ಒಂದನೇ ಅರಸು 6:1-38

  • ಸೊಲೊಮೋನ ದೇವಾಲಯ ಕಟ್ಟಿದ (1-38)

    • ಅತ್ಯಂತ ಒಳಗಿನ ಕೋಣೆ (19-22)

    • ಕೆರೂಬಿಯರು (23-28)

    • ಕೆತ್ತನೆಗಳು, ಬಾಗಿಲುಗಳು, ಒಳಗಿನ ಅಂಗಳ (29-36)

    • ದೇವಾಲಯವನ್ನ ಏಳು ವರ್ಷದಲ್ಲಿ ಕಟ್ಟಿ ಮುಗಿಸಲಾಯ್ತು (37, 38)

6  ಸೊಲೊಮೋನ ಇಸ್ರಾಯೇಲ್ಯರ ರಾಜನಾದ ನಾಲ್ಕನೇ ವರ್ಷದ ಝಿವ್‌*+ ತಿಂಗಳಲ್ಲಿ (ಅಂದ್ರೆ ಎರಡನೇ ತಿಂಗಳಲ್ಲಿ) ಯೆಹೋವನಿಗಾಗಿ ಆಲಯ ಕಟ್ಟೋಕೆ ಶುರುಮಾಡಿದ. ಅದು ಇಸ್ರಾಯೇಲ್ಯರು* ಈಜಿಪ್ಟ್‌ ದೇಶ+ ಬಿಟ್ಟು ಬಂದ 480ನೇ ವರ್ಷ ಆಗಿತ್ತು.+  ರಾಜ ಸೊಲೊಮೋನ ಯೆಹೋವನಿಗಾಗಿ ಕಟ್ಟಿದ ಆಲಯ 60 ಮೊಳ* ಉದ್ದ, 20 ಮೊಳ ಅಗಲ ಮತ್ತು 30 ಮೊಳ ಎತ್ರ ಇತ್ತು.+  ಆಲಯದ ಮುಂದಿನ ಮಂಟಪ+ 20 ಮೊಳ ಉದ್ದ* ಇತ್ತು. ಅದು ದೇವಾಲಯದ ಅಗಲಕ್ಕೆ ಸಮವಾಗಿತ್ತು. ಆಲಯದ ಮುಂದಿನಿಂದ ಮಂಟಪನ ಅಳೆದ್ರೆ ಅದು 10 ಮೊಳ ಅಗಲ ಇತ್ತು.  ಅವನು ಆಲಯಕ್ಕೆ ಕಿಟಕಿಗಳನ್ನ ಮಾಡಿಸಿದ. ಅವು ಒಳಗೆ ಅಗಲ ಇದ್ದು, ಹೊರಗೆ ಚಿಕ್ಕದಾಗಿತ್ತು.+  ಅವನು ಆಲಯದ ಗೋಡೆಯ ಪಕ್ಕಕ್ಕೆ ಅಂದ್ರೆ ಪವಿತ್ರ ಸ್ಥಳ ಮತ್ತು ಅತಿ ಪವಿತ್ರ ಸ್ಥಳದ+ ಗೋಡೆಗಳ ಪಕ್ಕಕ್ಕೆ ಮತ್ತೊಂದು ಗೋಡೆಯನ್ನ ಸುತ್ತ* ಕಟ್ಟಿಸಿದ. ಆ ಎರಡು ಗೋಡೆ ಮಧ್ಯದಲ್ಲಿ ಕೊಠಡಿಗಳನ್ನ ಮಾಡಿಸಿದ.