ಒಂದನೇ ಸಮುವೇಲ 31:1-13
-
ಸೌಲ ಮತ್ತು ಅವನ ಮೂರು ಗಂಡು ಮಕ್ಕಳ ಮರಣ (1-13)
31 ಫಿಲಿಷ್ಟಿಯರು ಇಸ್ರಾಯೇಲ್ಯರ ವಿರುದ್ಧ ಯುದ್ಧ ಮಾಡ್ತಿದ್ರು.+ ಇಸ್ರಾಯೇಲ್ ಗಂಡಸ್ರು ಫಿಲಿಷ್ಟಿಯರ ಎದುರಿಂದ ಓಡಿಹೋದ್ರು. ಅವ್ರಲ್ಲಿ ತುಂಬ ಜನ್ರನ್ನ ಗಿಲ್ಬೋವ ಬೆಟ್ಟದಲ್ಲಿ+ ಸಾಯಿಸಿದ್ರು.
2 ಫಿಲಿಷ್ಟಿಯರು ಸೌಲನನ್ನ, ಅವನ ಮಕ್ಕಳನ್ನ ಅಟ್ಟಿಸ್ಕೊಂಡು ತುಂಬ ಹತ್ರ ಹೋದ್ರು. ಸೌಲನ ಮಕ್ಕಳಾದ ಯೋನಾತಾನನನ್ನ,+ ಅಬೀನಾದಾಬನನ್ನ, ಮಲ್ಕೀಷೂವನನ್ನ+ ಫಿಲಿಷ್ಟಿಯರು ಕೊಂದ್ರು.
3 ಸೌಲನ ವಿರುದ್ಧ ನಡೆದ ಯುದ್ಧ ತುಂಬಾ ಜೋರಾಗಿ ನಡೀತು. ಬಿಲ್ಲುಗಾರರು ಅವನನ್ನ ನೋಡಿದಾಗ ತುಂಬ ಗಾಯ ಮಾಡಿದ್ರು.+
4 ಆಗ ಸೌಲ ತನ್ನ ಆಯುಧಗಳನ್ನ ಹೊರುವವನಿಗೆ “ನಿನ್ನ ಕತ್ತಿ ತೆಗೆದು ನನ್ನನ್ನ ಕೊಂದುಬಿಡು. ಇಲ್ಲಾಂದ್ರೆ ಸುನ್ನತಿಯಾಗದ ಈ ಗಂಡಸ್ರು+ ನನ್ನನ್ನ ಕತ್ತಿಯಿಂದ ಕ್ರೂರವಾಗಿ* ಕೊಲ್ತಾರೆ” ಅಂದ. ಆದ್ರೆ ಆಯುಧಗಳನ್ನ ಹೊರುವವನಿಗೆ ತುಂಬ ಭಯ ಆಗಿದ್ರಿಂದ ಹಾಗೆ ಮಾಡೋಕೆ ಒಪ್ಪಲಿಲ್ಲ. ಹಾಗಾಗಿ ಸೌಲ ಕತ್ತಿ ತಗೊಂಡು ತಾನೇ ಅದ್ರ ಮೇಲೆ ಬಿದ್ದ.+
5 ಸೌಲ ಸತ್ತದ್ದನ್ನ+ ಆಯುಧಗಳನ್ನ ಹೊರುವವನು ನೋಡಿ, ತನ್ನ ಕತ್ತಿ ಮೇಲೆ ಬಿದ್ದು ಅವನೂ ಸೌಲನ ಜೊತೆ ಸತ್ತು ಹೋದ.
