ಒಂದನೇ ಅರಸು 20:1-43

  • ಅಹಾಬನ ವಿರುದ್ಧ ಅರಾಮ್ಯರ ಯುದ್ಧ (1-12)

  • ಅಹಾಬ ಅರಾಮ್ಯರನ್ನ ಸೋಲಿಸಿದ (13-34)

  • ಅಹಾಬನ ವಿರುದ್ಧ ಭವಿಷ್ಯವಾಣಿ (35-43)

20  ಅರಾಮ್ಯದ+ ರಾಜ ಬೆನ್ಹದದ್‌+ ತನ್ನ ಸೈನ್ಯವನ್ನ ಒಟ್ಟುಸೇರಿಸಿದ. ಅಷ್ಟೇ ಅಲ್ಲ, ಬೇರೆ 32 ರಾಜರನ್ನ ಮತ್ತು ಅವ್ರ ಕುದುರೆಗಳನ್ನ, ರಥಗಳನ್ನ ಒಟ್ಟುಸೇರಿಸಿದ. ಆಮೇಲೆ ಅವನು ಸಮಾರ್ಯದ ವಿರುದ್ಧ ಯುದ್ಧ ಮಾಡೋಕೆ ಅದಕ್ಕೆ ಮುತ್ತಿಗೆ ಹಾಕಿದ.+  ಅವನು ಪಟ್ಟಣದಲ್ಲಿದ್ದ ಇಸ್ರಾಯೇಲ್‌ ರಾಜ ಅಹಾಬನ+ ಹತ್ರ ಸಂದೇಶವಾಹಕರನ್ನ ಕಳಿಸಿದ. ಅವರು ಬಂದು ಅಹಾಬನಿಗೆ “ಬೆನ್ಹದದ್‌ ನಿನಗೆ,  ‘ನಿನ್ನ ಬೆಳ್ಳಿಬಂಗಾರ ನಂದು, ಅಷ್ಟೇ ಅಲ್ಲ ನಿನ್ನ ಹೆಂಡತಿಯರಲ್ಲಿ, ಗಂಡು ಮಕ್ಕಳಲ್ಲಿ ಯಾರು ಸುಂದರವಾಗಿ ಇದ್ದಾರೋ ಅವರು ನನ್ನವರು’ ಅಂತ ಹೇಳಿ ಕಳಿಸಿದ್ದಾನೆ” ಅಂದ್ರು.  ಅದಕ್ಕೆ ಇಸ್ರಾಯೇಲ್‌ ರಾಜ ಅವನಿಗೆ “ನನ್ನ ಒಡೆಯನೇ, ರಾಜನೇ, ನೀನು ಹೇಳಿದ ಹಾಗೆ ನಾನು ನಿನ್ನವನು ಮತ್ತು ನನಗೆ ಸೇರಿದ್ದೆಲ್ಲ ನಿಂದೇ”+ ಅಂತ ಉತ್ತರ ಕೊಟ್ಟ.  ಆಮೇಲೆ ಸಂದೇಶವಾಹಕರು ವಾಪಸ್‌ ಬಂದು ಅಹಾಬನಿಗೆ ಹೀಗಂದ್ರು: “ಬೆನ್ಹದದ್‌ ಹೀಗೆ ಹೇಳಿದ್ದಾನೆ, ‘ನಾನು ನಿನಗೆ “ನಿನ್ನ ಬೆಳ್ಳಿಬಂಗಾರವನ್ನ, ನಿನ್ನ ಹೆಂಡತಿಯರನ್ನ, ನಿನ್ನ ಗಂಡು ಮಕ್ಕಳನ್ನ ನನಗೆ ಕೊಡಬೇಕು” ಅಂತ ಹೇಳಿ ಕಳಿಸಿದ್ದೆ.  ಆದ್ರೆ ನಾಳೆ ಇಷ್ಟು ಹೊತ್ತಿಗೆ ನಾನು ನನ್ನ ಸೇವಕರನ್ನ ನಿನ್ನ ಹತ್ರ ಕಳಿಸ್ತೀನಿ. ಅವರು ಬಂದು ನಿನ್ನ ಅರಮನೆಯ ಮತ್ತು ನಿನ್ನ ಸೇವಕರ ಮನೆಯ ಒಂದು ಮೂಲೆನೂ ಬಿಡದೆ ಹುಡುಕಿ ನಿನ್ನ ಹತ್ರ ಇರೋ ಎಲ್ಲ ಅಮೂಲ್ಯ ವಸ್ತುಗಳನ್ನ ಜಪ್ತಿಮಾಡಿ ತಗೊಂಡು ಹೋಗ್ತಾರೆ.’”  