ಲೂಕ 8:1-56
-
ಯೇಸುವನ್ನ ಸ್ತ್ರೀಯರು ಹಿಂಬಾಲಿಸಿದ್ರು (1-3)
-
ಬೀಜ ಬಿತ್ತುವವನ ಉದಾಹರಣೆ (4-8)
-
ಯೇಸು ಯಾಕೆ ಉದಾಹರಣೆ ಹೇಳ್ತಿದ್ದನು? (9, 10)
-
ಬೀಜ ಬಿತ್ತುವವನ ಉದಾಹರಣೆಯನ್ನ ವಿವರಿಸಿದನು (11-15)
-
ದೀಪವನ್ನ ಮುಚ್ಚಿಡಲ್ಲ (16-18)
-
ಯೇಸುವಿನ ಅಮ್ಮ ಮತ್ತು ತಮ್ಮಂದಿರು (19-21)
-
ಯೇಸು ಬಿರುಗಾಳಿ ಶಾಂತ ಮಾಡಿದನು (22-25)
-
ಯೇಸು ಕೆಟ್ಟ ದೇವದೂತರನ್ನ ಹಂದಿ ಹಿಂಡಿಗೆ ಕಳಿಸಿದನು (26-39)
-
ಯಾಯೀರನ ಮಗಳು; ಒಬ್ಬ ಸ್ತ್ರೀ ಯೇಸುವಿನ ಬಟ್ಟೆ ಮುಟ್ಟಿದಳು (40-56)
8 ಸ್ವಲ್ಪ ಸಮಯ ಆದಮೇಲೆ ಯೇಸು ಪಟ್ಟಣದಿಂದ ಪಟ್ಟಣಕ್ಕೆ, ಹಳ್ಳಿಯಿಂದ ಹಳ್ಳಿಗೆ ಹೋಗಿ ದೇವರ ಆಳ್ವಿಕೆಯ ಸಿಹಿಸುದ್ದಿ ಸಾರಿದನು.+ 12 ಶಿಷ್ಯರೂ ಜೊತೆ ಇದ್ರು.
2 ಕೆಲವು ಸ್ತ್ರೀಯರೂ ಇದ್ರು. ಅವ್ರಿಗೆ ಈ ಮುಂಚೆ ಕೆಟ್ಟ ದೇವದೂತರು ಹಿಡಿದಿದ್ರು ಮತ್ತು ಕಾಯಿಲೆಗಳಿಂದ ಕಷ್ಟಪಡ್ತಿದ್ರು. ಮಗ್ದಲ ಅಂತ ಹೆಸ್ರಿದ್ದ ಮರಿಯ ಅವ್ರಲ್ಲಿ ಒಬ್ಬಳು. ಅವಳ ಒಳಗೆ ಈ ಮುಂಚೆ ಏಳು ಕೆಟ್ಟ ದೇವದೂತರು ಸೇರಿಕೊಂಡಿದ್ರು.
3 ಆ ಸ್ತ್ರೀಯರಲ್ಲಿ ಸುಸನ್ನ, ಹೆರೋದನ ಮನೆಯ ಮೇಲ್ವಿಚಾರಕನಾದ ಕೂಜನ ಹೆಂಡತಿ ಯೊಹನ್ನ+ ಮತ್ತು ಇನ್ನೂ ಅನೇಕರು ಇದ್ರು. ಇವರು ಹಣ-ಆಸ್ತಿ ಖರ್ಚು ಮಾಡಿ ಯೇಸು ಮತ್ತು ಆತನ ಶಿಷ್ಯರ ಸೇವೆ ಮಾಡ್ತಿದ್ರು.+
4 ಯೇಸು ಪಟ್ಟಣದಿಂದ ಪಟ್ಟಣಕ್ಕೆ ಹೋಗ್ತಿದ್ದಾಗ ಜನ್ರೂ ಆತನ ಹಿಂದೆ ಹೋಗ್ತಿದ್ರು. ಹೀಗೆ ತುಂಬ ಜನ ಸೇರಿಬಂದಾಗ ಯೇಸು ಈ ಉದಾಹರಣೆ ಹೇಳಿದನು+