6 ಹೀಗೆ ಸೌಲ, ಅವನ ಮೂರು ಗಂಡು ಮಕ್ಕಳು, ಅವನ ಆಯುಧಗಳನ್ನ ಹೊರುವವನು, ಅವನ ಗಂಡಸ್ರೆಲ್ಲ ಅದೇ ದಿನ ಸತ್ತು ಹೋದ್ರು.+
7 ಇಸ್ರಾಯೇಲಿನ ಗಂಡಸ್ರು ಓಡಿ ಹೋಗಿದ್ದಾರೆ, ಮತ್ತು ಸೌಲ, ಅವನ ಮಕ್ಕಳು ಸತ್ತು ಹೋಗಿದ್ದಾರೆ ಅಂತ ಗೊತ್ತಾದಾಗ ಕಣಿವೆ ಮತ್ತು ಯೋರ್ದನಿನ ಪ್ರದೇಶದಲ್ಲಿದ್ದ ಇಸ್ರಾಯೇಲ್ ಜನ ತಮ್ಮತಮ್ಮ ಪಟ್ಟಣಗಳನ್ನ ಬಿಟ್ಟು ಓಡಿಹೋದ್ರು.+ ಆಗ ಫಿಲಿಷ್ಟಿಯರು ಬಂದು ಅವುಗಳನ್ನ ವಶ ಮಾಡ್ಕೊಂಡ್ರು.
8 ಮಾರನೇ ದಿನ ಫಿಲಿಷ್ಟಿಯರು ಸತ್ತು ಬಿದ್ದವ್ರ ಬಟ್ಟೆಗಳನ್ನ, ಆಯುಧಗಳನ್ನ ತಗೊಂಡು ಹೋಗೋಕೆ ಬಂದಾಗ ಸೌಲ ಮತ್ತು ಅವನ ಮೂರು ಗಂಡು ಮಕ್ಕಳು ಗಿಲ್ಬೋವ ಬೆಟ್ಟದಲ್ಲಿ ಸತ್ತುಬಿದ್ದಿರೋದನ್ನ ನೋಡಿದ್ರು.+
9 ಆಗ ಅವರು ಸೌಲನ ತಲೆ ಕಡಿದು ಅವನ ಆಯುಧಗಳನ್ನ ತಗೊಂಡ್ರು. ಈ ಸುದ್ದಿಯನ್ನ ಎಲ್ಲ ಜನ್ರಿಗೆ, ಮೂರ್ತಿಗಳಿರೋ+ ತಮ್ಮ ದೇವಸ್ಥಾನಗಳಿಗೆ* ಹಬ್ಬಿಸೋಕೆ ಫಿಲಿಷ್ಟಿಯರ ದೇಶದ ಮೂಲೆಮೂಲೆಗೂ ಸಂದೇಶ ಕಳಿಸಿದ್ರು.+
10 ಆಮೇಲೆ ಅವರು ಸೌಲನ ಆಯುಧಗಳನ್ನ ಅಷ್ಟೋರೆತ್ ಮೂರ್ತಿಗಳಿದ್ದ ಮನೇಲಿ ಇಟ್ರು. ಅವನ ಶವವನ್ನ ಬೇತ್-ಷಾನಿನ+ ಗೋಡೆಗೆ ನೇತು ಹಾಕಿದ್ರು.
11 ಫಿಲಿಷ್ಟಿಯರು ಸೌಲನಿಗೆ ಏನು ಮಾಡಿದ್ದಾರೆ ಅನ್ನೋ ಸುದ್ದಿ ಯಾಬೆಷ್-ಗಿಲ್ಯಾದಿನ+ ಜನ್ರಿಗೆ ಗೊತ್ತಾದಾಗ
12 ಸೈನಿಕರೆಲ್ಲ ಇಡೀ ರಾತ್ರಿ ಪ್ರಯಾಣಮಾಡಿ ಬೇತ್-ಷಾನಿಗೆ ಬಂದ್ರು. ಅಲ್ಲಿನ ಗೋಡೆಗೆ ನೇತು ಹಾಕಿದ್ದ ಸೌಲನ, ಅವನ ಗಂಡು ಮಕ್ಕಳ ದೇಹಗಳನ್ನ ಕೆಳಗೆ ಇಳಿಸಿ, ಅವುಗಳನ್ನ ತಗೊಂಡು ಯಾಬೇಷಿಗೆ ವಾಪಸ್ ಬಂದು ಸುಟ್ರು.
13 ಅವ್ರ ಮೂಳೆಗಳನ್ನ ತಗೊಂಡು+ ಹೋಗಿ ಯಾಬೇಷಿನ ಪಿಚುಲ ಮರದ ಕೆಳಗೆ ಹೂಣಿಟ್ರು.+ ಏಳು ದಿನ ಉಪವಾಸ ಮಾಡಿದ್ರು.