ಒಂದನೇ ಅರಸು 14:1-31

  • ಯಾರೊಬ್ಬಾಮನ ವಿರುದ್ಧ ಅಹೀಯನ ಪ್ರವಾದನೆ (1-20)

  • ರೆಹಬ್ಬಾಮ ಯೆಹೂದದ ಮೇಲೆ ಆಳ್ವಿಕೆ ಮಾಡಿದ (21-31)

    • ಶೀಶಕನ ದಾಳಿ (25, 26)

14  ಆ ಸಮಯದಲ್ಲಿ ಯಾರೊಬ್ಬಾಮನ ಮಗ ಅಬೀಯಗೆ ಹುಷಾರಿರಲಿಲ್ಲ.  ಹಾಗಾಗಿ ಯಾರೊಬ್ಬಾಮ ತನ್ನ ಹೆಂಡತಿಗೆ “ದಯವಿಟ್ಟು ವೇಷ ಬದಲಾಯಿಸ್ಕೊಂಡು ಶೀಲೋಗೆ ಹೋಗು. ನೀನು ನನ್ನ ಹೆಂಡತಿ ಅಂತ ಯಾರಿಗೂ ಗೊತ್ತಾಗಬಾರದು. ಅಲ್ಲಿ ಪ್ರವಾದಿ ಅಹೀಯ ಇದ್ದಾನೆ. ಈ ಜನ್ರ ಮೇಲೆ ನಾನು ರಾಜ ಆಗ್ತೀನಿ ಅಂತ ನನಗೆ ಹೇಳಿದ್ದು ಅವನೇ.+  ಅಲ್ಲಿಗೆ ಹೋಗುವಾಗ 10 ರೊಟ್ಟಿ, ಮಿಠಾಯಿ, ಒಂದು ಜಾಡಿ ಜೇನುತುಪ್ಪ ತಗೊಂಡು ಹೋಗು. ನಮ್ಮ ಮಗನಿಗೆ ಏನಾಗುತ್ತೆ ಅಂತ ಅವನು ನಿನಗೆ ಹೇಳ್ತಾನೆ” ಅಂದ.  ಯಾರೊಬ್ಬಾಮನ ಹೆಂಡತಿ ಅವನು ಹೇಳಿದ ತರಾನೇ ಮಾಡಿದಳು. ಅವಳು ಶೀಲೋನಲ್ಲಿದ್ದ+ ಅಹೀಯನ ಮನೆಗೆ ಹೋದಳು. ಅಹೀಯನಿಗೆ ತುಂಬ ವಯಸ್ಸಾಗಿದ್ರಿಂದ ಕಣ್ಣು ಮಂಜಾಗಿತ್ತು. ಅವನಿಗೆ ಏನೂ ಕಾಣಿಸ್ತಿರಲಿಲ್ಲ.  ಆದ್ರೆ ಯೆಹೋವ ಅಹೀಯನಿಗೆ “ಯಾರೊಬ್ಬಾಮನ ಮಗನಿಗೆ ಹುಷಾರಿಲ್ಲ. ಹಾಗಾಗಿ ಮಗನ ಬಗ್ಗೆ ಕೇಳಕ್ಕೆ ಯಾರೊಬ್ಬಾಮನ ಹೆಂಡತಿ ನಿನ್ನ ಹತ್ರ ಬರ್ತಿದ್ದಾಳೆ. ನೀನು ಅವಳಿಗೆ ಏನು ಹೇಳಬೇಕಂತ ನಾನು ನಿನಗೆ ಹೇಳ್ತೀನಿ. ಅವಳು ಇಲ್ಲಿಗೆ ಬೇರೆ ವೇಷದಲ್ಲಿ ಬರ್ತಾಳೆ” ಅಂದನು.  ಯಾರೊಬ್ಬಾಮನ ಹೆಂಡತಿ ಮನೆ ಬಾಗಿಲ ಹತ್ರ ಬಂದ ತಕ್ಷಣ ಅವಳ ಹೆಜ್ಜೆ ಸದ್ದು ಕೇಳಿ ಅಹೀಯ ಅವಳಿಗೆ ಹೀಗಂದ: “ಯಾರೊಬ್ಬಾಮನ ಹೆಂಡತಿ ಒಳಗೆ ಬಾ. ಯಾಕೆ ವೇಷ ಬದಲಾಯಿಸ್ಕೊಂಡು ಬಂದಿದ್ದೀಯಾ? ನಿನಗೆ ಒಂದು ಕೆಟ್ಟ ಸುದ್ದಿ ಕೊಡೋಕೆ ದೇವರು ನನಗೆ ಹೇಳಿದ್ದಾನೆ.  