ಒಂದನೇ ಸಮುವೇಲ 30:1-31

  • ಅಮಾಲೇಕ್ಯರು ಚಿಕ್ಲಗಿನ ಮೇಲೆ ದಾಳಿ ಮಾಡಿ ಸುಟ್ಟುಹಾಕಿದ್ರು (1-6)

    • ದಾವೀದ ದೇವರಿಂದ ಶಕ್ತಿ ಪಡ್ಕೊಂಡ (6)

  • ದಾವೀದ ಅಮಾಲೇಕ್ಯರನ್ನ ಸೋಲಿಸಿದ (7-31)

    • ದಾವೀದ ಕೈದಿಗಳನ್ನ ಬಿಡಿಸಿದ (18, 19)

    • ದಾವೀದ ಲೂಟಿಯ ವಿಷ್ಯದಲ್ಲಿ ಮಾಡಿದ ನಿಯಮ (23, 24)

30  ಮೂರನೇ ದಿನ ದಾವೀದ, ಅವನ ಗಂಡಸ್ರು ಚಿಕ್ಲಗಿಗೆ+ ಬಂದ್ರು. ಅಷ್ಟರಲ್ಲಿ ಅಮಾಲೇಕ್ಯರು+ ದಕ್ಷಿಣದ* ಮೇಲೆ, ಚಿಕ್ಲಗಿನ ಮೇಲೆ ದಾಳಿ ಮಾಡಿದ್ರು. ಅವರು ಚಿಕ್ಲಗನ್ನ ಲೂಟಿ ಮಾಡಿ ಅದನ್ನ ಬೆಂಕಿಯಿಂದ ಸುಟ್ಟುಹಾಕಿದ್ರು.  ಅವರು ಸ್ತ್ರೀಯರನ್ನ,+ ದೊಡ್ಡವರಿಂದ ಹಿಡಿದು ಚಿಕ್ಕವರನ್ನ, ಅಲ್ಲಿದ್ದ ಎಲ್ರನ್ನ ಕೈದಿಗಳಾಗಿ ಹಿಡ್ಕೊಂಡು ಹೋಗಿದ್ರು. ಅವರು ಯಾರನ್ನೂ ಸಾಯಿಸಲಿಲ್ಲ. ಆದ್ರೆ ಎಲ್ರನ್ನೂ ಕರ್ಕೊಂಡು ಹೋಗಿದ್ರು.  ದಾವೀದ ಮತ್ತು ಅವನ ಗಂಡಸ್ರು ಪಟ್ಟಣಕ್ಕೆ ಬಂದಾಗ ಅದನ್ನ ಸುಟ್ಟು ಹಾಕಿರೋ ವಿಷ್ಯ ಮತ್ತು ಅವ್ರ ಹೆಂಡತಿಯರನ್ನ, ಮಕ್ಕಳನ್ನ ಕೈದಿಯಾಗಿ ಕರ್ಕೊಂಡು ಹೋಗಿರೋ ವಿಷ್ಯ ಅವ್ರಿಗೆ ಗೊತ್ತಾಯ್ತು.  ಆಗ ದಾವೀದ, ಅವನ ಜೊತೆ ಇದ್ದವರು ಜೋರಾಗಿ ಅಳೋಕೆ ಶುರು ಮಾಡಿದ್ರು. ಅತ್ತುಅತ್ತು ಅವ್ರಲ್ಲಿ ಶಕ್ತಿ ಇಲ್ಲದ ಹಾಗೆ ಆಯ್ತು.  ದಾವೀದನ ಹೆಂಡತಿಯರಾದ ಇಜ್ರೇಲಿನ ಅಹೀನೋವಮ, ಕರ್ಮೆಲಿನವನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲ್‌ ಇವ್ರಿಬ್ರನ್ನೂ ಕೈದಿಗಳಾಗಿ ಕರ್ಕೊಂಡು ಹೋಗಲಾಗಿತ್ತು.