ಎರಡನೇ ಅರಸು 8:1-29

  • ಶೂನೇಮಿನ ಸ್ತ್ರೀಗೆ ಆಸ್ತಿ ವಾಪಸ್‌ (1-6)

  • ಎಲೀಷ, ಬೆನ್ಹದದ, ಹಜಾಯೇಲ (7-15)

  • ಯೆಹೋರಾಮ, ಯೆಹೂದದ ರಾಜ (16-24)

  • ಅಹಜ್ಯ, ಯೆಹೂದದ ರಾಜ (25-29)

8  ಎಲೀಷ ಈ ಹಿಂದೆ ಬದುಕಿಸಿದ್ದ+ ಆ ಹುಡುಗನ ತಾಯಿಗೆ “ನೀನು ನಿನ್ನ ಪರಿವಾರದ ಜೊತೆ ಈ ದೇಶ ಬಿಟ್ಟು ಹೋಗು. ನಿನಗೆ ಎಲ್ಲಿ ವಾಸಿಸೋಕೆ ಆಗುತ್ತೋ ಅಲ್ಲಿಗೆ ಹೋಗಿ ವಿದೇಶಿ ತರ ಜೀವನ ಮಾಡು. ಯಾಕಂದ್ರೆ ಈ ದೇಶದ ಮೇಲೆ ಏಳು ವರ್ಷ ಬರಗಾಲ ಬರುತ್ತೆ ಅಂತ ಯೆಹೋವ ಹೇಳಿದ್ದಾನೆ”+ ಅಂದ.  ಹಾಗಾಗಿ ಆ ಸ್ತ್ರೀ ಸತ್ಯ ದೇವರ ಮನುಷ್ಯ ಹೇಳಿದ ಹಾಗೇ ಮಾಡಿದಳು. ಅವಳು ತನ್ನ ಪರಿವಾರದ ಜೊತೆ ಫಿಲಿಷ್ಟಿಯರ+ ದೇಶಕ್ಕೆ ಹೋಗಿ ಏಳು ವರ್ಷ ಅಲ್ಲೇ ಇದ್ದಳು.  ಏಳು ವರ್ಷ ಕಳೆದ ಮೇಲೆ ಆ ಸ್ತ್ರೀ ಫಿಲಿಷ್ಟಿಯರ ದೇಶದಿಂದ ತನ್ನ ದೇಶಕ್ಕೆ ವಾಪಸ್‌ ಬಂದಳು. ತನ್ನ ಹೊಲ-ಮನೆ ವಾಪಸ್‌ ತನಗೆ ಕೊಡಿಸಬೇಕಂತ ಕೇಳೋಕೆ ರಾಜನ ಹತ್ರ ಹೋದಳು.  ಆ ಸಮಯದಲ್ಲಿ ರಾಜ ಸತ್ಯ ದೇವರ ಮನುಷ್ಯನ ಸೇವಕ ಗೇಹಜಿಗೆ “ದಯವಿಟ್ಟು ಎಲೀಷ ಮಾಡಿದ ಅದ್ಭುತಗಳ ಬಗ್ಗೆ ನೀನು ನನಗೆ ಹೇಳು”+ ಅಂದ.  ಗೇಹಜಿ ರಾಜನಿಗೆ ಎಲೀಷ ಒಬ್ಬ ಹುಡುಗನನ್ನ ಹೇಗೆ ಬದುಕಿಸಿದ+ ಅಂತ ವಿವರಿಸ್ತಾ ಇದ್ದ. ಅದೇ ಸಮಯಕ್ಕೆ ಎಲೀಷ ಬದುಕಿಸಿದ್ದ ಆ ಹುಡುಗನ ತಾಯಿ ತನ್ನ ಹೊಲ-ಮನೆಗಾಗಿ ಕೇಳೋಕೆ ರಾಜನ ಹತ್ರ ಬಂದಳು.+ ಅವಳನ್ನ ನೋಡಿದ ತಕ್ಷಣ ಗೇಹಜಿ ರಾಜನಿಗೆ “ನನ್ನ ಒಡೆಯನಾದ ರಾಜನೇ, ಇವಳೇ ಆ ಸ್ತ್ರೀ. ಇವನೇ ಅವಳ ಮಗ. ಎಲೀಷ ಬದುಕಿಸಿದ್ದು ಈ ಹುಡುಗನನ್ನೇ” ಅಂದ.  