+  ಕೆಳ ಅಂತಸ್ತಿನ ಕೊಠಡಿಗಳು 5 ಮೊಳ ಅಗಲ ಇತ್ತು. ಮಧ್ಯ ಅಂತಸ್ತಿನ ಕೊಠಡಿಗಳು 6 ಮೊಳ ಅಗಲ ಮತ್ತು ಮೂರನೇ ಅಂತಸ್ತಿನ ಕೊಠಡಿಗಳು 7 ಮೊಳ ಅಗಲ ಇದ್ವು. ಆಮೇಲೆ ಅವನು ಕೊಠಡಿಗಳ ತೊಲೆಗಳನ್ನ ಇಡೋಕೆ ಆಗೋ ತರ ಆಲಯದ ಸುತ್ತ ಗೋಡೆಗೆ ಅಂಚುಗಳನ್ನ ಮಾಡಿಸಿದ. ಆಲಯದ ಗೋಡೆಯಲ್ಲಿ ತೂತು ಆಗಬಾರದು ಅಂತ ಹೀಗೆ ಮಾಡಿದ.+  ಗಣಿಯಲ್ಲೇ ಸಿದ್ಧ ಮಾಡ್ಕೊಂಡು ಬಂದ ಕಲ್ಲುಗಳಿಂದ ಆಲಯ ಕಟ್ಟಿದ್ರು.+ ಹಾಗಾಗಿ ಆಲಯ ಕಟ್ಟುವಾಗ ಸುತ್ತಿಗೆ, ಉಳಿ ಅಥವಾ ಯಾವುದೇ ಕಬ್ಬಿಣದ ಉಪಕರಣಗಳ ಶಬ್ದ ಕೇಳಿಸಲಿಲ್ಲ.  ಕೆಳ ಅಂತಸ್ತಿನ ಕೊಠಡಿಗಳ ಪ್ರವೇಶ ಆಲಯದ ದಕ್ಷಿಣಕ್ಕೆ* ಇತ್ತು.+ ಕೆಳ ಅಂತಸ್ತಿನಿಂದ ಮಧ್ಯದ ಅಂತಸ್ತಿಗೆ ಮತ್ತು ಮಧ್ಯದ ಅಂತಸ್ತಿನಿಂದ ಮೂರನೇ ಅಂತಸ್ತಿಗೆ ಹೋಗೋಕೆ ವೃತ್ತಾಕಾರದಲ್ಲಿ ಮೆಟ್ಟಿಲು ಇತ್ತು.  ಹೀಗೆ ಸೊಲೊಮೋನ ಆಲಯ ಕಟ್ಟೋ ಕೆಲಸ ಮುಂದುವರಿಸಿ, ಅದನ್ನ ಕಟ್ಟಿ ಮುಗಿಸಿದ.+ ಆಮೇಲೆ ಅವನು ಆಲಯದ ಚಾವಣಿಗೆ ದೇವದಾರು ಮರದ ತೊಲೆಗಳನ್ನ ಹಾಕಿ, ಅದೇ ಮರದ ಹಲಗೆಗಳಿಂದ ಅದನ್ನ ಮುಚ್ಚಿದ.+ 10  ಅವನು ಆಲಯದ ಸುತ್ತ ಕಟ್ಟಿದ್ದ ಪ್ರತಿಯೊಂದು ಕೊಠಡಿ+ ಐದು ಮೊಳ ಎತ್ರ ಇತ್ತು. ದೇವದಾರು ಮರದ ಕಟ್ಟಿಗೆ ಬಳಸಿ ಆ ಕೊಠಡಿಗಳನ್ನ ಆಲಯಕ್ಕೆ ಜೋಡಿಸಿದ್ರು. 11  ಅದೇ ಸಮಯದಲ್ಲಿ ಯೆಹೋವ ಸೊಲೊಮೋನನಿಗೆ ಈ ಸಂದೇಶ ಕೊಟ್ಟನು: 12  “ನೀನು ನನ್ನ ನಿಯಮಗಳ ಪ್ರಕಾರ ನಡೆದ್ರೆ, ನನ್ನ ತೀರ್ಪುಗಳನ್ನ ಪಾಲಿಸಿದ್ರೆ, ನನ್ನ ಆಜ್ಞೆಗಳನ್ನ ಮನಸ್ಸಲ್ಲಿಟ್ಟು ಅದ್ರ ಪ್ರಕಾರ ಜೀವಿಸಿದ್ರೆ+ ನಾನು ನಿನ್ನ ಅಪ್ಪ ದಾವೀದನಿಗೆ ನಿನ್ನ ಬಗ್ಗೆ ಕೊಟ್ಟ ಮಾತನ್ನ, ವಿಶೇಷವಾಗಿ ಈ ಆಲಯದ ಕುರಿತು ಕೊಟ್ಟ ಮಾತನ್ನ ನಿಜ ಮಾಡ್ತೀನಿ.