ಎರಡನೇ ಪೂರ್ವಕಾಲವೃತ್ತಾಂತ 18:1-34

  • ಯೆಹೋಷಾಫಾಟ ಅಹಾಬನ ಜೊತೆ ಕೈಜೋಡಿಸಿದ (1-11)

  • ಮೀಕಾಯೆಹು ಸೋಲಿನ ಬಗ್ಗೆ ಮುಂಚೆನೇ ಹೇಳಿದ (12-27)

  • ರಾಮೋತ್‌-ಗಿಲ್ಯಾದಿನಲ್ಲಿ ಅಹಾಬನ ಸಾವು (28-34)

18  ಯೆಹೋಷಾಫಾಟನ ಹತ್ರ ತುಂಬ ಆಸ್ತಿ ಐಶ್ವರ್ಯ ಇತ್ತು.+ ಆದ್ರೆ ಅವನು ಅಹಾಬನ ಜೊತೆ ಬೀಗತನ ಮಾಡಿದ.+  ಹಾಗಾಗಿ ಅವನು ಸ್ವಲ್ಪ ವರ್ಷ ಆದಮೇಲೆ ಸಮಾರ್ಯದಲ್ಲಿದ್ದ ಅಹಾಬನನ್ನ ಭೇಟಿ ಮಾಡೋಕೆ ಹೋದ.+ ಅಹಾಬ ಅವನಿಗಾಗಿ ಮತ್ತು ಅವನ ಜೊತೆ ಬಂದಿದ್ದ ಜನ್ರಿಗಾಗಿ ದನಕುರಿಗಳನ್ನ ಬಲಿ ಕೊಟ್ಟ. ರಾಮೋತ್‌-ಗಿಲ್ಯಾದಿನ+ ಮೇಲೆ ಆಕ್ರಮಣ ಮಾಡೋಕೆ ನನ್ನ ಜೊತೆ ಬಾ ಅಂತ ಯೆಹೋಷಾಫಾಟನನ್ನ ಒತ್ತಾಯಿಸಿದ.  ಆಮೇಲೆ ಇಸ್ರಾಯೇಲ್‌ ರಾಜ ಅಹಾಬ ಯೆಹೂದದ ರಾಜ ಯೆಹೋಷಾಫಾಟನಿಗೆ “ರಾಮೋತ್‌-ಗಿಲ್ಯಾದಿನ ವಿರುದ್ಧ ಯುದ್ಧಮಾಡೋಕೆ ನನ್ನ ಜೊತೆ ಬರ್ತಿಯಾ?” ಅಂತ ಕೇಳಿದ. ಅದಕ್ಕೆ ಯೆಹೋಷಾಫಾಟ “ನಾನೂ ನೀನೂ, ನನ್ನ ಜನ ನಿನ್ನ ಜನ ಒಂದೇ ಅಲ್ವಾ. ಯುದ್ಧದಲ್ಲಿ ನಾನು ನಿನಗೆ ಸಹಾಯ ಮಾಡ್ತೀನಿ” ಅಂದ.  ಆದ್ರೆ ಯೆಹೋಷಾಫಾಟ ಇಸ್ರಾಯೇಲ್‌ ರಾಜನಿಗೆ “ದಯವಿಟ್ಟು, ಮೊದಲು ಯೆಹೋವನ ಹತ್ರ ಹೋಗಿ ಕೇಳು”+ ಅಂದ.  ಆಗ ಇಸ್ರಾಯೇಲ್‌ ರಾಜ 400 ಪ್ರವಾದಿಗಳನ್ನ ಸೇರಿಸಿ ಅವ್ರಿಗೆ “ರಾಮೋತ್‌-ಗಿಲ್ಯಾದಿನ ವಿರುದ್ಧ ನಾನು ಯುದ್ಧಕ್ಕೆ ಹೋಗ್ಲಾ ಬೇಡ್ವಾ?” ಅಂತ ಕೇಳಿದ. ಅದಕ್ಕೆ ಅವರು “ಯುದ್ಧಕ್ಕೆ ಹೋಗು. ಸತ್ಯ ದೇವರು ಅದನ್ನ ನಿನ್ನ ಕೈಗೆ ಒಪ್ಪಿಸ್ತಾನೆ” ಅಂದ್ರು.  