ಎರಡನೇ ಅರಸು 24:1-20

  • ಯೆಹೋಯಾಕೀಮನ ದಂಗೆ ಮತ್ತು ಮರಣ (1-7)

  • ಯೆಹೋಯಾಖೀನ ಯೆಹೂದದ ರಾಜ (8, 9)

  • ಬಾಬೆಲಿಗೆ ಗಡಿಪಾರಾದ ಮೊದಲ ಗುಂಪು (10-17)

  • ಚಿದ್ಕೀಯ ಯೆಹೂದದ ರಾಜ, ಅವನ ದಂಗೆ (18-20)

24  ಯೆಹೋಯಾಕೀಮನ ಕಾಲದಲ್ಲಿ ಬಾಬೆಲಿನ ರಾಜ ನೆಬೂಕದ್ನೆಚ್ಚರ+ ಯೆಹೂದದ ಮೇಲೆ ದಾಳಿ ಮಾಡಿದ. ಯೆಹೋಯಾಕೀಮ ಮೂರು ವರ್ಷ ಅವನ ಅಧೀನದಲ್ಲಿದ್ದ. ಆಮೇಲೆ ಅವನು ನೆಬೂಕದ್ನೆಚ್ಚರನ ವಿರುದ್ಧ ತಿರುಗಿಬಿದ್ದ.  ಆಗ ಯೆಹೋವ ಯೆಹೋಯಾಕೀಮನ ವಿರುದ್ಧ ಲೂಟಿಗಾರರ ಗುಂಪುಗಳನ್ನ ಕಳಿಸೋಕೆ ಶುರುಮಾಡಿದನು. ಆ ಗುಂಪುಗಳು ಕಸ್ದೀಯರ,+ ಅರಾಮ್ಯರ, ಮೋವಾಬ್ಯರ, ಅಮ್ಮೋನಿಯರ ಗುಂಪುಗಳಾಗಿದ್ದವು. ಯೆಹೋವ ತನ್ನ ಸೇವಕರಾದ ಪ್ರವಾದಿಗಳ ಮೂಲಕ ಹೇಳಿದ್ದ ಮಾತುಗಳ ಪ್ರಕಾರ+ ಯೆಹೂದವನ್ನ ನಾಶಮಾಡೋಕೆ ಆ ಗುಂಪುಗಳನ್ನ ಕಳಿಸ್ತಾ ಇದ್ದನು.  ಖಂಡಿತ ಯೆಹೋವ ಕೊಟ್ಟ ಆಜ್ಞೆಯಿಂದಾನೇ ಯೆಹೂದಕ್ಕೆ ಈ ಗತಿ ಬಂತು. ಆತನು ಯೆಹೂದವನ್ನ ತನ್ನ ಕಣ್ಮುಂದೆಯಿಂದ ತೊಲಗಿಸಬೇಕಂತ ಹೀಗೆ ಮಾಡಿದ.+ ಯಾಕಂದ್ರೆ ಮನಸ್ಸೆ ತುಂಬ ಪಾಪಗಳನ್ನ ಮಾಡಿದ್ದ.+  ಯೆರೂಸಲೇಮನ್ನ ನಿರಪರಾಧಿಗಳ ರಕ್ತದಿಂದ ತುಂಬಿಸಿಬಿಟ್ಟಿದ್ದ.+ ಅವನು ಸುರಿಸಿದ ನಿರಪರಾಧಿಗಳ ರಕ್ತದಿಂದ ಯೆಹೋವ ಯೆಹೂದವನ್ನ ಕ್ಷಮಿಸೋಕೆ ಇಷ್ಟಪಡಲಿಲ್ಲ.+  ಯೆಹೋಯಾಕೀಮನ ಉಳಿದ ಜೀವನಚರಿತ್ರೆ ಬಗ್ಗೆ, ಅವನು ಮಾಡಿದ ಎಲ್ಲ ಕೆಲಸಗಳ ಬಗ್ಗೆ ಯೆಹೂದದ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಇದೆ.+  ಕೊನೆಗೆ ಯೆಹೋಯಾಕೀಮ ತೀರಿಹೋದ.+ ಅವನ ನಂತ್ರ ಅವನ ಮಗ ಯೆಹೋಯಾಖೀನ ರಾಜನಾದ.  