವನಲ್ಲಿದ್ದ ನಂಬಿಕೆಯಿಂದಾನೇ ಅವನನ್ನ ನೀತಿವಂತನಾಗಿ ನೋಡಿದ ಅನ್ನೋದಕ್ಕೆ ಆ ಸುನ್ನತಿ ಒಂದು ಗುರುತಾಗಿತ್ತು.+ ಹೀಗೆ, ಸುನ್ನತಿ ಆಗದಿದ್ರೂ ನಂಬಿಕೆ ಇರುವವ್ರಿಗೆಲ್ಲ ಅವನು ತಂದೆಯಾದ.+ ಅಂಥವ್ರನ್ನ ದೇವರು ನೀತಿವಂತರಾಗಿ ನೋಡ್ತಾನೆ. 12  ನಮ್ಮ ತಂದೆಯಾದ ಅಬ್ರಹಾಮ ಸುನ್ನತಿ ಆದವ್ರಿಗೂ ತಂದೆ ಆಗಿದ್ದಾನೆ. ಸುನ್ನತಿ ಮಾಡ್ಕೊಳ್ಳುವವ್ರಿಗೆ ಮಾತ್ರ ಅಲ್ಲ, ಅವನು ಸುನ್ನತಿ ಆಗದಿದ್ದಾಗ ತೋರಿಸಿದಂಥ ಅದೇ ನಂಬಿಕೆ ತೋರಿಸಿ ಜೀವನ ಮಾಡುವವ್ರಿಗೂ ತಂದೆ ಆಗಿದ್ದಾನೆ.+ 13  ಲೋಕ ನಿನ್ನ ಸೊತ್ತಾಗುತ್ತೆ ಅಂತ ದೇವರು ಅಬ್ರಹಾಮ ಮತ್ತು ಅವನ ಸಂತತಿಗೆ ಮಾತು ಕೊಟ್ಟಿದ್ದು+ ನಿಯಮ ಪುಸ್ತಕದಲ್ಲಿ ಇರೋದನ್ನ ಅವರು ಪಾಲಿಸಿದ್ರಿಂದ ಅಲ್ಲ, ತೋರಿಸಿದ ನಂಬಿಕೆಯಿಂದಾಗಿ ಅವ್ರನ್ನ ನೀತಿವಂತರು ಅಂತ ನೋಡಿದ್ರಿಂದಾನೇ.+ 14  ನಿಯಮ ಪುಸ್ತಕದಲ್ಲಿ ಇರೋದನ್ನ ಪಾಲಿಸುವವ್ರಿಗೆ ಮಾತ್ರ ದೇವರು ಆ ಮಾತು ಕೊಟ್ಟಿದ್ರೆ ನಂಬಿಕೆ ವ್ಯರ್ಥ ಆಗುತ್ತೆ ಮತ್ತು ಆ ಮಾತು ಸುಳ್ಳಾಗುತ್ತೆ. 15  ನಿಜ ಏನಂದ್ರೆ, ನಿಯಮ ಪುಸ್ತಕದಲ್ಲಿ ಇರೋದನ್ನ ಮೀರಿ ನಡಿದ್ರೆ ಶಿಕ್ಷೆ ಆಗುತ್ತೆ,+ ಆದ್ರೆ ನಿಯಮ ಪುಸ್ತಕನೇ ಇಲ್ಲದಿದ್ರೆ ನಿಯಮ ಮೀರೋದೂ ಇರಲ್ಲ.+ 16  ನಮ್ಮಲ್ಲಿರೋ ನಂಬಿಕೆಯಿಂದ ದೇವರು ನಮಗೆ ಆ ಮಾತು ಕೊಡ್ತಾನೆ ಮತ್ತು ಅದು ದೇವರ ಅಪಾರ ಕೃಪೆ ಆಗಿದೆ.+ ನಿಯಮ ಪುಸ್ತಕದಲ್ಲಿ ಇರೋದನ್ನ ಪಾಲಿಸುವವರು ಮಾತ್ರವಲ್ಲ, ನಮ್ಮೆಲ್ರ ತಂದೆ ಅಬ್ರಹಾಮನಲ್ಲಿ ಇದ್ದಂಥ ನಂಬಿಕೆ ಇರುವವ್ರೆಲ್ಲ,+ ಹೀಗೆ ಅಬ್ರಹಾಮನ ಸಂತತಿಯವ್ರೆಲ್ಲ ದೇವರು ಕೊಟ್ಟ ಆ ಮಾತು ನಿಜ ಆಗೋದನ್ನ ನೋಡೇ ನೋಡ್ತಾರೆ.+ 17  (“ನಾನು ನಿನ್ನನ್ನ ಎಷ್ಟೋ ಜನಾಂಗಗಳಿಗೆ ತಂದೆಯಾಗಿ ಮಾಡಿದ್ದೀನಿ” ಅಂತ ಪವಿತ್ರ ಗ್ರಂಥದಲ್ಲಿ ಬರೆದಿರೋ ಹಾಗಾಯ್ತು.)