ಲೂಕ 11:1-54
11 ಯೇಸು ಒಂದು ಸ್ಥಳದಲ್ಲಿ ಪ್ರಾರ್ಥನೆ ಮಾಡ್ತಾ ಇದ್ದನು. ಪ್ರಾರ್ಥನೆ ಮಾಡಿದ ಮೇಲೆ ಶಿಷ್ಯರಲ್ಲಿ ಒಬ್ಬ “ಸ್ವಾಮಿ, ಯೋಹಾನ ತನ್ನ ಶಿಷ್ಯರಿಗೆ ಕಲಿಸಿದ ತರ ನಮಗೂ ಪ್ರಾರ್ಥನೆ ಮಾಡೋದನ್ನ ಕಲಿಸು” ಅಂದ.
2 ಆಗ ಆತನು ಹೀಗಂದನು “ಪ್ರತಿಸಾರಿ ಪ್ರಾರ್ಥನೆ ಮಾಡುವಾಗ ‘ಅಪ್ಪಾ, ನಿನ್ನ ಹೆಸ್ರು ಪವಿತ್ರವಾಗಲಿ.*+ ನಿನ್ನ ಆಳ್ವಿಕೆ ಬರಲಿ.+
3 ಇವತ್ತಿಗೆ ಬೇಕಾಗಿರೋ ಊಟನ ದಯವಿಟ್ಟು ಕೊಡು.+
4 ನಮ್ಮ ತಪ್ಪುಗಳನ್ನ ಕ್ಷಮಿಸು.+ ಯಾಕಂದ್ರೆ ನಾವು ಸಹ ಬೇರೆಯವರ ತಪ್ಪುಗಳನ್ನ ಕ್ಷಮಿಸಿದ್ದೀವಿ.+ ಪರೀಕ್ಷೆ ಬಂದಾಗ ಸೋತು ಬಿದ್ದುಹೋಗದ ಹಾಗೆ ನಮ್ಮನ್ನ ಕಾಪಾಡು’ ಅಂತ ಹೇಳಿ.”+
5 ಆಮೇಲೆ ಹೀಗಂದನು “ನಿಮಗೆ ಒಬ್ಬ ಗೆಳೆಯ ಇದ್ದಾನೆ ಅಂತ ನೆನಸಿ. ನೀವು ಮಧ್ಯರಾತ್ರಿ ಅವನ ಮನೆಗೆ ಹೋಗಿ ‘ಗೆಳೆಯ, ಮೂರು ರೊಟ್ಟಿ ಕೊಡು.
6 ನನ್ನ ಸ್ನೇಹಿತ ದೂರದಿಂದ ಈಗ ತಾನೇ ಮನೆಗೆ ಬಂದಿದ್ದಾನೆ. ಅವನಿಗೆ ಕೊಡೋಕೆ ನನ್ನ ಹತ್ರ ಏನೂ ಇಲ್ಲ’ ಅಂತೀರ.
7 ಆದ್ರೆ ಆ ಗೆಳೆಯ ಒಳಗಿಂದಾನೇ ‘ನನಗೆ ತೊಂದ್ರೆ ಕೊಡಬೇಡ. ಬಾಗಿಲಿಗೆ ಬೀಗ ಹಾಕಿಬಿಟ್ಟೆ. ಚಿಕ್ಕ ಮಕ್ಕಳು ನನ್ನ ಜೊತೆ ಮಂಚದ ಮೇಲೆ ಮಲಗಿದ್ದಾರೆ. ನಾನು ಎದ್ದು ಬಂದು ಏನೂ ಕೊಡೋಕಾಗಲ್ಲ’ ಅಂತಾನೆ.
8 ನಿಮಗೆ ಹೇಳ್ತಿದ್ದೀನಿ, ಅವನು ಏನೂ ಕೊಡದಿದ್ರೂ ನೀವು ಪಟ್ಟುಬಿಡದೆ+ ಪದೇಪದೇ ಕೇಳಿದ್ರೆ ನೀವು ಅವನ ಗೆಳೆಯನಾಗಿರೋ ಕಾರಣ ಅವನು ಎದ್ದು ನಿಮಗೆ ಬೇಕಾಗಿರೋದನ್ನ ಕೊಡ್ತಾನೆ.
