ಒಂದನೇ ಅರಸು 12:1-33

  • ರೆಹಬ್ಬಾಮನ ಕಠೋರವಾದ ಉತ್ತರ (1-15)

  • ಹತ್ತು ಕುಲಗಳ ದಂಗೆ (16-19)

  • ಇಸ್ರಾಯೇಲಿನ ಮೇಲೆ ಯಾರೊಬ್ಬಾಮ ರಾಜನಾದ (20)

  • ಇಸ್ರಾಯೇಲಿನ ವಿರುದ್ಧ ಯುದ್ಧ ಮಾಡದ ಹಾಗೆ ರೆಹಬ್ಬಾಮನಿಗೆ ಸೂಚನೆ (21-24)

  • ಯಾರೊಬ್ಬಾಮ ಕರುಗಳನ್ನ ಆರಾಧಿಸಿದ (25-33)

12  ರೆಹಬ್ಬಾಮ ಶೆಕೆಮಿಗೆ+ ಹೋದ, ಯಾಕಂದ್ರೆ ಎಲ್ಲ ಇಸ್ರಾಯೇಲ್ಯರು ಅವನನ್ನ ರಾಜನಾಗಿ ಮಾಡೋಕೆ ಅಲ್ಲಿಗೆ ಬಂದಿದ್ರು.+  ಈ ಸುದ್ದಿ ನೆಬಾಟನ ಮಗ ಯಾರೊಬ್ಬಾಮನಿಗೆ ಗೊತ್ತಾದ ತಕ್ಷಣ (ಯಾರೊಬ್ಬಾಮ ಇನ್ನೂ ಈಜಿಪ್ಟಲ್ಲೇ ಇದ್ದ. ಯಾಕಂದ್ರೆ ಅವನು ರಾಜ ಸೊಲೊಮೋನನಿಗೆ ಹೆದರಿ ಈಜಿಪ್ಟಿಗೆ ಓಡಿಹೋಗಿದ್ದ.)+  ಜನ್ರು ಅವನನ್ನ ಈಜಿಪ್ಟಿಂದ ಬರೋಕೆ ಹೇಳಿದ್ರು. ಆಮೇಲೆ ಯಾರೊಬ್ಬಾಮ ಮತ್ತು ಎಲ್ಲ ಇಸ್ರಾಯೇಲ್ಯರು ರೆಹಬ್ಬಾಮನ ಹತ್ರ ಬಂದು⁠  “ನಿನ್ನ ಅಪ್ಪ ನಮ್ಮಿಂದ ಕಷ್ಟದ ಕೆಲಸ ಮಾಡಿಸ್ಕೊಂಡು ನಮ್ಮ ಮೇಲೆ ಭಾರವಾದ ನೊಗ ಹೊರಿಸಿದ್ದ.+ ಒಂದುವೇಳೆ ನೀನು ಆ ಕಷ್ಟದ ಕೆಲಸವನ್ನ ಸುಲಭಮಾಡಿದ್ರೆ ಮತ್ತು ನಿನ್ನ ಅಪ್ಪ ನಮ್ಮ ಮೇಲೆ ಹೊರಿಸಿದ ಭಾರವನ್ನ* ಹಗುರ ಮಾಡಿದ್ರೆ ನಾವು ನಿನ್ನ ಸೇವೆ ಮಾಡ್ತೀವಿ” ಅಂದ್ರು.  ಅದಕ್ಕೆ ಅವನು “ನೀವು ಈಗ ಹೋಗಿ, ಮೂರು ದಿನ ಆದ್ಮೇಲೆ ಬನ್ನಿ” ಅಂದ. ಜನ್ರು ಅಲ್ಲಿಂದ ಹೋದ್ರು.