ಎರಡನೇ ಪೂರ್ವಕಾಲವೃತ್ತಾಂತ 21:1-20

  • ಯೆಹೋರಾಮ ಯೆಹೂದದ ರಾಜನಾದ (1-11)

  • ಎಲೀಯನಿಂದ ಒಂದು ಸಂದೇಶ ಸಿಕ್ತು (12-15)

  • ಯೆಹೋರಾಮನಿಗೆ ಕೊನೆಗೆ ಆದ ಗತಿ (16-20)

21  ಯೆಹೋಷಾಫಾಟ ತೀರಿಹೋದ. ಅವನನ್ನ ದಾವೀದಪಟ್ಟಣದಲ್ಲಿ ಸಮಾಧಿ ಮಾಡಿದ್ರು. ಆಮೇಲೆ ಅವನ ಮಗ ಯೆಹೋರಾಮ ರಾಜನಾದ.+  ಯೆಹೋರಾಮನ ಅಣ್ಣತಮ್ಮಂದಿರು ಯಾರಂದ್ರೆ ಅಜರ್ಯ, ಯೆಹೀಯೇಲ್‌, ಜೆಕರ್ಯ, ಅಜರ್ಯ, ಮೀಕಾಯೇಲ ಮತ್ತು ಶೆಫಟ್ಯ. ಇವ್ರೆಲ್ಲ ಇಸ್ರಾಯೇಲ್‌ ರಾಜ ಯೆಹೋಷಾಫಾಟನ ಮಕ್ಕಳು.  ಯೆಹೋಷಾಫಾಟ ತನ್ನ ಮಕ್ಕಳಿಗೆ ಚಿನ್ನಬೆಳ್ಳಿ, ಅಮೂಲ್ಯ ವಸ್ತುಗಳು ಮತ್ತು ಭದ್ರ ಕೋಟೆಗಳಿದ್ದ ಯೆಹೂದದ ಪಟ್ಟಣಗಳನ್ನ ಹೀಗೆ ತುಂಬ ಉಡುಗೊರೆಗಳನ್ನ ಕೊಟ್ಟಿದ್ದ.+ ಆದ್ರೆ ರಾಜ್ಯದ ಅಧಿಕಾರನ ಮೊದಲ ಮಗ ಯೆಹೋರಾಮನಿಗೆ ಕೊಟ್ಟ.+  ಯೆಹೋರಾಮ ಅಧಿಕಾರ ಪಡ್ಕೊಂಡ ಮೇಲೆ ಆ ಸ್ಥಾನವನ್ನ ಯಾರೂ ಕಿತ್ಕೊಬಾರದು ಅಂತ ತನ್ನ ಎಲ್ಲ ತಮ್ಮಂದಿರನ್ನ ಮತ್ತು ಇಸ್ರಾಯೇಲಿನ ಕೆಲವು ಅಧಿಕಾರಿಗಳನ್ನ ಕತ್ತಿಯಿಂದ ಕೊಂದುಬಿಟ್ಟ.+  ಯೆಹೋರಾಮ ರಾಜ ಆದಾಗ ಅವನಿಗೆ 32 ವರ್ಷ. ಅವನು ಯೆರೂಸಲೇಮಿಂದ ಎಂಟು ವರ್ಷ ಆಳಿದ.+  ಯೆಹೋರಾಮ ಅಹಾಬನ ಮಗಳನ್ನ ಮದ್ವೆ ಆಗಿದ್ರಿಂದ+ ಅಹಾಬನ ಮನೆತನದವರ ತರಾನೇ ಇಸ್ರಾಯೇಲ್‌ ರಾಜರ ದಾರಿಯಲ್ಲೇ ನಡೆದ.+ ಅವನು ಯೆಹೋವನಿಗೆ ಇಷ್ಟ ಆಗದೇ ಇರೋದನ್ನೇ ಮಾಡ್ತಿದ್ದ.  ಆದ್ರೆ ಯೆಹೋವ ತನ್ನ ಸೇವಕ ದಾವೀದನ ಜೊತೆ ಮಾಡ್ಕೊಂಡಿದ್ದ ಒಪ್ಪಂದದ ಸಲುವಾಗಿ ದಾವೀದನ ಮನೆತನನ ನಾಶಮಾಡೋಕೆ ಇಷ್ಟಪಡಲಿಲ್ಲ.+ ಯಾಕಂದ್ರೆ ಅವನ ವಂಶದವರು ಯಾವಾಗ್ಲೂ ಆಳೋ ತರ ಮಾಡ್ತೀನಿ* ಅಂತ ದೇವರು ಅವನಿಗೆ ಮಾತು ಕೊಟ್ಟಿದ್ದ.