5 “ಒಬ್ಬ ರೈತ ಬೀಜ ಬಿತ್ತೋಕೆ ಹೋದ. ಬಿತ್ತುವಾಗ ಸ್ವಲ್ಪ ಬೀಜ ದಾರಿಯಲ್ಲಿ ಬಿತ್ತು. ಆ ಬೀಜಗಳನ್ನ ಜನ ತುಳಿದ್ರು ಮತ್ತು ಹಕ್ಕಿಗಳು ಬಂದು ತಿಂದುಬಿಟ್ಟವು.+
6 ಇನ್ನು ಸ್ವಲ್ಪ ಬೀಜ ಕಡಿಮೆ ಮಣ್ಣಿದ್ದ ಬಂಡೆ ಮೇಲೆ ಬಿತ್ತು. ಮೊಳೆತಾಗ ನೀರು ಸಿಗದೆ ಒಣಗಿಹೋಯ್ತು.+
7 ಇನ್ನು ಸ್ವಲ್ಪ ಬೀಜ ಮುಳ್ಳುಗಿಡಗಳ ಮಧ್ಯ ಬಿತ್ತು. ಮುಳ್ಳುಗಿಡಗಳು ಅವುಗಳ ಜೊತೆ ಬೆಳಿತಾ ಬೆಳಿತಾ ಒಳ್ಳೇ ಗಿಡಗಳನ್ನ ಬೆಳೆಯೋಕೆ ಬಿಡಲಿಲ್ಲ.+
8 ಇನ್ನು ಸ್ವಲ್ಪ ಬೀಜ ಒಳ್ಳೇ ನೆಲದಲ್ಲಿ ಬಿತ್ತು. ಅವು ಮೊಳೆತ ಮೇಲೆ 100 ಪಟ್ಟು ಫಲಕೊಟ್ಟವು.”+ ಯೇಸು ಇದನ್ನ ಹೇಳಿದ ಮೇಲೆ “ನಾನು ಹೇಳೋದನ್ನ ಗಮನಕೊಟ್ಟು ಕೇಳಿ”+ ಅಂತ ಜೋರಾಗಿ ಹೇಳಿದನು.
9 ಶಿಷ್ಯರು ಈ ಉದಾಹರಣೆಯ ಅರ್ಥ ಏನಂತ ಯೇಸುನ ಕೇಳಿದ್ರು.+
10 ಆಗ “ದೇವರ ಆಳ್ವಿಕೆಯ ಬಗ್ಗೆ ಇರೋ ಪವಿತ್ರ ರಹಸ್ಯಗಳನ್ನ ಅರ್ಥಮಾಡ್ಕೊಳ್ಳೋ ಅವಕಾಶ ದೇವರು ನಿಮಗೆ ಕೊಟ್ಟಿದ್ದಾನೆ. ಉಳಿದವರಿಗೆ ಇದು ಬರೀ ಉದಾಹರಣೆ ಅಷ್ಟೆ.+ ಯಾಕಂದ್ರೆ ಅವರು ನೋಡಿದ್ರೂ ಏನೂ ಕಾಣಿಸಲ್ಲ. ಕೇಳಿದ್ರೂ ಅರ್ಥ ಆಗಲ್ಲ.+
11 ಆ ಉದಾಹರಣೆ ಅರ್ಥ ಹೀಗಿದೆ: ಬೀಜ ಅಂದ್ರೆ ದೇವರ ಸಂದೇಶ.+
12 ದಾರಿಯಲ್ಲಿ ಬಿದ್ದ ಬೀಜದ ಹಾಗೆ ಇರೋ ಜನ ಸಂದೇಶ ಕೇಳ್ತಾರೆ. ಆದ್ರೆ ಅವರು ನಂಬಿ ರಕ್ಷಣೆ ಪಡಿಬಾರದು ಅಂತ ಅವ್ರ ಹೃದಯದಿಂದ ಆ ಸಂದೇಶವನ್ನ ಸೈತಾನ ತೆಗಿತಾನೆ.+
