ಪೇತ್ರ ಬರೆದ ಮೊದಲನೇ ಪತ್ರ 4:1-19
4 ಕ್ರಿಸ್ತನು ಮನುಷ್ಯನಾಗಿದ್ದಾಗ ತುಂಬ ಕಷ್ಟ ಅನುಭವಿಸಿದ್ದ.+ ಅದಕ್ಕೇ ನೀವೂ ಕ್ರಿಸ್ತನ ತರ ಯೋಚ್ನೆ ಮಾಡೋಕೆ ನಿಮ್ಮನ್ನೇ ತಯಾರಿ ಮಾಡ್ಕೊಳ್ಳಿ. ಯಾಕಂದ್ರೆ ಕಷ್ಟ ಅನುಭವಿಸೋ ವ್ಯಕ್ತಿ ಪಾಪ ಮಾಡೋದನ್ನ ಬಿಟ್ಟಿದ್ದಾನೆ ಅಂತ ತೋರಿಸ್ಕೊಡ್ತಾನೆ.+
2 ಇನ್ಮುಂದೆ ಅವನು ಮನುಷ್ಯನ ಆಸೆಗಳಿಗೆ ತಕ್ಕ ಹಾಗೆ ಜೀವನ ಮಾಡ್ದೆ+ ದೇವರ ಇಷ್ಟದ ಪ್ರಕಾರ ಜೀವನ ಮಾಡ್ತಾ+ ಪಾಪ ಮಾಡೋದನ್ನ ಬಿಟ್ಟುಬಿಡ್ತಾನೆ.
3 ಈ ಮುಂಚೆ ನೀವು ಲೋಕದ ಜನ್ರ ತರ ಇದ್ರಿ.+ ನಾಚಿಕೆಗೆಟ್ಟು ನಡ್ಕೊಳ್ಳೋದು, ಲೈಂಗಿಕ ಅನೈತಿಕತೆ ನಡ್ಸೋಕೆ ಆಸೆಪಡೋದು, ಕಂಠಪೂರ್ತಿ ಕುಡಿಯೋದು, ಕುಡಿದು ಕುಪ್ಪಳಿಸೋದು, ಕುಡಿಯೋದ್ರಲ್ಲಿ ಪೈಪೋಟಿ, ಅಸಹ್ಯ ಮೂರ್ತಿಪೂಜೆ ಇಂಥ ವಿಷ್ಯಗಳಲ್ಲೇ+ ತುಂಬ ಸಮಯ ಕಳೆದುಬಿಟ್ರಿ.
4 ಈಗ ನೀವು ಜನ್ರ ಜೊತೆ ಸೇರಿ ಅವ್ರ ಅಸಹ್ಯ ಕೆಲಸಗಳಲ್ಲಿ ಕೈಜೋಡಿಸ್ತಾ ಇಲ್ಲ ಅಂತ ಅವರು ಆಶ್ಚರ್ಯ ಪಡ್ತಾರೆ. ಅದಕ್ಕೇ ನಿಮ್ಮ ಬಗ್ಗೆ ಕೆಟ್ಟಕೆಟ್ಟದಾಗಿ ಮಾತಾಡ್ತಾರೆ.+
5 ಆದ್ರೆ ಇವ್ರೆಲ್ಲ ಕ್ರಿಸ್ತನಿಗೆ ಲೆಕ್ಕ ಕೊಡಬೇಕು. ಬದುಕಿರುವವ್ರಿಗೂ ಸತ್ತವ್ರಿಗೂ ತೀರ್ಪು ಕೊಡೋಕೆ ಆತನು ಸಿದ್ಧನಾಗಿದ್ದಾನೆ.+
6 ನಿಜ ಹೇಳಬೇಕಂದ್ರೆ, ಅದಕ್ಕೇ ಸಿಹಿಸುದ್ದಿ ಕೇಳಿಸ್ಕೊಳ್ಳೋ ಅವಕಾಶ ಸತ್ತವರಿಗೂ* ಸಿಕ್ತು.+ ಯಾಕಂದ್ರೆ ಮನುಷ್ಯರ ಪ್ರಕಾರ ಅವ್ರಿಗೆ ತೀರ್ಪು ಆಗಿರೋದಾದ್ರೂ ಪವಿತ್ರಶಕ್ತಿಯ ಪ್ರಕಾರ ಜೀವಿಸೋಕೆ ಅವ್ರಿಗೆ ದೇವರು ಅವಕಾಶ ಕೊಟ್ಟನು.