ಆಗ ಯೆಹೋಷಾಫಾಟ “ಇಲ್ಲಿ ಬೇರೆ ಯಾರೂ ಯೆಹೋವನ ಪ್ರವಾದಿ ಇಲ್ವಾ?+ ಇದ್ರೆ ಅವನ ಹತ್ರನೂ ಕೇಳೋಣ”+ ಅಂದ.  ಅದಕ್ಕೆ ಇಸ್ರಾಯೇಲ್‌ ರಾಜ ಯೆಹೋಷಾಫಾಟನಿಗೆ “ಇನ್ನೂ ಒಬ್ಬ ಪ್ರವಾದಿ ಇದ್ದಾನೆ.+ ಅವನ ಮೂಲಕ ನಾವು ಯೆಹೋವನ ಹತ್ರ ಕೇಳಬಹುದು. ಆದ್ರೆ ನಾನು ಅವನನ್ನ ದ್ವೇಷಿಸ್ತೀನಿ. ಯಾಕಂದ್ರೆ ಅವನು ಇಲ್ಲಿ ತನಕ ನನ್ನ ಬಗ್ಗೆ ಒಳ್ಳೇ ಭವಿಷ್ಯ ಹೇಳಿದ್ದೇ ಇಲ್ಲ. ಬರೀ ಕೆಟ್ಟದ್ದೇ ಹೇಳ್ತಾನೆ.+ ಅವನ ಹೆಸ್ರು ಮೀಕಾಯೆಹು. ಅವನು ಇಮ್ಲನ ಮಗ” ಅಂದ. ಹಾಗಿದ್ರೂ ಯೆಹೋಷಾಫಾಟ “ರಾಜ, ನೀನು ಹೀಗೆ ಮಾತಾಡಬಾರದು” ಅಂದ.  ಹಾಗಾಗಿ ಇಸ್ರಾಯೇಲ್‌ ರಾಜ ಆಸ್ಥಾನದ ಅಧಿಕಾರಿನ ಕರೆದು “ಇಮ್ಲನ ಮಗ ಮೀಕಾಯೆಹುನ ತಕ್ಷಣ ಕರ್ಕೊಂಡು ಬಾ” ಅಂದ.+  ಇಸ್ರಾಯೇಲ್‌ ರಾಜ ಅಹಾಬ ಮತ್ತು ಯೆಹೂದದ ರಾಜ ಯೆಹೋಷಾಫಾಟ ರಾಜರ ಬಟ್ಟೆಗಳನ್ನ ಹಾಕೊಂಡ್ರು. ಸಮಾರ್ಯದ ಬಾಗಿಲ ಹತ್ರ ಇದ್ದ ಬೈಲಲ್ಲಿ ತಮ್ಮತಮ್ಮ ಸಿಂಹಾಸನದ ಮೇಲೆ ಕೂತ್ರು. ಎಲ್ಲ ಪ್ರವಾದಿಗಳು ಅವ್ರಿಬ್ಬರ ಮುಂದೆ ಭವಿಷ್ಯ ಹೇಳ್ತಿದ್ರು. 10  ಆಮೇಲೆ ಕೆನಾನನ ಮಗ ಚಿದ್ಕೀಯ ತನಗಾಗಿ ಕಬ್ಬಿಣದ ಕೊಂಬುಗಳನ್ನ ಮಾಡ್ಕೊಂಡು “ಯೆಹೋವ ಹೀಗೆ ಹೇಳ್ತಾನೆ ‘ನೀನು ಅರಾಮ್ಯದ ಜನ್ರನ್ನ ಸರ್ವನಾಶ ಮಾಡೋ ತನಕ ಇದ್ರಿಂದ ಅರಾಮ್ಯರನ್ನ ಕೊಲ್ತಾ* ಹೋಗ್ತೀಯ” ಅಂದ. 11  ಬೇರೆ ಪ್ರವಾದಿಗಳೂ ಇದನ್ನೇ ಹೇಳಿದ್ರು. ಅವರು ಅವನಿಗೆ “ರಾಮೋತ್‌-ಗಿಲ್ಯಾದಿನ ವಿರುದ್ಧ ಯುದ್ಧಕ್ಕೆ ಹೋಗು, ನಿನಗೆ ಜಯ ಸಿಗುತ್ತೆ.