+ 13  ಅಷ್ಟೇ ಅಲ್ಲ, ನಾನು ಇಸ್ರಾಯೇಲ್ಯರ ಮಧ್ಯದಲ್ಲೇ ಇರ್ತಿನಿ+ ಮತ್ತು ನಾನು ನನ್ನ ಜನ್ರಾಗಿರೋ ಇಸ್ರಾಯೇಲ್ಯರ ಕೈಬಿಡಲ್ಲ.”+ 14  ಸೊಲೊಮೋನ ಆಲಯ ಕಟ್ಟೋ ಕೆಲಸನ ಮುಂದುವರಿಸಿದ. 15  ಅವನು ದೇವದಾರು ಮರದ ಹಲಗೆಗಳನ್ನ ಬಳಸಿ ಆಲಯದ ಒಳಗೆ ಗೋಡೆಗಳನ್ನ ಮಾಡಿಸಿದ. ಅವನು ಆ ಗೋಡೆಗಳನ್ನ ನೆಲದಿಂದ ಹಿಡಿದು, ಚಾವಣಿಯ ತೊಲೆಗಳ ತನಕ ದೇವದಾರು ಮರದ ಹಲಗೆಯಿಂದ ಮುಚ್ಚಿಸಿದ. ಆಲಯದ ನೆಲವನ್ನ ಜುನಿಪರ್‌ ಮರದ ಹಲಗೆಯಿಂದ ಮುಚ್ಚಿಸಿದ.+ 16  ಆಮೇಲೆ ಅವನು ಆಲಯದ ಹಿಂದಿನ ಗೋಡೆಯಿಂದ ಆಲಯದ ಒಳಕ್ಕೆ 20 ಮೊಳ ಅಳೆದು, ನೆಲದಿಂದ ಹಿಡಿದು ತೊಲೆಗಳ ತನಕ ದೇವದಾರು ಮರದ ಹಲಗೆಗಳನ್ನ ಇಟ್ಟು ಒಂದು ಗೋಡೆ ಮಾಡಿಸಿದ. ಹೀಗೆ ಅವನು ಅದ್ರ* ಅತ್ಯಂತ ಒಳಗಿನ ಕೋಣೆ+ ಅಂದ್ರೆ ಅತಿ ಪವಿತ್ರ ಸ್ಥಳ+ ಮಾಡಿಸಿದ. 17  ಆಲಯದ+ ಒಳಗಿನ ಮುಂದಿನ ಭಾಗ ಅಂದ್ರೆ ಪವಿತ್ರ ಸ್ಥಳ* 40 ಮೊಳ ಇತ್ತು. 18  ಆಲಯದ ಒಳಗೆ ಬಳಸಿರೋ ದೇವದಾರು ಮರದ ಹಲಗೆ ಮೇಲೆ ದುಂಡಗಿನ ಹಣ್ಣು+ ಮತ್ತು ಅರಳಿದ ಹೂಗಳ ಚಿತ್ರಗಳನ್ನ+ ಕೆತ್ತಿದ್ದರು. ಒಂದೇ ಒಂದು ಕಲ್ಲೂ ಕಾಣದ ಹಾಗೆ ಆಲಯದ ಗೋಡೆಗಳನ್ನ ದೇವದಾರು ಮರದ ಹಲಗೆಗಳಿಂದ ಮುಚ್ಚಿದ್ರು. 