ಒಂದನೇ ಅರಸು 1:1-53

  • ದಾವೀದ ಮತ್ತು ಅಬೀಷಗ್‌ (1-4)

  • ಅದೋನೀಯ ರಾಜನಾಗಲು ಬಯಸಿದ (5-10)

  • ನಾತಾನ ಮತ್ತು ಬತ್ಷೆಬೆ ಹೆಜ್ಜೆ ತೆಗೆದ್ಕೊಂಡ್ರು (11-27)

  • ಸೊಲೊಮೋನನನ್ನ ಅಭಿಷೇಕಿಸುವಂತೆ ದಾವೀದ ಆಜ್ಞಾಪಿಸಿದ (28-40)

  • ಅದೋನೀಯ ಯಜ್ಞವೇದಿಯ ಹತ್ರ ಓಡಿಹೋದ (41-53)

1  ರಾಜ ದಾವೀದನಿಗೆ ತುಂಬ ವಯಸ್ಸಾಗಿತ್ತು.+ ಎಷ್ಟೇ ಕಂಬಳಿ ಹೊದಿಸಿದ್ರೂ ಅವನಿಗೆ ಬೆಚ್ಚಗಾಗ್ತಿರಲಿಲ್ಲ.  ಹಾಗಾಗಿ ಅವನ ಸೇವಕರು ಅವನ ಹತ್ರ ಬಂದು “ರಾಜನೇ, ನಮ್ಮ ಒಡೆಯನೇ, ನೀನು ಅನುಮತಿ ಕೊಡೋದಾದ್ರೆ ನಿನ್ನನ್ನ ನೋಡ್ಕೊಳ್ಳೋಕೆ ಇನ್ನೂ ಮದುವೆ ಆಗಿರದ ಒಬ್ಬ ಹುಡುಗಿಯನ್ನ ಹುಡುಕಿ ತರ್ತೀವಿ. ಅವಳು ನಿನ್ನ ಪಕ್ಕದಲ್ಲಿ ಮಲಗಿಕೊಂಡ್ರೆ ನಿನಗೆ ಬೆಚ್ಚಗಾಗುತ್ತೆ” ಅಂದ್ರು.  ಆಮೇಲೆ ಒಬ್ಬ ಸುಂದರ ಹುಡುಗಿಗಾಗಿ ಇಸ್ರಾಯೇಲಿನ ಎಲ್ಲ ಕಡೆ ಹುಡುಕಿದ್ರು. ಆಗ ಅವ್ರಿಗೆ ಶೂನೇಮ್‌+ ಪಟ್ಟಣದ ಅಬೀಷಗ್‌+ ಅನ್ನೋ ಹುಡುಗಿ ಸಿಕ್ಕಿದಳು. ಅವಳನ್ನ ರಾಜನ ಹತ್ರ ಕರ್ಕೊಂಡು ಬಂದ್ರು.  ಅಬೀಷಗ್‌ ತುಂಬ ಸುಂದರಿ. ಅವಳು ರಾಜನ ಪಕ್ಕದಲ್ಲೇ ಇದ್ದು ಅವನ ಆರೈಕೆ ಮಾಡ್ತಿದ್ದಳು. ಆದ್ರೆ ರಾಜ ಅವಳ ಜೊತೆ ಸಂಬಂಧ ಇಟ್ಕೊಳ್ಳಿಲ್ಲ.  ಅದೇ ಸಮಯದಲ್ಲಿ ಹಗ್ಗೀತಳ ಮಗ ಅದೋನೀಯ+ “ನಾನೇ ಮುಂದಿನ ರಾಜ!” ಅಂತ ಜಂಬ ಕೊಚ್ಕೊಳ್ತಿದ್ದ. ಅವನು ಒಂದು ರಥ ಮಾಡಿಸ್ಕೊಂಡಿದ್ದ. ಅಷ್ಟೇ ಅಲ್ಲ ಕುದುರೆ ಸವಾರರನ್ನ, ತನ್ನ ಮುಂದೆ ಓಡೋಕೆ 50 ಗಂಡಸ್ರನ್ನ ನೇಮಿಸಿದ್ದ.