ಒಂದನೇ ಅರಸು 2:1-46

  • ದಾವೀದ ಸೊಲೊಮೋನನಿಗೆ ನಿರ್ದೇಶನ ಕೊಟ್ಟ (1-9)

  • ದಾವೀದನ ಸಾವು, ಸೊಲೊಮೋನ ರಾಜನಾದ (10-12)

  • ಅದೋನೀಯನ ಸಂಚು ಮತ್ತು ಸಾವು (13-25)

  • ಎಬ್ಯಾತಾರನನ್ನ ಹೊರಹಾಕಲಾಯ್ತು, ಯೋವಾಬನನ್ನ ಕೊಲ್ಲಲಾಯ್ತು (26-35)

  • ಶಿಮ್ಮಿಯ ಸಾವು (36-46)

2  ದಾವೀದ ಇನ್ನೇನು ತೀರಿಹೋಗಬೇಕು ಅನ್ನುವಾಗ ಅವನು ತನ್ನ ಮಗ ಸೊಲೊಮೋನನಿಗೆ ಈ ನಿರ್ದೇಶನಗಳನ್ನ ಕೊಟ್ಟ:  “ನಾನು ಇನ್ನು ಜಾಸ್ತಿ ದಿನ ಬದುಕಿರಲ್ಲ. ನೀನು ಧೈರ್ಯವಾಗಿರು,+ ಭಯಪಡಬೇಡ.+  ಯಾವಾಗ್ಲೂ ಯೆಹೋವ ಹೇಳಿದ ತರಾನೇ ನಡೀತಾ ಮೋಶೆಯ ನಿಯಮ ಪುಸ್ತಕದಲ್ಲಿ ಆತನು ಕೊಟ್ಟಿರೋ ಆಜ್ಞೆಗಳನ್ನ, ನಿಯಮಗಳನ್ನ, ತೀರ್ಪುಗಳನ್ನ ಪಾಲಿಸು. ಅದ್ರಲ್ಲಿರೋ ಎಚ್ಚರಿಕೆಗಳನ್ನ ಅಸಡ್ಡೆ ಮಾಡಬೇಡ.+ ಆಗ ನೀನು ಏನೇ ಮಾಡಿದ್ರೂ ಎಲ್ಲೇ ಹೋದ್ರೂ ಯಶಸ್ಸು ಪಡಿತೀಯ.*  ಅಷ್ಟೇ ಅಲ್ಲ ಯೆಹೋವ ನನಗೆ ‘ಒಂದುವೇಳೆ ನಿನ್ನ ಮಕ್ಕಳು ಪೂರ್ಣ ಹೃದಯದಿಂದ ಪೂರ್ಣ ಪ್ರಾಣದಿಂದ+ ನಾನು ಹೇಳಿದ್ದನ್ನ ಮಾಡಿ ಒಳ್ಳೇ ರೀತಿ ನಡ್ಕೊಂಡ್ರೆ ಇಸ್ರಾಯೇಲಿನ ಸಿಂಹಾಸನದ ಮೇಲೆ ಕೂತ್ಕೊಳ್ಳೋಕೆ ನಿನ್ನ ವಂಶದವರಲ್ಲಿ ಯಾವಾಗ್ಲೂ ಒಬ್ಬ ಇದ್ದೇ ಇರ್ತಾನೆ’+ ಅಂತ ಮಾತು ಕೊಟ್ಟಿದ್ದನು. ಆತನು ಆ ಮಾತನ್ನ ಉಳಿಸ್ಕೊಳ್ತಾನೆ.  