ಎರಡನೇ ಅರಸು 11:1-21

  • ಅತಲ್ಯ ಸಿಂಹಾಸನ ಕಿತ್ಕೊಂಡಳು (1-3)

  • ಯೆಹೋವಾಷನನ್ನ ರಹಸ್ಯವಾಗಿ ರಾಜ ಮಾಡಿದ್ರು (4-12)

  • ಅತಲ್ಯಳನ್ನ ಕೊಲ್ಲಲಾಗುತ್ತೆ (13-16)

  • ಯೆಹೋಯಾದ ಮಾಡಿದ ಸುಧಾರಣೆ (17-21)

11  ಅಹಜ್ಯನ ತಾಯಿ ಅತಲ್ಯ+ ತನ್ನ ಮಗ ತೀರಿ ಹೋಗಿದ್ದನ್ನ+ ನೋಡಿ ರಾಜ ವಂಶಸ್ಥರನ್ನೆಲ್ಲ ನಾಶ ಮಾಡಿದಳು.+  ಆದ್ರೆ ಯೆಹೋರಾಮನ ಮಗಳು, ಅಹಜ್ಯನ ಸಹೋದರಿ ಯೆಹೋಷೆಬ ಅಹಜ್ಯನ ಮಗ ಯೆಹೋವಾಷನನ್ನ+ ಕಾಪಾಡಿದಳು. ಅತಲ್ಯ ರಾಜನ ಗಂಡು ಮಕ್ಕಳನ್ನ ಸಾಯಿಸಬೇಕಂತ ಇದ್ದಿದ್ರಿಂದ ಯೆಹೋಷೆಬ ಇವನೊಬ್ಬನನ್ನ ಯಾರಿಗೂ ಗೊತ್ತಾಗದ ಹಾಗೆ ಕದ್ದು ತಗೊಂಡು ಬಂದಿದ್ದಳು. ಮಲಗೋ ಕೋಣೆಯಲ್ಲಿ ಅವನನ್ನ, ಅವನ ದಾದಿಯನ್ನ ಬಚ್ಚಿಟ್ಟಳು. ಯಾವುದೇ ಕಾರಣಕ್ಕೂ ಅತಲ್ಯಳ ಕೈಗೆ ಸಿಗದ ಹಾಗೆ ನೋಡ್ಕೊಂಡ್ರು. ಹಾಗಾಗಿ ಅವನು ಬದುಕುಳಿದ.  ಹೀಗೆ ಅವನು ಆರು ವರ್ಷ ಯೆಹೋಷೆಬ ಜೊತೆ ಇದ್ದ. ಯೆಹೋವನ ಆಲಯದಲ್ಲಿ ಅವನನ್ನ ಬಚ್ಚಿಡಲಾಗಿತ್ತು. ಆ ಸಮಯದಲ್ಲಿ ಅತಲ್ಯ ದೇಶವನ್ನ ಆಳ್ತಿದ್ದಳು.  ಏಳನೇ ವರ್ಷದಲ್ಲಿ ಪುರೋಹಿತ ಯೆಹೋಯಾದ ರಾಜನ ಅಂಗರಕ್ಷಕರಲ್ಲಿ ಮತ್ತು ಅರಮನೆಯ ಕಾವಲುಗಾರರಲ್ಲಿ ನೂರುನೂರು ಜನ್ರ ಮೇಲೆ ಅಧಿಕಾರಿಗಳಾಗಿ ಇದ್ದವ್ರನ್ನ+ ಬರೋಕೆ ಹೇಳಿದ. ಯೆಹೋವನ ಆಲಯದಲ್ಲಿ ತನ್ನ ಮುಂದೆ ಕೂಡಿ ಬರಬೇಕಂತ ಆಜ್ಞಾಪಿಸಿದ. ಅಲ್ಲಿ ಅವನು ಅವ್ರ ಜೊತೆ ಒಂದು ಒಪ್ಪಂದ ಮಾಡ್ಕೊಂಡ. ಅದ್ರ ಪ್ರಕಾರ ನಡಿತೀವಂತ ಯೆಹೋವನ ಆಲಯದಲ್ಲೇ ಅವ್ರಿಂದ ಆಣೆ ಮಾಡಿಸಿದ. ಇದಾದ್ಮೇಲೆ ಅವ್ರಿಗೆ ರಾಜನ ಮಗನನ್ನ ತೋರಿಸಿದ.