+  ಆದ್ರೆ ಅವನ ತಂದೆ ಅವನನ್ನ ಒಂದು ಸಲಾನೂ “ಯಾಕೆ ಹೀಗೆ ಮಾಡ್ತಿದ್ದೀಯಾ?” ಅಂತ ಗದರಿಸಲಿಲ್ಲ.* ಅದೋನೀಯ ಅಬ್ಷಾಲೋಮನ ತಮ್ಮ. ಇವನೂ ತುಂಬ ಸುಂದರವಾಗಿದ್ದ.  ಅದೋನೀಯ ಚೆರೂಯಳ ಮಗ ಯೋವಾಬ ಮತ್ತು ಪುರೋಹಿತ ಎಬ್ಯಾತಾರನ+ ಜೊತೆ ಮಾತಾಡಿದಾಗ ಅವರೂ ಅವನಿಗೆ ಸಹಾಯ ಮಾಡಿ ಬೆಂಬಲ ಕೊಡೋಕೆ ಒಪ್ಕೊಂಡ್ರು.+  ಆದ್ರೆ ಪುರೋಹಿತ ಚಾದೋಕ್‌,+ ಯೆಹೋಯಾದನ ಮಗ ಬೆನಾಯ,+ ಪ್ರವಾದಿ ನಾತಾನ್‌,+ ಶಿಮ್ಮಿ,+ ರೇಗೀ ಮತ್ತು ದಾವೀದನ ವೀರ ಸೈನಿಕರು+ ಅದೋನೀಯಗೆ ಬೆಂಬಲ ಕೊಡಲಿಲ್ಲ.  ಆಮೇಲೆ ಅದೋನೀಯ ಏನ್‌-ರೋಗೆಲಿನಿಂದ ಸ್ವಲ್ಪ ದೂರ ಇದ್ದ ಚೋಹೆಲೆತ್‌ ಕಲ್ಲಿನ ಹತ್ರ ಕುರಿ, ದನಕರು ಮತ್ತು ಕೊಬ್ಬಿದ ಪ್ರಾಣಿಗಳನ್ನ ಬಲಿಯಾಗಿ ಕೊಟ್ಟ.+ ಅಲ್ಲಿಗೆ ರಾಜನ ಮಕ್ಕಳನ್ನ ಅಂದ್ರೆ ತನ್ನ ಎಲ್ಲ ಅಣ್ಣತಮ್ಮಂದಿರನ್ನ ಮತ್ತು ರಾಜನ ಸೇವಕರಾಗಿದ್ದ ಯೆಹೂದದ ಎಲ್ಲ ಗಂಡಸ್ರನ್ನ ಕರೆದ. 10  ಆದ್ರೆ ಪ್ರವಾದಿ ನಾತಾನ, ಬೆನಾಯ, ದಾವೀದನ ವೀರ ಸೈನಿಕರು ಮತ್ತು ಅಣ್ಣ ಸೊಲೊಮೋನನನ್ನ ಅದೋನೀಯ ಕರೀಲಿಲ್ಲ. 11  ಆಮೇಲೆ ನಾತಾನ+ ಸೊಲೊಮೋನನ ಅಮ್ಮ+ ಬತ್ಷೆಬೆ+ ಹತ್ರ ಬಂದು “ಹಗ್ಗೀತಳ ಮಗ ಅದೋನೀಯ+ ನಾನೇ ರಾಜ ಅಂತ ಹೇಳ್ಕೊಂಡು ತಿರುಗುತ್ತಿರೋ ವಿಷ್ಯ ನಿಂಗೊತ್ತಾ? ನಮ್ಮ ಒಡೆಯ ದಾವೀದನಿಗೆ ಇದ್ರ ಬಗ್ಗೆ ಒಂಚೂರು ಗೊತ್ತಿಲ್ಲ. 12  ನೀನು ನಿನ್ನ ಜೀವ ಮತ್ತು ನಿನ್ನ ಮಗ ಸೊಲೊಮೋನನ ಜೀವ ಉಳಿಸ್ಕೊಳ್ಳಬೇಕಂದ್ರೆ ದಯವಿಟ್ಟು ಈಗ ನಾನು ಹೇಳೋ ತರ ಮಾಡು.