+ ಯೆಹೋವ ಅದನ್ನ ರಾಜನ ಕೈಗೆ ಒಪ್ಪಿಸ್ತಾನೆ” ಅಂದ್ರು. 12  ಮೀಕಾಯೆಹುನ ಕರೆಯೋಕೆ ಹೋಗಿದ್ದ ಸಂದೇಶವಾಹಕ ಅವನಿಗೆ “ನೋಡು! ಎಲ್ಲ ಪ್ರವಾದಿಗಳು ರಾಜನಿಗೆ ಒಂದೇ ತರ ಭವಿಷ್ಯವಾಣಿ ಹೇಳ್ತಿದ್ದಾರೆ. ಅವರು ಒಳ್ಳೇದೇ ಹೇಳ್ತಿದ್ದಾರೆ. ಹಾಗಾಗಿ ದಯವಿಟ್ಟು, ನೀನೂ ಅವ್ರ ತರ ಒಳ್ಳೇ ಮಾತು ಹೇಳು”+ ಅಂದ. 13  ಅದಕ್ಕೆ ಮೀಕಾಯೆಹು “ಯೆಹೋವನ ಆಣೆ, ನನ್ನ ದೇವರು ನನಗೆ ಏನ್‌ ಹೇಳ್ತಾನೋ ಅದನ್ನೇ ಹೇಳ್ತೀನಿ”+ ಅಂದ.⁠ 14  ಆಮೇಲೆ ಅವನು ರಾಜನ ಹತ್ರ ಬಂದ. ರಾಜ ಅವನಿಗೆ “ಮೀಕಾಯೆಹು, ನೀನೇನು ಹೇಳ್ತೀಯಾ? ರಾಮೋತ್‌-ಗಿಲ್ಯಾದಿನ ವಿರುದ್ಧ ಯುದ್ಧಕ್ಕೆ ನಾವು ಹೋಗಬಹುದಾ?” ಅಂತ ಕೇಳಿದ. ಅದಕ್ಕವನು “ರಾಮೋತ್‌-ಗಿಲ್ಯಾದಿನ ವಿರುದ್ಧ ಯುದ್ಧಕ್ಕೆ ಹೋಗು, ನಿನಗೆ ಜಯ ಸಿಗುತ್ತೆ. ಅವರು ನಿನ್ನ ಕೈಗೆ ಸಿಕ್ತಾರೆ” ಅಂದ. 15  ಆಗ ರಾಜ “ಯೆಹೋವನ ಹೆಸ್ರಲ್ಲಿ ಆಣೆ ಮಾಡಿಸಿ ಸತ್ಯಾನೇ ಹೇಳಬೇಕು ಅಂತ ನಿನಗೆ ಇನ್ನೆಷ್ಟು ಸಾರಿ ಹೇಳಬೇಕು?” ಅಂದ. 16  ಆಗ ಮೀಕಾಯೆಹು “ಇಡೀ ಇಸ್ರಾಯೇಲ್‌ ಕುರುಬನಿಲ್ಲದ ಕುರಿಗಳ ಹಾಗೆ ಬೆಟ್ಟದ ಮೇಲೆ ಚೆಲ್ಲಾಪಿಲ್ಲಿ ಆಗಿರೋದು ನನಗೆ ಕಾಣ್ತಿದೆ.