+  ಯೆಹೋರಾಮನ ದಿನಗಳಲ್ಲಿ ಎದೋಮ್ಯರು ಯೆಹೂದದ ಮೇಲೆ ತಿರುಗಿಬಿದ್ದು+ ತಮಗಾಗಿ ಒಬ್ಬ ರಾಜನನ್ನ ನೇಮಿಸಿಕೊಂಡ್ರು.+  ಹಾಗಾಗಿ ಯೆಹೋರಾಮ ತನ್ನ ಸೇನಾಪತಿಗಳ ಜೊತೆ ತನ್ನ ಎಲ್ಲ ರಥಗಳನ್ನ ತಗೊಂಡು ಎದೋಮಿಗೆ ಹೋದ. ಅವನನ್ನ ಸುತ್ಕೊಂಡಿದ್ದ ಎದೋಮ್ಯರ ಮತ್ತು ಅವ್ರ ರಥಗಳ ಅಧಿಪತಿಗಳ ಮೇಲೆ ರಾತ್ರೋರಾತ್ರಿ ದಾಳಿ ಮಾಡಿ ಅವ್ರನ್ನ ಸೋಲಿಸಿದ. 10  ಆದ್ರೆ ಇವತ್ತಿನ ತನಕ ಎದೋಮ್ಯರು ಯೆಹೂದದ ವಿರುದ್ಧ ಯುದ್ಧ ಮಾಡೋದನ್ನ ಬಿಟ್ಟಿಲ್ಲ. ಆಗ ಲಿಬ್ನದವರೂ+ ಅವನ ವಿರುದ್ಧ ತಿರುಗಿಬಿದ್ರು. ಯಾಕಂದ್ರೆ ಅವನು ತನ್ನ ಪೂರ್ವಜರ ದೇವರಾದ ಯೆಹೋವನನ್ನ ಬಿಟ್ಟುಬಿಟ್ಟಿದ್ದ.+ 11  ಯೆರೂಸಲೇಮಲ್ಲಿ ಇರೋರೆಲ್ಲ ದೇವ್ರಿಗೆ ನಂಬಿಕೆ ದ್ರೋಹ ಮಾಡಬೇಕಂತ ಅವನು ಯೆಹೂದದ ಬೆಟ್ಟದ ಮೇಲೆ ದೇವಸ್ಥಾನಗಳನ್ನ ಕಟ್ಟಿಸಿದ.+ ಅವನು ಯೆಹೂದದವರನ್ನ ತಪ್ಪುದಾರಿಗೆ ನಡೆಸಿದ. 12  ಸ್ವಲ್ಪ ಸಮಯ ಆದ್ಮೇಲೆ ಪ್ರವಾದಿ ಎಲೀಯನಿಂದ+ ಅವನಿಗೊಂದು ಸಂದೇಶ ಸಿಕ್ತು. ಅದು ಹೀಗಿತ್ತು “ನಿನ್ನ ಪೂರ್ವಜ ದಾವೀದನ ದೇವರಾದ ಯೆಹೋವ ಹೀಗೆ ಹೇಳ್ತಾನೆ ‘ನೀನು ನಿನ್ನ ಅಪ್ಪ ಯೆಹೋಷಾಫಾಟನ ಅಥವಾ ಯೆಹೂದದ ರಾಜ ಆಸನ ದಾರಿಯಲ್ಲಿ ನಡೆಯದೆ,+ 13  ಇಸ್ರಾಯೇಲ್‌ ರಾಜರ ದಾರಿಯಲ್ಲಿ ನಡೆದೆ.+ ಅಹಾಬನ ಮನೆತನದವರು ನಂಬಿಕೆ ದ್ರೋಹ ಮಾಡಿದಂತೆ+ ಯೆಹೂದದ ಮತ್ತು ಯೆರೂಸಲೇಮಿನ ಜನ್ರೂ ನಂಬಿಕೆ ದ್ರೋಹ ಮಾಡೋ ತರ ಮಾಡಿದೆ.+ ನಿನ್ನ ಸ್ವಂತ ಅಣ್ಣತಮ್ಮಂದಿರನ್ನ ಕೊಂದು ಹಾಕಿದೆ.+ ಅವರು ನಿನಗಿಂತ ಎಷ್ಟೋ ಒಳ್ಳೆಯವರಾಗಿದ್ರು. 