ಎರಡನೇ ಅರಸು 18:1-37

  • ಹಿಜ್ಕೀಯ, ಯೆಹೂದದ ರಾಜ (1-8)

  • ಇಸ್ರಾಯೇಲಿನ ಪತನದ ಸಾರಾಂಶ (9-12)

  • ಯೆಹೂದದ ಮೇಲೆ ಸನ್ಹೇರೀಬನ ದಾಳಿ (13-18)

  • ರಬ್ಷಾಕೆ ಯೆಹೋವನನ್ನ ಅವಮಾನಿಸ್ತಾನೆ (19-37)

18  ಇಸ್ರಾಯೇಲಿನ ರಾಜನೂ ಏಲಾನ ಮಗನೂ ಆದ ಹೋಷೇಯ+ ಆಳ್ತಿದ್ದ ಮೂರನೇ ವರ್ಷದಲ್ಲಿ ಯೆಹೂದದ ರಾಜ ಆಹಾಜನ+ ಮಗ ಹಿಜ್ಕೀಯ+ ರಾಜನಾದ.  ರಾಜನಾದಾಗ ಅವನಿಗೆ 25 ವರ್ಷ. ಅವನು ಯೆರೂಸಲೇಮಿಂದ 29 ವರ್ಷ ಆಳಿದ. ಅವನ ತಾಯಿ ಹೆಸ್ರು ಅಬೀ.* ಅವಳು ಜೆಕರ್ಯನ ಮಗಳು.+  ಅವನು ತನ್ನ ಪೂರ್ವಜ ದಾವೀದನ+ ತರಾನೇ ಯೆಹೋವನಿಗೆ ಇಷ್ಟ ಆಗೋದನ್ನೇ ಮಾಡಿದ.+  ಇವನು ದೇವಸ್ಥಾನಗಳನ್ನ ನಾಶ ಮಾಡಿದ,+ ವಿಗ್ರಹಸ್ತಂಭಗಳನ್ನ ಚೂರುಚೂರು ಮಾಡಿದ, ಪೂಜಾಕಂಬಗಳನ್ನ* ಕಡಿದುಹಾಕಿದ.+ ಅಷ್ಟೇ ಅಲ್ಲ ಮೋಶೆ ಮಾಡಿಸಿದ ತಾಮ್ರದ ಹಾವನ್ನ ಸಹ ಪುಡಿಪುಡಿ ಮಾಡಿದ.+ ಯಾಕಂದ್ರೆ ಅಲ್ಲಿ ತನಕ ಇಸ್ರಾಯೇಲ್ಯರು ಆ ಮೂರ್ತಿಗೆ ಬಲಿಯನ್ನ ಅರ್ಪಿಸಿ ಹೊಗೆ ಏರೋ ತರ ಮಾಡ್ತಿದ್ರು. ಅವರು ಆ ಮೂರ್ತಿಯನ್ನ ‘ತಾಮ್ರದ ಹಾವು’* ಅಂತ ಕರಿತಿದ್ರು.  ಹಿಜ್ಕೀಯ ಇಸ್ರಾಯೇಲ್‌ ದೇವರಾದ ಯೆಹೋವನಲ್ಲಿ ಭರವಸೆಯಿಟ್ಟ.+ ಯೆಹೂದದ ರಾಜರಲ್ಲಿ ಇವನಂಥ ರಾಜ ಮುಂಚೆ ಇರಲೂ ಇಲ್ಲ, ಆಮೇಲೆ ಬರಲೂ ಇಲ್ಲ.  ಹಿಜ್ಕೀಯ ಯೆಹೋವನಿಗೆ ನಿಷ್ಠನಾಗಿದ್ದ.+ ದೇವರು ಹೇಳಿದ ಪ್ರತಿಯೊಂದು ಮಾತನ್ನ ಚಾಚೂತಪ್ಪದೆ ಮಾಡಿದ. ಯೆಹೋವ ಮೋಶೆಗೆ ಕೊಟ್ಟಿದ್ದ ಆಜ್ಞೆಗಳನ್ನ ಪಾಲಿಸ್ತಾ ಬಂದ.  