+  ಗಂಡಸ್ರು ತಮ್ಮ ಮಕ್ಕಳನ್ನ ಕಳ್ಕೊಂಡು ತುಂಬ ದುಃಖದಲ್ಲಿ ಇದ್ದಿದ್ರಿಂದ ದಾವೀದನನ್ನ ಕಲ್ಲೆಸೆದು ಸಾಯಿಸಬೇಕು ಅಂತ ಮಾತಾಡ್ಕೊಳ್ತಿದ್ರು. ಹಾಗಾಗಿ ದಾವೀದ ತುಂಬ ಕಷ್ಟದಲ್ಲಿದ್ದ. ಆದ್ರೆ ಅವನು ತನ್ನ ದೇವರಾದ ಯೆಹೋವನಿಂದ ತನ್ನನ್ನ ಬಲಪಡಿಸ್ಕೊಂಡ.+  ಆಮೇಲೆ ದಾವೀದ ಅಹೀಮೆಲೆಕನ ಮಗನೂ ಪುರೋಹಿತನೂ ಆಗಿದ್ದ ಎಬ್ಯಾತಾರನಿಗೆ+ “ದಯವಿಟ್ಟು ಏಫೋದನ್ನ ಇಲ್ಲಿ ತಗೊಂಡು ಬಾ”+ ಅಂದ. ಆಗ ಎಬ್ಯಾತಾರ ಏಫೋದನ್ನ ದಾವೀದನ ಹತ್ರ ತಗೊಂಡು ಬಂದ.  ದಾವೀದ ಯೆಹೋವನ ಹತ್ರ “ನಾನು ಈ ಲೂಟಿಗಾರರ ಗುಂಪನ್ನ ಅಟ್ಟಿಸ್ಕೊಂಡು ಹೋಗ್ಲಾ? ನನಗೆ ಅವರು ಸಿಗ್ತಾರಾ?” ಅಂತ ಕೇಳಿದ.+ ಅದಕ್ಕೆ ಆತನು ದಾವೀದನಿಗೆ “ಅಟ್ಟಿಸ್ಕೊಂಡು ಹೋಗು. ಅವರು ಖಂಡಿತ ನಿನಗೆ ಸಿಗ್ತಾರೆ. ನೀನು ಅವ್ರಿಂದ ಎಲ್ಲವನ್ನೂ ಎಲ್ರನ್ನೂ ಬಿಡಿಸ್ಕೊಂಡು ಬರ್ತಿಯ”+ ಅಂದ.  ತಕ್ಷಣ ದಾವೀದ ತನ್ನ ಜೊತೆ ಇದ್ದ 600 ಗಂಡಸ್ರನ್ನ+ ಕರ್ಕೊಂಡು ಹೊರಟ. ಅವರು ಬೆಸೋರ್‌ ನಾಲೆ* ಹತ್ರ ಬಂದಾಗ ಅವ್ರಲ್ಲಿ ಕೆಲವು ಗಂಡಸ್ರು ಅಲ್ಲೇ ಉಳ್ಕೊಂಡ್ರು. 10  ಅವರು 200 ಜನ ಇದ್ರು, ತುಂಬ ದಣಿದಿದ್ರು. ಅದಕ್ಕೇ ಬೆಸೋರ್‌ ನಾಲೆ ದಾಟೋಕೆ ಆಗದೆ ಅಲ್ಲೇ ಇದ್ದುಬಿಟ್ರು.+ ಆಗ ದಾವೀದ ಉಳಿದ 400 ಗಂಡಸ್ರನ್ನ ಕರ್ಕೊಂಡು ಅಟ್ಟಿಸ್ಕೊಂಡು ಹೋದ. 11  ಅವರು ಬಯಲಲ್ಲಿ ಈಜಿಪ್ಟಿನ ಒಬ್ಬನನ್ನ ನೋಡಿ ಅವನನ್ನ ದಾವೀದನ ಹತ್ರ ಕರ್ಕೊಂಡು ಬಂದ್ರು. ಅವರು ಆ ವ್ಯಕ್ತಿಗೆ ತಿನ್ನೋಕೆ ಆಹಾರ, ಕುಡಿಯೋಕೆ ನೀರು ಕೊಟ್ರು. 