ಎರಡನೇ ಅರಸು 7:1-20

  • ಬರ ಕೊನೆಯಾಗುತ್ತೆ ಅಂತ ಎಲೀಷ ಹೇಳಿದ (1, 2)

  • ಅರಾಮ್ಯರು ಬಿಟ್ಟುಹೋಗಿದ್ದ ಪಾಳೆಯದಲ್ಲಿ ಆಹಾರ ಸಿಕ್ತು (3-15)

  • ಎಲೀಷ ಹೇಳಿದ ಮಾತು ನಿಜ ಆಯ್ತು (16-20)

7  ಆಗ ಎಲೀಷ “ಯೆಹೋವನ ಸಂದೇಶ ಕೇಳಿ. ಯೆಹೋವ ಹೀಗೆ ಹೇಳ್ತಾನೆ: ‘ನಾಳೆ ಇಷ್ಟು ಹೊತ್ತಿಗೆ ಸಮಾರ್ಯದ ಬಾಗಿಲಲ್ಲಿ* ಒಂದು ಸೆಯಾ* ಅಳತೆಯ ನುಣ್ಣಗಿನ ಹಿಟ್ಟು ಒಂದು ಶೆಕೆಲಿಗೆ* ಮತ್ತು ಎರಡು ಸೆಯಾ ಅಳತೆಯ ಬಾರ್ಲಿ* ಒಂದು ಶೆಕೆಲಿಗೆ ಸಿಗುತ್ತೆ’”+ ಅಂದ.  ಆಗ ರಾಜ ನಂಬ್ತಿದ್ದ ಒಬ್ಬ ಅಧಿಕಾರಿ ಸತ್ಯ ದೇವರ ಮನುಷ್ಯನಿಗೆ “ಯೆಹೋವ ಆಕಾಶದಿಂದ ಪ್ರವಾಹ ಬಾಗಿಲುಗಳನ್ನ ತೆರೆದ್ರೂ ಇದು ಸಾಧ್ಯ ಇಲ್ಲ!”+ ಅಂದ. ಅದಕ್ಕೆ ಎಲೀಷ “ನೀನು ನಿನ್ನ ಕಣ್ಣಾರೆ ಅದನ್ನ ನೋಡ್ತೀಯ,+ ಆದ್ರೆ ತಿನ್ನಲ್ಲ”+ ಅಂದ.  ಪಟ್ಟಣದ ಬಾಗಿಲ ಹತ್ರ ನಾಲ್ಕು ಕುಷ್ಠರೋಗಿಗಳು ಇದ್ರು.+ ಅವರು ಒಬ್ಬರಿಗೊಬ್ರು “ಸಾಯೋ ತನಕ ನಾವು ಇಲ್ಲೇ ಯಾಕೆ ಕೂತಿರಬೇಕು?  ಇಲ್ಲಿದ್ರೂ ಸಾಯ್ತೀವಿ, ಪಟ್ಟಣದಲ್ಲಿ ಬರಗಾಲ ಇರೋದ್ರಿಂದ+ ಪಟ್ಟಣದ ಒಳಗೆ ಹೋದ್ರೂ ಸಾಯ್ತೀವಿ. ಹಾಗಾಗಿ ಬನ್ನಿ, ಅರಾಮ್ಯರ ಪಾಳೆಯಕ್ಕೆ ಹೋಗೋಣ. ಅವರು ನಮ್ಮನ್ನ ಸಾಯಿಸದಿದ್ರೆ ನಾವು ಅಲ್ಲಿ ಇರೋಣ, ಅವರು ನಮ್ಮನ್ನ ಸಾಯಿಸಿದ್ರೆ ಸಾಯಿಸ್ಲಿ” ಅಂತ ಮಾತಾಡ್ಕೊಂಡ್ರು.  ಹಾಗಾಗಿ ಅವರು ಸಂಜೆ ಕತ್ತಲಾದ ಮೇಲೆ ಎದ್ದು ಅರಾಮ್ಯರ ಪಾಳೆಯಕ್ಕೆ ಹೊರಟ್ರು. ಅವರು ಪಾಳೆಯದ ಅಂಚಿಗೆ ಬಂದಾಗ ಅಲ್ಲಿ ಯಾರೂ ಇರಲಿಲ್ಲ.  ಯಾಕಂದ್ರೆ ಯೆಹೋವ ಅರಾಮ್ಯರ ಪಾಳೆಯದ ತನಕ ಯುದ್ಧರಥಗಳು, ಕುದುರೆಗಳು ಇರುವಂಥ ಒಂದು ದೊಡ್ಡ ಸೈನ್ಯದ ಶಬ್ದ ಕೇಳೋ ತರ ಮಾಡಿದ್ದನು.