ಎರಡನೇ ಅರಸು 14:1-29

  • ಅಮಚ್ಯ, ಯೆಹೂದದ ರಾಜ (1-6)

  • ಎದೋಮ್ಯರ ಮತ್ತು ಇಸ್ರಾಯೇಲ್ಯರ ಮಧ್ಯ ಯುದ್ಧ (7-14)

  • ಇಸ್ರಾಯೇಲ್‌ ರಾಜ ಯೆಹೋವಾಷನ ಮರಣ (15, 16)

  • ಅಮಚ್ಯನ ಮರಣ (17-22)

  • ಯಾರೊಬ್ಬಾಮ II, ಇಸ್ರಾಯೇಲಿನ ರಾಜ (23-29)

14  ಇಸ್ರಾಯೇಲ್‌ ರಾಜನೂ ಯೆಹೋವಾಹಾಜನ ಮಗನೂ ಆದ ಯೆಹೋವಾಷ+ ಆಳ್ತಿದ್ದ ಎರಡ್ನೇ ವರ್ಷದಲ್ಲಿ ಯೆಹೂದದ ರಾಜ ಯೆಹೋವಾಷನ ಮಗ ಅಮಚ್ಯ ರಾಜನಾದ.  ಅವನು ರಾಜನಾದಾಗ ಅವನಿಗೆ 25 ವರ್ಷ. ಅವನು ಯೆರೂಸಲೇಮಿಂದ 29 ವರ್ಷ ಆಳಿದ. ಅವನ ತಾಯಿಯ ಹೆಸ್ರು ಯೆಹೋವದ್ದೀನ್‌. ಅವಳು ಯೆರೂಸಲೇಮಿನವಳು.+  ಅಮಚ್ಯ ತನ್ನ ತಂದೆ ಯೆಹೋವಾಷನ ತರಾನೇ+ ಯೆಹೋವನಿಗೆ ಇಷ್ಟ ಆಗೋದನ್ನೇ ಮಾಡಿದ. ಆದ್ರೂ ಅವನು ತನ್ನ ಪೂರ್ವಜ ದಾವೀದನಷ್ಟು+ ಉತ್ತಮನಾಗಿರಲಿಲ್ಲ.  ಅವನು ಪೂಜಾ ಸ್ಥಳಗಳನ್ನ ತೆಗೆದುಹಾಕಲಿಲ್ಲ.+ ಜನ ಇನ್ನೂ ಆ ಸ್ಥಳಗಳಲ್ಲಿ ಬಲಿಗಳನ್ನ ಅರ್ಪಿಸಿ ಬಲಿಯ ಹೊಗೆ ಏರೋ ತರ ಮಾಡ್ತಿದ್ರು.+  ರಾಜ್ಯ ಪೂರ್ಣವಾಗಿ ತನ್ನ ಹತೋಟಿಗೆ ಬಂದ ತಕ್ಷಣ ರಾಜ ಅಮಚ್ಯ ತನ್ನ ತಂದೆಯನ್ನ ಕೊಂದುಹಾಕಿದ್ದ ಸೇವಕರನ್ನ ಸಾಯಿಸಿದ.+  ಆದ್ರೆ ಅವನು ಆ ಕೊಲೆಗಾರರ ಗಂಡು ಮಕ್ಕಳನ್ನ ಸಾಯಿಸಲಿಲ್ಲ. ಯಾಕಂದ್ರೆ ಮೋಶೆಯ ನಿಯಮ ಪುಸ್ತಕದಲ್ಲಿ ಬರೆದಿದ್ದ ಯೆಹೋವನ ನಿಯಮವನ್ನ ಅವನು ಪಾಲಿಸಿದ. ಅದು ಹೀಗಿತ್ತು: “ಮಕ್ಕಳು ಮಾಡಿದ ಪಾಪಕ್ಕೆ ತಂದೆಯಂದಿರನ್ನ, ತಂದೆಯಂದಿರು ಮಾಡಿದ ಪಾಪಕ್ಕೆ ಮಕ್ಕಳನ್ನ ಕೊಲ್ಲಬಾರದು. ಯಾರು ಪಾಪ ಮಾಡ್ತಾರೋ ಅವ್ರೇ ಸಾಯಬೇಕು”.