ಎರಡನೇ ಅರಸು 2:1-25

  • ಎಲೀಯ ಆಕಾಶಕ್ಕೆ ಏರಿ ಹೋದ (1-18)

    • ಎಲೀಷನಿಗೆ ಎಲೀಯನ ಬಟ್ಟೆ ಸಿಕ್ತು (13, 14)

  • ಎಲೀಷ ಯೆರಿಕೋವಿನ ನೀರಲ್ಲಿದ್ದ ವಿಷ ತೆಗೆದ (19-22)

  • ಕರಡಿಗಳು ಬೆತೆಲಿನ ಚಿಕ್ಕ ಹುಡುಗ್ರನ್ನ ಕೊಂದುಬಿಟ್ವು (23-25)

2  ಯೆಹೋವ ಸುಂಟರಗಾಳಿ ಮೂಲಕ ಎಲೀಯನನ್ನ+ ಆಕಾಶದ ಕಡೆ ಎತ್ಕೊಂಡು+ ಹೋಗೋ ಸಮಯ ಹತ್ರ ಆದಾಗ ಎಲೀಯ ಮತ್ತು ಎಲೀಷ+ ಗಿಲ್ಗಾಲಿಂದ+ ಹೊರಟ್ರು.  ಎಲೀಯ ಎಲೀಷನಿಗೆ “ದಯವಿಟ್ಟು ಇಲ್ಲೇ ಉಳ್ಕೊ. ಯೆಹೋವ ನನಗೆ ಬೆತೆಲಿಗೆ ಹೋಗೋಕೆ ಆಜ್ಞಾಪಿಸಿದ್ದಾನೆ” ಅಂದ. ಆದ್ರೆ ಎಲೀಷ “ಜೀವ ಇರೋ ಯೆಹೋವನ ಆಣೆ ಮತ್ತು ನಿನ್ನಾಣೆ ನಾನು ನಿನ್ನನ್ನ ಬಿಟ್ಟುಹೋಗಲ್ಲ” ಅಂದ. ಹಾಗಾಗಿ ಅವರಿಬ್ರೂ ಬೆತೆಲಿಗೆ+ ಹೋದ್ರು.  ಬೆತೆಲಲ್ಲಿದ್ದ ಪ್ರವಾದಿಗಳ ಗಂಡು ಮಕ್ಕಳು* ಎಲೀಷನ ಹತ್ರ ಬಂದು “ಇವತ್ತು ಯೆಹೋವ ನಿನ್ನ ಯಜಮಾನನನ್ನ ತಗೊಂಡು ಹೋಗಲಿದ್ದಾನೆ ಮತ್ತು ನಿನ್ನ ನಾಯಕ ನಿನ್ನನ್ನ ಬಿಟ್ಟುಹೋಗಲಿದ್ದಾನೆ ಅಂತ ನಿಂಗೊತ್ತಾ?”+ ಅಂತ ಕೇಳಿದ್ರು. ಅದಕ್ಕೆ ಎಲೀಷ “ನಂಗೊತ್ತು. ನೀವು ಸುಮ್ಮನಿರಿ” ಅಂದ.  ಆಮೇಲೆ ಎಲೀಯ ಅವನಿಗೆ “ಎಲೀಷನೇ ದಯವಿಟ್ಟು ಇಲ್ಲೇ ಉಳ್ಕೊ. ಯೆಹೋವ ನನಗೆ ಯೆರಿಕೋವಿಗೆ+ ಹೋಗೋಕೆ ಆಜ್ಞಾಪಿಸಿದ್ದಾನೆ” ಅಂದ. ಆದ್ರೆ ಎಲೀಷ “ಜೀವ ಇರೋ ಯೆಹೋವನ ಆಣೆ ಮತ್ತು ನಿನ್ನಾಣೆ ನಾನು ನಿನ್ನನ್ನ ಬಿಟ್ಟುಹೋಗಲ್ಲ” ಅಂದ. ಹಾಗಾಗಿ ಅವರಿಬ್ರೂ ಯೆರಿಕೋವಿಗೆ ಬಂದ್ರು.  