+ 13  ನೀನು ರಾಜ ದಾವೀದನ ಹತ್ರ ಹೋಗಿ ‘ರಾಜನೇ, ನನ್ನ ಒಡೆಯನೇ, ನಿನ್ನ ನಂತ್ರ ನನ್ನ ಮಗ ಸೊಲೊಮೋನನೇ ರಾಜ ಆಗ್ತಾನೆ, ನಿನ್ನ ಸಿಂಹಾಸನದ ಮೇಲೆ ಕೂತು ಆಳ್ತಾನೆ+ ಅಂತ ನೀನು ನನಗೆ ಮಾತು ಕೊಟ್ಟಿದ್ದೆ. ಆದ್ರೆ ಈಗ ಅದೋನೀಯ ರಾಜ ಆಗಿದ್ದಾನೆ!’ ಅಂತ ಹೇಳು. 14  ನೀನು ಈ ತರ ರಾಜನ ಹತ್ರ ಮಾತಾಡ್ತಾ ಇರೋವಾಗ್ಲೆ ನಾನು ಬಂದು ನೀನು ಹೇಳ್ತಿರೋದು ನಿಜ ಅಂತ ಹೇಳ್ತೀನಿ” ಅಂದ. 15  ಆಗ ಬತ್ಷೆಬೆ ರಾಜ ಮಲಗಿರೋ ಕೋಣೆಗೆ ಹೋದಳು. ಅಲ್ಲಿ ಅಬೀಷಗ್‌+ ಅವನ ಆರೈಕೆ ಮಾಡ್ತಿದ್ದಳು. ಅವನು ಹಣ್ಣುಹಣ್ಣು ಮುದುಕನಾಗಿದ್ದ. 16  ಬತ್ಷೆಬೆ ಬಗ್ಗಿ ರಾಜನಿಗೆ ನಮಸ್ಕಾರ ಮಾಡಿದಳು. ಆಗ ರಾಜ “ನನ್ನಿಂದ ನಿನಗೆ ಏನಾದ್ರೂ ಸಹಾಯ ಆಗಬೇಕಿತ್ತಾ?” ಅಂದ. 17  ಅದಕ್ಕೆ ಅವಳು “ನನ್ನ ಒಡೆಯ, ನಿನ್ನ ನಂತ್ರ ನನ್ನ ಮಗ ಸೊಲೊಮೋನನೇ ರಾಜ ಆಗ್ತಾನೆ, ನಿನ್ನ ಸಿಂಹಾಸನದ ಮೇಲೆ ಕೂತು ಆಳ್ತಾನೆ ಅಂತ ನಿನ್ನ ದೇವರಾದ ಯೆಹೋವನ ಮೇಲೆ ಆಣೆ ಇಟ್ಟು ನನಗೆ ಮಾತು ಕೊಟ್ಟಿದ್ದೆ.+ 18  ಆದ್ರೆ ನೋಡು, ಈಗ ಅದೋನೀಯ ರಾಜ ಆಗಿದ್ದಾನೆ! ಒಡೆಯನೇ, ಇದ್ರ ಬಗ್ಗೆ ನಿನಗೆ ಏನೂ ಗೊತ್ತಿಲ್ಲ.+ 19  ಅವನು ತುಂಬ ಹೋರಿಗಳನ್ನ, ಕೊಬ್ಬಿದ ಪ್ರಾಣಿಗಳನ್ನ, ಕುರಿಗಳನ್ನ ಬಲಿಯಾಗಿ ಕೊಟ್ಟಿದ್ದಾನೆ. ಅವನು ಆ ಸಮಾರಂಭಕ್ಕೆ ರಾಜನ ಎಲ್ಲ ಮಕ್ಕಳನ್ನ, ಪುರೋಹಿತ ಎಬ್ಯಾತಾರನನ್ನ, ಸೇನಾಪತಿ ಯೋವಾಬನನ್ನ ಕರೆದಿದ್ದಾನೆ.+ ಆದ್ರೆ ನಿನ್ನ ಮಗ ಸೊಲೊಮೋನನನ್ನ ಕರೀಲಿಲ್ಲ.