ಚೆರೂಯಳ ಮಗ ಯೋವಾಬ ನನಗೆ ಏನು ಮಾಡಿದ ಅಂತ ನಿನಗೆ ಚೆನ್ನಾಗಿ ಗೊತ್ತು. ಅವನು ಇಸ್ರಾಯೇಲಿನ ಇಬ್ರು ಸೇನಾಪತಿಗಳಾದ ನೇರನ ಮಗ ಅಬ್ನೇರನನ್ನ,+ ಯೆತೆರನ ಮಗ ಅಮಾಸನನ್ನ+ ಕೊಂದುಹಾಕಿದ. ಅವನು ಅವರ ರಕ್ತ ಸುರಿಸಿದ್ದು+ ಯುದ್ಧದಲ್ಲಿ ಅಲ್ಲ, ಶಾಂತಿಯ ಸಮಯದಲ್ಲಿ. ಹೀಗೆ ಅವನು ತನ್ನ ಸೊಂಟಪಟ್ಟಿ ಮತ್ತು ಚಪ್ಪಲಿಗೆ ರಕ್ತದ ಕಲೆ ಮಾಡ್ಕೊಂಡ.  ನೀನು ನಿನ್ನ ಬುದ್ಧಿ ಬಳಸಿ, ಎಲ್ರಿಗೂ ಬರೋ ಒಳ್ಳೇ ಸಾವು ಅವನಿಗೆ ಬರದೆ ಇರೋ ತರ ನೋಡ್ಕೊ.*+  ಆದ್ರೆ ಗಿಲ್ಯಾದ್ಯನಾದ ಬರ್ಜಿಲೈ+ ವಂಶದವ್ರಿಗೆ ನೀನು ಶಾಶ್ವತ ಪ್ರೀತಿ ತೋರಿಸಬೇಕು. ಅವರು ನಿನ್ನ ಮೇಜಲ್ಲಿ ನಿನ್ನ ಜೊತೆ ಊಟ ಮಾಡಬೇಕು. ಯಾಕಂದ್ರೆ ನಿನ್ನ ಅಣ್ಣ ಅಬ್ಷಾಲೋಮನಿಂದ ನಾನು ತಪ್ಪಿಸ್ಕೊಂಡು ಓಡಿಹೋಗಿದ್ದಾಗ+ ಅವರು ನನ್ನ ಜೊತೆ ಇದ್ದು ನನಗೆ ಸಹಾಯ ಮಾಡಿದ್ರು.+  ನಿನ್ನ ಹತ್ರ ವಾಸಿಸ್ತಿರೋ ಬೆನ್ಯಾಮೀನ್‌ ಕುಲದ ಗೇರನ ಮಗ ಶಿಮ್ಮಿನ ಸುಮ್ಮನೆ ಬಿಡಬೇಡ. ನಾನು ಮಹನಯಿಮಿಗೆ+ ಹೋಗ್ತಿದ್ದಾಗ ಅವನು ನನ್ನನ್ನ ಕೆಟ್ಟಕೆಟ್ಟದಾಗಿ ಬೈದ.+ ಆದ್ರೆ ಆಮೇಲೆ ನನ್ನನ್ನ ಭೇಟಿಯಾಗೋಕೆ ಯೋರ್ದನ್‌ ನದಿ ಹತ್ರ ಬಂದಿದ್ದ. ಆಗ ನಾನು ಯೆಹೋವನ ಮೇಲೆ ಆಣೆ ಇಟ್ಟು ‘ನಿನ್ನನ್ನ ನಾನು ಕತ್ತಿಯಿಂದ ಕೊಲ್ಲಲ್ಲ’+ ಅಂತ ಅವನಿಗೆ ಮಾತುಕೊಟ್ಟಿದ್ದೆ.  ಆದ್ರೆ ನೀನು ಅವನನ್ನ ಸುಮ್ಮನೆ ಬಿಡಬೇಡ.+ ನೀನು ಬುದ್ಧಿವಂತ, ಅವನಿಗೆ ಏನು ಮಾಡಬೇಕು ಅಂತ ನಿನಗೆ ಚೆನ್ನಾಗಿ ಗೊತ್ತು. ಅವನು ವಯಸ್ಸಾದಾಗ ನೆಮ್ಮದಿಯಿಂದ ಸಮಾಧಿ ಸೇರದೆ ಇರೋ ತರ ನೀನು ಅವನಿಗೆ ಮರಣ ಶಿಕ್ಷೆ ಕೊಡಬೇಕು.”