ಎರಡನೇ ಅರಸು 5:1-27

  • ಎಲೀಷ ನಾಮಾನನ ಕುಷ್ಠರೋಗ ವಾಸಿಮಾಡಿದ (1-19)

  • ಅತಿಯಾಸೆಪಟ್ಟ ಗೇಹಜಿಗೆ ಕುಷ್ಠರೋಗ (20-27)

5  ಅರಾಮ್ಯದ ರಾಜನಿಗೆ ನಾಮಾನ ಅನ್ನೋ ಒಬ್ಬ ಸೇನಾಪತಿ ಇದ್ದ. ಅವನ ಮೂಲಕ ಯೆಹೋವ ಅರಾಮ್ಯರಿಗೆ ಜಯ* ಕೊಟ್ಟಿದ್ರಿಂದ ರಾಜನಿಗೆ ಇವನು ತುಂಬ ಪ್ರಾಮುಖ್ಯ ವ್ಯಕ್ತಿ ಆಗಿದ್ದ. ಇವನಿಗೆ ಕುಷ್ಠರೋಗ ಇದ್ರೂ* ಬಲಿಷ್ಠ ಯುದ್ಧವೀರನಾಗಿದ್ದ.  ಅರಾಮ್ಯರು ಇಸ್ರಾಯೇಲ್‌ ದೇಶವನ್ನ ಲೂಟಿ ಮಾಡಿದ ಒಂದು ಸಂದರ್ಭದಲ್ಲಿ ಚಿಕ್ಕ ಹುಡುಗಿಯೊಬ್ಬಳನ್ನ ಕೈದಿಯಾಗಿ ತಗೊಂಡು ಬಂದಿದ್ರು. ಅವಳು ನಾಮಾನನ ಹೆಂಡತಿಯ ದಾಸಿಯಾದಳು.  ಒಮ್ಮೆ ಆ ಹುಡುಗಿ ತನ್ನ ಒಡತಿಗೆ “ನನ್ನ ಒಡೆಯ ಸಮಾರ್ಯದಲ್ಲಿರೋ ಪ್ರವಾದಿ+ ಹತ್ರ ಹೋದ್ರೆ ತುಂಬ ಚೆನ್ನಾಗಿರುತ್ತೆ! ಆ ಪ್ರವಾದಿ ನನ್ನ ಒಡೆಯನ ಕುಷ್ಠರೋಗ ವಾಸಿ ಮಾಡ್ತಾನೆ”+ ಅಂದಳು.  ಇಸ್ರಾಯೇಲಿನ ಹುಡುಗಿ ಹೇಳಿದ ಈ ವಿಷ್ಯನ ಅವನು* ಹೋಗಿ ರಾಜನಿಗೆ ತಿಳಿಸಿದ.  ಅದಕ್ಕೆ ಅರಾಮ್ಯದ ರಾಜ ಅವನಿಗೆ “ನೀನು ಹೋಗು! ನಾನು ಇಸ್ರಾಯೇಲ್‌ ರಾಜನಿಗೆ ಒಂದು ಪತ್ರ ಕಳಿಸ್ತೀನಿ” ಅಂದ. ಆಗ ನಾಮಾನ ಹತ್ತು ತಲಾಂತು* ಬೆಳ್ಳಿ, ಚಿನ್ನದ 6,000 ಶೆಕೆಲ್‌ಗಳನ್ನ ಮತ್ತು ಹತ್ತು ಜೊತೆ ಬಟ್ಟೆ ತಗೊಂಡು ಹೋದ.  ಅವನು ಇಸ್ರಾಯೇಲ್‌ ರಾಜನಿಗೆ ಕೊಟ್ಟ ಪತ್ರದಲ್ಲಿ ಹೀಗೆ ಬರೆಯಲಾಗಿತ್ತು: “ನಾನು ಈ ಪತ್ರದ ಜೊತೆ ನನ್ನ ಸೇವಕ ನಾಮಾನನನ್ನ ಕಳಿಸ್ತಿದ್ದೀನಿ. ನೀನು ಅವನ ಕುಷ್ಠರೋಗ ವಾಸಿಮಾಡು.”  