+  ಅವನು ಉಪ್ಪಿನ ಕಣಿವೆಯಲ್ಲಿ+ ಎದೋಮ್ಯರ+ ವಿರುದ್ಧ ಯುದ್ಧ ಮಾಡಿ ಅವ್ರ 10,000 ಸೈನಿಕರನ್ನ ನಾಶ ಮಾಡಿದ. ಅವನು ಎದೋಮ್ಯರ ಪಟ್ಟಣವಾಗಿದ್ದ ಸೆಲವನ್ನ ವಶ ಮಾಡ್ಕೊಂಡು+ ಅದಕ್ಕೆ ಯೊಕ್ತೆಯೇಲ್‌ ಅಂತ ಹೆಸ್ರಿಟ್ಟ. ಇವತ್ತಿನ ತನಕ ಆ ಪಟ್ಟಣಕ್ಕೆ ಅದೇ ಹೆಸ್ರಿದೆ.  ಆಮೇಲೆ ಅಮಚ್ಯ ಯೇಹುವಿನ ಮೊಮ್ಮಗನೂ ಯೆಹೋವಾಹಾಜನ ಮಗನೂ ಆದ ಇಸ್ರಾಯೇಲಿನ ರಾಜ ಯೆಹೋವಾಷನ ಹತ್ರ ಸಂದೇಶವಾಹಕರನ್ನ ಕಳಿಸಿ “ಬಾ! ಯುದ್ಧ ಮಾಡೋಣ”* ಅಂದ.+  ಅದಕ್ಕೆ ಇಸ್ರಾಯೇಲ್ಯರ ರಾಜ ಯೆಹೋವಾಷ ಯೆಹೂದದ ರಾಜ ಅಮಚ್ಯನಿಗೆ “ಲೆಬನೋನಿನ ಮುಳ್ಳುಗಿಡ ಲೆಬನೋನಿನ ದೇವದಾರು ಮರಕ್ಕೆ ‘ನಿನ್ನ ಮಗಳನ್ನ ನನ್ನ ಮಗನಿಗೆ ಕೊಡು’ ಅಂತ ಸಂದೇಶ ಕಳಿಸ್ತು. ಆದ್ರೆ ಲೆಬನೋನಿನ ಒಂದು ಕಾಡು ಪ್ರಾಣಿ ಅಲ್ಲಿಂದ ಹಾದು ಹೋಗ್ತಿರುವಾಗ ಲೆಬನೋನಿನ ಮುಳ್ಳುಗಿಡವನ್ನ ತುಳಿದುಬಿಡ್ತು. 10  ನಿಜ, ನೀನು ಎದೋಮನ್ನ+ ಸೋಲಿಸಿದೆ. ಆದ್ರೆ ನಿನ್ನ ಹೃದಯ ಅಹಂಕಾರದಿಂದ ಮೆರೆಯದಿರಲಿ. ನೀನು ಸಂಪಾದಿಸಿದ ಕೀರ್ತಿಗಾಗಿ ಆನಂದಿಸು. ಆದ್ರೆ ಆ ಆನಂದ ನಿನ್ನ ಅರಮನೆಯಲ್ಲೇ ಇರಲಿ. ಯಾಕೆ ಕಷ್ಟ ತಂದ್ಕೊಳ್ತೀಯಾ? ಕಷ್ಟ ಬಂದ್ರೆ ನೀನೂ ಮುಳುಗಿಹೋಗ್ತೀಯ, ನಿನ್ನ ಜೊತೆ ಯೆಹೂದವನ್ನೂ ಮುಳುಗಿಸ್ತೀಯ” ಅಂತ ಸಂದೇಶ ಕಳಿಸಿದ. 11  ಆದ್ರೆ ಅಮಚ್ಯ ಅವನ ಮಾತಿಗೆ ಕಿವಿಗೊಡಲಿಲ್ಲ.+ ಹಾಗಾಗಿ ಇಸ್ರಾಯೇಲಿನ ರಾಜ ಯೆಹೋವಾಷ ಯೆಹೂದದ ರಾಜ ಅಮಚ್ಯನ ಮೇಲೆ ಯುದ್ಧಕ್ಕೆ ಹೊರಟ. ಆ ಯುದ್ಧ ಯೆಹೂದಕ್ಕೆ ಸೇರಿದ+ ಬೇತ್‌-ಷೆಮೆಷಿನಲ್ಲಿ+ ನಡಿತು. 12  ಇಸ್ರಾಯೇಲ್‌ ಯೆಹೂದವನ್ನ ಸೋಲಿಸ್ತು. ಆಗ ಯೆಹೂದದ ಜನ್ರು ಮನೆಗೆ ಓಡಿಹೋದ್ರು. 13  ಅಹಜ್ಯನ ಮೊಮ್ಮಗನೂ ಯೆಹೋವಾಷನ ಮಗನೂ ಆದ ಯೆಹೂದದ ರಾಜ ಅಮಚ್ಯನನ್ನ ಇಸ್ರಾಯೇಲ್‌ ರಾಜ ಯೆಹೋವಾಷ ಬೇತ್‌-ಷೆಮೆಷಿನಲ್ಲಿ ವಶ ಮಾಡ್ಕೊಂಡ. ಅಮಚ್ಯನನ್ನ ಕೈದಿಯಾಗಿ ಯೆರೂಸಲೇಮಿಗೆ ಕರ್ಕೊಂಡು ಬಂದ. ಯೆಹೋವಾಷ ಯೆರೂಸಲೇಮಿನ ಗೋಡೆಯನ್ನ ಎಫ್ರಾಯೀಮ್‌ ಬಾಗಿಲಿಂದ+ ‘ಮೂಲೆಬಾಗಿಲಿನ+ ತನಕ’ ಕೆಡವಿಬಿಟ್ಟ. ಅದು 400 ಮೊಳ* ಉದ್ದ ಇತ್ತು. 14  ಯೆಹೋವಾಷ ಯೆಹೋವನ ಆಲಯದಿಂದ ಮತ್ತು ರಾಜನ ಅರಮನೆಯ ಖಜಾನೆಯಿಂದ ಬೆಳ್ಳಿಬಂಗಾರ ಮತ್ತು ವಸ್ತುಗಳನ್ನೆಲ್ಲ ತಗೊಂಡ. ಜೊತೆಗೆ ಕೆಲವ್ರನ್ನ ಕೈದಿಗಳಾಗಿ ಮಾಡ್ಕೊಂಡು ಸಮಾರ್ಯಕ್ಕೆ ವಾಪಸ್‌ ಹೋದ. 15  ಯೆಹೋವಾಷನ ಉಳಿದ ಜೀವನಚರಿತ್ರೆ, ಅವನು ಮಾಡಿದ ಕೆಲಸಗಳು, ಅವನ ಎಲ್ಲ ವೀರ ಕೆಲಸಗಳು ಮತ್ತು ಯೆಹೂದದ ರಾಜ ಅಮಚ್ಯನ ಜೊತೆ ಅವನು ಹೋರಾಡಿದ್ರ ಬಗ್ಗೆ ಇಸ್ರಾಯೇಲ್‌ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಇದೆ. 16  ಕೊನೆಗೆ ಯೆಹೋವಾಷ ತೀರಿಹೋದ. ಇಸ್ರಾಯೇಲ್‌ ರಾಜರನ್ನ ಸಮಾಧಿ ಮಾಡಿದ್ದ ಸಮಾರ್ಯದಲ್ಲಿ+ ಅವನನ್ನ ಸಮಾಧಿ ಮಾಡಿದ್ರು. ಅವನ ನಂತ್ರ ಅವನ ಮಗ ಯಾರೊಬ್ಬಾಮ*+ ರಾಜನಾದ. 17  ಇಸ್ರಾಯೇಲ್‌ ರಾಜನಾದ ಯೆಹೋವಾಹಾಜನ ಮಗ ಯೆಹೋವಾಷ+ ಸತ್ತು 15 ವರ್ಷಗಳಾದ ಮೇಲೂ ಯೆಹೂದದ ರಾಜ ಯೆಹೋವಾಷನ ಮಗ ಅಮಚ್ಯ+ ಬದುಕಿದ್ದ.+ 18  ಅಮಚ್ಯನ ಉಳಿದ ಜೀವನಚರಿತ್ರೆ ಬಗ್ಗೆ ಯೆಹೂದದ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಇದೆ. 