ಕೊರಿಂಥದವರಿಗೆ ಬರೆದ ಮೊದಲನೇ ಪತ್ರ 16:1-24

  • ಯೆರೂಸಲೇಮಿನ ಕ್ರೈಸ್ತರಿಗಾಗಿ ಹಣ ಸಂಗ್ರಹ (1-4)

  • ಪೌಲನ ಪ್ರಯಾಣದ ಬಗ್ಗೆ (5-9)

  • ತಿಮೊತಿ, ಅಪೊಲ್ಲೋಸನ ಭೇಟಿ ಬಗ್ಗೆ (10-12)

  • ಪ್ರೋತ್ಸಾಹ ಮತ್ತು ವಂದನೆ (13-24)

16  ಪವಿತ್ರ ಜನ್ರಿಗೋಸ್ಕರ ಹಣ ಕೂಡಿಡೋದ್ರ ಬಗ್ಗೆ ಹೇಳಬೇಕಾದ್ರೆ,+ ಗಲಾತ್ಯದಲ್ಲಿರೋ ಸಭೆಗಳಿಗೆ ನಾನು ಕೊಟ್ಟ ನಿರ್ದೇಶನಗಳನ್ನೇ ನೀವು ಪಾಲಿಸಿ.  ನಿಮ್ಮಲ್ಲಿ ಪ್ರತಿಯೊಬ್ರು ಪ್ರತಿ ವಾರದ ಮೊದಲ್ನೇ ದಿನ ತಮ್ಮತಮ್ಮ ಆದಾಯಕ್ಕೆ ತಕ್ಕ ಹಾಗೆ ಏನಾದ್ರೂ ತೆಗೆದಿಡಬೇಕು. ಹಾಗೆ ಮಾಡಿದ್ರೆ ನಾನು ಬಂದಾಗ ಹಣ ಕೂಡಿಸೋ ಅಗತ್ಯ ಇರಲ್ಲ.  ನೀವು ಪತ್ರದಲ್ಲಿ ನಂಬಿಗಸ್ತ ವ್ಯಕ್ತಿಗಳ ಹೆಸ್ರು ಹೇಳಿದ್ರೆ+ ನಾನಲ್ಲಿ ಬಂದಾಗ ನಿಮ್ಮ ಪ್ರೀತಿಯ ಆ ಉಡುಗೊರೆಯನ್ನ ಅವ್ರ ಕೈಯಲ್ಲೇ ಕೊಟ್ಟು ಯೆರೂಸಲೇಮಿಗೆ ಕಳಿಸ್ತೀನಿ.  ನಾನೂ ಅಲ್ಲಿಗೆ ಹೋಗಬೇಕಾಗಿ ಬಂದ್ರೆ ಅವ್ರ ಜೊತೆ ಹೋಗ್ತೀನಿ.  ನಾನು ಮಕೆದೋನ್ಯಕ್ಕೆ+ ಹೋಗಬೇಕಂತಿದ್ದೀನಿ, ಆಮೇಲೆ ಅಲ್ಲಿಂದ ನಿಮ್ಮ ಹತ್ರ ಬರ್ತಿನಿ.  ನಾನು ನಿಮ್ಮ ಜೊತೆ ಸ್ವಲ್ಪ ಕಾಲ ಉಳ್ಕೊಬಹುದು. ಹಾಗೆ ಉಳ್ಕೊಂಡ್ರೆ ಚಳಿಗಾಲ ಕಳಿಯೋ ತನಕ ಇರ್ತಿನಿ. ಆಮೇಲೆ ನಾನು ಬೇರೆ ಕಡೆ ಹೋಗುವಾಗ ನೀವು ಸ್ವಲ್ಪ ದೂರ ಬಂದು ನನ್ನನ್ನ ಕಳಿಸ್ಕೊಡಿ.  