ಒಂದನೇ ಅರಸು 5:1-18

  • ರಾಜ ಹೀರಾಮ ಸಾಮಗ್ರಿಗಳನ್ನ ಕೊಟ್ಟ (1-12)

  • ಸೊಲೊಮೋನ ಬಿಟ್ಟಿಕೆಲಸಗಾರರನ್ನ ನೇಮಿಸಿದ (13-18)

5  ಸೊಲೊಮೋನನನ್ನ ಅಭಿಷೇಕಿಸಿ ಅವನ ತಂದೆ ಸ್ಥಾನದಲ್ಲಿ ರಾಜನಾಗಿ ಮಾಡಿದ್ದಾರೆ ಅಂತ ಕೇಳಿಸ್ಕೊಂಡ ತೂರಿನ+ ರಾಜ ಹೀರಾಮ ತನ್ನ ಸೇವಕರನ್ನ ಸೊಲೊಮೋನನ ಹತ್ರ ಕಳಿಸಿದ. ಹೀರಾಮ ದಾವೀದನ ಒಳ್ಳೇ ಸ್ನೇಹಿತನಾಗಿದ್ದ.+  ಆಮೇಲೆ ಸೊಲೊಮೋನ ಹೀರಾಮನಿಗೆ+  “ಯೆಹೋವ ನನ್ನ ಅಪ್ಪ ದಾವೀದನಿಗೆ ಶತ್ರುಗಳ ವಿರುದ್ಧ ಜಯ ಪಡಿಯೋಕೆ ಸಹಾಯ ಮಾಡೋ ತನಕ* ಅಪ್ಪ ಶತ್ರುಗಳ ಜೊತೆ ಯುದ್ಧ ಮಾಡಬೇಕಾಗಿ ಬಂತು. ಹಾಗಾಗಿ ತನ್ನ ದೇವರಾದ ಯೆಹೋವನ ಹೆಸ್ರನ್ನ ಗೌರವಿಸೋಕೆ ಒಂದು ದೇವಾಲಯ ಕಟ್ಟೋಕೆ ಅವನಿಗೆ ಆಗಲಿಲ್ಲ. ಇದು ನಿನಗೆ ಚೆನ್ನಾಗಿ ಗೊತ್ತು.+  ಆದ್ರೆ ನನ್ನ ದೇವರಾದ ಯೆಹೋವ ಈಗ ನಾಲ್ಕು ದಿಕ್ಕಲ್ಲಿರೋ ಶತ್ರುಗಳಿಂದ ನನ್ನನ್ನ ಬಿಡಿಸಿ ನನಗೆ ಶಾಂತಿ ಕೊಟ್ಟಿದ್ದಾನೆ.+ ಈಗ ನನ್ನನ್ನ ವಿರೋಧಿಸೋ ಶತ್ರುಗಳಾಗಲಿ, ನನ್ನ ರಾಜ್ಯಕ್ಕೆ ಕೆಟ್ಟದು ಮಾಡೋರಾಗಲಿ ಯಾರೂ ಇಲ್ಲ.+  ಯೆಹೋವ ನನ್ನ ಅಪ್ಪ ದಾವೀದನಿಗೆ ‘ನಿನ್ನ ಬದ್ಲು ನಿನ್ನ ಸಿಂಹಾಸನದಲ್ಲಿ ನಾನು ಕೂರಿಸೋ ನಿನ್ನ ಮಗನೇ ನನ್ನ ಹೆಸ್ರಿನ ಗೌರವಕ್ಕೋಸ್ಕರ ದೇವಾಲಯ ಕಟ್ತಾನೆ’ ಅಂತ ಮಾತು ಕೊಟ್ಟಿದ್ದನು. ಆ ಮಾತಿನ ಪ್ರಕಾರ ನಾನು ನನ್ನ ದೇವರಾದ ಯೆಹೋವನ ಹೆಸ್ರಿಗೆ ಗೌರವ ತರೋಕೆ ದೇವಾಲಯ ಕಟ್ಟಬೇಕು ಅಂದ್ಕೊಂಡಿದ್ದೀನಿ.+  ಹಾಗಾಗಿ ನೀನು ನನಗೋಸ್ಕರ ಲೆಬನೋನಿನ ದೇವದಾರು ಮರಗಳನ್ನ ಕಡಿಯೋಕೆ ನಿನ್ನ ಜನ್ರಿಗೆ ಅಪ್ಪಣೆ ಕೊಡು.