ಒಂದನೇ ಸಮುವೇಲ 26:1-25
26 ಸ್ವಲ್ಪ ಸಮಯ ಆದ್ಮೇಲೆ ಜೀಫಿನ+ ಗಂಡಸ್ರು ಗಿಬೆಯಾದಲ್ಲಿದ್ದ+ ಸೌಲನ ಹತ್ರ ಬಂದು “ದಾವೀದ ಯೆಷೀಮೋನಿನ* ಮುಂದೆ ಇರೋ ಹಕೀಲಾ ಬೆಟ್ಟದಲ್ಲಿ ಅಡಗಿದ್ದಾನೆ”+ ಅಂದ್ರು.
2 ಆಗ ಸೌಲ ತಾನು ಆರಿಸ್ಕೊಂಡಿದ್ದ 3,000 ಇಸ್ರಾಯೇಲ್ಯರ ಗಂಡಸ್ರನ್ನ ಕರ್ಕೊಂಡು ಜೀಫ್ ಕಾಡಲ್ಲಿದ್ದ ದಾವೀದನನ್ನ ಹುಡುಕೋಕೆ ಹೋದ.+
3 ಸೌಲ ಯೆಷೀಮೋನಿನ ಮುಂದೆ ಇರೋ ಹಕೀಲಾ ಬೆಟ್ಟದ ದಾರಿಯ ಪಕ್ಕದಲ್ಲಿ ಪಾಳೆಯ ಹಾಕಿದ. ಆಗ ದಾವೀದ ಕಾಡಲ್ಲಿ ಇದ್ದ. ತನ್ನನ್ನ ಹಿಡಿಯೋಕೆ ಸೌಲ ಕಾಡಿಗೆ ಬಂದಿದ್ದಾನೆ ಅಂತ ಅವನಿಗೆ ಗೊತ್ತಾಯ್ತು.
4 ಸೌಲ ನಿಜವಾಗ್ಲೂ ಬಂದಿದ್ದಾನಾ ಅಂತ ತಿಳಿಯೋಕೆ ದಾವೀದ ಗೂಢಚಾರರನ್ನ ಕಳಿಸಿದ.
5 ಆಮೇಲೆ ಸೌಲ ಪಾಳೆಯ ಹಾಕಿದ್ದ ಸ್ಥಳಕ್ಕೆ ದಾವೀದ ಹೋದ. ಸೌಲ ಮತ್ತು ಅವನ ಸೇನಾಪತಿಯೂ ನೇರನ ಮಗನೂ ಆಗಿದ್ದ ಅಬ್ನೇರ+ ಮಲಗಿರೋ ಸ್ಥಳವನ್ನ ದಾವೀದ ನೋಡಿದ. ಸೌಲ ಪಾಳೆಯದ ಮಧ್ಯದಲ್ಲಿ ಮಲಗಿದ್ದ. ಅವನ ಸುತ್ತ ಸೈನಿಕರು ಪಾಳೆಯ ಹಾಕಿದ್ರು.
6 ಆಗ ದಾವೀದ “ಸೌಲನ ಪಾಳೆಯಕ್ಕೆ ಹೋಗೋಕೆ ನನ್ನ ಜೊತೆ ಯಾರು ಬರ್ತಿರ?” ಅಂತ ಹಿತ್ತಿಯನಾದ+ ಅಹೀಮೆಲೆಕನನ್ನ ಮತ್ತು ಚೆರೂಯಳ+ ಮಗನೂ ಯೋವಾಬನ ಸಹೋದರನೂ ಆದ ಅಬೀಷೈಯನ್ನ ಕೇಳಿದ. ಆಗ ಅಬೀಷೈ+ “ನಾನು ಬರ್ತಿನಿ” ಅಂತ ಉತ್ತರ ಕೊಟ್ಟ.
7 ಆಗ ದಾವೀದ ಮತ್ತು ಅಬೀಷೈ ರಾತ್ರಿಯ ಸಮಯದಲ್ಲಿ ಸೌಲನ ಸೈನಿಕರ ಹತ್ರ ಹೋದ್ರು. ಸೌಲ ಪಾಳೆಯದ ಮಧ್ಯದಲ್ಲಿ ಮಲಗಿರೋದನ್ನ, ಅವನ ತಲೆ ಹತ್ರದಲ್ಲೇ ನೆಲಕ್ಕೆ ಅವನ ಈಟಿ ನಾಟಿಸಿರೋದನ್ನ ಅವರು ನೋಡಿದ್ರು. ಅಬ್ನೇರ ಮತ್ತು ಸೈನಿಕರು ಸೌಲನ ಸುತ್ತ ಮಲಗಿದ್ರು.