+  ಅವನು ಅವ್ರಿಗೆ “ನೀವು ಹೀಗೆ ಮಾಡಬೇಕು: ನಿಮ್ಮಲ್ಲಿ ಮೂರರಲ್ಲಿ ಒಂದು ಭಾಗದಷ್ಟು ಜನ ಸಬ್ಬತ್‌ ದಿನ ಕೆಲಸಕ್ಕೆ ಬಂದು ರಾಜನ ಅರಮನೆಯನ್ನ ಎಚ್ಚರ ಇದ್ದು ಕಾಯಬೇಕು.+  ಎರಡನೇ ಭಾಗ ‘ಬುನಾದಿ’ ಅಂತ ಹೆಸ್ರಿರೋ ಬಾಗಿಲಲ್ಲಿ, ಮೂರನೇ ಭಾಗ ಅರಮನೆಯ ಕಾವಲುಗಾರರ ಹಿಂದೆ ಇರೋ ಬಾಗಿಲಲ್ಲಿ ಇರಬೇಕು. ನೀವೆಲ್ರೂ ಸರದಿ ಪ್ರಕಾರ ಅರಮನೆ ಕಾಯಬೇಕು.  ಸಬ್ಬತ್‌ ದಿನದಲ್ಲಿ ಕೆಲಸ ಮಾಡದ ಎರಡು ಗುಂಪುಗಳಲ್ಲಿರೋ ಕಾವಲುಗಾರರು ಸಹ ಬರಬೇಕು. ಅವರು ರಾಜನನ್ನ ಸಂರಕ್ಷಿಸೋಕೆ ಯೆಹೋವನ ಆಲಯವನ್ನ ಎಚ್ಚರದಿಂದ ಕಾಯಬೇಕು.  ನಿಮ್ಮಲ್ಲಿ ಪ್ರತಿಯೊಬ್ರು ತಮ್ಮ ಕೈಯಲ್ಲಿ ಆಯುಧಗಳನ್ನ ಹಿಡ್ಕೊಂಡು ರಾಜನ ಸುತ್ತ ನಿಂತಿರಬೇಕು. ಯಾರಾದ್ರೂ ಸೈನಿಕರ ಗುಂಪಿನ ಹತ್ರ ಬಂದ್ರೆ ಅವ್ರನ್ನ ಸಾಯಿಸಬೇಕು. ರಾಜ ಎಲ್ಲಿಗೆ ಹೋದ್ರೂ ನೀವು ಅವನ ಜೊತೆ ಇರಬೇಕು” ಅಂತ ಆಜ್ಞೆ ಕೊಟ್ಟ.  ನೂರುನೂರು ಜನ್ರ ಮೇಲೆ ಅಧಿಕಾರಿಗಳಾಗಿ+ ಇದ್ದವರು ಪುರೋಹಿತ ಯೆಹೋಯಾದ ಹೇಳಿದ ಹಾಗೇ ಮಾಡಿದ್ರು. ಪ್ರತಿಯೊಬ್ಬ ಅಧಿಕಾರಿ ಸಬ್ಬತ್‌ ದಿನ ಕೆಲಸ ಮಾಡ್ತಿದ್ದ ಕಾವಲುಗಾರರನ್ನ, ಜೊತೆಗೆ ಸಬ್ಬತ್‌ ದಿನ ಕೆಲಸ ಮಾಡದ ಕಾವಲುಗಾರರನ್ನ ಕರ್ಕೊಂಡು ಬಂದ. ಇವ್ರೆಲ್ರೂ ಪುರೋಹಿತ ಯೆಹೋಯಾದನ ಮುಂದೆ ಕೂಡಿಬಂದ್ರು.+ 10  ಪುರೋಹಿತ ನೂರು ಜನ್ರ ಮೇಲೆ ಅಧಿಕಾರಿಗಳಾಗಿ ಇದ್ದವ್ರಿಗೆ ರಾಜ ದಾವೀದನಿಗೆ ಸೇರಿದ್ದ ಈಟಿ ಮತ್ತು ವೃತ್ತಾಕಾರದ ಗುರಾಣಿಗಳನ್ನ ಕೊಟ್ಟ. ಅವು ಯೆಹೋವನ ಆಲಯದಲ್ಲಿ ಇದ್ವು. 