ಒಂದನೇ ಪೂರ್ವಕಾಲವೃತ್ತಾಂತ 21:1-30

  • ದಾವೀದ ಜನಗಣತಿ ಮಾಡಿ ಆಜ್ಞೆ ಮುರಿದ (1-6)

  • ಯೆಹೋವನಿಂದ ಶಿಕ್ಷೆ (7-17)

  • ದಾವೀದ ಯಜ್ಞವೇದಿ ಕಟ್ಟಿದ (18-30)

21  ಆಮೇಲೆ ಸೈತಾನ* ಇಸ್ರಾಯೇಲಿನ ವಿರುದ್ಧ ಬಂದು ಇಸ್ರಾಯೇಲ್ಯರ ಜನಗಣತಿ ಮಾಡೋ ಹಾಗೇ ದಾವೀದನನ್ನ ಪ್ರಚೋದಿಸಿದ.+  ಹಾಗಾಗಿ ದಾವೀದ ಯೋವಾಬನಿಗೆ,+ ಜನ್ರ ಅಧಿಪತಿಗಳಿಗೆ “ಹೋಗಿ, ಬೇರ್ಷೆಬದಿಂದ ದಾನಿನ+ ತನಕ ಇರೋ ಎಲ್ಲ ಇಸ್ರಾಯೇಲ್ಯರನ್ನ ಲೆಕ್ಕ ಮಾಡಿ ಅಲ್ಲಿ ಎಷ್ಟು ಜನ್ರು ಇದ್ದಾರೆ ಅಂತ ನನಗೆ ಹೇಳಿ” ಅಂದ.  ಆದ್ರೆ ಯೋವಾಬ ರಾಜನಿಗೆ “ಯೆಹೋವ ತನ್ನ ಜನ್ರ ಸಂಖ್ಯೆ 100 ಪಟ್ಟು ಹೆಚ್ಚಿಸಲಿ! ನನ್ನ ಒಡೆಯನಾದ ರಾಜನೇ, ಅವ್ರೆಲ್ಲ ಈಗಾಗ್ಲೇ ನಿನ್ನ ಸೇವಕರಲ್ವಾ? ನೀನು ಯಾಕೆ ಹೀಗೆ ಮಾಡಬೇಕಂತ ಇದ್ದೀಯಾ? ಇಸ್ರಾಯೇಲ್ಯರು ಪಾಪ ಮಾಡೋ ತರ ನೀನ್ಯಾಕೆ ಮಾಡ್ತೀಯಾ?” ಅಂದ.  ದಾವೀದ ಈ ಮಾತಿಗೆ ಒಪ್ಪಲಿಲ್ಲ, ಹಾಗಾಗಿ ಯೋವಾಬ ಹೋಗಿ ಇಡೀ ಇಸ್ರಾಯೇಲನ್ನ ನೋಡಿ ಯೆರೂಸಲೇಮಿಗೆ ವಾಪಸ್‌ ಬಂದ.+  ಲೆಕ್ಕಮಾಡಿದ ಜನ್ರ ಸಂಖ್ಯೆನ ದಾವೀದನಿಗೆ ಹೇಳಿದ. ಇಡೀ ಇಸ್ರಾಯೇಲಲ್ಲಿ ಕತ್ತಿ ಇದ್ದ ವೀರ ಸೈನಿಕರು 11,00,000, ಯೆಹೂದದಲ್ಲಿ 4,70,000 ಇದ್ರು.+  ಆದ್ರೆ ಅದ್ರಲ್ಲಿ ಲೇವಿ, ಬೆನ್ಯಾಮೀನ್‌ ಕುಲದ ಗಂಡಸ್ರ ಹೆಸ್ರುಗಳನ್ನ ಸೇರಿಸ್ಕೊಳ್ಳಲಿಲ್ಲ.+ ಯಾಕಂದ್ರೆ ಯೋವಾಬನಿಗೆ ರಾಜ ಹೇಳಿದ ಮಾತು ಸ್ವಲ್ಪನೂ ಇಷ್ಟ ಇರಲಿಲ್ಲ.