ಒಂದನೇ ಸಮುವೇಲ 24:1-22
24 ಫಿಲಿಷ್ಟಿಯರನ್ನ ಅಟ್ಟಿಸ್ಕೊಂಡು ಹೋದ ಸೌಲ ವಾಪಸ್ ಬಂದ ಕೂಡ್ಲೇ ಜನ ಅವನಿಗೆ “ನೋಡು! ದಾವೀದ ಏಂಗೆದಿ+ ಕಾಡಲ್ಲಿದ್ದಾನೆ” ಅಂದ್ರು.
2 ಹಾಗಾಗಿ ಸೌಲ ಇಡೀ ಇಸ್ರಾಯೇಲಿಂದ 3,000 ಗಂಡಸ್ರನ್ನ ಆರಿಸಿ ದಾವೀದನನ್ನ ಮತ್ತು ಅವನ ಗಂಡಸ್ರನ್ನ ಹುಡುಕೊಂಡು ಬೆಟ್ಟದ ಮೇಕೆಗಳಿರೋ ಕಡಿದಾದ ಬಂಡೆಗಳ ಮೇಲೆ ಹೋದ.
3 ಸೌಲ ದಾರೀಲಿ ಕಲ್ಲಿಂದ ಮಾಡಿದ್ದ ಕುರಿ ಹಟ್ಟಿಗಳನ್ನ ನೋಡಿದ. ಶೌಚಕ್ಕೋಸ್ಕರ* ಅದ್ರ ಪಕ್ಕದಲ್ಲಿದ್ದ ಒಂದು ಗವಿಯೊಳಗೆ ಹೋದ. ಅದೇ ಗವಿಯ ಒಂದು ಮೂಲೆಯಲ್ಲಿ ದಾವೀದ ಮತ್ತು ಅವನ ಜನ ಅವಿತು ಕೂತಿದ್ರು.+
4 ದಾವೀದನ ಗಂಡಸ್ರು ಅವನಿಗೆ “ಇವತ್ತು ಯೆಹೋವ ನಿನಗೆ ಹೀಗೆ ಹೇಳ್ತಿದ್ದಾನೆ: ‘ನೋಡು! ನಾನು ನಿನ್ನ ಶತ್ರುನ ನಿನ್ನ ಕೈಗೆ ಒಪ್ಪಿಸ್ತೀನಿ.+ ನಿನಗೆ ಯಾವುದು ಸರಿ ಅನಿಸುತ್ತೋ ಅದನ್ನ ಅವನಿಗೆ ಮಾಡು’” ಅಂತ ಹೇಳಿದ್ರು. ಹಾಗಾಗಿ ದಾವೀದ ಸದ್ದಿಲ್ಲದೆ ಎದ್ದು ಹೋಗಿ ಸೌಲನ ತೋಳಿಲ್ಲದ ಅಂಗಿಯ ಅಂಚನ್ನ ಕತ್ತರಿಸಿದ.
5 ಆದ್ರೆ ಅಂಗಿಯ ಅಂಚನ್ನ ಕತ್ತರಿಸಿದ ಮೇಲೆ ದಾವೀದನ ಮನಸಾಕ್ಷಿ* ಚುಚ್ತಾ ಇತ್ತು.+
6 ಅವನು ತನ್ನ ಗಂಡಸ್ರಿಗೆ “ನಾನು ಈ ರೀತಿ ನನ್ನ ಯಜಮಾನನಿಗೆ ಮಾಡಬಾರದಾಗಿತ್ತು. ಯಾಕಂದ್ರೆ ಅವನು ಯೆಹೋವನ ಅಭಿಷಿಕ್ತ. ಯೆಹೋವನ ಅಭಿಷಿಕ್ತನಿಗೆ+ ನಾನು ಹಾನಿ ಮಾಡಿದ್ರೆ ಯೆಹೋವ ಅದನ್ನ ಖಂಡಿತ ಒಪ್ಪಲ್ಲ” ಅಂದ.
7 ಈ ಮಾತುಗಳನ್ನ ಹೇಳಿ ದಾವೀದ ತನ್ನ ಗಂಡಸ್ರನ್ನ ತಡೆದ,* ಸೌಲನ ಮೇಲೆ ಅವರು ದಾಳಿ ಮಾಡದ ಹಾಗೆ ನೋಡ್ಕೊಂಡ. ಇತ್ತ ಕಡೆ ಸೌಲ ಗವಿಯಿಂದ ಎದ್ದು ತನ್ನ ದಾರಿಹಿಡಿದ.