ಇಸ್ರಾಯೇಲ್‌ ರಾಜ ಆ ಪತ್ರ ಓದಿದ ತಕ್ಷಣ ತನ್ನ ಬಟ್ಟೆ ಹರ್ಕೊಂಡು “ರಾಜ ಈ ಮನುಷ್ಯನ ಕುಷ್ಠರೋಗ ವಾಸಿ ಮಾಡೋಕೆ ಇವನನ್ನ ನನ್ನ ಹತ್ರ ಕಳಿಸಿದ್ದಾನಲ್ಲಾ? ಯಾರನ್ನಾದ್ರೂ ಸಾಯಿಸೋಕೆ ಅಥವಾ ಯಾರನ್ನಾದ್ರೂ ಬದುಕಿಸೋಕೆ ನಾನೇನು ದೇವ್ರಾ?+ ನಂಗೊತ್ತು, ಅವನು ನನ್ನ ಹತ್ರ ಜಗಳ ಮಾಡೋಕೇ ಹೀಗೆ ಮಾಡಿದ್ದಾನೆ” ಅಂದ.  ಸತ್ಯ ದೇವರ ಮನುಷ್ಯನಾದ ಎಲೀಷನಿಗೆ ಇಸ್ರಾಯೇಲ್‌ ರಾಜ ತನ್ನ ಬಟ್ಟೆಗಳನ್ನ ಹರ್ಕೊಂಡ ವಿಷ್ಯ ಗೊತ್ತಾದ ತಕ್ಷಣ ಅವನು ರಾಜನಿಗೆ “ನೀನು ಯಾಕೆ ಬಟ್ಟೆ ಹರ್ಕೊಂಡೆ? ಅವನನ್ನ ನನ್ನ ಹತ್ರ ಕಳಿಸು. ಇಸ್ರಾಯೇಲಲ್ಲಿ ಒಬ್ಬ ಪ್ರವಾದಿ ಇದ್ದಾನೆ ಅಂತ ಅವನಿಗೆ ಗೊತ್ತಾಗಲಿ”+ ಅನ್ನೋ ಸಂದೇಶ ಕಳಿಸಿದ.  ಆಗ ನಾಮಾನ ತನ್ನ ಕುದುರೆಗಳ, ಯುದ್ಧ ರಥಗಳ ಜೊತೆ ಬಂದು ಎಲೀಷನ ಮನೆ ಮುಂದೆ ನಿಂತ. 10  ಆದ್ರೆ ಎಲೀಷ ತನ್ನ ಸಂದೇಶವಾಹಕನನ್ನ ಹೊರಗೆ ಕಳಿಸಿ ನಾಮಾನನಿಗೆ ಹೀಗೆ ಹೇಳು ಅಂತ ಆಜ್ಞಾಪಿಸಿದ: “ಹೋಗಿ ಯೋರ್ದನ್‌ ನದಿಯಲ್ಲಿ+ ಏಳು ಸಾರಿ+ ಸ್ನಾನ ಮಾಡು. ಆಗ ನಿನ್ನ ಚರ್ಮ ಮುಂಚಿನ ತರ ಆಗುತ್ತೆ ಮತ್ತು ನೀನು ಶುದ್ಧನಾಗ್ತೀಯ.” 11  ಆ ಮಾತನ್ನ ಕೇಳಿಸ್ಕೊಂಡ ತಕ್ಷಣ ನಾಮಾನನಿಗೆ ತುಂಬ ಸಿಟ್ಟು ಬಂದು ತನ್ನ ಮನೆಗೆ ವಾಪಸ್‌ ಹೋಗ್ತಾ “‘ಎಲೀಷ ಹೊರಗೆ ಬಂದು ನನ್ನ ಮುಂದೆ ನಿಂತು ಅವನ ದೇವರಾದ ಯೆಹೋವನ ಹೆಸ್ರಲ್ಲಿ ಪ್ರಾರ್ಥಿಸಿ ನನ್ನ ಕುಷ್ಠರೋಗದ ಮೇಲೆ ಕೈ ಆಡಿಸಿ ವಾಸಿ ಮಾಡ್ತಾನೆ’ ಅಂದ್ಕೊಂಡಿದ್ದೆ. 