+  ಆಗ ರಾಜ ರೆಹಬ್ಬಾಮ ಅವನ ಅಪ್ಪ ಸೊಲೊಮೋನ ಬದುಕಿದ್ದಾಗ ಅವನಿಗೆ ಸೇವೆ ಮಾಡಿದ ಹಿರಿಯರ* ಹತ್ರ “ಈ ಜನ್ರಿಗೆ ಏನು ಹೇಳಬೇಕು ಅಂತ ಸಲಹೆ ಕೊಡಿ” ಅಂತ ಕೇಳಿದ.  ಅದಕ್ಕೆ ಅವರು “ಇವತ್ತು ನೀನು ಆ ಜನ್ರ ಸೇವಕನಾದ್ರೆ ಮತ್ತು ಅವರು ಕೇಳಿದ್ದಕ್ಕೆ ಒಪ್ಪಿ ಅವ್ರಿಗೆ ಇಷ್ಟ ಆಗೋ ತರ ಉತ್ತರ ಕೊಟ್ರೆ ಅವರು ಯಾವಾಗ್ಲೂ ನಿನ್ನ ಸೇವಕರಾಗಿ ಇರ್ತಾರೆ” ಅಂದ್ರು.  ಆದ್ರೆ ಅವನು ಆ ಹಿರಿಯರ* ಸಲಹೆಯನ್ನ ಗಾಳಿಗೆ ತೂರಿ ತನ್ನ ಜೊತೆ ಬೆಳೆದು ಈಗ ತನ್ನ ಸೇವಕರಾಗಿದ್ದ ಯುವಕರ ಸಲಹೆ ಕೇಳಿದ.+  ಅವನು ಅವ್ರಿಗೆ “ಈ ಜನ್ರು ‘ನಿನ್ನ ಅಪ್ಪ ನಮ್ಮ ಮೇಲೆ ಹಾಕಿದ ಭಾರವನ್ನ ಹಗುರಮಾಡು’ ಅಂತ ಕೇಳ್ತಿದ್ದಾರೆ. ಅವ್ರಿಗೆ ನಾನು ಏನು ಉತ್ರ ಕೊಡ್ಲಿ?” ಅಂತ ಕೇಳಿದ. 10  ಅದಕ್ಕೆ ಆ ಯುವಕರು “ಯಾವ ಜನ್ರು ನಿನಗೆ ‘ನಿನ್ನ ಅಪ್ಪ ನಮ್ಮ ಮೇಲೆ ಹಾಕಿದ ಭಾರವನ್ನ ನೀನು ಹಗುರಮಾಡು’ ಅಂತ ಕೇಳ್ತಿದ್ದಾರೋ ಅವ್ರಿಗೆ ಹೀಗೆ ಹೇಳು: ‘ನನ್ನ ಕಿರುಬೆರಳು ನನ್ನ ಅಪ್ಪನ ಸೊಂಟಕ್ಕಿಂತ ದಪ್ಪ ಇರುತ್ತೆ. 11  ನನ್ನ ಅಪ್ಪ ನಿಮ್ಮ ಮೇಲೆ ಭಾರವಾದ ನೊಗ ಅಷ್ಟೇ ಹೊರಿಸಿದ. ಆದ್ರೆ ನಾನು ಅದ್ರ ಮೇಲೆ ಇನ್ನೂ ಭಾರ ಹಾಕ್ತೀನಿ. ನನ್ನ ಅಪ್ಪ ನಿಮ್ಮನ್ನ ಕೊರಡೆಯಿಂದ ಹೊಡಿಸಿದ. ನಾನು ನಿಮ್ಮನ್ನ ಮುಳ್ಳಿನ ಕೊರಡೆಯಿಂದ ಹೊಡಿಸ್ತೀನಿ’” ಅಂತ ಸಲಹೆ ಕೊಟ್ರು. 