ತಿಮೊತಿಗೆ ಬರೆದ ಮೊದಲನೇ ಪತ್ರ 3:1-16
3 ನಂಬುವಂಥ ಮಾತೇನಂದ್ರೆ, ಒಬ್ಬನು ಮೇಲ್ವಿಚಾರಕನಾಗೋಕೆ ಪ್ರಯತ್ನಿಸಿದ್ರೆ*+ ಅವನು ಒಳ್ಳೇದು ಮಾಡೋಕೆ ಇಷ್ಟಪಡ್ತಿದ್ದಾನೆ.
2 ಹಾಗಾಗಿ ಮೇಲ್ವಿಚಾರಕ ಹೇಗಿರಬೇಕಂದ್ರೆ, ಅವನ ಮೇಲೆ ಯಾವ ಆರೋಪನೂ ಇರಬಾರ್ದು, ಅವನಿಗೆ ಒಬ್ಬಳೇ ಹೆಂಡತಿ ಇರಬೇಕು. ಅವನಿಗೆ ಎಲ್ಲ ವಿಷ್ಯಗಳಲ್ಲೂ ಇತಿಮಿತಿ ಇರಬೇಕು, ತಿಳುವಳಿಕೆಯಿಂದ ನಡ್ಕೊಬೇಕು,*+ ಶಿಸ್ತಿಂದ ಇರಬೇಕು, ಅತಿಥಿಗಳನ್ನ ಸತ್ಕರಿಸಬೇಕು,+ ಕಲಿಸೋ ಸಾಮರ್ಥ್ಯ ಇರಬೇಕು.+
3 ಕುಡುಕ,+ ಹೊಡಿಯೋ ವ್ಯಕ್ತಿ ಆಗಿರಬಾರ್ದು. ನಾನು ಹೇಳಿದ್ದೇ ಆಗಬೇಕು ಅನ್ನೋ ಗುಣ ಇರಬಾರ್ದು.*+ ಜಗಳಗಂಟನಾಗಿ ಇರಬಾರ್ದು,+ ಹಣಕ್ಕೆ ಆಸೆಪಡಬಾರ್ದು.+
4 ಅವನ ಕುಟುಂಬವನ್ನ ಚೆನ್ನಾಗಿ ನೋಡ್ಕೊಬೇಕು, ಅವನ ಮಕ್ಕಳು ಅವನ ಮಾತನ್ನ ಕೇಳ್ಬೇಕು, ಅವ್ರ ನಡತೆ ಒಳ್ಳೇದಾಗಿರಬೇಕು.+
5 (ಒಬ್ಬನಿಗೆ ತನ್ನ ಕುಟುಂಬವನ್ನೇ ನೋಡ್ಕೊಳ್ಳೋಕೆ ಗೊತ್ತಿಲ್ಲಾಂದ್ರೆ ದೇವರ ಸಭೆಯನ್ನ ಹೇಗೆ ನೋಡ್ಕೊಳ್ತಾನೆ?)
6 ಅವನು ಇತ್ತೀಚೆಗೆ ಕ್ರೈಸ್ತನಾಗಿರಬಾರದು.+ ಯಾಕಂದ್ರೆ ಅವನು ಹೆಮ್ಮೆಯಿಂದ ಉಬ್ಬಿ ಸೈತಾನನಿಗೆ ಸಿಗೋ ಶಿಕ್ಷೆಗೆ ಗುರಿ ಆಗಬಹುದು.
7 ಹೊರಗಿನವ್ರ ಹತ್ರನೂ ಅವನಿಗೆ ಒಳ್ಳೇ ಹೆಸ್ರಿರಬೇಕು.+ ಆಗ ಅವನಿಗೆ ಅವಮಾನ ಆಗಲ್ಲ* ಮತ್ತು ಸೈತಾನನ ಬಲೆಗೆ ಸಿಕ್ಕಿಬೀಳಲ್ಲ.
8 ಸಹಾಯಕ ಸೇವಕರೂ ಜವಾಬ್ದಾರಿ ಇರೋ ವ್ಯಕ್ತಿಗಳಾಗಿರಬೇಕು, ಎರಡು ನಾಲಿಗೆಯವರು,* ಮಿತಿಮೀರಿ ದ್ರಾಕ್ಷಾಮದ್ಯ ಕುಡಿಯುವವರು, ಹಣದಾಸೆ ಇರುವವರು, ಸ್ವಂತ ಲಾಭ ಮಾತ್ರ ನೋಡ್ಕೊಳ್ಳೋರು ಆಗಿರಬಾರದು.+
9 ಶುದ್ಧ ಮನಸಾಕ್ಷಿಯಿಂದ+ ಪವಿತ್ರ ರಹಸ್ಯಕ್ಕೆ ಅಂದ್ರೆ ನಂಬಿಕೆಗೆ ಅಂಟ್ಕೊಂಡಿರಬೇಕು.