ಆಗ ಇಸ್ರಾಯೇಲ್‌ ರಾಜ ದೇಶದ ಎಲ್ಲ ಹಿರಿಯರನ್ನ ಕರೆಸಿ ಅವ್ರಿಗೆ “ದಯವಿಟ್ಟು ಈ ಮಾತಿಗೆ ಸ್ವಲ್ಪ ಗಮನಕೊಡಿ. ಆ ಮನುಷ್ಯ ಇಸ್ರಾಯೇಲನ್ನ ಹಾಳು ಮಾಡಬೇಕಂತ ತೀರ್ಮಾನ ಮಾಡಿದ್ದಾನೆ. ಅವನು ನನ್ನ ಹತ್ರ ನನ್ನ ಹೆಂಡತಿಯರನ್ನ, ನನ್ನ ಗಂಡುಮಕ್ಕಳನ್ನ, ನನ್ನ ಬೆಳ್ಳಿಬಂಗಾರವನ್ನ ಕೇಳ್ತಿದ್ದಾನೆ. ನಾನು ಅದಕ್ಕೆ ಒಪ್ಕೊಂಡಿದ್ದೀನಿ” ಅಂದ.  ಆಗ ಎಲ್ಲ ಹಿರಿಯರು ಮತ್ತು ಎಲ್ಲ ಜನ್ರು ರಾಜನಿಗೆ “ನೀನು ಅವನ ಮಾತನ್ನ ಕೇಳಬೇಡ, ಅವನು ಹೇಳೋದನ್ನ ಒಪ್ಕೊಬೇಡ” ಅಂದ್ರು.  ಹಾಗಾಗಿ ಅವನು ಬೆನ್ಹದದನ ಸಂದೇಶವಾಹಕರಿಗೆ “ನನ್ನ ಒಡೆಯನಾದ ರಾಜನಿಗೆ ಹೀಗೆ ಹೇಳಿ: ‘ನೀನು ಮೊದ್ಲು ಕೇಳಿದ ವಿಷ್ಯ ಮಾಡ್ತೀನಿ. ಆದ್ರೆ ಈಗ ಹೇಳಿದ ವಿಷ್ಯಾನ ನಾನು ಒಪ್ಕೊಳ್ಳೋಕೆ ಆಗಲ್ಲ’” ಅಂತ ಹೇಳಿ ಕಳಿಸಿದ. ಈ ಸಂದೇಶವನ್ನ ಅವರು ಬೆನ್ಹದದನಿಗೆ ಮುಟ್ಟಿಸಿದ್ರು. 10  ಆಮೇಲೆ ಬೆನ್ಹದದ್‌ ಇಸ್ರಾಯೇಲ್‌ ರಾಜನಿಗೆ “ನಾನು ನನ್ನ ಮಹಾ ಸೈನ್ಯನ ಕರ್ಕೊಂಡು ಬಂದು ಸಮಾರ್ಯವನ್ನ ನಾಶಮಾಡಿಬಿಡ್ತೀನಿ. ನನ್ನ ಕಡೆ ಇರೋ ಪ್ರತಿಯೊಬ್ಬ ಸೈನಿಕನ ಕೈಗೆ ಸಮಾರ್ಯದಲ್ಲಿ ಒಂದು ಹಿಡಿ ಮಣ್ಣೂ ಸಿಗದ ಹಾಗೆ ಸರ್ವನಾಶ ಮಾಡ್ತೀನಿ. ಹೀಗೆ ಮಾಡ್ಲಿಲ್ಲ ಅಂದ್ರೆ ದೇವರುಗಳು ನನಗೆ ಕಠಿಣ ಶಿಕ್ಷೆ ಕೊಡಲಿ!” ಅಂತ ಹೇಳಿ ಕಳಿಸಿದ. 11  ಅದಕ್ಕೆ ಇಸ್ರಾಯೇಲ್‌ ರಾಜ “ಯುದ್ಧ ಮಾಡೋ ಮುಂಚೆನೇ ಯುದ್ಧದಲ್ಲಿ ಗೆದ್ದವನ ತರ ಜಂಬ ಕೊಚ್ಕೊಬಾರ್ದು ಅಂತ ಅವನಿಗೆ ಹೇಳಿ”+ ಅಂದ. 12  ಬೆನ್ಹದದ್‌ ಮತ್ತು ಬೇರೆ ರಾಜರು ಡೇರೆಯಲ್ಲಿ ಕುಡೀತಾ ಇದ್ದಾಗ ಸಂದೇಶವಾಹಕರು ಬಂದು ಇಸ್ರಾಯೇಲ್‌ ರಾಜ ಹೇಳಿದ್ದನ್ನ ತಿಳಿಸಿದ್ರು. ತಕ್ಷಣ ಬೆನ್ಹದದ್‌ ತನ್ನ ಸೇವಕರಿಗೆ “ಯುದ್ಧಕ್ಕೆ ತಯಾರಾಗಿ!” ಅಂದ. ಆಗ ಅವರು ಪಟ್ಟಣದ ಮೇಲೆ ಯುದ್ಧ ಮಾಡೋಕೆ ತಯಾರಾದ್ರು. 13  ಆದ್ರೆ ಒಬ್ಬ ಪ್ರವಾದಿ ಬಂದು ಇಸ್ರಾಯೇಲ್‌ ರಾಜ ಅಹಾಬಗೆ+ “ಯೆಹೋವ ಹೀಗೆ ಹೇಳ್ತಾನೆ ‘ನೀನು ನೋಡುತ್ತಿರೋ ಈ ದೊಡ್ಡ ಸೈನ್ಯನ ನಾನು ಇವತ್ತು ನಿನ್ನ ಕೈಗೆ ಒಪ್ಪಿಸ್ತೀನಿ. ಆಗ ನಾನು ಯೆಹೋವ ಅಂತ ನಿನಗೆ ಗೊತ್ತಾಗುತ್ತೆ’”+ ಅಂದ. 14  ಅದಕ್ಕೆ ಅಹಾಬ “ಅದು ಹೇಗೆ ಆಗುತ್ತೆ?” ಅಂತ ಕೇಳ್ದಾಗ ಪ್ರವಾದಿ ಅವನಿಗೆ “‘ಪ್ರತಿಯೊಂದು ಪ್ರಾಂತ್ಯದಲ್ಲಿರೋ* ಅಧಿಕಾರಿಗಳ ಸೇವಕರಿಂದ ಆಗುತ್ತೆ’ ಅಂತ ಯೆಹೋವ ಹೇಳಿದ್ದಾನೆ” ಅಂದ. ಅದಕ್ಕೆ ಅಹಾಬ “ಯುದ್ಧನ ಯಾರು ಶುರುಮಾಡ್ತಾರೆ?” ಅಂತ ಕೇಳ್ದಾಗ ಪ್ರವಾದಿ “ನೀನೇ!” ಅಂದ. 15  ಆಮೇಲೆ ಅಹಾಬ ಪ್ರಾಂತ್ಯದ ಅಧಿಕಾರಿಗಳ ಸೇವಕರನ್ನ ಲೆಕ್ಕ ಮಾಡಿದಾಗ ಅವರು 232 ಜನ ಇದ್ರು. ಇಸ್ರಾಯೇಲಿನ ಎಲ್ಲ ಗಂಡಸ್ರನ್ನ ಲೆಕ್ಕ ಮಾಡಿದಾಗ ಅವರು 7,000 ಇದ್ರು. 16  ಅವರು ಶತ್ರುಗಳ ಮೇಲೆ ದಾಳಿ ಮಾಡೋಕೆ ಮಧ್ಯಾಹ್ನ ಹೊರಟ್ರು. ಆಗ ಬೆನ್ಹದದ್‌ ಮತ್ತು ಅವನಿಗೆ ಸಹಾಯ ಮಾಡ್ತಿದ್ದ ಬೇರೆ 32 ರಾಜರು ಡೇರೆಯಲ್ಲಿ ಕುಡಿದು ಮತ್ತರಾಗಿದ್ರು. 