ಒಂದನೇ ಪೂರ್ವಕಾಲವೃತ್ತಾಂತ 16:1-43

  • ಮಂಜೂಷ ಡೇರೆ ಒಳಗೆ (1-6)

  • ದಾವೀದನ ಧನ್ಯವಾದ ಗೀತೆ (7-36)

    • “ಯೆಹೋವ ರಾಜನಾಗಿದ್ದಾನೆ!” (31)

  • ಮಂಜೂಷದ ಮುಂದಿನ ಸೇವೆ (37-43)

16  ಅವರು ಸತ್ಯ ದೇವರ ಮಂಜೂಷವನ್ನ ತಂದು ಡೇರೆ ಒಳಗಿಟ್ರು. ದಾವೀದ ಮಂಜೂಷಕ್ಕಂತಾನೇ ಆ ಡೇರೆ ಹಾಕಿದ್ದ.+ ಅವರು ಸರ್ವಾಂಗಹೋಮ ಬಲಿಗಳನ್ನ, ಸಮಾಧಾನ ಬಲಿಗಳನ್ನ ಸತ್ಯ ದೇವರ ಮುಂದೆ ಅರ್ಪಿಸಿದ್ರು.+  ದಾವೀದ ಸರ್ವಾಂಗಹೋಮ ಬಲಿಗಳನ್ನ,+ ಸಮಾಧಾನ ಬಲಿಗಳನ್ನ+ ಅರ್ಪಿಸಿದ ಮೇಲೆ ಯೆಹೋವನ ಹೆಸ್ರಲ್ಲಿ ಜನ್ರನ್ನ ಆಶೀರ್ವದಿಸಿದ.  ಇದಾದ್ಮೇಲೆ ಅವನು ಎಲ್ಲ ಇಸ್ರಾಯೇಲ್ಯರಿಗೆ, ಅಂದ್ರೆ ಇಸ್ರಾಯೇಲಿನ ಎಲ್ಲ ಸ್ತ್ರೀಪುರುಷರಿಗೆ ಒಂದೊಂದು ರೊಟ್ಟಿ, ಖರ್ಜೂರದ ಬಿಲ್ಲೆ, ಒಣದ್ರಾಕ್ಷಿ ಬಿಲ್ಲೆ ಕೊಟ್ಟ.  ಆಮೇಲೆ ಅವನು ಕೆಲವು ಲೇವಿಯರನ್ನ ಯೆಹೋವನ ಮಂಜೂಷದ ಮುಂದೆ ಸೇವೆ ಮಾಡೋಕೆ,+ ಇಸ್ರಾಯೇಲ್‌ ದೇವರಾದ ಯೆಹೋವನನ್ನ ಮಹಿಮೆ ಪಡಿಸೋಕೆ,* ಆತನಿಗೆ ಧನ್ಯವಾದ ಹೇಳೋಕೆ, ಹಾಡಿ ಹೊಗಳೋಕೆ ನೇಮಿಸಿದ.  ಅವ್ರಲ್ಲಿ ಆಸಾಫ+ ಮುಖ್ಯಸ್ಥ. ಜೆಕರ್ಯ ಎರಡನೆಯವನಾಗಿದ್ದ. ಯೆಗೀಯೇಲ್‌, ಶೆಮೀರಾಮೋತ್‌, ಯೆಹೀಯೇಲ್‌, ಮತ್ತಿತ್ಯ, ಎಲೀಯಾಬ್‌, ಬೆನಾಯ, ಓಬೇದೆದೋಮ, ಯೆಗೀಯೇಲ್‌+ ಇವ್ರೆಲ್ಲ ತಂತಿವಾದ್ಯ ನುಡಿಸ್ತಿದ್ರು.+ ಆಸಾಫ ಝಲ್ಲರಿಗಳನ್ನ ಬಾರಿಸ್ತಿದ್ದ.+  ಪುರೋಹಿತರಾದ ಬೆನಾಯ, ಯಹಜೀಯೇಲ ಸತ್ಯ ದೇವರ ಒಪ್ಪಂದದ ಮಂಜೂಷದ ಮುಂದೆ ದಿನಾಲೂ ತುತ್ತೂರಿಗಳನ್ನ ಊದುತಿದ್ರು.  