ಒಂದನೇ ಪೂರ್ವಕಾಲವೃತ್ತಾಂತ 29:1-30

  • ದೇವಾಲಯಕ್ಕಾಗಿ ಕಾಣಿಕೆಗಳು (1-9)

  • ದಾವೀದನ ಪ್ರಾರ್ಥನೆ (10-19)

  • ಜನ್ರ ಖುಷಿ, ಸೊಲೊಮೋನನ ಆಡಳಿತ (20-25)

  • ದಾವೀದನ ಮರಣ (26-30)

29  ರಾಜ ದಾವೀದ ಇಡೀ ಸಭೆಗೆ “ದೇವರು ಆರಿಸ್ಕೊಂಡ ನನ್ನ ಮಗನಾದ ಸೊಲೊಮೋನ+ ಇನ್ನೂ ಚಿಕ್ಕವನು, ಅನುಭವ ಇಲ್ಲದವನು.+ ಅಷ್ಟೇ ಅಲ್ಲ ಈ ಕೆಲಸ ತುಂಬ ದೊಡ್ಡ ಕೆಲಸ. ಯಾಕಂದ್ರೆ ಈ ಆಲಯ* ಕಟ್ಟುತ್ತಿರೋದು ಯೆಹೋವ ದೇವರಿಗಾಗಿ, ಮನುಷ್ಯನಿಗಾಗಿ ಅಲ್ಲ.+  ನನ್ನಿಂದಾದ ಎಲ್ಲ ಪ್ರಯತ್ನ ಹಾಕಿ ನನ್ನ ದೇವರಿಗಾಗಿ ಆಲಯ ಕಟ್ಟೋಕೆ ತಯಾರಿ ಮಾಡಿದ್ದೀನಿ. ನಾನು ಚಿನ್ನದ ಕೆಲಸಕ್ಕಾಗಿ ಚಿನ್ನವನ್ನ, ಬೆಳ್ಳಿ ಕೆಲಸಕ್ಕಾಗಿ ಬೆಳ್ಳಿಯನ್ನ, ತಾಮ್ರದ ಕೆಲಸಕ್ಕಾಗಿ ತಾಮ್ರವನ್ನ, ಕಬ್ಬಿಣದ ಕೆಲಸಕ್ಕಾಗಿ ಕಬ್ಬಿಣವನ್ನ,+ ಮರದ ಕೆಲಸಕ್ಕಾಗಿ ಮರವನ್ನ,+ ಗೋಮೇಧಕ ರತ್ನಗಳನ್ನ, ಗಾರೆ ಹಾಕಿ ಇಡಬೇಕಾದ ಕಲ್ಲುಗಳನ್ನ, ಬೇರೆಬೇರೆ ಬಣ್ಣದ ಚಿಕ್ಕಚಿಕ್ಕ ಕಲ್ಲುಗಳನ್ನ, ಎಲ್ಲ ರೀತಿಯ ಅಮೂಲ್ಯ ರತ್ನಗಳನ್ನ, ಹಾಲುಗಲ್ಲುಗಳನ್ನ ತುಂಬ ಕೂಡಿಸಿದ್ದೀನಿ.  ಪವಿತ್ರ ಆಲಯಕ್ಕಾಗಿ ಇಷ್ಟನ್ನೆಲ್ಲ ಕೊಡೋದ್ರ ಜೊತೆ, ನಾನು ನನ್ನ ದೇವರ ಆಲಯದ ಮೇಲಿರೋ ಪ್ರೀತಿಯಿಂದಾಗಿ+ ನನ್ನ ಸ್ವಂತ ಖಜಾನೆಯಿಂದ+ ಚಿನ್ನ ಬೆಳ್ಳಿ ಕೊಡ್ತಿದ್ದೀನಿ.  ನನ್ನ ಖಜಾನೆಯಿಂದ 3,000 ತಲಾಂತು* ಓಫೀರ್‌+ ದೇಶದ ಬಂಗಾರ, 7,000 ತಲಾಂತು ಪರಿಷ್ಕರಿಸಿದ ಬೆಳ್ಳಿಯನ್ನ ಆಲಯದ ಕೋಣೆಗಳ ಗೋಡೆಗಳಿಗೆ ಹಚ್ಚೋಕೆ ಕೊಡ್ತಿದ್ದೀನಿ.  