9 ಹಾಗಾಗಿ ನಾನು ಹೇಳೋದು ಏನಂದ್ರೆ: ಕೇಳ್ತಾ ಇರಿ,+ ದೇವರು ಕೊಡ್ತಾನೆ. ಹುಡುಕ್ತಾ ಇರಿ ಸಿಗುತ್ತೆ. ತಟ್ಟುತ್ತಾ ಇರಿ ತೆರಿಯುತ್ತೆ.+
10 ಯಾಕಂದ್ರೆ ಕೇಳೋ ಪ್ರತಿಯೊಬ್ಬನೂ ಪಡ್ಕೊಳ್ತಾನೆ,+ ಹುಡುಕೋ ಪ್ರತಿಯೊಬ್ಬನಿಗೆ ಸಿಗುತ್ತೆ, ತಟ್ಟೋ ಪ್ರತಿಯೊಬ್ಬನಿಗೆ ಬಾಗಿಲು ತೆರಿಯುತ್ತೆ.
11 ನಿಮ್ಮ ಮಗ ಮೀನು ಕೇಳಿದ್ರೆ ಹಾವು ಕೊಡ್ತೀರಾ?+
12 ಮೊಟ್ಟೆ ಕೇಳಿದ್ರೆ ಚೇಳು ಕೊಡ್ತೀರಾ?
13 ಹಾಗಾದ್ರೆ ಪಾಪಿಗಳಾಗಿರೋ ನೀವೇ ಮಕ್ಕಳಿಗೆ ಒಳ್ಳೇ ಉಡುಗೊರೆ ಕೊಡುವಾಗ ಸ್ವರ್ಗದಲ್ಲಿರೋ ನಿಮ್ಮ ತಂದೆ ತನ್ನ ಹತ್ರ ಕೇಳುವವರಿಗೆ ಹೆಚ್ಚು ಪವಿತ್ರಶಕ್ತಿ ಕೊಡಲ್ವಾ?”+
14 ಯೇಸು ಒಬ್ಬ ವ್ಯಕ್ತಿಯನ್ನ ವಾಸಿಮಾಡಿದ. ಅವನಿಗೆ ಕೆಟ್ಟ ದೇವದೂತ ಹಿಡಿದು ಮೂಕನಾಗಿದ್ದ.+ ಆ ಕೆಟ್ಟ ದೇವದೂತ ಹೊರಗೆ ಬಂದ ಮೇಲೆ ಅವನಿಗೆ ಮಾತು ಬಂತು. ಇದನ್ನ ನೋಡಿ ಜನ ತುಂಬ ಆಶ್ಚರ್ಯಪಟ್ರು.+
15 ಆದ್ರೆ ಅವ್ರಲ್ಲಿ ಸ್ವಲ್ಪ ಜನ “ಇವನು ಕೆಟ್ಟ ದೇವದೂತರನ್ನ ಸೈತಾನನ* ಸಹಾಯದಿಂದಾನೇ ಬಿಡಿಸ್ತಾ ಇದ್ದಾನೆ”+ ಅಂದ್ರು.
16 ಆದ್ರೆ ಇನ್ನು ಸ್ವಲ್ಪ ಜನ ಯೇಸುವನ್ನ ಪರೀಕ್ಷಿಸೋಕೆ ಆಕಾಶದಲ್ಲಿ ಒಂದು ಅದ್ಭುತ+ ಮಾಡಿ ತೋರಿಸು ಅಂತ ಕೇಳಿದ್ರು.
17 ಅವ್ರ ಯೋಚನೆ ಅರ್ಥಮಾಡ್ಕೊಂಡ+ ಯೇಸು ಹೀಗಂದನು “ಒಂದು ದೇಶದಲ್ಲಿ ಪ್ರಜೆಗಳೇ ಕಿತ್ತಾಡ್ತಾ ಇದ್ರೆ ಆ ದೇಶ ನಾಶವಾಗಿ ಹೋಗುತ್ತೆ. ತಮ್ಮತಮ್ಮೊಳಗೇ ಜಗಳ ಮಾಡೋ ಕುಟುಂಬ ಹಾಳಾಗಿ ಹೋಗುತ್ತೆ.
18 ಅದೇ ತರ ಸೈತಾನ ತನ್ನ ವಿರುದ್ಧಾನೇ ತಿರುಗಿ ಬಿದ್ರೆ ಅವನ ಸಾಮ್ರಾಜ್ಯ ಹೇಗೆ ತಾನೇ ನಿಲ್ಲುತ್ತೆ? ಸೈತಾನನ* ಸಹಾಯದಿಂದ ನಾನು ಇವ್ರನ್ನ ಬಿಡಿಸ್ತಾ ಇದ್ದೀನಿ ಅಂತೀರ.