19  ಸ್ವಲ್ಪ ಸಮಯ ಆದ್ಮೇಲೆ ಯೆರೂಸಲೇಮಲ್ಲಿ ಅವನ ವಿರುದ್ಧ ಸಂಚು ಮಾಡಿದ್ರಿಂದ+ ಅವನು ಲಾಕೀಷಿಗೆ ಓಡಿಹೋದ. ಆದ್ರೆ ಅವನ ಶತ್ರುಗಳು ತಮ್ಮ ಜನ್ರನ್ನ ಲಾಕೀಷಿಗೆ ಕಳಿಸಿ ಅಲ್ಲಿ ಅವನನ್ನ ಕೊಂದು ಹಾಕಿದ್ರು. 20  ಅವರು ಅವನ ಶವವನ್ನ ಕುದುರೆಗಳ ಮೇಲೆ ಹೊತ್ಕೊಂಡು ಯೆರೂಸಲೇಮಿಗೆ ಬಂದು ಅದನ್ನ ದಾವೀದಪಟ್ಟಣದಲ್ಲಿ ಸಮಾಧಿ ಮಾಡಿದ್ರು.+ 21  ಯೆಹೂದದ ಎಲ್ಲ ಜನ್ರು ಸೇರಿ ಅಮಚ್ಯನ ಸ್ಥಾನದಲ್ಲಿ ಅವನ ಮಗ ಅಜರ್ಯನನ್ನ*+ ರಾಜನಾಗಿ ಮಾಡಿದ್ರು.+ ಆಗ ಅವನಿಗೆ 16 ವರ್ಷ.+ 22  ರಾಜ* ತೀರಿಹೋದ ಮೇಲೆ ಅಜರ್ಯ ಏಲತನ್ನ+ ಮತ್ತೆ ಕಟ್ಟಿದ. ಮತ್ತೆ ಅದನ್ನ ಯೆಹೂದದ ಭಾಗವಾಗಿ ಮಾಡ್ಕೊಂಡ.+ 23  ಯೆಹೂದದ ರಾಜ ಯೆಹೋವಾಷನ ಮಗ ಅಮಚ್ಯ ಆಳ್ತಿದ್ದ 15ನೇ ವರ್ಷದಲ್ಲಿ ಇಸ್ರಾಯೇಲಿನ ರಾಜ ಯೆಹೋವಾಷನ ಮಗ ಯಾರೊಬ್ಬಾಮ+ ಸಮಾರ್ಯದ ರಾಜನಾದ. ಅವನು 41 ವರ್ಷ ಆಳಿದ. 24  ಯಾರೊಬ್ಬಾಮ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡ್ತಾ ಹೋದ. ಅವನು ತನ್ನ ಪಾಪಗಳನ್ನ ಬಿಡಲಿಲ್ಲ. ನೆಬಾಟನ ಮಗ ಯಾರೊಬ್ಬಾಮ ಇಸ್ರಾಯೇಲ್ಯರಿಂದ ಮಾಡಿಸಿದ ಪಾಪಗಳನ್ನೇ ಅವನೂ ಮಾಡಿಸಿದ.+ 25  ಯಾರೊಬ್ಬಾಮ ಲೆಬೊ-ಹಾಮಾತಿಂದ*+ ಅರಾಬಾ ಸಮುದ್ರದ+ ತನಕ* ಇದ್ದ ಇಸ್ರಾಯೇಲ್ಯರ ಎಲ್ಲ ಪ್ರದೇಶಗಳನ್ನ ಮತ್ತೆ ಪಡ್ಕೊಂಡ. ಹೀಗೆ ಇಸ್ರಾಯೇಲ್‌ ದೇವರಾದ ಯೆಹೋವ ತನ್ನ ಪ್ರವಾದಿ ಯೋನನ+ ಮೂಲಕ ಹೇಳಿದ್ದ ಮಾತು ನಿಜ ಆಯ್ತು. ಗತ್‌-ಹೇಫೆರಿನಲ್ಲಿ+ ವಾಸಿಸ್ತಿದ್ದ ಯೋನ ಅಮಿತೈಯ ಮಗನಾಗಿದ್ದ. 26  ಇಸ್ರಾಯೇಲ್ಯರ ಮೇಲೆ ಆಗ್ತಿದ್ದ ದೌರ್ಜನ್ಯವನ್ನ ಯೆಹೋವ ನೋಡಿದ್ದನು.