ಈಗ ಹೋಗೋ ದಾರಿಯಲ್ಲಿ ಸುಮ್ನೆ ನಿಮ್ಮನ್ನ ನೋಡ್ಕೊಂಡು ಹೋಗೋಕೆ ನನಗಿಷ್ಟ ಇಲ್ಲ. ಯೆಹೋವ* ಅನುಮತಿಸಿದ್ರೆ ನಿಮ್ಮ ಜೊತೆ ಸ್ವಲ್ಪ ಸಮಯ ಉಳ್ಕೊಳ್ಳೋಕೆ ಇಷ್ಟಪಡ್ತೀನಿ.+  ಆದ್ರೆ ಐವತ್ತನೇ ದಿನದ* ಹಬ್ಬದ ತನಕ ನಾನು ಎಫೆಸದಲ್ಲೇ ಇರ್ತಿನಿ.+  ಯಾಕಂದ್ರೆ ಇಲ್ಲಿ ಜಾಸ್ತಿ ಸೇವೆ ಮಾಡೋ ಅವಕಾಶದ ಬಾಗಿಲು ನನಗೋಸ್ಕರ ಅಗಲವಾಗಿ ತೆರೆದಿದೆ.+ ಆದ್ರೆ ತುಂಬ ವಿರೋಧಿಗಳು ಇದ್ದಾರೆ. 10  ತಿಮೊತಿ+ ಅಲ್ಲಿಗೆ ಬಂದ್ರೆ ಅವನಿಗೆ ನಿಮ್ಮ ಜೊತೆ ಇರುವಾಗ ಯಾವ ಭಯನೂ ಆಗದೇ ಇರೋ ತರ ನೋಡ್ಕೊಳ್ಳಿ. ಯಾಕಂದ್ರೆ ನನ್ನ ಹಾಗೇ ಅವನೂ ಯೆಹೋವನ* ಕೆಲಸ ಮಾಡ್ತಿದ್ದಾನೆ.+ 11  ಹಾಗಾಗಿ ಯಾರೂ ಅವನನ್ನ ಕೀಳಾಗಿ ನೋಡಬೇಡಿ. ಅವನನ್ನ ಸುರಕ್ಷಿತವಾಗಿ ನನ್ನ ಹತ್ರ ಕಳಿಸ್ಕೊಡಿ. ಸಹೋದರರ ಜೊತೆ ನಾನು ಅವನಿಗಾಗಿ ಕಾಯ್ತಿದ್ದೀನಿ. 12  ನಮ್ಮ ಸಹೋದರ ಅಪೊಲ್ಲೋಸನ+ ಬಗ್ಗೆ ಹೇಳೋದಾದ್ರೆ, ಸಹೋದರರ ಜೊತೆ ಹೋಗಿ ನಿಮ್ಮನ್ನ ನೋಡೋಕೆ ನಾನು ಅವನನ್ನ ತುಂಬ ಕೇಳ್ಕೊಂಡೆ. ಆದ್ರೆ ಅಲ್ಲಿ ಬರೋಕೆ ಈಗ ಅವನಿಗೆ ಮನಸ್ಸಿಲ್ಲ, ಮುಂದೆ ಅವಕಾಶ ಸಿಕ್ಕಿದಾಗ ಬರ್ತಾನೆ. 13  ಎಚ್ಚರವಾಗಿರಿ,+ ನಂಬಿಕೆಯಲ್ಲಿ ದೃಢವಾಗಿರಿ,+ ಧೈರ್ಯದಿಂದ* ಮುಂದೆ ಸಾಗಿ,+ ಬಲಿಷ್ಠರಾಗಿರಿ.+ 14  ನೀವು ಎಲ್ಲವನ್ನ ಪ್ರೀತಿಯಿಂದ ಮಾಡಿ.