ಎರಡನೇ ಅರಸು 10:1-36

  • ಅಹಾಬನ ಮನೆತನದವ್ರನ್ನ ಯೇಹು ಕೊಂದ (1-17)

    • ಯೆಹೋನಾದಾಬ ಯೇಹು ಜೊತೆ ಸೇರ್ಕೊಂಡ (15-17)

  • ಯೇಹು ಬಾಳನ ಆರಾಧಕರನ್ನ ಕೊಂದ (18-27)

  • ಯೇಹುವಿನ ಆಳ್ವಿಕೆಯ ಸಾರಾಂಶ (28-36)

10  ಅಹಾಬನ+ 70 ಗಂಡು ಮಕ್ಕಳು ಸಮಾರ್ಯದಲ್ಲಿದ್ರು. ಹಾಗಾಗಿ ಯೇಹು ಪತ್ರ ಬರೆದು ಸಮಾರ್ಯದಲ್ಲಿದ್ದ ಇಜ್ರೇಲಿನ ಅಧಿಕಾರಿಗಳಿಗೆ, ಹಿರಿಯರಿಗೆ+ ಮತ್ತು ಅಹಾಬನ ಮಕ್ಕಳ ಪಾಲಕರಿಗೆ* ಕಳಿಸಿದ. ಅದ್ರಲ್ಲಿ ಹೀಗಿತ್ತು:  “ನಿಮ್ಮ ಒಡೆಯನ ಗಂಡು ಮಕ್ಕಳು ನಿಮ್ಮ ಹತ್ರ ಇದ್ದಾರೆ. ಜೊತೆಗೆ ಯುದ್ಧ ರಥಗಳು, ಕುದುರೆಗಳು, ಭದ್ರ ಕೋಟೆಯಿರೋ ಪಟ್ಟಣ ಮತ್ತು ಆಯುಧಗಳೂ ನಿಮ್ಮ ಹತ್ರ ಇವೆ. ಈ ಪತ್ರ ನಿಮಗೆ ತಲುಪಿದಾಗ,  ನಿಮ್ಮ ಒಡೆಯನ ಗಂಡು ಮಕ್ಕಳಲ್ಲಿ ಉತ್ತಮನೂ ಯೋಗ್ಯನೂ* ಆಗಿರೋ ಒಬ್ಬನನ್ನ ಆರಿಸ್ಕೊಂಡು ಅವನನ್ನ ಅವನ ತಂದೆಯ ಸಿಂಹಾಸನದ ಮೇಲೆ ಕೂರಿಸಿ. ಆಮೇಲೆ ನಿಮ್ಮ ಒಡೆಯನ ಮನೆತನದ ರಕ್ಷಣೆಗಾಗಿ ಹೋರಾಡಿ.”  ಆದ್ರೆ ಅವ್ರೆಲ್ಲ ತುಂಬ ಹೆದರಿ “ಅವನ ಮುಂದೆ ಇಬ್ರು ರಾಜರೇ ನಿಲ್ಲೋಕೆ ಆಗದಿದ್ದಾಗ+ ನಾವು ಹೇಗೆ ಅವನನ್ನ ಎದುರುಹಾಕೊಳ್ಳೋದು?” ಅಂದ್ರು.  ಹಾಗಾಗಿ ಅರಮನೆಯ ಮೇಲ್ವಿಚಾರಕ, ಪಟ್ಟಣದ ರಾಜ್ಯಪಾಲ, ಹಿರಿಯರು ಮತ್ತು ಅಹಾಬನ ಮಕ್ಕಳ ಪಾಲಕರು ಯೇಹುಗೆ “ನಾವು ನಿನ್ನ ಸೇವಕರು, ನೀನು ಹೇಳಿದ್ದೆಲ್ಲ ಮಾಡ್ತೀವಿ. ನಾವು ಯಾರನ್ನೂ ರಾಜನಾಗಿ ಮಾಡಲ್ಲ. ನಿನ್ನ ದೃಷ್ಟಿಗೆ ಸರಿ ಅನಿಸಿದ್ದನ್ನ ಮಾಡು” ಅಂತ ಸಂದೇಶ ಕಳಿಸಿದ್ರು.  ಆಮೇಲೆ ಅವನು ಅವ್ರಿಗೆ ಎರಡನೇ ಪತ್ರ ಬರೆದ. ಅದ್ರಲ್ಲಿ “ನೀವು ನನ್ನ ಪಕ್ಷದಲ್ಲಿದ್ರೆ, ನಿಮಗೆ ನನ್ನ ಮಾತು ಕೇಳೋಕೆ ಇಷ್ಟ ಇದ್ರೆ ನಿಮ್ಮ ಒಡೆಯನ ಗಂಡು ಮಕ್ಕಳ ತಲೆಗಳನ್ನ ತಗೊಂಡು ಇಜ್ರೇಲಿನಲ್ಲಿರೋ ನನ್ನ ಹತ್ರ ನಾಳೆ ಇಷ್ಟು ಹೊತ್ತಿಗೆ ಬನ್ನಿ” ಅಂತ ಬರೆದಿತ್ತು. ಅಹಾಬನ 70 ಗಂಡು ಮಕ್ಕಳು ಆ ಪಟ್ಟಣದ ಪ್ರಮುಖರ ಹತ್ರ ಇದ್ರು. ಅವರು ಆ ಮಕ್ಕಳ ಪರಿಪಾಲನೆ ಮಾಡ್ತಿದ್ರು.  ಆ ಪತ್ರ ಅವ್ರಿಗೆ ಬಂದು ಮುಟ್ಟಿದ ತಕ್ಷಣ ಅವರು ರಾಜನ 70+ ಗಂಡು ಮಕ್ಕಳನ್ನ ಕೊಂದು ಅವ್ರ ತಲೆಗಳನ್ನ ಕಡಿದು ಅವುಗಳನ್ನ ಬುಟ್ಟಿಗಳಲ್ಲಿ ಹಾಕಿ ಇಜ್ರೇಲಿನಲ್ಲಿರೋ ಯೇಹು ಹತ್ರ ಕಳಿಸಿದ್ರು.  ಆಗ ಸಂದೇಶವಾಹಕರು “ರಾಜನ ಮಕ್ಕಳ ತಲೆ ತಂದಿದ್ದಾರೆ” ಅಂದ್ರು. ಆಗ ಯೇಹು “ಆ ತಲೆಗಳನ್ನ ಪಟ್ಟಣದ ಬಾಗಿಲಲ್ಲಿ ಎರಡು ಗುಡ್ಡೆ ಮಾಡಿ. ಬೆಳಗಾಗೋ ತನಕ ಅವು ಅಲ್ಲೇ ಇರಲಿ” ಅಂದ.  ಬೆಳಿಗ್ಗೆ ಅವನು ಎದ್ದು ಹೋಗಿ ಎಲ್ಲ ಜನ್ರ ಮುಂದೆ ನಿಂತು “ನೀವೆಲ್ಲ ನಿರಪರಾಧಿಗಳು.* ಹೌದು ನನ್ನ ಒಡೆಯನ ವಿರುದ್ಧ ಸಂಚು ಮಾಡಿ ಅವನನ್ನ ಕೊಂದುಹಾಕಿದವನು ನಾನೇ.+ ಆದ್ರೆ ಇವ್ರನ್ನೆಲ್ಲ ಕೊಂದವರು ಯಾರು? 10  ಇದ್ರಿಂದ ಯೆಹೋವ ಅಹಾಬನ ಮನೆತನಕ್ಕೆ ಕೊಟ್ಟ ಶಿಕ್ಷೆ, ಆ ಮನೆತನದ ವಿರುದ್ಧ ಯೆಹೋವ ಹೇಳಿದ ಮಾತುಗಳು ಒಂದೂ ತಪ್ಪದೆ ಎಲ್ಲ ನಿಜ ಆಯ್ತು ಅಂತ ನೀವು ಚೆನ್ನಾಗಿ ತಿಳ್ಕೊಳ್ಳಿ.