ಪೇತ್ರ ಬರೆದ ಮೊದಲನೇ ಪತ್ರ 5:1-14
5 ಹಿರಿಯರೇ, ನಾನೂ ನಿಮ್ಮ ತರ ಒಬ್ಬ ಹಿರಿಯ ಆಗಿರೋದ್ರಿಂದ, ಕ್ರಿಸ್ತ ಅನುಭವಿಸಿದ ಕಷ್ಟಗಳನ್ನ ನೋಡಿದ್ರಿಂದ, ಮುಂದೆ ನಿಮ್ಮೆಲ್ಲರಿಗೆ ಸಿಗೋ ಗೌರವದಲ್ಲಿ ನನಗೂ ಪಾಲು ಸಿಗೋದ್ರಿಂದ+ ನಿಮ್ಮ ಹತ್ರ ಒಂದು ವಿಷ್ಯ ಕೇಳ್ಕೊಳ್ತೀನಿ. ಅದೇನಂದ್ರೆ:
2 ನಿಮ್ಮ ಕೈಗೆ ಒಪ್ಪಿಸಿರೋ ದೇವರ ಮಂದೆಯನ್ನ+ ಚೆನ್ನಾಗಿ ನೋಡ್ಕೊಳ್ಳಿ. ಮೇಲ್ವಿಚಾರಕರಾಗಿರೋ ನೀವು ಅದನ್ನ ಒತ್ತಾಯದಿಂದ ಮಾಡಬೇಡಿ. ದೇವರ ಇಷ್ಟದ ಪ್ರಕಾರ ಮನಸಾರೆ ಮಾಡಿ.+ ಲಾಭಕ್ಕಾಗಿ ಮಾಡ್ದೆ+ ಸೇವೆ ಮಾಡಬೇಕು ಅಂತ ಮಾಡಿ.
3 ಅವರು ದೇವರ ಆಸ್ತಿ. ಅವ್ರ ಮೇಲೆ ದಬ್ಬಾಳಿಕೆ ಮಾಡಬೇಡಿ.+ ಇಡೀ ಮಂದೆಗೆ ಮಾದರಿಯಾಗಿರಿ.+
4 ಹಾಗೆ ಮಾಡಿದ್ರೆ ಪ್ರಧಾನ ಕುರುಬ+ ಬಂದಾಗ ನಿಮಗೆ ಮಾಸಿಹೋಗದ ಅದ್ಭುತ ಕಿರೀಟ ಕೊಡ್ತಾನೆ.+
5 ಅದೇ ತರ, ಯುವಕರೇ, ವಯಸ್ಸಲ್ಲಿ ನಿಮಗಿಂತ ದೊಡ್ಡವ್ರಿಗೆ ಅಧೀನರಾಗಿ.+ ತಗ್ಗಿಬಗ್ಗಿ ನಡಿರಿ. ಯಾಕಂದ್ರೆ ದೇವರಿಗೆ ಅಹಂಕಾರಿಗಳನ್ನ ಕಂಡ್ರೆ ಇಷ್ಟ ಆಗಲ್ಲ. ಆದ್ರೆ ದೀನರಿಗೆ ಅಪಾರ ಕೃಪೆ ತೋರಿಸ್ತಾನೆ.+
6 ಹಾಗಾಗಿ ತುಂಬ ಶಕ್ತಿ ಇರೋ ದೇವರ ಕೈಕೆಳಗೆ ನಿಮ್ಮನ್ನ ತಗ್ಗಿಸ್ಕೊಳ್ಳಿ. ಆಗ ತಕ್ಕ ಸಮಯದಲ್ಲಿ ಆತನು ನಿಮ್ಮನ್ನ ಮೇಲೆ ಎತ್ತುತ್ತಾನೆ.+
7 ನಿಮಗಿರೋ ಚಿಂತೆಯನ್ನೆಲ್ಲಾ ದೇವರ ಮೇಲೆ ಹಾಕಿ.+ ಯಾಕಂದ್ರೆ ದೇವರಿಗೆ ನಿಮ್ಮ ಮೇಲೆ ತುಂಬ ಕಾಳಜಿ ಇದೆ.+
8 ಬುದ್ಧಿವಂತರಾಗಿ, ಎಚ್ಚರವಾಗಿರಿ.+ ನಿಮ್ಮ ವಿರೋಧಿಯಾಗಿರೋ ಸೈತಾನ ಯಾರನ್ನ ನುಂಗ್ಲಿ+ ಅಂತ ಗರ್ಜಿಸೋ ಸಿಂಹದ ತರ ತಿರುಗ್ತಾ ಇದ್ದಾನೆ.