19 ಸೈತಾನನ ಸಹಾಯದಿಂದ ನಾನು ಕೆಟ್ಟ ದೇವದೂತರನ್ನ ಬಿಡಿಸ್ತಾ ಇದ್ರೆ ನಿಮ್ಮ ಶಿಷ್ಯರು ಯಾರ ಸಹಾಯದಿಂದ ಬಿಡಿಸ್ತಿದ್ದಾರೆ? ನೀವು ಮಾತಾಡ್ತಿರೋದು ತಪ್ಪು ಅಂತ ನಿಮ್ಮ ಶಿಷ್ಯರೇ ತೋರಿಸ್ಕೊಡ್ತಾ ಇದ್ದಾರೆ.
20 ನಾನು ಕೆಟ್ಟ ದೇವದೂತರನ್ನ ಬಿಡಿಸೋದು ದೇವರ ಪವಿತ್ರಶಕ್ತಿಯಿಂದ*+ ಆಗಿದ್ರೆ ಅದರರ್ಥ ದೇವರ ಆಳ್ವಿಕೆ ಈಗಾಗಲೇ ಬಂದಿದೆ. ಆದ್ರೆ ನೀವು ಅದನ್ನ ಗಮನಿಸಲಿಲ್ಲ.+
21 ಒಬ್ಬ ಬಲಿಷ್ಠ ವ್ಯಕ್ತಿ ಎಲ್ಲ ಆಯುಧಗಳನ್ನ ಹಾಕೊಂಡು ಮನೆ ಕಾಯ್ತಿದ್ದಾಗ ಯಾರೂ ಅವನ ವಸ್ತುಗಳನ್ನ ಕಳ್ಳತನ ಮಾಡೋಕೆ ಸಾಧ್ಯವಿಲ್ಲ.
22 ಆದ್ರೆ ಅವನಿಗಿಂತ ಬಲಿಷ್ಠನಾಗಿರುವವನು ಅವನ ಜೊತೆ ಹೋರಾಡಿ ಗೆದ್ದಾಗ ಅವನು ನಂಬ್ಕೊಂಡಿರೋ ಎಲ್ಲ ಆಯುಧಗಳನ್ನ ತಗೊಂಡು ಹೋಗಿ ಬೇರೆಯವ್ರಿಗೆ ಹಂಚಿಬಿಡ್ತಾನೆ.
23 ನನ್ನ ಪರವಾಗಿ ನಿಲ್ಲದವನು ನನ್ನ ವಿರೋಧಿ. ನನ್ನ ಹತ್ರ ಬರೋಕೆ ಜನ್ರಿಗೆ ಸಹಾಯ ಮಾಡದವನು ಅವ್ರನ್ನ ನನ್ನಿಂದ ದೂರ ಓಡಿಸ್ತಿದ್ದಾನೆ.+
24 ಒಬ್ಬ ಕೆಟ್ಟ ದೇವದೂತ ಒಬ್ಬ ಮನುಷ್ಯನಿಂದ ಹೊರಗೆ ಬಂದಾಗ ವಿಶ್ರಾಂತಿಗಾಗಿ ಜಾಗ ಹುಡುಕ್ತಾನೆ. ಮರುಭೂಮಿಯಲ್ಲಿ ಅಲೆದಾಡಿದ್ರೂ ಎಲ್ಲೂ ಜಾಗ ಸಿಗಲ್ಲ. ಆಗ ಅವನು ‘ನಾನು ಬಿಟ್ಟುಬಂದ ಮನೆಗೆ ಮತ್ತೆ ಹೋಗ್ತೀನಿ’ ಅಂತ ವಾಪಸ್ ಬರ್ತಾನೆ.+
25 ಬಂದಾಗ ಆ ಮನೆಯನ್ನ ಚೆನ್ನಾಗಿ ಗುಡಿಸಿ ಅಲಂಕಾರ ಮಾಡಿರೋದನ್ನ ನೋಡ್ತಾನೆ.
