ತಿಮೊತಿಗೆ ಬರೆದ ಎರಡನೇ ಪತ್ರ 3:1-17
3 ಆದ್ರೆ ಈ ವಿಷ್ಯ ಗೊತ್ತಿರಲಿ, ಏನಂದ್ರೆ ಕೊನೇ ದಿನಗಳಲ್ಲಿ+ ಪರಿಸ್ಥಿತಿ ತುಂಬ ಹದಗೆಡುತ್ತೆ, ತುಂಬ ಕಷ್ಟ ಪಡಬೇಕಾಗುತ್ತೆ.
2 ಯಾಕಂದ್ರೆ ತಮ್ಮ ಬಗ್ಗೆನೇ ಯೋಚಿಸುವವರು, ಹಣದಾಸೆ ಇರುವವರು, ತಮ್ಮ ಬಗ್ಗೆ ಕೊಚ್ಕೊಳ್ಳುವವರು, ಅಹಂಕಾರಿಗಳು, ಬೈಯೋರು, ಅಪ್ಪಅಮ್ಮನ ಮಾತು ಕೇಳದವರು, ಮಾಡಿದ ಉಪಕಾರ ಮರೆತುಬಿಡುವವರು, ನಂಬಿಕೆದ್ರೋಹ ಮಾಡುವವರು,
3 ಕುಟುಂಬದವ್ರನ್ನ ಪ್ರೀತಿಸದವರು, ಯಾವುದಕ್ಕೂ ಒಪ್ಪದವರು, ಬೇರೆಯವ್ರ ಹೆಸ್ರು ಹಾಳು ಮಾಡುವವರು, ತಮ್ಮನ್ನ ಹತೋಟಿಯಲ್ಲಿ ಇಟ್ಕೊಳ್ಳದವರು, ಉಗ್ರರು, ಒಳ್ಳೇದನ್ನ ದ್ವೇಷಿಸುವವರು,
4 ಮಿತ್ರದ್ರೋಹಿಗಳು, ಹಠಮಾರಿಗಳು, ಜಂಬದಿಂದ ಉಬ್ಬಿದವರು, ದೇವರನ್ನ ಪ್ರೀತಿಸದೆ ತಮ್ಮ ಆಸೆಗಳನ್ನ ತೀರಿಸ್ಕೊಳ್ಳೋಕೆ ಇಷ್ಟಪಡುವವರು,
5 ಮೇಲೆ ದೇವಭಕ್ತಿಯ ವೇಷ ಹಾಕೊಂಡು ಅದಕ್ಕೆ ತಕ್ಕ ಹಾಗೆ ಜೀವನ ಮಾಡದವರು ಇರ್ತಾರೆ.+ ಇಂಥವ್ರ ಜೊತೆ ಸೇರಬೇಡ.
6 ಇವ್ರಲ್ಲಿ ಸ್ವಲ್ಪ ಜನ ಮೋಸದಿಂದ ಮನೆಯೊಳಗೆ ನುಗ್ತಾರೆ. ಪಾಪಿಗಳಾಗಿ ತಮ್ಮ ಆಸೆಗಳಿಗೆ ಗುಲಾಮರಾಗಿರೋ ಚಂಚಲ ಸ್ತ್ರೀಯರನ್ನ ಹಿಡ್ಕೊಂಡು ಹೋಗ್ತಾರೆ.
7 ಇವರು ಕಲಿತಾನೇ ಇರ್ತಾರೆ, ಆದ್ರೆ ಯಾವತ್ತೂ ಸತ್ಯದ ಸರಿಯಾದ ಜ್ಞಾನ ಪಡ್ಕೊಳಲ್ಲ.
8 ಯನ್ನ ಮತ್ತು ಯಂಬ್ರ ಅನ್ನುವವರು ಮೋಶೆನ ವಿರೋಧಿಸಿದ ತರ ಇವರೂ ಸತ್ಯವನ್ನ ವಿರೋಧಿಸ್ತಾರೆ. ಅವ್ರ ತಲೆ ಪೂರ್ತಿ ಕೆಟ್ಟಿದೆ, ಅವರು ಸತ್ಯದ ಪ್ರಕಾರ ನಡಿದೇ ಇರೋದ್ರಿಂದ ದೇವರು ಅವ್ರನ್ನ ಮೆಚ್ಚಲ್ಲ.
9 ಅವ್ರಂತೂ ಉದ್ಧಾರ ಆಗಲ್ಲ. ಯಾಕಂದ್ರೆ ಅವರಿಬ್ರೂ ಮೂರ್ಖರು* ಅಂತ ಹೇಗೆ ಎಲ್ರಿಗೆ ಗೊತ್ತಾಯ್ತೋ ಅದೇ ತರ ಇವ್ರೂ ಮೂರ್ಖರೇ ಅಂತ ಗೊತ್ತಾಗುತ್ತೆ.+
10 ಆದ್ರೆ ನೀನು ಹಾಗಿಲ್ಲ. ನಾನು ಏನು ಕಲಿಸ್ದೆ, ನಾನು ಹೇಗೆ ನಡ್ಕೊಂಡೆ,+ ನನ್ನ ಉದ್ದೇಶ, ನಂಬಿಕೆ, ತಾಳ್ಮೆ, ಪ್ರೀತಿ, ಸಹನೆಯನ್ನ ನೀನು ಚೆನ್ನಾಗಿ ಗಮನಿಸಿದ್ದೀಯ.