14  ಹಾಗಾಗಿ ಯೆಹೋವ ನಿನ್ನ ಜನ್ರ ಮೇಲೆ, ನಿನ್ನ ಮಕ್ಕಳ ಮೇಲೆ, ನಿನ್ನ ಹೆಂಡತಿಯರ ಮೇಲೆ ಮತ್ತು ನಿನ್ನ ಎಲ್ಲ ಆಸ್ತಿ ಮೇಲೆ ದೊಡ್ಡ ವಿಪತ್ತನ್ನ ತರ್ತಾನೆ. 15  ನೀನು ತುಂಬ ರೋಗಗಳಿಂದ ನರಳ್ತೀಯ. ನಿನಗೆ ಕರುಳಿನ ರೋಗಾನೂ ಬರುತ್ತೆ. ಆ ರೋಗ ದಿನದಿಂದ ದಿನಕ್ಕೆ ಜಾಸ್ತಿ ಆಗಿ ಕೊನೆಗೆ ನಿನ್ನ ಕರುಳು ಹೊರಗೆ ಬರುತ್ತೆ’” ಅಂದನು. 16  ಯೆಹೋರಾಮನ ವಿರುದ್ಧ ಆಕ್ರಮಣ ಮಾಡೋಕೆ ಯೆಹೋವ ಫಿಲಿಷ್ಟಿಯರ+ ಮತ್ತು ಇಥಿಯೋಪ್ಯರ ಹತ್ರ ಇದ್ದ ಅರಬಿಯರ+ ಮನಸ್ಸನ್ನ ತಿರುಗಿಸಿದ.+ 17  ಹಾಗಾಗಿ ಅವರು ಯೆಹೂದದ ಮೇಲೆ ಆಕ್ರಮಣ ಮಾಡಿ ಅವ್ರ ದೇಶಕ್ಕೆ ನುಗ್ಗಿ ರಾಜನ ಅರಮನೆಯಲ್ಲಿ ಸಿಕ್ಕ ಎಲ್ಲ ಆಸ್ತಿಯನ್ನ,+ ಅವನ ಮಕ್ಕಳನ್ನ, ಹೆಂಡತಿಯರನ್ನ ತಗೊಂಡು ಹೋದ್ರು. ಅವನ ಕಿರಿ ಮಗ ಯೆಹೋವಾಹಾಜನನ್ನ*+ ಬಿಟ್ಟು ಬೇರೆ ಎಲ್ಲರನ್ನೂ ತಗೊಂಡು ಹೋದ್ರು. 18  ಇಷ್ಟೆಲ್ಲ ಆದ್ಮೇಲೆ ಯೆಹೋವ ಅವನಿಗೆ ವಾಸಿಯಾಗದ ಕರುಳು ರೋಗ ಬರೋ ತರ ಮಾಡಿದನು.+ 19  ಸ್ವಲ್ಪ ಸಮಯ ಅಂದ್ರೆ ಎರಡು ವರ್ಷ ಆದ್ಮೇಲೆ ಅವನ ರೋಗದಿಂದ ಅವನ ಕರುಳು ಹೊರಗೆ ಬಂತು. ಈ ರೋಗದಿಂದ ಅವನು ತುಂಬ ನರಳಾಡಿದ, ಕೊನೆಗೆ ಸತ್ತುಹೋದ. ಅವನ ಪೂರ್ವಜರಿಗೆ ಗೌರವ ಕೊಡೋಕೆ ದೊಡ್ಡ ಬೆಂಕಿ ಹಚ್ಚಿದ ಹಾಗೆ ಅವನ ಜನ್ರು ಅವನಿಗೆ ಮಾಡಲಿಲ್ಲ.+ 20  ಅವನು ರಾಜ ಆದಾಗ ಅವನಿಗೆ 32 ವರ್ಷ. ಅವನು ಯೆರೂಸಲೇಮಿಂದ ಎಂಟು ವರ್ಷ ಆಳಿದ. ಅವನು ಸತ್ತಾಗ ಯಾರೂ ಅಳಲಿಲ್ಲ. ಹಾಗಾಗಿ ಅವನನ್ನ ರಾಜರ ಸಮಾಧಿಯಲ್ಲಿ ಹೂಣಿಡದೆ+ ದಾವೀದಪಟ್ಟಣದಲ್ಲಿ ಹೂಣಿಟ್ರು.+

ಪಾದಟಿಪ್ಪಣಿ

ಅಕ್ಷ. “ಅವನಿಗೆ ಒಂದು ದೀಪ ಕೊಡ್ತೀನಿ.”
ಇವನಿಗೆ ಅಹಜ್ಯ ಅನ್ನೋ ಹೆಸ್ರೂ ಇದೆ.