26 ಆಗ ಆ ಕೆಟ್ಟ ದೇವದೂತ ಹೋಗಿ ತನಗಿಂತ ಕೆಟ್ಟವರಾಗಿದ್ದ ಇನ್ನೂ ಏಳು ಕೆಟ್ಟ ದೇವದೂತರನ್ನ ಕರ್ಕೊಂಡು ಬರ್ತಾನೆ. ಅವ್ರೆಲ್ಲ ಒಟ್ಟಿಗೆ ಆ ಮನುಷ್ಯನಲ್ಲಿ ಸೇರಿಕೊಳ್ತಾರೆ. ಆಗ ಆ ಮನುಷ್ಯನ ಗತಿ ಮುಂಚೆಗಿಂತ ಕೆಟ್ಟದಾಗುತ್ತೆ.”
27 ಆತನು ಈ ಮಾತು ಹೇಳ್ತಿದ್ದಾಗ ಒಬ್ಬ ಸ್ತ್ರೀ ಗಟ್ಟಿಯಾಗಿ “ನಿನ್ನನ್ನ ಹೆತ್ತು, ಹಾಲುಣಿಸಿದ ತಾಯಿ ಖುಷಿಯಾಗಿ ಇರ್ತಾಳೆ”+ ಅಂದಳು.
28 ಅದಕ್ಕೆ ಯೇಸು “ಇಲ್ಲ, ದೇವರ ಮಾತು ಕೇಳಿಸ್ಕೊಂಡು ಅದ್ರ ಪ್ರಕಾರ ನಡೆಯೋರು ಇನ್ನೂ ಖುಷಿಯಾಗಿ ಇರ್ತಾರೆ”+ ಅಂದನು.
29 ತುಂಬ ಜನ ಸೇರಿ ಬರ್ತಿದ್ದಾಗ ಯೇಸು ಹೀಗಂದನು “ಇದು ದುಷ್ಟ ಪೀಳಿಗೆ. ಅದ್ಭುತ ನೋಡೋಕೆ ಕಾಯ್ತಾರೆ. ಆದ್ರೆ ಯೋನನಿಗಾದ ಅದ್ಭುತ ಬಿಟ್ಟು ಬೇರೆ ಅದ್ಭುತ ಇವ್ರಿಗೆ ನೋಡೋಕೆ ಸಿಗಲ್ಲ.+
30 ನಿನೆವೆಯ ಜನ್ರಿಗೆ ಯೋನ+ ಒಂದು ಅದ್ಭುತವಾದ ತರ ಈ ಪೀಳಿಗೆಗೆ ಮನುಷ್ಯಕುಮಾರ ಅದ್ಭುತವಾಗಿ ಇರ್ತಾನೆ.
31 ತೀರ್ಪಿನ ದಿನದಲ್ಲಿ ಶೆಬದ ರಾಣಿ+ ಈ ದುಷ್ಟ ಪೀಳಿಗೆ ಜೊತೆ ಜೀವಂತವಾಗಿ ಬಂದಾಗ ನೀವು ತಪ್ಪು ಮಾಡಿದ್ರಿ ಅಂತ ಅವ್ರಿಗೆ ಹೇಳ್ತಾಳೆ. ಯಾಕಂದ್ರೆ ಅವಳು ಸೊಲೊಮೋನನ ವಿವೇಕದ ಮಾತುಗಳನ್ನ ಕೇಳಿಸ್ಕೊಳ್ಳೋಕೆ ದೂರದಿಂದ ಬಂದಳು. ಆದ್ರೆ ಸೊಲೊಮೋನನಿಗಿಂತ ದೊಡ್ಡವನು ಇಲ್ಲಿ ಒಬ್ಬನಿದ್ದಾನೆ.+
32 ದೇವರು ತೀರ್ಪು ಕೊಡೋ ದಿನದಲ್ಲಿ ಈ ದುಷ್ಟ ಪೀಳಿಗೆ ಜೊತೆ ನಿನೆವೆ ಜನ ಜೀವಂತವಾಗಿ ಬರ್ತಾರೆ. ನಿನೆವೆಯವರು ಇವ್ರಿಗೆ ನೀವು ತಪ್ಪು ಮಾಡಿದ್ರಿ ಅಂತ ಹೇಳ್ತಾರೆ. ಯಾಕಂದ್ರೆ ಯೋನ ಸಾರಿದಾಗ ನಿನೆವೆ ಜನ ತಪ್ಪನ್ನ ತಿದ್ದಿಕೊಂಡ್ರು.+ ಆದ್ರೆ ಯೋನನಿಗಿಂತ ದೊಡ್ಡವನು ಇಲ್ಲಿ ಒಬ್ಬನಿದ್ದಾನೆ.
33 ಯಾರು ಸಹ ದೀಪ ಹಚ್ಚಿ ಬಚ್ಚಿಡಲ್ಲ, ಬುಟ್ಟಿ ಕೆಳಗೆ ಮುಚ್ಚಿಡಲ್ಲ. ಬದಲಿಗೆ ಮನೆ ಒಳಗೆ ಬರೋರಿಗೆ ಬೆಳಕು ಕಾಣಲಿ ಅಂತ ದೀಪಸ್ತಂಭದ ಮೇಲೆ ಇಡ್ತಾರೆ.+
34 ನಿನ್ನ ಕಣ್ಣೇ ದೇಹದ ದೀಪ. ಹಾಗಾಗಿ ಒಂದು ವಿಷ್ಯದ ಮೇಲೆ ಕಣ್ಣು ನೆಟ್ಟಿದ್ರೆ* ದೇಹವೆಲ್ಲ ಪ್ರಕಾಶಿಸುತ್ತೆ. ನಿನ್ನ ಕಣ್ಣು ದುರಾಸೆಯಿಂದ* ತುಂಬಿದ್ರೆ ದೇಹವೆಲ್ಲ ಕತ್ತಲಾಗುತ್ತೆ.+
35 ಹಾಗಾಗಿ ಜಾಗ್ರತೆಯಿಂದ ಇರು. ನಿನ್ನಲ್ಲಿರೋ ಬೆಳಕು ಕತ್ತಲಾಗಬಹುದು.
36 ಒಂದು ದೀಪ ಬೆಳಕಿನ ಕಿರಣಗಳನ್ನ ಹೊರಸೂಸಿದಾಗ ತುಂಬ ಬೆಳಕಿರುತ್ತೆ. ಅದೇ ತರ ನಿನ್ನ ಇಡೀ ದೇಹ ಬೆಳಕಾಗಿದ್ದು ಒಂದು ಭಾಗದಲ್ಲೂ ಕತ್ತಲು ಇಲ್ಲದಿದ್ರೆ ನಿನ್ನ ದೇಹ ಚೆನ್ನಾಗಿ ಪ್ರಕಾಶಿಸುತ್ತೆ.”
37 ಆತನು ಇದನ್ನ ಹೇಳಿದ ಮೇಲೆ ಒಬ್ಬ ಫರಿಸಾಯ ಆತನನ್ನ ಊಟಕ್ಕೆ ಕರೆದ. ಯೇಸು ಅವನ ಮನೆಗೆ ಊಟಕ್ಕೆ ಹೋದನು.
38 ಆದ್ರೆ ಊಟಕ್ಕೆ ಕೂತ್ಕೊಳ್ಳೋ ಮುಂಚೆ ಯೇಸು ಕೈತೊಳಿದೇ ಇರೋದನ್ನ ನೋಡಿ ಆ ಫರಿಸಾಯನಿಗೆ ಆಶ್ಚರ್ಯ ಆಯ್ತು.+
39 ಆಗ ಒಡೆಯ “ಫರಿಸಾಯರಾದ ನೀವು, ಹೊರಗೆ ನೀಟಾಗಿದ್ದು ಒಳಗೆ ಗಲೀಜಾಗಿರೋ ಲೋಟ ತರ ಇದ್ದೀರ. ನಿಮ್ಮೊಳಗೆ ದುರಾಸೆ, ದುಷ್ಟತನ ತುಂಬಿಕೊಂಡಿದೆ.+
40 ಬುದ್ಧಿ ಇಲ್ಲದವ್ರೇ! ದೇಹ ಸೃಷ್ಟಿ ಮಾಡಿದ ದೇವರೇ ಮನಸ್ಸನ್ನೂ ಮಾಡಿದ್ದಾನಲ್ಲಾ?
41 ಹಾಗಾಗಿ ದಾನಧರ್ಮ* ಮಾಡುವಾಗ ಮನಸಾರೆ ಮಾಡಿ. ಆಗ ನೀವು ಪೂರ್ತಿ ಶುದ್ಧರಾಗಿ ಇರ್ತೀರ.