7 ಆದ್ರೆ ಎಲ್ಲಾ ಕೊನೆಯಾಗೋ ಸಮಯ ಹತ್ರ ಆಗಿದೆ. ಹಾಗಾಗಿ ಚೆನ್ನಾಗಿ ಯೋಚ್ನೆ ಮಾಡಿ+ ಮತ್ತು ಪ್ರಾರ್ಥನೆ ಮಾಡೋದನ್ನ ಮರೀಬೇಡಿ.+
8 ಮುಖ್ಯವಾಗಿ ಒಬ್ರ ಮೇಲೆ ಒಬ್ರಿಗೆ ತುಂಬ ಪ್ರೀತಿ ಇರಬೇಕು.+ ಯಾಕಂದ್ರೆ ಪ್ರೀತಿ ಇರೋ ವ್ಯಕ್ತಿ ಯಾವಾಗ್ಲೂ ಬೇರೆಯವ್ರ ತಪ್ಪುಗಳನ್ನ ಕ್ಷಮಿಸ್ತಾನೆ.+
9 ಗೊಣಗದೆ ಅತಿಥಿಸತ್ಕಾರ ಮಾಡಿ.+
10 ನಿಮ್ಮೆಲ್ಲರಿಗೂ ಒಂದೊಂದು ಸಾಮರ್ಥ್ಯ* ಇದೆ. ಅದನ್ನ ದೇವರ ಅಪಾರ ಕೃಪೆ ಪಡೆದಿರೋ ಒಳ್ಳೇ ಸೇವಕರ ತರ ಇನ್ನೊಬ್ರ ಸೇವೆ ಮಾಡೋಕೆ ಬಳಸಿ. ದೇವರು ತನ್ನ ಅಪಾರ ಕೃಪೆಯನ್ನ ಬೇರೆ ಬೇರೆ ತರ ತೋರಿಸಿದ್ದಾನೆ.+
11 ಯಾರಿಗಾದ್ರೂ ಮಾತಾಡೋ ಸಾಮರ್ಥ್ಯ ಇದ್ರೆ ಅವರು ದೇವರ ಸಂದೇಶಗಳನ್ನ ಮಾತಾಡ್ಲಿ. ಬೇರೆಯವ್ರಿಗೆ ಸಹಾಯ ಮಾಡೋಕೆ ಯಾರಾದ್ರೂ ಮುಂದೆ ಬಂದ್ರೆ ಅವರು ದೇವರ ಶಕ್ತಿ ಮೇಲೆ ಹೊಂದ್ಕೊಂಡು ಸಹಾಯ ಮಾಡ್ಲಿ.+ ಹೀಗೆ ಮಾಡಿದ್ರೆ ಎಲ್ಲ ವಿಷ್ಯಗಳಲ್ಲಿ ದೇವರಿಗೆ ಯೇಸು ಕ್ರಿಸ್ತನ ಮೂಲಕ ಗೌರವ ಸಿಗುತ್ತೆ.+ ದೇವರಿಗೆ ಯಾವಾಗ್ಲೂ ಗೌರವ, ಶಕ್ತಿ ಇರುತ್ತೆ. ಆಮೆನ್.
12 ಪ್ರೀತಿಯ ಸಹೋದರರೇ, ಅಗ್ನಿಪರೀಕ್ಷೆಯನ್ನ ಅನುಭವಿಸುವಾಗ+ ನಿಮಗೆ ವಿಚಿತ್ರವಾಗಿ ಏನೋ ಆಗ್ತಿದೆ ಅಂತ ಆಶ್ಚರ್ಯ ಪಡಬೇಡಿ.