ಹೋಗಿ ಯಾರೊಬ್ಬಾಮನಿಗೆ ಹೀಗೆ ಹೇಳು: ‘ಇಸ್ರಾಯೇಲ್‌ ದೇವರಾದ ಯೆಹೋವ ಹೀಗೆ ಹೇಳ್ತಾನೆ: “ನನ್ನ ಜನ್ರಾದ ಇಸ್ರಾಯೇಲ್ಯರ ಮೇಲೆ ನಿನ್ನನ್ನ ನಾಯಕನಾಗಿ ಮಾಡೋಕೆ ನಿನ್ನ ಜನ್ರ ಮಧ್ಯದಿಂದ ನಿನ್ನನ್ನ ಆರಿಸಿದವನು ನಾನೇ.+  ದಾವೀದನ ಮನೆತನದಿಂದ ರಾಜ್ಯವನ್ನ ಕಿತ್ತು ನಾನು ನಿನಗೆ ಕೊಟ್ಟೆ.+ ಆದ್ರೆ ನೀನು ನನ್ನ ಸೇವಕನಾದ ದಾವೀದನ ತರ ಆಗಲಿಲ್ಲ. ಅವನು ನನ್ನ ದೃಷ್ಟಿಯಲ್ಲಿ ಸರಿಯಾಗಿ ಇರೋದನ್ನೇ ಮಾಡಿದ. ಅವನು ನನ್ನ ಆಜ್ಞೆಗಳನ್ನ ಪಾಲಿಸ್ತಾ ಪೂರ್ಣ ಹೃದಯದಿಂದ ನಾನು ಹೇಳಿದನ್ನ ಕೇಳಿದ.+  ನೀನು ನಿನ್ನ ಮುಂಚೆ ಇದ್ದ ಎಲ್ರಿಗಿಂತ ತುಂಬ ಕೆಟ್ಟ ಕೆಲಸ ಮಾಡಿದೆ. ನೀನು ನಿನಗಂತಾನೇ ಇನ್ನೊಂದು ದೇವರನ್ನ, ಅಚ್ಚಲ್ಲಿ ಲೋಹ ಹೊಯ್ದು ಮಾಡಿದ ಮೂರ್ತಿಗಳನ್ನ ಮಾಡ್ಕೊಂಡು ನನಗೆ ಕೋಪ ಬರಿಸಿದೆ.+ ನೀನು ನನಗೇ ಬೆನ್ನು ಹಾಕಿದೆ.+ 10  ಹಾಗಾಗಿ, ಯಾರೊಬ್ಬಾಮನೇ ನಾನು ನಿನ್ನ ಮನೆತನದ ಮೇಲೆ ಕಷ್ಟ ತರ್ತೀನಿ. ಇಸ್ರಾಯೇಲಿನ ನಿಸ್ಸಹಾಯಕರನ್ನ, ಬಲಹೀನರನ್ನ ಸೇರಿಸಿ ನಿನ್ನ ಮನೆಯಲ್ಲಿರೋ ಎಲ್ಲ ಗಂಡಸ್ರನ್ನ ನಾನು ನಾಶ ಮಾಡ್ತೀನಿ.+ ಹೇಗೆ ಒಬ್ಬ ವ್ಯಕ್ತಿ ಸಗಣಿ ಹೋಗೋ ತನಕ ಸರಿಯಾಗಿ ತೊಳಿತಾನೋ ಅದೇ ತರ ನಾನು ನಿನ್ನ ಮನೆತನವನ್ನ ತೊಳೆದುಬಿಡ್ತೀನಿ! 