ಆ ದಿನ ದಾವೀದ ಮೊದಲ ಸಲ ಯೆಹೋವನಿಗಾಗಿ ಒಂದು ಧನ್ಯವಾದ ಗೀತೆ ರಚಿಸಿದ. ಅದನ್ನ ಹಾಡೋಕೆ ಆಸಾಫನಿಗೆ,+ ಅವನ ಸಹೋದರರಿಗೆ ಹೇಳಿದ. ಆ ಹಾಡು ಹೀಗಿತ್ತು:   “ಯೆಹೋವನಿಗೆ ಧನ್ಯವಾದ ಹೇಳಿ,+ ಆತನ ಹೆಸ್ರಲ್ಲಿ ಪ್ರಾರ್ಥಿಸಿ,ಆತನ ಕೆಲಸಗಳ ಬಗ್ಗೆ ಬೇರೆ ಜನ್ರಿಗೆ ಹೇಳಿ!+   ಆತನಿಗೆ ಹಾಡನ್ನ ಹಾಡಿ, ಆತನನ್ನ ಹೊಗಳಿ,*+ಆತನ ಎಲ್ಲ ಅದ್ಭುತಗಳ ಬಗ್ಗೆ ಧ್ಯಾನಿಸಿ.*+ 10  ಹೆಮ್ಮೆಯಿಂದ ಆತನ ಪವಿತ್ರ ಹೆಸ್ರನ್ನ ಕೊಂಡಾಡಿ.+ ಯೆಹೋವನನ್ನ ಹುಡುಕುವವರು ಸಂತೋಷ ಪಡಲಿ.+ 11  ಯೆಹೋವನಿಗಾಗಿ, ಆತನ ಬಲಕ್ಕಾಗಿ ಹುಡುಕಿ.+ ಆತನ ಮೆಚ್ಚುಗೆ ಪಡಿಯೋಕೆ ಪ್ರಯತ್ನಿಸ್ತಾ ಇರಿ.+ 12  ಆತನು ಮಾಡಿದ ಮಹತ್ಕಾರ್ಯಗಳನ್ನ,+ಅದ್ಭುತಗಳನ್ನ, ತೀರ್ಪುಗಳನ್ನ ನೆನಪಿಸ್ಕೊಳ್ಳಿ, 13  ಆತನ ಸೇವಕನಾದ ಇಸ್ರಾಯೇಲಿನ ಸಂತತಿಯೇ,+ಯಾಕೋಬನ ಮಕ್ಕಳೇ, ಆತನು ಆರಿಸ್ಕೊಂಡ ಜನ್ರೇ,+ ಅದನ್ನ ನೆನಪಿಸ್ಕೊಳ್ಳಿ. 14  ಆತನು ನಮ್ಮ ದೇವರಾದ ಯೆಹೋವ.+ ಆತನ ತೀರ್ಪುಗಳು ಇಡೀ ಭೂಮಿಯಲ್ಲಿ ತುಂಬ್ಕೊಂಡಿವೆ.+ 15  ಆತನ ಒಪ್ಪಂದವನ್ನ ಯಾವಾಗ್ಲೂ ನೆನಪಿಸ್ಕೊಳ್ಳಿ,ಆತನು ಕೊಟ್ಟ ಮಾತನ್ನ* ಸಾವಿರ ಪೀಳಿಗೆಗಳ ತನಕ ನೆನಪಿಸ್ಕೊಳ್ಳಿ,+ 16  ಆತನು ಅಬ್ರಹಾಮನ ಜೊತೆ ಮಾಡ್ಕೊಂಡ ಒಪ್ಪಂದವನ್ನ+ಆತನು ಇಸಾಕನಿಗೆ ಕೊಟ್ಟ ಮಾತನ್ನ+ 17  ಯಾಕೋಬನಿಗೆ ಒಂದು ಆಜ್ಞೆಯಾಗಿ ಕೊಟ್ಟ,+ಇಸ್ರಾಯೇಲ್ಯರ ಜೊತೆ ಶಾಶ್ವತ ಒಪ್ಪಂದ ಮಾಡ್ಕೊಂಡ. 18  ‘ಕಾನಾನ್‌+ ದೇಶವನ್ನ ನಿನಗೆ ಆಸ್ತಿಯಾಗಿಕೊಡ್ತೀನಿ’+ ಅಂದನು. 