+ ಹಾಗಾಗಿ ಅವರು ಒಬ್ಬರಿಗೊಬ್ರು “ಇಸ್ರಾಯೇಲಿನ ರಾಜ ಹಿತ್ತಿಯರ ರಾಜರಿಗೆ ಮತ್ತು ಈಜಿಪ್ಟಿನ ರಾಜರಿಗೆ ಹಣ ಕೊಟ್ಟು ನಮ್ಮ ವಿರುದ್ಧ ಯುದ್ಧ ಮಾಡೋಕೆ ಕರ್ಕೊಂಡು ಬಂದಿದ್ದಾನೆ ಅನ್ಸುತ್ತೆ!” ಅಂತ ಮಾತಾಡ್ಕೊಂಡ್ರು.  ಹಾಗಾಗಿ ಅವರು ಸಾಯಂಕಾಲ ಕತ್ತಲಾದ ತಕ್ಷಣ ತಮ್ಮ ಜೀವ ಉಳಿಸ್ಕೊಳ್ಳೋಕೆ ಓಡಿಹೋದ್ರು. ತಮ್ಮ ಡೇರೆಗಳನ್ನ, ಕುದುರೆಗಳನ್ನ, ಕತ್ತೆಗಳನ್ನ, ಇಡೀ ಪಾಳೆಯವನ್ನ ಹೇಗಿತ್ತೋ ಹಾಗೇ ಬಿಟ್ಟುಹೋದ್ರು.  ಆ ಕುಷ್ಠರೋಗಿಗಳು ಪಾಳೆಯದ ಅಂಚಿಗೆ ತಲುಪಿದಾಗ ಒಂದು ಡೇರೆ ಒಳಗೆ ಹೋಗಿ ತಿಂದು ಕುಡಿಯೋಕೆ ಶುರು ಮಾಡಿದ್ರು. ಆಮೇಲೆ ಅಲ್ಲಿದ್ದ ಬೆಳ್ಳಿ, ಚಿನ್ನ ಮತ್ತು ಬಟ್ಟೆಗಳನ್ನ ತಗೊಂಡು ಹೋಗಿ ಬಚ್ಚಿಟ್ರು. ಅವರು ವಾಪಸ್‌ ಬಂದು ಇನ್ನೊಂದು ಡೇರೆ ಒಳಗೆ ಹೋದ್ರು. ಅಲ್ಲಿದ್ದ ವಸ್ತುಗಳನ್ನ ತಗೊಂಡು ಹೋಗಿ ಅವುಗಳನ್ನೂ ಬಚ್ಚಿಟ್ರು.  ಕೊನೆಗೆ ಅವರು “ನಾವು ಮಾಡ್ತಿರೋದು ಸರಿಯಲ್ಲ. ಈ ಸಿಹಿಸುದ್ದಿಯನ್ನ ನಾವು ಬೇರೆಯವ್ರಿಗೆ ಹೇಳಬೇಕು! ನಾವು ಹಿಂಜರಿದು ಬೆಳಗಾಗೋ ತನಕ ಹೇಳದೆ ಇದ್ರೆ ನಾವು ಶಿಕ್ಷೆಗೆ ಯೋಗ್ಯರು. ಹಾಗಾಗಿ ಬನ್ನಿ, ರಾಜನ ಅರಮನೆಗೆ ಹೋಗಿ ವಿಷ್ಯ ತಿಳಿಸೋಣ” ಅಂತ ಮಾತಾಡ್ಕೊಂಡ್ರು. 10  ಅವರು ಹೋಗಿ ಪಟ್ಟಣದ ಬಾಗಿಲು ಕಾಯೋರನ್ನ ಕರೆದು “ನಾವು ಅರಾಮ್ಯರ ಪಾಳೆಯಕ್ಕೆ ಹೋಗಿದ್ವಿ. ಆದ್ರೆ ಅಲ್ಲಿ ಯಾರೂ ಇರಲಿಲ್ಲ. ಯಾರ ಶಬ್ದನೂ ಕೇಳಿಸಲಿಲ್ಲ. ಅಲ್ಲಿ ಬರೀ ಕುದುರೆಗಳು, ಕತ್ತೆಗಳು ಇದ್ವು. ಅವರು ತಮ್ಮ ಡೇರೆಗಳನ್ನ ಹಾಗೇ ಬಿಟ್ಟು ಹೋಗಿದ್ದಾರೆ” ಅಂತ ಹೇಳಿದ್ರು. 