12  ಅಷ್ಟೇ ಅಲ್ಲ ಜಜ್ಜಿರೋ ಅಂಜೂರದ ಬಿಲ್ಲೆಯ ಒಂದು ತುಂಡನ್ನ, ಒಣದ್ರಾಕ್ಷಿಯ ಎರಡು ಬಿಲ್ಲೆಗಳನ್ನ ತಿನ್ನೋಕೆ ಕೊಟ್ರು. ಅವನು ಅದನ್ನ ತಿಂದು ಶಕ್ತಿ ಪಡ್ಕೊಂಡ. ಯಾಕಂದ್ರೆ ಅವನು ಮೂರು ದಿನ ಮೂರು ರಾತ್ರಿಯಿಂದ ಏನೂ ತಿಂದಿರಲಿಲ್ಲ ಏನೂ ಕುಡಿದಿರಲಿಲ್ಲ. 13  ದಾವೀದ ಅವನಿಗೆ “ನೀನು ಯಾರ ಸೇವಕ? ಎಲ್ಲಿಂದ ಬಂದಿದ್ದೀಯಾ?” ಅಂತ ಕೇಳಿದ. ಅದಕ್ಕೆ ಅವನು “ನಾನು ಈಜಿಪ್ಟಿನವನು. ಒಬ್ಬ ಅಮಾಲೇಕ್ಯನ ಸೇವಕ. ಮೂರು ದಿನದ ಹಿಂದೆ ನನಗೆ ಹುಷಾರಿಲ್ಲ ಅಂತ ನನ್ನ ಧಣಿ ನನ್ನನ್ನ ಬಿಟ್ಟು ಹೋದ. 14  ನಾವು ದಕ್ಷಿಣದಲ್ಲಿದ್ದ* ಕೆರೇತ್ಯರ+ ಪ್ರಾಂತ್ಯ, ಯೆಹೂದದ ಪ್ರಾಂತ್ಯ ಮತ್ತು ಕಾಲೇಬಿನ+ ದಕ್ಷಿಣ* ಭಾಗದ ಮೇಲೆ ದಾಳಿ ಮಾಡಿದ್ವಿ. ಚಿಕ್ಲಗನ್ನ ಬೆಂಕಿಯಿಂದ ಸುಟ್ಟುಹಾಕಿದ್ವಿ” ಅಂದ. 15  ಅದಕ್ಕೆ ದಾವೀದ “ನೀನು ಆ ಲೂಟಿಗಾರರ ಗುಂಪಿನ ಹತ್ರ ನನ್ನನ್ನ ಕರ್ಕೊಂಡು ಹೋಗ್ತೀಯಾ?” ಅಂತ ಕೇಳಿದ. ಅದಕ್ಕೆ ಅವನು “ನೀನು ನನ್ನನ್ನ ಸಾಯಿಸಲ್ಲ, ನನ್ನನ್ನ ನನ್ನ ಧಣಿ ಕೈಗೆ ಒಪ್ಪಿಸಲ್ಲ ಅಂತ ದೇವರ ಮೇಲೆ ಆಣೆ ಮಾಡಿದ್ರೆ ನಿನ್ನನ್ನ ಲೂಟಿಗಾರರ ಗುಂಪಿನ ಹತ್ರ ಕರ್ಕೊಂಡು ಹೋಗ್ತೀನಿ” ಅಂದ. 16  ಹಾಗಾಗಿ ಅವನು ಆ ಲೂಟಿಗಾರರ ಗುಂಪು ತಂಗಿದ್ದ ಸ್ಥಳಕ್ಕೆ ದಾವೀದನನ್ನ ಕರ್ಕೊಂಡು ಹೋದ. ಅವರು ಫಿಲಿಷ್ಟಿಯರ ಪ್ರದೇಶದಿಂದ, ಯೆಹೂದದ ಪ್ರದೇಶದಿಂದ ತುಂಬ ಲೂಟಿ ಮಾಡಿದ್ರು. ತಿಂತಾ ಕುಡಿತಾ ಕುಣಿದು ಕುಪ್ಪಳಿಸ್ತಾ ಆ ಸ್ಥಳದಲೆಲ್ಲಾ ಚದರಿ ಹೋಗಿದ್ರು. 