ನಾನು ಚಿನ್ನದ ಕೆಲಸಕ್ಕಾಗಿ ಚಿನ್ನ, ಬೆಳ್ಳಿ ಕೆಲಸಕ್ಕಾಗಿ ಬೆಳ್ಳಿಯನ್ನ, ಕರಕುಶಲಗಾರರಿಗೆ ಅವ್ರ ಕೆಲಸಕ್ಕೆ ಬೇಕಾದ ಎಲ್ಲಾನೂ ಕೊಡ್ತೀನಿ. ನಿಮ್ಮಲ್ಲಿ ಯಾರು ಮುಂದೆ ಬಂದು ಮನಸಾರೆ ಇವತ್ತು ಯೆಹೋವನಿಗಾಗಿ ಕಾಣಿಕೆ ಕೊಡೋಕೆ ಇಷ್ಟಪಡ್ತೀರ?” ಅಂತ ಕೇಳಿದ.+  ಆಗ ತಂದೆಯ ಮನೆತನದ ಅಧಿಕಾರಿಗಳು, ಇಸ್ರಾಯೇಲ್‌ ಕುಲಗಳ ಅಧಿಕಾರಿಗಳು, ಸಾವಿರ ಜನ್ರ ಮೇಲಿದ್ದ, ನೂರು ಜನ್ರ ಮೇಲಿದ್ದ ಅಧಿಕಾರಿಗಳು,+ ರಾಜನ ವ್ಯಾಪಾರ ವಹಿವಾಟುಗಳ ಮೇಲಿದ್ದ ಅಧಿಕಾರಿಗಳು+ ತಾವಾಗಿಯೇ ಕಾಣಿಕೆ ಕೊಡೋಕೆ ಮುಂದೆ ಬಂದ್ರು.  ಅವರು ಸತ್ಯ ದೇವರ ಆಲಯದ ಕೆಲಸಕ್ಕಾಗಿ 5,000 ತಲಾಂತು ಚಿನ್ನ, 10,000 ಡೇರಿಕ್‌ಗಳನ್ನ,* 10,000 ತಲಾಂತು ಬೆಳ್ಳಿಯನ್ನ, 18,000 ತಲಾಂತು ತಾಮ್ರವನ್ನ, 1,00,000 ತಲಾಂತು ಕಬ್ಬಿಣವನ್ನ ಕೊಟ್ರು.  ಯಾರ ಹತ್ರ ಅಮೂಲ್ಯ ರತ್ನಗಳು ಇತ್ತೋ ಅವ್ರೆಲ್ಲ ಅದನ್ನ ಗೇರ್ಷೋನ್ಯನಾದ+ ಯೆಹೀಯೇಲನಿಗೆ+ ತಂದ್ಕೊಟ್ರು. ಅವನು ಯೆಹೋವನ ಆಲಯದ ಖಜಾನೆಯನ್ನ ನೋಡ್ಕೊಳ್ತಿದ್ದ.  ಈ ಕಾಣಿಕೆಗಳನ್ನ ಮನಸಾರೆ ಕೊಟ್ಟು ಜನ್ರು ತುಂಬ ಖುಷಿಪಟ್ರು. ಯಾಕಂದ್ರೆ ಅವರು ಆ ಕಾಣಿಕೆಗಳನ್ನ ಪೂರ್ಣ ಹೃದಯದಿಂದ ಯೆಹೋವನಿಗೆ ಕೊಡ್ತಿದ್ರು.+ ರಾಜ ದಾವೀದನಿಗೂ ತುಂಬ ಖುಷಿ ಆಯ್ತು. 10  ಆಮೇಲೆ ದಾವೀದ ಇಡೀ ಸಭೆ ಮುಂದೆ ಯೆಹೋವನನ್ನ ಹೊಗಳಿದ. ದಾವೀದ ಹೀಗಂದ: “ನಮ್ಮ ತಂದೆಯಾಗಿರೋ ಇಸ್ರಾಯೇಲಿನ ದೇವರಾದ ಯೆಹೋವನೇ, ಸದಾಕಾಲಕ್ಕೂ ನಿನಗೆ ಹೊಗಳಿಕೆ ಸಿಗ್ಲಿ. 11  ಯೆಹೋವನೇ ನೀನೊಬ್ಬನೇ ಗೌರವ,+ ಬಲ,+ ತೇಜಸ್ಸು, ವೈಭವ, ಘನತೆಗೆ+ ಅರ್ಹ. ಯಾಕಂದ್ರೆ ಆಕಾಶದಲ್ಲಿ, ಭೂಮಿಯಲ್ಲಿ ಇರೋದೆಲ್ಲ ನಿಂದೇ.+ ಯೆಹೋವನೇ, ರಾಜ್ಯನೂ ನಿಂದೇ.