ಎರಡನೇ ಪೂರ್ವಕಾಲವೃತ್ತಾಂತ 23:1-21

  • ಯೆಹೋಯಾದನ ಮಧ್ಯಪ್ರವೇಶ, ಯೆಹೋವಾಷ ರಾಜನಾದ (1-11)

  • ಅತಲ್ಯಳ ಸಾವು (12-15)

  • ಯೆಹೋಯಾದ ಮಾಡಿದ ಸುಧಾರಣೆ (16-21)

23  ಪುರೋಹಿತ ಯೆಹೋಯಾದ ಏಳನೇ ವರ್ಷದಲ್ಲಿ ಧೈರ್ಯದಿಂದ ಹೆಜ್ಜೆ ತಗೊಂಡ. ಅವನು ನೂರು ಜನ್ರ ಮೇಲೆ ಅಧಿಕಾರಿಗಳಾಗಿದ್ದ+ ಯೆರೋಹಾಮನ ಮಗ ಅಜರ್ಯ, ಯೆಹೋಹಾನಾನನ ಮಗ ಇಷ್ಮಾಯೇಲ್‌, ಓಬೇದನ ಮಗ ಅಜರ್ಯ, ಅದಾಯನ ಮಗ ಮಾಸೇಯ, ಜಿಕ್ರಿಯ ಮಗ ಎಲೀಷಾಫಾಟನ ಜೊತೆ ಒಂದು ಒಪ್ಪಂದ ಮಾಡ್ಕೊಂಡ.  ಆಮೇಲೆ ಅವರು ಯೆಹೂದದಲ್ಲೆಲ್ಲ ತಿರುಗಾಡಿ ಎಲ್ಲ ಪಟ್ಟಣಗಳಿಂದ ಲೇವಿಯರನ್ನ+ ಮತ್ತು ಇಸ್ರಾಯೇಲ್‌ ಕುಲದ ಮುಖ್ಯಸ್ಥರನ್ನ ಒಟ್ಟುಸೇರಿಸಿದ್ರು. ಅವ್ರೆಲ್ಲ ಯೆರೂಸಲೇಮಿಗೆ ಬಂದಾಗ,  ಇಡೀ ಸಭೆ ಸತ್ಯದೇವರ ಆಲಯದಲ್ಲಿ ರಾಜನ ಜೊತೆ ಒಂದು ಒಪ್ಪಂದ ಮಾಡಿಕೊಳ್ತು.+ ಆಮೇಲೆ ಯೆಹೋಯಾದ ಅವ್ರಿಗೆ, “ನೋಡಿ! ದಾವೀದನ ಮಕ್ಕಳ ಬಗ್ಗೆ ಯೆಹೋವ ಮಾತು ಕೊಟ್ಟ ಹಾಗೆ ರಾಜಕುಮಾರ ಆಳ್ತಾನೆ.+  ನೀವು ಹೀಗೆ ಮಾಡಿ, ಸಬ್ಬತ್‌ ದಿನ ಕೆಲಸಕ್ಕೆ ಬರೋ ಪುರೋಹಿತರನ್ನ ಮತ್ತು ಲೇವಿಯರನ್ನ ಮೂರು ಗುಂಪು ಮಾಡಬೇಕು.+ ಅದ್ರಲ್ಲಿ ಒಂದು ಗುಂಪು ಬಾಗಿಲು ಕಾಯಬೇಕು.+  ಎರಡನೇ ಗುಂಪು ರಾಜನ ಅರಮನೆಯಲ್ಲಿ ಇರಬೇಕು.+ ಮೂರನೇ ಗುಂಪು ‘ಬುನಾದಿ’ ಅಂತ ಕರೆಯೋ ಬಾಗಿಲ ಹತ್ರ ಇರಬೇಕು. ಉಳಿದ ಜನ್ರು ಯೆಹೋವನ ಆಲಯದ ಅಂಗಳದಲ್ಲಿ+ ಇರಬೇಕು.  ಆಲಯದಲ್ಲಿ ಸೇವೆಮಾಡೋ ಪುರೋಹಿತರು ಮತ್ತು ಲೇವಿಯರು+ ಇವರನ್ನ ಬಿಟ್ಟು ಬೇರೆ ಯಾರೂ ಯೆಹೋವನ ಆಲಯದ ಒಳಗೆ ಬರದ ಹಾಗೆ ನೋಡ್ಕೊಬೇಕು. ಅವ್ರನ್ನ ಪವಿತ್ರ ಸೇವೆ ಮಾಡೋಕೆ ಶುದ್ಧ ಮಾಡಿರೋದ್ರಿಂದ ಅವರು ಆಲಯದ ಒಳಗೆ ಹೋಗಬಹುದು. ಉಳಿದ ಜನ್ರು ಯೆಹೋವನ ಕಡೆಗೆ ತಮಗಿರೋ ಜವಾಬ್ದಾರಿನ ಮಾಡಬೇಕು.  