12  ಇಸ್ರಾಯೇಲಿನಲ್ಲಿರೋ ಎಲ್ಲ ನದಿಗಳಿಗಿಂತ ದಮಸ್ಕದಲ್ಲಿರೋ+ ಅಬಾನಾ ಮತ್ತು ಪರ್ಪರ್‌ ನದಿಗಳು ಎಷ್ಟೋ ಚೆನ್ನಾಗಿವೆ. ನಾನು ಅಲ್ಲೇ ಸ್ನಾನ ಮಾಡಿ ಶುದ್ಧನಾಗಬಹುದಿತ್ತು” ಅಂತ ಹೇಳಿ ಕೋಪದಿಂದ ಹೋದ. 13  ಅವನ ಸೇವಕರು ಅವನ ಹತ್ರ ಬಂದು “ಒಡೆಯನೇ,* ಪ್ರವಾದಿ ನಿನಗೆ ಯಾವುದಾದ್ರೂ ಕಷ್ಟದ ಕೆಲಸ ಮಾಡೋಕೆ ಹೇಳಿದ್ರೆ ಮಾಡ್ತಿರಲಿಲ್ವಾ? ಹಾಗಿರೋವಾಗ ‘ಸ್ನಾನ ಮಾಡಿ ಶುದ್ಧ ಆಗು’ ಅಂತ ಅವನು ಹೇಳಿದ ಈ ಚಿಕ್ಕ ಕೆಲಸ ನೀನು ಮಾಡಬಹುದಲ್ಲಾ?” ಅಂದ್ರು. 14  ಈ ಮಾತನ್ನ ಕೇಳಿ ನಾಮಾನ ಸತ್ಯ ದೇವರ ಮನುಷ್ಯ ಹೇಳಿದ ಹಾಗೇ ಯೋರ್ದನ್‌ ನದಿಗೆ ಹೋಗಿ ಏಳು ಸಾರಿ ಮುಳುಗಿ ಎದ್ದ.+ ಆಗ ಅವನ ಚರ್ಮ ಚಿಕ್ಕ ಹುಡುಗನ ಚರ್ಮದ ತರ ಆಯ್ತು.+ ಅವನು ಶುದ್ಧನಾದ.+ 15  ಇದಾದ್ಮೇಲೆ ಅವನು ಮತ್ತು ಅವನ ಇಡೀ ಪರಿವಾರದವರು* ಸತ್ಯ ದೇವರ ಮನುಷ್ಯನ ಹತ್ರ ವಾಪಸ್‌ ಹೋಗಿ ಅವನ ಮುಂದೆ ನಿಂತ್ರು.+ ಆಗ ನಾಮಾನ “ಇಸ್ರಾಯೇಲಲ್ಲಿ ಬಿಟ್ಟು ಭೂಮಿ ಮೇಲೆ ಬೇರೆ ಎಲ್ಲೂ ದೇವರು ಇಲ್ಲ+ ಅಂತ ನನಗೆ ಈಗ ಗೊತ್ತಾಯ್ತು. ದಯವಿಟ್ಟು ನಿನ್ನ ಸೇವಕನ ಕೈಯಿಂದ ಈ ಉಡುಗೊರೆಯನ್ನ ಸ್ವೀಕರಿಸು” ಅಂದ. 16  ಆದ್ರೆ ಎಲೀಷ “ನಾನು ಆರಾಧಿಸೋ ಜೀವ ಇರೋ ದೇವರಾದ ಯೆಹೋವನ ಆಣೆ ನಾನು ಇದನ್ನ ಸ್ವೀಕರಿಸಲ್ಲ”+ ಅಂದ. ನಾಮಾನ ಎಷ್ಟೇ ಒತ್ತಾಯ ಮಾಡಿದ್ರೂ ಎಲೀಷ ಅದನ್ನ ಸ್ವೀಕರಿಸಲಿಲ್ಲ. 17  ಕೊನೆಗೆ ನಾಮಾನ “ಸರಿ, ನೀನು ಸ್ವೀಕರಿಸದೆ ಇರೋದಾದ್ರೆ, ದಯವಿಟ್ಟು ನನಗೆ ಎರಡು ಹೇಸರಗತ್ತೆಗಳು ಹೊರುವಷ್ಟು ಮಣ್ಣನ್ನ ಈ ದೇಶದಿಂದ ಕೊಡು. ಯಾಕಂದ್ರೆ ಯೆಹೋವನಿಗಲ್ಲದೇ ನಿನ್ನ ಸೇವಕನಾದ ನಾನು ಬೇರೆ ಯಾವ ದೇವರುಗಳಿಗೂ ಸರ್ವಾಂಗಹೋಮ ಅರ್ಪಣೆಯಾಗಲಿ ಬಲಿಯಾಗಲಿ ಅರ್ಪಿಸಲ್ಲ. 18  ಆದ್ರೆ ಯೆಹೋವ ನಿನ್ನ ಸೇವಕನಾದ ನನ್ನನ್ನ ಈ ಒಂದು ವಿಷ್ಯಕ್ಕೆ ಕ್ಷಮಿಸಲಿ. ಅದೇನಂದ್ರೆ ನನ್ನ ಒಡೆಯ ರಿಮ್ಮೋನನ ಆಲಯದಲ್ಲಿ ನಮಸ್ಕರಿಸೋಕೆ ಹೋಗುವಾಗ ಅವನು ನನ್ನ ಕೈ ಹಿಡಿದು ಬಾಗ್ತಾನೆ. ಹಾಗಾಗಿ ನಾನು ಸಹ ರಿಮ್ಮೋನ್‌ ಆಲಯದಲ್ಲಿ ಬಾಗಬೇಕಾಗುತ್ತೆ. ಇದಕ್ಕಾಗಿ ನಿನ್ನ ಸೇವಕನನ್ನ ಯೆಹೋವ ದಯವಿಟ್ಟು ಕ್ಷಮಿಸಲಿ” ಅಂದ. 19  ಆಗ ಎಲೀಷ ಅವನಿಗೆ “ಸಮಾಧಾನದಿಂದ ಹೋಗು” ಅಂದ. ನಾಮಾನ ಅಲ್ಲಿಂದ ಸ್ವಲ್ಪ ದೂರ ಹೋದಾಗ 20  ಸತ್ಯ ದೇವರ ಮನುಷ್ಯನಾದ+ ಎಲೀಷನ ಸೇವಕ ಗೇಹಜಿ+ ತನ್ನ ಮನಸ್ಸಲ್ಲಿ ‘ಅರಾಮ್ಯನಾದ ನಾಮಾನ+ ತಂದಿದ್ದನ್ನ ಸ್ವೀಕರಿಸದೆ ನನ್ನ ಒಡೆಯ ಅವನನ್ನ ವಾಪಸ್‌ ಕಳಿಸಿದ್ದಾನೆ. ಯೆಹೋವನ ಆಣೆ, ನಾನು ಅವನ ಹಿಂದೆ ಓಡಿಹೋಗಿ ಅವನ ಕೈಯಿಂದ ಏನಾದ್ರೂ ತಗೊಂಡು ಬರ್ತಿನಿ’ ಅಂದ್ಕೊಂಡ. 21  ಹಾಗಾಗಿ ಗೇಹಜಿ ನಾಮಾನನನ್ನ ಭೇಟಿಯಾಗೋಕೆ ಓಡಿಹೋದ. ತನ್ನ ಹಿಂದೆ ಯಾರೋ ಓಡಿ ಬರ್ತಿರೋದನ್ನ ನೋಡಿ ನಾಮಾನ ರಥದಿಂದ ಕೆಳಗೆ ಇಳಿದ. ಅವನು ಗೇಹಜಿಗೆ “ಎಲ್ಲ ಕ್ಷೇಮನಾ?” ಅಂತ ಕೇಳಿದ. 22  ಅದಕ್ಕೆ ಅವನು “ಎಲ್ಲ ಕ್ಷೇಮ. ನನ್ನ ಒಡೆಯ ಹೀಗೆ ಹೇಳಿ ಕಳಿಸಿದ್ದಾನೆ: ‘ಈಗಷ್ಟೇ ಇಬ್ರು ಯುವ ಗಂಡಸರು ನನ್ನ ಹತ್ರ ಬಂದಿದ್ದಾರೆ. ಅವರು ಎಫ್ರಾಯೀಮಿನ ಬೆಟ್ಟದ ಪ್ರದೇಶದಲ್ಲಿರೋ ಪ್ರವಾದಿಗಳ ಗಂಡು ಮಕ್ಕಳು. ದಯವಿಟ್ಟು ಅವ್ರಿಗಾಗಿ ಒಂದು ತಲಾಂತು ಬೆಳ್ಳಿ ಮತ್ತು ಎರಡು ಜೊತೆ ಬಟ್ಟೆ ಕೊಡು’”+ ಅಂದ. 23  ಆಗ ನಾಮಾನ “ಅದಕ್ಕೇನಂತೆ ಎರಡು ತಲಾಂತು ಬೆಳ್ಳಿ ತಗೋ” ಅಂದ. ನಾಮಾನ ಅವನಿಗೆ ಒತ್ತಾಯ ಮಾಡಿ+ ಎರಡು ತಲಾಂತು ಬೆಳ್ಳಿ ಮತ್ತು ಎರಡು ಜೊತೆ ಬಟ್ಟೆಗಳನ್ನ ಎರಡು ಚೀಲದಲ್ಲಿ ಹಾಕಿ ತನ್ನ ಇಬ್ರು ಸೇವಕರಿಗೆ ಕೊಟ್ಟ. ಅವರು ಅದನ್ನ ಹೊತ್ಕೊಂಡು ಗೇಹಜಿಯ ಮುಂದೆಮುಂದೆ ನಡೆದ್ರು. 24  ಗೇಹಜಿ ಓಫೇಲಿಗೆ* ಬಂದು ತಲುಪಿದಾಗ ಸೇವಕರ ಕೈಯಿಂದ ಆ ಚೀಲಗಳನ್ನ ತಗೊಂಡು ಮನೆಯಲ್ಲಿಟ್ಟು ಅವ್ರನ್ನ ಹೋಗೋಕೆ ಹೇಳಿದ. ಅವರು ಹೋದ ಮೇಲೆ 25  ಗೇಹಜಿ ತನ್ನ ಒಡೆಯನ ಹತ್ರ ಬಂದು ನಿಂತ. ಆಗ ಎಲೀಷ ಅವನಿಗೆ “ಎಲ್ಲಿಂದ ಬರ್ತಿದ್ದೀಯ ಗೇಹಜಿ?” ಅಂತ ಕೇಳಿದ. ಅದಕ್ಕೆ ಗೇಹಜಿ “ನಿನ್ನ ಸೇವಕನಾದ ನಾನು ಎಲ್ಲೂ ಹೋಗಲಿಲ್ಲ”+ ಅಂದ. 26  ಆಗ ಎಲೀಷ ಅವನಿಗೆ “ನೀನು ಅವನ ಹಿಂದೆ ಹೋಗಿದ್ದು, ಅವನು ನಿನ್ನನ್ನ ಭೇಟಿಯಾಗೋಕೆ ರಥದಿಂದ ಇಳಿದದ್ದು ನಂಗೊತ್ತಿಲ್ಲ ಅಂದ್ಕೊಂಡಿದ್ದೀಯಾ? ಬೆಳ್ಳಿ, ಬಟ್ಟೆ, ಆಲಿವ್‌ ತೋಟ, ದ್ರಾಕ್ಷಿತೋಟ, ಕುರಿದನ, ದಾಸ ದಾಸಿಯರಾಗಲಿ ತಗೊಳ್ಳೋ ಸಮಯ ಇದಾ?+ 27  ಈಗ ನಾಮಾನನ ಕುಷ್ಠ+ ನಿನಗೆ ಬರುತ್ತೆ. ಅದು ನಿನ್ನ ವಂಶದವರಿಗೆ ತಲತಲಾಂತರದ ತನಕ ಇರುತ್ತೆ” ಅಂದ. ಹೀಗೆ ಹೇಳಿದ ತಕ್ಷಣ ಗೇಹಜಿಯ ಚರ್ಮ ಹಿಮದ ತರ ಬೆಳ್ಳಗಾಯ್ತು.+ ಹಾಗಾಗಿ ಅವನು ಅಲ್ಲಿಂದ ಹೋದ.

ಪಾದಟಿಪ್ಪಣಿ

ಅಥವಾ “ರಕ್ಷಣೆ.”
ಅಥವಾ “ಚರ್ಮದ ರೋಗ ಇದ್ರೂ.”
ಬಹುಶಃ ನಾಮಾನ.
ಒಂದು ತಲಾಂತು ಅಂದ್ರೆ 34.2 ಕೆ.ಜಿ. ಪರಿಶಿಷ್ಟ ಬಿ14 ನೋಡಿ.
ಅಕ್ಷ. “ತಂದೆಯೇ.”
ಅಕ್ಷ. “ಪಾಳೆಯ.”
ಸಮಾರ್ಯದ ಒಂದು ಸ್ಥಳ, ಬಹುಶಃ ಅದು ಒಂದು ಬೆಟ್ಟ ಅಥವಾ ಕೋಟೆ ಆಗಿರಬಹುದು.