ಎರಡನೇ ಪೂರ್ವಕಾಲವೃತ್ತಾಂತ 22:1-12

  • ಅಹಜ್ಯ ಯೆಹೂದದ ರಾಜನಾದ (1-9)

  • ಅತಲ್ಯ ಸಿಂಹಾಸನವನ್ನ ಕಿತ್ಕೊಂಡಿದ್ದು (10-12)

22  ಆಮೇಲೆ ಯೆರೂಸಲೇಮಿನ ಜನ್ರು ಯೆಹೋರಾಮನ ಕಿರಿಮಗ ಅಹಜ್ಯನನ್ನ ರಾಜನಾಗಿ ಮಾಡಿದ್ರು. ಯಾಕಂದ್ರೆ ಅರಬಿಯರ ಜೊತೆ ಪಾಳೆಯಕ್ಕೆ ಬಂದಿದ್ದ ಲೂಟಿಗಾರರ ಗುಂಪು ಯೆಹೋರಾಮನ ಬೇರೆ ಮಕ್ಕಳನ್ನೆಲ್ಲ ಕೊಂದುಹಾಕಿತ್ತು.+ ಹಾಗಾಗಿ ಯೆಹೋರಾಮನ ಮಗ ಅಹಜ್ಯ ಯೆಹೂದದ ಮೇಲೆ ಆಳ್ವಿಕೆ ಮಾಡೋಕೆ ಶುರುಮಾಡಿದ.+  ಅಹಜ್ಯ ರಾಜ ಆದಾಗ ಅವನಿಗೆ 22 ವರ್ಷ. ಅವನು ಯೆರೂಸಲೇಮಿಂದ ಒಂದು ವರ್ಷ ಆಳಿದ. ಅವನ ತಾಯಿ ಹೆಸ್ರು ಅತಲ್ಯ.+ ಇವಳು ಒಮ್ರಿಯ+ ಮೊಮ್ಮಗಳು.*  ಅಹಜ್ಯ ಅಹಾಬನ ಮನೆತನದವ್ರ ತರಾನೇ ನಡ್ಕೊಂಡ.+ ಯಾಕಂದ್ರೆ ಅವನ ತಾಯಿನೇ ಅವನಿಗೆ ಕೆಟ್ಟದ್ದು ಮಾಡೋಕೆ ಹೇಳಿ ಕೊಡ್ತಿದ್ದಳು.  ಅವನು ಅಹಾಬನ ಮನೆತನದವ್ರ ತರಾನೇ ಯೆಹೋವನಿಗೆ ಇಷ್ಟ ಆಗದೇ ಇರೋದನ್ನೇ ಮಾಡ್ತಿದ್ದ. ಅವನ ತಂದೆ ಸತ್ತ ಮೇಲೆ ಅಹಾಬನ ಮನೆತನದವ್ರೇ ಅವನಿಗೆ ಸಲಹೆ ಕೊಡ್ತಿದ್ರು. ಇದು ಅವನ ನಾಶಕ್ಕೆ ದಾರಿ ಮಾಡಿಕೊಡ್ತು.  ಅವನು ಅವ್ರ ಸಲಹೆ ಪ್ರಕಾರ ಇಸ್ರಾಯೇಲ್‌ ರಾಜ ಅಹಾಬನ ಮಗ ಯೆಹೋರಾಮನ ಜೊತೆ ಸೇರಿ ಅರಾಮ್ಯರ ರಾಜ ಹಜಾಯೇಲನ+ ವಿರುದ್ಧ ಯುದ್ಧಮಾಡೋಕೆ ರಾಮೋತ್‌-ಗಿಲ್ಯಾದಿಗೆ+ ಹೋದ. ಅಲ್ಲಿ ಬಿಲ್ಲುಗಾರರು ಯೆಹೋರಾಮನಿಗೆ ಗಾಯ ಮಾಡಿದ್ರು.  ಸೈನಿಕರು ರಾಜ ಯೆಹೋರಾಮನಿಗೆ ಗಾಯ ಮಾಡಿದ್ರಿಂದ+ ಅವನು ವಾಸಿ ಆಗೋಕೆ ರಾಮದಿಂದ ಇಜ್ರೇಲಿಗೆ+ ಹೋದ. ಗಾಯಗೊಂಡಿದ್ದ+ ಅಹಾಬನ ಮಗ ಯೆಹೋರಾಮನನ್ನ+ ನೋಡೋಕೆ ಯೆಹೂದದ ರಾಜ ಯೆಹೋರಾಮನ+ ಮಗ ಅಹಜ್ಯ* ಇಜ್ರೇಲಿಗೆ ಹೋದ.  ಅಹಜ್ಯ ಯೆಹೋರಾಮನನ್ನ ನೋಡೋಕೆ ಬಂದಾಗ ಅಲ್ಲೇ ನಾಶ ಆಗೋ ತರ ದೇವರು ಮಾಡಿದನು. ಅಹಜ್ಯ ಯೆಹೋರಾಮನ ಜೊತೆ ನಿಂಷಿಯ ಮೊಮ್ಮಗ* ಯೇಹುನ ಭೇಟಿ ಮಾಡೋಕೆ ಹೋದ.