42 ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನಿಮ್ಮ ತೋಟದಲ್ಲಿರೋ ಸೊಪ್ಪುಗಳಲ್ಲಿ,* ಎಲ್ಲ ತರಕಾರಿಗಳಲ್ಲಿ ಹತ್ತರ ಒಂದು ಭಾಗ ಕೊಡ್ತೀರ.+ ಆದ್ರೆ ದೇವರ ನ್ಯಾಯ, ಪ್ರೀತಿ ಬಗ್ಗೆ ಇರೋ ನಿಯಮ ಪಾಲಿಸಲ್ಲ. ಹೌದು, ಹತ್ತರಲ್ಲಿ ಒಂದು ಭಾಗ ಕೊಡಬೇಕು. ಅದೇ ಸಮಯದಲ್ಲಿ ಆ ಪ್ರಾಮುಖ್ಯ ವಿಷ್ಯಗಳನ್ನೂ ಪಾಲಿಸಬೇಕು.+
43 ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ಸಭಾಮಂದಿರಗಳಲ್ಲಿ ಮೊದಲ ಸಾಲಲ್ಲಿ* ಕೂತ್ಕೊಳ್ಳೋದು, ಮಾರುಕಟ್ಟೆಗಳಲ್ಲಿ ಎಲ್ರ ಹತ್ರ ನಮಸ್ಕಾರ ಹೇಳಿಸ್ಕೊಳ್ಳೋದು ನಿಮಗೆ ತುಂಬ ಇಷ್ಟ.+
44 ನಿಮ್ಮ ಗತಿ ಏನು ಹೇಳಲಿ! ನೀವು ನೆಲಸಮವಾಗಿರೋ* ಸಮಾಧಿಗಳ ತರ ಇದ್ದೀರ.+ ಜನ ಅದ್ರ ಮೇಲೆ ನಡಿತಾರೆ. ಆದ್ರೆ ಅದು ಸಮಾಧಿ ಅಂತ ಅವ್ರಿಗೆ ಗೊತ್ತಿಲ್ಲ” ಅಂದನು.
45 ಆಗ ನಿಯಮ ಪುಸ್ತಕವನ್ನ ಅರಿದು ಕುಡಿದಿದ್ದ ಒಬ್ಬ “ಗುರು, ನೀನು ನಮಗೆ ಅವಮಾನ ಮಾಡ್ತಾ ಇದ್ದೀಯ” ಅಂದ.
46 ಅದಕ್ಕೆ ಯೇಸು “ನಿಯಮ ಪುಸ್ತಕವನ್ನ ಅರಿದು ಕುಡಿದಿರೋ ನಿಮ್ಮ ಗತಿ ಏನು ಹೇಳಲಿ! ನೀವು ನಿಯಮಗಳು ಅನ್ನೋ ಹೊರೆಯನ್ನ ಜನ್ರ ಹೆಗಲ ಮೇಲೆ ಹಾಕ್ತೀರ. ಆದ್ರೆ ಅದನ್ನ ನೀವು ಒಂದು ಬೆರಳಿಂದಾನೂ ಮುಟ್ಟಲ್ಲ.+
47 ನಿಮ್ಮ ಗತಿ ಏನು ಹೇಳಲಿ! ಪ್ರವಾದಿಗಳಿಗೆ ಸ್ಮಾರಕ ಕಟ್ತೀರ. ಆದ್ರೆ ಅವ್ರನ್ನ ಸಾಯಿಸಿದ್ದು ನಿಮ್ಮ ಪೂರ್ವಜರೇ.+
48 ಪೂರ್ವಜರು ಮಾಡಿದ ಕೆಲಸಗಳ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತು. ಆದ್ರೂ ಅವ್ರೇ ಸರಿ ಅಂತೀರ. ಅವರು ಪ್ರವಾದಿಗಳನ್ನ ಕೊಂದ್ರೆ+ ನೀವು ಸ್ಮಾರಕ ಕಟ್ತೀರ.
49 ಅದಕ್ಕೇ ದೇವರು ಸಹ ವಿವೇಚನೆ ಬಳಸಿ ಹೀಗಂದನು ‘ನಾನು ಅವ್ರ ಹತ್ರ ಪ್ರವಾದಿಗಳನ್ನ, ಅಪೊಸ್ತಲರನ್ನ ಕಳಿಸ್ತೀನಿ. ಅವರು ಆ ಪ್ರವಾದಿಗಳಲ್ಲಿ, ಅಪೊಸ್ತಲರಲ್ಲಿ ಕೆಲವ್ರನ್ನ ಕೊಲ್ತಾರೆ, ಇನ್ನೂ ಕೆಲವ್ರನ್ನ ಹಿಂಸಿಸ್ತಾರೆ.