+ 15  ಸಹೋದರರೇ, ಅಖಾಯದಲ್ಲಿ ಮೊದ್ಲು ಶಿಷ್ಯರಾಗಿದ್ದು ಸ್ತೆಫನಸನ ಮನೆಯವರು, ಅವರು ಪವಿತ್ರ ಜನ್ರ ಸೇವೆ ಮಾಡೋಕೆ ತಮ್ಮನ್ನೇ ಅರ್ಪಿಸ್ಕೊಂಡಿದ್ದಾರೆ ಅಂತ ನಿಮಗೆ ಗೊತ್ತಿದ್ಯಲ್ಲಾ. ಹಾಗಾಗಿ ನಾನು ಕೊಡೋ ಪ್ರೋತ್ಸಾಹ ಏನಂದ್ರೆ, 16  ನೀವೂ ಅಂಥವ್ರಿಗೆ ಮತ್ತು ಸಹಕಾರ ಕೊಡ್ತಾ ಕಷ್ಟಪಟ್ಟು ಕೆಲಸಮಾಡೋ ಎಲ್ರಿಗೆ ಅಧೀನತೆ ತೋರಿಸಿ.+ 17  ಸ್ತೆಫನಸ,+ ಫೊರ್ತುನಾತ ಮತ್ತು ಅಖಾಯಿಕ ಇಲ್ಲಿಗೆ ಬಂದಿದ್ದಕ್ಕೆ ನನಗೆ ತುಂಬ ಖುಷಿ ಆಗ್ತಿದೆ. ಯಾಕಂದ್ರೆ ನೀವು ನನ್ನ ಜೊತೆ ಇಲ್ಲ ಅನ್ನೋ ಕೊರಗನ್ನ ಅವರು ನೀಗಿಸಿದ್ದಾರೆ. 18  ಅವರು ನನ್ನಲ್ಲೂ ನಿಮ್ಮಲ್ಲೂ ಹೊಸ ಚೈತನ್ಯ ತುಂಬಿದ್ದಾರೆ. ಅದಕ್ಕೇ ಅಂಥ ವ್ಯಕ್ತಿಗಳನ್ನ ಮಾನ್ಯ ಮಾಡಿ. 19  ಏಷ್ಯಾದಲ್ಲಿರೋ ಸಭೆಯವರು ನಿಮಗೆ ವಂದನೆ ಹೇಳಿದ್ದಾರೆ. ಅಕ್ವಿಲ, ಪ್ರಿಸ್ಕ ಮತ್ತು ಅವರ ಮನೆಯಲ್ಲಿ ಸೇರಿಬರೋ ಸಭೆಯವರು+ ಪ್ರಭುವಿನ ಶಿಷ್ಯರಾಗಿರೋ ನಿಮಗೆ ಹೃತ್ಪೂರ್ವಕ ವಂದನೆ ಹೇಳಿದ್ದಾರೆ. 20  ಎಲ್ಲ ಸಹೋದರರು ನಿಮಗೆ ವಂದನೆ ಹೇಳಿದ್ದಾರೆ. ಒಬ್ರು ಇನ್ನೊಬ್ರಿಗೆ ಪವಿತ್ರವಾದ ಮುತ್ತಿಟ್ಟು ವಂದಿಸಿ. 21  ಪೌಲನಾದ ನಾನು ನನ್ನ ಕೈಯಾರೆ ಬರೆದು ನಿಮಗೆ ವಂದನೆ ಹೇಳ್ತಿದ್ದೀನಿ. 22  ಪ್ರಭು ಮೇಲೆ ಪ್ರೀತಿ ಇಲ್ಲದವನಿಗೆ ಶಾಪ ಸಿಗ್ಲಿ. ನಮ್ಮ ಪ್ರಭು ಬಾ! 23  ಪ್ರಭು ಯೇಸುವಿನ ಅಪಾರ ಕೃಪೆ ನಿಮ್ಮ ಮೇಲಿರಲಿ. 24  ಕ್ರಿಸ್ತ ಯೇಸು ಜೊತೆ ಒಂದಾಗಿರೋ ನಿಮ್ಮನ್ನೆಲ್ಲ ನಾನು ತುಂಬ ಪ್ರೀತಿಸ್ತೀನಿ.

ಪಾದಟಿಪ್ಪಣಿ

ಅಥವಾ “ಪಂಚಾಶತ್ತಮ.”
ಅಕ್ಷ. “ಪೌರುಷದಿಂದ.”