+  ದಾವೀದನ ಈ ಕೆಲಸದಿಂದ ಸತ್ಯ ದೇವರಿಗೆ ಕೋಪ ಬಂತು. ಹಾಗಾಗಿ ಆತನು ಇಸ್ರಾಯೇಲ್ಯರಿಗೆ ಶಿಕ್ಷೆ ಕೊಟ್ಟನು.  ಆಗ ದಾವೀದ ಸತ್ಯ ದೇವರಿಗೆ “ನಾನು ಜನಗಣತಿ ಮಾಡಿ ದೊಡ್ಡ ಪಾಪ ಮಾಡಿದೆ.+ ಮೂರ್ಖನ ತರ ನಡ್ಕೊಂಡಿರೋ ಈ ನಿನ್ನ ಸೇವಕನ ತಪ್ಪನ್ನ ದಯವಿಟ್ಟು ಕ್ಷಮಿಸು”+ ಅಂದ.+  ಯೆಹೋವ ದಾವೀದನ ದರ್ಶಿಯಾದ ಗಾದನಿಗೆ+ 10  “ನೀನು ದಾವೀದನ ಹತ್ರ ಹೋಗಿ ಹೀಗೆ ಹೇಳು: ‘ಯೆಹೋವ ಹೀಗೆ ಹೇಳ್ತಾನೆ: “ನಾನು ನಿನ್ನ ಮುಂದೆ ಮೂರು ಶಿಕ್ಷೆ ಇಡ್ತೀನಿ. ಅದ್ರಲ್ಲಿ ನಿನಗೆ ಯಾವ ಶಿಕ್ಷೆ ಬೇಕಂತ ಆರಿಸ್ಕೊ.”’” 11  ಆಗ ಗಾದ ದಾವೀದನ ಹತ್ರ ಬಂದು “ಯೆಹೋವ ಹೀಗೆ ಹೇಳ್ತಾನೆ: ‘ನಿನಗೆ ಯಾವ ಶಿಕ್ಷೆ ಬೇಕಂತ ನೀನೇ ಆರಿಸ್ಕೊ. 12  ನಿನ್ನ ದೇಶದಲ್ಲಿ ಮೂರು ವರ್ಷ ಬರಗಾಲ ಬರಬೇಕಾ?+ ಅಥವಾ ಮೂರು ತಿಂಗಳು ಶತ್ರುಗಳ ಕತ್ತಿಯಿಂದ ನೀನು ಸೋಲನ್ನ ಅನುಭವಿಸ್ತಾ ಅವ್ರ ಕೈಯಿಂದ ನಾಶ ಆಗಬೇಕಾ?+ ಅಥವಾ ನಿನ್ನ ದೇಶವಾಗಿರೋ ಇಸ್ರಾಯೇಲಲ್ಲಿ ಮೂರು ದಿನ ತನಕ ಯೆಹೋವನ ಕತ್ತಿಯಿಂದ ಶಿಕ್ಷೆ ಅಂದ್ರೆ ಅಂಟುರೋಗ ಬಂದು+ ಯೆಹೋವನ ದೂತ ಇಡೀ ಇಸ್ರಾಯೇಲ್‌ ಮೇಲೆ ಕಷ್ಟ ತರಬೇಕಾ?’+ ನನ್ನನ್ನ ಕಳಿಸಿದವನಿಗೆ ನಾನು ಯಾವ ಉತ್ತರ ಕೊಡಬೇಕು ಅಂತ ಚೆನ್ನಾಗಿ ಯೋಚ್ನೆ ಮಾಡಿ ಹೇಳು” ಅಂದ. 13  ಅದಕ್ಕೆ ದಾವೀದ “ನಾನು ದೊಡ್ಡ ಕಷ್ಟದಲ್ಲಿ ಸಿಕ್ಕಿಹಾಕೊಂಡೆ. ಯೆಹೋವನೇ ನನಗೆ ಶಿಕ್ಷೆ ಕೊಡ್ಲಿ. ಯಾಕಂದ್ರೆ ಆತನ ಕರುಣೆ ಎಲ್ಲಕ್ಕಿಂತ ದೊಡ್ಡದು.