*+ 10  ಇದಾದ ಮೇಲೆ ದಾವೀದ ತೀರಿಹೋದ. ಅವನನ್ನ ದಾವೀದಪಟ್ಟಣದಲ್ಲಿ+ ಸಮಾಧಿ ಮಾಡಿದ್ರು. 11  ದಾವೀದ ಇಸ್ರಾಯೇಲನ್ನ 40 ವರ್ಷ ಆಳಿದ. ಹೆಬ್ರೋನಲ್ಲಿ+ 7 ವರ್ಷ, ಯೆರೂಸಲೇಮಲ್ಲಿ 33 ವರ್ಷ.+ 12  ಆಮೇಲೆ ಸೊಲೊಮೋನ ರಾಜನಾಗಿ ಅಧಿಕಾರ ಪಡ್ಕೊಂಡ. ಅವನ ಆಳ್ವಿಕೆ ದಿನದಿಂದ ದಿನಕ್ಕೆ ಬಲವಾಗ್ತಾ ಹೋಯ್ತು.+ 13  ಸ್ವಲ್ಪ ಸಮಯ ಆದ್ಮೇಲೆ ಹಗ್ಗೀತಳ ಮಗ ಅದೋನೀಯ ಬತ್ಷೆಬೆ ಹತ್ರ ಬಂದ. ಅವಳು ಅವನನ್ನ “ನೀನು ಒಳ್ಳೇ ಉದ್ದೇಶದಿಂದಾನೇ ಬಂದಿದ್ದೀಯಾ?” ಅಂತ ಕೇಳಿದಳು. ಅದಕ್ಕೆ ಅವನು “ಹೌದು” ಅಂದ. 14  ಆಮೇಲೆ “ನಾನು ನಿನಗೆ ಏನೋ ಹೇಳಬೇಕು” ಅಂದ. ಅದಕ್ಕೆ ಅವಳು “ಹೇಳು” ಅಂದಳು. 15  ಆಗ ಅವನು “ನಾನೇ ರಾಜ ಆಗಬೇಕಿತ್ತು ಅಂತ ನಿನಗೆ ಚೆನ್ನಾಗಿ ಗೊತ್ತು. ಅಷ್ಟೇ ಅಲ್ಲ ಎಲ್ಲ ಇಸ್ರಾಯೇಲ್ಯರು ನಾನೇ ರಾಜ ಆಗ್ತೀನಿ ಅಂತ ಕಾಯ್ತಾ ಇದ್ರು.+ ಆದ್ರೆ ಆ ಸಿಂಹಾಸನ ನನಗೆ ಸಿಗದೆ ನನ್ನ ಸಹೋದರನ ಪಾಲಾಯ್ತು. ಯಾಕಂದ್ರೆ ಅವನು ರಾಜ ಆಗಬೇಕು ಅನ್ನೋದು ಯೆಹೋವನ ಇಷ್ಟ ಆಗಿತ್ತು.+ 16  ಆದ್ರೆ ಈಗ ನಂದು ಒಂದೇ ಒಂದು ಬೇಡಿಕೆ ಇದೆ. ಅದನ್ನ ಬೇಡ ಅನ್ನಬೇಡ” ಅಂದ. ಅದಕ್ಕೆ ಅವಳು “ಹೇಳು, ನಿನ್ನ ಬೇಡಿಕೆ ಏನು?” ಅಂದಳು. 17  ಆಗ ಅವನು “ದಯವಿಟ್ಟು ಶೂನೇಮ್ಯಳಾದ ಅಬೀಷಗನ್ನ+ ನನಗೆ ಮದುವೆ ಮಾಡಿ ಕೊಡೋಕೆ ರಾಜ ಸೊಲೊಮೋನನಿಗೆ ಹೇಳು. ಯಾಕಂದ್ರೆ ನೀನು ಹೇಳಿದ್ರೆ ಅವನು ಕೇಳ್ತಾನೆ” ಅಂದ. 18  ಅದಕ್ಕೆ ಬತ್ಷೆಬೆ “ಸರಿ. ನಿನ್ನ ಪರವಾಗಿ ನಾನು ರಾಜನ ಹತ್ರ ಮಾತಾಡ್ತೀನಿ” ಅಂದಳು. 