ಲೇವಿಯರು ತಮ್ಮ ಕೈಯಲ್ಲಿ ಆಯುಧಗಳನ್ನ ಹಿಡ್ಕೊಂಡು ರಾಜನ ಸುತ್ತ ನಿಂತಿರಬೇಕು. ಯಾರಾದ್ರೂ ಅರಮನೆ ಒಳಗೆ ಕಾಲಿಟ್ರೆ ಅವ್ರನ್ನ ಸಾಯಿಸಬೇಕು. ರಾಜ ಎಲ್ಲಿಗೆ ಹೋದ್ರೂ* ನೀವು ಅವನ ಜೊತೆ ಇರಬೇಕು” ಅಂತ ಆಜ್ಞೆ ಕೊಟ್ಟ.  ಲೇವಿ ಮತ್ತು ಯೆಹೂದದ ಎಲ್ಲ ಜನ್ರು ಪುರೋಹಿತ ಯೆಹೋಯಾದ ಹೇಳಿದ ತರ ಮಾಡಿದ್ರು. ಪ್ರತಿಯೊಬ್ಬ ಅಧಿಕಾರಿ ಸಬ್ಬತ್‌ ದಿನ ಕೆಲಸ ಮಾಡ್ತಿದ್ದ ಕಾವಲುಗಾರರನ್ನೂ ಕೆಲಸ ಮಾಡದ ಕಾವಲುಗಾರರನ್ನೂ ಕರ್ಕೊಂಡು ಬಂದ.+ ಯಾಕಂದ್ರೆ ಪುರೋಹಿತ ಯೆಹೋಯಾದ ಯಾವ ದಳದಲ್ಲಿ ಕೆಲಸ ಮಾಡುತ್ತಿದ್ದವರಿಗೂ ರಜಾ ಕೊಟ್ಟಿರಲಿಲ್ಲ.+  ಆಮೇಲೆ ಪುರೋಹಿತ ಯೆಹೋಯಾದ ನೂರು ಜನ್ರ ಮೇಲೆ ಅಧಿಕಾರಿಗಳಾಗಿ+ ಇದ್ದವರಿಗೆ ರಾಜ ದಾವೀದನಿಗೆ ಸೇರಿದ್ದ ಈಟಿ, ಚಿಕ್ಕಚಿಕ್ಕ ಗುರಾಣಿ* ಮತ್ತು ವೃತ್ತಾಕಾರದ ಗುರಾಣಿಗಳನ್ನ+ ಕೊಟ್ಟ. ಅವು ಸತ್ಯ ದೇವರ ಆಲಯದಲ್ಲಿ ಇದ್ವು.+ 10  ಆಮೇಲೆ ಅವನು ಆಯುಧ* ಹಿಡ್ಕೊಂಡಿದ್ದ ಎಲ್ಲ ಜನ್ರನ್ನ ಅರಮನೆಯ ಬಲಗಡೆಯಿಂದ ಹಿಡಿದು ಎಡಗಡೆಯ ತನಕ ಅವರವರ ಸ್ಥಾನದಲ್ಲಿ ನಿಲ್ಲಿಸಿದ. ಯಜ್ಞವೇದಿ ಹತ್ರ ಮತ್ತು ಅರಮನೆಯ ಹತ್ರ ಅಂದ್ರೆ ರಾಜನ ಸುತ್ತ ಅವರು ಕಾವಲು ನಿಂತ್ರು. 11  ಆಮೇಲೆ ಅವರು ರಾಜನ ಮಗನನ್ನ ಕರ್ಕೊಂಡು ಬಂದು+ ಅವನ ತಲೆ ಮೇಲೆ ಕಿರೀಟ* ಇಟ್ಟು, ದೇವರ ನಿಯಮಗಳಿದ್ದ ಸುರುಳಿಯನ್ನ ಅವನಿಗೆ ಕೊಟ್ಟು+ ರಾಜನಾಗಿ ಮಾಡಿದ್ರು. ಯೆಹೋಯಾದ ಮತ್ತು ಅವನ ಮಕ್ಕಳು ಅವನನ್ನ ಅಭಿಷೇಕ ಮಾಡಿದ್ರು. ಆಗ ಜನ್ರು “ರಾಜ ಚಿರಂಜೀವಿ ಆಗಿರಲಿ!”