19  ಅವನು ಆಲಯದ ಒಳಗೆ ಯೆಹೋವನ ಒಪ್ಪಂದದ ಮಂಜೂಷ+ ಇಡೋಕೆ ಅತಿ ಪವಿತ್ರ ಸ್ಥಳವನ್ನ ಸಿದ್ಧ ಮಾಡಿದ.+ 20  ಆ ಸ್ಥಳ 20 ಮೊಳ ಉದ್ದ, 20 ಮೊಳ ಅಗಲ ಮತ್ತು 20 ಮೊಳ ಎತ್ರ ಇತ್ತು.+ ಅವನು ಅದಕ್ಕೆ ಅಪ್ಪಟ ಚಿನ್ನದ ತಗಡುಗಳನ್ನ ಮತ್ತು ಯಜ್ಞವೇದಿಗೆ+ ದೇವದಾರು ಮರದ ಹಲಗೆಗಳನ್ನ ಹೊದಿಸಿದ. 21  ಸೊಲೊಮೋನ ಆಲಯದ ಒಳಗಿನ ಭಾಗವನ್ನ ಅಪ್ಪಟ ಚಿನ್ನದ ತಗಡುಗಳಿಂದ ಹೊದಿಸಿದ.+ ಅತಿ ಪವಿತ್ರ ಸ್ಥಳದ+ ಮುಂಭಾಗದಲ್ಲಿ ಚಿನ್ನದ ಸರಪಳಿಗಳನ್ನ ಹಾಕಿಸಿದ. 22  ಅವನು ಇಡೀ ಆಲಯವನ್ನ ಚಿನ್ನದ ತಗಡುಗಳಿಂದ ಹೊದಿಸಿದ. ಅತಿ ಪವಿತ್ರ ಸ್ಥಳದ ಹತ್ರ ಇದ್ದ ಯಜ್ಞವೇದಿಯನ್ನೂ ಪೂರ್ಣವಾಗಿ ಚಿನ್ನದಿಂದ ಹೊದಿಸಿದ.+ 23  ಅವನು ಅತಿ ಪವಿತ್ರ ಸ್ಥಳದಲ್ಲಿ ಇಡೋಕೆ ಪೈನ್‌ ಮರದಿಂದ* ಎರಡು ಕೆರೂಬಿಗಳನ್ನ+ ಮಾಡಿಸಿದ. ಒಂದೊಂದು ಕೆರೂಬಿ 10 ಮೊಳ ಎತ್ರ ಇತ್ತು.+ 24  ಮೊದಲ ಕೆರೂಬಿಯ ಎರಡೂ ರೆಕ್ಕೆಗಳು ಐದೈದು ಮೊಳ ಇದ್ವು. ಒಂದು ರೆಕ್ಕೆ ತುದಿಯಿಂದ ಮತ್ತೊಂದು ರೆಕ್ಕೆ ತುದಿ ಮಧ್ಯ 10 ಮೊಳ ಅಂತರ ಇತ್ತು. 25  ಎರಡನೇ ಕೆರೂಬಿಯ ರೆಕ್ಕೆಗಳ ತುದಿ ಮಧ್ಯ ಇದ್ದ ಅಂತರಾನೂ 10 ಮೊಳ ಇತ್ತು. ಎರಡೂ ಕೆರೂಬಿಗಳ ಅಳತೆ ಮತ್ತು ಆಕಾರ ಒಂದೇ ಆಗಿತ್ತು. 26  ಎರಡೂ ಕೆರೂಬಿಗಳು ಹತ್ತತ್ತು ಮೊಳ ಎತ್ರ ಇದ್ವು. 