+ 20  ರಾಜ, ನನ್ನ ಒಡೆಯ, ನೀನು ಆದ್ಮೇಲೆ ಯಾರು ರಾಜ ಆಗಬೇಕು ಅಂತ ಈಗ ನೀನೇ ಹೇಳು. ನೀನು ಹೇಳೋದನ್ನ ಕೇಳಿಸ್ಕೊಳ್ಳೋಕೆ ಎಲ್ಲ ಇಸ್ರಾಯೇಲ್ಯರು ಕಾಯ್ತಿದ್ದಾರೆ. 21  ನೀನು ಏನೂ ಹೇಳದಿದ್ರೆ, ನೀನು ತೀರಿಹೋದ ಮೇಲೆ ಅವರು ನನ್ನನ್ನ, ಸೊಲೊಮೋನನನ್ನ ಶತ್ರುಗಳ ತರ ನೋಡ್ತಾರೆ” ಅಂದಳು. 22  ಬತ್ಷೆಬೆ ರಾಜನ ಜೊತೆ ಇನ್ನೂ ಮಾತಾಡ್ತಾ ಇದ್ದಾಗ ಪ್ರವಾದಿ ನಾತಾನ ಅರಮನೆಗೆ ಬಂದ.+ 23  ಪ್ರವಾದಿ ನಾತಾನ ಬಂದಿರೋ ವಿಷ್ಯ ದಾವೀದನಿಗೆ ಗೊತ್ತಾಯ್ತು. ನಾತಾನ ರಾಜನ ಮುಂದೆ ಬಂದು ನೆಲದ ತನಕ ಬಗ್ಗಿ ನಮಸ್ಕಾರ ಮಾಡಿದ. 24  ಆಮೇಲೆ “ರಾಜ, ನನ್ನ ಒಡೆಯ, ನಿನ್ನ ನಂತ್ರ ಅದೋನೀಯನೇ ರಾಜ ಆಗ್ತಾನೆ, ಅವನೇ ನಿನ್ನ ಸಿಂಹಾಸನದ ಮೇಲೆ ಕೂತು ಆಳ್ತಾನೆ ಅಂತ ನೀನು ಹೇಳಿದ್ದಿಯಾ?+ 25  ಇವತ್ತು ಅವನು ಹೋಗಿ ಹೋರಿಗಳನ್ನ, ಕೊಬ್ಬಿದ ಪ್ರಾಣಿಗಳನ್ನ, ಕುರಿಗಳನ್ನ ಬಲಿ ಕೊಟ್ಟಿದ್ದಾನೆ.+ ಅವನು ಆ ಸಮಾರಂಭಕ್ಕೆ ರಾಜನ ಎಲ್ಲ ಮಕ್ಕಳನ್ನ, ಸೇನಾಪತಿಗಳನ್ನ, ಪುರೋಹಿತ ಎಬ್ಯಾತಾರನನ್ನ ಕರೆದಿದ್ದಾನೆ.+ ಅವ್ರೆಲ್ಲ ಅವನ ಜೊತೆ ತಿಂದು ಕುಡಿದು ಖುಷಿಯಾಗಿ ಇದ್ದಾರೆ. ‘ರಾಜ ಅದೋನೀಯ ಚಿರಂಜೀವಿಯಾಗಿರಲಿ!’ ಅಂತ ಕೂಗ್ತಿದ್ದಾರೆ. 26  ಆದ್ರೆ ಅವನು ನಿನ್ನ ಸೇವಕನಾದ ನನ್ನನ್ನ, ಅಷ್ಟೇ ಯಾಕೆ ಪುರೋಹಿತ ಚಾದೋಕನನ್ನ, ಯೆಹೋಯಾದನ ಮಗ ಬೆನಾಯನನ್ನ+ ಮತ್ತು ನಿನ್ನ ಮಗ ಸೊಲೊಮೋನನನ್ನೂ ಕರೀಲಿಲ್ಲ. 27  ರಾಜನೇ, ಅದೋನೀಯನಿಗೆ ಈ ತರ ಮಾಡೋಕೆ ನೀನೇ ಅಧಿಕಾರ ಕೊಟ್ಟಿದ್ದಾ? ನಿನ್ನ ನಂತ್ರ ಅವನೇ ರಾಜ ಆಗಬೇಕು ಅಂತ ನೀನೇ ತೀರ್ಮಾನ ಮಾಡಿದ್ದಾ? ಇದ್ರ ಬಗ್ಗೆ ನೀನು ನನಗೆ ಒಂದು ಮಾತೂ ಹೇಳಲಿಲ್ಲ ಅಲ್ವಾ!” ಅಂದ. 28  ಆಗ ರಾಜ ದಾವೀದ ಬತ್ಷೆಬೆನ ಕರಿಯೋಕೆ ಹೇಳಿದ. ಅವಳು ಒಳಗೆ ಬಂದು ರಾಜನ ಮುಂದೆ ನಿಂತಳು. 29  ಆಗ ರಾಜ “ನನ್ನನ್ನ ಎಲ್ಲ ಕಷ್ಟಸಂಕಟಗಳಿಂದ ಬಿಡಿಸಿದ+ ಯೆಹೋವನ ಮೇಲೆ ಆಣೆ, 30  ನನ್ನ ನಂತ್ರ ನಿನ್ನ ಮಗ ಸೊಲೊಮೋನನೇ ರಾಜ ಆಗ್ತಾನೆ, ನನ್ನ ಸಿಂಹಾಸನದ ಮೇಲೆ ಕೂತು ಆಳ್ತಾನೆ ಅಂತ ಇಸ್ರಾಯೇಲ್‌ ದೇವರಾದ ಯೆಹೋವನ ಮೇಲೆ ಆಣೆ ಇಟ್ಟು ನಿನಗೆ ಕೊಟ್ಟ ಮಾತನ್ನ ಇವತ್ತೇ ನಿಜ ಮಾಡ್ತೀನಿ” ಅಂತ ಮಾತು ಕೊಟ್ಟ. 31  ಆಗ ಬತ್ಷೆಬೆ ನೆಲದ ತನಕ ಬಗ್ಗಿ ರಾಜನಿಗೆ ನಮಸ್ಕಾರ ಮಾಡಿ “ನನ್ನ ಒಡೆಯ ರಾಜ ದಾವೀದ ಚಿರಕಾಲ ಬದುಕಲಿ!” ಅಂದಳು. 32  ತಕ್ಷಣ ರಾಜ ದಾವೀದ “ಪುರೋಹಿತ ಚಾದೋಕ, ಪ್ರವಾದಿ ನಾತಾನ ಮತ್ತು ಯೆಹೋಯಾದನ ಮಗ+ ಬೆನಾಯನನ್ನ+ ಕರೀರಿ” ಅಂದ. ಆಗ ಅವ್ರೆಲ್ಲ ರಾಜನ ಹತ್ರ ಬಂದ್ರು. 33  ರಾಜ ಅವರಿಗೆ “ನೀವು ನನ್ನ ಸೇವಕರನ್ನ ಕರ್ಕೊಂಡು ಹೋಗಿ, ನನ್ನ ಮಗ ಸೊಲೊಮೋನನನ್ನ ನನ್ನ ಹೇಸರಗತ್ತೆ*+ ಮೇಲೆ ಕೂರಿಸ್ಕೊಂಡು ಗೀಹೋನಿಗೆ+ ಹೋಗಿ. 34  ಪುರೋಹಿತ ಚಾದೋಕ್‌ ಮತ್ತು ಪ್ರವಾದಿ ನಾತಾನ ಸೊಲೊಮೋನನನ್ನ ಅಭಿಷೇಕಿಸಿ+ ಇಸ್ರಾಯೇಲಿನ ರಾಜನಾಗಿ ಮಾಡಿ. ಆಮೇಲೆ ಕೊಂಬನ್ನ ಊದಿ ‘ರಾಜ ಸೊಲೊಮೋನ ಚಿರಂಜೀವಿ ಆಗಿರಲಿ!’+ ಅಂತ ಜೈಕಾರ ಹಾಕಿ. 