+ ಎಲ್ಲದಕ್ಕೂ ನೀನೇ ಒಡೆಯ. 12  ಐಶ್ವರ್ಯವನ್ನ, ಮಹಿಮೆಯನ್ನ ಕೊಡುವವನು ನೀನೇ.+ ಎಲ್ಲವನ್ನ ಆಳುವವನು ನೀನೇ.+ ನಿನ್ನ ಕೈಯಲ್ಲಿ ಶಕ್ತಿ,+ ಬಲ+ ಇದೆ. ನೀನು ಯಾರನ್ನ ಬೇಕಾದ್ರೂ ದೊಡ್ಡ ವ್ಯಕ್ತಿ ಮಾಡಬಲ್ಲೆ.+ ನೀನು ಅವ್ರಿಗೆ ಬಲ ಕೊಡ್ತೀಯ.+ 13  ಹಾಗಾಗಿ ನಮ್ಮ ದೇವರೇ, ನಾವು ನಿನಗೆ ಧನ್ಯವಾದ ಹೇಳ್ತೀವಿ, ನಿನ್ನ ಸುಂದರ ಹೆಸ್ರನ್ನ ಹೊಗಳ್ತೀವಿ. 14  ಈ ರೀತಿ ಸ್ವಇಷ್ಟದ ಕಾಣಿಕೆಗಳನ್ನ ಕೊಡೋಕೆ ನನಗಾಗಲಿ ನನ್ನ ಜನರಿಗಾಗಲಿ ಯೋಗ್ಯತೆ ಏನಿದೆ? ಯಾಕಂದ್ರೆ ಎಲ್ಲಾ ನಿಂದೇ. ನೀನು ಕೊಟ್ಟಿದ್ದನ್ನೇ ನಿನಗೆ ಕೊಟ್ವಿ. 15  ನಮ್ಮ ಪೂರ್ವಜರ ತರ ನಾವು ನಿನ್ನ ದೃಷ್ಟಿಯಲ್ಲಿ ವಿದೇಶಿಯರು, ವಲಸೆಗಾರರು.+ ಭೂಮಿ ಮೇಲೆ ನಮ್ಮ ಜೀವನ ನೆರಳು ತರ ಇದೆ.+ ನಮಗೆ ಯಾವುದೇ ನಿರೀಕ್ಷೆ ಇಲ್ಲ. 16  ಯೆಹೋವನೇ, ನಮ್ಮ ದೇವರೇ ನಿನ್ನ ಪವಿತ್ರ ಹೆಸ್ರಿಗಾಗಿ ಆಲಯ ಕಟ್ಟೋಕೆ ನಾವು ಕೂಡಿಸಿಟ್ಟಿರೋ ಈ ಐಶ್ವರ್ಯ ಎಲ್ಲಾ ನಿನ್ನಿಂದಾನೇ ನಮಗೆ ಸಿಕ್ತು. ಇವೆಲ್ಲ ನಿಂದೇ. 17  ನನ್ನ ದೇವರೇ, ನೀನು ಹೃದಯವನ್ನ ಪರೀಕ್ಷಿಸ್ತೀಯ,+ ಒಬ್ಬ ವ್ಯಕ್ತಿಯ ಪ್ರಾಮಾಣಿಕತೆಯನ್ನ ನೋಡಿ ಖುಷಿ ಪಡ್ತೀಯ+ ಅಂತ ನನಗೆ ಚೆನ್ನಾಗಿ ಗೊತ್ತು. ನಾನು ನನ್ನ ಪ್ರಾಮಾಣಿಕ ಹೃದಯದಿಂದ, ನನ್ನ ಸ್ವಂತ ಇಷ್ಟದಿಂದ ಇವನ್ನೆಲ್ಲ ನಿನಗೆ ಕಾಣಿಕೆಯಾಗಿ ಕೊಟ್ಟಿದ್ದೀನಿ. ಇಲ್ಲಿ ಸೇರಿ ಬಂದಿರೋ ನಿನ್ನ ಜನ್ರು ಮನಸಾರೆ ನಿನಗೆ ಕಾಣಿಕೆ ಕೊಡೋದನ್ನ ನೋಡಿ ನನಗೆ ತುಂಬ ಖುಷಿ ಆಯ್ತು. 18  ನಮ್ಮ ಪೂರ್ವಜರಾದ ಅಬ್ರಹಾಮನ, ಇಸಾಕನ, ಇಸ್ರಾಯೇಲನ ದೇವರಾಗಿರೋ ಯೆಹೋವನೇ, ಜನ್ರಲ್ಲಿರೋ ಈ ಮನೋಭಾವವನ್ನ ಯಾವಾಗ್ಲೂ ತೋರಿಸೋಕೆ, ಪೂರ್ಣ ಹೃದಯದಿಂದ ನಿನ್ನ ಸೇವೆ ಮಾಡೋಕೆ ಅವ್ರಿಗೆ ಸಹಾಯಮಾಡು.