13 ಇನ್ನು ಕೆಲವರು ಕಡಿಮೆ ಮಣ್ಣಿದ್ದ ಬಂಡೆ ಮೇಲೆ ಬಿದ್ದ ಬೀಜದ ತರ ಇರ್ತಾರೆ. ಅಂದ್ರೆ ಅವರು ಸಂದೇಶ ಕೇಳಿಸ್ಕೊಂಡಾಗ ಖುಷಿಯಿಂದ ಸ್ವೀಕರಿಸ್ತಾರೆ. ಆದ್ರೆ ಅವರು ಬೇರಿಲ್ಲದ ಗಿಡದ ತರ ಇರ್ತಾರೆ. ಸ್ವಲ್ಪ ಸಮಯದ ತನಕ ಮಾತ್ರ ನಂಬ್ತಾರೆ. ಕಷ್ಟ ಬಂದಾಗ ನಂಬಿಕೆ ಬಿಟ್ಟುಬಿಡ್ತಾರೆ.+
14 ಇನ್ನು ಕೆಲವರು ಮುಳ್ಳುಗಿಡದ ಮಧ್ಯ ಬಿದ್ದ ಬೀಜದ ಹಾಗೆ ಇರ್ತಾರೆ. ಅವರು ಸಂದೇಶ ಕೇಳ್ತಾರೆ. ಆದ್ರೆ ಈ ಜೀವನದ ಚಿಂತೆ, ಹಣದಾಸೆ+ ಮತ್ತು ಐಶಾರಾಮದ ಬದುಕಿನಿಂದಾಗಿ ಅವ್ರ ಮನಸ್ಸು ಬೇರೆ ಕಡೆ ಹೋಗುತ್ತೆ.+ ಅದ್ರಲ್ಲೇ ಮುಳುಗಿ ಹೋಗ್ತಾರೆ. ಒಳ್ಳೇ ಫಲ ಕೊಡಲ್ಲ.+
15 ಒಳ್ಳೇ ನೆಲದಲ್ಲಿ ಬಿದ್ದ ಬೀಜದ ಹಾಗೆ ಇರುವವರು ಒಳ್ಳೇ ಮನಸ್ಸಿಂದ ಸಂದೇಶ ಕೇಳ್ತಾರೆ.+ ಅದನ್ನ ಹೃದಯದಲ್ಲಿ ಇಟ್ಕೊಂಡು ತಾಳ್ಮೆಯಿಂದ ಫಲ ಕೊಡ್ತಾರೆ.+
16 ಯಾರೂ ದೀಪ ಹಚ್ಚಿ ಅದನ್ನ ಪಾತ್ರೆಯಿಂದ ಮುಚ್ಚಿಡಲ್ಲ ಅಥವಾ ಮಂಚದ ಕೆಳಗೆ ಇಡಲ್ಲ. ಅದ್ರ ಬದಲು ಮನೆ ಒಳಗೆ ಬರೋರಿಗೆ ಬೆಳಕು ಕಾಣಲಿ ಅಂತ ದೀಪಸ್ತಂಭದ ಮೇಲೆ ಇಡ್ತಾರೆ.+
17 ಮುಚ್ಚಿಟ್ಟಿರೋ ಎಲ್ಲ ವಿಷ್ಯ ಹೊರಗೆ ಬಂದೆ ಬರುತ್ತೆ, ಗುಟ್ಟು ಖಂಡಿತ ರಟ್ಟಾಗುತ್ತೆ.+
18 ಹಾಗಾಗಿ ನಾನು ಹೇಳೋ ಮಾತನ್ನ ಚೆನ್ನಾಗಿ ಕೇಳಿಸ್ಕೊಳ್ಳಿ. ಯಾಕಂದ್ರೆ ಯಾರು ಅರ್ಥಮಾಡ್ಕೊಂಡಿದ್ದಾರೋ ಅವ್ರಿಗೆ ಇನ್ನೂ ಚೆನ್ನಾಗಿ ಅರ್ಥ ಆಗುತ್ತೆ.+ ಆದ್ರೆ ಯಾರಿಗೆ ಅರ್ಥ ಆಗಿಲ್ವೋ ಅವರು ಅರ್ಥ ಆಗಿದೆ ಅಂತ ಅಂದ್ಕೊಂಡಿರೋದನ್ನೂ ದೇವರು ಅವ್ರ ತಲೆಯಿಂದ ತೆಗೆದುಹಾಕ್ತಾನೆ”+ ಅಂದನು.