27  ಆಮೇಲೆ ಅವನು ಆ ಎರಡೂ ಕೆರೂಬಿಗಳನ್ನ+ ಅತಿ ಪವಿತ್ರ ಸ್ಥಳಕ್ಕೆ ತಂದಿಟ್ಟ. ಕೆರೂಬಿಗಳ ರೆಕ್ಕೆಗಳು ಚಾಚಿದ್ರಿಂದ ಒಂದು ಕೆರೂಬಿಯ ರೆಕ್ಕೆ ಒಂದು ಗೋಡೆಯನ್ನ, ಮತ್ತೊಂದು ಕೆರೂಬಿಯ ರೆಕ್ಕೆ ಇನ್ನೊಂದು ಗೋಡೆಯನ್ನ ಮುಟ್ಟುತ್ತಿದ್ವು. ಕೆರೂಬಿಗಳ ಇನ್ನೆರಡು ರೆಕ್ಕೆಗಳು ಕೋಣೆಯ ಮಧ್ಯಭಾಗದಲ್ಲಿ ಒಂದಕ್ಕೊಂದು ತಾಗುತ್ತಿದ್ವು. 28  ಅವನು ಕೆರೂಬಿಗಳನ್ನ ಚಿನ್ನದ ತಗಡಿನಿಂದ ಹೊದಿಸಿದ. 29  ಅವನು ಆಲಯದ ಎಲ್ಲ ಗೋಡೆಗಳ ಮೇಲೆ ಅಂದ್ರೆ ಒಳಗಿನ ಕೋಣೆ ಮತ್ತು ಹೊರಗಿನ ಕೋಣೆಯ* ಗೋಡೆಗಳ ಮೇಲೆ ಕೆರೂಬಿಗಳ,+ ಖರ್ಜೂರದ ಮರಗಳ+ ಮತ್ತು ಅರಳಿದ ಹೂಗಳ+ ಚಿತ್ರವನ್ನ ಕೆತ್ತಿಸಿದ. 30  ಅವನು ಆಲಯದ ಒಳಗಿನ ಮತ್ತು ಹೊರಗಿನ ಕೋಣೆಗಳ ನೆಲನ ಚಿನ್ನದ ತಗಡಿಂದ ಹೊದಿಸಿದ. 31  ಆಮೇಲೆ ಅವನು ಐದನೇ ಭಾಗವಾಗಿ* ಅತಿ ಪವಿತ್ರ ಸ್ಥಳದ ಒಳಗೆ ಹೋಗೋಕೆ ಪೈನ್‌ ಮರದ ಬಾಗಿಲು, ಕಂಬ, ಚೌಕಟ್ಟುಗಳನ್ನ ಮಾಡಿಸಿದ. 32  ಪೈನ್‌ ಮರದಿಂದ ಮಾಡಿದ್ದ ಎರಡು ಬಾಗಿಲಿನ ಮೇಲೆ ಕೆರೂಬಿಗಳ, ಖರ್ಜೂರದ ಮರಗಳ ಮತ್ತು ಅರಳಿದ ಹೂಗಳ ಚಿತ್ರವನ್ನ ಕೆತ್ತಿಸಿದ ಮತ್ತು ಆ ಕೆತ್ತನೆನ ಚಿನ್ನದ ತಗಡಿಂದ ಹೊದಿಸಿದ. ಅವನು ಕೆರೂಬಿಗಳ ಮತ್ತು ಖರ್ಜೂರದ ಮರಗಳ ಮೇಲೆ ಚಿನ್ನದ ತಗಡನ್ನ ಸುತ್ತಿಗೆಯಿಂದ ಹೊಡೆಸಿ ಹೊದಿಸಿದ. 33  ಅದೇ ತರ ಅವನು ನಾಲ್ಕನೇ ಭಾಗವಾಗಿ* ಪವಿತ್ರ ಸ್ಥಳಕ್ಕೂ* ಪೈನ್‌ ಮರದ ಚೌಕಟ್ಟನ್ನ ಮಾಡಿಸಿದ. 34  ಅವನು ಜುನಿಪರ್‌ ಮರದ ಎರಡು ಬಾಗಿಲು ಮಾಡಿಸಿದ. ಪ್ರತಿಯೊಂದು ಬಾಗಿಲಿಗೂ ಎರಡು ಭಾಗಗಳಿದ್ವು. ಅದಕ್ಕೆ ತಿರುಗಾಣಿ ಹಾಕಿದ್ರಿಂದ ಅವನ್ನ ಮಡಚಬಹುದಿತ್ತು.