17  ಪ್ರಾಂತ್ಯದ ಅಧಿಕಾರಿಗಳ ಸೇವಕರು ಪಟ್ಟಣದಿಂದ ಮೊದ್ಲು ಹೊರಗೆ ಬಂದ್ರು. ತಕ್ಷಣ ಬೆನ್ಹದದ್‌ ತನ್ನ ಸಂದೇಶವಾಹಕರನ್ನ ಕಳಿಸಿದ. ಸಂದೇಶವಾಹಕರು ವಾಪಸ್‌ ಬಂದು ಬೆನ್ಹದದನಿಗೆ “ಸಮಾರ್ಯದ ಗಂಡಸ್ರು ಪಟ್ಟಣದಿಂದ ಹೊರಗೆ ಬಂದಿದ್ದಾರೆ” ಅನ್ನೋ ಸುದ್ದಿ ಕೊಟ್ರು. 18  ಅದಕ್ಕೆ ಅವನು “ಅವರು ನಮ್ಮ ಜೊತೆ ಶಾಂತಿ ಮಾಡ್ಕೊಳ್ಳೋಕೆ ಬಂದಿದ್ರೆ ಅವ್ರನ್ನ ಹಿಡ್ಕೊಂಡು ಬನ್ನಿ. ಒಂದುವೇಳೆ ಅವರು ಯುದ್ಧ ಮಾಡೋಕೆ ಬಂದಿದ್ರೆ ಆಗಲೂ ಅವ್ರನ್ನ ಜೀವಂತ ಹಿಡ್ಕೊಂಡು ಬನ್ನಿ” ಅಂದ. 19  ಆದ್ರೆ ಪ್ರಾಂತ್ಯದ ಅಧಿಕಾರಿಗಳ ಸೇವಕರು ಮತ್ತು ಅವ್ರನ್ನ ಹಿಂಬಾಲಿಸೋ ಸೈನಿಕರು ಪಟ್ಟಣದಿಂದ ಹೊರಗೆ ಬಂದು, 20  ಶತ್ರುಗಳನ್ನ ಕೊಲ್ಲೋಕೆ ಶುರು ಮಾಡಿದ್ರು. ಆಗ ಅರಾಮ್ಯರು ಓಡಿಹೋದ್ರು+ ಮತ್ತು ಇಸ್ರಾಯೇಲ್ಯರು ಅವ್ರನ್ನ ಅಟ್ಟಿಸ್ಕೊಂಡು ಹೋದ್ರು. ಆದ್ರೆ ಅರಾಮ್ಯದ ರಾಜ ಬೆನ್ಹದದ್‌ ಕುದುರೆ ಹತ್ತಿ ಕುದುರೆ ಸವಾರರ ಜೊತೆ ತಪ್ಪಿಸ್ಕೊಂಡು ಹೋದ. 21  ಇಸ್ರಾಯೇಲ್‌ ರಾಜನೂ ಹೊರಗೆ ಬಂದು ಕುದುರೆ ಮತ್ತು ರಥಗಳ ಸವಾರರನ್ನ ಕೊಂದುಹಾಕಿದ. ಅವನ ಕೈಯಲ್ಲಿ ಅರಾಮ್ಯರು ಹೀನಾಯವಾಗಿ ಸೋತುಹೋದ್ರು. 22  ಆಮೇಲೆ ಆ ಪ್ರವಾದಿ+ ಇಸ್ರಾಯೇಲ್‌ ರಾಜನ ಹತ್ರ ಬಂದು “ಅರಾಮ್ಯದ ರಾಜ ಮುಂದಿನ ವರ್ಷ ವಸಂತ ಕಾಲದಲ್ಲಿ ಮತ್ತೆ ನಿನ್ನ ವಿರುದ್ಧ ಯುದ್ಧಕ್ಕೆ ಬರ್ತಾನೆ.+ ಹಾಗಾಗಿ ನೀನು ಹೋಗಿ ನಿನ್ನ ಸೈನ್ಯ ಕಟ್ಟು ಮತ್ತು ಮುಂದೆ ಏನು ಮಾಡಬೇಕು ಅಂತ ಯೋಚ್ನೆ ಮಾಡು”+ ಅಂದ. 23  ಅರಾಮ್ಯದ ರಾಜನಿಗೆ ಅವನ ಸೇವಕರು “ಅವ್ರ ದೇವರು ಬೆಟ್ಟಗಳ ದೇವರು. ಅದಕ್ಕೇ ಅವರು ನಮ್ಮನ್ನ ಸೋಲಿಸಿದ್ರು. ಆದ್ರೆ ನಾವು ಅವ್ರ ಜೊತೆ ಬೈಲಲ್ಲಿ ಯುದ್ಧ ಮಾಡಿದ್ರೆ ನಾವು ಅವ್ರನ್ನ ಸೋಲಿಸ್ತೀವಿ. 