11  ಯಾರೊಬ್ಬಾಮನೇ, ನಿನ್ನವರು ಯಾರಾದ್ರೂ ಪಟ್ಟಣದಲ್ಲಿ ಸತ್ರೆ ಅವ್ರನ್ನ ನಾಯಿಗಳು ತಿನ್ನುತ್ತೆ. ಯಾರಾದ್ರೂ ಹೊಲದಲ್ಲಿ ಸತ್ರೆ ಅವ್ರನ್ನ ಪಕ್ಷಿಗಳು ತಿನ್ನುತ್ತೆ. ಯಾಕಂದ್ರೆ ಈ ಮಾತನ್ನ ಹೇಳ್ತಿರೋದು ಯೆಹೋವ.’” 12  ಈಗ ಎದ್ದು ಮನೆಗೆ ಹೋಗು, ನೀನು ಪಟ್ಟಣಕ್ಕೆ ಕಾಲು ಇಟ್ಟ ತಕ್ಷಣ ನಿನ್ನ ಮಗ ಸತ್ತುಹೋಗ್ತಾನೆ. 13  ಎಲ್ಲ ಇಸ್ರಾಯೇಲ್ಯರು ಅವನಿಗಾಗಿ ಗೋಳಾಡಿ ಅವನನ್ನ ಸಮಾಧಿ ಮಾಡ್ತಾರೆ. ಯಾರೊಬ್ಬಾಮನ ಕುಟುಂಬದಲ್ಲಿ ಅವನಿಗೆ ಮಾತ್ರ ಸಮಾಧಿ ಮಾಡಲಾಗುತ್ತೆ. ಯಾಕಂದ್ರೆ ಯಾರೊಬ್ಬಾಮನ ಮನೆತನದಲ್ಲಿ ಅವನೊಬ್ಬನಲ್ಲೇ ಯೆಹೋವ ಏನೋ ಒಳ್ಳೇದನ್ನ ನೋಡಿದ್ದಾನೆ. 14  ಯೆಹೋವನೇ ಒಬ್ಬ ರಾಜನನ್ನ ಆರಿಸಿ ಅವನನ್ನ ಇಸ್ರಾಯೇಲ್ಯರ ಮೇಲೆ ನೇಮಿಸ್ತಾನೆ. ಸಮಯ ಬಂದಾಗ ಅವನು ಯಾರೊಬ್ಬಾಮನ ಮನೆತನವನ್ನ ನಿರ್ನಾಮ ಮಾಡ್ತಾನೆ.+ ಆತನು ಬಯಸಿದ್ರೆ ಅದನ್ನ ಈಗ್ಲೇ ಮಾಡಬಹುದು. 15  ಇಸ್ರಾಯೇಲ್ಯರು ತಮಗಾಗಿ ಪೂಜಾಕಂಬಗಳನ್ನ*+ ಮಾಡ್ಕೊಂಡು ಯೆಹೋವನಿಗೆ ಕೋಪ ಬರಿಸಿದ್ರು. ಹಾಗಾಗಿ ಯೆಹೋವ ಇಸ್ರಾಯೇಲ್ಯರನ್ನ ಸಂಹರಿಸ್ತಾನೆ. ಅವರು ನೀರಲ್ಲಿ ತೇಲಿಹೋಗೋ ಹುಲ್ಲಿನ ತರ ಆಗ್ತಾರೆ. ಆತನು ಅವ್ರ ಪೂರ್ವಜರಿಗೆ ಕೊಟ್ಟ ಈ ಒಳ್ಳೇ ದೇಶದಿಂದ ಇಸ್ರಾಯೇಲ್ಯರನ್ನ ಬೇರು ಸಮೇತ ಕಿತ್ತುಹಾಕಿ+ ಯೂಫ್ರೆಟಿಸ್‌ ನದಿಯ ಆಚೆ ಚೆಲ್ಲಾಪಿಲ್ಲಿ ಮಾಡಿಬಿಡ್ತಾನೆ.+ 16  ಯಾರೊಬ್ಬಾಮ ಮಾಡಿದ ಪಾಪದಿಂದಾಗಿ ಮತ್ತು ಅವನು ಇಸ್ರಾಯೇಲ್ಯರಿಂದ ಮಾಡಿಸಿದ ಪಾಪಗಳಿಂದಾಗಿ+ ದೇವರು ಇಸ್ರಾಯೇಲ್ಯರನ್ನ ಕೈಬಿಟ್ಟಿದ್ದಾನೆ.” 17  ಇದನ್ನ ಕೇಳಿಸ್ಕೊಂಡ ಮೇಲೆ ಯಾರೊಬ್ಬಾಮನ ಹೆಂಡತಿ ತಿರ್ಚಾಗೆ ವಾಪಸ್‌ ಹೋದಳು. ಅವಳು ಮನೆ ಹೊಸ್ತಿಲಿನ ಹತ್ರ ಬಂದ ತಕ್ಷಣ ಅವಳ ಮಗ ಸತ್ತುಹೋದ. 18  ಪ್ರವಾದಿ ಅಹೀಯನ ಮೂಲಕ ಯೆಹೋವ ಹೇಳಿದ ತರಾನೇ ಇಸ್ರಾಯೇಲ್ಯರು ಅವನನ್ನ ಸಮಾಧಿ ಮಾಡಿ ಅವನಿಗಾಗಿ ಗೋಳಾಡಿದ್ರು. 19  ಯಾರೊಬ್ಬಾಮನ ಉಳಿದ ಜೀವನಚರಿತ್ರೆ ಬಗ್ಗೆ, ಅವನು ಹೇಗೆ ಯುದ್ಧ ಮಾಡಿದ,+ ಹೇಗೆ ರಾಜ್ಯ ಆಳಿದ ಅನ್ನೊದ್ರ ಬಗ್ಗೆ ಇಸ್ರಾಯೇಲ್‌ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಬರೆಯಲಾಗಿದೆ. 20  ಯಾರೊಬ್ಬಾಮ 22 ವರ್ಷ ಆಳಿದ. ಅವನು ಸತ್ತುಹೋದ+ ಮೇಲೆ ಅವನ ಮಗ ನಾದಾಬ ರಾಜನಾದ.+ 21  ಆ ಸಮಯದಲ್ಲಿ ಸೊಲೊಮೋನನ ಮಗ ರೆಹಬ್ಬಾಮ ಯೆಹೂದದ ರಾಜನಾಗಿದ್ದ. ಅವನು ರಾಜ ಆದಾಗ ಅವನಿಗೆ 41 ವರ್ಷ. ಯೆಹೋವ ಇಸ್ರಾಯೇಲಿನಲ್ಲಿ ತನ್ನ ಹೆಸ್ರಿಗಾಗಿ+ ಆರಿಸ್ಕೊಂಡ ಪಟ್ಟಣದಲ್ಲಿ ಅಂದ್ರೆ ಯೆರೂಸಲೇಮಲ್ಲಿ+ ಅವನು 17 ವರ್ಷ ಆಳಿದ. ಅಮ್ಮೋನಿಯಳಾದ+ ನಯಮಾ ರೆಹಬ್ಬಾಮನ ಅಮ್ಮ. 22  ಯೆಹೂದದ ಜನ್ರು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡ್ತಿದ್ರು.+ ಅವರು ತಮ್ಮ ಪೂರ್ವಜರಿಗಿಂತ ತುಂಬ ಪಾಪ ಮಾಡಿ ಅವ್ರಿಗಿಂತ ಜಾಸ್ತಿ ದೇವರನ್ನ ರೇಗಿಸಿದ್ರು.+ 23  ಅವರು ಪ್ರತಿಯೊಂದು ಬೆಟ್ಟಗುಡ್ಡಗಳಲ್ಲೂ+ ಚೆನ್ನಾಗಿ ಬೆಳೆದಿರೋ ಎಲ್ಲ ಮರದ ಕೆಳಗೂ+ ದೇವಸ್ಥಾನಗಳನ್ನ, ಪೂಜಾಕಂಬಗಳನ್ನ,*+ ವಿಗ್ರಹಸ್ತಂಭಗಳನ್ನ ಕಟ್ತಾ ಇದ್ರು. 24  ದೇವಸ್ಥಾನದಲ್ಲಿ ಇದ್ಕೊಂಡು ಲೈಂಗಿಕ ಅನೈತಿಕತೆ* ಮಾಡ್ತಿದ್ದ ಗಂಡಸರೂ ದೇಶದಲ್ಲಿದ್ರು.