ಆಗ ರಾಜ ಆ ಸ್ತ್ರೀಗೆ ನಡೆದ ವಿಷ್ಯ ತಿಳಿಸೋಕೆ ಹೇಳಿದ. ಆಮೇಲೆ ರಾಜ ತನ್ನ ಆಸ್ಥಾನದ ಒಬ್ಬ ಅಧಿಕಾರಿಗೆ ಅವಳ ವಿಷ್ಯನ ವಹಿಸ್ಕೊಟ್ಟು “ಇವಳಿಗೆ ಸೇರಿದ ಎಲ್ಲ ಆಸ್ತಿನ ವಾಪಸ್‌ ಇವಳಿಗೇ ಬರೋ ತರ ಮಾಡು. ಇವಳು ಈ ದೇಶ ಬಿಟ್ಟುಹೋದಾಗಿಂದ ಇಲ್ಲಿ ತನಕ ಇವಳ ಹೊಲದಲ್ಲಿ ಬೆಳೆದ ಫಸಲಿನ ಆದಾಯ ಇವಳಿಗೆ ಸಿಗೋ ತರ ನೋಡ್ಕೊ” ಅಂದ.  ಅರಾಮ್ಯರ ರಾಜ ಬೆನ್ಹದದ+ ಕಾಯಿಲೆ ಬಿದ್ದಿದ್ದಾಗ ಎಲೀಷ ದಮಸ್ಕಕ್ಕೆ+ ಬಂದ. ಹಾಗಾಗಿ “ಸತ್ಯ ದೇವರ ಮನುಷ್ಯ+ ಇಲ್ಲಿ ಬಂದಿದ್ದಾನೆ” ಅನ್ನೋ ಸುದ್ದಿಯನ್ನ ರಾಜನಿಗೆ ಮುಟ್ಟಿಸಲಾಯ್ತು.  ಅದಕ್ಕೆ ರಾಜ ಹಜಾಯೇಲನಿಗೆ+ “ನೀನು ಉಡುಗೊರೆ ತಗೊಂಡು ಸತ್ಯ ದೇವರ ಮನುಷ್ಯನ+ ಹತ್ರ ಹೋಗು. ನಾನು ಮತ್ತೆ ಚೇತರಿಸ್ಕೊಳ್ತೀನಾ? ಅಂತ ಯೆಹೋವನ ಹತ್ರ ವಿಚಾರಿಸೋಕೆ ಅವನನ್ನ ಕೇಳ್ಕೊ” ಅಂದ.  ಹಾಗಾಗಿ ಹಜಾಯೇಲ ದಮಸ್ಕದ ಎಲ್ಲ ರೀತಿಯ ಶ್ರೇಷ್ಠ ವಸ್ತುಗಳನ್ನ 40 ಒಂಟೆಗಳ ಮೇಲೆ ಹೊರಿಸಿ ಅದನ್ನ ಉಡುಗೊರೆಯಾಗಿ ತಗೊಂಡು ಎಲೀಷನನ್ನ ಭೇಟಿ ಮಾಡೋಕೆ ಹೊರಟ. ಅವನು ಬಂದು ಎಲೀಷನ ಮುಂದೆ ನಿಂತ್ಕೊಂಡು “ನಿನ್ನ ಸೇವಕನಾದ ಅರಾಮ್ಯರ ರಾಜ ಬೆನ್ಹದದ ನನ್ನನ್ನ ನಿನ್ನ ಹತ್ರ ಕಳಿಸಿದ್ದಾನೆ. ಅವನು ಚೇತರಿಸ್ಕೊಳ್ತಾನಾ ಇಲ್ವಾ ಅಂತ ನಿನ್ನ ಹತ್ರ ಕೇಳ್ಕೊಂಡು ಬರೋಕೆ ಹೇಳಿದ್ದಾನೆ” ಅಂದ. 10  ಅದಕ್ಕೆ ಎಲೀಷ “ನೀನು ಹೋಗಿ ಅವನು ಖಂಡಿತ ಚೇತರಿಸ್ಕೊಳ್ತಾನೆ ಅಂತ ಹೇಳು. ಆದ್ರೆ ಅವನು ಖಂಡಿತ ಸತ್ತು ಹೋಗ್ತಾನೆ ಅಂತ ಯೆಹೋವ ನನಗೆ ಹೇಳಿದ್ದಾನೆ”+ ಅಂದ. 11  ಆಮೇಲೆ ಹಜಾಯೇಲನಿಗೆ ಮುಜುಗರ ಆಗೋ ತನಕ ಎಲೀಷ ಅವನನ್ನೇ ಗುರಾಯಿಸಿದ. ಇದಾದ್ಮೇಲೆ ಸತ್ಯ ದೇವರ ಮನುಷ್ಯ ಅಳೋಕೆ ಶುರುಮಾಡಿದ. 12  ಆಗ ಹಜಾಯೇಲ “ನನ್ನ ಒಡೆಯನೇ ಯಾಕೆ ಅಳ್ತಿದ್ದೀಯ?” ಅಂತ ಕೇಳಿದ. ಅದಕ್ಕೆ ಅವನು “ಯಾಕಂದ್ರೆ ನೀನು ಇಸ್ರಾಯೇಲ್‌ ಜನ್ರಿಗೆ ಏನೆಲ್ಲ ಹಾನಿ ಮಾಡ್ತೀಯ ಅಂತ ನಂಗೊತ್ತು.+ ನೀನು ಭದ್ರ ಕೋಟೆಗಳಿರೋ ಅವ್ರ ಪಟ್ಟಣಗಳಿಗೆ ಬೆಂಕಿ ಹಚ್ತೀಯ. ಅವ್ರ ಬಲಿಷ್ಠ ಗಂಡಸ್ರನ್ನ ಕತ್ತಿಯಿಂದ ಕೊಲ್ತೀಯ. ಅವ್ರ ಮಕ್ಕಳನ್ನ ತುಂಡುತುಂಡು ಮಾಡ್ತೀಯ. ಅವ್ರಲ್ಲಿರೋ ಗರ್ಭಿಣಿಯರ ಹೊಟ್ಟೆ ಸೀಳಿಬಿಡ್ತೀಯ”+ ಅಂದ. 13  ಆಗ ಹಜಾಯೇಲ “ನಿನ್ನ ಸೇವಕನಾದ ನನಗೆ ಇದನ್ನೆಲ್ಲ ಮಾಡೋಕೆ ಯಾವ ಅಧಿಕಾರ ಇದೆ? ನಾನು ಕೇವಲ ಒಂದು ನಾಯಿ” ಅಂದ. ಅದಕ್ಕೆ ಎಲೀಷ “ನೀನು ಅರಾಮ್ಯರ ರಾಜನಾಗ್ತೀಯ ಅಂತ ಯೆಹೋವ ನನಗೆ ಹೇಳಿದ್ದಾನೆ”+ ಅಂದ. 14  ಆಮೇಲೆ ಹಜಾಯೇಲ ಎಲೀಷನನ್ನ ಬಿಟ್ಟು ತನ್ನ ಒಡೆಯನ ಹತ್ರ ಹೋದ. ಆಗ ಅವನ ಒಡೆಯ “ಎಲೀಷ ಏನು ಹೇಳಿದ?” ಅಂತ ಕೇಳಿದ. ಅದಕ್ಕೆ ಅವನು “ನೀನು ಖಂಡಿತ ಚೇತರಿಸ್ಕೊಳ್ತೀಯ ಅಂತ ಅವನು ಹೇಳಿದ”+ ಅಂದ. 15  ಆದ್ರೆ ಮಾರನೇ ದಿನ ಹಜಾಯೇಲ ಒಂದು ಕಂಬಳಿನ ನೀರಲ್ಲಿ ಅದ್ದಿ ಅದನ್ನ ತಗೊಂಡು ಬಂದು ರಾಜನ ಮುಖದ ಮೇಲೆ ಇಟ್ಟು ಅವನು ಉಸಿರುಗಟ್ಟಿ ಸಾಯೋ ತರ ಮಾಡಿದ.+ ಅವನ ಸ್ಥಾನದಲ್ಲಿ ಹಜಾಯೇಲ ರಾಜನಾದ.