+ ಅಂತ ಕೂಗಿದ್ರು. 12  ಜನ್ರು ಓಡಾಡೋ ಶಬ್ದ ಮತ್ತು ರಾಜನಿಗೆ ಜೈಕಾರ ಹಾಕೋ ಶಬ್ದ ಅತಲ್ಯ ಕಿವಿಗೆ ಬಿತ್ತು. ತಕ್ಷಣ ಅವಳು ಯೆಹೋವನ ಆಲಯದಲ್ಲಿದ್ದ ಜನ್ರ ಹತ್ರ ಬಂದಳು.+ 13  ಬಾಗಿಲ ಹತ್ರ ರಾಜ ಒಂದು ಕಂಬದ* ಪಕ್ಕದಲ್ಲಿ ನಿಂತಿದ್ದನ್ನ ನೋಡಿದಳು. ಅಧಿಕಾರಿಗಳು+ ಮತ್ತು ತುತ್ತೂರಿ ಊದೋರು ರಾಜನ ಜೊತೆ ಇದ್ರು. ದೇಶದ ಜನ್ರೆಲ್ಲ ಖುಷಿಖುಷಿಯಾಗಿ+ ತುತ್ತೂರಿ ಊದುತ್ತಿದ್ರು. ಗಾಯಕರು ಸಂಗೀತ ವಾದ್ಯ ಹಿಡ್ಕೊಂಡು ಜೈಕಾರ ಹಾಕ್ತಾ ಮುಂದಿನ ಸಾಲಲ್ಲಿ ನಿಂತಿದ್ರು.* ಇದನ್ನೆಲ್ಲ ನೋಡಿ ಅತಲ್ಯ ಬಟ್ಟೆ ಹರ್ಕೊಂಡು “ದ್ರೋಹ! ದ್ರೋಹ!” ಅಂತ ಕಿರುಚಾಡಿದಳು. 14  ಆಗ ಪುರೋಹಿತ ಯೆಹೋಯಾದ ನೂರು ಜನ್ರ ಮೇಲೆ ಅಧಿಕಾರಿಗಳಾಗಿ ಇದ್ದವರಿಗೆ “ಆ ಹೆಂಗಸನ್ನ ಸೈನಿಕರ ಗುಂಪಿನ ಮಧ್ಯದಿಂದ ಹೊರಗೆ ಕರ್ಕೊಂಡು ಹೋಗಿ. ಯಾರಾದ್ರೂ ಅವಳ ಹಿಂದೆ ಹೋದ್ರೆ ಅವನನ್ನ ಕತ್ತಿಯಿಂದ ಸಾಯಿಸಿ!” ಅಂತ ಹೇಳಿ ಹೊರಗೆ ಕಳಿಸಿದ. ಪುರೋಹಿತ ಅವ್ರಿಗೆ “ಅವಳನ್ನ ಯೆಹೋವನ ಆಲಯದಲ್ಲಿ ಸಾಯಿಸಬೇಡಿ” ಅಂತ ಹೇಳಿದ್ದ. 15  ಹಾಗಾಗಿ ಅವರು ಅವಳನ್ನ ಹಿಡಿದು, ಅರಮನೆಯ ‘ಕುದುರೆ ಬಾಗಿಲ’ ಹತ್ರ ಕರ್ಕೊಂಡು ಬಂದು ಅಲ್ಲೇ ಅವಳನ್ನ ಸಾಯಿಸಿಬಿಟ್ರು. 16  ಆಮೇಲೆ ಯೆಹೋಯಾದ ಯೆಹೋವನ ಜನ್ರಾಗೇ ಇರ್ತೀವಿ ಅಂತ ರಾಜನ ಜೊತೆ ಮತ್ತು ಜನ್ರ ಜೊತೆ ಒಂದು ಒಪ್ಪಂದ ಮಾಡಿಕೊಂಡ.+ 17  ಇದಾದ ಮೇಲೆ ದೇಶದ ಜನ್ರೆಲ್ಲ ಬಾಳನ ದೇವಾಲಯಕ್ಕೆ ಬಂದು ಅದನ್ನ ಒಡೆದು ಹಾಕಿದ್ರು.