24  ಅದ್ರ ಜೊತೆಗೆ ಎಲ್ಲ ಪ್ರಾಂತ್ಯಗಳ ರಾಜರನ್ನ ಅವ್ರ ಸ್ಥಾನದಿಂದ ಕಿತ್ತು+ ಅವ್ರ ಸ್ಥಾನದಲ್ಲಿ ರಾಜ್ಯಪಾಲರನ್ನ ನೇಮಿಸು. 25  ನೀನು ಕಳ್ಕೊಂಡ ಸೈನ್ಯಕ್ಕೆ ಸರಿಯಾಗಿ ಇನ್ನೊಂದು ಸೈನ್ಯ ಕೂಡಿಸು. ನೀನು ಎಷ್ಟು ಕುದುರೆ, ರಥಗಳನ್ನ ಕಳ್ಕೊಂಡಿಯೋ ಅಷ್ಟೇ ಕುದುರೆ ರಥಗಳನ್ನ ಕೂಡಿಸು. ಆಮೇಲೆ ನಾವು ಹೋಗಿ ಅವ್ರ ವಿರುದ್ಧ ಬೈಲಲ್ಲಿ ಯುದ್ಧ ಮಾಡೋಣ. ಆಗ ನಮಗೆ ಜಯ ಸಿಕ್ಕೇ ಸಿಗುತ್ತೆ” ಅಂದ್ರು. ಅವ್ರ ಸಲಹೆ ತರಾನೇ ರಾಜ ಮಾಡಿದ. 26  ವಸಂತ ಕಾಲದಲ್ಲಿ ಬೆನ್ಹದದ್‌ ಅರಾಮ್ಯರನ್ನ ಒಟ್ಟುಸೇರಿಸಿ, ಇಸ್ರಾಯೇಲಿನ ವಿರುದ್ಧ ಯುದ್ಧ ಮಾಡೋಕೆ ಅಫೇಕಿಗೆ+ ಹೋದ. 27  ಈ ಕಡೆ ಇಸ್ರಾಯೇಲ್‌ ಸೈನ್ಯನೂ ತಯಾರಾಗಿತ್ತು ಮತ್ತು ಅವ್ರಿಗೆ ಬೇಕಾಗಿರೋ ವಸ್ತುಗಳೂ ಅವ್ರ ಹತ್ರ ಇತ್ತು. ಅವರು ಅರಾಮ್ಯರ ವಿರುದ್ಧ ಹೋರಾಡೋಕೆ ಹೋದ್ರು. ಅವರು ಅರಾಮ್ಯರ ಮುಂದೆ ಪಾಳೆಯ ಹಾಕಿದಾಗ ನೋಡೋಕೆ ಆಡಿನ ಎರಡು ಚಿಕ್ಕ ಹಿಂಡಿನ ತರ ಕಾಣ್ತಿದ್ರು. ಆದ್ರೆ ಅರಾಮ್ಯರ ಸೈನ್ಯ ಇಡೀ ಪ್ರದೇಶವನ್ನೇ ತುಂಬ್ಕೊಂಡಿತ್ತು.+ 28  ಆಗ ಸತ್ಯ ದೇವರ ಸೇವಕ ಇಸ್ರಾಯೇಲ್‌ ರಾಜನ ಹತ್ರ ಬಂದು “ಯೆಹೋವ ಹೀಗೆ ಹೇಳ್ತಾನೆ: ‘ಯೆಹೋವನು ಕೇವಲ ಬೆಟ್ಟಗಳ ದೇವರು, ಬೈಲಿನ ದೇವರಲ್ಲ’ ಅಂತ ಅರಾಮ್ಯರು ಹೇಳ್ತಿದ್ದಾರೆ. ಹಾಗಾಗಿ ನಾನು ಆ ಮಹಾ ಸೈನ್ಯವನ್ನ ನಿನ್ನ ಕೈಗೆ ಒಪ್ಪಿಸ್ತೀನಿ.