+ ಸತ್ತವರನ್ನ ಬದುಕಿಸೋ ಮತ್ತು ಇನ್ನೂ ನಡಿಯದೇ ಇರೋ ವಿಷ್ಯವನ್ನ ಈಗಾಗ್ಲೇ ನಡಿದಿರೋ ತರ* ಹೇಳೋ ದೇವರ ಮುಂದೆ ಅಬ್ರಹಾಮ ಈ ನಂಬಿಕೆ ತೋರಿಸಿದ. 18  “ನಿನ್ನ ಸಂತತಿ ಲೆಕ್ಕಾನೇ ಇಲ್ಲದಷ್ಟು ಆಗುತ್ತೆ”+ ಅನ್ನೋ ದೇವರ ಮಾತಲ್ಲಿ ಅವನು ನಂಬಿಕೆ ಇಟ್ಟ. ಅವನು ತುಂಬ ಜನಾಂಗಗಳಿಗೆ ತಂದೆ ಆಗೋಕೆ ಆಗಲ್ಲ ಅಂತ ಅನಿಸಿದ್ರೂ ಆ ಮಾತು ನಿಜ ಆಗುತ್ತೆ ಅಂತ ಅವನು ಬಲವಾಗಿ ನಂಬಿದ. 19  (ಅವನಿಗೆ ಸುಮಾರು 100 ವರ್ಷ ಆಗಿದ್ರಿಂದ)+ ನನ್ನ ದೇಹಕ್ಕೆ ಶಕ್ತಿನೇ ಇಲ್ಲ, ಸಾರಳಿಗೂ ಮಕ್ಕಳು ಆಗೋ ಸಾಮರ್ಥ್ಯ ಇಲ್ಲ*+ ಅಂತ ಅವನಿಗೆ ಗೊತ್ತಿದ್ರೂ ಅವನ ನಂಬಿಕೆ ಸ್ವಲ್ಪನೂ ಕಮ್ಮಿ ಆಗಲಿಲ್ಲ. 20  ದೇವರು ಕೊಟ್ಟ ಮಾತಲ್ಲಿ ನಂಬಿಕೆ ಕಮ್ಮಿಯಾಗಿ ಅವನು ಚಂಚಲ ಆಗಲಿಲ್ಲ. ಅವನಲ್ಲಿದ್ದ ನಂಬಿಕೆಯಿಂದ ಅವನು ಬಲಶಾಲಿಯಾಗಿ ದೇವರಿಗೆ ಗೌರವ ಕೊಟ್ಟ. 21  ಅಷ್ಟೇ ಅಲ್ಲ, ಕೊಟ್ಟಿರೋ ಮಾತನ್ನ ನಿಜ ಮಾಡೋ ಶಕ್ತಿ ದೇವರಿಗಿದೆ ಅಂತ ಪೂರ್ತಿ ನಂಬಿದ.+ 22  “ಇದ್ರಿಂದಾಗಿ ದೇವರ ದೃಷ್ಟಿಯಲ್ಲಿ ಅವನು ನೀತಿವಂತನಾದ.”+ 23  ಆದ್ರೆ “ದೇವರು ಅವನನ್ನ ನೀತಿವಂತನಾಗಿ ನೋಡಿದನು” ಅನ್ನೋ ಮಾತುಗಳನ್ನ ಅವನಿಗೋಸ್ಕರ ಮಾತ್ರ ಅಲ್ಲ,+ 24  ನಮಗೋಸ್ಕರನೂ ಬರೆದಿದೆ. ನಮ್ಮನ್ನೂ ದೇವರು ನೀತಿವಂತರಾಗಿ ನೋಡ್ತಾನೆ. ಯಾಕಂದ್ರೆ ನಮ್ಮ ಪ್ರಭು ಯೇಸುವನ್ನ ಜೀವಂತವಾಗಿ ಎಬ್ಬಿಸಿದ ದೇವರಲ್ಲಿ ನಾವು ನಂಬಿಕೆ ಇಟ್ಟಿದ್ದೀವಿ.+ 25  ನಮ್ಮ ತಪ್ಪಿಗೆ ನಮ್ಮ ಪ್ರಭುನ ಮರಣಕ್ಕೆ ಒಪ್ಪಿಸಲಾಯ್ತು+ ಮತ್ತು ದೇವರ ದೃಷ್ಟಿಯಲ್ಲಿ ನಾವು ನೀತಿವಂತರಾಗಿ ಇರೋಕೆ ಆತನಿಗೆ ಮತ್ತೆ ಜೀವ ಕೊಟ್ಟನು.+

ಪಾದಟಿಪ್ಪಣಿ

ಅಕ್ಷ., “ಮುಚ್ಚಿದ್ದಾನೋ.”
ಬಹುಶಃ, “ಇಲ್ಲದ ವಿಷ್ಯಗಳನ್ನ ಇದೆ ಅನ್ನೋ ತರ.”
ಅಥವಾ “ಸಾರಳು ಬಂಜೆ.”