19 ಆಮೇಲೆ ಯೇಸುವಿನ ಅಮ್ಮ ಮತ್ತು ತಮ್ಮಂದಿರು+ ಅಲ್ಲಿಗೆ ಬಂದ್ರು. ಆದ್ರೆ ತುಂಬ ಜನ ಇದ್ದಿದ್ರಿಂದ ಹತ್ರ ಹೋಗೋಕಾಗ್ಲಿಲ್ಲ.+
20 ಆಗ ಜನ “ನಿನ್ನ ಅಮ್ಮ, ತಮ್ಮಂದಿರು ಕಾಯ್ತಾ ಇದ್ದಾರೆ, ನಿನ್ನನ್ನ ನೋಡಬೇಕಂತೆ” ಅಂದ್ರು.
21 ಅದಕ್ಕೆ ಯೇಸು “ದೇವ್ರ ಮಾತು ಕೇಳಿ ಅದ್ರ ತರ ನಡಿಯುವವ್ರೇ ನನ್ನ ಅಮ್ಮ, ತಮ್ಮಂದಿರು”+ ಅಂದನು.
22 ಒಂದಿನ ಯೇಸು ಮತ್ತು ಶಿಷ್ಯರು ದೋಣಿ ಹತ್ತಿದ್ರು. ಆತನು “ನಾವು ಸರೋವರದ ಆಕಡೆಗೆ ಹೋಗೋಣ” ಅಂದನು. ಅವ್ರೆಲ್ಲ ಅಲ್ಲಿಂದ ಹೊರಟ್ರು.+
23 ಹೋಗ್ತಿರುವಾಗ ಯೇಸು ದೋಣಿಯಲ್ಲಿ ನಿದ್ದೆ ಮಾಡ್ತಿದ್ದನು. ಆಗ ದೊಡ್ಡ ಬಿರುಗಾಳಿ ಸರೋವರದ ಮೇಲೆ ಬೀಸಿತು. ದೋಣಿಯಲ್ಲಿ ನೀರು ತುಂಬಿತು. ಅವ್ರೆಲ್ಲ ಅಪಾಯದಲ್ಲಿದ್ರು.+
24 ಆಗ ಅವರು ಆತನನ್ನ ಎಬ್ಬಿಸ್ತಾ “ಸ್ವಾಮೀ, ನಮ್ಮನ್ನ ಕಾಪಾಡು, ನಾವು ಸತ್ತು ಹೋಗ್ತೀವಿ” ಅಂದ್ರು. ಆಗ ಆತನು ಎದ್ದು ಗಾಳಿಗೆ, ರಭಸವಾಗಿ ಬರ್ತಿದ್ದ ನೀರಿಗೆ ಬೈದಾಗ ಎಲ್ಲ ಶಾಂತವಾಯ್ತು.+
25 ಯೇಸು “ದೇವರ ಮೇಲೆ ನಿಮಗಿದ್ದ ನಂಬಿಕೆ ಎಲ್ಲಿ ಹೋಯ್ತು?” ಅಂತ ಕೇಳಿದನು. ಅವ್ರಿಗೆ ತುಂಬ ಭಯ, ಆಶ್ಚರ್ಯ ಆಯ್ತು. “ಗಾಳಿ, ಸಮುದ್ರನೂ ಇವನ ಮಾತು ಕೇಳುತ್ತಲ್ಲಾ, ಇವನು ಯಾರಪ್ಪ?”+ ಅಂತ ಮಾತಾಡ್ಕೊಂಡ್ರು.
26 ಆಮೇಲೆ ಅವರು ಗಲಿಲಾಯಕ್ಕೆ ವಿರುದ್ಧ ದಿಕ್ಕಿನಲ್ಲಿದ್ದ ಗೆರಸ ಪಟ್ಟಣಕ್ಕೆ+ ಬಂದ್ರು.