ಈಜಿಪ್ಟಿನ ನಾಲೆಯಿಂದ*+ ಯೂಫ್ರೆಟಿಸ್‌ ನದಿ ತನಕ+ ಈಜಿಪ್ಟಿನ ರಾಜನಿಗೆ ಸೇರಿದ್ದ ಎಲ್ಲವನ್ನ ಬಾಬೆಲಿನ ರಾಜ ವಶ ಮಾಡ್ಕೊಂಡಿದ್ದ.+ ಹಾಗಾಗಿ ಈಜಿಪ್ಟಿನ ರಾಜ ಮುಂದೆ ಯಾವತ್ತೂ ತನ್ನ ಸೇನೆಯನ್ನ ಯಾರ ವಿರುದ್ಧನೂ ಯುದ್ಧ ಮಾಡೋಕೆ ಕಳಿಸಲಿಲ್ಲ.  ಯೆಹೋಯಾಖೀನ+ ರಾಜನಾದಾಗ ಅವನಿಗೆ 18 ವರ್ಷ. ಅವನು ಯೆರೂಸಲೇಮಿಂದ ಮೂರು ತಿಂಗಳು ಆಳಿದ.+ ಅವನ ತಾಯಿ ಹೆಸ್ರು ನೆಹುಷ್ಟಾ. ಅವಳು ಯೆರೂಸಲೇಮಿನ ಎಲ್ನಾಥಾನನ ಮಗಳು.  ಯೆಹೋಯಾಖೀನ ತನ್ನ ತಂದೆ ತರಾನೇ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡ್ತಾ ಹೋದ. 10  ಆ ಸಮಯದಲ್ಲಿ ಬಾಬೆಲಿನ ರಾಜ ನೆಬೂಕದ್ನೆಚ್ಚರನ ಸೇವಕರು ಯೆರೂಸಲೇಮಿನ ವಿರುದ್ಧ ಯುದ್ಧಕ್ಕೆ ಬಂದು ಆ ಪಟ್ಟಣಕ್ಕೆ ಮುತ್ತಿಗೆ ಹಾಕಿದ್ರು.+ 11  ತನ್ನ ಸೇವಕರು ಯೆರೂಸಲೇಮಿಗೆ ಮುತ್ತಿಗೆ ಹಾಕ್ತಿರುವಾಗ ಬಾಬೆಲಿನ ರಾಜ ನೆಬೂಕದ್ನೆಚ್ಚರ ಆ ಪಟ್ಟಣಕ್ಕೆ ಬಂದ. 12  ಯೆಹೂದದ ರಾಜ ಯೆಹೋಯಾಖೀನ ತನ್ನ ತಾಯಿ, ಸೇವಕರು, ಅಧಿಪತಿಗಳು ಮತ್ತು ಆಸ್ಥಾನದ ಅಧಿಕಾರಿಗಳ+ ಜೊತೆ ಬಾಬೆಲಿನ ರಾಜನ ಹತ್ರ ಹೋಗಿ ಶರಣಾದ.+ ಹೀಗೆ ಬಾಬೆಲಿನ ರಾಜ ಆಳ್ತಿದ್ದ ಎಂಟನೇ ವರ್ಷದಲ್ಲಿ ಯೆಹೋಯಾಖೀನನನ್ನ ಕೈದಿಯಾಗಿ ಕರ್ಕೊಂಡು ಹೋದ.+ 13  ಆಮೇಲೆ ನೆಬೂಕದ್ನೆಚ್ಚರ ಯೆಹೋವನ ಆಲಯದಲ್ಲಿದ್ದ ಮತ್ತು ರಾಜನ ಅರಮನೆಯ ಖಜಾನೆಯಲ್ಲಿದ್ದ ಎಲ್ಲ ನಿಕ್ಷೇಪಗಳನ್ನ ತಗೊಂಡ.+ ಇಸ್ರಾಯೇಲ್‌ ರಾಜ ಸೊಲೊಮೋನ ಯೆಹೋವನ ಆಲಯದಲ್ಲಿ ಮಾಡಿಸಿಟ್ಟಿದ್ದ ಎಲ್ಲ ಬಂಗಾರದ ಪಾತ್ರೆಗಳನ್ನ ಅವನು ಚೂರುಚೂರು ಮಾಡಿದ.+ ಇದೆಲ್ಲ ಯೆಹೋವ ಹೇಳಿದ ಹಾಗೇ ನಡಿತು. 