ಹಗ್ಗಾಯ 2:1-23
2 ಏಳನೇ ತಿಂಗಳಿನ 21ನೇ ದಿನ ಯೆಹೋವನ ಸಂದೇಶ ಪ್ರವಾದಿ ಹಗ್ಗಾಯನಿಗೆ+ ಬಂತು. ಅದು ಹೀಗಿತ್ತು:
2 “ದಯವಿಟ್ಟು ಶೆಯಲ್ತಿಯೇಲನ ಮಗನೂ ಯೆಹೂದದ ರಾಜ್ಯಪಾಲನೂ ಆದ ಜೆರುಬ್ಬಾಬೆಲನಿಗೆ,+ ಯೆಹೋಚಾದಾಕನ+ ಮಗನೂ ಮಹಾ ಪುರೋಹಿತನೂ ಆದ ಯೆಹೋಶುವನಿಗೆ+ ಮತ್ತು ಬೇರೆ ಜನ್ರಿಗೆ ಹೀಗೆ ಕೇಳು:
3 ‘ನಿಮ್ಮಲ್ಲಿ ಯಾರಾದ್ರೂ ಈ ಆಲಯದ ಮುಂಚಿನ ವೈಭವ ನೋಡಿದವರು ಇದ್ದೀರಾ?+ ಇದನ್ನ ಈಗ ನೋಡುವಾಗ ನಿಮಗೆ ಹೇಗನಿಸುತ್ತೆ? ಮುಂಚೆ ಇದ್ದಿದ್ದಕ್ಕೆ ಹೋಲಿಸುವಾಗ ಈಗ ಇರೋದು ಏನೇನೂ ಅಲ್ಲ ಅಂತ ಅನಿಸಲ್ವಾ?’+
4 ಯೆಹೋವ ಹೀಗೆ ಹೇಳ್ತಿದ್ದಾನೆ: ‘ಜೆರುಬ್ಬಾಬೆಲನೇ ಈಗ ನೀನು ಧೈರ್ಯವಾಗಿರು. ಯೆಹೋಚಾದಾಕನ ಮಗನೂ ಮಹಾ ಪುರೋಹಿತನೂ ಆದ ಯೆಹೋಶುವನೇ ಧೈರ್ಯವಾಗಿರು.’
ಯೆಹೋವ ಹೀಗೆ ಹೇಳ್ತಿದ್ದಾನೆ: ‘ದೇಶದ ಎಲ್ಲ ಜನ್ರೇ ನೀವೆಲ್ಲ ಧೈರ್ಯದಿಂದ+ ಕೆಲಸಕ್ಕೆ ಕೈಹಾಕಿ.’
ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ‘ನಾನು ನಿಮ್ಮ ಜೊತೆ ಇದ್ದೀನಿ.+
5 ನೀವು ಈಜಿಪ್ಟಿಂದ ವಾಪಸ್ ಬಂದಾಗ ನಾನು ನಿಮಗೆ ಕೊಟ್ಟ ಮಾತನ್ನ ನೆನಪಿಸ್ಕೊಳ್ಳಿ.+ ಇವತ್ತಿಗೂ ನಿಮ್ಮನ್ನ ನನ್ನ ಪವಿತ್ರಶಕ್ತಿ ಮೂಲಕ ಮಾರ್ಗದರ್ಶಿಸ್ತಾ ಇದ್ದೀನಿ.*+ ಹೆದರಬೇಡಿ.’”+
6 “ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ‘ಇನ್ನು ಸ್ವಲ್ಪ ಸಮಯದಲ್ಲೇ ನಾನು ಇನ್ನೊಂದು ಸಲ ಆಕಾಶ, ಭೂಮಿ, ಸಮುದ್ರ ಮತ್ತು ಒಣನೆಲವನ್ನ ಅದುರಿಸ್ತೀನಿ.’+
7 ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ‘ನಾನು ಎಲ್ಲ ರಾಷ್ಟ್ರಗಳನ್ನ ನಡುಗಿಸ್ತೀನಿ. ಆಗ ಎಲ್ಲ ರಾಷ್ಟ್ರಗಳ ಅಮೂಲ್ಯ ವಸ್ತುಗಳು* ಈ ಆಲಯಕ್ಕೆ ಬಂದು ಸೇರುತ್ತೆ.+ ನಾನು ಈ ಆಲಯವನ್ನ ಮಹಿಮೆಯಿಂದ ತುಂಬಿಸ್ತೀನಿ.’+
8 ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ‘ಬೆಳ್ಳಿನೂ ನಂದು, ಚಿನ್ನನೂ ನಂದು.’