9 ಆದ್ರೆ ಲೋಕದ ಎಲ್ಲ ಕಡೆ ಇರೋ ನಿಮ್ಮ ಸಹೋದರರು ಇಂಥ ಕಷ್ಟಗಳನ್ನೇ ಅನುಭವಿಸ್ತಿದ್ದಾರೆ ಅಂತ ಅರ್ಥ ಮಾಡ್ಕೊಂಡು ಧೈರ್ಯವಾಗಿರಿ.+ ಗಟ್ಟಿ ನಂಬಿಕೆಯಿಂದ ಸೈತಾನನನ್ನ ವಿರೋಧಿಸಿ.+
10 ಆದ್ರೆ ಕ್ರಿಸ್ತನ ಶಿಷ್ಯರಾಗಿರೋ ನೀವು ಈ ಕಷ್ಟಗಳನ್ನ ಸ್ವಲ್ಪಕಾಲ ತಾಳ್ಕೊಬೇಕು. ಆಮೇಲೆ ದೇವರೇ ನಿಮ್ಮ ಆ ತರಬೇತಿಯನ್ನ ಮುಗಿಸಿ ನಿಮ್ಮನ್ನ ಬಲಪಡಿಸ್ತಾನೆ.+ ದೇವರು ನಿಮಗೆ ಮಹಿಮೆ ಕೊಟ್ಟು ಶಾಶ್ವತವಾಗಿ ಬದುಕೋ ತರ ಮಾಡ್ತಾನೆ.+ ಎಲ್ಲ ತರದ ಅಪಾರ ಕೃಪೆ ತೋರಿಸ್ತಾನೆ. ನೀವು ನಂಬಿಗಸ್ತರಾಗಿ ಉಳಿಯೋಕೆ ಸಹಾಯ ಮಾಡ್ತಾನೆ.+ ನಿಮ್ಮನ್ನ ಗಟ್ಟಿ ನೆಲದ ಮೇಲೆ ನಿಲ್ಲಿಸ್ತಾನೆ.
11 ಶಕ್ತಿ ಯಾವಾಗ್ಲೂ ಆತನಿಗೇ ಸೇರಿದ್ದು. ಆಮೆನ್.
12 ಸಿಲ್ವಾನನ+ ಸಹಾಯದಿಂದ ಒಂದಿಷ್ಟು ಮಾತುಗಳನ್ನ ನಾನು ಬರೆದೆ. ಅವನು ನಂಬಿಗಸ್ತ ಸಹೋದರ. ನಿಮಗೆ ಪ್ರೋತ್ಸಾಹ ಕೊಡೋಕೆ ಮತ್ತು ದೇವರು ನಿಜವಾದ ಅಪಾರ ಕೃಪೆ ತೋರಿಸಿದ್ದಾನೆ ಅಂತ ಹೇಳೋಕೆ ಈ ಪತ್ರ ಬರೆದೆ. ಆ ಅಪಾರ ಕೃಪೆ ಯಾವಾಗ್ಲೂ ನಿಮಗೆ ಸಿಗೋ ತರ ನೋಡ್ಕೊಳ್ಳಿ.
13 ಬಾಬೆಲಲ್ಲಿರೋ ಸಹೋದರಿ ನಿಮಗೆ ವಂದನೆ ಹೇಳಿದ್ದಾಳೆ. ಅವಳನ್ನ ನಿಮ್ಮ ತರಾನೇ ದೇವರು ಆರಿಸ್ಕೊಂಡಿದ್ದಾನೆ. ಅಷ್ಟೇ ಅಲ್ಲ ನನ್ನ ಮಗ ಮಾರ್ಕನೂ+ ವಂದನೆ ಹೇಳಿದ್ದಾನೆ.
14 ಪ್ರೀತಿಯಿಂದ ಮುದ್ದಿಟ್ಟು ಒಬ್ರನ್ನೊಬ್ರು ಮಾತಾಡಿಸಿ.
ಕ್ರಿಸ್ತನ ಶಿಷ್ಯರಾಗಿರೋ ನಿಮಗೆಲ್ಲ ಶಾಂತಿ ಇರಲಿ.