11  ತಕ್ಷಣ ಬಾಗಿಲು ಕಾಯೋರು ರಾಜನ ಅರಮನೆಯಲ್ಲಿ ಇದ್ದವ್ರನ್ನ ಕೂಗಿ ಅವ್ರಿಗೆ ಈ ವಿಷ್ಯ ಮುಟ್ಟಿಸಿದ್ರು. 12  ರಾಜ ರಾತ್ರೋರಾತ್ರಿ ಎದ್ದು ತನ್ನ ಸೇವಕರಿಗೆ “ಅರಾಮ್ಯರು ನಮ್ಮ ವಿರುದ್ಧ ಸಂಚು ಮಾಡಿದ್ದಾರೆ. ನಾವು ಹಸಿವಿಂದ ಸಾಯ್ತಿದ್ದೀವಿ ಅಂತ ಅವ್ರಿಗೆ ಗೊತ್ತು.+ ಹಾಗಾಗಿ ಅವರು ತಮ್ಮ ಪಾಳೆಯ ಬಿಟ್ಟು ಹೊಲದಲ್ಲಿ ಬಚ್ಚಿಟ್ಕೊಂಡು ‘ಇಸ್ರಾಯೇಲ್ಯರು ಪಟ್ಟಣ ಬಿಟ್ಟು ಹೊರಗೆ ಬರ್ತಾರೆ. ಆಗ ನಾವು ಅವ್ರನ್ನ ಜೀವಂತವಾಗಿ ಹಿಡಿಯೋಣ. ಆಮೇಲೆ ಪಟ್ಟಣದ ಒಳಗೆ ಹೋಗೋಣ’ ಅಂತ ಮಾತಾಡ್ಕೊಂಡಿದ್ದಾರೆ”+ ಅಂದ. 13  ಆಗ ರಾಜನ ಸೇವಕರಲ್ಲಿ ಒಬ್ಬ “ರಾಜನಲ್ಲಿ ನನ್ನದೊಂದು ವಿನಂತಿ. ಅದೇನಂದ್ರೆ ಪಟ್ಟಣದಲ್ಲಿ ಉಳಿದಿರೋ ಐದು ಕುದುರೆಗಳನ್ನ ತಗೊಂಡು ಕೆಲವರು ಅಲ್ಲಿಗೆ ಹೋಗಿಬರಬೇಕಂತ ಅಪ್ಪಣೆ ಕೊಡು. ಅವರು ಹೋಗಿ ನಿಜವಾಗ್ಲೂ ಅಲ್ಲಿ ಏನು ನಡಿತಿದೆ ಅಂತ ನೋಡಿ ಬರಲಿ. ಅವರು ಅಲ್ಲಿ ಹೋಗಿ ಸತ್ರೂ ಪರವಾಗಿಲ್ಲ. ಯಾಕಂದ್ರೆ ಅವರು ಇಲ್ಲಿದ್ರೂ ಇಸ್ರಾಯೇಲ್ಯರಾಗಿರೋ ನಮ್ಮೆಲ್ಲರ ಜೊತೆ ಸತ್ತೇ ಸಾಯ್ತಾರೆ. ಹಾಗಾಗಿ ಅವ್ರನ್ನ ಕಳಿಸಿ ನೋಡೋಣ” ಅಂದ. 14  ಆಗ ಕೆಲವು ಸೇವಕರು ಕುದುರೆಗಳನ್ನ ಎರಡು ರಥಗಳಿಗೆ ಕಟ್ಟಿ ತಯಾರಾದರು. ರಾಜ ಅವ್ರಿಗೆ “ಹೋಗಿ ನೋಡ್ಕೊಂಡು ಬನ್ನಿ” ಅಂತ ಹೇಳಿ ಅರಾಮ್ಯರ ಪಾಳೆಯಕ್ಕೆ ಕಳಿಸಿದ. 15  ಅವರು ಅರಾಮ್ಯರನ್ನ ಹುಡುಕ್ತಾ ಯೋರ್ದನಿನ ತನಕ ಹೋದ್ರು. ಅರಾಮ್ಯರು ಭಯದಿಂದ ಓಡಿಹೋಗುವಾಗ ದಾರಿಯುದ್ಧಕ್ಕೂ ಬಟ್ಟೆಗಳನ್ನ ಮತ್ತು ಪಾತ್ರೆಗಳನ್ನ ಬಿಸಾಡಿ ಹೋಗಿದ್ರು. ಸಂದೇಶವಾಹಕರು ವಾಪಸ್‌ ಬಂದು ಈ ವಿಷ್ಯ ರಾಜನಿಗೆ ಹೇಳಿದ್ರು. 