+ ತನ್ನ ಸೇವಕ ಎಲೀಯನ ಮೂಲಕ ಯೆಹೋವ ಏನು ಹೇಳಿದ್ದನೋ ಅದನ್ನೇ ಮಾಡಿದ್ದಾನೆ”+ ಅಂದ. 11  ಅಷ್ಟೇ ಅಲ್ಲ ಇಜ್ರೇಲಿನಲ್ಲಿ ಉಳಿದಿದ್ದ ಅಹಾಬನ ಮನೆತನದ ಎಲ್ರನ್ನ ಯೇಹು ಕೊಂದು ಹಾಕಿದ. ಜೊತೆಗೆ ಅಹಾಬನ ಎಲ್ಲ ಪ್ರಮುಖರನ್ನ, ಸ್ನೇಹಿತರನ್ನ, ಪುರೋಹಿತರನ್ನ+ ಹೀಗೆ ಒಬ್ರನ್ನೂ ಬಿಡದೆ ಎಲ್ರನ್ನ ಕೊಂದುಹಾಕಿದ.+ 12  ಆಮೇಲೆ ಯೇಹು ಅಲ್ಲಿಂದ ಸಮಾರ್ಯಕ್ಕೆ ಹೋದ. ದಾರೀಲಿ ಕುರುಬರು ಉಣ್ಣೆ ಕತ್ತರಿಸೋ ಮನೆ ಒಂದಿತ್ತು. 13  ಅಲ್ಲಿ ಯೇಹು ಯೆಹೂದದ ರಾಜ ಅಹಜ್ಯನ+ ಸಹೋದರರನ್ನ ಭೇಟಿಯಾದ. ಅವನು ಅವ್ರಿಗೆ “ಯಾರು ನೀವು?” ಅಂತ ಕೇಳಿದ. ಅದಕ್ಕೆ ಅವರು “ನಾವು ಅಹಜ್ಯನ ಸಹೋದರರು. ರಾಜನ ಮತ್ತು ರಾಜಮಾತೆಯ ಗಂಡು ಮಕ್ಕಳನ್ನ ಭೇಟಿಮಾಡಿ ಅವರು ಹೇಗೆ ಇದ್ದಾರೆ ಅಂತ ವಿಚಾರಿಸೋಕೆ ಹೋಗ್ತಾ ಇದ್ದೀವಿ” ಅಂದ್ರು. 14  ತಕ್ಷಣ ಯೇಹು “ಅವ್ರನ್ನ ಜೀವಂತವಾಗಿ ಹಿಡಿರಿ!” ಅಂದ. ಆಗ ಅವರು ಅಹಜ್ಯನ ಸಹೋದರರನ್ನ ಜೀವಂತವಾಗಿ ಹಿಡಿದು ಉಣ್ಣೆ ಕತ್ತರಿಸೋ ಮನೆ ಹತ್ರ ಇದ್ದ ಬಾವಿ ಹತ್ರ ಸಾಯಿಸಿದ್ರು. ಒಟ್ಟು 42 ಜನ್ರನ್ನ ಸಾಯಿಸಿದ್ರು. ಅವನು ಅವ್ರಲ್ಲಿ ಯಾರನ್ನೂ ಜೀವಂತ ಉಳಿಸಲಿಲ್ಲ.+ 15  ಯೇಹು ಅಲ್ಲಿಂದ ಮುಂದೆ ಹೋಗ್ತಿದ್ದಾಗ ತನ್ನನ್ನ ಭೇಟಿ ಮಾಡೋಕೆ ಬಂದ ರೇಕಾಬನ+ ಮಗ ಯೆಹೋನಾದಾಬನನ್ನ+ ಎದುರುಗೊಂಡ. ಅವನು ಯೇಹುಗೆ ವಂದಿಸಿದಾಗ ಯೇಹು ಅವನಿಗೆ “ನಾನು ನನ್ನ ಪೂರ್ಣ ಹೃದಯದಿಂದ ನಿನ್ನನ್ನ ಬೆಂಬಲಿಸೋ ಹಾಗೆ ನೀನು ನಿನ್ನ ಪೂರ್ಣ ಹೃದಯದಿಂದ* ನನ್ನನ್ನ ಬೆಂಬಲಿಸ್ತೀಯಾ?” ಅಂತ ಕೇಳಿದ. ಅದಕ್ಕೆ ಯೆಹೋನಾದಾಬ “ಹೌದು” ಅಂದ. ಅದಕ್ಕೆ ಯೇಹು “ಹಾಗಿದ್ರೆ ನಿನ್ನ ಕೈ ನನ್ನ ಕಡೆ ಚಾಚು” ಅಂದ. ಆಗ ಅವನು ತನ್ನ ಕೈ ಚಾಚಿದ. ಯೇಹು ಅವನ ಕೈ ಹಿಡಿದು ಅವನನ್ನ ತನ್ನ ರಥದೊಳಕ್ಕೆ ಎಳ್ಕೊಂಡ. 16  ಯೇಹು ಅವನಿಗೆ “ನೀನು ನನ್ನ ಜೊತೆ ಬಂದು ಯೆಹೋವನ ವಿರೋಧಿಗಳನ್ನ ನಾನು ಸ್ವಲ್ಪನೂ ಸಹಿಸಲ್ಲ ಅನ್ನೋದನ್ನ ಕಣ್ಣಾರೆ ನೋಡು”+ ಅಂದ. ಹೀಗೆ ಯೇಹು ಯೆಹೋನಾದಾಬನನ್ನ ತನ್ನ ಯುದ್ಧರಥದಲ್ಲಿ ಕರ್ಕೊಂಡು ಹೋದ. 17  ಆಮೇಲೆ ಯೇಹು ಸಮಾರ್ಯಕ್ಕೆ ಬಂದು ಎಲೀಯನ ಮೂಲಕ ಯೆಹೋವ ಹೇಳಿದ ಮಾತಿನ ಪ್ರಕಾರ+ ಅಹಾಬನ ಮನೆತನದಲ್ಲಿ ಉಳಿದಿದ್ದ ಎಲ್ಲರನ್ನ ಸಾಯಿಸಿ ಅವ್ರನ್ನ ಸಂಪೂರ್ಣ ನಾಶ ಮಾಡಿದ.+ 18  ಆಮೇಲೆ ಯೇಹು ಎಲ್ಲ ಜನ್ರನ್ನ ಒಟ್ಟುಸೇರಿಸಿ ಅವ್ರಿಗೆ “ಅಹಾಬ ಬಾಳನನ್ನ ಸ್ವಲ್ಪ ಮಟ್ಟಿಗೆ ಆರಾಧನೆ ಮಾಡಿದ.+ ಆದ್ರೆ ನಾನು ಬಾಳನನ್ನ ಅವನಿಗಿಂತ ಹೆಚ್ಚು ಆರಾಧನೆ ಮಾಡ್ತೀನಿ. 19  ನಾನು ಬಾಳನಿಗೆ ಒಂದು ದೊಡ್ಡ ಬಲಿ ಅರ್ಪಿಸಬೇಕಂತಿದ್ದೀನಿ. ಹಾಗಾಗಿ ಬಾಳನ ಎಲ್ಲ ಪ್ರವಾದಿಗಳನ್ನ,+ ಎಲ್ಲ ಆರಾಧಕರನ್ನ, ಎಲ್ಲ ಪುರೋಹಿತರನ್ನ+ ನನ್ನ ಹತ್ರ ಕರ್ಕೊಂಡು ಬನ್ನಿ. ಅವ್ರಲ್ಲಿ ಒಬ್ಬನೂ ತಪ್ಪಿಸ್ಕೊಳ್ಳದ ಹಾಗೆ ನೋಡ್ಕೊಳ್ಳಿ. ಯಾರಾದ್ರೂ ಅದಕ್ಕೆ ಬರದಿದ್ರೆ ಅವರು ಜೀವಂತ ಉಳಿಯಲ್ಲ” ಅಂದ. ನಿಜ ಏನಂದ್ರೆ ಇದು ಬಾಳನ ಆರಾಧಕರನ್ನ ಸಂಪೂರ್ಣ ನಾಶ ಮಾಡೋಕೆ ಯೇಹು ಮಾಡಿದ ಯೋಜನೆ ಆಗಿತ್ತು. 