+ 19  ನನ್ನ ಮಗ ಸೊಲೊಮೋನ ಪೂರ್ಣ* ಹೃದಯದಿಂದ+ ನಿನ್ನ ಆಜ್ಞೆಗಳನ್ನ,+ ನಿನ್ನ ನಿಯಮಗಳನ್ನ ಪಾಲಿಸೋ ಹಾಗೇ, ಪದೇ ಪದೇ ನೀನು ಕೊಡೋ ಎಚ್ಚರಿಕೆಗಳನ್ನ ಒಪ್ಕೊಂಡು ಅದ್ರ ಪ್ರಕಾರ ನಡಿಯೋಕೆ ಸಹಾಯ ಮಾಡು. ಯಾವ ಆಲಯ* ಕಟ್ಟೋಕೆ ನಾನು ಇಷ್ಟೆಲ್ಲಾ ತಯಾರಿ ಮಾಡಿದ್ದೀನೋ+ ಅದನ್ನ ಕಟ್ಟೋಕೆ ಅವನಿಗೆ ಸಹಾಯ ಮಾಡು.” 20  ಆಮೇಲೆ ದಾವೀದ ಇಡೀ ಸಭೆಗೆ “ಈಗ ನೀವೆಲ್ಲ ನಿಮ್ಮ ದೇವರಾದ ಯೆಹೋವನನ್ನ ಹೊಗಳಿ” ಅಂದ. ಆಗ ಇಡೀ ಸಭೆಯವರು ತಮ್ಮ ಪೂರ್ವಜರ ದೇವರಾದ ಯೆಹೋವನನ್ನ ಹೊಗಳಿದ್ರು. ನೆಲ ತನಕ ಬಗ್ಗಿ ಯೆಹೋವನಿಗೆ ಅಡ್ಡಬಿದ್ರು, ರಾಜನಿಗೆ ನಮಸ್ಕಾರ ಮಾಡಿದ್ರು. 21  ಆಮೇಲೆ ಅವರು ಮಾರನೇ ದಿನದ ತನಕ ಯೆಹೋವನಿಗಾಗಿ ಬಲಿಗಳನ್ನ, ಸರ್ವಾಂಗಹೋಮ ಬಲಿಗಳನ್ನ+ ಕೊಟ್ರು. ಅವರು 1,000 ಹೋರಿ 1,000 ಟಗರು 1,000 ಗಂಡು ಕುರಿಮರಿಗಳನ್ನ, ಪಾನ ಅರ್ಪಣೆಗಳನ್ನ+ ಯೆಹೋವನಿಗೆ ಕೊಟ್ರು. ಅವರು ಎಲ್ಲ ಇಸ್ರಾಯೇಲ್ಯರಿಗಾಗಿ ದೊಡ್ಡ ಮೊತ್ತದಲ್ಲಿ ಬಲಿ ಅರ್ಪಿಸಿದ್ರು.+ 22  ಆ ದಿನ ಅವರು ಯೆಹೋವನ ಮುಂದೆ ಊಟಮಾಡಿ ತುಂಬ ಸಂಭ್ರಮಿಸಿದ್ರು.+ ದಾವೀದನ ಮಗ ಸೊಲೊಮೋನನನ್ನ ಮತ್ತೆ ರಾಜನಾಗಿ ಮಾಡಿದ್ರು. ಯೆಹೋವನ ಮುಂದೆ ಅವನನ್ನ ನಾಯಕನಾಗಿ ಅಭಿಷೇಕಿಸಿದ್ರು.+ ಜೊತೆಗೆ ಚಾದೋಕನನ್ನ ಪುರೋಹಿತನಾಗಿ ಅಭಿಷೇಕಿಸಿದ್ರು.+ 23  ತನ್ನ ತಂದೆ ದಾವೀದನ ಬದ್ಲು ಸೊಲೊಮೋನ ಯೆಹೋವನ ಸಿಂಹಾಸನದಲ್ಲಿ+ ಕೂತ್ಕೊಂಡ, ಅವನು ಯಶಸ್ವಿಯಾದ. ಎಲ್ಲ ಇಸ್ರಾಯೇಲ್ಯರು ಅವನ ಮಾತು ಕೇಳಿದ್ರು. 