+ 16  ಇಸ್ರಾಯೇಲ್‌ ರಾಜ ಅಹಾಬನ ಮಗ ಯೆಹೋರಾಮನ+ ಆಳ್ವಿಕೆಯ ಐದನೇ ವರ್ಷದಲ್ಲಿ ಯೆಹೋಷಾಫಾಟ ಯೆಹೂದದ ರಾಜನಾಗಿದ್ದ. ಅದೇ ಸಮಯದಲ್ಲಿ ಯೆಹೋಷಾಫಾಟನ ಮಗ ಯೆಹೋರಾಮ+ ಯೆಹೂದದ ರಾಜನಾದ. 17  ಅವನು ರಾಜನಾದಾಗ ಅವನಿಗೆ 32 ವರ್ಷ. ಅವನು ಯೆರೂಸಲೇಮಿಂದ ಎಂಟು ವರ್ಷ ಆಳಿದ. 18  ಯೆಹೋರಾಮ ಅಹಾಬನ ಮಗಳನ್ನ ಮದುವೆಯಾಗಿದ್ರಿಂದ+ ಅಹಾಬನ ಮನೆತನದವ್ರ ತರಾನೇ+ ಇಸ್ರಾಯೇಲ್‌ ರಾಜರ ಮಾರ್ಗದಲ್ಲೇ ನಡೆದ.+ ಅವನು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡ್ತಾ ಹೋದ.+ 19  ಆದ್ರೆ ಯೆಹೋವ ತನ್ನ ಸೇವಕ ದಾವೀದನ ಸಲುವಾಗಿ ಯೆಹೂದ ರಾಜ್ಯ ನಾಶ ಮಾಡೋಕೆ ಬಯಸಲಿಲ್ಲ.+ ಯಾಕಂದ್ರೆ ಅವನ ವಂಶದವರು ಸದಾಕಾಲಕ್ಕೂ ಆಳೋ ತರ ಮಾಡ್ತೀನಿ* ಅಂತ ದೇವರು ಅವನಿಗೆ ಮಾತು ಕೊಟ್ಟಿದ್ದನು.+ 20  ಯೆಹೋರಾಮನ ದಿನಗಳಲ್ಲಿ ಎದೋಮ್ಯರು ಯೆಹೂದದ ಮೇಲೆ ತಿರುಗಿಬಿದ್ದು+ ತಮಗಾಗಿ ಒಬ್ಬ ರಾಜನನ್ನ ನೇಮಿಸ್ಕೊಂಡ್ರು.+ 21  ಹಾಗಾಗಿ ಯೆಹೋರಾಮ ತನ್ನ ಎಲ್ಲ ರಥಗಳನ್ನ ತಗೊಂಡು ಚಾಯೀರಿಗೆ ಹೋದ. ತನ್ನನ್ನ ಸುತ್ತುವರಿದಿದ್ದ ಎದೋಮ್ಯರ ಮತ್ತು ಅವ್ರ ರಥಗಳ ಅಧಿಪತಿಗಳ ಮೇಲೆ ರಾತ್ರೋರಾತ್ರಿ ದಾಳಿ ಮಾಡಿ ಅವ್ರನ್ನ ಸೋಲಿಸಿದ. ಆಗ ಅವ್ರ ಸೈನಿಕರು ತಮ್ಮತಮ್ಮ ಡೇರೆಗಳಿಗೆ ಓಡಿಹೋದ್ರು. 22  ಆದ್ರೆ ಇಂದಿನ ತನಕ ಎದೋಮ್ಯರು ಯೆಹೂದದ ವಿರುದ್ಧ ತಿರುಗಿಬೀಳೋದನ್ನ ಬಿಟ್ಟಿಲ್ಲ. ಆ ಸಮಯದಲ್ಲಿ ಲಿಬ್ನದವರು+ ಸಹ ಯೆಹೂದದ ವಿರುದ್ಧ ತಿರುಗಿಬಿದ್ದಿದ್ರು. 23  ಯೆಹೋರಾಮನ ಉಳಿದ ಜೀವನ ಚರಿತ್ರೆಯ ಬಗ್ಗೆ, ಅವನು ಮಾಡಿದ ಎಲ್ಲ ವಿಷ್ಯಗಳ ಬಗ್ಗೆ ಯೆಹೂದದ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಇದೆ. 