ಯೋಹಾನ ಬರೆದ ಮೊದಲನೇ ಪತ್ರ 3:1-24
3 ದೇವರು ನಮಗೆ ಎಂಥ ಪ್ರೀತಿ ತೋರಿಸಿದ್ದಾನೆ ಅಂತ ನೋಡಿ.+ ದೇವರ ಮಕ್ಕಳು ಅಂತ ಕರಿಸ್ಕೊಳ್ಳೋ ಸುಯೋಗವನ್ನ ನಮಗೆ ಕೊಟ್ಟಿದ್ದಾನೆ.+ ಅದಕ್ಕೇ ನಾವು ಆತನ ಮಕ್ಕಳಾಗಿದ್ದೀವಿ. ಆದ್ರೆ ಲೋಕಕ್ಕೆ ನಾವು ಯಾರಂತ ಗೊತ್ತಿಲ್ಲ.+ ಯಾಕಂದ್ರೆ ಲೋಕ ದೇವರನ್ನ ತಿಳ್ಕೊಂಡಿಲ್ಲ.+
2 ಪ್ರೀತಿಯ ಸಹೋದರ ಸಹೋದರಿಯರೇ, ನಾವು ಈಗ ದೇವರ ಮಕ್ಕಳಾಗಿದ್ರೂ + ಮುಂದೆ ಏನಾಗ್ತೀವಿ ಅಂತ ದೇವರು ಇನ್ನೂ ತೋರಿಸ್ಕೊಟ್ಟಿಲ್ಲ.+ ಆದ್ರೆ ನಾವು ಆತನ ತರ ಇರ್ತಿವಿ ಅಂತ ನಮಗೆ ಗೊತ್ತು. ಯಾಕಂದ್ರೆ ಆತನು ತನ್ನನ್ನ ತೋರಿಸ್ಕೊಟ್ಟಾಗ ನಾವು ಆತನನ್ನ ನಿಜವಾಗ್ಲೂ ನೋಡ್ತೀವಿ.
3 ಆತನು ಶುದ್ಧನಾಗಿದ್ದಾನೆ. ಹಾಗಾಗಿ ಆತನ ಮೇಲೆ ನಂಬಿಕೆ ಇಟ್ಟಿರೋ ಎಲ್ರೂ ತಮ್ಮನ್ನೇ ಶುದ್ಧ ಮಾಡ್ಕೊಳ್ತಾರೆ.+
4 ಪಾಪ ಮಾಡ್ತಿರೋ ಒಬ್ಬ ವ್ಯಕ್ತಿ ದೇವರ ನಿಯಮವನ್ನ ಮುರಿತಾನೆ. ಪಾಪ ಅಂದ್ರೆ ದೇವರ ನಿಯಮವನ್ನ ಮುರಿಯೋದು ಅಂತರ್ಥ.
5 ಯೇಸು ಕ್ರಿಸ್ತ ನಮ್ಮ ಪಾಪಗಳನ್ನ ತೆಗೆದುಹಾಕೋಕೆ ಬಂದ ಅಂತ ನಿಮಗೆ ಗೊತ್ತು.+ ಆತನಲ್ಲಿ ಯಾವ ಪಾಪನೂ ಇಲ್ಲ.
6 ಆತನ ಜೊತೆ ಯಾವಾಗ್ಲೂ ಆಪ್ತರಾಗಿ ಇರುವವರು ಪಾಪ ಮಾಡ್ತಾ ಇರಲ್ಲ.+ ಪಾಪ ಮಾಡ್ತಾ ಇರೋ ಯಾರೂ ಆತನನ್ನ ನೋಡಿಲ್ಲ, ಆತನ ಬಗ್ಗೆ ತಿಳ್ಕೊಂಡಿಲ್ಲ.
7 ಚಿಕ್ಕ ಮಕ್ಕಳೇ, ನಿಮ್ಮನ್ನ ಯಾರೂ ದಾರಿತಪ್ಪಿಸದ ಹಾಗೆ ನೋಡ್ಕೊಳ್ಳಿ. ಯೇಸು ನೀತಿವಂತ. ಆತನ ತರ ಸರಿಯಾದ ದಾರೀಲಿ ನಡಿಯೋನು ನೀತಿವಂತ.