+ ಅಹಾಬನ ಮನೆತನವನ್ನ ನಾಶಮಾಡೋಕೆ ಯೇಹುವನ್ನ ಯೆಹೋವ ಅಭಿಷೇಕ ಮಾಡಿದ್ದನು.+  ಯೇಹು ಅಹಾಬನ ಮನೆತನದ ಮೇಲೆ ನ್ಯಾಯತೀರ್ಪನ್ನ ಜಾರಿಗೆ ತರೋಕೆ ಶುರುಮಾಡಿದಾಗ ಯೆಹೂದದ ಅಧಿಕಾರಿಗಳನ್ನ, ಅಹಜ್ಯನ ಅಣ್ಣತಮ್ಮಂದಿರ ಮಕ್ಕಳನ್ನ, ಅಹಜ್ಯನ ಸೇವಕರನ್ನ ಅಲ್ಲಿ ನೋಡಿ ಅವ್ರನ್ನ ಕೊಂದುಹಾಕಿದ.+  ಆಮೇಲೆ ಅಹಜ್ಯನನ್ನ ಹುಡುಕೋಕೆ ಯೇಹು ಜನ್ರನ್ನ ಕಳಿಸಿದ. ಅವನು ಸಮಾರ್ಯದಲ್ಲಿ ಬಚ್ಚಿಟ್ಕೊಂಡಿದ್ದ. ಅವರು ಅವನನ್ನ ಹಿಡಿದು ಯೇಹು ಹತ್ರ ತಂದ್ರು. ಆಮೇಲೆ ಅವನನ್ನ ಕೊಂದು ಹೂಣಿಟ್ರು.+ ಅವರು ಅವನ ಬಗ್ಗೆ “ಇವನು ಪೂರ್ಣ ಹೃದಯದಿಂದ ಯೆಹೋವನಿಗಾಗಿ ಹುಡುಕಿದ ಯೆಹೋಷಾಫಾಟನ ಮೊಮ್ಮಗ”+ ಅಂತ ಹೇಳಿದ್ರು. ಅಹಜ್ಯನ ಮನೆತನದಲ್ಲಿ ರಾಜ್ಯ ಆಳೋ ಸಾಮರ್ಥ್ಯ ಯಾರಿಗೂ ಇರಲಿಲ್ಲ. 10  ಅಹಜ್ಯನ ತಾಯಿ ಅತಲ್ಯ+ ತನ್ನ ಮಗ ಸತ್ತು ಹೋಗಿದ್ದನ್ನ ನೋಡಿ ಯೆಹೂದದ ರಾಜ ವಂಶದಲ್ಲಿದ್ದ ಎಲ್ರನ್ನ ನಾಶಮಾಡಿದಳು.+ 11  ಆದ್ರೆ ರಾಜನ+ ಮಗಳಾದ ಯೆಹೋಷೆಬ ಅಹಜ್ಯನ ಮಗನಾಗಿದ್ದ ಯೆಹೋವಾಷನನ್ನ+ ಕಾಪಾಡಿದ್ದಳು. ಅತಲ್ಯ ರಾಜನ ಮಕ್ಕಳನ್ನ ಸಾಯಿಸಬೇಕು ಅಂತ ಇದ್ದಿದ್ರಿಂದ ಯೆಹೋಷೆಬ ಇವನೊಬ್ಬನನ್ನ ಯಾರಿಗೂ ಗೊತ್ತಾಗದ ಹಾಗೆ ಕದ್ದು ತಗೊಂಡು ಬಂದಿದ್ದಳು. ಮಲಗೋ ಕೋಣೆಯಲ್ಲಿ ಅವನನ್ನ ಮತ್ತು ಅವನ ದಾದಿಯನ್ನ ಬಚ್ಚಿಟ್ಟಳು. ಯಾವ ಕಾರಣಕ್ಕೂ ಯೆಹೋವಾಷ ಅತಲ್ಯಳ ಕೈಗೆ ಸಿಗದ ಹಾಗೆ ಯೆಹೋಷೆಬ (ಇವಳು ಪುರೋಹಿತ ಯೆಹೋಯಾದನ+ ಹೆಂಡತಿ ಆಗಿದ್ದಳು ಮತ್ತು ಅಹಜ್ಯನ ಅಕ್ಕ ಆಗಿದ್ದಳು) ನೋಡ್ಕೊಂಡಳು. ಹಾಗಾಗಿ ಅತಲ್ಯಳಿಗೆ ಯೆಹೋವಾಷನನ್ನ ಸಾಯಿಸೋಕೆ ಆಗಲಿಲ್ಲ.+ 12  ಹೀಗೆ ಅವನು ಆರು ವರ್ಷದ ತನಕ ಅವ್ರ ಜೊತೆಗಿದ್ದ. ಸತ್ಯ ದೇವರ ಆಲಯದಲ್ಲಿ ಅವನನ್ನ ಬಚ್ಚಿಟ್ಟಿದ್ರು. ಆ ಸಮಯದಲ್ಲಿ ಅತಲ್ಯ ದೇಶವನ್ನ ಆಳ್ತಿದ್ದಳು.

ಪಾದಟಿಪ್ಪಣಿ

ಅಕ್ಷ. “ಮಗಳು.”
ಕೆಲವು ಹೀಬ್ರು ಮೂಲಪ್ರತಿಗಳಲ್ಲಿ “ಅಜರ್ಯ” ಅಂತಿದೆ.
ಅಕ್ಷ. “ಮಗ.”