ಯೆಹೋವ ಅವನ ಜೊತೆ ಇದ್ದಿದ್ರಿಂದ ಅವನು ಹೋದ ಕಡೆಲ್ಲೆಲ್ಲ ವಿವೇಕದಿಂದ ನಡ್ಕೊಂಡ. ಅಶ್ಶೂರ್ಯರ ರಾಜನ ವಿರುದ್ಧ ತಿರುಗಿಬಿದ್ದು ಅವನ ಸೇವೆ ಮಾಡೋಕೆ ನಿರಾಕರಿಸಿದ.+  ಫಿಲಿಷ್ಟಿಯರನ್ನ ಕೂಡ ಸೋಲಿಸಿಬಿಟ್ಟ.+ ಕಾವಲುಗಾರರ ಗೋಪುರಗಳಿದ್ದ ಚಿಕ್ಕಚಿಕ್ಕ ಊರಿಂದ ಹಿಡಿದು ಭದ್ರ ಕೋಟೆಗಳಿದ್ದ ಪಟ್ಟಣಗಳ ತನಕ ಎಲ್ಲ ಪ್ರಾಂತ್ಯಗಳನ್ನ ವಶ ಮಾಡ್ಕೊಂಡ.* ಅವುಗಳಲ್ಲಿ ಗಾಜಾ ಮತ್ತು ಅದ್ರ ಪ್ರಾಂತ್ಯಗಳು ಸೇರಿದ್ದವು.  ರಾಜ ಹಿಜ್ಕೀಯ ಆಳ್ತಿದ್ದ ನಾಲ್ಕನೇ ವರ್ಷದಲ್ಲಿ ಅಂದ್ರೆ ಇಸ್ರಾಯೇಲಿನ ರಾಜನೂ ಏಲಾನ ಮಗನೂ ಆದ ಹೋಷೇಯ+ ಆಳ್ತಿದ್ದ ಏಳನೇ ವರ್ಷದಲ್ಲಿ ಅಶ್ಶೂರ್ಯರ ರಾಜ ಶಲ್ಮನೆಸೆರ ಸಮಾರ್ಯದ ಮೇಲೆ ದಾಳಿ ಮಾಡಿ ಅದಕ್ಕೆ ಮುತ್ತಿಗೆ ಹಾಕಿದ.+ 10  ಅವರು ಅದನ್ನ ಮೂರನೇ ವರ್ಷದ ಕೊನೇಲಿ ವಶ ಮಾಡ್ಕೊಂಡ್ರು.+ ಹಿಜ್ಕೀಯ ಆಳ್ತಿದ್ದ ಆರನೇ ವರ್ಷದಲ್ಲಿ ಅಂದ್ರೆ ಇಸ್ರಾಯೇಲಿನ ರಾಜ ಹೋಷೇಯ ಆಳ್ತಿದ್ದ ಒಂಬತ್ತನೇ ವರ್ಷದಲ್ಲಿ ಅವರು ಹೀಗೆ ಮಾಡಿದ್ರು. 11  ಅಶ್ಶೂರ್ಯರ ರಾಜ ಇಸ್ರಾಯೇಲ್‌ ಜನ್ರನ್ನ ಅಶ್ಶೂರ್‌ ದೇಶಕ್ಕೆ ಕೈದಿಗಳಾಗಿ ತಗೊಂಡು ಹೋಗಿ+ ಅವ್ರನ್ನ ಹಲಹದಲ್ಲಿ, ಗೋಜಾನ್‌ ನದಿ ಹತ್ರದಲ್ಲಿದ್ದ ಹಾಬೋರಿನಲ್ಲಿ ಮತ್ತು ಮೇದ್ಯರ ಪಟ್ಟಣಗಳಲ್ಲಿ ಇರಿಸಿದ.+ 12  ಹೀಗೆ ಆಗೋಕೆ ಕಾರಣ ಏನಂದ್ರೆ ಅವರು ತಮ್ಮ ದೇವರಾದ ಯೆಹೋವನ ಮಾತನ್ನ ಕೇಳಲಿಲ್ಲ. ಯೆಹೋವ ತನ್ನ ಸೇವಕ ಮೋಶೆ ಮೂಲಕ ಹೇಳಿದ ಎಲ್ಲ ವಿಷ್ಯಗಳನ್ನ, ಆತನ ಒಪ್ಪಂದವನ್ನ ಅವರು ಮೀರುತ್ತಾ ಇದ್ರು.