+ ಅವರು ಬಾಳನ ಯಜ್ಞವೇದಿಗಳನ್ನ, ಮೂರ್ತಿಗಳನ್ನ ಪುಡಿಪುಡಿ ಮಾಡಿದ್ರು.+ ಬಾಳನ ಪುರೋಹಿತನಾಗಿದ್ದ ಮತ್ತಾನನನ್ನ ಯಜ್ಞವೇದಿಗಳ ಮುಂದೆ ಕೊಂದುಹಾಕಿದ್ರು.+ 18  ಯೆಹೋವನಿಗೆ ಸರ್ವಾಂಗಹೋಮ ಬಲಿಗಳನ್ನ ಕೊಡಬೇಕು ಅಂತ ಮೋಶೆಯ ನಿಯಮ ಪುಸ್ತಕದಲ್ಲಿತ್ತು.+ ಖುಷಿಖುಷಿಯಾಗಿ ಹಾಡ್ತಾ ಅವನ್ನ ಕೊಡಬೇಕು ಅಂತ ದಾವೀದ ಹೇಳಿದ್ದ. ಹಾಗಾಗಿ ದಾವೀದ ಯೆಹೋವನ ಆಲಯನ ನೋಡ್ಕೊಳ್ಳೋಕೆ ಪುರೋಹಿತರಲ್ಲಿ ಮತ್ತು ಲೇವಿಯರಲ್ಲಿ ದಳಗಳನ್ನ ಮಾಡಿದ್ದ.+ ಆ ಪುರೋಹಿತರಿಗೆ ಮತ್ತು ಲೇವಿಯರಿಗೆ ಯೆಹೋಯಾದ ಯೆಹೋವನ ಆಲಯನ ನೋಡ್ಕೊಳ್ಳೋಕೆ ಹೇಳಿದ. 19  ಅಷ್ಟೇ ಅಲ್ಲ, ಯಾವುದೇ ತರ ಅಶುದ್ಧರಾಗಿ ಇರೋರು ಯೆಹೋವನ ಆಲಯದ ಒಳಗೆ ಬರದ ಹಾಗೆ ಅದ್ರ ಬಾಗಿಲ ಹತ್ರ ಯೆಹೋಯಾದ ಬಾಗಿಲು ಕಾಯೋರನ್ನೂ+ ನೇಮಿಸಿದ. 20  ಆಮೇಲೆ ಅವನು ನೂರು ಜನ್ರ ಮೇಲೆ ಅಧಿಕಾರಿಗಳ,+ ಪ್ರಧಾನರ, ಜನ್ರ ಅಧಿಪತಿಗಳ ಮತ್ತು ದೇಶದ ಜನ್ರೆಲ್ಲರ ಜೊತೆ ಸೇರಿ ರಾಜನನ್ನ ಯೆಹೋವನ ಆಲಯದಿಂದ ಹೊರಗೆ ಕರ್ಕೊಂಡು ಬಂದ. ಆಮೇಲೆ ಅವರು ಮೇಲಿನ ಬಾಗಿಲಿಂದ ರಾಜನ ಅರಮನೆಗೆ ಬಂದ್ರು ಮತ್ತು ರಾಜನನ್ನ ರಾಜಸಿಂಹಾಸನದ+ ಮೇಲೆ ಕೂರಿಸಿದ್ರು.+ 21  ಆಗ ದೇಶದ ಜನ್ರೆಲ್ಲ ಖುಷಿಪಟ್ರು. ಪಟ್ಟಣದಲ್ಲಿ ಶಾಂತಿ ಇತ್ತು. ಯಾಕಂದ್ರೆ ಅತಲ್ಯ ಸತ್ತು ಹೋಗಿದ್ದಳು.

ಪಾದಟಿಪ್ಪಣಿ

ಅಕ್ಷ. “ಅವನು ಹೊರಗೆ ಹೋದ್ರೂ ಒಳಗೆ ಬಂದ್ರೂ.”
ಸಾಮಾನ್ಯವಾಗಿ ಇಂಥ ಗುರಾಣಿಗಳನ್ನ ಬಿಲ್ಲುಗಾರರು ತಗೊಂಡು ಹೋಗ್ತಿದ್ರು.
ಅಥವಾ “ಎಸೆಯೋ ಅಸ್ತ್ರಗಳನ್ನ.”
ಅಥವಾ “ಮುಕುಟ.”
ಅಕ್ಷ. “ರಾಜನ ಕಂಬ.”
ಅಥವಾ “ಜೈಕಾರ ಹಾಕೋಕೆ ಸನ್ನೆ ಮಾಡ್ತಿದ್ರು.”