19  ಹಾಗಾಗಿ ಬತ್ಷೆಬೆ ಅದೋನೀಯನ ಪರವಾಗಿ ಮಾತಾಡೋಕೆ ರಾಜ ಸೊಲೊಮೋನನ ಹತ್ರ ಹೋದಳು. ಅವಳು ರಾಜನ ಮುಂದೆ ಬಂದಾಗ ರಾಜ ತನ್ನ ಸಿಂಹಾಸನದಿಂದ ಎದ್ದು ಬಗ್ಗಿ ನಮಸ್ಕಾರ ಮಾಡಿದ. ಆಮೇಲೆ ಅವನು ಸಿಂಹಾಸನದಲ್ಲಿ ಕೂತು ರಾಜಮಾತೆಗಾಗಿ ಬಲಗಡೆ ಇನ್ನೊಂದು ಆಸನ ಹಾಕಿಸಿದ. 20  ಆಗ ಅವಳು “ನಾನು ಒಂದು ವಿಷ್ಯ ಕೇಳ್ತೀನಿ. ದಯವಿಟ್ಟು ಅದನ್ನ ಬೇಡ ಅನ್ನಬೇಡ” ಅಂದಳು. ಅದಕ್ಕೆ ರಾಜ “ಅಮ್ಮ, ನೀನು ಏನು ಬೇಕಾದ್ರೂ ಕೇಳು. ನಾನು ಅದನ್ನ ಬೇಡ ಅನ್ನಲ್ಲ” ಅಂದ. 21  ಆಗ ಅವಳು “ಶೂನೇಮ್ಯಳಾದ ಅಬೀಷಗನ್ನ ನಿನ್ನ ಸಹೋದರ ಅದೋನೀಯಗೆ ಮದುವೆ ಮಾಡಿಕೊಡು” ಅಂದಳು. 22  ಅದಕ್ಕೆ ರಾಜ ಸೊಲೊಮೋನ “ಶೂನೇಮ್ಯಳಾದ ಅಬೀಷಗನ್ನ ಮಾತ್ರ ಯಾಕೆ ಕೇಳ್ತಿದ್ದೀಯ, ಅದೋನೀಯನಿಗಾಗಿ ನನ್ನ ಸಿಂಹಾಸನವನ್ನೂ ಕೇಳಿಬಿಡು.+ ಹೇಗಿದ್ರೂ ಅವನು ನನ್ನ ಅಣ್ಣ.+ ಅಷ್ಟೇ ಅಲ್ಲ ಅವನಿಗೆ ಪುರೋಹಿತ ಎಬ್ಯಾತಾರ ಮತ್ತು ಚೆರೂಯಳ+ ಮಗ ಯೋವಾಬನ+ ಸಹಕಾರ ಇದೆ” ಅಂತ ಹೇಳಿದ. 23  ಹೀಗೆ ಹೇಳಿದ ಮೇಲೆ ರಾಜ ಸೊಲೊಮೋನ ಯೆಹೋವನ ಮೇಲೆ ಆಣೆ ಮಾಡಿ “ಅದೋನೀಯ ಈ ತರ ಕೇಳಿ ತಪ್ಪು ಮಾಡಿದಕ್ಕೆ ತನ್ನ ಪ್ರಾಣಾನೇ ಕೊಡಬೇಕು. ಒಂದುವೇಳೆ ನಾನು ಅವನನ್ನ ಸಾಯಿಸಲಿಲ್ಲ ಅಂದ್ರೆ ದೇವರು ನನಗೆ ದೊಡ್ಡ ಶಿಕ್ಷೆ ಕೊಡಲಿ. 