+ ಅವರು ಅದನ್ನ ಕೇಳಲೂ ಇಲ್ಲ, ಅದ್ರ ಪ್ರಕಾರ ನಡಿಲೂ ಇಲ್ಲ. 13  ರಾಜ ಹಿಜ್ಕೀಯ ಆಳ್ತಿದ್ದ 14ನೇ ವರ್ಷದಲ್ಲಿ ಅಶ್ಶೂರ್ಯರ+ ರಾಜ ಸನ್ಹೇರೀಬ ಭದ್ರ ಕೋಟೆಗಳಿದ್ದ ಯೆಹೂದದ ಎಲ್ಲ ಪಟ್ಟಣಗಳ ಮೇಲೆ ದಾಳಿ ಮಾಡಿ ಅವುಗಳನ್ನ ವಶ ಮಾಡ್ಕೊಂಡ.+ 14  ಆಗ ಯೆಹೂದದ ರಾಜ ಹಿಜ್ಕೀಯ ಲಾಕೀಷಿನಲ್ಲಿದ್ದ ಅಶ್ಶೂರ್ಯರ ರಾಜ ಸನ್ಹೇರೀಬನಿಗೆ “ತಪ್ಪು ನಂದೇ. ದಯವಿಟ್ಟು ನಮ್ಮ ಮೇಲೆ ದಾಳಿ ಮಾಡದೆ ವಾಪಸ್‌ ಹೋಗು. ನೀನು ಏನು ಕೇಳಿದ್ರೂ ನಾನು ಕೊಡ್ತೀನಿ” ಅಂತ ಸಂದೇಶ ಕಳಿಸಿದ. ಆಗ ಅಶ್ಶೂರ್ಯರ ರಾಜ ಯೆಹೂದದ ರಾಜ ಹಿಜ್ಕೀಯನಿಗೆ 300 ತಲಾಂತು* ಬೆಳ್ಳಿ ಮತ್ತು 30 ತಲಾಂತು ಬಂಗಾರವನ್ನ ದಂಡವಾಗಿ ವಿಧಿಸಿದ. 15  ಹಾಗಾಗಿ ಹಿಜ್ಕೀಯ ಯೆಹೋವನ ಆಲಯದಲ್ಲಿದ್ದ ಮತ್ತು ರಾಜನ ಅರಮನೆಯ ಖಜಾನೆಗಳಲ್ಲಿದ್ದ ಎಲ್ಲ ಬೆಳ್ಳಿಯನ್ನ ಅವನಿಗೆ ಕೊಟ್ಟುಬಿಟ್ಟ.+ 16  ಹಿಜ್ಕೀಯ ಯೆಹೋವನ ಆಲಯದ ಬಾಗಿಲುಗಳಿಗೆ,+ ಅದ್ರ ಚೌಕಟ್ಟುಗಳಿಗೆ ತಾನೇ ಹೊದಿಸಿದ್ದ ಚಿನ್ನದ ತಗಡುಗಳನ್ನ+ ತೆಗೆದು ಅಶ್ಶೂರ್ಯರ ರಾಜನಿಗೆ ಕೊಟ್ಟ. 17  ಆಗ ಅಶ್ಶೂರ್ಯರ ರಾಜ ಲಾಕೀಷಿಂದ+ ಒಂದು ದೊಡ್ಡ ಸೈನ್ಯದ ಜೊತೆಗೆ ತರ್ತಾನನನ್ನ,* ರಬ್ಸಾರೀಸನನ್ನ* ಮತ್ತು ರಬ್ಷಾಕೆಯನ್ನ* ಹಿಜ್ಕೀಯ ರಾಜನ ಹತ್ರ ಕಳಿಸಿದ.+ ಅವರು ಯೆರೂಸಲೇಮಿಗೆ ಬಂದು ಎತ್ತರದಲ್ಲಿದ್ದ ಕೆರೆಯ ಕಾಲುವೆಯ ಪಕ್ಕದಲ್ಲಿ ನಿಂತ್ಕೊಂಡ್ರು. ಅದು ಅಗಸರ ಮೈದಾನದ ಕಡೆ ಹೋಗೋ ಹೆದ್ದಾರಿಯಲ್ಲಿತ್ತು.