ಯೆರಿಕೋವಿನಲ್ಲಿದ್ದ ಪ್ರವಾದಿಗಳ ಗಂಡು ಮಕ್ಕಳು ಎಲೀಷನ ಹತ್ರ ಬಂದು “ಇವತ್ತು ಯೆಹೋವ ನಿನ್ನ ಯಜಮಾನನನ್ನ ತಗೊಂಡು ಹೋಗಲಿದ್ದಾನೆ ಮತ್ತು ನಿನ್ನ ನಾಯಕ ನಿನ್ನನ್ನ ಬಿಟ್ಟುಹೋಗಲಿದ್ದಾನೆ ಅಂತ ನಿಂಗೊತ್ತಾ?” ಅಂತ ಕೇಳಿದ್ರು. ಅದಕ್ಕೆ ಎಲೀಷ “ನಂಗೊತ್ತು. ನೀವು ಸುಮ್ಮನಿರಿ” ಅಂದ.  ಆಮೇಲೆ ಎಲೀಯ ಎಲೀಷನಿಗೆ “ದಯವಿಟ್ಟು ಇಲ್ಲೇ ಉಳ್ಕೊ. ಯೆಹೋವ ನನಗೆ ಯೋರ್ದನಿಗೆ ಹೋಗೋಕೆ ಆಜ್ಞಾಪಿಸಿದ್ದಾನೆ” ಅಂದ. ಆದ್ರೆ ಎಲೀಷ “ಜೀವ ಇರೋ ಯೆಹೋವನ ಆಣೆ ಮತ್ತು ನಿನ್ನಾಣೆ ನಾನು ನಿನ್ನನ್ನ ಬಿಟ್ಟುಹೋಗಲ್ಲ” ಅಂದ. ಹಾಗಾಗಿ ಅವ್ರಿಬ್ರೂ ತಮ್ಮ ಪ್ರಯಾಣ ಮುಂದುವರಿಸಿದ್ರು.  ಪ್ರವಾದಿಗಳ ಗಂಡು ಮಕ್ಕಳಲ್ಲಿ 50 ಜನ ಅವರಿಬ್ರನ್ನ ಹಿಂಬಾಲಿಸ್ತಾ ಬಂದ್ರು. ಅವರಿಬ್ರೂ ಯೋರ್ದನ್‌ ನದಿಯ ದಡಕ್ಕೆ ಬಂದು ನಿಂತಾಗ ದೂರದಿಂದನೇ ಅವರಿಬ್ರನ್ನ ಗಮನಿಸ್ತಿದ್ರು.  ಎಲೀಯ ತನ್ನ ಬಟ್ಟೆ*+ ತೆಗೆದು ಅದನ್ನ ಸುತ್ತಿ ನೀರನ್ನ ಹೊಡೆದ. ಆಗ ನೀರು ಎಡಕ್ಕೂ ಬಲಕ್ಕೂ ಎರಡು ಭಾಗವಾಯ್ತು. ಅವರಿಬ್ರೂ ಒಣ ನೆಲದ ಮೇಲೆ ನಡೆದು ನದಿ ದಾಟಿದ್ರು.+  ನದಿ ದಾಟಿದ ತಕ್ಷಣ ಎಲೀಯ ಎಲೀಷನಿಗೆ “ನಾನು ನಿನ್ನನ್ನ ಬಿಟ್ಟು ಹೋಗೋ ಮುಂಚೆ ನಾನು ನಿನಗಾಗಿ ಏನು ಮಾಡ್ಲಿ ಹೇಳು” ಅಂತ ಕೇಳಿದ. ಅದಕ್ಕೆ ಎಲೀಷ “ದೇವರು ನಿನಗೆ ಕೊಟ್ಟಿರೋ ಶಕ್ತಿಯಲ್ಲಿ*+ ದಯವಿಟ್ಟು ನನಗೆ ಎರಡು ಪಾಲು ಕೊಡಕ್ಕಾಗುತ್ತಾ?”