+ ಯೆಹೋವ ಹೀಗೆ ಹೇಳ್ತಾನೆ: ‘ಅವ್ರಿಗೆ ಯಜಮಾನನೇ ಇಲ್ಲ. ಅವ್ರೆಲ್ಲ ಸಮಾಧಾನವಾಗಿ ಅವ್ರ ಮನೆಗೆ ವಾಪಸ್‌ ಹೋಗ್ಲಿ’” ಅಂದ. 17  ಆಗ ಇಸ್ರಾಯೇಲ್‌ ರಾಜನು ಯೆಹೋಷಾಫಾಟನಿಗೆ “‘ಇವನು ನನ್ನ ಬಗ್ಗೆ ಒಳ್ಳೇ ಭವಿಷ್ಯ ಹೇಳಿದ್ದೇ ಇಲ್ಲ. ಬರೀ ಕೆಟ್ಟದ್ದೇ ಹೇಳ್ತಾನೆ’ ಅಂತ ನಾನು ನಿನಗೆ ಹೇಳಿದ್ದೆ ತಾನೇ?” ಅಂದ.+ 18  ಆಗ ಮೀಕಾಯೆಹು “ಯೆಹೋವನ ಈ ಸಂದೇಶ ಕೇಳು. ಯೆಹೋವ ತನ್ನ ಸಿಂಹಾಸನದ ಮೇಲೆ ಕೂತಿರೋದನ್ನ,+ ಸ್ವರ್ಗದಲ್ಲಿರೋ ಇಡೀ ಸೈನ್ಯ+ ಆತನ ಹತ್ರ ಅಂದ್ರೆ ಆತನ ಬಲಗಡೆ ಎಡಗಡೆ ನಿಂತಿರೋದನ್ನ ನೋಡಿದೆ.+ 19  ಯೆಹೋವ ಅವ್ರಿಗೆ ‘ಇಸ್ರಾಯೇಲ್‌ ರಾಜ ಅಹಾಬ ರಾಮೋತ್‌-ಗಿಲ್ಯಾದಿನ ವಿರುದ್ಧ ಯುದ್ಧಮಾಡೋಕೆ ಹೋಗಿ ಸಾಯೋ ತರ ಯಾರು ಅವನನ್ನ ಮರುಳು ಮಾಡ್ತೀರಾ?’ ಅಂತ ಕೇಳಿದಾಗ ಒಬ್ಬ ದೇವದೂತ ಒಂದು ಹೇಳಿದ್ರೆ, ಇನ್ನೊಬ್ಬ ದೇವದೂತ ಇನ್ನೊಂದು ಹೇಳ್ತಿದ್ದ. 20  ಆಗ ಒಬ್ಬ ದೇವದೂತ+ ಮುಂದೆ ಬಂದು ಯೆಹೋವನ ಮುಂದೆ ನಿಂತು ‘ಅವನನ್ನ ನಾನು ಮರುಳು ಮಾಡ್ತೀನಿ’ ಅಂದನು. ಅದಕ್ಕೆ ಯೆಹೋವ ಅವನಿಗೆ ‘ಹೇಗೆ ಮರುಳು ಮಾಡ್ತೀಯಾ?’ ಅಂತ ಕೇಳಿದನು. 21  ಅದಕ್ಕೆ ಅವನು ‘ನಾನು ಹೋಗಿ ಅವನ ಎಲ್ಲ ಪ್ರವಾದಿಗಳ ಬಾಯಿಂದ ಸುಳ್ಳನ್ನ ಹೇಳಿಸ್ತೀನಿ’ ಅಂದ. ಆಗ ಆತನು ‘ನೀನು ಅವನನ್ನ ಮರುಳು ಮಾಡ್ತೀಯ. ನೀನು ಮಾಡೇ ಮಾಡ್ತೀಯ. ಹೋಗು, ನೀನು ಹೇಳಿದ ಹಾಗೇ ಮಾಡು’ ಅಂದನು. 22  ಹಾಗಾಗಿ ಯೆಹೋವ ಈ ನಿನ್ನ ಎಲ್ಲ ಪ್ರವಾದಿಗಳ ಬಾಯಲ್ಲಿ ಸುಳ್ಳು ಹೇಳಿಸ್ತಿದ್ದಾನೆ.