35  ಆಮೇಲೆ ಅವನು ಅರಮನೆಗೆ ವಾಪಸ್‌ ಬರಲಿ. ನೀವು ಅವನ ಹಿಂದೆನೇ ಬನ್ನಿ. ಅವನು ಒಳಗೆ ಬಂದು ನನ್ನ ಸಿಂಹಾಸನದ ಮೇಲೆ ಕೂತ್ಕೊಳ್ಳಲಿ. ನನ್ನ ಬದ್ಲು ಅವನು ರಾಜ ಆಗ್ತಾನೆ. ನಾನು ಅವನನ್ನ ಇಸ್ರಾಯೇಲಿನ ಮತ್ತು ಯೆಹೂದದ ಮೇಲೆ ನಾಯಕನನ್ನಾಗಿ ನೇಮಿಸ್ತೀನಿ” ಅಂದ. 36  ತಕ್ಷಣ ಯೆಹೋಯಾದನ ಮಗ ಬೆನಾಯ ರಾಜನಿಗೆ “ನೀನು ಹೇಳಿದ ಹಾಗೇ ಆಗಲಿ!* ರಾಜ, ನನ್ನ ಒಡೆಯ, ನಿನ್ನ ಮಾತನ್ನ ನಿನ್ನ ದೇವರಾದ ಯೆಹೋವ ನಿಜ ಮಾಡ್ತಾನೆ. 37  ಯೆಹೋವ ನನ್ನ ಒಡೆಯ ರಾಜ ದಾವೀದನ ಜೊತೆ ಇದ್ದ ಹಾಗೆನೇ ಸೊಲೊಮೋನನ ಜೊತೆನೂ ಇರ್ತಾನೆ.+ ದೇವರು ಅವನನ್ನ ನಿನಗಿಂತಲೂ ಮಹಾನ್‌ ವ್ಯಕ್ತಿಯಾಗಿ ಮಾಡ್ತಾನೆ”+ ಅಂದ. 38  ಆಮೇಲೆ ಪುರೋಹಿತ ಚಾದೋಕ್‌, ಪ್ರವಾದಿ ನಾತಾನ, ಯೆಹೋಯಾದನ ಮಗ ಬೆನಾಯ,+ ಕೆರೇತ್ಯರು ಮತ್ತು ಪೆಲೇತ್ಯರು+ ಸೊಲೊಮೋನನನ್ನ ರಾಜ ದಾವೀದನ ಹೇಸರಗತ್ತೆ ಮೇಲೆ ಕೂರಿಸ್ಕೊಂಡು+ ಗೀಹೋನಿಗೆ+ ಹೋದ್ರು. 39  ಪುರೋಹಿತ ಚಾದೋಕ ಡೇರೆಯಿಂದ+ ಕೊಂಬಲ್ಲಿ ತೈಲ ತಂದಿದ್ದ.+ ಅದ್ರಿಂದ ಸೊಲೊಮೋನನನ್ನ ಅಭಿಷೇಕಿಸಿದ.+ ತಕ್ಷಣ ಅವರು ಕೊಂಬನ್ನ ಊದಿದ್ರು. ಆಗ ಎಲ್ಲ ಜನರು “ರಾಜ ಸೊಲೊಮೋನ ಚಿರಂಜೀವಿ ಆಗಿರಲಿ!” ಅಂತ ಕೂಗೋಕೆ ಶುರುಮಾಡಿದ್ರು. 40  ಆಮೇಲೆ ಜನರೆಲ್ಲ ಅವನ ಹಿಂದೆಹಿಂದೆ ಹೋಗ್ತಾ ಕೊಳಲು ಊದುತ್ತಾ ಸಂತೋಷಪಟ್ರು. ಅವರೆಲ್ಲ ಭೂಮಿನೇ ಸೀಳಿ ಹೋಗೋ ತರ ಜೋರಾಗಿ ಜೈಕಾರ ಹಾಕ್ತಿದ್ರು.+ 41  ಆ ಶಬ್ದ ಅದೋನೀಯಗೆ ಮತ್ತು ಅವನು ಕರೆದಿದ್ದ ಎಲ್ಲ ಅತಿಥಿಗಳಿಗೆ ಕೇಳಿಸ್ತು. ಅಷ್ಟರಲ್ಲಿ ಅವರು ಊಟಮಾಡಿ ಮುಗಿಸಿದ್ರು.