8 ಆಮೇಲೆ ದಾವೀದ ಎದ್ದು ಗವಿಯಿಂದ ಹೊರಗೆ ಬಂದು ಸೌಲನನ್ನ “ನನ್ನ ಒಡೆಯನಾದ ರಾಜ!”+ ಅಂತ ಕೂಗಿ ಕರೆದ. ಸೌಲ ತಿರುಗಿ ನೋಡಿದಾಗ ದಾವೀದ ಮಂಡಿಯೂರಿ ನೆಲದ ತನಕ ಬಗ್ಗಿ ನಮಸ್ಕಾರ ಮಾಡಿದ.
9 ದಾವೀದ ಸೌಲನಿಗೆ “‘ನೋಡು! ದಾವೀದ ನಿನಗೆ ಹಾನಿ ಮಾಡೋಕೆ ನೋಡ್ತಿದ್ದಾನೆ’ ಅಂತ ಹೇಳೋ ಗಂಡಸ್ರ ಮಾತನ್ನ ನೀನ್ಯಾಕೆ ಕೇಳ್ತೀಯಾ?+
10 ಗವಿಯಲ್ಲಿ ಯೆಹೋವ ನಿನ್ನನ್ನ ನನ್ನ ಕೈಗೆ ಹೇಗೆ ಒಪ್ಪಿಸಿದ ಅಂತ ಇವತ್ತು ನೀನು ನಿನ್ನ ಕಣ್ಣಾರೆ ನೋಡ್ದೆ. ಆದ್ರೆ ನಿನ್ನನ್ನ ಕೊಲ್ಲೋಕೆ ಬೇರೆಯವರು ಹೇಳಿದಾಗ್ಲೂ+ ನಾನು ನಿನಗೆ ಕನಿಕರ ತೋರಿಸ್ದೆ. ‘ನಾನು ನನ್ನ ಒಡೆಯನ ವಿರುದ್ಧವಾಗಿ ಕೈ ಎತ್ತಲ್ಲ. ಯಾಕಂದ್ರೆ ಅವನು ಯೆಹೋವನ ಅಭಿಷಿಕ್ತ’+ ಅಂತ ಅವ್ರಿಗೆ ಹೇಳ್ದೆ.
11 ನನ್ನ ತಂದೆಯೇ ನೋಡು, ನಿನ್ನ ತೋಳಿಲ್ಲದ ಅಂಗಿಯ ಅಂಚು ನನ್ನ ಕೈಯಲ್ಲಿದೆ. ನಾನು ನಿನ್ನ ತೋಳಿಲ್ಲದ ಅಂಗಿಯ ಅಂಚನ್ನ ಕತ್ತರಿಸುವಾಗ ನಿನ್ನನ್ನ ಕೊಲ್ಲಲಿಲ್ಲ. ನಿನಗೆ ಹಾನಿಮಾಡೋ ಅಥವಾ ನಿನ್ನ ವಿರುದ್ಧ ದಂಗೆ ಏಳೋ ಉದ್ದೇಶ ನನಗಿಲ್ಲ ಅಂತ ನಿನಗೆ ಈಗ ಅರ್ಥ ಆಗಿರಬಹುದು. ನಾನು ನಿನ್ನ ವಿರುದ್ಧ ಪಾಪಮಾಡಿಲ್ಲ.+ ಆದ್ರೆ ನೀನು ನನ್ನ ಜೀವ ತೆಗಿಯೋಕೆ ನನ್ನ ಹಿಂದೆ ಬಿದ್ದಿದ್ದೀಯಾ.+
12 ನಿನಗೂ ನನಗೂ ಯೆಹೋವನೇ ತೀರ್ಪು ಕೊಡಲಿ.+ ನನಗಾಗಿ ಯೆಹೋವನೇ ನಿನಗೆ ಸೇಡುತೀರಿಸಲಿ.+ ಆದ್ರೆ ನಾನು ಮಾತ್ರ ನಿನ್ನ ಮೇಲೆ ಕೈ ಎತ್ತಲ್ಲ.+
13 ‘ಕೆಟ್ಟವನಿಂದ ಕೆಟ್ಟದು ಬರುತ್ತೆ’ ಅನ್ನೋ ಹಳೇ ಗಾದೆ ಇದೆ. ಆದ್ರೆ ನನ್ನ ಕೈ ನಿನ್ನ ವಿರುದ್ಧ ಬರಲ್ಲ.