+ ಆದ್ರೆ ನಿಜ ಏನಂದ್ರೆ, ನಿನ್ನ ಮೇಲೆ ಕಷ್ಟ ಬರುತ್ತೆ ಅಂತ ಯೆಹೋವ ಮುಂಚೆನೇ ಹೇಳಿದ್ದಾನೆ” ಅಂದ. 23  ಕೆನಾನನ ಮಗ ಚಿದ್ಕೀಯ+ ಮೀಕಾಯೆಹು+ ಹತ್ರ ಬಂದು ಕಪಾಳಕ್ಕೆ ಹೊಡೆದು+ “ಯೆಹೋವನ ದೂತ ನನ್ನನ್ನ ಬಿಟ್ಟು ಯಾವತ್ತಿಂದ ನಿನ್ನ ಹತ್ರ ಮಾತಾಡ್ತಾ ಇದ್ದಾನೆ?”+ ಅಂತ ಕೇಳಿದ. 24  ಅದಕ್ಕೆ ಮೀಕಾಯೆಹು “ಯಾವ ದಿನ ನೀನು ಓಡಿಹೋಗಿ ಒಳಗಿನ ಕೋಣೆಯಲ್ಲಿ ಬಚ್ಚಿಟ್ಕೊಳ್ತೀಯೋ ಆ ದಿನ ನಿನಗೆ ಈ ಪ್ರಶ್ನೆಗೆ ಉತ್ತರ ಸಿಗುತ್ತೆ” ಅಂದ. 25  ಆಮೇಲೆ ಇಸ್ರಾಯೇಲ್‌ ರಾಜ ತನ್ನ ಸೇವಕರಿಗೆ “ಈ ಮೀಕಾಯೆಹುನ ಕರ್ಕೊಂಡು ಹೋಗಿ. ಇವನನ್ನ ಪಟ್ಟಣದ ಮುಖ್ಯಸ್ಥನಾಗಿರೋ ಆಮೋನನಿಗೆ, ರಾಜನ ಮಗನಾಗಿರೋ ಯೋವಾಷನಿಗೆ ಒಪ್ಪಿಸಿ. 26  ಅವ್ರಿಗೆ ನನ್ನ ಈ ಮಾತುಗಳನ್ನ ಹೇಳಿ ‘ಇವನನ್ನ ಜೈಲಿಗೆ ಹಾಕಿ,+ ನಾನು ಸಮಾಧಾನವಾಗಿ ವಾಪಸ್‌ ಬರೋ ತನಕ ಇವನಿಗೆ ಸ್ವಲ್ಪ ಊಟ, ನೀರು ಕೊಟ್ರೆ ಸಾಕು’” ಅಂದ. 27  ಆದ್ರೆ ಮೀಕಾಯೆಹು “ನೀನು ಸಮಾಧಾನವಾಗಿ ವಾಪಸ್‌ ಬಂದ್ರೆ ನಾನು ಹೇಳಿದ್ದು ಯೆಹೋವನ ಮಾತಲ್ಲ ಅಂತ ತಿಳ್ಕೋ”+ ಅಂತ ಹೇಳಿ ಜನ್ರಿಗೆ “ಈ ಮಾತನ್ನ ನೀವೆಲ್ಲ ಚೆನ್ನಾಗಿ ನೆನಪಿಟ್ಕೊಳ್ಳಿ” ಅಂದ. 28  ಇದಾದ್ಮೇಲೆ ಇಸ್ರಾಯೇಲ್‌ ರಾಜ, ಯೆಹೂದದ ರಾಜ ಯೆಹೋಷಾಫಾಟ ರಾಮೋತ್‌-ಗಿಲ್ಯಾದಿಗೆ ಹೋದ್ರು.+ 29  ಇಸ್ರಾಯೇಲ್‌ ರಾಜ ಯೆಹೋಷಾಫಾಟನಿಗೆ “ನಾನು ವೇಷ ಬದಲಾಯಿಸ್ಕೊಂಡು ಯುದ್ಧಕ್ಕೆ ಹೋಗ್ತೀನಿ. ನೀನು ರಾಜನ ಬಟ್ಟೆ ಹಾಕೊಂಡು ಬಾ” ಅಂದ. ಹೀಗೆ ಯೆಹೋಷಾಫಾಟ ಇಸ್ರಾಯೇಲ್‌ ರಾಜನ ವೇಷ ಹಾಕೊಂಡು ಯುದ್ಧಕ್ಕೆ ಹೋದ. 30  ಆಗ ಅರಾಮ್ಯದ ರಾಜ ತನ್ನ ರಥಗಳ ಅಧಿಪತಿಗಳಿಗೆ “ನೀವು ಮಾಮೂಲಿ ಸೈನಿಕರ ಜೊತೆ ಆಗಲಿ ದೊಡ್ಡ ಅಧಿಕಾರಿಗಳ ಜೊತೆ ಆಗಲಿ ಯುದ್ಧ ಮಾಡಬೇಡಿ. ಇಸ್ರಾಯೇಲ್‌ ರಾಜನ ಮೇಲೆನೇ ಗುರಿ ಇಡಿ” ಅಂತ ಹೇಳಿದ. 31  ರಥಗಳ ಅಧಿಪತಿಗಳು ಯೆಹೋಷಾಫಾಟನನ್ನ ನೋಡಿದ ತಕ್ಷಣ “ಇವನೇ ಇಸ್ರಾಯೇಲ್‌ ರಾಜ” ಅಂತ ಮಾತಾಡ್ಕೊಂಡ್ರು. ಹಾಗಾಗಿ ಅವರೆಲ್ಲ ಯೆಹೋಷಾಫಾಟನ ಮೇಲೆ ದಾಳಿ ಮಾಡಿದ್ರು. ಆಗ ಅವನು ಸಹಾಯಕ್ಕಾಗಿ ಕೂಗಿದ.+ ಆಗ ಯೆಹೋವ ಅವನಿಗೆ ತಕ್ಷಣ ಸಹಾಯಮಾಡಿ ಶತ್ರುಗಳನ್ನ ಅವನಿಂದ ದೂರ ಕರ್ಕೊಂಡು ಹೋದನು. 32  ಯೆಹೋಷಾಫಾಟ ಇಸ್ರಾಯೇಲ್‌ ರಾಜನಲ್ಲ ಅಂತ ರಥಗಳ ಅಧಿಪತಿಗಳಿಗೆ ಗೊತ್ತಾದಾಗ ಅವರು ಅವನನ್ನ ಅಟ್ಟಿಸ್ಕೊಂಡು ಹೋಗೋದನ್ನ ಬಿಟ್ಟುಬಿಟ್ರು. 33  ಆಗ ಒಬ್ಬ ಸೈನಿಕ ಹಾಗೇ ಸುಮ್ಮನೆ ಒಂದು ಬಾಣ ಬಿಟ್ಟ. ಅದು ಬಂದು ಇಸ್ರಾಯೇಲ್‌ ರಾಜನ ಯುದ್ಧ ಕವಚದ ಸಂದಿಗೆ ತಾಗಿತು. ಹಾಗಾಗಿ ರಾಜ ರಥದ ಸಾರಥಿಗೆ “ನನಗೆ ದೊಡ್ಡ ಗಾಯ ಆಗಿದೆ, ರಥ ತಿರುಗಿಸಿ ನನ್ನನ್ನ ರಣರಂಗದಿಂದ* ಹೊರಗೆ ಕರ್ಕೊಂಡು ಹೋಗು”+ ಅಂದ. 34  ಇಡೀ ದಿನ ದೊಡ್ಡ ಯುದ್ಧ ನಡಿತು. ಇಸ್ರಾಯೇಲ್‌ ರಾಜನಿಗೆ ಆಧಾರ ಕೊಟ್ಟು ಅರಾಮ್ಯರ ಮುಂದೆ ಅವನನ್ನ ರಥದಲ್ಲಿ ಸಂಜೆ ತನಕ ನಿಲ್ಲಿಸಬೇಕಾಯ್ತು. ಅವನು ಸೂರ್ಯ ಮುಳುಗೋ ಹೊತ್ತಿಗೆ ತೀರಿಹೋದ.+

ಪಾದಟಿಪ್ಪಣಿ

ಅಥವಾ “ತಳ್ಳುತ್ತಾ.”
ಅಕ್ಷ. “ಪಾಳೆಯದಿಂದ.”