+ ಅಂತ ಕೇಳಿದ. 10  ಅದಕ್ಕೆ ಎಲೀಯ “ನೀನು ತುಂಬ ಕಷ್ಟದ ವಿಷ್ಯ ಕೇಳಿಬಿಟ್ಟೆ. ನನ್ನನ್ನ ನಿನ್ನಿಂದ ದೂರ ಕರ್ಕೊಂಡು ಹೋಗುವಾಗ ನಿನಗೆ ನಾನು ಕಾಣಿಸಿದ್ರೆ ಅದು ನಿನಗೆ ಸಿಗುತ್ತೆ. ಇಲ್ಲಾಂದ್ರೆ ಅದು ನಿನಗೆ ಸಿಗಲ್ಲ” ಅಂದ. 11  ಹೀಗೆ ಅವರು ಮಾತಾಡ್ತಾ ಮುಂದೆಮುಂದೆ ಹೋಗ್ತಿದ್ದಾಗ ಇದ್ದಕ್ಕಿದ್ದಂತೆ ಅಗ್ನಿಮಯವಾದ ರಥ ಮತ್ತು ಪ್ರಜ್ವಲಿಸೋ ಕುದುರೆಗಳು+ ಬಂದು ಅವರಿಬ್ರನ್ನ ಬೇರೆಬೇರೆ ಮಾಡ್ತು. ಆಗ ಎಲೀಯ ಸುಂಟರಗಾಳಿಯಲ್ಲಿ ಆಕಾಶಕ್ಕೆ ಏರಿ ಹೋದ.+ 12  ಎಲೀಷ ಅದನ್ನ ನೋಡ್ತಾ “ನನ್ನ ತಂದೆಯೇ! ನನ್ನ ತಂದೆಯೇ! ಇಸ್ರಾಯೇಲಿನ ರಥ ಮತ್ತು ಕುದುರೆಸವಾರರನ್ನ ನೋಡು!”+ ಅಂತ ಜೋರಾಗಿ ಕೂಗ್ತಿದ್ದ. ಎಲೀಯ ಅವನಿಗೆ ಕಾಣಿಸದೆ ಹೋದ. ಆಗ ಅವನು ತನ್ನ ಬಟ್ಟೆ ಹರಿದು ಎರಡು ತುಂಡು ಮಾಡಿದ.+ 13  ಅವನು ಕೆಳಗೆ ಬಿದ್ದಿದ್ದ ಎಲೀಯನ ಉಡುಪನ್ನ+ ತಗೊಂಡು ಯೋರ್ದನಿನ ದಡಕ್ಕೆ ಬಂದು ನಿಂತ. 14  ಅವನು ಎಲೀಯನ ಉಡುಪಿಂದ ನೀರನ್ನ ಹೊಡೆದು “ಎಲೀಯನ ದೇವರಾದ ಯೆಹೋವ ಎಲ್ಲಿ?” ಅಂದ. ಎಲೀಷ ನೀರಿಗೆ ಹೊಡೆದಾಗ ನೀರು ಎಡಕ್ಕೂ ಬಲಕ್ಕೂ ಎರಡು ಭಾಗವಾಯ್ತು. ಆಗ ಅವನು ನದಿ ದಾಟಿದ.+ 15  ಯೆರಿಕೋವಿನ ಪ್ರವಾದಿಗಳ ಗಂಡು ಮಕ್ಕಳು ಎಲೀಷನನ್ನ ತುಂಬ ದೂರದಿಂದನೇ ನೋಡಿ “ಎಲೀಯನಲ್ಲಿದ್ದ ಶಕ್ತಿ ಈಗ ಎಲೀಷನ ಮೇಲೆ ಬಂದಿದೆ”+ ಅಂದ್ರು. ಹಾಗಾಗಿ ಅವರು ಅವನ ಹತ್ರ ಹೋಗಿ ಅವನ ಮುಂದೆ ಅಡ್ಡಬಿದ್ರು. 