14  ನೆಬೂಕದ್ನೆಚ್ಚರ ಯೆರೂಸಲೇಮಲ್ಲಿದ್ದ ಎಲ್ರನ್ನ, ಎಲ್ಲ ಅಧಿಕಾರಿಗಳನ್ನ,+ ಎಲ್ಲ ವೀರ ಸೈನಿಕರನ್ನ, ಪ್ರತಿಯೊಬ್ಬ ಕರಕುಶಲಗಾರನನ್ನ, ಲೋಹದ ಕೆಲಸಗಾರನನ್ನ*+ ಹೀಗೆ 10,000 ಜನ್ರನ್ನ ಬಂಧಿಸಿ ಕರ್ಕೊಂಡು ಹೋದ. ಅವನು ಬಡ ಜನ್ರನ್ನ ಬಿಟ್ಟು ಬೇರೆ ಎಲ್ರನ್ನೂ ಕರ್ಕೊಂಡು ಹೋದ.+ 15  ಆಮೇಲೆ ಅವನು ಯೆಹೋಯಾಖೀನನ್ನ+ ಬಂಧಿಸಿ ಬಾಬೆಲಿಗೆ ಕರ್ಕೊಂಡು ಹೋದ.+ ಅಷ್ಟೇ ಅಲ್ಲ ರಾಜನ ತಾಯಿ, ಹೆಂಡತಿ, ಆಸ್ಥಾನದ ಅಧಿಕಾರಿ, ದೇಶದ ಪ್ರಮುಖ ವ್ಯಕ್ತಿಗಳನ್ನ ಸಹ ಬಂಧಿಸಿ ಯೆರೂಸಲೇಮಿಂದ ಬಾಬೆಲಿಗೆ ಕರ್ಕೊಂಡು ಹೋದ. 16  ಬಾಬೆಲಿನ ರಾಜ ಯೆರೂಸಲೇಮಿನ ಎಲ್ಲ 7,000 ವೀರ ಸೈನಿಕರನ್ನ, ಜೊತೆಗೆ 1,000 ಕರಕುಶಲಗಾರರನ್ನ, ಲೋಹದ ಕೆಲಸಗಾರರನ್ನ* ಬಂಧಿಸಿ ಕರ್ಕೊಂಡು ಹೋದ. ಅವ್ರೆಲ್ಲ ಯುದ್ಧ ಮಾಡೋಕೆ ತರಬೇತಿ ಪಡೆದ ಬಲಿಷ್ಠ ಗಂಡಸ್ರಾಗಿದ್ರು. 17  ಬಾಬೆಲಿನ ರಾಜ ಯೆಹೋಯಾಖೀನನ ಚಿಕ್ಕಪ್ಪ ಮತ್ತನ್ಯನನ್ನ+ ಯೆಹೋಯಾಖೀನನ ಸ್ಥಾನದಲ್ಲಿ ರಾಜನಾಗಿ ಮಾಡಿದ. ಮತ್ತನ್ಯನ ಹೆಸ್ರನ್ನ ಚಿದ್ಕೀಯ+ ಅಂತ ಬದಲಾಯಿಸಿದ. 18  ಚಿದ್ಕೀಯ ರಾಜನಾದಾಗ ಅವನಿಗೆ 21 ವರ್ಷ. ಅವನು ಯೆರೂಸಲೇಮಿಂದ 11 ವರ್ಷ ಆಳಿದ. ಅವನ ತಾಯಿ ಹೆಸ್ರು ಹಮೂಟಲ್‌.+ ಇವಳು ಲಿಬ್ನದ ಯೆರೆಮೀಯನ ಮಗಳು. 19  ಚಿದ್ಕೀಯ ಯೆಹೋಯಾಕೀಮನ ತರಾನೇ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡ್ತಾಹೋದ.+ 20  ಯೆರೂಸಲೇಮಿನ ಮತ್ತು ಯೆಹೂದದ ಜನ್ರು ಹೀಗೆ ಕೆಟ್ಟದನ್ನ ಮಾಡ್ತಾ ಇದ್ದಿದ್ರಿಂದ ಯೆಹೋವ ಅವ್ರ ಮೇಲೆ ತನ್ನ ಕೋಪಾಗ್ನಿ ಸುರಿಸಿದನು. ಕೊನೆಗೆ ಅವರು ತನ್ನ ಕಣ್ಮುಂದೆ ಇರಬಾರದು ಅಂತ ಆತನು ಅವ್ರನ್ನ ಓಡಿಸಿಬಿಟ್ಟನು.+ ಚಿದ್ಕೀಯ ಬಾಬೆಲಿನ ರಾಜನ ವಿರುದ್ಧ ತಿರುಗಿಬಿದ್ದ.+

ಪಾದಟಿಪ್ಪಣಿ

ಬಹುಶಃ, “ಭದ್ರಕೋಟೆ ಕಟ್ಟುವವರು.”
ಬಹುಶಃ, “ಭದ್ರಕೋಟೆ ಕಟ್ಟುವವರು.”