50 ಹಾಗಾಗಿ ಭೂಮಿಯಲ್ಲಿ ಮನುಷ್ಯರು ಹುಟ್ಟಿದಾಗಿಂದ ಇಲ್ಲಿ ತನಕ ಯಾರೆಲ್ಲರ ರಕ್ತ ಸುರಿದಿದೆಯೋ ಅವ್ರೆಲ್ಲರ ರಕ್ತಕ್ಕೆ ಈ ಪೀಳಿಗೆಯವರು ಲೆಕ್ಕ ಕೊಡಬೇಕು.+
51 ಅಂದ್ರೆ ಹೇಬೆಲನ+ ರಕ್ತದಿಂದ ದೇವಾಲಯ ಮತ್ತು ಯಜ್ಞವೇದಿ ಮಧ್ಯ ಕೊಂದುಹಾಕಿದ ಜಕರೀಯನ ರಕ್ತದ ತನಕ. ಇವ್ರೆಲ್ಲರ ರಕ್ತಕ್ಕೆ ಲೆಕ್ಕ ಕೊಡಬೇಕು.’+ ಹೌದು, ನಾನು ಹೇಳ್ತಿದ್ದೀನಿ, ಈ ಪೀಳಿಗೆ ಉತ್ರ ಕೊಡಲೇಬೇಕು.
52 ನಿಯಮ ಪುಸ್ತಕವನ್ನ ಅರಿದು ಕುಡಿದ ನಿಮ್ಮ ಗತಿ ಏನು ಹೇಳಲಿ! ನೀವು ಜ್ಞಾನದ ಬೀಗದ ಕೈ ತಗೊಂಡು ನಿಮ್ಮ ಹತ್ರನೇ ಇಟ್ಕೊಂಡಿದ್ದೀರ. ನೀವೂ ಒಳಗೆ ಹೋಗಲ್ಲ, ಹೋಗೋರನ್ನೂ ಬಿಡಲ್ಲ”+ ಅಂದನು.
53 ಯೇಸು ಅಲ್ಲಿಂದ ಹೊರಗೆ ಬಂದಾಗ ಪಂಡಿತರು, ಫರಿಸಾಯರು ಆತನ ಹಿಂದೆ ಬಿದ್ದು ಕಾಟ ಕೊಡ್ತಾ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ರು.
54 ಆತನು ಮಾತಾಡುವಾಗ ಏನಾದ್ರೂ ತಪ್ಪು ಕಂಡುಹಿಡಿಬೇಕು ಅಂತ ಕಾಯ್ತಾ ಇದ್ರು.+
ಪಾದಟಿಪ್ಪಣಿ
^ ಅಥವಾ “ಹೆಸ್ರನ್ನ ಪವಿತ್ರವಾಗಿ ಕಾಣಲಿ.”
^ ಅಕ್ಷ. “ಬೆಲ್ಜೆಬೂಲ.” ಕೆಟ್ಟ ದೇವದೂತರ ನಾಯಕನಿಗೆ ಸೂಚಿಸುತ್ತೆ.
^ ಅಕ್ಷ. “ಬೆಲ್ಜೆಬೂಲ.”
^ ಅಕ್ಷ. “ದೇವರ ಬೆರಳು.”
^ ಅಕ್ಷ. “ಕಣ್ಣು ಸರಳವಾಗಿದ್ರೆ,” ಅಥವಾ “ಸ್ಪಷ್ಟವಾಗಿದ್ರೆ, ಬೆಳಕಿಂದ ತುಂಬಿದ್ರೆ.”
^ ಅಕ್ಷ. “ಕೆಟ್ಟದ್ರಿಂದ, ದುಷ್ಟತನದಿಂದ.”
^ ಅಥವಾ “ಬಡವರಿಗೆ ಸಹಾಯ.”
^ ಅಕ್ಷ. “ಪುದೀನ, ಸದಾಪು.”
^ ಅಥವಾ “ಒಳ್ಳೇ ಸ್ಥಾನದಲ್ಲಿ.”
^ ಅಥವಾ “ಗುರುತು ಮಾಡದಿರೋ.”