27 ಯೇಸು ದೋಣಿ ಇಳಿದ ತಕ್ಷಣ ಅದೇ ಊರಿನ ಒಬ್ಬ ವ್ಯಕ್ತಿ ಬಂದ. ಅವನು ಕೆಟ್ಟ ದೇವದೂತರ ನಿಯಂತ್ರಣದಲ್ಲಿದ್ದ. ತುಂಬ ಸಮಯದಿಂದ ಅವನು ಬಟ್ಟೆ ಹಾಕ್ತಾ ಇರ್ಲಿಲ್ಲ. ಮನೆಯಲ್ಲಿ ಇರ್ತಿರಲಿಲ್ಲ, ಸ್ಮಶಾನದಲ್ಲಿ ವಾಸಮಾಡ್ತಿದ್ದ.+
28 ಯೇಸುವನ್ನ ನೋಡಿದ ತಕ್ಷಣ ಕಿರಿಚಿ ಆತನ ಮುಂದೆ ಮಂಡಿಯೂರಿ “ಯೇಸು, ಸರ್ವೋನ್ನತ ದೇವರ ಮಗ, ನೀನ್ಯಾಕೆ ಇಲ್ಲಿಗೆ ಬಂದೆ? ನಿನ್ನನ್ನ ಬೇಡ್ಕೊಳ್ತೀನಿ, ನನಗೆ ಶಿಕ್ಷೆ ಕೊಡಬೇಡ” ಅಂದ.+
29 (ಯಾಕಂದ್ರೆ ಯೇಸು ಆ ಕೆಟ್ಟ ದೇವದೂತನಿಗೆ ಆ ವ್ಯಕ್ತಿಯನ್ನ ಬಿಟ್ಟು ಹೊರಗೆ ಬಾ ಅಂತ ಅಪ್ಪಣೆ ಕೊಡ್ತಾ ಇದ್ದನು. ಆ ಕೆಟ್ಟ ದೇವದೂತ ತುಂಬ ವರ್ಷದಿಂದ ಅವನಿಗೆ ಕಾಟ ಕೊಡ್ತಿದ್ದ.+ ಪದೇಪದೇ ಸರಪಳಿಯಿಂದ ಕೈಕಾಲು ಕಟ್ಟಿ ಕಾವಲು ಕಾಯಬೇಕಾಗ್ತಿತ್ತು. ಅವನು ಆ ಸರಪಳಿಗಳನ್ನ ಕಿತ್ತು ಬಿಸಾಡ್ತಿದ್ದ. ಆಮೇಲೆ ಆ ಕೆಟ್ಟ ದೇವದೂತ ಅವನಲ್ಲಿ ಸೇರಿಕೊಂಡಾಗ ಎಲ್ಲೆಲ್ಲೊ ಓಡಿಹೋಗ್ತಿದ್ದ.)
30 ಯೇಸು ಅವನಿಗೆ “ನಿನ್ನ ಹೆಸ್ರೇನು?” ಅಂತ ಕೇಳಿದಾಗ “ಸೇನೆ” ಅಂದ. ಯಾಕಂದ್ರೆ ಅವನೊಳಗೆ ತುಂಬ ಕೆಟ್ಟ ದೇವದೂತರು ಸೇರಿಕೊಂಡಿದ್ರು.
31 ಆ ಕೆಟ್ಟ ದೇವದೂತರು ತಮ್ಮನ್ನ ಅಗಾಧ ಸ್ಥಳಕ್ಕೆ ಕಳಿಸಬಾರದು ಅಂತ ಯೇಸುವನ್ನ ಬೇಡಿಕೊಳ್ತಾ ಇದ್ರು.+
32 ಅಲ್ಲೇ ಬೆಟ್ಟದ ಮೇಲೆ ಹಂದಿಗಳ ದೊಡ್ಡ ಹಿಂಡು+ ಮೇಯ್ತಾ ಇತ್ತು. ಆ ಕೆಟ್ಟ ದೇವದೂತರು ಹಂದಿಗಳ ಒಳಗೆ ಸೇರಿಕೊಳ್ಳೋಕೆ ಅನುಮತಿ ಕೊಡು ಅಂತ ಯೇಸುವನ್ನ ಬೇಡ್ಕೊಂಡ್ರು. ಯೇಸು ಅದಕ್ಕೆ ಅನುಮತಿ ಕೊಟ್ಟನು.+
33 ಆಗ ಕೆಟ್ಟ ದೇವದೂತರು ಹೊರಗೆ ಬಂದು ಹಂದಿಗಳ ಒಳಗೆ ಸೇರಿಕೊಂಡ್ರು. ಆ ಹಂದಿಗಳು ಬೆಟ್ಟದ ತುದಿಗೆ ಓಡಿಹೋಗಿ ಸಮುದ್ರಕ್ಕೆ ಹಾರಿ ಸತ್ತವು.