+ 18  ಅವರು ರಾಜನನ್ನ ಹೊರಗೆ ಬಾ ಅಂತ ಕೂಗಿದಾಗ ಅರಮನೆಯನ್ನ ನೋಡ್ಕೊಳ್ತಿದ್ದ ಹಿಲ್ಕೀಯನ ಮಗ ಎಲ್ಯಕೀಮ,+ ಕಾರ್ಯದರ್ಶಿ ಶೆಬ್ನ+ ಮತ್ತು ವರದಿಗಾರ ಆಸಾಫನ ಮಗ ಯೋವ ಹೊರಗೆ ಬಂದ್ರು. 19  ಆಗ ರಬ್ಷಾಕೆ ಅವ್ರಿಗೆ “ನೀವು ಹೋಗಿ ಹಿಜ್ಕೀಯನಿಗೆ ‘ಮಹಾ ಸಾಮ್ರಾಟ ಅಶ್ಶೂರ್ಯರ ರಾಜ ಹೀಗೆ ಹೇಳ್ತಿದ್ದಾನೆ ಅಂತ ತಿಳಿಸಿ “ನೀನು ಇನ್ನೂ ಏನನ್ನ ನಂಬಿ ಕೂತಿದ್ದೀಯಾ?+ 20  ‘ನನಗೆ ಯುದ್ಧಕಲೆ ಗೊತ್ತು, ಯುದ್ಧ ಮಾಡೋಕೆ ಬೇಕಾಗಿರೋ ಬಲ ಇದೆ’ ಅಂತ ನೀನು ಹೇಳೋದೆಲ್ಲ ಬರೀ ಸುಳ್ಳು. ನೀನು ಯಾರನ್ನ ನಂಬಿ ನನ್ನ ವಿರುದ್ಧ ದಂಗೆ ಏಳೋ ಧೈರ್ಯ ಮಾಡಿದ್ದೀಯ?+ 21  ಆ ಈಜಿಪ್ಟನ್ನ ನಂಬಿದ್ದೀಯಾ? ಅದೊಂದು ಜಜ್ಜಿದ ದಂಟು. ಆಸರೆಗಾಗಿ ಯಾರಾದ್ರೂ ಅದ್ರ ಮೇಲೆ ಕೈಯಿಟ್ರೆ ಅದು ಅವ್ರ ಅಂಗೈಗೆ ಚುಚ್ಚಿಕೊಳ್ಳುತ್ತೆ. ಈಜಿಪ್ಟಿನ+ ರಾಜ ಫರೋಹನ ಮೇಲೆ ಭರವಸೆ ಇಡುವವರಿಗೆ ಅದೇ ಗತಿಯಾಗುತ್ತೆ. 22  ನಿಮ್ಮ ದೇವರಾದ ಯೆಹೋವನ ಮೇಲೆ ನಂಬಿಕೆ ಇಟ್ಟಿದ್ದೀರ+ ಅಂತ ನಮಗೆ ಹೇಳಬೇಡಿ. ಯಾಕಂದ್ರೆ ನಿಮ್ಮ ರಾಜ ಹಿಜ್ಕೀಯ ಆತನ ಆರಾಧನಾ ಸ್ಥಳಗಳನ್ನ, ಯಜ್ಞವೇದಿಗಳನ್ನ ಕೆಡವಿಹಾಕಿದ್ದಾನೆ.+ ಅದೇ ಸಮಯದಲ್ಲಿ ಹಿಜ್ಕೀಯ ಯೆಹೂದ್ಯರಿಗೂ ಯೆರೂಸಲೇಮಿನವರಿಗೂ ‘ನೀವು ಯೆರೂಸಲೇಮಿನ ಈ ಯಜ್ಞವೇದಿಯ ಮುಂದೆ ಬಗ್ಗಿ ನಮಸ್ಕಾರ ಮಾಡಬೇಕು’ ಅಂತಾನೂ ಹೇಳ್ತಿದ್ದಾನೆ.”’