20  ಇದ್ರ ಜೊತೆ ಯೇಹು “ಬಾಳನಿಗಾಗಿ ಒಂದು ಸಭೆ ಸೇರಬೇಕಂತ ಘೋಷಿಸಿ” ಅಂತಾನೂ ಹೇಳಿದ. ಅವರು ಹಾಗೇ ಘೋಷಿಸಿದ್ರು. 21  ಯೇಹು ಇಸ್ರಾಯೇಲಿನ ಮೂಲೆಮೂಲೆಗೂ ಇದ್ರ ಬಗ್ಗೆ ಸಂದೇಶ ಕಳಿಸಿದ. ಹಾಗಾಗಿ ಬಾಳನ ಎಲ್ಲ ಆರಾಧಕರು ಕೂಡಿಬಂದ್ರು. ಒಬ್ರೂ ತಪ್ಪಿಸ್ಕೊಳ್ಳಲಿಲ್ಲ. ಎಲ್ರೂ ಬಾಳನ ದೇವಾಲಯದ+ ಒಳಗೆ ಹೋದ್ರು. ಇದ್ರಿಂದ ಬಾಳನ ದೇವಾಲಯ ಜನ್ರಿಂದ ತುಂಬಿ ತುಳುಕ್ತಿತ್ತು. 22  ಯೇಹು ಬಟ್ಟೆಗಳ ಕೋಣೆಯ ಅಧಿಕಾರಿಗೆ “ಬಾಳನ ಎಲ್ಲ ಆರಾಧಕರಿಗೆ ಬಟ್ಟೆಗಳನ್ನ ಕೊಡು” ಅಂದ. ಹಾಗಾಗಿ ಅವನು ಎಲ್ಲರಿಗಾಗಿ ಬಟ್ಟೆ ತಂದ. 23  ಆಮೇಲೆ ಯೇಹು ಮತ್ತು ರೇಕಾಬನ ಮಗ ಯೆಹೋನಾದಾಬ+ ಬಾಳನ ದೇವಾಲಯದ ಒಳಗೆ ಹೋದ್ರು. ಯೇಹು ಬಾಳನ ಆರಾಧಕರಿಗೆ “ಇಲ್ಲಿ ಯಾರಾದ್ರೂ ಯೆಹೋವನ ಆರಾಧಕರು ಇದ್ದಾರಾ ಅಂತ ಚೆನ್ನಾಗಿ ಹುಡುಕಿ. ಯಾಕಂದ್ರೆ ಇಲ್ಲಿ ಬಾಳನ ಆರಾಧಕರು ಮಾತ್ರ ಇರಬೇಕು” ಅಂದ. 24  ಕೊನೇದಾಗಿ ಅವರು ಬಲಿಗಳನ್ನ ಮತ್ತು ಸರ್ವಾಂಗಹೋಮ ಬಲಿಗಳನ್ನ ಅರ್ಪಿಸೋಕೆ ಬಂದ್ರು. ಯೇಹು ತನ್ನ 80 ಗಂಡಸ್ರನ್ನ ಹೊರಗೆ ನಿಲ್ಲಿಸಿ ಅವ್ರಿಗೆ “ನಾನು ನಿಮ್ಮ ಕೈಗೆ ಒಪ್ಪಿಸುವವರಲ್ಲಿ ಒಬ್ಬ ತಪ್ಪಿಸ್ಕೊಂಡ್ರೂ ಅವನ ಪ್ರಾಣಕ್ಕೆ ಪ್ರತಿಯಾಗಿ ನಿಮ್ಮ ಪ್ರಾಣ ತೆಗಿಬೇಕಾಗುತ್ತೆ” ಅಂದ. 25  ಸರ್ವಾಂಗಹೋಮ ಬಲಿ ಅರ್ಪಿಸಿದ ಕೂಡ್ಲೇ ಯೇಹು ಕಾವಲುಗಾರರಿಗೆ, ಸೇನಾಪತಿಗಳಿಗೆ “ಒಳಗೆ ಬನ್ನಿ, ಇವ್ರನ್ನೆಲ್ಲ ನಾಶ ಮಾಡಿ. ಇವ್ರಲ್ಲಿ ಒಬ್ರೂ ತಪ್ಪಿಸ್ಕೊಂಡು ಹೋಗಬಾರದು!”