16  ಅವರು ಅವನಿಗೆ “ನೋಡು ನಿನ್ನ ಸೇವೆ ಮಾಡೋಕೆ 50 ಸಮರ್ಥ ಗಂಡಸರು ಇಲ್ಲಿದ್ದಾರೆ. ನೀನು ಅವರಿಗೆ ಆಜ್ಞೆ ಕೊಡು, ಅವರು ಹೋಗಿ ನಿನ್ನ ಯಜಮಾನನನ್ನ ಹುಡುಕ್ತಾರೆ. ಯಾರಿಗೆ ಗೊತ್ತು, ಯೆಹೋವನ ಪವಿತ್ರಶಕ್ತಿ* ಅವನನ್ನ ಎತ್ಕೊಂಡು ಹೋಗಿ ಯಾವುದಾದ್ರೂ ಒಂದು ಪರ್ವತದಲ್ಲೋ ಕಣಿವೆಯಲ್ಲೋ ಬಿಸಾಡಿರಬಹುದು”+ ಅಂದ್ರು. ಆದ್ರೆ ಅವನು “ಬೇಡ. ಅವರನ್ನ ಕಳಿಸಬೇಡಿ” ಅಂದ. 17  ಹಾಗಿದ್ರೂ ಅವರು ಅವನಿಗೆ ಮುಜುಗರ ಆಗೋ ತನಕ ಒತ್ತಾಯಿಸ್ತಾ ಇದ್ರು. ಹಾಗಾಗಿ ಅವನು “ಸರಿ, ಅವರನ್ನ ಕಳಿಸಿ” ಅಂದ. ಆಗ ಅವರು 50 ಗಂಡಸರನ್ನ ಕಳಿಸಿದ್ರು. ಆ ಗಂಡಸರು ಹೋಗಿ ಮೂರು ದಿನ ಹುಡುಕಿದ್ರೂ ಎಲೀಯ ಅವರಿಗೆ ಸಿಗಲಿಲ್ಲ. 18  ಅವರು ಎಲೀಷನ ಹತ್ರ ವಾಪಸ್‌ ಬಂದಾಗ ಅವನು ಯೆರಿಕೋವಿನಲ್ಲಿದ್ದ.+ ಅವನು ಅವರಿಗೆ “ಹೋಗೋದು ಬೇಡ ಅಂತ ನಾನು ನಿಮಗೆ ಹೇಳಿದ್ದೆ ಅಲ್ವಾ?” ಅಂದ. 19  ಸ್ವಲ್ಪ ಸಮಯ ಆದ್ಮೇಲೆ ಪಟ್ಟಣದ ಗಂಡಸರು ಎಲೀಷನಿಗೆ “ಯಜಮಾನನೇ, ನಮ್ಮ ಪಟ್ಟಣ ಒಂದು ಒಳ್ಳೇ ಸ್ಥಳದಲ್ಲಿದೆ ಅಂತ ನಿನಗೆ ಚೆನ್ನಾಗಿ ಗೊತ್ತು.+ ಆದ್ರೆ ಇಲ್ಲಿನ ನೀರು ಹಾಳಾಗಿ ಹೋಗಿದೆ ಮತ್ತು ಭೂಮಿ ಬಂಜರಾಗಿದೆ” ಅಂದ್ರು. 20  ಅದಕ್ಕೆ ಎಲೀಷ “ಹೊಸದಾದ ಒಂದು ಚಿಕ್ಕ ಬಟ್ಟಲಲ್ಲಿ ಉಪ್ಪನ್ನ ಹಾಕಿ ನನ್ನ ಹತ್ರ ತನ್ನಿ” ಅಂದ. ಅವರು ಅದನ್ನ ತಗೊಂಡು ಬಂದ್ರು. 