19  ಅವರು ಆಗ ಸ್ವಲ್ಪ ಜನ ಇದ್ರು,ಹೌದು, ಕಡಿಮೆ ಜನ ಇದ್ರು. ಆ ದೇಶದಲ್ಲಿ ಅವರು ವಿದೇಶಿಗಳಾಗಿದ್ರು.+ 20  ಅವರು ಒಂದು ದೇಶದಿಂದ ಇನ್ನೊಂದು ದೇಶಕ್ಕೆ,ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗ್ತಿದ್ರು.+ 21  ಯಾರಿಂದನೂ ಅವ್ರಿಗೆ ಅನ್ಯಾಯ ಆಗದ ಹಾಗೆ ಆತನು ನೋಡ್ಕೊಂಡ,+ಅವ್ರಿಗೋಸ್ಕರ ರಾಜರನ್ನೂ ಬೈದನು,+ 22  ‘ನನ್ನ ಅಭಿಷಿಕ್ತರನ್ನ ಮುಟ್ಟಬೇಡಿ,ನನ್ನ ಪ್ರವಾದಿಗಳಿಗೆ ಏನೂ ಕೆಟ್ಟದು ಮಾಡಬೇಡಿ’ ಅಂದನು.+ 23  ಭೂಮಿಯಲ್ಲಿ ಇರುವವರೇ ಯೆಹೋವನಿಗೆ ಗೀತೆ ಹಾಡಿ! ಆತನ ರಕ್ಷಣಾಕಾರ್ಯಗಳ ಬಗ್ಗೆ ಪ್ರತಿದಿನ ಹೇಳಿ!+ 24  ದೇಶಗಳ ಮಧ್ಯ ಆತನ ಗೌರವದ ಬಗ್ಗೆ,ಜನ್ರ ಮಧ್ಯದಲ್ಲಿ ಆತನ ಅದ್ಭುತಗಳ ಬಗ್ಗೆ ಹೇಳಿ. 25  ಯಾಕಂದ್ರೆ ಯೆಹೋವ ದೊಡ್ಡವನು, ಆತನು ಬೇರೆ ಎಲ್ರಿಗಿಂತ ಹೆಚ್ಚು ಹೊಗಳಿಕೆಗೆ ಯೋಗ್ಯ. ಬೇರೆಲ್ಲ ದೇವರುಗಳಿಗಿಂತ ಆತನು ಭಯವಿಸ್ಮಯ.+ 26  ಬೇರೆ ಜನ್ರ ದೇವರುಗಳೆಲ್ಲ ಕೆಲಸಕ್ಕೆ ಬಾರದ ದೇವರುಗಳು,+ಆದ್ರೆ ಯೆಹೋವನೇ ಆಕಾಶ ಸೃಷ್ಟಿ ಮಾಡಿದವನು.+ 27  ಆತನ ಸಾನಿಧ್ಯದಲ್ಲಿ ಗೌರವ, ವೈಭವ ಇದೆ,+ಆತನ ನಿವಾಸದಲ್ಲಿ ಬಲ, ಸಂತೋಷ ಇದೆ.+ 28  ದೇಶದೇಶದ ಎಲ್ಲ ಕುಲಗಳ ಜನ್ರೇ ಯೆಹೋವನಿಗೆ ಕೊಡಬೇಕಾಗಿರೋದನ್ನ ಕೊಡಿ,ಯೆಹೋವನ ಮಹಿಮೆ, ಬಲಕ್ಕಾಗಿ ಆತನಿಗೆ ಕೊಡಬೇಕಾಗಿರೋದನ್ನ ಕೊಡಿ.+ 29  ಯೆಹೋವನ ಹೆಸ್ರಿಗೆ ಕೊಡಬೇಕಾದ ಗೌರವವನ್ನ ಕೊಡಿ,+ಉಡುಗೊರೆಗಳನ್ನ ತಗೊಂಡು ಆತನ ಸನ್ನಿಧಿಗೆ ಬನ್ನಿ,+ಪವಿತ್ರ ಬಟ್ಟೆಗಳನ್ನ ಹಾಕೊಂಡು* ಯೆಹೋವನಿಗೆ ಬಗ್ಗಿ ನಮಸ್ಕರಿಸಿ.*+ 30  ಜನ್ರೇ, ಆತನ ಮುಂದೆ ಗಡಗಡ ನಡುಗಿ! ಆತನು ಭೂಮಿಯನ್ನ* ಅಲುಗಾಡದ ಹಾಗೆ ಸ್ಥಾಪಿಸಿದ್ದಾನೆ. ಅದನ್ನ ಕದಲಿಸೋಕೆ* ಆಗಲ್ಲ.+ 31  ಗಗನ ಹರ್ಷಿಸಲಿ, ಭೂಮಿ ಆನಂದಿಸಲಿ,+‘ಯೆಹೋವ ರಾಜನಾಗಿದ್ದಾನೆ!’ ಅಂತ ಎಲ್ರಿಗೂ ಹೇಳಿ.+ 32  ಸಮುದ್ರ, ಅದ್ರಲ್ಲಿರೋ ಎಲ್ಲ ಜೈಕಾರ ಹಾಕಲಿ,ಬಯಲುಗಳು, ಅವುಗಳಲ್ಲಿರೋ ಎಲ್ಲ ಆನಂದಿಸಲಿ. 33  ಅದೇ ಸಮಯದಲ್ಲಿ ಕಾಡಲ್ಲಿರೋ ಮರಗಳು ಯೆಹೋವನ ಮುಂದೆ ಸಂತೋಷದಿಂದ ಕೂಗಾಡಲಿ,ಯಾಕಂದ್ರೆ ಆತನು ಭೂಮಿಗೆ ತೀರ್ಪು ಮಾಡೋಕೆ ಬರ್ತಿದ್ದಾನೆ.* 34  ಯೆಹೋವನಿಗೆ ಧನ್ಯವಾದ ಹೇಳಿ, ಯಾಕಂದ್ರೆ ಆತನು ಒಳ್ಳೆಯವನು.+ ಆತನ ಪ್ರೀತಿ ಶಾಶ್ವತ.+ 35  ಹೀಗೆ ಹೇಳಿ: ‘ನಮ್ಮನ್ನ ರಕ್ಷಿಸೋ ದೇವರೇ,+ ನಮ್ಮನ್ನ ಕಾಪಾಡು,ಬೇರೆ ದೇಶಗಳಿಂದ ನಮ್ಮನ್ನ ಒಟ್ಟುಸೇರಿಸಿ ಅವ್ರ ಕೈಯಿಂದ ನಮ್ಮನ್ನ ಬಿಡಿಸು,ಆಗ ನಿನ್ನನ್ನ ಪವಿತ್ರ ಹೆಸ್ರಿಂದ ಕೊಂಡಾಡ್ತೀವಿ,+ಸಂತೋಷದಿಂದ ಹೊಗಳ್ತೀವಿ.*+ 36  ಇಸ್ರಾಯೇಲ್‌ ದೇವರಾದಯೆಹೋವನಿಗೆ ಶಾಶ್ವತವಾಗಿ ಹೊಗಳಿಕೆ ಸಿಗಲಿ.’” ಆಗ ಜನ್ರೆಲ್ಲ “ಆಮೆನ್‌”* ಅಂದ್ರು, ಯೆಹೋವನನ್ನ ಹೊಗಳಿದ್ರು. 37  ಆಮೇಲೆ ದಾವೀದ ಯೆಹೋವನ ಒಪ್ಪಂದದ ಮಂಜೂಷದ ಮುಂದೆ+ ದಿನಾಲೂ+ ಸೇವೆ ಮಾಡೋಕೆ ಆಸಾಫನನ್ನ,+ ಅವನ ಸಹೋದರರನ್ನ ಅಲ್ಲೇ ಬಿಟ್ಟುಹೋದ. 38  ಅಷ್ಟೇ ಅಲ್ಲ ಓಬೇದೆದೋಮನನ್ನ ಮತ್ತು ಅವನ ಕುಟುಂಬದಲ್ಲಿ 68 ಜನ್ರನ್ನ ಬಿಟ್ಟುಹೋದ. ಅವನು ಯೆದುತೂನನ ಮಗ ಓಬೇದೆದೋಮನನ್ನ, ಹೋಸನನ್ನ ಬಾಗಿಲು ಕಾಯುವವರಾಗಿ ನೇಮಿಸಿದ. 39  ಅವನು ಪುರೋಹಿತನಾದ ಚಾದೋಕನನ್ನ,+ ಅವನ ಜೊತೆ ಪುರೋಹಿತರನ್ನ ಗಿಬ್ಯೋನಿನ ಎತ್ತರದ ಸ್ಥಳದಲ್ಲಿದ್ದ+ ಯೆಹೋವನ ಪವಿತ್ರ ಡೇರೆ ಮುಂದೆ ನೇಮಿಸಿದ. 40  ಅವರು ಸರ್ವಾಂಗಹೋಮ ಬಲಿ ಅರ್ಪಿಸೋ ಯಜ್ಞವೇದಿ ಮೇಲೆ ಪ್ರತಿದಿನ ಬೆಳಿಗ್ಗೆ, ಸಾಯಂಕಾಲ ಯೆಹೋವನಿಗಾಗಿ ಸರ್ವಾಂಗಹೋಮ ಬಲಿಗಳನ್ನ ಅರ್ಪಿಸಬೇಕಿತ್ತು. ಯೆಹೋವ ತನ್ನ ನಿಯಮ ಪುಸ್ತಕದಲ್ಲಿ ಬರೆಸಿದ್ದ ಅಂದ್ರೆ ಇಸ್ರಾಯೇಲ್ಯರಿಗೆ ಹೇಳಿದ್ದ ಎಲ್ಲವನ್ನ ಅವರು ಮಾಡಬೇಕಿತ್ತು.+ 41  ಅವ್ರ ಜೊತೆ ಹೇಮಾನ್‌, ಯೆದುತೂನ್‌+ ಅನ್ನುವವರನ್ನ, ಹೆಸ್ರುಹೆಸ್ರಾಗಿ ಕರೆದು ನೇಮಿಸಿದ್ದ ಇನ್ನೂ ಕೆಲವ್ರನ್ನ ಯೆಹೋವನಿಗೆ ಧನ್ಯವಾದ ಹೇಳೋಕೆ+ ಆರಿಸ್ಕೊಂಡ್ರು. ಯಾಕಂದ್ರೆ “ಆತನ ಪ್ರೀತಿ ಶಾಶ್ವತ.”+ 42  ಅವನು ಇವ್ರ ಜೊತೆ ಹೇಮಾನನನ್ನ,+ ಯೆದುತೂನನನ್ನ ತುತ್ತೂರಿ ಊದೋಕೆ, ಝಲ್ಲರಿ ಬಾರಿಸೋಕೆ, ಸತ್ಯ ದೇವರನ್ನ ಹಾಡಿ ಹೊಗಳೋಕೆ ಬಳಸೋ ಸಾಧನಗಳನ್ನ ಬಾರಿಸೋಕೆ ನೇಮಿಸಿದ. ಯೆದುತೂನನ+ ಗಂಡು ಮಕ್ಕಳನ್ನ ಬಾಗಿಲು ಕಾಯುವವರಾಗಿ ನೇಮಿಸಿದ. 43  ಆಮೇಲೆ ಜನ್ರೆಲ್ಲ ಅವ್ರವ್ರ ಮನೆಗೆ ಹೋದ್ರು. ದಾವೀದ ತನ್ನ ಕುಟುಂಬದವ್ರನ್ನ ಆಶೀರ್ವದಿಸೋಕೆ ಹೋದ.

ಪಾದಟಿಪ್ಪಣಿ

ಅಕ್ಷ. “ನೆನಪಿಸ್ಕೊಳ್ಳೋಕೆ.”
ಅಥವಾ “ಆತನಿಗಾಗಿ ಸಂಗೀತ ರಚಿಸಿ.”
ಬಹುಶಃ, “ಮಾತಾಡಿ.”
ಅಕ್ಷ. “ಆಜ್ಞೆಗಳನ್ನ.”
ಅಥವಾ “ಆರಾಧಿಸಿ.”
ಬಹುಶಃ, “ಆತನ ಪವಿತ್ರತೆಗೆ ಇರೋ ವೈಭವದಿಂದಾಗಿ.”
ಅಥವಾ “ಫಲವತ್ತಾದ ದೇಶವನ್ನ.”
ಅಥವಾ “ನಡುಗಿಸೋಕೆ.”
ಅಥವಾ “ಬಂದಿದ್ದಾನೆ.”
ಅಥವಾ “ನಿನ್ನನ್ನ ಹೊಗಳ್ತಾ ಖುಷಿಪಡ್ತೀವಿ.”
ಅಥವಾ “ಹಾಗೇ ಆಗ್ಲಿ.”