24  ಎಲ್ಲ ಅಧಿಕಾರಿಗಳು,+ ವೀರ ಸೈನಿಕರು,+ ರಾಜ ದಾವೀದನ ಎಲ್ಲ ಗಂಡು ಮಕ್ಕಳು+ ರಾಜ ಸೊಲೊಮೋನನಿಗೆ ತಮ್ಮನ್ನೇ ಅಧೀನಪಡಿಸ್ಕೊಂಡ್ರು. 25  ಯೆಹೋವ ಸೊಲೊಮೋನನಿಗೆ ಇಡೀ ಇಸ್ರಾಯೇಲ್ಯರಿಂದ ತುಂಬ ಗೌರವ ಸಿಗೋ ತರ ಮಾಡಿದನು. ಸೊಲೊಮೋನನಿಗಿಂತ ಮುಂಚೆ ಇದ್ದ ಇಸ್ರಾಯೇಲಿನ ಬೇರೆ ಯಾವ ರಾಜರಿಗೂ ಕೊಡದಿದ್ದ ರಾಜ ವೈಭವವನ್ನ ದೇವರು ಅವನಿಗೆ ಕೊಟ್ಟನು.+ 26  ಹೀಗೆ ಇಷಯನ ಮಗ ದಾವೀದ ಇಡೀ ಇಸ್ರಾಯೇಲಿನ ಮೇಲೆ ಆಳಿದ. 27  ಅವನು 40 ವರ್ಷ ಇಸ್ರಾಯೇಲಿನ ಮೇಲೆ ಆಳಿದ. ಹೆಬ್ರೋನಿಂದ 7 ವರ್ಷ,+ ಯೆರೂಸಲೇಮಿಂದ 33 ವರ್ಷ ಆಳಿದ.+ 28  ದಾವೀದ ಸಂತೋಷ, ತೃಪ್ತಿಯಿಂದ ಹೆಚ್ಚು ಕಾಲ ಜೀವಿಸಿ ತೀರಿಹೋದ.+ ಅವನು ತುಂಬ ಆಸ್ತಿಯನ್ನ, ಗೌರವವನ್ನ ಸಂಪಾದಿಸಿದ. ಅವನ ಮಗ ಸೊಲೊಮೋನ ಅವನ ಜಾಗದಲ್ಲಿ ರಾಜನಾದ.+ 29  ದಿವ್ಯದೃಷ್ಟಿಯುಳ್ಳ ಸಮುವೇಲ, ಪ್ರವಾದಿಯಾದ ನಾತಾನ,+ ದರ್ಶಿಯಾದ ಗಾದ್‌+ ತಮ್ಮ ಬರಹಗಳಲ್ಲಿ ರಾಜ ದಾವೀದನ ಚರಿತ್ರೆಯನ್ನ ಆರಂಭದಿಂದ ಅಂತ್ಯದ ತನಕ ಎಲ್ಲ ಬರೆದಿದ್ದಾರೆ. 30  ಜೊತೆಗೆ ಅವನ ಆಡಳಿತದ ಬಗ್ಗೆ, ಅವನ ದೊಡ್ಡ ದೊಡ್ಡ ಕೆಲಸಗಳ ಬಗ್ಗೆ, ಅವನ ಜೀವನದ ಘಟನೆಗಳ ಬಗ್ಗೆ, ಅವನು ಬದುಕಿದ್ದಾಗ ಇಸ್ರಾಯೇಲಲ್ಲಿ ಮತ್ತು ಅಕ್ಕಪಕ್ಕದ ಎಲ್ಲ ರಾಜ್ಯಗಳಲ್ಲಿ ನಡೆದ ಘಟನೆಗಳ ಬಗ್ಗೆ ಸಹ ಬರೆದಿದ್ದಾರೆ.

ಪಾದಟಿಪ್ಪಣಿ

ಅಥವಾ “ಕೋಟೆ, ಅರಮನೆ.”
ಒಂದು ತಲಾಂತು=34.2 ಕೆಜಿ. ಪರಿಶಿಷ್ಟ ಬಿ14 ನೋಡಿ.
ಡೇರಿಕ್‌ ಒಂದು ಪರ್ಶಿಯದ ಚಿನ್ನದ ನಾಣ್ಯ. ಪರಿಶಿಷ್ಟ ಬಿ14 ನೋಡಿ.
ಅಥವಾ “ಸಂಪೂರ್ಣ ಭಕ್ತಿಯಿಂದ ಕೂಡಿದ.”
ಅಥವಾ “ಕೋಟೆ, ಅರಮನೆ.”