34 ಇದನ್ನ ನೋಡಿದಾಗ ಹಂದಿ ಕಾಯ್ತಾ ಇದ್ದವರು ಪಟ್ಟಣಕ್ಕೆ, ಅಕ್ಕಪಕ್ಕದ ಹಳ್ಳಿಗಳಿಗೆ ಓಡಿಹೋಗಿ ನಡೆದ ವಿಷ್ಯ ಹೇಳಿದ್ರು.
35 ಜನ ಏನಾಯ್ತು ಅಂತ ನೋಡೋಕೆ ಬಂದ್ರು. ಅವರು ಯೇಸು ಹತ್ರ ಬಂದ್ರು. ಕೆಟ್ಟ ದೇವದೂತರು ಬಿಟ್ಟುಹೋಗಿದ್ದ ಆ ವ್ಯಕ್ತಿ ಬಟ್ಟೆ ಹಾಕೊಂಡು ಯೇಸು ಕಾಲ ಹತ್ರ ಕೂತಿದ್ದ. ಅವನು ಹುಚ್ಚುಹುಚ್ಚಾಗಿ ಆಡದೆ ಚೆನ್ನಾಗಿದ್ದ. ಇದನ್ನ ನೋಡಿ ಜನ್ರಿಗೆ ತುಂಬ ಭಯ ಆಯ್ತು.
36 ಅವನು ಹೇಗೆ ಹುಷಾರಾದ ಅಂತ ಕಣ್ಣಾರೆ ಕಂಡವರು ಆಗಿದ್ದನ್ನೆಲ್ಲ ವಿವರಿಸಿದ್ರು.
37 ಗೆರಸ ಪಟ್ಟಣದ ಅಕ್ಕಪಕ್ಕದ ಜನ್ರೆಲ್ಲ ಯೇಸುವನ್ನ ಅಲ್ಲಿಂದ ಹೋಗಿಬಿಡು ಅಂತ ಕೇಳ್ಕೊಂಡ್ರು. ಯಾಕಂದ್ರೆ ಆ ಜನ್ರಿಗೆ ತುಂಬ ಭಯ ಆಗಿತ್ತು. ಆಗ ಯೇಸು ದೋಣಿ ಹತ್ತಿ ಹೋದನು.
38 ಆ ಕೆಟ್ಟ ದೇವದೂತರು ಬಿಟ್ಟುಹೋಗಿದ್ದ ವ್ಯಕ್ತಿ ತನ್ನನ್ನೂ ಜೊತೆಯಲ್ಲಿ ಕರ್ಕೊಂಡು ಹೋಗು ಅಂತ ಬೇಡ್ಕೊಂಡ. ಆದ್ರೆ ಯೇಸು ಅದಕ್ಕೆ ಒಪ್ಪಲಿಲ್ಲ.+
39 “ಮನೆಗೆ ಹೋಗು. ದೇವರು ನಿನಗೆ ಮಾಡಿದ ವಿಷ್ಯಗಳನ್ನೆಲ್ಲ ಹೇಳ್ತಾ ಇರು” ಅಂತ ಹೇಳಿ ಕಳಿಸಿಬಿಟ್ಟನು. ಆ ವ್ಯಕ್ತಿ ಹೋಗಿ ಯೇಸು ತನಗೆ ಮಾಡಿದ್ದನ್ನೆಲ್ಲ ಇಡೀ ಪಟ್ಟಣಕ್ಕೆ ಹೇಳ್ತಾ ಹೋದ.
40 ಯೇಸು ವಾಪಸ್ ಬಂದಾಗ ಜನ್ರೆಲ್ಲ ಆತನನ್ನ ಖುಷಿಯಿಂದ ಬರಮಾಡ್ಕೊಂಡ್ರು. ಯಾಕಂದ್ರೆ ಯೇಸು ಯಾವಾಗ ಬರ್ತಾನೆ ಅಂತ ಅವರು ಕಾಯ್ತಾ ಇದ್ರು.+
41 ಆಗ ಯಾಯಿರ ಅನ್ನೋ ವ್ಯಕ್ತಿ ಬಂದ. ಅವನು ಸಭಾಮಂದಿರದ ಒಬ್ಬ ಅಧಿಕಾರಿ ಆಗಿದ್ದ. ಅವನು ಯೇಸು ಕಾಲಿಗೆ ಬಿದ್ದು ಮನೆಗೆ ಬಾ ಅಂತ ಕೇಳ್ಕೊಂಡ.+
42 ಯಾಕಂದ್ರೆ ಅವನ ಒಬ್ಬಳೇ ಮಗಳು ಹುಷಾರಿಲ್ಲದೆ ಸಾಯೋ ಸ್ಥಿತಿಗೆ ಬಂದಿದ್ದಳು. ಅವಳಿಗೆ ಸುಮಾರು 12 ವರ್ಷ.
ಯೇಸು ಹೋಗ್ತಿರುವಾಗ ಜನ ಆತನನ್ನ ನೂಕ್ತಾ ಹಿಂದೆನೇ ಹೋಗ್ತಿದ್ರು.
43 ಆ ಗುಂಪಲ್ಲಿ ರಕ್ತಸ್ರಾವ ರೋಗ+ ಇದ್ದ ಒಬ್ಬ ಸ್ತ್ರೀ ಇದ್ದಳು. ಆ ಕಾಯಿಲೆಯಿಂದಾಗಿ ಅವಳು 12 ವರ್ಷದಿಂದ ಕಷ್ಟಪಡ್ತಿದ್ದಳು. ಯಾವ ವೈದ್ಯನ ಹತ್ರ ಹೋದ್ರೂ ವಾಸಿ ಆಗಿರ್ಲಿಲ್ಲ.+
44 ಅವಳು ಯೇಸುವಿನ ಹಿಂದೆಹಿಂದೆ ಹೋಗಿ ಆತನ ಬಟ್ಟೆ ತುದಿ+ ಮುಟ್ಟಿದಳು. ಆಗಲೇ ಅವಳ ರಕ್ತಸ್ರಾವ ನಿಂತುಹೋಯ್ತು.
45 ಆಗ ಯೇಸು “ನನ್ನನ್ನ ಯಾರು ಮುಟ್ಟಿದ್ರು?” ಅಂತ ಕೇಳಿದನು. ‘ನಾನಲ್ಲ ನಾನಲ್ಲ’ ಅಂತ ಅಲ್ಲಿ ಇದ್ದವ್ರೆಲ್ಲ ಹೇಳಿದ್ರು. ಆಗ ಪೇತ್ರ “ಗುರು, ಇಷ್ಟೊಂದು ಜನ ನಿನ್ನ ಮೈಮೇಲೆ ಬೀಳ್ತಿದ್ದಾರಲ್ಲಾ”+ ಅಂದ.
46 ಅದಕ್ಕೆ ಯೇಸು “ಆದ್ರೆ ಯಾರೋ ನನ್ನನ್ನ ಮುಟ್ಟಿದ್ರು. ಯಾಕಂದ್ರೆ ನನ್ನಿಂದ ಶಕ್ತಿ+ ಹೋಗಿದ್ದು ನಂಗೆ ಗೊತ್ತಾಯ್ತು” ಅಂದನು.
47 ಇನ್ನು ತಪ್ಪಿಸ್ಕೊಳ್ಳೋಕೆ ಆಗಲ್ಲ ಅಂತ ಅವಳಿಗೆ ಗೊತ್ತಾದಾಗ ಭಯದಿಂದ ನಡುಗ್ತಾ ಯೇಸು ಮುಂದೆ ಮಂಡಿಯೂರಿದಳು. ಅವಳು ಯೇಸುವಿನ ಬಟ್ಟೆ ಮುಟ್ಟೋಕೆ ಕಾರಣ ಏನಂತ, ಮುಟ್ಟಿದ ಮೇಲೆ ಅವಳಿಗೆ ವಾಸಿ ಆಯ್ತು ಅಂತ ಎಲ್ಲ ಜನ್ರ ಮುಂದೆ ಹೇಳಿದಳು.