21  ಅವನು ನೀರಿನ ಬುಗ್ಗೆ ಹತ್ರ ಹೋಗಿ ಉಪ್ಪನ್ನ ಆ ನೀರಿಗೆ ಹಾಕಿ+ “ಯೆಹೋವ ಹೀಗೆ ಹೇಳ್ತಾನೆ: ‘ಈ ನೀರನ್ನ ಕುಡಿಯೋಕೆ ಆಗೋ ತರ ಮಾಡಿದ್ದೀನಿ. ಇನ್ನು ಮುಂದೆ ಈ ನೀರಿಂದ ಸಾವಾಗಲಿ ಅಥವಾ ಬಂಜೆತನವಾಗಲಿ* ಬರಲ್ಲ’” ಅಂದ. 22  ಎಲೀಷ ಹೇಳಿದ ಹಾಗೇ ಆ ನೀರು ಇವತ್ತಿನ ತನಕ ಕುಡಿಯೋಕೆ ಯೋಗ್ಯವಾಗಿದೆ. 23  ಆಮೇಲೆ ಅವನು ಅಲ್ಲಿಂದ ಬೆತೆಲಿಗೆ ಹೋದ. ಹೋಗೋ ದಾರಿಯಲ್ಲಿ ಆ ಪಟ್ಟಣದ ಕೆಲವು ಚಿಕ್ಕ ಹುಡುಗರು ಹೊರಗೆ ಬಂದು ಅವನಿಗೆ “ಬೋಳು ತಲೆಯವನೇ ಮೇಲೆ ಹತ್ತು, ಬೋಳು ತಲೆಯವನೇ ಮೇಲೆ ಹತ್ತು!” ಅಂತ ಗೇಲಿ ಮಾಡ್ತಿದ್ರು.+ 24  ಕೊನೆಗೆ ಅವನು ತಿರುಗಿ ಅವ್ರ ಕಡೆ ನೋಡಿ ಯೆಹೋವನ ಹೆಸ್ರಲ್ಲಿ ಅವ್ರನ್ನ ಶಪಿಸಿದ. ಆಗ ಕಾಡಿಂದ ಎರಡು ಹೆಣ್ಣು ಕರಡಿಗಳು+ ಬಂದು 42 ಮಕ್ಕಳನ್ನ ಸೀಳಿಬಿಟ್ಟವು.+ 25  ಅವನು ತನ್ನ ಪ್ರಯಾಣ ಮುಂದುವರಿಸಿ ಕರ್ಮೆಲ್‌ ಬೆಟ್ಟಕ್ಕೆ+ ಹೋದ. ಅಲ್ಲಿಂದ ಸಮಾರ್ಯಕ್ಕೆ ವಾಪಸ್‌ ಹೋದ.

ಪಾದಟಿಪ್ಪಣಿ

“ಪ್ರವಾದಿಗಳ ಮಕ್ಕಳು” ಅನ್ನೋ ಮಾತು ಬಹುಶಃ ಪ್ರವಾದಿಗಳಿಗೆ ಕಲಿಸೋ ಶಾಲೆಗೆ ಅಥವಾ ಪ್ರವಾದಿಗಳ ಒಂದು ಸಂಘಕ್ಕೆ ಸೂಚಿಸ್ತಿರಬಹುದು.
ಅಥವಾ “ಪ್ರವಾದಿಯ ಬಟ್ಟೆ.”
ಇಲ್ಲಿ ತಿಳಿಸಿರೋ ಶಕ್ತಿ ದೇವರ ಪವಿತ್ರಶಕ್ತಿ ಅಥವಾ ಎಲೀಯನ ಮನೋಭಾವ ಆಗಿರಬಹುದು.
ಅಥವಾ “ಗಾಳಿ.”
ಬಹುಶಃ, “ಗರ್ಭಸ್ರಾವವಾಗಲಿ.”