24  ಕೊಟ್ಟ ಮಾತಿನ ಹಾಗೆ ನನ್ನನ್ನ ಅಪ್ಪ ದಾವೀದನ ಸಿಂಹಾಸನದ ಮೇಲೆ ಕೂರಿಸಿ ನನ್ನ ಆಳ್ವಿಕೆನ ಬಲಪಡಿಸಿ+ ನನಗಾಗಿ, ನನ್ನ ಸಂತಾನಕ್ಕಾಗಿ ಈ ರಾಜ್ಯ ಕೊಟ್ಟ+ ಜೀವ ಇರೋ ಯೆಹೋವನ ಆಣೆ, ಅದೋನೀಯ ಇವತ್ತು ಸತ್ತೇ ಸಾಯ್ತಾನೆ”+ ಅಂದ. 25  ಹೀಗೆ ಹೇಳಿದ ತಕ್ಷಣ ರಾಜ ಸೊಲೊಮೋನ ಯೆಹೋಯಾದನ ಮಗ ಬೆನಾಯನನ್ನ+ ಕಳಿಸಿದ. ಅವನು ಹೋಗಿ ಅದೋನೀಯನನ್ನ ಹೊಡೆದು ಕೊಂದುಹಾಕಿದ. 26  ರಾಜ ಸೊಲೊಮೋನ ಪುರೋಹಿತ ಎಬ್ಯಾತಾರನಿಗೆ+ “ಅನಾತೋತಿನಲ್ಲಿರೋ+ ನಿನ್ನ ಹೊಲಗಳಿಗೆ ಹೋಗು! ನಿನಗೆ ಮರಣ ಶಿಕ್ಷೆ ಆಗಬೇಕಿತ್ತು. ಆದ್ರೆ ಇವತ್ತು ನಾನು ನಿನ್ನನ್ನ ಕೊಲ್ಲಲ್ಲ. ಯಾಕಂದ್ರೆ ನೀನು ನನ್ನ ಅಪ್ಪ ದಾವೀದನ ಜೊತೆ ಇದ್ದು ವಿಶ್ವದ ರಾಜ ಯೆಹೋವನ ಮಂಜೂಷನ ಹೊತ್ಕೊಂಡಿದ್ದೆ.+ ಅಷ್ಟೇ ಅಲ್ಲ ನೀನು ನನ್ನ ಅಪ್ಪ ಅನುಭವಿಸಿದ ಎಲ್ಲ ಕಷ್ಟಗಳನ್ನ ಹಂಚ್ಕೊಂಡಿದ್ದೆ”+ ಅಂದ. 27  ಆಮೇಲೆ ರಾಜ ಸೊಲೊಮೋನ ಯೆಹೋವನ ಪುರೋಹಿತನಾಗಿ ಸೇವೆ ಮಾಡ್ತಿದ್ದ ಎಬ್ಯಾತಾರನನ್ನ ಓಡಿಸಿಬಿಟ್ಟ. ಹೀಗೆ ಮಾಡಿ ಶೀಲೋನಲ್ಲಿದ್ದ+ ಏಲಿಯ+ ಮನೆತನದ ಬಗ್ಗೆ ಯೆಹೋವ ಹೇಳಿದ ಮಾತನ್ನ ನಿಜ ಮಾಡಿದ. 28  ಈ ಎಲ್ಲ ವಿಷ್ಯ ಯೋವಾಬನ ಕಿವಿಗೆ ಬಿದ್ದಾಗ ಅವನು ಯೆಹೋವನ ಡೇರೆಗೆ ಓಡಿ ಹೋಗಿ+ ಯಜ್ಞವೇದಿಯ ಕೊಂಬುಗಳನ್ನ ಹಿಡ್ಕೊಂಡ. ಯೋವಾಬ ಅಬ್ಷಾಲೋಮನ+ ಬದ್ಲು ಅದೋನೀಯಗೆ ಸಹಕಾರ ಕೊಟ್ಟಿದ್ದ.