ಕೊರಿಂಥದವರಿಗೆ ಬರೆದ ಎರಡನೇ ಪತ್ರ 3:1-18

  • ನಾವು ಯಾರಂತ ವಿವರಿಸೋ ಪತ್ರಗಳು (1-3)

  • ಹೊಸ ಒಪ್ಪಂದದ ಸೇವಕರು (4-6)

  • ಹೊಸ ಒಪ್ಪಂದಕ್ಕೆ ಹೆಚ್ಚು ಮಹಿಮೆ (7-18)

3  ನಾವೇನು ನಮ್ಮನ್ನ ಮತ್ತೆ ಪರಿಚಯ ಮಾಡ್ಕೊಬೇಕಾ? ಅಥವಾ ಬೇರೆಯವ್ರ ತರ ನಾವು ಯಾರಂತ ವಿವರಿಸೋ ಪತ್ರಗಳನ್ನ ನಿಮಗೆ ಕೊಡಬೇಕಾ ಅಥವಾ ನಿಮ್ಮಿಂದ ನಾವು ತಗೋಬೇಕಾ?  ನೀವೇ ನಮ್ಮ ಪತ್ರ.+ ಅದನ್ನ ನಮ್ಮ ಹೃದಯಗಳ ಮೇಲೆ ಬರೆದಿದೆ. ಜನ್ರೆಲ್ಲ ಅದನ್ನ ತಿಳ್ಕೊಂಡಿದ್ದಾರೆ, ಓದ್ತಿದ್ದಾರೆ.  ದೇವರ ಸೇವಕರಾದ ನಮ್ಮ ಮೂಲಕ ಕ್ರಿಸ್ತ ಬರೆಸಿದ ಪತ್ರ ನೀವೇ ಅನ್ನೋದು ಸ್ಪಷ್ಟ.+ ಈ ಪತ್ರವನ್ನ ಮಸಿಯಿಂದ ಅಲ್ಲ, ಜೀವ ಇರೋ ದೇವರ ಪವಿತ್ರಶಕ್ತಿಯಿಂದ ಬರೆದಿದೆ. ಅದನ್ನ ಕಲ್ಲಿನ ಹಲಗೆ ಮೇಲೆ ಅಲ್ಲ,+ ಹೃದಯ ಅನ್ನೋ ಹಲಗೆ ಮೇಲೆ ಬರೆದಿದೆ.+  ಈ ವಿಷ್ಯದಲ್ಲಿ ದೇವರು ನಮಗೆ ಕ್ರಿಸ್ತನ ಮೂಲಕ ಭರವಸೆ ಕೊಟ್ಟಿದ್ದಾನೆ.  ನಮಗೆ ಈ ಕೆಲಸಕ್ಕೆ ಯೋಗ್ಯತೆ ಸಿಕ್ಕಿರೋದು ನಮ್ಮ ಸ್ವಂತ ಪ್ರಯತ್ನದಿಂದ ಅಲ್ಲ, ದೇವರೇ ನಮಗೆ ಆ ಯೋಗ್ಯತೆ ಕೊಟ್ಟಿದ್ದಾನೆ.+  ನಿಜ ಹೇಳಬೇಕಂದ್ರೆ ನಾವು ನಿಯಮ ಪುಸ್ತಕಕ್ಕಲ್ಲ,+ ಹೊಸ ಒಪ್ಪಂದಕ್ಕೆ+ ಮತ್ತು ಪವಿತ್ರಶಕ್ತಿಗೆ ಸೇವಕರಾಗೋಕೆ ಆತನು ನಮಗೆ ಸಾಕಷ್ಟು ಯೋಗ್ಯತೆ ಕೊಟ್ಟಿದ್ದಾನೆ. ಯಾಕಂದ್ರೆ ನಿಯಮ ಪುಸ್ತಕ ಮರಣಶಿಕ್ಷೆ ಕೊಡುತ್ತೆ,+ ಆದ್ರೆ ಪವಿತ್ರಶಕ್ತಿ ಜೀವ ಕೊಡುತ್ತೆ.+  ಬರೀ ಕಲ್ಲಿನ ಮೇಲೆ ಕೆತ್ತಿರೋ,+ ಮರಣವನ್ನ ಕೊಡೋ ಆ ನಿಯಮಗಳಿಗೆ ಎಷ್ಟು ಮಹಿಮೆ ಇತ್ತೆಂದ್ರೆ ಅದ್ರಿಂದ ಹೊಳಿತಿದ್ದ ಮೋಶೆಯ ಮುಖವನ್ನ ಇಸ್ರಾಯೇಲ್ಯರಿಗೆ ನೋಡೋಕೇ ಆಗಲಿಲ್ಲ.+ ಬರ್ತಾ ಬರ್ತಾ ಕಮ್ಮಿ ಆಗೋ ಮಹಿಮೆಯಿಂದ ಬಂದ ನಿಯಮಗಳಿಗೇ ಅಷ್ಟು ಮಹಿಮೆ ಇತ್ತಂದ್ರೆ,  ಪವಿತ್ರಶಕ್ತಿ ಮಾಡೋ ಸೇವೆಗೆ+ ಅದಕ್ಕಿಂತ ಇನ್ನೂ ಎಷ್ಟು ಮಹಿಮೆ ಇರಬೇಕು?