+ ಯೆಹೋವ ಇಸ್ರಾಯೇಲ್ಯರ ಮುಂದಿಂದ ಓಡಿಸಿಬಿಟ್ಟ ಜನಾಂಗಗಳು ಮಾಡಿದ ಎಲ್ಲ ಅಸಹ್ಯ ಕೆಲಸಗಳನ್ನ ಅವರು ಮಾಡ್ತಿದ್ದರು. 25  ರಾಜ ರೆಹಬ್ಬಾಮನ ಐದನೇ ವರ್ಷದ ಆಳ್ವಿಕೆಯಲ್ಲಿ ಈಜಿಪ್ಟಿನ ರಾಜ ಶೀಶಕ+ ಯೆರೂಸಲೇಮಿನ ವಿರುದ್ಧ ಬಂದ.+ 26  ಅವನು ಯೆಹೋವನ ಆಲಯದಲ್ಲಿದ್ದ ಮತ್ತು ರಾಜನ ಅರಮನೆಯಲ್ಲಿದ್ದ ನಿಕ್ಷೇಪಗಳನ್ನ ತಗೊಂಡ.+ ಅಷ್ಟೇ ಅಲ್ಲ ಸೊಲೊಮೋನ ಮಾಡಿಸಿದ್ದ ಚಿನ್ನದ ಗುರಾಣಿಗಳ ಸಮೇತ ಎಲ್ಲವನ್ನೂ ತಗೊಂಡು ಹೋದ.+ 27  ಹಾಗಾಗಿ ರಾಜ ರೆಹಬ್ಬಾಮ ಚಿನ್ನದ ಗುರಾಣಿಗಳ ಬದ್ಲು ತಾಮ್ರದ ಗುರಾಣಿಗಳನ್ನ ಮಾಡಿಸಿದ. ಅವುಗಳನ್ನ ಅರಮನೆಯ ಬಾಗಿಲು ಕಾಯುವವರ ಮುಖ್ಯಸ್ಥರಿಗೆ ಕೊಟ್ಟ. 28  ರಾಜ ಯೆಹೋವನ ಆಲಯಕ್ಕೆ ಬಂದಾಗೆಲ್ಲ ಆ ಬಾಗಿಲು ಕಾಯುವವರು ಗುರಾಣಿಗಳನ್ನ ತಗೊಂಡು ಅವನ ಜೊತೆ ಹೋಗ್ತಿದ್ರು. ಆಮೇಲೆ ಅವರು ಅವುಗಳನ್ನ ಬಾಗಿಲು ಕಾಯುವವರ ಕೋಣೆಯಲ್ಲಿ ಇಡ್ತಿದ್ರು. 29  ರೆಹಬ್ಬಾಮನ ಉಳಿದ ಜೀವನಚರಿತ್ರೆ ಮತ್ತು ಅವನು ಮಾಡಿದ ಎಲ್ಲ ಕೆಲಸಗಳ ಬಗ್ಗೆ ಯೆಹೂದದ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಇದೆ.+ 30  ರೆಹಬ್ಬಾಮ ಮತ್ತು ಯಾರೊಬ್ಬಾಮನ ಮಧ್ಯ ಯಾವಾಗ್ಲೂ ಯುದ್ಧ ನಡೀತಿತ್ತು.+ 31  ಆಮೇಲೆ ರೆಹಬ್ಬಾಮ ಸತ್ತುಹೋದ. ಅವನನ್ನ ದಾವೀದಪಟ್ಟಣದಲ್ಲಿ ಸಮಾಧಿ ಮಾಡಿದ್ರು.+ ರೆಹಬ್ಬಾಮನ ಅಮ್ಮ ನಯಮಾ ಅಮ್ಮೋನಿಯಳಾಗಿದ್ದಳು.+ ಅವನ ನಂತ್ರ ಅವನ ಮಗ ಅಬೀಯಾಮ*+ ರಾಜನಾದ.

ಪಾದಟಿಪ್ಪಣಿ

ಅಕ್ಷ. “ದೇವಸ್ಥಾನದಲ್ಲಿ ಬೇರೆ ಗಂಡಸರ ಜೊತೆ ಅನೈತಿಕತೆ ಮಾಡ್ತಿದ್ದ ಗಂಡಸರು.”
ಅಬೀಯ ಅಂತಾನೂ ಕರೀತಿದ್ರು.