+ ಕೊಂಬು ಊದೋ ಶಬ್ದನ ಯೋವಾಬ ಕೇಳಿದ ತಕ್ಷಣ “ಪಟ್ಟಣದಲ್ಲಿ ಏನಷ್ಟು ಗಲಾಟೆ?” ಅಂದ. 42  ಅವನು ಹೀಗೆ ಹೇಳ್ತಿದ್ದಾಗ ಪುರೋಹಿತ ಎಬ್ಯಾತಾರನ ಮಗ ಯೋನಾತಾನ+ ಅಲ್ಲಿಗೆ ಬಂದ. ಅದೋನೀಯ ಅವನಿಗೆ “ಒಳಗೆ ಬಾ. ನೀನು ಒಳ್ಳೆಯವನು, ಒಳ್ಳೇ ಸುದ್ದಿನೇ ತಂದಿರ್ತೀಯ” ಅಂದ. 43  ಆದ್ರೆ ಯೋನಾತಾನ ಅದೋನೀಯಗೆ “ಕ್ಷಮಿಸು, ನಾನು ಒಳ್ಳೇ ಸುದ್ದಿ ತಂದಿಲ್ಲ. ನಮ್ಮ ರಾಜ ದಾವೀದ ಸೊಲೊಮೋನನನ್ನ ರಾಜ ಮಾಡಿದ್ದಾನೆ. 44  ರಾಜ ದಾವೀದ ಸೊಲೊಮೋನನ ಜೊತೆ ಪುರೋಹಿತ ಚಾದೋಕ್‌, ಪ್ರವಾದಿ ನಾತಾನ, ಯೆಹೋಯಾದನ ಮಗ ಬೆನಾಯ, ಕೆರೇತ್ಯರು ಮತ್ತು ಪೆಲೇತ್ಯರನ್ನ ಕಳಿಸಿದ. ಅವರು ಸೊಲೊಮೋನನನ್ನ ರಾಜನ ಹೇಸರಗತ್ತೆ ಮೇಲೆ ಕೂರಿಸ್ಕೊಂಡು ಹೋದ್ರು.+ 45  ಆಮೇಲೆ ಪುರೋಹಿತ ಚಾದೋಕ್‌ ಮತ್ತು ಪ್ರವಾದಿ ನಾತಾನ ಅವನಿಗೆ ಗೀಹೋನಲ್ಲಿ ಅಭಿಷೇಕ ಮಾಡಿ ರಾಜ ಮಾಡಿದ್ರು. ಆಮೇಲೆ ಅವರು ಖುಷಿಯಿಂದ ಕೂಗ್ತಾ ಪಟ್ಟಣಕ್ಕೆ ಬಂದ್ರು. ಅದಕ್ಕೇ ಅಷ್ಟು ಗಲಾಟೆ. 46  ಅಷ್ಟೇ ಅಲ್ಲ ಸೊಲೊಮೋನ ಸಿಂಹಾಸನದ ಮೇಲೆ ಕೂತಿದ್ದಾನೆ. 47  ಇನ್ನೊಂದು ವಿಷ್ಯ ಏನಂದ್ರೆ ನಮ್ಮ ಒಡೆಯನಾದ ರಾಜ ದಾವೀದನ ಹತ್ರ ಅವನ ಸೇವಕರು ಬಂದು ‘ನಿನ್ನ ದೇವರು, ನಿನ್ನ ಹೆಸ್ರಿಗಿಂತ ಸೊಲೊಮೋನನಿಗೆ ದೊಡ್ಡ ಹೆಸ್ರು ಬರೋ ತರ ಮಾಡ್ಲಿ. ದೇವರು ನಿನಗಿಂತ ಅವನನ್ನ ದೊಡ್ಡ ವ್ಯಕ್ತಿಯಾಗಿ ಮಾಡ್ಲಿ’ ಅಂತ ಹಾರೈಸಿದ್ರು. ಆಗ ರಾಜ ಹಾಸಿಗೆ ಮೇಲೆನೇ ತಲೆ ಬಗ್ಗಿಸಿ ದೇವರಿಗೆ ನಮಸ್ಕಾರ ಮಾಡಿದ. 48  