12  ‘ಮೂರು ದಿನ ಆದ್ಮೇಲೆ ಬನ್ನಿ’ ಅಂತ ರೆಹಬ್ಬಾಮ ಹೇಳಿದ ಹಾಗೇ ಯಾರೊಬ್ಬಾಮ ಮತ್ತು ಎಲ್ಲ ಜನ್ರು ಮೂರು ದಿನ ಆದ್ಮೇಲೆ ರಾಜನ ಹತ್ರ ಬಂದ್ರು.+ 13  ಆದ್ರೆ ಹಿರಿಯರ* ಸಲಹೆನ ಗಾಳಿಗೆ ತೂರಿದ ರಾಜ ಆ ಜನ್ರ ಜೊತೆ ಒರಟಾಗಿ ಮಾತಾಡಿದ. 14  ಯುವಕರು ಕೊಟ್ಟ ಸಲಹೆ ಪ್ರಕಾರ ಅವನು ಅವ್ರಿಗೆ “ನನ್ನ ಅಪ್ಪ ನಿಮ್ಮ ಮೇಲೆ ಭಾರವಾದ ನೊಗ ಅಷ್ಟೇ ಹೊರಿಸಿದ. ಆದ್ರೆ ನಾನು ಅದ್ರ ಮೇಲೆ ಇನ್ನೂ ಭಾರ ಹಾಕ್ತೀನಿ. ನನ್ನ ಅಪ್ಪ ನಿಮ್ಮನ್ನ ಕೊರಡೆಯಿಂದ ಹೊಡಿಸಿದ. ನಾನು ನಿಮ್ಮನ್ನ ಮುಳ್ಳಿನ ಕೊರಡೆಯಿಂದ ಹೊಡಿಸ್ತೀನಿ” ಅಂತ ಹೇಳಿದ. 15  ಹೀಗೆ ರಾಜ ಜನ್ರ ಮಾತನ್ನ ಕಿವಿಗೆ ಹಾಕೊಳ್ಳಲಿಲ್ಲ. ಹೀಗೆ ಆಗೋ ತರ ಯೆಹೋವನೇ ಮಾಡಿದ್ದನು.+ ಯೆಹೋವ ಪ್ರವಾದಿ ಅಹೀಯನ+ ಮೂಲಕ ನೆಬಾಟನ ಮಗ ಯಾರೊಬ್ಬಾಮನಿಗೆ ಹೇಳಿದ್ದ ಮಾತು ನಿಜ ಮಾಡೋಕೆ ಹೀಗೆ ಮಾಡಿದನು. 16  ರಾಜ ತಮ್ಮ ಮಾತನ್ನ ತಳ್ಳಿಹಾಕಿದ್ದಾನೆ ಅಂತ ಎಲ್ಲ ಇಸ್ರಾಯೇಲ್ಯರಿಗೆ ಗೊತ್ತಾದಾಗ ಅವರು ರಾಜನಿಗೆ “ದಾವೀದನಿಗೂ ನಮಗೂ ಈಗ ಯಾವ ಸಂಬಂಧನೂ ಇಲ್ಲ! ಅವನಿಂದ ನಮಗೆ ಯಾವ ಪ್ರಯೋಜನನೂ ಇಲ್ಲ. ಇಷಯನ ಮಗ ದಾವೀದನ ಆಸ್ತಿ ಅವನ ಹತ್ರಾನೇ ಇರಲಿ. ಇಸ್ರಾಯೇಲ್ಯರೇ ನೀವೆಲ್ಲ ನಿಮ್ಮನಿಮ್ಮ ದೇವರುಗಳ ಹತ್ರ ವಾಪಸ್‌ ಹೋಗಿ. ದಾವೀದನ ವಂಶದವರೇ! ನಿಮ್ಮನ್ನ ನೀವೇ ನೋಡ್ಕೊಳ್ಳಿ” ಅಂತ ಹೇಳಿ ತಮ್ಮತಮ್ಮ ಮನೆಗೆ* ವಾಪಸ್‌ ಹೋದ್ರು.