17  ಮುಂಜಾನೆಯಿಂದ ಮಾರನೇ ದಿನ ಸಂಜೆ ತನಕ ದಾವೀದ ಅವ್ರನ್ನೆಲ್ಲ ಕೊಲ್ತಾ ಬಂದ. ಒಂಟೆಗಳನ್ನ ಹತ್ತಿ ಓಡಿಹೋದ 400 ಗಂಡಸ್ರನ್ನ ಬಿಟ್ರೆ ಬೇರೆ ಯಾರೂ ಅಲ್ಲಿಂದ ತಪ್ಪಿಸ್ಕೊಳ್ಳಲಿಲ್ಲ.+ 18  ಅಮಾಲೇಕ್ಯರು ತಗೊಂಡು ಹೋಗಿದ್ದ ಎಲ್ಲವನ್ನ ದಾವೀದ ಬಿಡಿಸ್ಕೊಂಡ.+ ತನ್ನ ಇಬ್ರು ಹೆಂಡತಿಯರನ್ನ ಕಾಪಾಡಿದ. 19  ಚಿಕ್ಕ ವಸ್ತುವಿನಿಂದ ದೊಡ್ಡ ವಸ್ತುವಿನ ತನಕ ಅವ್ರ ಎಲ್ಲಾ ವಸ್ತು ಸಿಕ್ತು. ತಮ್ಮ ಮಕ್ಕಳನ್ನ, ತಮ್ಮ ಎಲ್ಲಾ ವಸ್ತುಗಳನ್ನ ಬಿಡಿಸ್ಕೊಂಡ್ರು.+ ಅಮಾಲೇಕ್ಯರು ತಗೊಂಡು ಹೋಗಿದ್ದ ಎಲ್ಲವನ್ನ ದಾವೀದ ವಾಪಸ್‌ ಪಡ್ಕೊಂಡ. 20  ದಾವೀದ ಶತ್ರುಗಳ ದನಕುರಿಗಳನ್ನ ತಗೊಂಡ. ಅವುಗಳನ್ನ ಅವನ ಜನ “ಇದು ದಾವೀದನ ಕೊಳ್ಳೆ” ಅಂತ ಮಾತಾಡ್ಕೊಂಡು ತಮ್ಮ ದನಕುರಿಗಳ ಮುಂದಾಗಿ ಹೊಡ್ಕೊಂಡು ಬಂದ್ರು. 21  ದಾವೀದ ತನ್ನ ಜೊತೆ ಬರೋಕೆ ಆಗದೆ ದಣಿವಾಗಿ ಬೆಸೋರ್‌ ನಾಲೆಯಲ್ಲೇ+ ಉಳ್ಕೊಂಡಿದ್ದ ಆ 200 ಜನ್ರ ಹತ್ರ ಬಂದ. ಅವರು ದಾವೀದ ಮತ್ತು ಅವನ ಜೊತೆ ಹೋಗಿದ್ದ ಜನ್ರನ್ನ ಭೇಟಿಮಾಡೋಕೆ ಹೊರಗೆ ಬಂದ್ರು. ಆಗ ದಾವೀದ ಅವ್ರ ಹತ್ರ ಬಂದು ಅವ್ರ ಕ್ಷೇಮ ವಿಚಾರಿಸಿದ. 22  ದಾವೀದನ ಜೊತೆ ಹೋಗಿದ್ದವ್ರಲ್ಲಿ ಇದ್ದಂಥ ಕೆಟ್ಟ, ಅಯೋಗ್ಯ ಗಂಡಸ್ರೆಲ್ಲ “ಇವರು ನಮ್ಮ ಜೊತೆ ಬರದೇ ಇದ್ದಿದ್ರಿಂದ ನಾವು ಹಿಂದೆ ಪಡ್ಕೊಂಡ ಲೂಟಿಯಿಂದ ಇವ್ರಿಗೆ ಏನೂ ಕೊಡೋದು ಬೇಡ. ಇವರು ತಮ್ಮ ಹೆಂಡತಿ ಮಕ್ಕಳನ್ನ ಕರ್ಕೊಂಡು ಹೋಗ್ಲಿ” ಅಂದ್ರು. 23  ಆದ್ರೆ ದಾವೀದ “ನನ್ನ ಸಹೋದರರೇ, ಯೆಹೋವ ನಮಗೆ ಇಷ್ಟೆಲ್ಲ ಕೊಟ್ಟ ಮೇಲೂ ನೀವು ಹೀಗೆ ಮಾಡಬಾರದು. ಆತನು ನಮ್ಮನ್ನ ಕಾಪಾಡಿದನು. ನಮ್ಮ ವಿರುದ್ಧ ಬಂದಿದ್ದ ಲೂಟಿಗಾರರ ಗುಂಪನ್ನ ನಮ್ಮ ಕೈಗೆ ಒಪ್ಪಿಸಿದನು.