9 ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ‘ಈ ಆಲಯದ ಮುಂದಿನ ವೈಭವ ಹಿಂದಿನ ವೈಭವಕ್ಕಿಂತ ಹೆಚ್ಚಾಗಿರುತ್ತೆ.’+
ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ‘ನಾನು ಈ ಸ್ಥಳದಲ್ಲಿ ಶಾಂತಿ ಸ್ಥಾಪಿಸ್ತೀನಿ.’”+
10 ದಾರ್ಯಾವೆಷ ಆಳ್ತಿದ್ದ ಎರಡ್ನೇ ವರ್ಷದ ಒಂಬತ್ತನೇ ತಿಂಗಳಿನ 24ನೇ ದಿನ ಯೆಹೋವನ ಸಂದೇಶ ಪ್ರವಾದಿ ಹಗ್ಗಾಯನಿಗೆ ಬಂತು.+ ಅದು ಹೀಗಿತ್ತು:
11 “ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ‘ದಯವಿಟ್ಟು ನಿಯಮ ಪುಸ್ತಕದ ಬಗ್ಗೆ ಪುರೋಹಿತರನ್ನ ಹೀಗೆ ಕೇಳು:+
12 “ಒಬ್ಬ ವ್ಯಕ್ತಿ ಪವಿತ್ರ ಮಾಂಸವನ್ನ ತನ್ನ ಬಟ್ಟೆಯಲ್ಲಿ ಮುಚ್ಕೊಂಡು ಹೋಗುವಾಗ, ಅವನ ಬಟ್ಟೆ ರೊಟ್ಟಿಗೋ, ಸಾರಿಗೋ, ದ್ರಾಕ್ಷಾಮದ್ಯಕ್ಕೋ, ಎಣ್ಣೆಗೋ ಅಥವಾ ಯಾವುದೇ ಆಹಾರ ಪದಾರ್ಥಕ್ಕೋ ತಾಗಿದ್ರೆ ಅದು ಪವಿತ್ರವಾಗಿರುತ್ತಾ?”’”
ಅದಕ್ಕೆ ಪುರೋಹಿತರು “ಇಲ್ಲ” ಅಂದ್ರು.
13 ಆಮೇಲೆ ಹಗ್ಗಾಯ “ಶವ* ಮುಟ್ಟಿ ಅಶುದ್ಧನಾಗಿರೋ ಯಾವನಾದ್ರೂ ಈ ವಸ್ತುಗಳಲ್ಲಿ ಒಂದನ್ನ ಮುಟ್ಟಿದ್ರೆ ಅವು ಅಶುದ್ಧ ಆಗುತ್ತಾ?”+ ಅಂತ ಕೇಳಿದ.
ಅದಕ್ಕೆ ಪುರೋಹಿತರು “ಹೌದು. ಅಶುದ್ಧ ಆಗುತ್ತೆ” ಅಂದ್ರು.
14 ಆಗ ಹಗ್ಗಾಯ ಹೀಗೆ ಹೇಳಿದ: “ಯೆಹೋವ ಹೀಗೆ ಹೇಳ್ತಿದ್ದಾನೆ: ‘ನನ್ನ ದೃಷ್ಟಿಯಲ್ಲಿ ಈ ಜನ ಮತ್ತು ಈ ಜನಾಂಗ ಅದೇ ತರ ಇದೆ. ಇವ್ರ ಎಲ್ಲ ಕೆಲಸಗಳು ಮತ್ತು ಇವರು ನನಗೆ ಅರ್ಪಿಸೋ ಪ್ರತಿಯೊಂದು ವಸ್ತುಗಳು ಅಶುದ್ಧವಾಗಿವೆ.’
15 ಆದ್ರೆ ಇವತ್ತಿಂದ ದಯವಿಟ್ಟು ನೀವು ಈ ವಿಷ್ಯದ ಕಡೆ ಗಮನಕೊಡಿ: ಯೆಹೋವನ ಆಲಯದ ಕೆಲಸ ಶುರುಮಾಡೋ ಮುಂಚೆ+
16 ಪರಿಸ್ಥಿತಿ ಹೇಗಿತ್ತು? ಯಾವನಾದ್ರೂ 20 ಅಳತೆಯ ಧಾನ್ಯ ಸಿಗುತ್ತೆ ಅಂದ್ಕೊಂಡು ಧಾನ್ಯದ ರಾಶಿ ಹತ್ರ ಬಂದ್ರೆ ಅವನಿಗೆ 10 ಅಳತೆಯ ಧಾನ್ಯವಷ್ಟೇ ಸಿಗ್ತಿತ್ತು. ಯಾವನಾದ್ರೂ 50 ಅಳತೆಯ ದ್ರಾಕ್ಷಾಮದ್ಯ ತಗೊಳ್ಳೋಕೆ ದ್ರಾಕ್ಷಿತೊಟ್ಟಿ ಹತ್ರ ಬಂದ್ರೆ ಅವನಿಗೆ ಅದ್ರಲ್ಲಿ ಕೇವಲ 20 ಅಳತೆಯ ದ್ರಾಕ್ಷಾಮದ್ಯ ಸಿಗ್ತಿತ್ತು.+
17 ನಾನು ನಿಮ್ಮ ಬೆಳೆಯನ್ನ ಘೋರ ವ್ಯಾಧಿಗಳಿಂದ, ಬೂಷ್ಟಿನಿಂದ,+ ಆಲಿಕಲ್ಲಿನ ಮಳೆಯಿಂದ ನಾಶಮಾಡಿದೆ. ಆದ್ರೂ ನಿಮ್ಮಲ್ಲಿ ಒಬ್ರೂ ನನ್ನ ಕಡೆ ತಿರುಗಲಿಲ್ಲ’ ಅಂತ ಯೆಹೋವ ಹೇಳ್ತಿದ್ದಾನೆ.