8 ಆಗ ಅಬೀಷೈ ದಾವೀದನಿಗೆ “ಇವತ್ತು ದೇವರು ನಿನ್ನ ಶತ್ರುವನ್ನ ನಿನ್ನ ಕೈಗೆ ಒಪ್ಪಿಸಿದ್ದಾನೆ.+ ದಯವಿಟ್ಟು ನನಗೆ ಒಂದೇ ಒಂದು ಅವಕಾಶ ಕೊಡು, ಇವನನ್ನ ಈಟಿಯಿಂದ ನೆಲಕ್ಕೆ ನಾಟಿಸ್ತೀನಿ. ಎರಡನೇ ಅವಕಾಶನೇ ಬೇಡ” ಅಂದ.
9 ಆದ್ರೆ ದಾವೀದ ಅಬೀಷೈಗೆ “ಯೆಹೋವನ ಅಭಿಷಿಕ್ತನ+ ವಿರುದ್ಧ ಕೈ ಎತ್ತುವವನು ನಿರಪರಾಧಿ ಆಗಲ್ಲ ಅಲ್ವಾ? ಅವನಿಗೆ ಹಾನಿ ಮಾಡಬೇಡ”+ ಅಂದ.
10 ದಾವೀದ ಮುಂದುವರಿಸಿ “ಜೀವ ಇರೋ ದೇವರಾದ ಯೆಹೋವನ ಆಣೆ ಯೆಹೋವನೇ ಅವನನ್ನ ಸಾಯಿಸ್ತಾನೆ+ ಅಥವಾ ಅವನು ಯುದ್ಧಕ್ಕೆ ಹೋಗಿ ನಾಶವಾಗ್ತಾನೆ.+ ಇಲ್ಲಾಂದ್ರೆ ಎಲ್ರೂ ಸಾಯೋ ತರ ಅವನೂ ಒಂದಲ್ಲ ಒಂದಿನ ಸತ್ತುಹೋಗ್ತಾನೆ.+
11 ಯೆಹೋವನ ಅಭಿಷಿಕ್ತನ ವಿರುದ್ಧ ಕೈ ಎತ್ತೋದನ್ನ ನನ್ನಿಂದ ಯೋಚಿಸೋಕೂ ಆಗಲ್ಲ! ಯಾಕಂದ್ರೆ ಯೆಹೋವನಿಗೆ ಅದು ಇಷ್ಟ ಇಲ್ಲ.+ ದಯವಿಟ್ಟು ಈಗ ಅವನ ತಲೆ ಪಕ್ಕದಲ್ಲಿರೋ ಈಟಿ, ನೀರಿನ ಜಾಡಿನ ನಾವು ತಗೊಂಡು ಹೋಗೋಣ ಬಾ” ಅಂದ.
12 ದಾವೀದ ಸೌಲನ ತಲೆ ಪಕ್ಕದಲ್ಲಿದ್ದ ಈಟಿ, ನೀರಿನ ಜಾಡಿನ ತಗೊಂಡು ಹೋದ. ಅವ್ರೆಲ್ಲ ನಿದ್ದೆಯಲ್ಲಿ ಇದ್ದಿದ್ರಿಂದ ಯಾರು ನೋಡಲಿಲ್ಲ,+ ಗಮನಿಸಲಿಲ್ಲ, ಏಳಲಿಲ್ಲ. ಯಾಕಂದ್ರೆ ಯೆಹೋವ ಅವ್ರಿಗೆ ಗಾಢ ನಿದ್ದೆ ಬರೋ ತರ ಮಾಡಿದ್ದನು.
13 ದಾವೀದ ಆ ಕಡೆ ದಾಟಿ ಸ್ವಲ್ಪ ದೂರದಲ್ಲಿರೋ ಬೆಟ್ಟದ ತುದಿಗೆ ಹೋಗಿ ಸೌಲನ ಪಾಳೆಯದಿಂದ ಸಾಕಷ್ಟು ದೂರದಲ್ಲಿ ನಿಂತ್ಕೊಂಡ.
14 ದಾವೀದ ಸೈನಿಕರಿಗೆ, ನೇರನ ಮಗ ಅಬ್ನೇರನಿಗೆ + ಕೇಳಿಸೋ ತರ ಕೂಗಿ “ಅಬ್ನೇರನೇ ನಾನು ಮಾತಾಡೋದು ನಿನಗೆ ಕೇಳಿಸ್ತಿದ್ಯಾ?” ಅಂದ. ಅದಕ್ಕೆ ಅಬ್ನೇರ “ರಾಜನನ್ನ ಕೂಗ್ತಿರೋ ನೀನ್ಯಾರು?” ಅಂತ ಕೇಳಿದ.