8 ಪಾಪ ಮಾಡ್ತಾ ಇರೋನು ಸೈತಾನನ ಕಡೆಯವನು. ಯಾಕಂದ್ರೆ ಸೈತಾನ ಮೊದಲಿಂದಾನೇ ಪಾಪ ಮಾಡ್ತಿದ್ದ.+ ಸೈತಾನ ಹಾಳುಮಾಡಿರೋ ಕೆಲಸಗಳನ್ನ ಸರಿ ಮಾಡೋಕಂತಾನೇ ದೇವರ ಮಗ ಬಂದನು.+
9 ದೇವರಿಂದ ಹುಟ್ಟಿದವನು ಪಾಪ ಮಾಡ್ತಾ ಇರಲ್ಲ.+ ಯಾಕಂದ್ರೆ ದೇವರ ಶಕ್ತಿ ಅವನಿಗೆ ದಾರಿ ತೋರಿಸುತ್ತೆ. ಅವನು ದೇವರಿಂದ ಹುಟ್ಟಿರೋದ್ರಿಂದ ಅವನಿಗೆ ಪಾಪ ಮಾಡ್ತಾ ಇರಕ್ಕಾಗಲ್ಲ.+
10 ದೇವರ ಮಕ್ಕಳು ಯಾರು ಮತ್ತು ಸೈತಾನನ ಕಡೆಯವರು ಯಾರು ಅಂತ ಇದ್ರಿಂದ ಕಂಡುಹಿಡಿಬಹುದು. ಅದೇನಂದ್ರೆ, ಸರಿಯಾದ ದಾರೀಲಿ ನಡಿಯದೇ ಇರುವವರು ದೇವರ ಮಕ್ಕಳಲ್ಲ. ತಮ್ಮ ಸಹೋದರರನ್ನ ಪ್ರೀತಿಸದೇ ಇರುವವರು ದೇವರ ಮಕ್ಕಳಲ್ಲ.+
11 ನೀವು ಮೊದಲಿಂದ ಕೇಳಿಸ್ಕೊಂಡಿರೋ ಈ ವಿಷ್ಯನ ಮನಸ್ಸಲ್ಲಿ ಇಟ್ಕೊಳ್ಳಿ. ಅದೇನಂದ್ರೆ, ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕು.+
12 ಕೆಟ್ಟವನಿಂದ ಹುಟ್ಟಿ ತನ್ನ ಸ್ವಂತ ತಮ್ಮನನ್ನೇ ಕೊಂದುಹಾಕಿದ ಕಾಯಿನನ ತರ ನಾವು ಇರಬಾರದು.+ ಅವನು ಯಾಕೆ ತಮ್ಮನನ್ನ ಕೊಂದ? ಯಾಕಂದ್ರೆ ಅವನು ಮಾಡ್ತಾ ಇದ್ದಿದ್ದೆಲ್ಲ ಕೆಟ್ಟದಾಗಿತ್ತು,+ ಆದ್ರೆ ಅವನ ತಮ್ಮ ಮಾಡ್ತಾ ಇದ್ದಿದ್ದೆಲ್ಲ ಒಳ್ಳೇದಾಗಿತ್ತು.+
13 ಸಹೋದರರೇ, ಲೋಕ ನಿಮ್ಮನ್ನ ದ್ವೇಷಿಸಿದ್ರೆ ಆಶ್ಚರ್ಯ ಪಡಬೇಡಿ.+
14 ನಾವು ಸತ್ತವ್ರ ತರ ಇದ್ವಿ. ಆದ್ರೆ ಈಗ ನಮಗೆ ಜೀವ ಬಂದಿದೆ.+ ಯಾಕಂದ್ರೆ ನಾವು ಸಹೋದರರನ್ನ ಪ್ರೀತಿ ಮಾಡ್ತೀವಿ.+ ತನ್ನ ಸಹೋದರನನ್ನ ಪ್ರೀತಿ ಮಾಡದೇ ಇರುವವನು ಸತ್ತವ್ರ ತರ.+
15 ತನ್ನ ಸಹೋದರನನ್ನ ದ್ವೇಷಿಸುವವನು ಕೊಲೆಗಾರ.+ ಕೊಲೆ ಮಾಡುವವ್ರಿಗೆ ಶಾಶ್ವತ ಜೀವ ಸಿಗಲ್ಲ ಅಂತ ನಿಮಗೆ ಗೊತ್ತು.+
16 ಯೇಸು ಕ್ರಿಸ್ತ ನಮಗೋಸ್ಕರ ತನ್ನ ಪ್ರಾಣವನ್ನೇ ಕೊಟ್ಟಿದ್ರಿಂದ ಪ್ರೀತಿ ಅಂದ್ರೇನು ಅಂತ ನಮಗೆ ಗೊತ್ತಾಯ್ತು.+ ಹಾಗಾಗಿ ಸಹೋದರರಿಗಾಗಿ ನಮ್ಮ ಪ್ರಾಣ ಕೊಡೋಕ್ಕೂ ನಾವು ತಯಾರಿರಬೇಕು.+
17 ಆದ್ರೆ ಒಬ್ಬ ವ್ಯಕ್ತಿಗೆ ಆಸ್ತಿಪಾಸ್ತಿ ಇದೆ ಅಂದ್ಕೊಳ್ಳಿ. ಅವನ ಸಹೋದರನಿಗೆ ಅಗತ್ಯ ಬಂದಾಗ ಅವನು ಕರುಣೆ ತೋರಿಸಿಲ್ಲಾಂದ್ರೆ ಆ ವ್ಯಕ್ತಿ ದೇವರನ್ನ ಪ್ರೀತಿಸ್ತಾನೆ ಅಂತ ಹೇಗೆ ಹೇಳಕ್ಕಾಗುತ್ತೆ?+
18 ಚಿಕ್ಕ ಮಕ್ಕಳೇ, ನಾವು ಮಾತಲ್ಲಿ ಮಾತ್ರ ಪ್ರೀತಿ ತೋರಿಸಿದ್ರೆ ಸಾಕಾಗಲ್ಲ.+ ನಾವು ನಿಜವಾಗ್ಲೂ+ ಪ್ರೀತಿಸ್ತೀವಿ ಅಂತ ನಮ್ಮ ಕೆಲಸಗಳಿಂದನೂ+ ಗೊತ್ತಾಗಬೇಕು.