+ 24  ನೀವು ಹೇಳ್ತಿರೋ ಮಾತನ್ನ ಯಾರು ಒಪ್ತಾರೆ? ಯುದ್ಧಕ್ಕೆ ಹೋದವನಿಗೆ ಸಿಗೋ ಪಾಲೂ ಒಂದೇ, ಸಾಮಾನುಗಳನ್ನ ಕಾಯ್ತಾ ಕೂತವನಿಗೆ ಸಿಗೋ ಪಾಲು ಒಂದೇ.+ ಎಲ್ರಿಗೂ ಸಮಪಾಲು ಸಿಗಬೇಕು”+ ಅಂದ. 25  ದಾವೀದ ಆ ದಿನದಿಂದ ಇಸ್ರಾಯೇಲಲ್ಲಿ ಇದನ್ನ ಒಂದು ನಿಯಮವಾಗಿ, ಕಾನೂನಾಗಿ ಮಾಡಿದ. ಇದು ಇವತ್ತಿನ ತನಕ ಜಾರಿಯಲ್ಲಿದೆ. 26  ದಾವೀದ ಚಿಕ್ಲಗಿಗೆ ವಾಪಸ್‌ ಬಂದ ಮೇಲೆ ತನ್ನ ಸ್ನೇಹಿತರಾಗಿದ್ದ ಯೆಹೂದದ ಹಿರಿಯರಿಗೆ ಲೂಟಿಯಿಂದ ಸ್ವಲ್ಪ ಕಳಿಸಿ “ಯೆಹೋವನ ಶತ್ರುಗಳನ್ನ ಲೂಟಿ ಮಾಡಿದ್ರಲ್ಲಿ ಈ ಉಡುಗೊರೆ ನಿಮಗೆ”* ಅಂದ. 27  ಅದನ್ನ ಅವನು ಬೆತೆಲಿನಲ್ಲಿರುವವರಿಗೆ,+ ರಾಮೋತಿನ ನೆಗೆಬಿನಲ್ಲಿರುವವರಿಗೆ,* ಯತ್ತೀರಿನಲ್ಲಿರುವವರಿಗೆ,+ 28  ಅರೋಯೇರಿನಲ್ಲಿರುವವರಿಗೆ, ಸಿಪ್ಮೋತಿನಲ್ಲಿರುವವರಿಗೆ, ಎಷ್ಟೆಮೋವದಲ್ಲಿರುವವರಿಗೆ,+ 29  ರಾಕಾಲಿನಲ್ಲಿರುವವರಿಗೆ, ಯೆರಹ್ಮೇಲ್ಯರ+ ಪಟ್ಟಣದಲ್ಲಿರುವವರಿಗೆ, ಕೇನ್ಯರ+ ಪಟ್ಟಣದಲ್ಲಿರುವವರಿಗೆ, 30  ಹೊರ್ಮಾದಲ್ಲಿರುವವರಿಗೆ,+ ಬೋರಾಷಾನಿನಲ್ಲಿರುವವರಿಗೆ, ಅತಾಕಿನಲ್ಲಿರುವವರಿಗೆ, 31  ಹೆಬ್ರೋನಿನಲ್ಲಿರುವವರಿಗೆ+ ಮತ್ತು ದಾವೀದನೂ ಅವನ ಗಂಡಸ್ರೂ ಆಗಾಗ ಹೋಗ್ತಿದ್ದ ಎಲ್ಲ ಸ್ಥಳಗಳಿಗೆ ಕಳಿಸಿಕೊಟ್ಟ.

ಪಾದಟಿಪ್ಪಣಿ

ಅಥವಾ “ನೆಗೆಬಿನ.”
ಅಥವಾ “ನೆಗೆಬ್‌.”
ಅಥವಾ “ನೆಗೆಬಲ್ಲಿದ್ದ.”
ಅಕ್ಷ. “ಆಶೀರ್ವಾದ.”
ಅಥವಾ “ದಕ್ಷಿಣದಲ್ಲಿ ಇರುವವರಿಗೆ.”