ರಾಜ ದಾವೀದ ‘ಇವತ್ತು ನನ್ನ ಮಗನನ್ನ ಸಿಂಹಾಸನದ ಮೇಲೆ ಕೂರಿಸಿ ಅದನ್ನ ಕಣ್ಣಾರೆ ನೋಡೋ ಅವಕಾಶ ಕೊಟ್ಟಿದ್ದಕ್ಕೆ ಇಸ್ರಾಯೇಲ್‌ ದೇವರಾದ ಯೆಹೋವನನ್ನ ನಾನು ಹೊಗಳ್ತೀನಿ’ ಅಂದ.” 49  ಈ ವಿಷ್ಯ ಕೇಳಿ ಅದೋನೀಯನ ಎಲ್ಲ ಅತಿಥಿಗಳು ಹೆದರಿ ಕಂಗಾಲಾಗಿ ಅವ್ರವ್ರ ಮನೆಗೆ ಹೋದ್ರು. 50  ಅದೋನೀಯನೂ ಸೊಲೊಮೋನನಿಗೆ ಹೆದರಿ ಅಲ್ಲಿಂದ ಯಜ್ಞವೇದಿ ಹತ್ರ ಹೋಗಿ ಅದ್ರ ಕೊಂಬುಗಳನ್ನ ಹಿಡ್ಕೊಂಡ.+ 51  ಆಗ ಸೊಲೊಮೋನನಿಗೆ ಅವನ ಸೇವಕರು “ರಾಜ ಸೊಲೊಮೋನ, ಅದೋನೀಯ ನಿನಗೆ ಹೆದರಿ ಯಜ್ಞವೇದಿ ಹತ್ರ ಹೋಗಿ ಅದ್ರ ಕೊಂಬು ಹಿಡ್ಕೊಂಡಿದ್ದಾನೆ. ಅಷ್ಟೇ ಅಲ್ಲ ‘ನನ್ನನ್ನ ಕತ್ತಿಯಿಂದ ಕೊಲ್ಲಲ್ಲ ಅಂತ ರಾಜ ಸೊಲೊಮೋನ ಮೊದ್ಲು ನನಗೆ ಮಾತು ಕೊಡ್ಲಿ. ಅಲ್ಲಿ ತನಕ ನಾನು ಇಲ್ಲಿಂದ ಕದಲಲ್ಲ’ ಅಂತ ಹೇಳ್ತಿದ್ದಾನೆ” ಅನ್ನೋ ಸುದ್ದಿ ಮುಟ್ಟಿಸಿದ್ರು. 52  ಅದಕ್ಕೆ ಸೊಲೊಮೋನ “ಅವನು ಒಳ್ಳೆಯವನಾಗಿ ನಡ್ಕೊಂಡ್ರೆ ಅವನ ಒಂದು ಕೂದಲೂ ಬೀಳದೆ ಇರೋ ತರ ನೋಡ್ಕೊತ್ತೀನಿ. ಆದ್ರೆ ಅವನು ಏನಾದ್ರೂ ತಪ್ಪು ಮಾಡಿದ್ರೆ+ ಅವನ ಪ್ರಾಣ ತೆಗಿತೀನಿ” ಅಂದ. 53  ಆಮೇಲೆ ಅದೋನೀಯನನ್ನ ಕರ್ಕೊಂಡು ಬರೋಕೆ ರಾಜ ಸೊಲೊಮೋನ ಸೇವಕರನ್ನ ಕಳಿಸಿದ. ಅದೋನೀಯ ರಾಜನ ಹತ್ರ ಬಂದು ಬಗ್ಗಿ ನಮಸ್ಕಾರ ಮಾಡಿದ. ಆಗ ರಾಜ “ಮನೆಗೆ ಹೋಗು” ಅಂದ.

ಪಾದಟಿಪ್ಪಣಿ

ಅಥವಾ “ಮನಸ್ಸಿಗೆ ನೋವು ಮಾಡಲಿಲ್ಲ; ಎದುರು ಹಾಕೊಳ್ಳಲಿಲ್ಲ.”
ಅಥವಾ “ಹೆಣ್ಣು ಹೇಸರಗತ್ತೆ.”
ಅಥವಾ ಹೀಬ್ರುವಿನಲ್ಲಿ ಆಮೆನ್‌.