+ 29  ರಾಜನಾದ ಸೊಲೊಮೋನನಿಗೆ “ಯೋವಾಬ ಯೆಹೋವನ ಡೇರೆಗೆ ಓಡಿಹೋಗಿ ಯಜ್ಞವೇದಿ ಹತ್ರ ನಿಂತಿದ್ದಾನೆ” ಅಂತ ಹೇಳಿದ್ರು. ಆಗ ಸೊಲೊಮೋನ ಯೆಹೋಯಾದನ ಮಗ ಬೆನಾಯನಿಗೆ “ಹೋಗು, ಅವನನ್ನ ಕೊಲ್ಲು” ಅಂತ ಆಜ್ಞೆ ಕೊಟ್ಟ. 30  ಆಗ ಬೆನಾಯ ಯೆಹೋವನ ಡೇರೆಗೆ ಬಂದು ಯೋವಾಬನಿಗೆ “ಇದು ರಾಜನ ಆಜ್ಞೆ ‘ಹೊರಗೆ ಬಾ’” ಅಂದ. ಆಗ ಅವನು “ನಾನು ಬರಲ್ಲ! ಇಲ್ಲೇ ಸಾಯ್ತೀನಿ” ಅಂದ. ಆಗ ಬೆನಾಯ ರಾಜನ ಹತ್ರ ಬಂದು ಯೋವಾಬ ಹೇಳಿದ್ದನ್ನ ಹೇಳಿದ. 31  ಆಗ ರಾಜ “ಸರಿ, ಅವನು ಹೇಳಿದ ತರಾನೇ ಮಾಡು. ಅವನನ್ನ ಅಲ್ಲೇ ಸಾಯಿಸು. ಅವನ ಶವ ತಗೊಂಡು ಹೋಗಿ ಹೂತುಹಾಕು. ಅವನು ನಿರಪರಾಧಿಗಳ ರಕ್ತ ಸುರಿಸಿ ನನ್ನ ಮತ್ತು ನನ್ನ ಅಪ್ಪನ ಮನೆ ಮೇಲೆ ಹಾಕಿರೋ ಆರೋಪವನ್ನ ದೂರಮಾಡು.+ 32  ಯೆಹೋವ ಅವನ ರಕ್ತಾಪರಾಧವನ್ನ ಅವನ ತಲೆ ಮೇಲೆನೇ ತರಲಿ. ಯಾಕಂದ್ರೆ ಅವನು ನನ್ನ ಅಪ್ಪ ದಾವೀದನಿಗೆ ಗೊತ್ತಾಗದ ಹಾಗೆ ಇಸ್ರಾಯೇಲಿನ ಸೇನಾಪತಿ+ ನೇರನ ಮಗ ಅಬ್ನೇರನನ್ನ+ ಮತ್ತು ಯೆಹೂದದ ಸೇನಾಪತಿ+ ಯೆತೆರನ ಮಗ ಅಮಾಸನನ್ನ+ ಕತ್ತಿಯಿಂದ ಕೊಂದ. ಅವರಿಬ್ರೂ ಅವನಿಗಿಂತ ನೀತಿವಂತರಾಗಿದ್ರು, ಒಳ್ಳೆಯವರಾಗಿದ್ರು. 33  ಅವರಿಬ್ರನ್ನ ಕೊಂದ ರಕ್ತಾಪರಾಧ ಯೋವಾಬ ಮತ್ತು ಅವನ ವಂಶದವ್ರ ಮೇಲೆ ಶಾಶ್ವತವಾಗಿ ಇರಲಿ.