19 ಇದ್ರಿಂದ ನಾವು ಸತ್ಯದ ಕಡೆಯವರು ಅಂತ ನಮಗೆ ಗೊತ್ತಾಗುತ್ತೆ. ಅಷ್ಟೇ ಅಲ್ಲ ದೇವರು ನಮ್ಮನ್ನ ಪ್ರೀತಿಸ್ತಾನೆ ಅನ್ನೋ ಭರವಸೆ ಇರುತ್ತೆ.
20 ಒಂದುವೇಳೆ ನಮ್ಮ ಹೃದಯ ನಾವು ಮಾಡಿದ್ದು ತಪ್ಪು ಅಂತ ಹೇಳಿದ್ರೂ ದೇವರು ನಮ್ಮ ಹೃದಯಕ್ಕಿಂತ ತುಂಬ ದೊಡ್ಡವನು, ಆತನಿಗೆ ಎಲ್ಲ ವಿಷ್ಯ ಗೊತ್ತು.+
21 ಪ್ರೀತಿಯ ಸಹೋದರ ಸಹೋದರಿಯರೇ, ನಮ್ಮ ಮನಸ್ಸು ನಮ್ಮನ್ನ ಚುಚ್ಚಲಿಲ್ಲ ಅಂದ್ರೆ ದೇವರ ಹತ್ರ ಮನಸ್ಸುಬಿಚ್ಚಿ ಮಾತಾಡಕ್ಕಾಗುತ್ತೆ.+
22 ಅಷ್ಟೇ ಅಲ್ಲ, ನಾವು ದೇವರ ಆಜ್ಞೆಗಳನ್ನ ಪಾಲಿಸೋದಾದ್ರೆ ಆತನಿಗೆ ಇಷ್ಟ ಆಗೋ ತರ ಜೀವನ ಮಾಡೋದಾದ್ರೆ ನಾವು ಏನೇ ಕೇಳಿದ್ರೂ ಆತನು ಕೊಡ್ತಾನೆ.+
23 ದೇವರು ನಮಗೆ ಕೊಟ್ಟ ಆಜ್ಞೆ ಏನಂದ್ರೆ: ಆತನ ಮಗ ಯೇಸು ಕ್ರಿಸ್ತನಲ್ಲಿ* ನಂಬಿಕೆ ಇಡಬೇಕು,+ ಆತನು ಆಜ್ಞೆ ಕೊಟ್ಟ ಹಾಗೆ ನಾವು ಒಬ್ರನ್ನೊಬ್ರು ಪ್ರೀತಿಸಬೇಕು.+
24 ಅಷ್ಟೇ ಅಲ್ಲ, ಆತನ ಆಜ್ಞೆಗಳನ್ನ ಪಾಲಿಸೋ ಜನ್ರು ಆತನ ಜೊತೆ ಆಪ್ತರಾಗಿ ಇರ್ತಾರೆ. ಅಂಥವ್ರಿಗೆ ಆತನೂ ಆಪ್ತನಾಗಿ ಇರ್ತಾನೆ.+ ಆತನು ಪವಿತ್ರಶಕ್ತಿ ಕೊಡೋದ್ರಿಂದಾನೇ ಅದು ನಮಗೆ ಅರ್ಥ ಆಗುತ್ತೆ.+
ಪಾದಟಿಪ್ಪಣಿ
^ ಅಕ್ಷ. “ಆತನ ಹೆಸರಲ್ಲಿ.”