ಎರಡನೇ ಪೂರ್ವಕಾಲವೃತ್ತಾಂತ 2:1-18

  • ಆಲಯ ಕಟ್ಟೋಕೆ ತಯಾರಿ (1-18)

2  ಯೆಹೋವನ ಹೆಸರಿಗೆ ಗೌರವ ತರೋಕೆ ಒಂದು ಆಲಯನ+ ಮತ್ತು ತನಗಾಗಿ ಒಂದು ಅರಮನೆಯನ್ನ ಕಟ್ಟೋಕೆ+ ಸೊಲೊಮೋನ ಆಜ್ಞೆ ಕೊಟ್ಟ.  ಸೊಲೊಮೋನ 70,000 ಗಂಡಸರನ್ನ ಭಾರ ಹೊರೋಕೆ, 80,000 ಗಂಡಸರನ್ನ ಬೆಟ್ಟಗಳಲ್ಲಿ ಕಲ್ಲು ಒಡೆಯೋಕೆ ನೇಮಿಸಿದ.+ ಇವ್ರ ಮೇಲೆ 3,600 ಮೇಲ್ವಿಚಾರಕರನ್ನ ಇಟ್ಟ.+  ಅಷ್ಟೇ ಅಲ್ಲ ಸೊಲೊಮೋನ ತೂರಿನ ರಾಜ ಹೀರಾಮನಿಗೆ+ ಈ ಸಂದೇಶ ಕಳಿಸಿದ “ನನ್ನ ಅಪ್ಪ ದಾವೀದ ಒಂದು ಅರಮನೆ ಕಟ್ಟಿದಾಗ ನೀನು ಅವನಿಗೆ ದೇವದಾರು ಮರದ ದಿಮ್ಮಿಗಳನ್ನ ಕಳಿಸಿಕೊಟ್ಟು ಸಹಾಯ ಮಾಡಿದ ಹಾಗೆ ನನಗೂ ಸಹಾಯಮಾಡು.+  ನಾನು ನನ್ನ ದೇವರಾದ ಯೆಹೋವನ ಹೆಸರಿಗೆ ಗೌರವ ತರೋಕೆ ಒಂದು ಆಲಯ ಕಟ್ಟಿ ಅದನ್ನ ಆತನಿಗೆ ಸಮರ್ಪಿಸಬೇಕು ಅಂತಿದ್ದೀನಿ. ಆಗ ಇಸ್ರಾಯೇಲ್ಯರಿಗೆ ಆತನ ಮುಂದೆ ಪರಿಮಳ ಧೂಪ ಸುಡೋಕೆ,+ ಅರ್ಪಣೆಯ ರೊಟ್ಟಿ ಇಡೋಕೆ+ ಮತ್ತು ದಿನಾ ಬೆಳಿಗ್ಗೆ ಸಂಜೆ,+ ಸಬ್ಬತ್‌ಗಳಲ್ಲಿ,+ ಅಮಾವಾಸ್ಯೆಗಳಲ್ಲಿ,+ ನಮ್ಮ ದೇವರಾದ ಯೆಹೋವನಿಗಾಗಿ ಆಚರಿಸೋ ಹಬ್ಬಗಳಲ್ಲಿ+ ಸರ್ವಾಂಗಹೋಮ ಬಲಿಗಳನ್ನ ಕೊಡೋಕೆ ಆಗುತ್ತೆ. ಇದನ್ನು ಅವರು ಯಾವಾಗ್ಲೂ ಮಾಡಬೇಕು.  ನಾನು ಕಟ್ಟೋ ಆಲಯ ಮಹಾ ಆಲಯ ಆಗಿರುತ್ತೆ. ಯಾಕಂದ್ರೆ ನಮ್ಮ ದೇವರು ಬೇರೆಲ್ಲ ದೇವರುಗಳಿಗಿಂತ ಮಹೋನ್ನತನು.  ಆಕಾಶ ಉನ್ನತವಾದ ಆಕಾಶ ಆತನಿಗೆ ಸಾಲಲ್ಲ. ಅಂಥದ್ದರಲ್ಲಿ ಆತನಿಗೆ ಒಂದು ಆಲಯ ಕಟ್ಟೋಕೆ ಯಾರಿಂದ ಆಗುತ್ತೆ?+ ನನ್ನಿಂದಾನೂ ಆಗಲ್ಲ. ಆತನ ಮುಂದೆ ಬಲಿಗಳನ್ನ ಕೊಡೋಕೆ ನಾನು ಬರೀ ಒಂದು ಜಾಗ ಕಟ್ತಿದ್ದೀನಿ ಅಷ್ಟೇ!  