ಹಗ್ಗಾಯ 1:1-15
1 ರಾಜ ದಾರ್ಯಾವೆಷ ಆಳ್ತಿದ್ದ ಎರಡ್ನೇ ವರ್ಷದ ಆರನೇ ತಿಂಗಳ ಮೊದಲ್ನೇ ದಿನ ಯೆಹೋವನ ಸಂದೇಶ ಶೆಯಲ್ತಿಯೇಲನ ಮಗನೂ ಯೆಹೂದದ ರಾಜ್ಯಪಾಲನೂ ಆದ ಜೆರುಬ್ಬಾಬೆಲನಿಗೆ+ ಮತ್ತು ಯೆಹೋಚಾದಾಕನ ಮಗನೂ ಮಹಾ ಪುರೋಹಿತನೂ ಆದ ಯೆಹೋಶುವನಿಗೆ ಪ್ರವಾದಿ ಹಗ್ಗಾಯನ*+ ಮೂಲಕ ಬಂತು. ಅದೇನಂದ್ರೆ:
2 “ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ‘ಈ ಜನ “ಯೆಹೋವನ ಆಲಯ ಕಟ್ಟೋ* ಸಮಯ ಇನ್ನೂ ಬಂದಿಲ್ಲ” ಅಂತ ಮಾತಾಡ್ಕೊಳ್ತಿದ್ದಾರೆ.’”+
3 ಯೆಹೋವನ ಸಂದೇಶ ಇನ್ನೊಂದು ಸಲ ಪ್ರವಾದಿ ಹಗ್ಗಾಯನ ಮೂಲಕ ಬಂತು.+ ಅದು ಹೀಗಿತ್ತು:
4 “ನನ್ನ ಆಲಯ ಹಾಳುಬಿದ್ದಿರುವಾಗ ನೀವು ಸುಂದರ ಮನೆಗಳಲ್ಲಿ ಇದ್ದೀರ. ಹೀಗೆ ಮಾಡೋಕೆ ಇದು ಸರಿಯಾದ ಸಮಯನಾ?+
5 ಈಗ ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ‘ನೀವು ನಿಮ್ಮ ಮಾರ್ಗಗಳನ್ನ* ಜಾಗ್ರತೆಯಿಂದ ಪರೀಕ್ಷಿಸಿ.
6 ನೀವು ತುಂಬ ಬೀಜ ಬಿತ್ತಿದ್ದೀರ, ಆದ್ರೆ ಸ್ವಲ್ಪಾನೇ ಕೊಯ್ತೀರ.+ ನೀವು ತಿಂತೀರ, ಆದ್ರೆ ತೃಪ್ತಿ ಆಗಲ್ಲ. ನೀವು ಕುಡಿತೀರ, ಆದ್ರೆ ಸಾಕಾಗಲ್ಲ. ನೀವು ಬಟ್ಟೆಗಳನ್ನ ಹಾಕ್ತೀರ, ಆದ್ರೆ ಬೆಚ್ಚಗಾಗಲ್ಲ. ಸಂಬಳಕ್ಕಾಗಿ ದುಡಿಯುವವನು ತನ್ನ ಸಂಬಳವನ್ನ ಬರೀ ತೂತುಗಳಿರೋ ಚೀಲಕ್ಕೆ ಹಾಕ್ತಾನೆ.’
7 ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ‘ನಿಮ್ಮ ಮಾರ್ಗಗಳನ್ನ* ಜಾಗ್ರತೆಯಿಂದ ಪರೀಕ್ಷಿಸಿ.’
8 ಯೆಹೋವ ಹೀಗೆ ಹೇಳ್ತಿದ್ದಾನೆ: ‘ನನಗೆ ಖುಷಿ ಆಗೋ ತರ, ಗೌರವ ತರೋ ತರ+ ಬೆಟ್ಟದ ಮೇಲೆ ಹೋಗಿ ಅಲ್ಲಿಂದ ಮರದ ದಿಮ್ಮಿಗಳನ್ನ ತಗೊಂಡು ಬಂದು+ ನನ್ನ ಆಲಯ ಕಟ್ಟಿ.’+
9 ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ‘ನೀವು ತುಂಬ ನಿರೀಕ್ಷಿಸಿದ್ರಿ, ಆದ್ರೆ ನಿಮಗೆ ಸಿಕ್ಕಿದ್ದು ಸ್ವಲ್ಪಾನೇ. ಆ ಸ್ವಲ್ಪವನ್ನ ನಿಮ್ಮ ಮನೆಗೆ ತಗೊಂಡು ಬಂದಾಗ ನಾನು ಅದನ್ನ ಊದಿ ಚದರಿಸಿಬಿಟ್ಟೆ.+ ನಾನ್ಯಾಕೆ ಹಾಗೆ ಮಾಡ್ದೆ ಅಂತ ಗೊತ್ತಾ? ಯಾಕಂದ್ರೆ ನನ್ನ ಆಲಯ ಹಾಳುಬಿದ್ದಿರುವಾಗ ನಿಮ್ಮ ಮನೆಗಳನ್ನ ನೋಡ್ಕೊಳ್ಳೋದ್ರಲ್ಲೇ ಮುಳುಗಿ ಹೋಗಿದ್ದೀರ.+
10 ಹಾಗಾಗಿ ಆಕಾಶ ಇಬ್ಬನಿ ಸುರಿಸ್ತಿಲ್ಲ. ಭೂಮಿ ಬೆಳೆ ಕೊಡ್ತಿಲ್ಲ.