+ ಅಂದ. ಹಾಗಾಗಿ ಕಾವಲುಗಾರರು, ಸೇನಾಪತಿಗಳು ಅಲ್ಲಿದ್ದ ಎಲ್ರನ್ನ ಕತ್ತಿಯಿಂದ ಸಾಯಿಸ್ತಾ ಅವ್ರ ಶವಗಳನ್ನ ಹೊರಹಾಕ್ತಾ ಹೋದ್ರು. ಅವರು ದಾಳಿ ಮಾಡ್ತಾ ಬಾಳನ ಆಲಯದ ಒಳಗಿನ ಕೋಣೆ ತನಕ* ಹೋದ್ರು. 26  ಆಮೇಲೆ ಅವರು ಬಾಳನ ದೇವಾಲಯದ ವಿಗ್ರಹಸ್ತಂಭಗಳನ್ನ+ ಹೊರಗೆ ತಗೊಂಡು ಬಂದು ಅವುಗಳನ್ನ ಸುಟ್ಟುಹಾಕಿದ್ರು.+ 27  ಅವರು ಬಾಳನ ವಿಗ್ರಹಸ್ತಂಭವನ್ನ+ ಕೆಡವಿದ್ರು. ಬಾಳನ ದೇವಾಲಯ+ ಹಾಳುಮಾಡಿ ಅದನ್ನ ಶೌಚಾಲಯಗಳಾಗಿ ಮಾಡಿದ್ರು. ಅದು ಇವತ್ತಿನ ತನಕ ಹಾಗೇ ಇದೆ. 28  ಹೀಗೆ ಯೇಹು ಇಸ್ರಾಯೇಲಲ್ಲಿ ಬಾಳನ ಆರಾಧನೆ ಇಲ್ಲದ ಹಾಗೆ ಮಾಡಿದ. 29  ಆದ್ರೂ ಯೇಹು ಪಾಪ ಮಾಡೋದನ್ನ ಬಿಟ್ಟು ಬಿಡಲಿಲ್ಲ. ನೆಬಾಟನ ಮಗ ಯಾರೊಬ್ಬಾಮ ಇಸ್ರಾಯೇಲ್ಯರ ಕೈಯಲ್ಲಿ ಮಾಡಿಸಿದ ಪಾಪಗಳನ್ನೇ ಇವನೂ ಮಾಡಿಸಿದ. ಬೆತೆಲಲ್ಲಿದ್ದ ಮತ್ತು ದಾನಲ್ಲಿದ್ದ ಚಿನ್ನದ ಕರುಗಳ ಮೂರ್ತಿಗಳನ್ನ ಯೇಹು ಹಾಗೇ ಬಿಟ್ಟ.+ 30  ಯೆಹೋವ ಯೇಹುಗೆ “ನಾನು ಅಹಾಬನ ಮನೆತನದ ಬಗ್ಗೆ ನನ್ನ ಮನಸ್ಸಲ್ಲಿ ಏನೆಲ್ಲ ಅಂದ್ಕೊಂಡಿದ್ನೋ ಅದನ್ನೆಲ್ಲ ನೀನು ಮಾಡಿದೆ.+ ನನಗೇನು ಇಷ್ಟಾನೋ ಅದನ್ನೇ ಮಾಡಿದೆ. ಹಾಗಾಗಿ ನಿನ್ನ ಸಂತಾನದ ನಾಲ್ಕು ತಲೆಮಾರುಗಳು ಇಸ್ರಾಯೇಲಿನ ಸಿಂಹಾಸನದ ಮೇಲೆ ಕೂತ್ಕೊಳ್ಳುತ್ತೆ”+ ಅಂದನು. 31  ಆದ್ರೆ ಯೇಹು ಇಸ್ರಾಯೇಲ್‌ ದೇವರಾದ ಯೆಹೋವನ ನಿಯಮಗಳನ್ನ ಪೂರ್ಣ ಹೃದಯದಿಂದ ಪಾಲಿಸಲಿಲ್ಲ.