+ ಆದ್ರೆ ದಾವೀದ ಮತ್ತು ಅವನ ವಂಶ, ಅವನ ಮನೆತನ ಮತ್ತು ಸಿಂಹಾಸನದ ಮೇಲೆ ಯೆಹೋವನಿಂದ ಬರೋ ಶಾಂತಿ ಶಾಶ್ವತವಾಗಿ ಇರಲಿ” ಅಂದ. 34  ಆಮೇಲೆ ಯೆಹೋಯಾದನ ಮಗ ಬೆನಾಯ ಹೋಗಿ ಯೋವಾಬನನ್ನ ಕೊಂದ. ಅವನನ್ನ ಕಾಡಲ್ಲಿದ್ದ ಅವನ ಮನೆ ಹತ್ರ ಹೂಣಿಟ್ಟ. 35  ಆಮೇಲೆ ರಾಜನು ಯೆಹೋಯಾದನ ಮಗ ಬೆನಾಯನನ್ನ+ ಯೋವಾಬನ ಸ್ಥಾನದಲ್ಲಿ ಸೇನಾಪತಿಯಾಗಿ ಮಾಡಿದ. ಚಾದೋಕನನ್ನ+ ಎಬ್ಯಾತಾರನ ಸ್ಥಾನದಲ್ಲಿ ಪುರೋಹಿತನಾಗಿ ನೇಮಿಸಿದ. 36  ಆಮೇಲೆ ಶಿಮ್ಮಿಯನ್ನ+ ಕರೆಸಿ “ಯೆರೂಸಲೇಮಲ್ಲಿ ನೀನು ಒಂದು ಮನೆ ಕಟ್ಕೊಂಡು ಇಲ್ಲೇ ಇರು. ಈ ಪಟ್ಟಣ ಬಿಟ್ಟು ಬೇರೆ ಎಲ್ಲಿಗೂ ಹೋಗಬೇಡ. 37  ಯಾವ ದಿನ ನೀನು ಈ ಪಟ್ಟಣ ಬಿಟ್ಟು ಹೋಗ್ತಿಯೋ, ಕಿದ್ರೋನ್‌ ಕಣಿವೆಯನ್ನ+ ದಾಟ್ತಿಯೋ ಅದೇ ದಿನ ನೀನು ಸಾಯ್ತೀಯ. ನಿನ್ನನ್ನ ಕೊಂದ ರಕ್ತಾಪರಾಧ ನಿನ್ನ ತಲೆ ಮೇಲೆನೇ ಬರುತ್ತೆ” ಅಂದ. 38  ಅದಕ್ಕೆ ಶಿಮ್ಮಿ “ನನ್ನ ಒಡೆಯನೇ, ರಾಜನೇ, ನಿನ್ನ ತೀರ್ಮಾನ ಸರಿಯಾಗಿದೆ. ನೀನು ಹೇಳಿದ ತರಾನೇ ಮಾಡ್ತೀನಿ” ಅಂದ. ಹಾಗಾಗಿ ಶಿಮ್ಮಿ ಯೆರೂಸಲೇಮಲ್ಲೇ ತುಂಬ ದಿನ ಇದ್ದ. 39  ಆದ್ರೆ ಮೂರು ವರ್ಷದ ಕೊನೇಲಿ ಶಿಮ್ಮಿಯ ಇಬ್ರು ಸೇವಕರು ಮಾಕಾನ ಮಗ ಆಕೀಷನ ಹತ್ರ ಓಡಿಹೋದ್ರು.+ ಆಕೀಷ ಗತ್‌ ಊರಿನ ರಾಜ ಆಗಿದ್ದ. ಶಿಮ್ಮಿಗೆ ಅವನ ಸೇವಕರು ಗತ್‌ ಊರಲ್ಲಿದ್ದಾರೆ ಅಂತ ಸುದ್ದಿ ಸಿಕ್ಕಿದಾಗ, 40  ಅವನು ತಕ್ಷಣ ಕತ್ತೆ ಮೇಲೆ ಕೂತು ತನ್ನ ಸೇವಕರನ್ನ ಹುಡುಕ್ತಾ ಆಕೀಷನನ್ನ ನೋಡೋಕೆ ಗತ್‌ ಊರಿಗೆ ಹೋದ. ಶಿಮ್ಮಿ ತನ್ನ ಸೇವಕರ ಜೊತೆ ಗತ್‌ ಊರಿಂದ ವಾಪಾಸ್‌ ಬಂದಾಗ, 41  ಸೊಲೊಮೋನನಿಗೆ “ಶಿಮ್ಮಿ ಯೆರೂಸಲೇಮನ್ನ ಬಿಟ್ಟು ಗತ್‌ ಊರಿಗೆ ಹೋಗಿ ವಾಪಾಸ್‌ ಬಂದಿದ್ದಾನೆ” ಅಂತ ಹೇಳಿದ್ರು. 