11 ನಾನು ನಿಮ್ಮ ದೇಶದ ಮೇಲೆ, ಬೆಟ್ಟಗಳ ಮೇಲೆ ಬರ ಬರೋ ಹಾಗೆ ಮಾಡ್ತಾ ಬಂದೆ. ಆಗ ನಿಮಗೆ ಧಾನ್ಯ, ಹೊಸ ದ್ರಾಕ್ಷಾಮದ್ಯ, ಎಣ್ಣೆ ಮತ್ತು ನೆಲದಲ್ಲಿ ಬೆಳೆಯೋ ಎಲ್ಲದ್ರ ಕೊರತೆ ಆಯ್ತು. ಇದ್ರಿಂದ ನೀವೂ ನಿಮ್ಮ ಜಾನುವಾರುಗಳೂ ಕಷ್ಟಪಡ್ತಿವೆ. ಅಷ್ಟೇ ಅಲ್ಲ ನಿಮ್ಮ ಪರಿಶ್ರಮವೆಲ್ಲ ವ್ಯರ್ಥವಾಯ್ತು.’”
12 ಶೆಯಲ್ತಿಯೇಲನ+ ಮಗ ಜೆರುಬ್ಬಾಬೆಲ,+ ಯೆಹೋಚಾದಾಕನ+ ಮಗನೂ ಮಹಾ ಪುರೋಹಿತನೂ ಆದ ಯೆಹೋಶುವ ಮತ್ತು ಬೇರೆ ಎಲ್ಲ ಜನ ತಮ್ಮ ದೇವರಾದ ಯೆಹೋವನ ಧ್ವನಿಗೆ ಕಿವಿಗೊಟ್ರು. ಜೊತೆಗೆ ಪ್ರವಾದಿ ಹಗ್ಗಾಯನ ಮಾತುಗಳನ್ನ ಕೇಳಿಸ್ಕೊಂಡ್ರು. ಯಾಕಂದ್ರೆ ಹಗ್ಗಾಯನನ್ನ ಅವ್ರ ದೇವರಾಗಿರೋ ಯೆಹೋವನೇ ಕಳಿಸ್ಕೊಟ್ಟಿದ್ದನು. ಅಷ್ಟೇ ಅಲ್ಲ ಜನ ಯೆಹೋವನಿಗೆ ಭಯಭಕ್ತಿ ತೋರಿಸೋಕೆ ಶುರುಮಾಡಿದ್ರು.
13 ಆಮೇಲೆ ಯೆಹೋವನ ಸಂದೇಶವಾಹಕನಾದ ಹಗ್ಗಾಯ ಯೆಹೋವ ತನಗೆ ಕೊಟ್ಟ ಅಪ್ಪಣೆ ಪ್ರಕಾರ ಜನ್ರಿಗೆ “‘ನಾನು ನಿಮ್ಮ ಜೊತೆ ಇದ್ದೀನಿ’+ ಅಂತ ಯೆಹೋವ ಹೇಳ್ತಿದ್ದಾನೆ” ಅನ್ನೋ ಸಂದೇಶ ಕೊಟ್ಟ.
14 ಹಾಗಾಗಿ ಶೆಯಲ್ತಿಯೇಲನ ಮಗನೂ ಯೆಹೂದದ ರಾಜ್ಯಪಾಲನೂ ಆದ ಜೆರುಬ್ಬಾಬೆಲನ,+ ಯೆಹೋಚಾದಾಕನ ಮಗನೂ ಮಹಾ ಪುರೋಹಿತನೂ ಆದ ಯೆಹೋಶುವನ+ ಮತ್ತು ಬೇರೆ ಎಲ್ಲ ಜನ್ರ ಮನಸ್ಸನ್ನ ಯೆಹೋವ ಪ್ರೇರಿಸಿದನು.+ ಆಗ ಅವರು ಬಂದು ತಮ್ಮ ದೇವರೂ ಸೈನ್ಯಗಳ ದೇವರೂ ಆಗಿರೋ ಯೆಹೋವನ ಆಲಯದ ಕೆಲಸ ಶುರುಮಾಡಿದ್ರು.+
15 ಆ ಕೆಲಸ ರಾಜ ದಾರ್ಯಾವೆಷ ಆಳ್ತಿದ್ದ ಎರಡ್ನೇ ವರ್ಷದ ಆರನೇ ತಿಂಗಳಿನ 24ನೇ ದಿನ ಶುರು ಆಯ್ತು.+
ಪಾದಟಿಪ್ಪಣಿ
^ ಅರ್ಥ “ಹಬ್ಬದ ದಿನ ಹುಟ್ಟಿದವನು.”
^ ಅಥವಾ “ಮತ್ತೆ ಕಟ್ಟೋ.”
^ ಅಕ್ಷ. “ಹೃದಯಗಳನ್ನ.”
^ ಅಕ್ಷ. “ಹೃದಯಗಳನ್ನ.”