+ ಅವನು ತನ್ನ ಪಾಪಗಳನ್ನ ಬಿಡಲಿಲ್ಲ. ಯಾರೊಬ್ಬಾಮ ಇಸ್ರಾಯೇಲ್ಯರ ಕೈಯಲ್ಲಿ ಮಾಡಿಸಿದ ಪಾಪಗಳನ್ನೇ ಯೇಹು ಸಹ ಮಾಡಿಸಿದ.+ 32  ಆ ದಿನಗಳಲ್ಲಿ ಇಸ್ರಾಯೇಲ್ಯರ ಪ್ರಾಂತ್ಯವನ್ನ ಮೆಲ್ಲಮೆಲ್ಲನೆ ಬೇರೆಯವರು ವಶ ಮಾಡ್ಕೊಳ್ಳೋ ತರ ಯೆಹೋವ ಮಾಡಿದನು. ಇಸ್ರಾಯೇಲಿನ ಪ್ರಾಂತ್ಯದ ಎಲ್ಲ ಕಡೆ ಹಜಾಯೇಲ ದಾಳಿ ಮಾಡ್ತಾ ಬಂದ.+ 33  ಅವನು ಯೋರ್ದನಿನ ಪೂರ್ವದಲ್ಲಿದ್ದ ಗಿಲ್ಯಾದಿನ ಇಡೀ ಪ್ರದೇಶದ ಮೇಲೆ ದಾಳಿ ಮಾಡಿದ. ಅಲ್ಲಿ ಗಾದ್ಯರು, ರೂಬೇನ್ಯರು ಮತ್ತು ಮನಸ್ಸೆ ಕುಲಕ್ಕೆ ಸೇರಿದವರು+ ವಾಸಿಸ್ತಿದ್ರು. ಅದ್ರಲ್ಲಿ ಅರ್ನೋನ್‌ ಕಣಿವೆ ಹತ್ರ ಇದ್ದ ಅರೋಯೇರಿನಿಂದ ಗಿಲ್ಯಾದ್‌ ತನಕ, ಬಾಷಾನ್‌ ತನಕ ಇದ್ದ ಪ್ರಾಂತ್ಯಗಳು ಸೇರಿದ್ದವು.+ 34  ಯೇಹುವಿನ ಉಳಿದ ಜೀವನಚರಿತ್ರೆ ಬಗ್ಗೆ, ಅವನು ಮಾಡಿದ ಎಲ್ಲ ಕೆಲಸಗಳ ಬಗ್ಗೆ, ಅವನ ಎಲ್ಲ ವೀರ ಕೆಲಸಗಳ ಬಗ್ಗೆ ಇಸ್ರಾಯೇಲ್‌ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಇದೆ. 35  ಕೊನೆಗೆ ಯೇಹು ತೀರಿಹೋದ. ಅವನನ್ನ ಸಮಾರ್ಯದಲ್ಲಿ ಸಮಾಧಿ ಮಾಡಿದ್ರು. ಅವನ ನಂತ್ರ ಅವನ ಮಗ ಯೆಹೋವಾಹಾಜ+ ರಾಜನಾದ. 36  ಯೇಹು ಇಸ್ರಾಯೇಲನ್ನ ಸಮಾರ್ಯದಿಂದ 28 ವರ್ಷ ಆಳಿದ.

ಪಾದಟಿಪ್ಪಣಿ

ಅಕ್ಷ. “ಅಹಾಬನ ಪಾಲಕರು.”
ಅಥವಾ “ಪ್ರಾಮಾಣಿಕನೂ.”
ಅಥವಾ “ನೀತಿವಂತರು.”
ಅಕ್ಷ. “ಪ್ರಾಮಾಣಿಕ.”
ಅಕ್ಷ. “ಪಟ್ಟಣ.” ಬಹುಶಃ ಒಂದು ಭದ್ರಕೋಟೆ ತರ ಇದ್ದ ಕಟ್ಟಡ.