+ 35  ಅವನು ಬಾಗಿಲಿನ ಮೇಲೆ ಕೆರೂಬಿಗಳ, ಖರ್ಜೂರದ ಮರಗಳ, ಅರಳಿದ ಹೂಗಳ ಚಿತ್ರವನ್ನ ಕೆತ್ತಿಸಿ ಅವುಗಳಿಗೆ ಚಿನ್ನದ ತಗಡನ್ನ ಹೊದಿಸಿದ. 36  ಅವನು ಕತ್ತರಿಸಿದ ಕಲ್ಲುಗಳ ಮೂರು ಸಾಲುಗಳನ್ನ ಮತ್ತು ದೇವದಾರು ಮರದ ತೊಲೆಗಳ ಒಂದು ಸಾಲನ್ನ ಒಂದರ ಮೇಲೊಂದು ಇಟ್ಟು ಗೋಡೆ ಕಟ್ಟಿಸಿ,+ ಒಳಗಿನ ಅಂಗಳ+ ಮಾಡಿಸಿದ. 37  ಯೆಹೋವನ ಆಲಯದ ತಳಪಾಯವನ್ನ 4ನೇ ವರ್ಷದ ಝಿವ್‌* ತಿಂಗಳಲ್ಲಿ ಹಾಕಿದ್ರು.+ 38  ಆಲಯದ ಕೆಲಸ 11ನೇ ವರ್ಷದ ಬುಲ್‌* ತಿಂಗಳಲ್ಲಿ (ಅಂದ್ರೆ ಎಂಟನೇ ತಿಂಗಳಲ್ಲಿ) ಮುಗಿತು. ಆಲಯವನ್ನ ಅದ್ರ ನಕ್ಷೆ ಪ್ರಕಾರ ಮತ್ತು ಅದನ್ನ ಯೋಜನೆ ಮಾಡಿದ ಹಾಗೇ ಕಟ್ಟಿದ್ರು.+ ಈ ಆಲಯ ಕಟ್ಟಿ ಮುಗಿಸೋಕೆ ಸೊಲೊಮೋನನಿಗೆ ಏಳು ವರ್ಷ ಹಿಡಿತು.

ಪಾದಟಿಪ್ಪಣಿ

ಅಕ್ಷ. “ಇಸ್ರಾಯೇಲನ ಗಂಡು ಮಕ್ಕಳು.”
ಒಂದು ಮೊಳ ಅಂದ್ರೆ 44.5 ಸೆಂ.ಮೀ. (17.5 ಇಂಚು) ಪರಿಶಿಷ್ಟ ಬಿ14 ನೋಡಿ.
ಅಥವಾ “ಅಗಲ.”
ಅದು, ಮೂರು ಬದಿಗಳು.
ಅಕ್ಷ. “ಬಲಕ್ಕೆ.”
ಅದು, ಆಲಯದ.
ಅದು, ಅತಿ ಪವಿತ್ರ ಸ್ಥಳದ ಮುಂದೆ ಇತ್ತು.
ಅಕ್ಷ. “ಎಣ್ಣೆ ಮರ.” ಬಹುಶಃ ಅಲಪ್ಪೋ ಪೈನ್‌.
ಅಕ್ಷ. “ಒಳಗೆ ಮತ್ತು ಹೊರಗೆ.”
ಬಹುಶಃ ಚೌಕಟ್ಟಿನ ಅಥವಾ ಬಾಗಿಲಿನ ಅಳತೆಯನ್ನ ಸೂಚಿಸುತ್ತಿರಬಹುದು.
ಬಹುಶಃ ಚೌಕಟ್ಟಿನ ಅಥವಾ ಬಾಗಿಲಿನ ಅಳತೆಯನ್ನ ಸೂಚಿಸುತ್ತಿರಬಹುದು.
ಅಕ್ಷ. “ಆಲಯ.”