13 ಅದ್ರ ಬದ್ಲು ಕ್ರಿಸ್ತ ಅನುಭವಿಸಿದ ಅದೇ ಕಾರಣಕ್ಕೆ ನೀವೂ ಕಷ್ಟಗಳನ್ನ ಅನುಭವಿಸ್ತಾ ಇದ್ರೆ+ ಖುಷಿಯಾಗೇ ಇರಿ.+ ಹಾಗೆ ಮಾಡಿದ್ರೆ ಆತನು ಮಹಿಮೆಯಿಂದ ಬರುವಾಗ ನೀವು ಇನ್ನೂ ಜಾಸ್ತಿ ಖುಷಿ ಪಡ್ತೀರ.+
14 ನೀವು ಕ್ರಿಸ್ತನ ಶಿಷ್ಯರಾಗಿರೋ ಕಾರಣ ಜನ್ರು ನಿಮ್ಮ ಮೇಲೆ ಆರೋಪ ಹಾಕಿದ್ರೆ ಖುಷಿಪಡಿ.+ ಯಾಕಂದ್ರೆ ದೇವರ ಪವಿತ್ರಶಕ್ತಿ ಮತ್ತು ಅದ್ರ ಮಹಿಮೆ ನಿಮ್ಮ ಮೇಲೆ ಇರುತ್ತೆ.
15 ಆದ್ರೆ ನೀವು ಕೊಲೆ ಮಾಡಿ, ಕಳ್ಳತನ ಮಾಡಿ, ಕೆಟ್ಟ ಕೆಲಸ ಮಾಡಿ, ಬೇರೆಯವ್ರ ವಿಷ್ಯಕ್ಕೆ ತಲೆಹಾಕಿ ಕಷ್ಟ ಅನುಭವಿಸೋ ತರ ಆಗಬಾರದು ಅನ್ನೋದು ನನ್ನಾಸೆ.+
16 ಆದ್ರೆ ನೀವು ಕ್ರೈಸ್ತರಾಗಿ ಇರೋದಕ್ಕೆ ಕಷ್ಟ ಅನುಭವಿಸಿದ್ರೆ ನಾಚಿಕೆ ಪಡಬೇಡಿ.+ ಕ್ರೈಸ್ತರಾಗಿ ಜೀವಿಸ್ತಾ ದೇವರಿಗೆ ಗೌರವ ಕೊಡ್ತಾ ಇರಿ.
17 ಯಾಕಂದ್ರೆ ತೀರ್ಪು ಶುರುವಾಗೋ ಸರಿಯಾದ ಸಮಯ ಇದೇ. ಅದು ಮೊದ್ಲು ದೇವರ ಮನೆಯಿಂದಾನೇ+ ಶುರುವಾಗುತ್ತೆ.+ ಅದು ನಮ್ಮಿಂದ ಶುರು ಆಗೋದಾದ್ರೆ ದೇವರ ಸಿಹಿಸುದ್ದಿಗೆ ತಕ್ಕ ಹಾಗೆ ನಡೆಯೋಕೆ ಒಪ್ಪದೇ ಇರುವವ್ರ ಗತಿ ಏನಾಗುತ್ತೋ?+
18 “ತನ್ನನ್ನ ದೇವರು ಕಾಪಾಡಬೇಕು ಅಂತ ನೀತಿವಂತನೇ ತುಂಬ ಕಷ್ಟಪಡುವಾಗ ದೇವರ ಮೇಲೆ ನಂಬಿಕೆ ಇಲ್ಲದಿರೋ ಜನ್ರ ಗತಿ, ಪಾಪಿಗಳ ಗತಿ ಇನ್ನೇನಾಗುತ್ತೋ?”+
19 ಹೀಗಿರುವಾಗ ದೇವರ ಇಷ್ಟವನ್ನ ಮಾಡ್ತಾ ಕಷ್ಟ ಅನುಭವಿಸುವವರು ಒಳ್ಳೇದನ್ನ ಮಾಡ್ತಾ ಇರಲಿ, ನಂಬಿಗಸ್ತನಾದ ಸೃಷ್ಟಿಕರ್ತನ ಕೈಗೆ ಅವ್ರನ್ನೇ ಒಪ್ಪಿಸ್ಕೊಳ್ಳಲಿ.+