14 ಇಸ್ರಾಯೇಲ್ ರಾಜ ಯಾರನ್ನ ಹುಡುಕೊಂಡು ಹೊರಟಿದ್ದಾನೆ? ಯಾರನ್ನ ಅಟ್ಟಿಸ್ಕೊಂಡು ಹೋಗ್ತಿದ್ದಾನೆ? ಒಂದು ಸತ್ತ ನಾಯಿಯನ್ನಾ? ಒಂದು ಚಿಕ್ಕ ಕೀಟವನ್ನಾ?*+
15 ಯೆಹೋವನೇ ನ್ಯಾಯಾಧೀಶನಾಗಿ ನನಗೂ ನಿನಗೂ ತೀರ್ಪು ಕೊಡಲಿ. ಆತನು ನನ್ನ ಪರಿಸ್ಥಿತಿ ನೋಡಿ, ನನ್ನ ಪರವಾಗಿ ವಾದಿಸಿ,+ ತೀರ್ಪು ಕೊಟ್ಟು ನನ್ನನ್ನ ನಿನ್ನ ಕೈಯಿಂದ ರಕ್ಷಿಸಲಿ” ಅಂದ.
16 ದಾವೀದ ಈ ಮಾತುಗಳನ್ನಾಡಿ ಮುಗಿಸಿದ ಕೂಡ್ಲೇ ಸೌಲ “ದಾವೀದನೇ, ನನ್ನ ಮಗನೇ ಇದು ನಿನ್ನ ಸ್ವರನಾ?”+ ಅಂತ ಹೇಳಿ ಜೋರಾಗಿ ಅಳೋಕೆ ಶುರು ಮಾಡ್ದ.
17 ಅವನು ದಾವೀದನಿಗೆ “ನೀನು ನನಗಿಂತ ನೀತಿವಂತ. ಯಾಕಂದ್ರೆ ನೀನು ನನಗೆ ಒಳ್ಳೇದನ್ನ ಮಾಡಿದೆ. ಆದ್ರೆ ನಾನು ಅದಕ್ಕೆ ಪ್ರತಿಯಾಗಿ ನಿನಗೆ ಕೆಟ್ಟದು ಮಾಡಿದೆ.+
18 ಇವತ್ತು ಯೆಹೋವ ನನ್ನನ್ನ ನಿನ್ನ ಕೈಗೆ ಒಪ್ಪಿಸಿದ್ರೂ ನೀನು ನನ್ನನ್ನ ಕೊಲ್ಲದೆ ಸುಮ್ಮನೆ ಬಿಟ್ಟು ನನಗೆ ಒಳ್ಳೇದನ್ನೇ ಮಾಡ್ತಿದ್ದೆ ಅಂತ ತೋರಿಸಿಕೊಟ್ಟೆ.+
19 ಯಾವನಾದರೂ ತನ್ನ ಶತ್ರು ಕೈಗೆ ಸಿಕ್ಕಿದ್ರೆ ಸುಮ್ನೆ ಬಿಡ್ತಾನಾ? ಇವತ್ತು ನೀನು ನನಗೆ ಒಳ್ಳೇದನ್ನ ಮಾಡಿರೋದ್ರಿಂದ ಪ್ರತಿಫಲವಾಗಿ ಯೆಹೋವ ನಿನಗೆ ಒಳ್ಳೇದು ಮಾಡ್ತಾನೆ.+
20 ನೋಡು! ನೀನು ಖಂಡಿತ ರಾಜನಾಗಿ ಆಳ್ತೀಯ.+ ಇಸ್ರಾಯೇಲ್ ರಾಜ್ಯ ಯಾವಾಗ್ಲೂ ನಿನ್ನ ಕೈಯಲ್ಲೇ ಇರುತ್ತೆ ಅಂತ ನಂಗೊತ್ತು.
21 ನೀನು ನನ್ನ ಸಂತತಿಯನ್ನ ಅಳಿಸಿಹಾಕಲ್ಲ, ನನ್ನ ಹೆಸ್ರನ್ನ ನನ್ನ ತಂದೆಯ ಮನೆತನದಿಂದ ನಿರ್ಮೂಲ ಮಾಡಲ್ಲ+ ಅಂತ ಈಗ ಯೆಹೋವನ ಹೆಸ್ರಲ್ಲಿ ನನಗೆ ಆಣೆ ಮಾಡು”+ ಅಂದ.
22 ಆಗ ದಾವೀದ ಆಣೆ ಮಾಡಿದ. ಇದಾದ ಮೇಲೆ ಸೌಲ ಮನೆಗೆ ಹೋದ.+ ಆದ್ರೆ ದಾವೀದ ಮತ್ತು ಅವನ ಗಂಡಸ್ರು ಬೆಟ್ಟಕ್ಕೆ ಹೋದ್ರು.+