+ ದಯವಿಟ್ಟು ನಮ್ಮನ್ನ ಮನುಷ್ಯರ ಕೈಯಲ್ಲಿ ಬೀಳೋಕೆ ಬಿಡಬೇಡ”+ ಅಂದ. 14  ಆಮೇಲೆ ಯೆಹೋವ ಇಸ್ರಾಯೇಲ್ಯರ ಮೇಲೆ ಅಂಟುರೋಗ ತಂದನು.+ ಆ ಅಂಟುರೋಗದಿಂದ ಇಸ್ರಾಯೇಲಿನ 70,000 ಜನ ಸತ್ತುಹೋದ್ರು.+ 15  ಅಷ್ಟೇ ಅಲ್ಲ, ಸತ್ಯ ದೇವರು ಯೆರೂಸಲೇಮನ್ನ ನಾಶ ಮಾಡೋಕೆ ಒಬ್ಬ ದೇವದೂತನನ್ನ ಕಳಿಸಿದನು. ಆ ದೇವದೂತ ನಾಶಮಾಡೋಕೆ ಶುರು ಮಾಡಿದಾಗ ಯೆಹೋವ ಅದನ್ನ ನೋಡಿ ನಡೆದ ದುರಂತದ ಬಗ್ಗೆ ದುಃಖಪಟ್ಟು*+ ಆ ದೂತನಿಗೆ “ಸಾಕು+ ಕೈ ಕೆಳಗಿಡು” ಅಂದನು. ಆ ಸಮಯದಲ್ಲಿ ಯೆಹೋವನ ದೂತ ಯೆಬೂಸಿಯನಾದ+ ಒರ್ನಾನನ ಕಣದ+ ಹತ್ರ ಇದ್ದ. 16  ದಾವೀದ ಕಣ್ಣೆತ್ತಿ ನೋಡಿದಾಗ, ಯೆಹೋವನ ದೂತ ಭೂಮಿಗೂ ಆಕಾಶಕ್ಕೂ ಮಧ್ಯ ನಿಂತಿದ್ದ. ಆ ದೂತನ ಕೈಯಲ್ಲಿದ್ದ ಕತ್ತಿ+ ಯೆರೂಸಲೇಮಿನ ಕಡೆಗೆ ಚಾಚಿತ್ತು. ದಾವೀದ, ಹಿರಿಯರು ಗೋಣಿ ಸುತ್ಕೊಂಡು+ ತಕ್ಷಣ ನೆಲಕ್ಕೆ ಮುಖ ಮಾಡ್ಕೊಂಡು ಅಡ್ಡಬಿದ್ರು.+ 17  ದಾವೀದ ಸತ್ಯದೇವರಿಗೆ “ಜನ್ರನ್ನ ಲೆಕ್ಕ ಮಾಡೋಕೆ ಹೇಳಿದವನು ನಾನಲ್ವಾ? ಪಾಪ ಮಾಡಿದವನು ನಾನು, ತಪ್ಪು ಮಾಡಿದವನು ನಾನು.+ ಹಾಗಾಗಿ ಕುರಿಗಳ ತರ ಇರೋ ಈ ಜನ್ರನ್ನ ಬಿಟ್ಟುಬಿಡು. ನನ್ನ ದೇವರಾದ ಯೆಹೋವನೇ, ದಯವಿಟ್ಟು ನನಗೆ, ನನ್ನ ತಂದೆ ಕುಟುಂಬದವ್ರಿಗೆ ಶಿಕ್ಷೆ ಕೊಡು. ಆದ್ರೆ ಈ ನಿನ್ನ ಜನ್ರ ಮೇಲೆ ಆ ಕಷ್ಟ ತರಬೇಡ”+ ಅಂತ ಬೇಡ್ಕೊಂಡ. 18  ಆಗ ಯೆಹೋವನ ದೂತ ಗಾದನಿಗೆ+ ‘ಯೆಬೂಸಿಯನಾದ ಒರ್ನಾನನ ಕಣಕ್ಕೆ ಹೋಗಿ ಅಲ್ಲಿ ಯೆಹೋವನಿಗಾಗಿ ಒಂದು ಯಜ್ಞವೇದಿ ಕಟ್ಟು’+ ಅಂತ ದಾವೀದನಿಗೆ ತಿಳಿಸೋಕೆ ಹೇಳಿದನು. 