11  ಅರಮನೆಯ ಕಾವಲುಗಾರರು+ ಆಯುಧಗಳನ್ನ ಹಿಡ್ಕೊಂಡು ತಮ್ಮತಮ್ಮ ಸ್ಥಾನದಲ್ಲಿ ನಿಂತ್ರು. ಅವರು ಅರಮನೆಯ ಬಲಗಡೆಯಿಂದ ಎಡಗಡೆ ತನಕ, ಯಜ್ಞವೇದಿ+ ಹತ್ರ, ಅರಮನೆ ಹತ್ರ ಅಂದ್ರೆ ರಾಜನ ಸುತ್ತ ಕಾವಲು ನಿಂತ್ರು. 12  ಆಮೇಲೆ ಯೆಹೋಯಾದ ರಾಜನ ಮಗನನ್ನ+ ಕರ್ಕೊಂಡು ಬಂದು ಅವನ ತಲೆ ಮೇಲೆ ಕಿರೀಟ ಇಟ್ಟು ದೇವರ ನಿಯಮಗಳಿದ್ದ ಸುರುಳಿಯನ್ನ+ ಅವನಿಗೆ ಕೊಟ್ಟ.* ಆಮೇಲೆ ಅವರು ಅವನನ್ನ ಅಭಿಷೇಕಿಸಿ ರಾಜನಾಗಿ ಮಾಡಿದ್ರು. ಚಪ್ಪಾಳೆ ತಟ್ಟುತ್ತಾ “ರಾಜ ಚಿರಂಜೀವಿ ಆಗಿರಲಿ!” ಅಂದ್ರು.+ 13  ಜನ ಓಡೋ ಶಬ್ದನ ಅತಲ್ಯ ಕೇಳಿಸ್ಕೊಂಡಳು. ತಕ್ಷಣ ಅವಳು ಯೆಹೋವನ ಆಲಯದಲ್ಲಿದ್ದ ಜನ್ರ ಹತ್ರ ಬಂದಳು.+ 14  ಅಲ್ಲಿ ರಾಜ ಪದ್ಧತಿ ಪ್ರಕಾರ ಕಂಬದ ಹತ್ರ ನಿಂತಿದ್ದನ್ನ ನೋಡಿದಳು.+ ಅಧಿಕಾರಿಗಳು, ತುತ್ತೂರಿಗಳನ್ನ ಊದುವವರು+ ರಾಜನ ಜೊತೆ ಇದ್ರು. ದೇಶದ ಜನ್ರೆಲ್ಲ ಸಂಭ್ರಮಿಸ್ತಾ, ತುತ್ತೂರಿಗಳನ್ನ ಊದುತ್ತಿದ್ರು. ಇದನ್ನೆಲ್ಲ ನೋಡಿ ಅತಲ್ಯ ತನ್ನ ಬಟ್ಟೆ ಹರ್ಕೊಂಡು “ದ್ರೋಹ! ದ್ರೋಹ!” ಅಂತ ಕಿರುಚಾಡಿದಳು. 15  ಆಗ ಪುರೋಹಿತ ಯೆಹೋಯಾದ ನೂರುನೂರು ಜನ್ರ ಮೇಲೆ ಅಧಿಕಾರಿಗಳಾಗಿ+ ಇದ್ದವ್ರಿಗೆ “ಈ ಸ್ತ್ರೀಯನ್ನ ಸೈನಿಕರ ಗುಂಪಿನ ಮಧ್ಯದಿಂದ ಹೊರಗೆ ಕರ್ಕೊಂಡು ಹೋಗಿ. ಯಾರಾದ್ರೂ ಅವಳ ಹಿಂದೆ ಬಂದ್ರೆ ಅವನನ್ನ ಕತ್ತಿಯಿಂದ ಸಾಯಿಸಿ!” ಅಂತ ಹೇಳಿದ. ಪುರೋಹಿತ ಅವ್ರಿಗೆ “ಅವಳನ್ನ ಯೆಹೋವನ ಆಲಯದಲ್ಲಿ ಸಾಯಿಸಬೇಡಿ” ಅಂತ ಹೇಳಿದ್ದ. 16  ಹಾಗಾಗಿ ಅವರು ಅವಳನ್ನ ಹಿಡಿದು ಕುದುರೆಗಳು ಅರಮನೆ+ ಪ್ರವೇಶಿಸೋ ಸ್ಥಳಕ್ಕೆ ಕರ್ಕೊಂಡು ಬಂದು ಅಲ್ಲಿ ಸಾಯಿಸಿದ್ರು. 