+ 23  ಹಾಗಾಗಿ ಹಿಜ್ಕೀಯ, ನನ್ನ ಒಡೆಯನಾದ ಅಶ್ಶೂರ್ಯರ ರಾಜನ ಜೊತೆ ನೀನು ಈ ಸವಾಲಿಗೆ ಒಪ್ತೀಯ? ನಾನು ನಿನಗೆ 2,000 ಕುದುರೆಗಳನ್ನ ಕೊಡ್ತೀನಿ. ಅದ್ರ ಮೇಲೆ ಕೂತ್ಕೊಳ್ಳೋಕೆ ಸಾಕಷ್ಟು ಕುದುರೆಸವಾರರನ್ನ ಕರ್ಕೊಂಡು ಬರೋಕೆ ನಿನ್ನಿಂದ ಆಗುತ್ತಾ?+ 24  ನಿನಗೆ ಅದನ್ನೇ ಮಾಡೋಕೆ ಆಗದಿರುವಾಗ ನಮ್ಮ ಸೈನ್ಯದ ಜೊತೆ ಹೇಗೆ ಹೋರಾಡ್ತೀಯ? ನೀನು ಈಜಿಪ್ಟಿನ ಎಲ್ಲ ರಥಗಳನ್ನ, ಕುದುರೆಗಳನ್ನ ತಗೊಂಡು ಬಂದ್ರೂ ನನ್ನ ಒಡೆಯನ ಅತಿ ಚಿಕ್ಕ ಸೇವಕರಲ್ಲಿ ಒಬ್ಬನಾಗಿರೋ ರಾಜ್ಯಪಾಲನನ್ನ ಕೂಡ ನಿನ್ನಿಂದ ಸೋಲಿಸೋಕೆ ಆಗಲ್ಲ. 25  ಯೆಹೋವನ ಅನುಮತಿ ಇಲ್ಲದೆ ನಾನು ಈ ಸ್ಥಳವನ್ನ ನಾಶ ಮಾಡೋಕೆ ಬಂದಿದ್ದೀನಿ ಅಂತ ಅಂದ್ಕೊಂಡಿದ್ದೀಯಾ? ಯೆಹೋವನೇ ನನಗೆ ‘ಈ ದೇಶದ ಮೇಲೆ ದಾಳಿ ಮಾಡಿ ಅದನ್ನ ನಾಶಮಾಡಿಬಿಡು’ ಅಂತ ಹೇಳಿ ಕಳಿಸಿದನು” ಅಂದ. 26  ಅದಕ್ಕೆ ಹಿಲ್ಕೀಯನ ಮಗ ಎಲ್ಯಕೀಮ, ಶೆಬ್ನ+ ಮತ್ತು ಯೋವ ರಬ್ಷಾಕೆಗೆ+ “ದಯವಿಟ್ಟು ನಿನ್ನ ಸೇವಕರಾದ ನಮ್ಮ ಜೊತೆ ಅರಾಮಿಕ್‌* ಭಾಷೆಯಲ್ಲಿ+ ಮಾತಾಡು. ನಮಗೆ ಆ ಭಾಷೆ ಅರ್ಥವಾಗುತ್ತೆ. ಗೋಡೆ ಮೇಲಿರೋ ಜನ ಕೇಳಿಸ್ಕೊಳ್ಳೋ ತರ ಯೆಹೂದ್ಯರ ಭಾಷೆಯಲ್ಲಿ ಮಾತಾಡಬೇಡ” ಅಂದ್ರು.+ 27  ಆದ್ರೆ ರಬ್ಷಾಕೆ ಅವ್ರಿಗೆ “ನನ್ನ ಒಡೆಯ ನನ್ನನ್ನ ಕಳಿಸಿರೋದು ಬರೀ ನಿಮ್ಮ ಹತ್ರ, ನಿಮ್ಮ ಒಡೆಯನ ಹತ್ರ ಮಾತಾಡೋಕೆ ಅಲ್ಲ. ಗೋಡೆ ಮೇಲೆ ಕೂತಿರೋ ಜನ್ರ ಹತ್ರಾನೂ ಮಾತಾಡೋಕೆ ಕಳಿಸಿದ್ದಾನೆ. ಅವ್ರಿಗೂ ನಿಮಗೂ ಎಂಥ ಗತಿ ಬರುತ್ತೆ ಅಂದ್ರೆ ನೀವು ನಿಮ್ಮ ಸ್ವಂತ ಮಲ ತಿಂದು, ಸ್ವಂತ ಮೂತ್ರ ಕುಡಿತೀರ” ಅಂದ. 28  ಆಮೇಲೆ ರಬ್ಷಾಕೆ ಯೆಹೂದ್ಯರ ಭಾಷೆಯಲ್ಲಿ ಗಟ್ಟಿಯಾಗಿ ಕೂಗ್ತಾ “ಮಹಾ ಸಾಮ್ರಾಟ ಅಶ್ಶೂರ್ಯರ ರಾಜ ಹೇಳೋ ಈ ಸಂದೇಶ ಕೇಳಿ+ 29  ‘ರಾಜ ಹಿಜ್ಕೀಯನಿಂದ ಮೋಸ ಹೋಗಬೇಡಿ. ನನ್ನ ಕೈಯಿಂದ ನಿಮ್ಮನ್ನ ರಕ್ಷಿಸೋಕೆ ಅವನಿಗಾಗಲ್ಲ.+ 30  ಹಿಜ್ಕೀಯ ನಿಮಗೆ “ಯೆಹೋವ ಖಂಡಿತ ನಮ್ಮನ್ನ ಕಾಪಾಡ್ತಾನೆ. ಈ ಪಟ್ಟಣವನ್ನ ಅಶ್ಶೂರ್ಯರ ರಾಜನ ಕೈಗೆ ಒಪ್ಪಿಸಲ್ಲ”+ ಅಂತ ಹೇಳ್ತಾ ಯೆಹೋವನ ಮೇಲೆ ನಂಬಿಕೆ ಇಡೋ ತರ ಮಾಡ್ತಿದ್ದಾನೆ. ಆದ್ರೆ ಅವನನ್ನ ನಂಬಬೇಡಿ. 31  ಹಿಜ್ಕೀಯನ ಮಾತು ಕೇಳಬೇಡಿ. ಯಾಕಂದ್ರೆ ಅಶ್ಶೂರ್ಯರ ರಾಜ ಹೀಗೆ ಹೇಳ್ತಿದ್ದಾನೆ: “ನನ್ನ ಜೊತೆ ಶಾಂತಿ ಒಪ್ಪಂದ ಮಾಡ್ಕೊಂಡು ನನಗೆ ಶರಣಾಗಿ. ಆಗ ನಿಮ್ಮಲ್ಲಿ ಪ್ರತಿಯೊಬ್ರು ತಮ್ಮತಮ್ಮ ದ್ರಾಕ್ಷಿತೋಟದ ಮತ್ತು ಅಂಜೂರ ಮರದ ಹಣ್ಣು ತಿಂತೀರ. ಅಷ್ಟೇ ಅಲ್ಲ ನಿಮ್ಮ ಸ್ವಂತ ಬಾವಿ ನೀರು ಕುಡಿತೀರ. 32  ಆಮೇಲೆ ನಾನು ಬಂದು ನಿಮ್ಮನ್ನ ಒಂದು ದೇಶಕ್ಕೆ ಕರ್ಕೊಂಡು ಹೋಗ್ತೀನಿ.+ ಆ ದೇಶ ನಿಮ್ಮ ದೇಶದ ತರಾನೇ ಇರುತ್ತೆ. ಅಲ್ಲಿ ಧಾನ್ಯ, ಹೊಸ ದ್ರಾಕ್ಷಾಮದ್ಯ, ರೊಟ್ಟಿ, ದ್ರಾಕ್ಷಿತೋಟಗಳು, ಆಲಿವ್‌ ಮರಗಳು, ಜೇನುತುಪ್ಪ ಬೇಕಾದಷ್ಟು ಇರುತ್ತೆ. ಆಗ ನೀವು ನಮ್ಮ ಕೈಯಲ್ಲಿ ಸಾಯಲ್ಲ, ಬದುಕ್ತೀರ. ಹಿಜ್ಕೀಯನ ಮಾತು ಕೇಳಬೇಡಿ. ಯಾಕಂದ್ರೆ ಅವನು ‘ಯೆಹೋವ ನಮ್ಮನ್ನ ರಕ್ಷಿಸ್ತಾನೆ’ ಅಂತ ಹೇಳಿ ನಿಮಗೆ ಮೋಸ ಮಾಡ್ತಿದ್ದಾನೆ. 