10 ಅಷ್ಟೇ ಅಲ್ಲ, ಅವರು ಈ ಸುಯೋಗಕ್ಕೆ ಯೋಗ್ಯರಾ ಅಂತ ಮೊದ್ಲೇ ಪರೀಕ್ಷಿಸಿ ನೋಡಿ. ಅವ್ರ ಮೇಲೆ ಯಾವ ದೂರು ಇಲ್ಲದಿದ್ರೆ ಅವರು ಸಹಾಯಕ ಸೇವಕರಾಗಿ ಸೇವೆ ಮಾಡ್ಲಿ.+
11 ಅದೇ ತರ ಸ್ತ್ರೀಯರು ಜವಾಬ್ದಾರಿಯಿಂದ ನಡ್ಕೊಬೇಕು, ಸುಳ್ಳು ಹಬ್ಬಿಸಿ ಬೇರೆಯವ್ರ ಹೆಸ್ರು ಹಾಳು ಮಾಡಬಾರದು,+ ಎಲ್ಲ ವಿಷ್ಯಗಳಲ್ಲಿ ಇತಿಮಿತಿ ಇರಬೇಕು, ನಂಬಿಗಸ್ತರಾಗಿ ಇರಬೇಕು.+
12 ಸಹಾಯಕ ಸೇವಕನಿಗೆ ಒಬ್ಬಳೇ ಹೆಂಡತಿ ಇರಬೇಕು. ಅವನು ಕುಟುಂಬನ ಅದ್ರಲ್ಲೂ ಮಕ್ಕಳನ್ನ ಚೆನ್ನಾಗಿ ನೋಡ್ಕೊಬೇಕು.
13 ಚೆನ್ನಾಗಿ ಸೇವೆ ಮಾಡುವವರು ಒಳ್ಳೇ ಹೆಸ್ರು ಪಡ್ಕೊಳ್ತಾರೆ. ಅಷ್ಟೇ ಅಲ್ಲ, ಕ್ರಿಸ್ತ ಯೇಸು ಮೇಲೆ ಇಟ್ಟಿರೋ ನಂಬಿಕೆ ಬಗ್ಗೆ ತುಂಬ ಭರವಸೆಯಿಂದ ಮಾತಾಡ್ತಾರೆ.
14 ಆದಷ್ಟು ಬೇಗ ನಿನ್ನ ಹತ್ರ ಬರೋಕೆ ನನಗೆ ಇಷ್ಟ ಇದ್ರೂ ಇದನ್ನೆಲ್ಲ ನಿನಗೆ ಬರಿತಾ ಇದ್ದೀನಿ,
15 ನಾನು ಬರೋಕೆ ತಡ ಆದ್ರೂ ದೇವರ ಮನೇಲಿ ನೀನು ಹೇಗೆ ನಡ್ಕೊಬೇಕು ಅಂತ ನಿನಗೆ ಗೊತ್ತಿರುತ್ತೆ.+ ಈ ಮನೆ ಜೀವ ಇರೋ ದೇವರ ಸಭೆ ಆಗಿದೆ ಮತ್ತು ಸತ್ಯದ ಸ್ತಂಭ, ಆಧಾರ ಆಗಿದೆ.
16 ನಿಜವಾಗ್ಲೂ ದೇವರ ಮೇಲಿನ ಭಕ್ತಿಯ ಈ ಪವಿತ್ರ ರಹಸ್ಯ ತುಂಬ ಮುಖ್ಯ. ಅದೇನಂದ್ರೆ ‘ಯೇಸು ಒಬ್ಬ ಮನುಷ್ಯನಾದ,+ ಕಣ್ಣಿಗೆ ಕಾಣದ ದೇಹ ಪಡ್ಕೊಂಡಾಗ ದೇವರು ಆತನನ್ನ ನೀತಿವಂತನನ್ನಾಗಿ ನೋಡಿದನು,+ ಆತನು ದೇವದೂತರ ಮುಂದೆ ಕಾಣಿಸ್ಕೊಂಡನು,+ ಬೇರೆ ಜನ್ರಿಗೆ ಆತನ ಬಗ್ಗೆ ಸಾರಲಾಯ್ತು,+ ಲೋಕದಲ್ಲಿರೋ ಜನ್ರು ಆತನನ್ನ ನಂಬಿದ್ರು+ ಮತ್ತು ಆತನಿಗೆ ಮಹಿಮೆ ಕೊಟ್ಟು ಸ್ವರ್ಗಕ್ಕೆ ಕರ್ಕೊಂಡು ಹೋಗಲಾಯ್ತು.’
ಪಾದಟಿಪ್ಪಣಿ
^ ಅಕ್ಷ. “ಎಟಕಿಸ್ಕೊಂಡ್ರೆ.”
^ ಅಥವಾ “ಒಳ್ಳೇ ನಿರ್ಧಾರ ತಗೊಬೇಕು; ಬುದ್ಧಿ ಇರಬೇಕು.”
^ ಅಕ್ಷ. “ಮಣಿಬೇಕು.”
^ ಅಥವಾ “ಕೆಟ್ಟ ಹೆಸ್ರು ಬರಲ್ಲ.”
^ ಅಥವಾ “ಮಾತಲ್ಲಿ ಮರಳು ಮಾಡಬಾರದು.”