11 ಅಂತಿಯೋಕ್ಯ,+ ಇಕೋನ್ಯ+ ಮತ್ತು ಲುಸ್ತ್ರದಲ್ಲಿ+ ನನಗೆ ಬಂದ ಕಷ್ಟಹಿಂಸೆ ಎಲ್ಲ ನಿಂಗೊತ್ತು. ಅದನ್ನೆಲ್ಲ ನಾನು ಸಹಿಸ್ಕೊಂಡೆ. ಒಡೆಯ ಅದೆಲ್ಲದ್ರಿಂದ ನನ್ನನ್ನ ಕಾಪಾಡಿದನು.+
12 ನಿಜ ಹೇಳಬೇಕಂದ್ರೆ, ಕ್ರಿಸ್ತ ಯೇಸುವಿನ ಶಿಷ್ಯರಾಗಿ ದೇವರನ್ನ ಆರಾಧಿಸ್ತಾ* ಜೀವಿಸೋಕೆ ಬಯಸೋ ಎಲ್ರಿಗೂ ಹಿಂಸೆ ಬರುತ್ತೆ.+
13 ಆದ್ರೆ ಕೆಟ್ಟವರು ಮೋಸಗಾರರು ಕೆಟ್ಟದ್ರಿಂದ ಇನ್ನೂ ಕೆಟ್ಟತನಕ್ಕೆ ಇಳಿತಾರೆ. ಅವರು ಮೋಸಮಾಡ್ತಾ ಮೋಸಹೋಗ್ತಾ ಇರ್ತಾರೆ.+
14 ಆದ್ರೆ ನೀನು ಕಲಿತ ಮತ್ತು ನಂಬಿದ ವಿಷ್ಯಗಳನ್ನ ಪಾಲಿಸ್ತಾ ಇರು.+ ಯಾಕಂದ್ರೆ ಅದನ್ನೆಲ್ಲ ಯಾರಿಂದ ನೀನು ಕಲಿತೆ ಅಂತ ನಿಂಗೊತ್ತು.
15 ನೀನು ಹುಟ್ಟಿದಾಗಿಂದ*+ ಪವಿತ್ರ ಪುಸ್ತಕದಲ್ಲಿ ಇರೋದನ್ನ ಕಲ್ತಿದ್ದೀಯ.+ ಆ ಪುಸ್ತಕ, ಕ್ರಿಸ್ತ ಯೇಸು ಮೇಲೆ ನೀನು ಇಟ್ಟಿರೋ ನಂಬಿಕೆಯಿಂದ ರಕ್ಷಣೆ ಪಡಿಯೋಕೆ ನಿನ್ನನ್ನ ವಿವೇಕಿಯಾಗಿ ಮಾಡುತ್ತೆ.+
16 ಪವಿತ್ರ ಗ್ರಂಥದಲ್ಲಿರೋ ಎಲ್ಲ ಮಾತುಗಳನ್ನ ದೇವರೇ ಕೊಟ್ಟಿದ್ದು.*+ ಜನ್ರಿಗೆ ಕಲಿಸೋಕೆ,+ ತಪ್ಪನ್ನ ತೋರಿಸೋಕೆ, ಎಲ್ಲ ವಿಷ್ಯವನ್ನ ಸರಿಮಾಡೋಕೆ, ದೇವರ ಆಲೋಚನೆ ಪ್ರಕಾರ ನಮ್ಮ ಆಲೋಚನೆಗಳನ್ನ ತಿದ್ದೋಕೆ ಅದು ಸಹಾಯ ಮಾಡುತ್ತೆ.+
17 ಇದ್ರಿಂದ ದೇವರ ಸೇವಕನಿಗೆ ಯಾವಾಗ್ಲೂ ಒಳ್ಳೇ ಕೆಲಸಗಳನ್ನ ಮಾಡೋಕೆ ಸಾಮರ್ಥ್ಯ ಸಿಗುತ್ತೆ.
ಪಾದಟಿಪ್ಪಣಿ
^ ಅಥವಾ “ಅವರಿಬ್ರಿಗೆ ಹುಚ್ಚುತನ.”
^ ಅಥವಾ “ದೇವರ ಭಕ್ತಿಯಿಂದ.”
^ ಅಥವಾ “ಚಿಕ್ಕಂದಿನಿಂದ; ಶೈಶವದಿಂದ.”
^ ಅಕ್ಷ. “ಎಲ್ಲ ಮಾತುಗಳನ್ನ ದೇವರ ಪವಿತ್ರಶಕ್ತಿಯ ಮಾರ್ಗದರ್ಶನೆ ಪ್ರಕಾರ ಬರೆಯಲಾಗಿದೆ.”