15 ಅದಕ್ಕೆ ದಾವೀದ “ನೀನು ಶೂರ ಅಲ್ವಾ?* ನಿನ್ನ ತರ ಇಸ್ರಾಯೇಲಲ್ಲಿ ಯಾರಿದ್ದಾರೆ? ಹೀಗಿರುವಾಗ ನಿನ್ನ ಒಡೆಯನಾಗಿರೋ ರಾಜನನ್ನ ಯಾಕೆ ನೀನು ಕಾವಲು ಕಾಯಲಿಲ್ಲ? ಒಬ್ಬ ಸೈನಿಕ ಬಂದು ನಿನ್ನ ಒಡೆಯನಾಗಿರೋ ರಾಜನ ಪ್ರಾಣ ತೆಗಿಬೇಕಂತಿದ್ದ.+
16 ನೀನು ಮಾಡಿದ್ದು ಸರಿಯಲ್ಲ. ಜೀವ ಇರೋ ದೇವರಾದ ಯೆಹೋವನ ಆಣೆ, ನೀನು ಸಾವಿಗೆ ಯೋಗ್ಯ. ಯಾಕಂದ್ರೆ ಯೆಹೋವನ ಅಭಿಷಿಕ್ತನಾಗಿರೋ+ ನಿನ್ನ ಒಡೆಯನ ಕಾವಲನ್ನ ನೀನು ಕಾಯಲಿಲ್ಲ. ಈಗ ನಿನ್ನ ಸುತ್ತ ನೋಡು! ರಾಜನ ತಲೆ ಹತ್ರದಲ್ಲಿದ್ದ ಈಟಿ ಮತ್ತು ನೀರಿನ ಜಾಡಿ+ ಎಲ್ಲಿ?” ಅಂತ ಕೇಳಿದ.
17 ಆಗ ಸೌಲ ದಾವೀದನ ಸ್ವರ ಗುರುತಿಸಿ “ದಾವೀದನೇ, ನನ್ನ ಮಗನೇ ಇದು ನಿನ್ನ ಸ್ವರಾನಾ?”+ ಅಂತ ಕೇಳಿದ. ಅದಕ್ಕೆ ಅವನು “ಹೌದು ನನ್ನ ಒಡೆಯನಾಗಿರೋ ರಾಜನೇ, ನಾನೇ” ಅಂದ.
18 ದಾವೀದ ಮುಂದುವರಿಸಿ “ನನ್ನ ಒಡೆಯ, ಈ ಸೇವಕನ ಹಿಂದೆ ಯಾಕೆ ಬಿದ್ದಿದ್ದೀಯ?+ ನಾನೇನು ಮಾಡ್ದೆ? ನನ್ನಿಂದ ಏನ್ ತಪ್ಪು ಆಯ್ತು?+
19 ನನ್ನ ಒಡೆಯನಾದ ರಾಜ, ದಯವಿಟ್ಟು ನಿನ್ನ ಸೇವಕನ ಮಾತು ಕೇಳು. ನಿನ್ನನ್ನ ನನಗೆ ವಿರುದ್ಧವಾಗಿ ಎಬ್ಬಿಸಿರುವವನು ಯೆಹೋವನೇ ಆಗಿರೋದಾದ್ರೆ ನಾನು ಅರ್ಪಿಸೋ ಧಾನ್ಯವನ್ನ ಆತನು ಸ್ವೀಕರಿಸಲಿ.* ನಿನ್ನನ್ನ ನನ್ನ ವಿರುದ್ಧ ಎಬ್ಬಿಸಿರುವವರು ಮನುಷ್ಯರಾಗಿದ್ರೆ+ ಅವ್ರಿಗೆ ಯೆಹೋವನ ಮುಂದೆ ಶಾಪ ಆಗಲಿ. ಯಾಕಂದ್ರೆ ಯೆಹೋವ ಆಸ್ತಿಯಾಗಿ ಕೊಟ್ಟಿರೋ ಪ್ರದೇಶದಲ್ಲಿ+ ಇರೋಕೆ ಯಾವುದೇ ಹಕ್ಕಿಲ್ಲ ಅನ್ನೋ ಭಾವನೆ ನನಗೆ ಬರೋ ತರ ಅವರು ಮಾಡಿದ್ದಾರೆ. ‘ಹೋಗಿ ಬೇರೆ ದೇವರುಗಳನ್ನ ಆರಾಧಿಸು!’ ಅಂತ ಹೇಳೋ ತರ ಅವರು ನನ್ನನ್ನ ಓಡಿಸಿಬಿಟ್ಟಿದ್ದಾರೆ.