48 ಅದಕ್ಕೆ ಯೇಸು “ಮಗಳೇ, ನಿನ್ನ ನಂಬಿಕೆನೇ ನಿನ್ನನ್ನ ವಾಸಿಮಾಡಿದೆ. ಸಮಾಧಾನದಿಂದ ಹೋಗು”+ ಅಂದನು.
49 ಯೇಸು ಇನ್ನೂ ಮಾತಾಡ್ತಾ ಇದ್ದಾಗ ಯಾಯಿರನ ಮನೆಯಿಂದ ಒಬ್ಬ ಬಂದು “ನಿನ್ನ ಮಗಳು ಸತ್ತು ಹೋದಳು! ಗುರುಗೆ ಯಾಕೆ ಸುಮ್ಮನೆ ತೊಂದ್ರೆ ಕೊಡ್ತೀಯಾ?”+ ಅಂದ.
50 ಇದನ್ನ ಕೇಳಿ ಯೇಸು “ಭಯಪಡಬೇಡ, ನಂಬಿಕೆ ಇಡು ಸಾಕು, ಅವಳು ಬದುಕ್ತಾಳೆ”+ ಅಂದನು.
51 ಯೇಸು ಮನೆ ಹತ್ರ ಬಂದಾಗ ಪೇತ್ರ, ಯೋಹಾನ, ಯಾಕೋಬ ಮತ್ತು ಆ ಹುಡುಗಿಯ ಅಪ್ಪಅಮ್ಮನನ್ನ ಬಿಟ್ಟು ಬೇರೆ ಯಾರನ್ನೂ ಒಳಗೆ ಕರ್ಕೊಂಡು ಹೋಗಲಿಲ್ಲ.
52 ಜನ್ರೆಲ್ಲ ಆ ಹುಡುಗಿಗೆ ಆಗಿದ್ದನ್ನ ನೋಡಿ ಜೋರಾಗಿ ಅಳ್ತಾ, ಎದೆಬಡ್ಕೊಳ್ತಾ ಇದ್ರು. ಆಗ ಯೇಸು “ಅಳೋದನ್ನ ನಿಲ್ಲಿಸಿ.+ ಅವಳು ಸತ್ತಿಲ್ಲ, ನಿದ್ದೆ ಮಾಡ್ತಿದ್ದಾಳೆ”+ ಅಂದನು.
53 ಇದನ್ನ ಕೇಳಿ ಅವರು ನಗ್ತಾ ಗೇಲಿ ಮಾಡೋಕೆ ಶುರುಮಾಡಿದ್ರು. ಯಾಕಂದ್ರೆ ಅವಳು ಸತ್ತುಹೋಗಿದ್ದಾಳೆ ಅಂತ ಅವ್ರಿಗೆ ಗೊತ್ತಿತ್ತು.
54 ಆದ್ರೆ ಆತನು ಅವಳ ಕೈಹಿಡಿದು “ಹುಡುಗಿ, ಎದ್ದೇಳು!”+ ಅಂದನು.
55 ಆಗ ಅವಳಿಗೆ ಜೀವ*+ ಬಂತು. ತಕ್ಷಣ ಅವಳು ಎದ್ದು ನಿಂತಳು.+ ಅವಳಿಗೆ ತಿನ್ನೋಕೆ ಏನಾದ್ರೂ ಕೊಡಿ ಅಂತ ಯೇಸು ಹೇಳಿದನು.
56 ಆ ಹುಡುಗಿಯ ಅಪ್ಪಅಮ್ಮಗೆ ತುಂಬ ಆಶ್ಚರ್ಯ ಆಯ್ತು. ಯೇಸು ಅವ್ರಿಗೆ ಈಗ ಆಗಿದ್ದನ್ನ ಯಾರಿಗೂ ಹೇಳಬಾರದು ಅಂತ ಅಪ್ಪಣೆ ಕೊಟ್ಟನು.+
ಪಾದಟಿಪ್ಪಣಿ
^ ಅಥವಾ “ಅವಳ ಉಸಿರು (ಜೀವಶಕ್ತಿ).”