+ ಇಸ್ರಾಯೇಲ್ಯರಿಗೆ ಸಹಾಯ ಮಾಡೋಕೆ ಯಾರೂ ಇರ್ಲಿಲ್ಲ. ಕನಿಷ್ಠ ಪಕ್ಷ ಒಬ್ಬ ಬಡವ ಅಥವಾ ಬಲಹೀನ ಸಹ ಇರಲಿಲ್ಲ. 27  ಆದ್ರೆ ಭೂಮಿ ಮೇಲಿಂದ ಇಸ್ರಾಯೇಲ್ಯರ ಹೆಸ್ರನ್ನ ಪೂರ್ಣವಾಗಿ ಅಳಿಸಿಹಾಕಲ್ಲ ಅಂತ ಯೆಹೋವ ಆಣೆ ಮಾಡಿದ್ದನು.+ ಹಾಗಾಗಿ ಆತನು ಇಸ್ರಾಯೇಲ್ಯರನ್ನ ಯೆಹೋವಾಷನ ಮಗ ಯಾರೊಬ್ಬಾಮನ ಕೈಯಿಂದ ರಕ್ಷಿಸಿದ.+ 28  ಯಾರೊಬ್ಬಾಮನ ಉಳಿದ ಜೀವನಚರಿತ್ರೆ, ಅವನು ಮಾಡಿದ ಎಲ್ಲ ಕೆಲಸಗಳು, ಅವನ ವೀರ ಕೆಲಸಗಳು, ಅವನು ಹೋರಾಡಿದ್ರ ಬಗ್ಗೆ, ದಮಸ್ಕವನ್ನ,+ ಹಾಮಾತನ್ನ+ ಮತ್ತೆ ಇಸ್ರಾಯೇಲಿನ ಯೆಹೂದ ಕುಲಕ್ಕೆ ಸೇರೋ ತರ ಮಾಡಿದ್ರ ಬಗ್ಗೆ ಇಸ್ರಾಯೇಲ್‌ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಇದೆ. 29  ಕೊನೆಗೆ ಯಾರೊಬ್ಬಾಮ ತೀರಿಹೋದ. ಅವನನ್ನ ಇಸ್ರಾಯೇಲ್‌ ರಾಜರ ಸಮಾಧಿಯಲ್ಲಿ ಹೂಣಿಟ್ರು. ಅವನ ನಂತ್ರ ಅವನ ಮಗ ಜೆಕರ್ಯ+ ರಾಜನಾದ.

ಪಾದಟಿಪ್ಪಣಿ

ಅಥವಾ “ಮುಖಾಮುಖಿ ಭೇಟಿ ಮಾಡೋಣ.”
ಸುಮಾರು 178 ಮೀ (584 ಅಡಿ). ಪರಿಶಿಷ್ಟ ಬಿ14 ನೋಡಿ.
ಅದು, ಎರಡನೇ ಯಾರೊಬ್ಬಾಮ.
ಅರ್ಥ “ಯೆಹೋವ ಸಹಾಯ ಮಾಡಿದನು.” 2ಅರ 15:13; 2ಪೂರ್ವ 26:1-23; ಯೆಶಾ 6:1; ಜೆಕ 14:5ರಲ್ಲಿ ಅವನನ್ನ ಉಜ್ಜೀಯ ಅಂತ ಕರೆಯಲಾಗಿದೆ.
ಅದು, ಅವನ ತಂದೆ ಅಮಚ್ಯ.
ಅದು, ಲವಣ ಸಮುದ್ರ ಅಥವಾ ಮೃತ ಸಮುದ್ರ.
ಅಥವಾ “ಹಾಮಾತಿನ ಬಾಗಿಲಿಂದ.”