33  ಯಾವುದಾದ್ರೂ ದೇವರುಗಳಿಗೆ ಅಶ್ಶೂರ್ಯರ ರಾಜನ ಕೈಯಿಂದ ತಮ್ಮ ದೇಶಗಳನ್ನ ಸಂರಕ್ಷಿಸೋಕೆ ಆಗಿದ್ಯಾ? 34  ಹಾಮಾತಿನ+ ಮತ್ತು ಅರ್ಪಾದಿನ ದೇವರುಗಳು ಎಲ್ಲಿ? ಸೆಫರ್ವಯಿಮ್‌,+ ಹೇನ ಮತ್ತು ಇವ್ವಾ ಅನ್ನೋ ಪಟ್ಟಣಗಳ ದೇವರುಗಳು ಎಲ್ಲಿ? ಸಮಾರ್ಯವನ್ನ ನನ್ನ ಕೈಯಿಂದ ಆ ದೇವರುಗಳು ರಕ್ಷಿಸಿದ್ವಾ?+ 35  ಆ ದೇಶಗಳ ದೇವರುಗಳಲ್ಲಿ ಒಬ್ಬ ದೇವರಿಗಾದ್ರೂ ತನ್ನ ದೇಶವನ್ನ ನನ್ನ ಕೈಯಿಂದ ರಕ್ಷಿಸೋಕಾಯ್ತಾ? ಹಾಗಂದ ಮೇಲೆ ಯೆಹೋವ ಯೆರೂಸಲೇಮನ್ನ ನನ್ನ ಕೈಯಿಂದ ಹೇಗೆ ರಕ್ಷಿಸ್ತಾನೆ?”’”+ ಅಂದ. 36  ಇಷ್ಟೆಲ್ಲ ಹೇಳಿದ್ರೂ ಜನ ಏನೂ ಮಾತಾಡದೆ ಸುಮ್ಮನಿದ್ರು. ಯಾಕಂದ್ರೆ “ಅವನಿಗೆ ಯಾವ ಉತ್ತರನೂ ಕೊಡಬಾರದು” ಅಂತ ರಾಜ ಅವ್ರಿಗೆ ಹೇಳಿದ್ದ.+ 37  ಇದಾದ್ಮೇಲೆ ಅರಮನೆಯನ್ನ ನೋಡ್ಕೊಳ್ತಿದ್ದ ಹಿಲ್ಕೀಯನ ಮಗ ಎಲ್ಯಕೀಮ, ಕಾರ್ಯದರ್ಶಿ ಶೆಬ್ನ ಮತ್ತು ವರದಿಗಾರ ಆಸಾಫನ ಮಗ ಯೋವ ತಮ್ಮ ಬಟ್ಟೆ ಹರ್ಕೊಂಡು ಹಿಜ್ಕೀಯನ ಹತ್ರ ಬಂದು ರಬ್ಷಾಕೆಯ ಮಾತುಗಳನ್ನ ಹೇಳಿದ್ರು.

ಪಾದಟಿಪ್ಪಣಿ

ಪೂರ್ತಿ ಹೆಸ್ರು ಅಬಿಯಾ.
ಅಥವಾ “ನೆಹುಷ್ಟಾನ್‌.”
ಅದು, ಎಲ್ಲ ಸ್ಥಳ. ಕಡಿಮೆ ಜನ ವಾಸವಿರೋ ಸ್ಥಳನೇ ಆಗಿರಬಹುದು ಅಥವಾ ಜನನಿಬಿಡ ಸ್ಥಳನೇ ಆಗಿರಬಹುದು.
ಒಂದು ತಲಾಂತು=34.2 ಕೆಜಿ. ಪರಿಶಿಷ್ಟ ಬಿ14 ನೋಡಿ.
ಅಥವಾ “ಸೇನಾಪತಿಯನ್ನ.”
ಅಥವಾ “ಆಸ್ಥಾನದ ಅಧಿಕಾರಿಗಳ ಮುಖ್ಯಸ್ಥನನ್ನ.”
ಅಥವಾ “ಪಾನದಾಯಕರ ಮುಖ್ಯಸ್ಥನನ್ನ.”
ಅಥವಾ “ಸಿರಿಯರ.”