ಹಾಗಾಗಿ ಚಿನ್ನ, ಬೆಳ್ಳಿ, ತಾಮ್ರ,+ ಕಬ್ಬಿಣ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಮತ್ತು ನೀಲಿ ದಾರ ಹೀಗೆ ಎಲ್ಲ ಕೈಕೆಲಸದಲ್ಲಿ ನಿಪುಣನಾಗಿ ಇರೋ ವ್ಯಕ್ತಿನ ಮತ್ತು ಕೆತ್ತನೆ ಕೆಲಸ ಗೊತ್ತಿರೋ ವ್ಯಕ್ತಿನ ನನ್ನ ಹತ್ರ ಕಳಿಸು. ನನ್ನ ಅಪ್ಪ ದಾವೀದ ನನಗೆ ಕೊಟ್ಟ ಕರಕುಶಲಗಾರರ ಜೊತೆ ಅವನೂ ಸೇರಿ ಯೆಹೂದ ಮತ್ತು ಯೆರೂಸಲೇಮಲ್ಲಿ ಕೆಲಸ ಮಾಡಲಿ.+  ಅದ್ರ ಜೊತೆ ಲೆಬನೋನಿನಿಂದ ದೇವದಾರು, ಜುನಿಪರ್‌+ ಮತ್ತು ಗಂಧದ ಮರದ+ ದಿಮ್ಮಿಗಳನ್ನ ಕಳಿಸು. ನಿನ್ನ ಸೇವಕರು ಲೆಬನೋನಿನ+ ಮರಗಳನ್ನ ಕಡಿಯೋದ್ರಲ್ಲಿ ಅನುಭವಸ್ಥರು ಅಂತ ನನಗೆ ಚೆನ್ನಾಗಿ ಗೊತ್ತು. ನನ್ನ ಸೇವಕರು ನಿನ್ನ ಸೇವಕರ ಜೊತೆ ಕೆಲಸಮಾಡಿ,+  ತುಂಬ ಮರದ ದಿಮ್ಮಿಗಳನ್ನ ನನಗೆ ಮಾಡಿಕೊಡ್ತಾರೆ. ಯಾಕಂದ್ರೆ ನಾನು ಕಟ್ಟೋ ಆಲಯ ಭವ್ಯವಾದ ಅದ್ಭುತ ಕಟ್ಟಡವಾಗಿರುತ್ತೆ. 10  ನೋಡು! ಮರಗಳನ್ನ ಕಡಿಯೋ ನಿನ್ನ ಸೇವಕರಿಗೆ ಬೇಕಾದ ಆಹಾರನ ನಾನು ಕಳಿಸಿಕೊಡ್ತೀನಿ.+ ನಾನು ಅವ್ರಿಗಾಗಿ 20,000 ಕೋರ್‌ ಗೋದಿ,* 20,000 ಕೋರ್‌ ಬಾರ್ಲಿ,* 20,000 ಬತ್‌* ದ್ರಾಕ್ಷಾಮದ್ಯ, 20,000 ಬತ್‌ ಎಣ್ಣೆ ಕೊಡ್ತೀನಿ.” 11  ಅದಕ್ಕೆ ತೂರಿನ ರಾಜ ಹೀರಾಮ ಸೊಲೊಮೋನನಿಗೆ ಈ ಸಂದೇಶ ಕಳಿಸಿದ “ಯೆಹೋವ ತನ್ನ ಜನ್ರನ್ನ ಪ್ರೀತಿಸೋದ್ರಿಂದ ನಿನ್ನನ್ನ ಅವ್ರ ರಾಜನಾಗಿ ಮಾಡಿದ್ದಾನೆ. 12  ಆಕಾಶ ಭೂಮಿಯನ್ನ ಮಾಡಿದ ಇಸ್ರಾಯೇಲ್‌ ದೇವರಾದ ಯೆಹೋವನಿಗೆ ಹೊಗಳಿಕೆ ಸಿಗಲಿ. ಯಾಕಂದ್ರೆ ಆತನು ರಾಜ ದಾವೀದನಿಗೆ ವಿವೇಚನೆ ಮತ್ತು ತಿಳುವಳಿಕೆ+ ಇರೋ ಒಬ್ಬ ಬುದ್ಧಿವಂತ ಮಗನನ್ನ ಕೊಟ್ಟಿದ್ದಾನೆ.+ ಅವನು ಯೆಹೋವನಿಗಾಗಿ ಒಂದು ಆಲಯ ಮತ್ತು ತನಗಾಗಿ ಒಂದು ಅರಮನೆನ ಕಟ್ತಾನೆ. 13  ನಾನು ನಿನ್ನ ಹತ್ರ ಬುದ್ಧಿವಂತ ಹೂರಾಮಾಬೀಯನ ಕಳಿಸ್ತೀನಿ. ಅವನೊಬ್ಬ ನಿಪುಣ ಕರಕುಶಲಗಾರ.+ 14  ಅವನ ಅಮ್ಮ ದಾನ್‌ ಕುಲದವಳು. ಆದ್ರೆ ಅವನ ಅಪ್ಪ ತೂರಿನವನು. ಹೂರಾಮಾಬೀ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ಕಲ್ಲು, ಮರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಮತ್ತು ನೀಲಿ ದಾರ, ಒಳ್ಳೇ ಬಟ್ಟೆ ಹೀಗೆ ಎಲ್ಲ ಕೆಲಸಗಳಲ್ಲಿ ನಿಪುಣ.+ ಅಷ್ಟೇ ಅಲ್ಲ ಅವನಿಗೆ ಎಲ್ಲ ತರದ ಕೆತ್ತನೆ ಕೆಲಸನೂ ಗೊತ್ತು. ಯಾವ ಕೆತ್ತನೆ ಕೆಲಸ ಕೊಟ್ರೂ ಅವನು ಮಾಡ್ತಾನೆ.+ ನಿನ್ನ ಕರಕುಶಲಗಾರರ ಜೊತೆ ಮತ್ತು ನನ್ನ ಒಡೆಯ ನಿನ್ನ ತಂದೆ ದಾವೀದನ ಕರಕುಶಲಗಾರರ ಜೊತೆ ಅವನು ಕೆಲಸ ಮಾಡ್ತಾನೆ. 15  ನನ್ನ ಒಡೆಯನೇ, ನೀನು ನಿನ್ನ ಮಾತಿನ ಪ್ರಕಾರ ನಿನ್ನ ಸೇವಕರಿಗೆ ಗೋದಿ, ಬಾರ್ಲಿ, ಎಣ್ಣೆ ಮತ್ತು ದ್ರಾಕ್ಷಾಮದ್ಯನ ಕಳಿಸ್ಕೊಡು.+ 16  ನಿನಗೆ ಎಷ್ಟು ಬೇಕೋ ಅಷ್ಟು ಮರಗಳನ್ನ ನಾವು ಲೆಬನೋನಿನಿಂದ ಕಡಿದು ತರ್ತೀವಿ.+ ಅವುಗಳ ದಿಮ್ಮಿಗಳನ್ನ ಸಮುದ್ರದ ಮೂಲಕ ಯೊಪ್ಪಕ್ಕೆ+ ತಗೊಂಡು ಬರ್ತೀವಿ. ನೀನು ಅವುಗಳನ್ನ ಅಲ್ಲಿಂದ ಯೆರೂಸಲೇಮಿಗೆ ತಗೊಂಡು ಹೋಗು”+ ಅಂದ. 17  ಆಮೇಲೆ ಸೊಲೊಮೋನ ತನ್ನ ಅಪ್ಪ ದಾವೀದ ಮಾಡಿದ ಹಾಗೆ+ ಇಸ್ರಾಯೇಲ್‌ ದೇಶಕ್ಕೆ ವಿದೇಶಿಯರಾಗಿ ಬಂದ ಎಲ್ಲ ಗಂಡಸರ ಲೆಕ್ಕ ತಗೊಂಡ.+ ಅವ್ರ ಸಂಖ್ಯೆ 1,53,600 ಆಗಿತ್ತು. 18  ಹಾಗಾಗಿ ಸೊಲೊಮೋನ ಅವ್ರಲ್ಲಿ 70,000 ಗಂಡಸರನ್ನ ಭಾರ ಹೊರೋಕೆ, 80,000 ಗಂಡಸರನ್ನ ಬೆಟ್ಟಗಳಲ್ಲಿ ಕಲ್ಲು ಒಡೆಯೋಕೆ ನೇಮಿಸಿದ.+ ಇವ್ರ ಮೇಲೆ 3,600 ಮೇಲ್ವಿಚಾರಕರನ್ನ ಇಟ್ಟ.+

ಪಾದಟಿಪ್ಪಣಿ

ಒಂದು ಕೋರ್‌ ಅಳತೆಯ ಗೋದಿ=ಸುಮಾರು 170 ಕೆಜಿ. ಪರಿಶಿಷ್ಟ ಬಿ14 ನೋಡಿ.
ಒಂದು ಕೋರ್‌ ಅಳತೆಯ ಬಾರ್ಲಿ=ಸುಮಾರು 130 ಕೆಜಿ. ಪರಿಶಿಷ್ಟ ಬಿ14 ನೋಡಿ.
ಒಂದು ಬತ್‌=22 ಲೀ. ಪರಿಶಿಷ್ಟ ಬಿ14 ನೋಡಿ.