17  ಆಮೇಲೆ ಯೆಹೋಯಾದ ಯೆಹೋವನ ಜನ್ರಾಗೇ ಇರ್ತೀವಿ ಅಂತ ರಾಜನಿಂದ, ಜನ್ರಿಂದ ಯೆಹೋವನ ಜೊತೆ ಒಂದು ಒಪ್ಪಂದ ಮಾಡಿಸಿದ.+ ಅಷ್ಟೇ ಅಲ್ಲ ಅವನು ರಾಜನ ಮತ್ತು ಜನ್ರ ಮಧ್ಯ ಸಹ ಒಂದು ಒಪ್ಪಂದ ಮಾಡಿಸಿದ.+ 18  ಇದಾದ್ಮೇಲೆ ದೇಶದ ಜನ್ರೆಲ್ಲ ಬಾಳನ ದೇವಾಲಯಕ್ಕೆ ಬಂದು ಅವನ ಯಜ್ಞವೇದಿಗಳನ್ನ ಹಾಳು ಮಾಡಿ+ ಅವನ ಮೂರ್ತಿಗಳನ್ನ ಸಂಪೂರ್ಣ ಪುಡಿಪುಡಿ ಮಾಡಿದ್ರು.+ ಬಾಳನ ಪುರೋಹಿತ ಮತ್ತಾನನನ್ನ ಯಜ್ಞವೇದಿಗಳ ಮುಂದೆ ಕೊಂದು ಹಾಕಿದ್ರು.+ ಆಮೇಲೆ ಪುರೋಹಿತ ಯೆಹೋಯಾದ ಕೆಲವು ಗಂಡಸ್ರನ್ನ ಯೆಹೋವನ ಆಲಯದ ಮೇಲ್ವಿಚಾರಕರಾಗಿ ನೇಮಿಸಿದ.+ 19  ಅವನು ನೂರುನೂರು ಜನ್ರ ಮೇಲೆ ಅಧಿಕಾರಿಗಳಾಗಿ ಇದ್ದವ್ರ,+ ರಾಜನ ಅಂಗರಕ್ಷಕರ, ಅರಮನೆಯ ಕಾವಲುಗಾರರ,+ ದೇಶದ ಜನ್ರೆಲ್ರ ಜೊತೆಗೂಡಿ ರಾಜನನ್ನ ಯೆಹೋವನ ಆಲಯದಿಂದ ಹೊರಗೆ ಕರ್ಕೊಂಡು ಬಂದ. ಅವ್ರೆಲ್ಲ ಅರಮನೆಯ ಕಾವಲುಗಾರರ ಬಾಗಿಲಿಂದ ರಾಜನ ಅರಮನೆಗೆ ಬಂದ್ರು. ಆಮೇಲೆ ಯೆಹೋವಾಷ ಸಿಂಹಾಸನದ ಮೇಲೆ ಕೂತ.+ 20  ಆಗ ದೇಶದ ಜನ್ರೆಲ್ಲ ಸಂಭ್ರಮಿಸಿದ್ರು. ಪಟ್ಟಣದಲ್ಲಿ ಶಾಂತಿ ಇತ್ತು. ಯಾಕಂದ್ರೆ ಅತಲ್ಯಳನ್ನ ರಾಜನ ಅರಮನೆ ಹತ್ರ ಕೊಂದುಹಾಕಲಾಗಿತ್ತು. 21  ಯೆಹೋವಾಷ+ ರಾಜನಾದಾಗ ಅವನು ಏಳು ವರ್ಷದವನಾಗಿದ್ದ.+

ಪಾದಟಿಪ್ಪಣಿ

ದೇವರ ನಿಯಮಗಳನ್ನ ಪಾಲಿಸಬೇಕು ಅನ್ನೋದನ್ನ ನೆನಪಿಸೋಕೆ ಅದನ್ನ ಬಹುಶಃ ರಾಜನ ತಲೆ ಮೇಲೆ ಇಟ್ಟಿರಬೇಕು.