20 ಯೆಹೋವನ ಸಾನಿಧ್ಯದಿಂದ ದೂರ ಇರೋ ಈ ನೆಲದಲ್ಲಿ ನನ್ನ ರಕ್ತ ಬೀಳದಿರಲಿ. ಬೆಟ್ಟದಲ್ಲಿನ ಕೌಜುಗ ಪಕ್ಷಿಯನ್ನ ಬೆನ್ನಟ್ಟೋ ಹಾಗೆ ಇಸ್ರಾಯೇಲಿನ ರಾಜ ಒಂದು ಚಿಕ್ಕ ಕೀಟವನ್ನ*+ ಅಟ್ಟಿಸ್ಕೊಂಡು ಹೋಗ್ತಿದ್ದಾನೆ” ಅಂದ.
21 ಅದಕ್ಕೆ ಸೌಲ “ನಾನು ಪಾಪ ಮಾಡಿದ್ದೀನಿ.+ ದಾವೀದನೇ, ನನ್ನ ಮಗನೇ ವಾಪಸ್ ಬಾ. ನಾನು ನಿನಗೆ ತೊಂದ್ರೆ ಮಾಡಲ್ಲ. ಯಾಕಂದ್ರೆ ಇವತ್ತು ನೀನು ನನ್ನ ಜೀವವನ್ನ ಅಮೂಲ್ಯವಾಗಿ ನೋಡಿದ್ದೀಯ.+ ಹೌದು ನಾನು ಮೂರ್ಖನ ತರ ನಡ್ಕೊಂಡು ತುಂಬ ದೊಡ್ಡ ತಪ್ಪು ಮಾಡಿದ್ದೀನಿ” ಅಂದ.
22 ಅದಕ್ಕೆ ದಾವೀದ “ರಾಜನ ಈಟಿ ಇಲ್ಲಿದೆ. ಯುವಕರಲ್ಲಿ ಒಬ್ಬ ಬಂದು ಅದನ್ನ ತಗೊಳ್ಳಲಿ.
23 ಪ್ರತಿಯೊಬ್ಬನಿಗೂ ಅವನವನ ನೀತಿನಿಷ್ಠೆಗೆ, ನಂಬಿಕೆಗೆ ಸರಿಯಾದ ಪ್ರತಿಫಲವನ್ನ ಯೆಹೋವನೇ ಕೊಡ್ತಾನೆ.+ ಇವತ್ತು ಯೆಹೋವ ನಿನ್ನನ್ನ ನನ್ನ ಕೈಗೆ ಒಪ್ಪಿಸಿದ್ದನು. ಆದ್ರೆ ಯೆಹೋವನ ಅಭಿಷಿಕ್ತನಾಗಿರೋ ನಿನ್ನ ವಿರುದ್ಧ ಕೈ ಎತ್ತೋಕೆ ನನಗೆ ಮನಸ್ಸಾಗಲಿಲ್ಲ.+
24 ಇವತ್ತು ನನಗೆ ನಿನ್ನ ಪ್ರಾಣ ಅಮೂಲ್ಯವಾಗಿದ್ದ ತರಾನೇ ಯೆಹೋವನ ಕಣ್ಣಲ್ಲಿ ನನ್ನ ಪ್ರಾಣ ಅಮೂಲ್ಯವಾಗಿರಲಿ. ನನ್ನ ಎಲ್ಲ ಕಷ್ಟಗಳಲ್ಲಿ ಆತನು ನನ್ನನ್ನ ಕಾಪಾಡಲಿ”+ ಅಂದ.
25 ಆಗ ಸೌಲ “ದಾವೀದನೇ, ನನ್ನ ಮಗನೇ, ದೇವರು ನಿನ್ನನ್ನ ಆಶೀರ್ವದಿಸಲಿ. ನೀನು ಖಂಡಿತ ದೊಡ್ಡ ದೊಡ್ಡ ಕೆಲಸಗಳನ್ನ ಮಾಡ್ತೀಯ, ಖಂಡಿತ ಯಶಸ್ಸು ಸಿಗುತ್ತೆ”+ ಅಂದ. ಆಮೇಲೆ ದಾವೀದ ತನ್ನ ದಾರಿಹಿಡಿದು ಹೋದ, ಸೌಲ ತನ್ನ ಮನೆಗೆ ವಾಪಸ್ ಹೋದ.+
ಪಾದಟಿಪ್ಪಣಿ
^ ಬಹುಶಃ, “ಮರುಭೂಮಿ; ಅರಣ್ಯಪ್ರದೇಶ.”
^ ಅಕ್ಷ. “ಗಂಡಸು ಅಲ್ವಾ?”
^ ಅಕ್ಷ. “ಆಘ್ರಾಣಿಸಲಿ.”
^ ಅಕ್ಷ. “ಚಿಗಟ.”