+ ಆಗ ನಾನೇ ಯೆಹೋವ ಅಂತ ನಿನಗೆ ಖಂಡಿತ ಗೊತ್ತಾಗುತ್ತೆ”+ ಅಂದ. 29  ಈ ಎರಡೂ ಸೈನ್ಯಗಳು ಏಳು ದಿನ ತನಕ ಎದುರುಬದುರಾಗಿ ಪಾಳೆಯ ಹಾಕೊಂಡಿದ್ರು. ಏಳನೇ ದಿನ ಯುದ್ಧ ಶುರು ಆಯ್ತು. ಇಸ್ರಾಯೇಲ್‌ ಜನರು ಒಂದೇ ದಿನದಲ್ಲಿ ಅರಾಮ್ಯರ 1,00,000 ಸೈನಿಕರನ್ನ ಸಾಯಿಸಿದ್ರು. 30  ಅರಾಮ್ಯರಲ್ಲಿ ಉಳಿದವರು ಅಫೇಕ್‌+ ಪಟ್ಟಣಕ್ಕೆ ಓಡಿಹೋದ್ರು. ಆದ್ರೆ ಅವ್ರಲ್ಲಿ ಉಳಿದ 27,000 ಗಂಡಸ್ರ ಮೇಲೆ ಗೋಡೆ ಬಿತ್ತು. ಬೆನ್ಹದದ್‌ ಕೂಡ ಪಟ್ಟಣಕ್ಕೆ ಓಡಿಹೋಗಿ ಒಳಗಿನ ಕೋಣೆಯಲ್ಲಿ ಬಚ್ಚಿಟ್ಕೊಂಡ. 31  ಆಗ ಬೆನ್ಹದದನ ಸೇವಕರು ಅವನಿಗೆ “ಇಸ್ರಾಯೇಲ್‌ ಮನೆತನದ ರಾಜರು ಕರುಣೆ* ತೋರಿಸ್ತಾರೆ ಅಂತ ನಾವು ಕೇಳಿಸ್ಕೊಂಡಿದ್ದೀವಿ. ಹಾಗಾಗಿ ದಯವಿಟ್ಟು, ನಾವು ನಮ್ಮ ಸೊಂಟಕ್ಕೆ ಗೋಣಿ ಸುತ್ಕೊಂಡು, ಹಗ್ಗಗಳನ್ನ ತಲೆ ಮೇಲೆ ಹಾಕೊಂಡು ಇಸ್ರಾಯೇಲ್‌ ರಾಜನ ಹತ್ರ ಹೋಗೋಣ. ಅವನು ನಿನಗೆ ಪ್ರಾಣಭಿಕ್ಷೆ ಕೊಡಬಹುದು”+ ಅಂದ್ರು. 32  ಆಮೇಲೆ ಅವರು ತಮ್ಮ ಸೊಂಟಕ್ಕೆ ಗೋಣಿ ಸುತ್ಕೊಂಡು, ಹಗ್ಗಗಳನ್ನ ತಲೆ ಮೇಲೆ ಹಾಕೊಂಡು ಇಸ್ರಾಯೇಲ್‌ ರಾಜನ ಹತ್ರ ಬಂದು “ನಿನ್ನ ಸೇವಕನಾದ ಬೆನ್ಹದದ್‌, ‘ದಯವಿಟ್ಟು ನನ್ನನ್ನ ಸಾಯಿಸಬೇಡ’ ಅಂತ ಕೇಳ್ಕೊಳ್ತಿದ್ದಾನೆ” ಅಂದ್ರು. ಅದಕ್ಕೆ ರಾಜ ಅವ್ರಿಗೆ “ಬೆನ್ಹದದ್‌ ಇನ್ನೂ ಜೀವಂತವಾಗಿ ಇದ್ದಾನಾ? ಅವನು ನನ್ನ ಅಣ್ಣನ ತರ” ಅಂದ. 33  ತಕ್ಷಣ ಅವರು ಅವನ ಈ ಮಾತನ್ನ ನಂಬಿ ಅದನ್ನ ಒಳ್ಳೇ ಸೂಚನೆ ಅಂದ್ಕೊಂಡು ಅವನಿಗೆ “ಹೌದು ಬೆನ್ಹದದ್‌ ನಿನ್ನ ಅಣ್ಣ ತರಾನೇ” ಅಂದ್ರು. ಅದಕ್ಕೆ ರಾಜ “ಹೋಗಿ ಅವನನ್ನ ಕರ್ಕೊಂಡು ಬನ್ನಿ” ಅಂದ. ಆಮೇಲೆ ಬೆನ್ಹದದ್‌ ರಾಜ ಅಹಾಬನ ಹತ್ರ ಬಂದ ಮತ್ತು ರಾಜ ಅವನನ್ನ ರಥದಲ್ಲಿ ಕೂರಿಸ್ಕೊಂಡ. 34  ಬೆನ್ಹದದ್‌ ಅಹಾಬನಿಗೆ “ನನ್ನ ಅಪ್ಪ ನಿನ್ನ ಅಪ್ಪನಿಂದ ತಗೊಂಡ ಪಟ್ಟಣಗಳನ್ನ ನಾನು ನಿನಗೆ ವಾಪಸ್‌ ಕೊಟ್ಟುಬಿಡ್ತೀನಿ. ನನ್ನ ಅಪ್ಪ ಸಮಾರ್ಯದಲ್ಲಿ ಮಾಡಿದ ತರಾನೇ ನೀನು ನಿನಗೋಸ್ಕರ ದಮಸ್ಕದಲ್ಲಿ ಮಾರುಕಟ್ಟೆಗಳನ್ನ ಮಾಡ್ಕೊಬಹುದು” ಅಂದ. ಅದಕ್ಕೆ ಅಹಾಬ “ಈ ಒಪ್ಪಂದದ ಮೇಲೆ ನಿನ್ನನ್ನ ಹೋಗೋಕೆ ಬಿಡ್ತೀನಿ” ಅಂದ. ಹೀಗೆ ಅಹಾಬ ಅವನ ಜೊತೆ ಒಪ್ಪಂದ ಮಾಡ್ಕೊಂಡು ಅವನನ್ನ ಹೋಗೋಕೆ ಬಿಟ್ಟ. 35  ಆಮೇಲೆ ಪ್ರವಾದಿಗಳ ಮಕ್ಕಳಲ್ಲಿ*+ ಒಬ್ಬನಿಗೆ ಯೆಹೋವನ ಸಂದೇಶ ಸಿಕ್ತು. ಅವನು ಆ ಸಂದೇಶದ ಪ್ರಕಾರ ತನ್ನ ಜೊತೆ ಇದ್ದವನಿಗೆ “ನನ್ನನ್ನ ಹೊಡಿ” ಅಂತ ಹೇಳಿದ. ಆದ್ರೆ ಅವನು ಹೊಡಿಯೋಕೆ ಒಪ್ಪಲಿಲ್ಲ. 36  ಹಾಗಾಗಿ ಆ ಪ್ರವಾದಿ ಅವನಿಗೆ “ನೀನು ಯೆಹೋವನ ಮಾತನ್ನ ಕೇಳದೆ ಇದ್ದಿದ್ರಿಂದ ನೀನು ನನ್ನನ್ನ ಬಿಟ್ಟು ಇಲ್ಲಿಂದ ಹೋದ ತಕ್ಷಣ ಒಂದು ಸಿಂಹ ಬಂದು ನಿನ್ನನ್ನ ಸಾಯಿಸುತ್ತೆ” ಅಂದ. ಆ ಜೊತೆಗಾರ ಬಿಟ್ಟು ಹೋದ ತಕ್ಷಣ ಒಂದು ಸಿಂಹ ಅವನ ಮೇಲೆ ಹಾರಿ ಅವನನ್ನ ಸಾಯಿಸಿತು. 37  ಆ ಪ್ರವಾದಿ ಮತ್ತೊಬ್ಬ ವ್ಯಕ್ತಿಯನ್ನ ನೋಡಿ ಅವನಿಗೆ “ನನ್ನನ್ನ ಹೊಡಿ” ಅಂದ. ಆ ವ್ಯಕ್ತಿ ಅವನನ್ನ ಹೊಡೆದು ಗಾಯಮಾಡಿದ. 38  ಆಮೇಲೆ ಪ್ರವಾದಿ ತನ್ನ ಗುರುತು ಸಿಗದಂತೆ ಕಣ್ಣಿಗೆ ಒಂದು ಪಟ್ಟಿ ಕಟ್ಕೊಂಡು ರಾಜನಿಗಾಗಿ ಕಾಯ್ತಾ ದಾರಿಯಲ್ಲಿ ನಿಂತ್ಕೊಂಡ. 39  ರಾಜ ಆ ದಾರಿಯಿಂದ ಹೋಗೋವಾಗ ಪ್ರವಾದಿ ರಾಜನನ್ನ ಕೂಗಿ “ನಿನ್ನ ಈ ಸೇವಕ ಯುದ್ಧ ನಡಿತಿದ್ದ ಜಾಗಕ್ಕೆ ಹೋಗಿದ್ದ. ಆಗ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿನ ಕರ್ಕೊಂಡು ಬಂದು ‘ಇವನನ್ನ ನೋಡ್ಕೊ. ಒಂದುವೇಳೆ ಇವನು ತಪ್ಪಿಸ್ಕೊಂಡ್ರೆ ಇವನ ಪ್ರಾಣಕ್ಕೆ ಬದಲಿಗೆ ನಿನ್ನ ಪ್ರಾಣ ಕೊಡಬೇಕು+ ಇಲ್ಲಾಂದ್ರೆ ನೀನು ಒಂದು ತಲಾಂತು* ಬೆಳ್ಳಿ ಕೊಡಬೇಕು’ ಅಂದ. 40  ನಾನು ಏನೋ ಕೆಲಸ ಮಾಡ್ತಿದ್ದಾಗ ಆ ಮನುಷ್ಯ ತಪ್ಪಿಸ್ಕೊಂಡು ಹೋದ” ಅಂದ. ಅದಕ್ಕೆ ಇಸ್ರಾಯೇಲ್‌ ರಾಜ ಅವನಿಗೆ “ನಿನಗೆ ಆ ಶಿಕ್ಷೆ ಆಗ್ಲೇಬೇಕು, ನಿನಗೆ ನೀನೇ ತೀರ್ಪು ಮಾಡ್ಕೊಂಡಿದ್ದೀಯ” ಅಂದ. 41  ಆಗಲೇ ಆ ಪ್ರವಾದಿ ತನ್ನ ಕಣ್ಣಿಗೆ ಕಟ್ಕೊಂಡಿದ್ದ ಪಟ್ಟಿ ತೆಗೆದ. ಇಸ್ರಾಯೇಲ್‌ ರಾಜನಿಗೆ ಅವನೊಬ್ಬ ಪ್ರವಾದಿ ಅಂತ ಗೊತ್ತಾಯ್ತು.+ 42  ಆಗ ಆ ಪ್ರವಾದಿ ರಾಜನಿಗೆ “ಯೆಹೋವ ಹೀಗೆ ಹೇಳ್ತಾನೆ: ‘ನಾನು ಯಾರನ್ನ ನಾಶಮಾಡೋಕೆ ಹೇಳಿದ್ದೆನೋ ಅವನು ನಿನ್ನ ಕೈಯಿಂದ ತಪ್ಪಿಸ್ಕೊಂಡು ಹೋಗೋಕೆ ನೀನು ಬಿಟ್ಟುಬಿಟ್ಟೆ.+ ಹಾಗಾಗಿ ಅವನ ಬದ್ಲು ನಿನ್ನ ಜೀವ ಹೋಗುತ್ತೆ+ ಮತ್ತು ಅವನ ಜನ್ರ ಬದ್ಲು ನಿನ್ನ ಜನ್ರು ನಾಶ ಆಗ್ತಾರೆ’”+ ಅಂದ. 43  ಅದನ್ನ ಕೇಳಿ ಇಸ್ರಾಯೇಲ್‌ ರಾಜ ಬೇಜಾರಾಗಿ ಮುಖ ಸಪ್ಪಗೆ ಮಾಡ್ಕೊಂಡು ಸಮಾರ್ಯದ+ ತನ್ನ ಅರಮನೆಗೆ ಹೋದ.

ಪಾದಟಿಪ್ಪಣಿ

ಅಥವಾ “ಅವನ ಕೈಕೆಳಗಿದ್ದ ಜಿಲ್ಲೆಗಳಲ್ಲಿ ಇರೋ.”
ಅಥವಾ “ಶಾಶ್ವತ ಪ್ರೀತಿ.”
“ಪ್ರವಾದಿಗಳ ಮಕ್ಕಳು” ಅನ್ನೋ ಮಾತು ಬಹುಶಃ ಪ್ರವಾದಿಗಳಿಗೆ ಕಲಿಸೋ ಶಾಲೆಗೆ ಅಥವಾ ಪ್ರವಾದಿಗಳ ಒಂದು ಸಂಘಕ್ಕೆ ಸೂಚಿಸ್ತಿರಬಹುದು.
ಒಂದು ತಲಾಂತು=34.2 ಕೆಜಿ. ಪರಿಶಿಷ್ಟ ಬಿ14 ನೋಡಿ.