18 ದಯವಿಟ್ಟು ಯೆಹೋವನ ಆಲಯಕ್ಕೆ ಅಡಿಪಾಯ ಹಾಕಿದ ಈ ದಿನ ಅಂದ್ರೆ ಒಂಬತ್ತನೇ ತಿಂಗಳ 24ನೇ ದಿನ ಈ ವಿಷ್ಯದ ಮೇಲೆ ಮನಸ್ಸಿಡಿ.+ ಈ ವಿಷ್ಯಕ್ಕೆ ಗಮನಕೊಡಿ:
19 ಗೋಡೌನಲ್ಲಿ* ಇನ್ನೂ ಬೀಜ ಇದ್ಯಾ?+ ದ್ರಾಕ್ಷಿ, ಅಂಜೂರ, ದಾಳಿಂಬೆ ಮತ್ತು ಆಲಿವ್ ಮರ ಇನ್ನೂ ಫಲ ಕೊಡ್ತಿದ್ಯಾ? ಇವತ್ತಿಂದ ನಾನು ನಿಮ್ಮನ್ನ ಆಶೀರ್ವದಿಸ್ತೀನಿ.’”+
20 ಆ ತಿಂಗಳ 24ನೇ ದಿನ ಹಗ್ಗಾಯನಿಗೆ ಯೆಹೋವನಿಂದ ಎರಡ್ನೇ ಸಲ ಸಂದೇಶ ಸಿಕ್ತು.+ ಅದು ಹೀಗಿತ್ತು:
21 “ಯೆಹೂದದ ರಾಜ್ಯಪಾಲ ಜೆರುಬ್ಬಾಬೆಲನಿಗೆ ಹೀಗೆ ಹೇಳು: ‘ನಾನು ಆಕಾಶ ಮತ್ತು ಭೂಮಿಯನ್ನ ನಡುಗಿಸ್ತೀನಿ.+
22 ನಾನು ರಾಜರ ಸಿಂಹಾಸನಗಳನ್ನ ಕೆಡವಿಬಿಡ್ತೀನಿ ಮತ್ತು ಜನಾಂಗಗಳ ಸಾಮ್ರಾಜ್ಯಗಳಿಗಿರೋ ಬಲವನ್ನ ನಾಶಮಾಡ್ತೀನಿ.+ ನಾನು ಯುದ್ಧರಥಗಳನ್ನ ಮತ್ತು ಅದ್ರ ಸವಾರರನ್ನ ದೊಬ್ಬಿಬಿಡ್ತೀನಿ. ಆಗ ಕುದುರೆಗಳು ಬೀಳುತ್ತೆ, ಕುದುರೆ ಸವಾರರೂ ಬೀಳ್ತಾರೆ. ಅವರು ಕತ್ತಿಯಿಂದ ಒಬ್ರನ್ನೊಬ್ರು ಕೊಲ್ತಾರೆ.’+
23 ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ‘ಶೆಯಲ್ತಿಯೇಲನ+ ಮಗನೂ ನನ್ನ ಸೇವಕನೂ ಆದ ಜೆರುಬ್ಬಾಬೆಲನೇ,+ ಆ ದಿನ ನಾನು ನಿನ್ನನ್ನ ಉಪಯೋಗಿಸ್ತೀನಿ.’ ಯೆಹೋವ ಹೀಗೆ ಹೇಳ್ತಿದ್ದಾನೆ: ‘ನಿನ್ನನ್ನ ನನ್ನ ಮುದ್ರೆ ಉಂಗುರದ ತರ ಮಾಡ್ತೀನಿ. ಯಾಕಂದ್ರೆ ನಾನು ಆರಿಸ್ಕೊಂಡಿರೋ ವ್ಯಕ್ತಿ ನೀನು.’ ಇದು ಸೈನ್ಯಗಳ ದೇವರಾದ ಯೆಹೋವನ ಮಾತು.”
ಪಾದಟಿಪ್ಪಣಿ
^ ಬಹುಶಃ, “ಆಗ ನನ್ನ ಪವಿತ್ರಶಕ್ತಿ ನಿಮ್ಮ ಮಧ್ಯ ನಿಂತಿತ್ತು.”
^ ಅಥವಾ “ಇಷ್ಟವಸ್ತುಗಳು.”
^ ಅಥವಾ “ಧಾನ್ಯದ ಗುಂಡಿಯಲ್ಲಿ.”