16  ಇಸ್ರಾಯೇಲ್ಯರು ತಮ್ಮ ಪಟ್ಟಣದಿಂದ ಹೊರಗೆ ಬಂದು ಅರಾಮ್ಯರ ಪಾಳೆಯಕ್ಕೆ ನುಗ್ಗಿ ಅದನ್ನ ಲೂಟಿ ಮಾಡಿದ್ರು. ಹಾಗಾಗಿ ಯೆಹೋವ ಹೇಳಿದ ತರಾನೇ ಒಂದು ಸೆಯಾ ಅಳತೆಯ ನುಣ್ಣಗಿನ ಹಿಟ್ಟು ಒಂದು ಶೆಕೆಲಿಗೆ ಮತ್ತು ಎರಡು ಸೆಯಾ ಅಳತೆಯ ಬಾರ್ಲಿ ಒಂದು ಶೆಕೆಲಿಗೆ ಸಿಕ್ತು.+ 17  ರಾಜ ತಾನು ನಂಬ್ತಿದ್ದ ಆ ಅಧಿಕಾರಿಯನ್ನ ಪಟ್ಟಣದ ಬಾಗಿಲ ಅಧಿಕಾರಿಯಾಗಿ ನೇಮಿಸಿದ. ಆದ್ರೆ ಆ ಅಧಿಕಾರಿ ಜನ್ರ ಕಾಲ್ತುಳಿತಕ್ಕೆ ಸಿಕ್ಕಿ ಪಟ್ಟಣದ ಬಾಗಿಲಲ್ಲೇ ಸತ್ತ. ಹೀಗೆ ರಾಜ ಸತ್ಯ ದೇವರ ಮನುಷ್ಯನ ಹತ್ರ ಹೋದಾಗ ಅವನು ಏನು ಹೇಳಿದ್ದನೋ ಅದು ಆಯ್ತು. 18  ಅಷ್ಟೇ ಅಲ್ಲ ಸತ್ಯ ದೇವರ ಮನುಷ್ಯ ರಾಜನಿಗೆ “ನಾಳೆ ಇಷ್ಟು ಹೊತ್ತಿಗೆ ಸಮಾರ್ಯದ ಪ್ರವೇಶ ಬಾಗಿಲಲ್ಲಿ ಎರಡು ಸೆಯಾ ಅಳತೆಯ ಬಾರ್ಲಿ ಒಂದು ಶೆಕೆಲಿಗೆ ಮತ್ತು ಒಂದು ಸೆಯಾ ಅಳತೆಯ ನುಣ್ಣಗಿನ ಹಿಟ್ಟು ಒಂದು ಶೆಕೆಲಿಗೆ ಸಿಗುತ್ತೆ” ಅಂತ ಹೇಳಿದ್ದ. ಆ ಮಾತು ಕೂಡ ನಿಜ ಆಯ್ತು.+ 19  ಸತ್ಯ ದೇವರ ಮನುಷ್ಯನ ಆ ಮಾತು ಕೇಳಿ ರಾಜ ನಂಬಿದ್ದ ಅಧಿಕಾರಿ “ಯೆಹೋವ ಆಕಾಶದಿಂದ ಪ್ರವಾಹ ಬಾಗಿಲುಗಳನ್ನ ತೆರೆದ್ರೂ ಇದು ಸಾಧ್ಯ ಇಲ್ಲ!” ಅಂದಿದ್ದ. ಆಗ ಎಲೀಷ ಅವನಿಗೆ “ನೀನು ನಿನ್ನ ಕಣ್ಣಾರೆ ಅದನ್ನ ನೋಡ್ತೀಯ, ಆದ್ರೆ ತಿನ್ನಲ್ಲ” ಅಂತ ಹೇಳಿದ್ದ. 20  ಎಲೀಷ ಹೇಳಿದ ಮಾತು ನಿಜ ಆಯ್ತು. ಆ ಅಧಿಕಾರಿ ಜನ್ರ ಕಾಲ್ತುಳಿತಕ್ಕೆ ಸಿಕ್ಕಿ ಬಾಗಿಲಲ್ಲಿ ಸತ್ತ.

ಪಾದಟಿಪ್ಪಣಿ

ಅಥವಾ “ಮಾರುಕಟ್ಟೆಗಳಲ್ಲಿ.”
ಒಂದು ಸೆಯಾ=7.33 ಲೀ. ಪರಿಶಿಷ್ಟ ಬಿ14 ನೋಡಿ.
ಒಂದು ಶೆಕೆಲ್‌=11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಅಥವಾ “ಜವೆಗೋದಿ.”