42  ಆಗ ಸೊಲೊಮೋನ ಶಿಮ್ಮಿಯನ್ನ ಕರೆಸಿ “ಯೆಹೋವನ ಮೇಲೆ ಆಣೆ ಮಾಡಿಸಿ ನಾನು ನಿನಗೆ ‘ಯಾವ ದಿನ ನೀನು ಈ ಪಟ್ಟಣ ಬಿಟ್ಟು ಹೋಗ್ತಿಯೋ ಅದೇ ದಿನ ಸಾಯ್ತೀಯ’ ಅಂತ ಎಚ್ಚರಿಕೆ ಕೊಟ್ಟಿರಲಿಲ್ವಾ? ಆಗ ನೀನು ‘ನಿನ್ನ ತೀರ್ಮಾನ ಸರಿಯಾಗಿದೆ. ನೀನು ಹೇಳಿದ ತರಾನೇ ಮಾಡ್ತೀನಿ’+ ಅಂತ ಹೇಳಿದ್ದೆ ತಾನೇ? 43  ಅಂದ್ಮೇಲೆ ಯೆಹೋವನ ಮೇಲೆ ನೀನು ಇಟ್ಟ ಆಣೆಯನ್ನ, ನಾನು ನಿನಗೆ ಕೊಟ್ಟ ಆಜ್ಞೆಯನ್ನ ಯಾಕೆ ಮುರಿದೆ?” ಅಂತ ಕೇಳಿದ. 44  ಆಮೇಲೆ ಶಿಮ್ಮಿಗೆ “ನೀನು ನನ್ನ ಅಪ್ಪ ದಾವೀದನಿಗೆ ಎಷ್ಟೆಲ್ಲ ಕೆಟ್ಟದ್ದು ಮಾಡಿದ್ದೀಯ ಅಂತ ನಿನಗೆ ಚೆನ್ನಾಗಿ ಗೊತ್ತು.+ ಈಗ ಯೆಹೋವ ಆ ನಿನ್ನ ಕೆಟ್ಟತನಕ್ಕೆ ಪ್ರತಿಫಲ ಕೊಡ್ತಾನೆ.+ 45  ಆದ್ರೆ ರಾಜ ಸೊಲೊಮೋನನಿಗೆ ಆಶೀರ್ವಾದ ಸಿಗುತ್ತೆ+ ಮತ್ತು ದಾವೀದನ ಸಿಂಹಾಸನ ಯೆಹೋವನ ಮುಂದೆ ಯಾವಾಗ್ಲೂ ಇರುತ್ತೆ” ಅಂದ. 46  ಆಮೇಲೆ ರಾಜನು ಯೆಹೋಯಾದನ ಮಗ ಬೆನಾಯಗೆ ಶಿಮ್ಮಿಯನ್ನ ಸಾಯಿಸೋಕೆ ಆಜ್ಞೆ ಕೊಟ್ಟ. ಬೆನಾಯ ಹೋಗಿ ಶಿಮ್ಮಿಯನ್ನ ಕೊಂದ.+ ಹೀಗೆ ಸೊಲೊಮೋನನ ಆಳ್ವಿಕೆ ಬಲಿಷ್ಠವಾಗಿ ಸ್ಥಿರವಾಯ್ತು.+

ಪಾದಟಿಪ್ಪಣಿ

ಅಥವಾ “ವಿವೇಕದಿಂದ ಕೆಲಸ ಮಾಡ್ತೀಯ.”
ಅಕ್ಷ. “ಅವನ ಮುದಿ ತಲೆ ನೆಮ್ಮದಿಯಾಗಿ ಸಮಾಧಿ ಸೇರೋಕೆ ಬಿಡಬೇಡ.”
ಅಕ್ಷ. “ಅವನ ಮುದಿತಲೆ ರಕ್ತಮಯವಾಗಿ ಸಮಾಧಿ ಸೇರಬೇಕು.”