+ 17  ಆದ್ರೆ ರೆಹಬ್ಬಾಮ ಯೆಹೂದದ ಪಟ್ಟಣಗಳಲ್ಲಿದ್ದ ಇಸ್ರಾಯೇಲ್ಯರನ್ನ ಇನ್ನೂ ಆಳ್ತಿದ್ದ.+ 18  ಆಮೇಲೆ ರಾಜ ರೆಹಬ್ಬಾಮ ಬಿಟ್ಟಿಕೆಲಸಗಾರರ ಮೇಲೆ ಮೇಲ್ವಿಚಾರಣೆ ಮಾಡ್ತಿದ್ದ ಅದೋರಾಮನನ್ನ+ ಇಸ್ರಾಯೇಲ್ಯರ ಹತ್ರ ಕಳಿಸಿದ. ಆದ್ರೆ ಎಲ್ಲ ಇಸ್ರಾಯೇಲ್ಯರು ಅವನನ್ನ ಕಲ್ಲೊಡೆದು ಸಾಯಿಸಿದ್ರು. ಹೇಗೋ ಮಾಡಿ ರಾಜ ರೆಹಬ್ಬಾಮ ತನ್ನ ರಥ ಹತ್ತಿ ಯೆರೂಸಲೇಮಿಗೆ ಓಡಿಹೋದ.+ 19  ಅವತ್ತಿಂದ ಇವತ್ತಿನ ತನಕ ಇಸ್ರಾಯೇಲ್ಯರು ದಾವೀದನ ಮನೆತನದ ವಿರುದ್ಧ ದಂಗೆ ಏಳ್ತಾನೇ ಇದ್ದಾರೆ.+ 20  ಯಾರೊಬ್ಬಾಮ ವಾಪಸ್‌ ಬಂದಿದ್ದಾನೆ ಅಂತ ಇಸ್ರಾಯೇಲ್ಯರಿಗೆ ಗೊತ್ತಾದ ತಕ್ಷಣ ಅವರು ಅವನನ್ನ ಎಲ್ರ ಮುಂದೆ ಕರೆಸಿ ಇಸ್ರಾಯೇಲಿನ ರಾಜನಾಗಿ ಮಾಡಿದ್ರು.+ ಯೆಹೂದ ಕುಲ ಬಿಟ್ಟು ಬೇರೆ ಯಾರೂ ದಾವೀದನ ಮನೆತನನ ಬೆಂಬಲಿಸಲಿಲ್ಲ.+ 21  ರೆಹಬ್ಬಾಮ ಯೆರೂಸಲೇಮಿಗೆ ಬಂದ ತಕ್ಷಣ ಯೆಹೂದದ ಎಲ್ಲ ಜನ್ರನ್ನ ಮತ್ತು ಬೆನ್ಯಾಮೀನ್‌ ಕುಲದಲ್ಲಿ ತರಬೇತಿ ಪಡೆದ 1,80,000 ವೀರ ಸೈನಿಕರನ್ನ ಒಟ್ಟುಸೇರಿಸಿದ. ಇಸ್ರಾಯೇಲ್‌ ಜನ್ರ ವಿರುದ್ಧ ಯುದ್ಧ ಮಾಡಿ ಮತ್ತೆ ರಾಜ ಆಗೋಕೆ ಅವನು ಹೀಗೆ ಮಾಡಿದ.+ 22  ಆಗ ಸತ್ಯ ದೇವರ ಸಂದೇಶ ಸತ್ಯ ದೇವರ ಸೇವಕನಾದ ಶೆಮಾಯಗೆ+ ಸಿಕ್ತು. ಅದೇನಂದ್ರೆ 23  “ನೀನು ಸೊಲೊಮೋನನ ಮಗ, ಯೆಹೂದದ ರಾಜ ಆಗಿರೋ ರೆಹಬ್ಬಾಮನಿಗೆ, ಯೆಹೂದದ ಎಲ್ಲ ಮನೆತನದವ್ರಿಗೆ, ಬೆನ್ಯಾಮೀನ್‌ ಕುಲದವ್ರಿಗೆ, ಉಳಿದ ಜನ್ರಿಗೆ ಹೀಗೆ ಹೇಳು: 24  ‘ಯೆಹೋವ ಹೀಗೆ ಹೇಳಿದ್ದಾನೆ “ನೀವು ನಿಮ್ಮ ಸಹೋದರರಾದ ಇಸ್ರಾಯೇಲ್ಯರ ವಿರುದ್ಧ ಯುದ್ಧ ಮಾಡೋಕೆ ಹೋಗಬಾರದು. ನೀವೆಲ್ಲ ನಿಮ್ಮನಿಮ್ಮ ಮನೆಗಳಿಗೆ ವಾಪಸ್‌ ಹೋಗಬೇಕು. ಯಾಕಂದ್ರೆ ಹೀಗೆ ಆಗೋ ತರ ಮಾಡಿದವನು ನಾನೇ.”’”+ ಹಾಗಾಗಿ ಅವರು ಯೆಹೋವನ ಮಾತನ್ನ ಕೇಳಿ ಯೆಹೋವನು ಹೇಳಿದ ತರಾನೇ ತಮ್ಮತಮ್ಮ ಮನೆಗೆ ವಾಪಸ್‌ ಹೋದ್ರು. 25  ಆಮೇಲೆ ಯಾರೊಬ್ಬಾಮ ಎಫ್ರಾಯೀಮ್‌ ಬೆಟ್ಟ ಪ್ರದೇಶದಲ್ಲಿ ಶೆಕೆಮ್‌+ ಪಟ್ಟಣ ಕಟ್ಟಿದ ಮತ್ತು ಅಲ್ಲೇ ವಾಸಿಸಿದ. ಅವನು ಅಲ್ಲಿಂದ ಹೋಗಿ ಪೆನೂವೇಲ್‌+ ಪಟ್ಟಣ ಕಟ್ಟಿದ. 26  ಯಾರೊಬ್ಬಾಮ ತನ್ನ ಮನಸ್ಸಲ್ಲೇ “ನನ್ನ ರಾಜ್ಯ ನಿಧಾನವಾಗಿ ದಾವೀದನ ಮನೆತನಕ್ಕೇ ವಾಪಸ್‌ ಹೋಗಿಬಿಡುತ್ತೆ.+ 27  ಈ ಜನ್ರು ಯೆರೂಸಲೇಮಲ್ಲಿರೋ ಯೆಹೋವನ ಆಲಯಕ್ಕೆ ಬಲಿಗಳನ್ನ ಕೊಡೋಕೆ+ ಹೀಗೆ ಹೋಗ್ತಾನೇ ಇದ್ರೆ ಅವ್ರ ಮನಸ್ಸು ಅವ್ರ ಒಡೆಯ ಯೆಹೂದದ ರಾಜನಾದ ರೆಹಬ್ಬಾಮನ ಕಡೆಗೆ ತಿರುಗಿಬಿಡುತ್ತೆ. ಆಗ ಅವರು ನನ್ನನ್ನ ಕೊಂದು ಯೆಹೂದದ ರಾಜ ರೆಹಬ್ಬಾಮನ ಹತ್ರ ಹೋಗಿಬಿಡ್ತಾರೆ” ಅಂದ್ಕೊಂಡ. 28  ಆಮೇಲೆ ರಾಜ ಸಲಹೆಗಾರರ ಜೊತೆ ಮಾತಾಡಿ ಎರಡು ಚಿನ್ನದ ಕರುಗಳ+ ಮೂರ್ತಿ ಮಾಡಿಸಿದ ಮತ್ತು ಜನ್ರಿಗೆ “ಯಾಕೆ ಯೆರೂಸಲೇಮಿಗೆ ಹೋಗೋ ತೊಂದರೆ ತಗೊತೀರ. ಇಸ್ರಾಯೇಲ್ಯರೇ, ಇಲ್ಲಿ ನೋಡಿ ನಿಮ್ಮ ದೇವರು. ಇದೇ ನಿಮ್ಮನ್ನ ಈಜಿಪ್ಟಿಂದ ಬಿಡಿಸ್ಕೊಂಡು ಬಂದಿದ್ದು”+ ಅಂದ. 29  ಆಮೇಲೆ ಅವನು ಆ ಮೂರ್ತಿಗಳಲ್ಲಿ ಒಂದನ್ನ ಬೆತೆಲಿನಲ್ಲಿ+ ಇನ್ನೊಂದನ್ನ ದಾನಿನಲ್ಲಿ+ ಇಟ್ಟ. 30  ಇದ್ರಿಂದ ಜನ್ರು ಪಾಪಮಾಡಿದ್ರು.+ ದಾನಿನಲ್ಲಿದ್ದ ಮೂರ್ತಿನ ಆರಾಧಿಸೋಕೆ ಅವರು ಅಲ್ಲಿ ತನಕ ಪ್ರಯಾಣ ಮಾಡ್ತಿದ್ರು. 31  ಯಾರೊಬ್ಬಾಮ ಬೆಟ್ಟಗಳ ಮೇಲೆ ದೇವಸ್ಥಾನಗಳನ್ನ ಕಟ್ಟಿಸಿ ಲೇವಿಯರಲ್ಲದ ಸಾಮಾನ್ಯ ಜನ್ರನ್ನ ಪುರೋಹಿತರಾಗಿ ನೇಮಿಸಿದ.+ 32  ಅಷ್ಟೇ ಅಲ್ಲ ಯಾರೊಬ್ಬಾಮ ಎಂಟನೇ ತಿಂಗಳಿನ 15ನೇ ದಿನದಲ್ಲಿ ಒಂದು ಹೊಸ ಹಬ್ಬ ಶುರುಮಾಡಿದ. ಆ ಹಬ್ಬ ಯೆಹೂದದಲ್ಲಿ ಮಾಡ್ತಾ ಇದ್ದ ಹಬ್ಬದ ತರಾನೇ ಇತ್ತು.+ ಬೆತೆಲಿನಲ್ಲಿ+ ತಾನು ಕಟ್ಟಿಸಿದ್ದ ಯಜ್ಞವೇದಿಯ ಮೇಲೆ ಕರುಗಳ ಮೂರ್ತಿಗಳಿಗೆ ಬಲಿ ಕೊಡ್ತಿದ್ದ. ಅಲ್ಲಿಯ ದೇವಸ್ಥಾನಗಳಲ್ಲಿ ಸೇವೆ ಮಾಡೋಕೆ ಪುರೋಹಿತರನ್ನ ನೇಮಿಸಿದ. 33  ಎಂಟನೇ ತಿಂಗಳಿನ 15ನೇ ದಿನದಲ್ಲಿ ಬೆತೆಲಿನ ಯಜ್ಞವೇದಿ ಮೇಲೆ ಬಲಿಗಳನ್ನ ಕೊಡೋಕೆ ಶುರುಮಾಡಿದ. ಆ ತಿಂಗಳನ್ನ ಅವನೇ ಆರಿಸಿದ್ದ. ಅವನು ಇಸ್ರಾಯೇಲ್‌ ಜನ್ರಿಗಾಗಿ ಒಂದು ಹೊಸ ಹಬ್ಬ ಶುರುಮಾಡಿ ಬಲಿಗಳನ್ನ ಕೊಟ್ಟು ಹೊಗೆ ಏರೋ ತರ ಮಾಡೋಕೆ ಯಜ್ಞವೇದಿ ಹತ್ತಿದ.

ಪಾದಟಿಪ್ಪಣಿ

ಅಥವಾ “ಒತ್ತಡವನ್ನ.”
ಅಥವಾ “ವಯಸ್ಸಾದವರ.”
ಅಥವಾ “ವಯಸ್ಸಾದವರ.”
ಅಥವಾ “ವಯಸ್ಸಾದವರ.”
ಅಕ್ಷ. “ಡೇರೆಗೆ.”