24  ಕೊನೆಗೆ ಯೆಹೋರಾಮ ತೀರಿಹೋದ. ಅವನನ್ನ ದಾವೀದಪಟ್ಟಣದಲ್ಲಿ ಸಮಾಧಿ ಮಾಡಿದ್ರು.+ ಅವನ ನಂತ್ರ ಅವನ ಮಗ ಅಹಜ್ಯ+ ರಾಜನಾದ. 25  ಇಸ್ರಾಯೇಲ್‌ ರಾಜ ಅಹಾಬನ ಮಗ ಯೆಹೋರಾಮನ ಆಳ್ವಿಕೆಯ 12ನೇ ವರ್ಷದಲ್ಲಿ ಯೆಹೂದದ ರಾಜ ಯೆಹೋರಾಮನ ಮಗ ಅಹಜ್ಯ ರಾಜನಾದ.+ 26  ಅಹಜ್ಯ ರಾಜನಾದಾಗ ಅವನಿಗೆ 22 ವರ್ಷ. ಅವನು ಯೆರೂಸಲೇಮಿಂದ ಒಂದು ವರ್ಷ ಆಳಿದ. ಅವನ ತಾಯಿ ಹೆಸ್ರು ಅತಲ್ಯ.+ ಇವಳು ಇಸ್ರಾಯೇಲ್‌ ರಾಜ ಒಮ್ರಿಯ+ ಮೊಮ್ಮಗಳು.* 27  ಅಹಜ್ಯ ಅಹಾಬನ+ ಮನೆತನದವ್ರ ತರಾನೇ ನಡ್ಕೊಂಡ. ಅಹಾಬನ ಮನೆತನದವ್ರ ತರಾನೇ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡ್ತಾ ಹೋದ. ಯಾಕಂದ್ರೆ ಅವನು ಅಹಾಬನ ಮನೆತನದವ್ರ ಜೊತೆ ಬೀಗತನ ಬೆಳೆಸಿದ್ದ.+ 28  ಹಾಗಾಗಿ ಅವನು ಅಹಾಬನ ಮಗ ಯೆಹೋರಾಮನ ಜೊತೆ ಸೇರಿ ಅರಾಮ್ಯರ ರಾಜ ಹಜಾಯೇಲನ ವಿರುದ್ಧ ಯುದ್ಧ ಮಾಡೋಕೆ ರಾಮೋತ್‌-ಗಿಲ್ಯಾದಿಗೆ+ ಹೋದ. ಆದ್ರೆ ಅರಾಮ್ಯರ ಸೈನಿಕರು ಯೆಹೋರಾಮನಿಗೆ ಗಾಯ ಮಾಡಿ ಕಳಿಸಿದ್ರು.+ 29  ಸೈನಿಕರು ರಾಜ ಯೆಹೋರಾಮನನ್ನ ಗಾಯ ಮಾಡಿದ್ರಿಂದ+ ಅವನು ಆ ಗಾಯಗಳನ್ನ ವಾಸಿ ಮಾಡ್ಕೊಳ್ಳೋಕೆ ರಾಮದಿಂದ ಇಜ್ರೇಲಿಗೆ+ ಬಂದ. ಗಾಯಗೊಂಡಿದ್ದ* ಅಹಾಬನ ಮಗ ಯೆಹೋರಾಮನನ್ನ ನೋಡೋಕೆ ಯೆಹೂದದ ರಾಜ ಯೆಹೋರಾಮನ ಮಗ ಅಹಜ್ಯ ಇಜ್ರೇಲಿಗೆ ಹೋದ.

ಪಾದಟಿಪ್ಪಣಿ

ಅಕ್ಷ. “ಅವನಿಗೆ ಒಂದು ದೀಪ ಕೊಡ್ತೀನಿ.”
ಅಕ್ಷ. “ಮಗಳು.”
ಅಥವಾ “ಅಸ್ವಸ್ಥನಾಗಿದ್ದ.”