+  ಮರಣಶಿಕ್ಷೆ ಕೊಡೋ ನಿಯಮಗಳಿಗೇ+ ನಾವು ಅಷ್ಟು ಗೌರವ ಕೊಡ್ತೀವಿ+ ಅಂದ್ಮೇಲೆ ಜನ್ರು ಒಳ್ಳೆಯವ್ರಾಗೋಕೆ ಸಹಾಯ ಮಾಡೋ ಸೇವೆಗೆ ಅದಕ್ಕಿಂತ ಜಾಸ್ತಿ ಗೌರವ ಕೊಡಬೇಕಲ್ವಾ?+ 10  ನಿಜ ಏನಂದ್ರೆ, ನಿಯಮಗಳಿಗೆ ಒಂದು ಕಾಲದಲ್ಲಿ ಮಹಿಮೆ ಇದ್ರೂ ಅದಕ್ಕಿಂತ ಜಾಸ್ತಿ ಮಹಿಮೆ ಇರೋ ಹೊಸ ಒಪ್ಪಂದ ಬಂದಿದ್ರಿಂದ ನಿಯಮಗಳಿಗೆ ಮಹಿಮೆ ಇಲ್ಲದ ಹಾಗಾಯ್ತು.+ 11  ಕಣ್ಮರೆ ಆಗುವಂಥದ್ದಕ್ಕೇ ಅಷ್ಟು ಮಹಿಮೆ ಇತ್ತಂದ್ರೆ+ ಯಾವಾಗ್ಲೂ ಇರುವಂಥದ್ದಕ್ಕೆ ಇನ್ನೂ ಜಾಸ್ತಿ ಮಹಿಮೆ ಇರಬೇಕಲ್ವಾ?+ 12  ಇಂಥ ಭರವಸೆ ನಮಗೆ ಇರೋದ್ರಿಂದ+ ನಾವು ಧೈರ್ಯವಾಗಿ ಮಾತಾಡ್ತೀವಿ. 13  ಕಣ್ಮರೆ ಆಗುವಂಥದ್ರ ಮಹಿಮೆಯನ್ನ ಇಸ್ರಾಯೇಲ್ಯರು ದಿಟ್ಟಿಸಿ ನೋಡಬಾರದು ಅಂತ ಮೋಶೆ ಮುಖಕ್ಕೆ ಮುಸುಕು ಹಾಕೊಂಡ.+ ಆದ್ರೆ ನಾವು ಅವನ ತರ ಮಾಡಲ್ಲ. 14  ಇಸ್ರಾಯೇಲ್ಯರ ಮನಸ್ಸು ಮಂಕಾಗಿತ್ತು.+ ಹಳೇ ಒಪ್ಪಂದವನ್ನ ಓದುವಾಗ ಇವತ್ತಿನ ತನಕ ಅವ್ರ ಮನಸ್ಸಿನ ಮೇಲೆ ಮುಸುಕಿದೆ.+ ಆ ಮುಸುಕನ್ನ ತೆಗೆದುಹಾಕೋಕೆ ಆಗೋದು ಕ್ರಿಸ್ತನಿಗೆ ಮಾತ್ರ.+ 15  ಅಷ್ಟೇ ಅಲ್ಲ, ಇವತ್ತಿಗೂ ಮೋಶೆ ಬರೆದಿದ್ದನ್ನ ಓದುವಾಗ+ ಅವ್ರ ಹೃದಯಗಳ ಮೇಲೆ ಮುಸುಕಿದೆ.+ 16  ಆದ್ರೆ ಯೆಹೋವನ* ಹತ್ರ ಯಾರಾದ್ರೂ ವಾಪಸ್‌ ಬಂದ್ರೆ ಆ ಮುಸುಕನ್ನ ತೆಗೆಯಲಾಗುತ್ತೆ.+ 17  ಯೆಹೋವ* ಅದೃಶ್ಯ ವ್ಯಕ್ತಿ.+ ಎಲ್ಲಿ ಯೆಹೋವನ* ಪವಿತ್ರಶಕ್ತಿ ಇದ್ಯೋ ಅಲ್ಲಿ ಸ್ವಾತಂತ್ರ್ಯ ಇದೆ.+ 18  ಮುಖದ ಮೇಲೆ ಮುಸುಕು ಇಲ್ಲದ ನಾವೆಲ್ಲ ಯೆಹೋವನ* ಮಹಿಮೆಯನ್ನ ಕನ್ನಡಿ ತರ ಪ್ರತಿಬಿಂಬಿಸ್ತೀವಿ. ಅದೃಶ್ಯ ವ್ಯಕ್ತಿ ಆಗಿರೋ ಯೆಹೋವ* ಇಷ್ಟ ಪಡೋ ಹಾಗೇ* ನಾವು ಆತನ ಸ್ವರೂಪದ ತರ ಆಗೋಕೆ ಮತ್ತು ಆತನ ಮಹಿಮೆಯನ್ನ ಜಾಸ್ತಿ ಪ್ರತಿಬಿಂಬಿಸೋಕೆ ಹೊಸ ರೂಪವನ್ನ ಪಡೀತಾ* ಇದ್ದೀವಿ.+

ಪಾದಟಿಪ್ಪಣಿ

ಬಹುಶಃ, “ಯೆಹೋವನ ಪವಿತ್ರಶಕ್ತಿ ಮೂಲಕ.”
ಅಥವಾ “ರೂಪಾಂತರ ಆಗ್ತಾ.”