+ ನನ್ನ ಸೇವಕರು ನಿನ್ನ ಸೇವಕರ ಜೊತೆ ಕೆಲಸ ಮಾಡ್ತಾರೆ. ನೀನು ಹೇಳೋ ಸಂಬಳನ ನಿನ್ನ ಸೇವಕರಿಗೆ ನಾನು ಕೊಡ್ತೀನಿ. ಮರ ಕಡಿಯೋದ್ರಲ್ಲಿ ಸೀದೋನ್ಯರ ತರ ನಾವು ಜಾಣರಲ್ಲ ಅಂತ ನಿನಗೆ ಚೆನ್ನಾಗಿ ಗೊತ್ತಲ್ಲ”+ ಅಂತ ಹೇಳಿ ಕಳಿಸಿದ.  ಸೊಲೊಮೋನನ ಈ ಮಾತು ಕೇಳಿಸ್ಕೊಂಡು ಹೀರಾಮನಿಗೆ ತುಂಬ ಖುಷಿ ಆಯ್ತು. ಅವನು “ಇವತ್ತು ನಾನು ಯೆಹೋವನನ್ನ ಹೊಗಳ್ತೀನಿ. ಯಾಕಂದ್ರೆ ಆತನು ದೊಡ್ಡ ಜನಾಂಗವನ್ನ* ಆಳೋಕೆ ದಾವೀದನಿಗೆ ಒಬ್ಬ ಬುದ್ಧಿವಂತ ಮಗನನ್ನ ಕೊಟ್ಟಿದ್ದಾನೆ!”+ ಅಂದ.  ಆಮೇಲೆ ಹೀರಾಮ ಸೊಲೊಮೋನಗೆ “ನೀನು ಕಳಿಸಿದ ಸಂದೇಶ ನನಗೆ ಸಿಕ್ತು. ನೀನು ಆಸೆಪಟ್ಟ ಹಾಗೇ ನಿನಗೆ ದೇವದಾರು ಮರಗಳನ್ನ, ಜುನಿಪರ್‌ ಮರಗಳನ್ನ ಕೊಡ್ತೀನಿ.+  ನನ್ನ ಸೇವಕರು ಅವನ್ನ ಲೆಬನೋನಿನಿಂದ ಸಮುದ್ರದ ಹತ್ರ ತರ್ತಾರೆ. ನಾನು ಅವನ್ನ ತೆಪ್ಪದ ತರ ಕಟ್ಟಿಸಿ ಸಮುದ್ರ ಮಾರ್ಗವಾಗಿ ನೀನು ಹೇಳೋ ಜಾಗಕ್ಕೆ ಕಳಿಸ್ಕೊಡ್ತೀನಿ. ಆಮೇಲೆ ಅಲ್ಲಿಗೆ ನನ್ನ ಜನ್ರನ್ನ ಕಳಿಸಿ ಅವನ್ನ ಬಿಚ್ಚಿಸ್ತೀನಿ. ನೀವು ಬಂದು ಅವನ್ನ ಹೊತ್ಕೊಂಡು ಹೋಗಬಹುದು. ಇದಕ್ಕೆ ಪ್ರತಿಯಾಗಿ ನೀನು ನನ್ನ ಕುಟುಂಬಕ್ಕಾಗಿ ನಾನು ಹೇಳೋಷ್ಟು ಆಹಾರ ಕೊಡಬೇಕು”+ ಅಂದ. 10  ಹೀಗೆ ಹೀರಾಮ ಸೊಲೊಮೋನ ಕೇಳಿದ ದೇವದಾರು ಮರ ಮತ್ತು ಜುನಿಪರ್‌ ಮರಗಳನ್ನ ಕಳಿಸ್ಕೊಟ್ಟ. 11  ಸೊಲೊಮೋನ ಹೀರಾಮನ ಕುಟುಂಬಕ್ಕೆ 20,000 ಕೋರ್‌* ಗೋದಿ, 20 ಕೋರ್‌* ಅತಿ ಶ್ರೇಷ್ಠವಾದ ಆಲಿವ್‌ ಎಣ್ಣೆಯನ್ನ* ಕೊಟ್ಟ. ಪ್ರತಿವರ್ಷ ಸೊಲೊಮೋನ ಹೀರಾಮನಿಗೆ ಈ ಪದಾರ್ಥಗಳನ್ನ ಕೊಡ್ತಿದ್ದ.+ 12  ಯೆಹೋವ ಸೊಲೊಮೋನನಿಗೆ ಮಾತು ಕೊಟ್ಟ ಹಾಗೇ ವಿವೇಕ ಕೊಟ್ಟನು.