19  ಹಾಗಾಗಿ ಯೆಹೋವನ ಹೆಸ್ರಲ್ಲಿ ಗಾದ ಹೇಳಿದ ಹಾಗೇ ಮಾಡೋಕೆ ದಾವೀದ ಅಲ್ಲಿಗೆ ಹೋದ. 20  ಆ ಸಮಯದಲ್ಲಿ ಒರ್ನಾನ ಕಣದಲ್ಲಿ ಗೋದಿ ಬಡಿತಿದ್ದ. ಅವನು ಹಿಂದೆ ನೋಡಿದಾಗ ಅವನಿಗೆ ದೇವದೂತ ಕಾಣಿಸಿದ. ಅವನ ಜೊತೆ ಇದ್ದ ಅವನ ನಾಲ್ಕು ಗಂಡು ಮಕ್ಕಳು ಹೋಗಿ ಬಚ್ಚಿಟ್ಕೊಂಡ್ರು. 21  ದಾವೀದ ಅವನ ಹತ್ರ ಬರೋದನ್ನ ನೋಡಿದಾಗ ಒರ್ನಾನ ತಕ್ಷಣ ಕಣದಿಂದ ಹೊರಗೆ ಬಂದು ನೆಲದ ತನಕ ಬಗ್ಗಿ ದಾವೀದನಿಗೆ ನಮಸ್ಕಾರ ಮಾಡಿದ. 22  ಆಗ ದಾವೀದ ಒರ್ನಾನನಿಗೆ “ನಿನ್ನ ಕಣವನ್ನ ನನಗೆ ಮಾರಿಬಿಡು.* ಈ ಜಾಗದ ಪೂರ್ತಿ ಬೆಲೆ ಹೇಳು, ನಾನು ಅದನ್ನ ತಗೊಳ್ತೀನಿ. ಇಲ್ಲಿ ನಾನು ಯೆಹೋವನಿಗಾಗಿ ಒಂದು ಯಜ್ಞವೇದಿ ಕಟ್ಟಬೇಕು. ಆಗ ದೇವರಿಗೆ ಜನ್ರ ಮೇಲೆ ಬಂದಿರೋ ಕೋಪ ಹೋಗಬಹುದು”+ ಅಂದ. 23  ಅದಕ್ಕೆ ಒರ್ನಾನ ದಾವೀದನಿಗೆ “ನನ್ನ ಒಡೆಯನಾದ ರಾಜನೇ, ಕಣವನ್ನ ತಗೊ, ನಿನಗೆ ಸರಿ ಅನಿಸಿದ್ದನ್ನ ಮಾಡು. ಇಲ್ಲಿ ಸರ್ವಾಂಗಹೋಮ ಬಲಿಗಾಗಿ ದನಕರುಗಳಿವೆ. ಸೌದೆಗಾಗಿ ಕಣದಲ್ಲಿ ಉಪಯೋಗಿಸೋ ನೊಗ ಇದೆ,+ ಧಾನ್ಯ ಅರ್ಪಣೆಗಾಗಿ ಗೋದಿ ಇದೆ. ಇದನ್ನೆಲ್ಲ ನಿನಗೆ ಕೊಡ್ತೀನಿ” ಅಂದ. 24  ಆದ್ರೆ ರಾಜ ಒರ್ನಾನನಿಗೆ “ಇಲ್ಲ, ನಾನು ಇದನ್ನ ಬಿಟ್ಟಿಯಾಗಿ ತಗೊಳ್ಳಲ್ಲ. ಪೂರ್ತಿ ಬೆಲೆಕೊಟ್ಟು ತಗೊಳ್ತೀನಿ. ಯಾಕಂದ್ರೆ ನಿನಗೆ ಸೇರಿದ್ದನ್ನ ನಾನು ಯೆಹೋವನಿಗೆ ಕೊಡಲ್ಲ, ಬಿಟ್ಟಿಯಾಗಿ ಸಿಕ್ಕಿದ್ದನ್ನ ನಾನು ಸರ್ವಾಂಗಹೋಮ ಬಲಿಯಾಗಿ ಅರ್ಪಿಸಲ್ಲ” ಅಂದ.+ 25  ಹಾಗಾಗಿ ದಾವೀದ ಒರ್ನಾನನಿಗೆ 600 ಬಂಗಾರದ ಶೆಕೆಲ್‌ಗಳನ್ನ* ತೂಕಮಾಡಿ ಕೊಟ್ಟು ಆ ಜಾಗ ಕೊಂಡ್ಕೊಂಡ. 26  ಅವನು ಯೆಹೋವನಿಗಾಗಿ ಆ ಕಣದಲ್ಲಿ ಒಂದು ಯಜ್ಞವೇದಿ ಕಟ್ಟಿ,+ ಅದ್ರ ಮೇಲೆ ಸರ್ವಾಂಗಹೋಮ ಬಲಿಗಳನ್ನ, ಸಮಾಧಾನ ಬಲಿಗಳನ್ನ ಅರ್ಪಿಸಿ ಯೆಹೋವನಿಗೆ ಪ್ರಾರ್ಥಿಸಿದ. ಆಗ ದೇವರು ಸ್ವರ್ಗದಿಂದ ಸರ್ವಾಂಗಹೋಮ ಬಲಿ ಇದ್ದ ಯಜ್ಞವೇದಿ ಮೇಲೆ ಬೆಂಕಿ ಕಳಿಸಿ ದಾವೀದನ ಪ್ರಾರ್ಥನೆಗೆ ಉತ್ತರ ಕೊಟ್ಟ.+ 27  ಆಮೇಲೆ ಯೆಹೋವ ಆ ದೂತನಿಗೆ ತನ್ನ ಕತ್ತಿಯನ್ನ ಒರೆಯಲ್ಲಿ ಇಟ್ಕೊಳ್ಳೋಕೆ ಹೇಳಿದ.+ 28  ಯೆಬೂಸಿಯನಾದ ಒರ್ನಾನನ ಕಣದಲ್ಲಿ ಯೆಹೋವ ತನ್ನ ಪ್ರಾರ್ಥನೆಗೆ ಉತ್ತರ ಕೊಟ್ಟಿದ್ದನ್ನ ದಾವೀದ ನೋಡಿ ಅಲ್ಲಿ ಬಲಿಗಳನ್ನ ಅರ್ಪಿಸೋದನ್ನ ಮುಂದುವರಿಸಿದ. 29  ಹಾಗಿದ್ರೂ, ಮೋಶೆ ಕಾಡಿನಲ್ಲಿ ಮಾಡಿದ್ದ ಯೆಹೋವನ ಪವಿತ್ರ ಡೇರೆ, ಸರ್ವಾಂಗಹೋಮ ಬಲಿಯನ್ನ ಅರ್ಪಿಸೋ ಯಜ್ಞವೇದಿ ಆ ಸಮಯದಲ್ಲಿ ಗಿಬ್ಯೋನಿನ ಬೆಟ್ಟದಲ್ಲಿ ಇತ್ತು.+ 30  ಅಲ್ಲಿ ಹೋಗಿ ದೇವರಿಂದ ಸಲಹೆ ಪಡಿಯೋಕೆ ದಾವೀದನಿಗೆ ಆಗಲಿಲ್ಲ. ಯಾಕಂದ್ರೆ ಅವನು ಯೆಹೋವನ ದೂತನ ಕತ್ತಿಗೆ ತುಂಬ ಭಯಪಟ್ಟಿದ್ದ.

ಪಾದಟಿಪ್ಪಣಿ

ಬಹುಶಃ, “ವಿರೋಧಿಸುವವನು.”
ಅಥವಾ “ವಿಷಾದ ಪಟ್ಟು.”
ಅಕ್ಷ. “ಕೊಟ್ಟುಬಿಡು.”
ಒಂದು ಶೆಕೆಲ್‌=11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.