+ ಸೊಲೊಮೋನ ಮತ್ತು ಹೀರಾಮನ ಮಧ್ಯ ಶಾಂತಿ ಸಂಬಂಧ ಇತ್ತು. ಅವರಿಬ್ರೂ ಒಂದು ಒಪ್ಪಂದ ಮಾಡ್ಕೊಂಡಿದ್ರು. 13  ರಾಜ ಸೊಲೊಮೋನ ಬಿಟ್ಟಿ ಕೆಲಸಕ್ಕಾಗಿ ಇಡೀ ಇಸ್ರಾಯೇಲಿಂದ 30,000 ಗಂಡಸ್ರನ್ನ ಸೇರಿಸಿದ.+ 14  ಅವನು ಪ್ರತಿ ತಿಂಗಳು ಸರದಿ ಪ್ರಕಾರ 10,000 ಗಂಡಸ್ರನ್ನ ಲೆಬನೋನಿಗೆ ಕಳಿಸ್ತಿದ್ದ. ಅವರು ಒಂದು ತಿಂಗಳು ಲೆಬನೋನಿನಲ್ಲಿ ಕೆಲಸ ಮಾಡಿ ಎರಡು ತಿಂಗಳು ಮನೆಯಲ್ಲಿ ಇರ್ತಿದ್ರು. ಅದೋನೀರಾಮ+ ಈ ಬಿಟ್ಟಿ ಕೆಲಸ ಮಾಡ್ತಿದ್ದವ್ರ ಮೇಲ್ವಿಚಾರಕ ಆಗಿದ್ದ. 15  ಸೊಲೊಮೋನನ ಹತ್ರ 70,000 ಜನ ಭಾರ ಹೊರೋರು ಮತ್ತು 80,000 ಜನ ಬೆಟ್ಟಗಳಲ್ಲಿ+ ಕಲ್ಲು ಒಡೆಯೋರು+ ಇದ್ರು. 16  ಅಷ್ಟೇ ಅಲ್ಲ ಈ ಕೆಲಸಗಾರರನ್ನ ನೋಡ್ಕೊಳ್ಳೋಕೆ ಸೊಲೊಮೋನನ ಹತ್ರ 3,300 ಮೇಸ್ತ್ರಿಗಳಿದ್ರು.+ 17  ರಾಜನ ಆಜ್ಞೆ ಪ್ರಕಾರ ಕೆಲಸಗಾರರು ದೊಡ್ಡ ದೊಡ್ಡ ಕಲ್ಲುಗಳನ್ನ+ ಅಗೆದು ತಂದ್ರು. ಅವುಗಳನ್ನ ದೇವಾಲಯದ ಅಸ್ತಿವಾರಕ್ಕಾಗಿ+ ಕತ್ತರಿಸಿದ್ರು. ಆ ಕಲ್ಲುಗಳಿಗೆ ತುಂಬ ಬೆಲೆ ಇತ್ತು.+ 18  ಹೀಗೆ ಸೊಲೊಮೋನನ ಕೆಲಸಗಾರರು, ಹೀರಾಮನ ಕೆಲಸಗಾರರು ಮತ್ತು ಗೆಬಾಲ್ಯರು+ ಕಲ್ಲುಗಳನ್ನ ಕೆತ್ತಿದ್ರು. ಅಷ್ಟೇ ಅಲ್ಲ ದೇವಾಲಯ ಕಟ್ಟೋಕೆ ಮರಗಳನ್ನ, ಕಲ್ಲುಗಳನ್ನ ಸಿದ್ಧಮಾಡಿದ್ರು.

ಪಾದಟಿಪ್ಪಣಿ

ಅಕ್ಷ. “ಪಾದಗಳ ಕೆಳಗೆ ಹಾಕೋ ತನಕ.”
ಅಥವಾ “ಲೆಕ್ಕ ಇಲ್ಲದಷ್ಟು ಜನ್ರನ್ನ.”
ಒಂದು ಕೋರ್‌ ಅಳತೆಯ ಗೋದಿ=ಸುಮಾರು 170 ಕೆಜಿ. ಪರಿಶಿಷ್ಟ ಬಿ14 ನೋಡಿ.
ಒಂದು ಕೋರ್‌=220 ಲೀ. ಪರಿಶಿಷ್ಟ ಬಿ14 ನೋಡಿ.
ಅಕ್ಷ., “ಜಜ್ಜಿ ಹಿಂಡಿ ತೆಗೆದ ಎಣ್ಣೆ.”