ಎರಡನೇ ಪೂರ್ವಕಾಲವೃತ್ತಾಂತ 26:1-23

  • ಉಜ್ಜೀಯ ಯೆಹೂದದ ರಾಜನಾದ (1-5)

  • ಉಜ್ಜೀಯನ ಸೈನ್ಯದ ಸಾಧನೆ (6-15)

  • ಅಹಂಕಾರದಿಂದ ಉಜ್ಜೀಯನಿಗೆ ಕುಷ್ಠ (16-21)

  • ಉಜ್ಜೀಯನ ಮರಣ (22, 23)

26  ಆಮೇಲೆ ಯೆಹೂದದ ಎಲ್ಲ ಜನ್ರು ಸೇರಿ ಅಮಚ್ಯನ ಸ್ಥಾನದಲ್ಲಿ ಅವನ ಮಗ ಉಜ್ಜೀಯನನ್ನ+ ರಾಜ ಮಾಡಿದ್ರು. ಆಗ ಅವನಿಗೆ 16 ವರ್ಷ.+  ರಾಜ* ತೀರಿಹೋದ ಮೇಲೆ ಉಜ್ಜೀಯ ಏಲೋತ್‌+ ಪಟ್ಟಣನ ಮತ್ತೆ ಕಟ್ಟಿ ಅದನ್ನ ಯೆಹೂದಕ್ಕೆ ಸೇರಿಸಿದ.+  ಉಜ್ಜೀಯ+ ರಾಜ ಆದಾಗ ಅವನಿಗೆ 16 ವರ್ಷ. ಅವನು ಯೆರೂಸಲೇಮಿನಿಂದ 52 ವರ್ಷ ಆಳಿದ. ಅವನ ತಾಯಿ ಹೆಸ್ರು ಯೆಕೊಲ್ಯ. ಅವಳು ಯೆರೂಸಲೇಮಿನವಳು.+  ಅವನು ತನ್ನ ತಂದೆ ಅಮಚ್ಯನ ತರಾನೇ ಯೆಹೋವನಿಗೆ ಇಷ್ಟ ಆಗೋದನ್ನೇ ಮಾಡ್ತಾ ಇದ್ದ.+  ಜೆಕರ್ಯನ ಕಾಲದಲ್ಲಿ ಉಜ್ಜೀಯ ದೇವರನ್ನ ಹುಡುಕ್ತಾ ಇದ್ದ. ಸತ್ಯ ದೇವರ ಮೇಲೆ ಭಯಭಕ್ತಿ ಬೆಳೆಸ್ಕೊಳ್ಳೋಕೆ ಅವನಿಗೆ ಸಹಾಯ ಮಾಡಿದವನು ಜೆಕರ್ಯನೇ. ಉಜ್ಜೀಯ ಯೆಹೋವನನ್ನ ಹುಡುಕ್ತಿದ್ದಾಗೆಲ್ಲ ಸತ್ಯ ದೇವರ ಆಶೀರ್ವಾದದಿಂದ ಅಭಿವೃದ್ಧಿ ಆಗ್ತಾ ಹೋದ.+  ಉಜ್ಜೀಯ ಹೋಗಿ ಫಿಲಿಷ್ಟಿಯರ+ ವಿರುದ್ಧ ಯುದ್ಧಮಾಡಿ ಗತ್‌+ ಊರಿನ ಗೋಡೆನ, ಯಬ್ನೆ+ ಮತ್ತು ಅಷ್ಡೋದ್‌+ ಪಟ್ಟಣಗಳ ಗೋಡೆನ ಬೀಳಿಸಿದ. ಆಮೇಲೆ ಅವನು ಅಷ್ಡೋದ್‌ ಮತ್ತು ಫಿಲಿಷ್ಟಿಯರ ಪ್ರದೇಶದಲ್ಲಿ ಪಟ್ಟಣಗಳನ್ನ ಕಟ್ಟಿಸಿದ.  ಫಿಲಿಷ್ಟಿಯರ, ಗೂರ್‌-ಬಾಳಿನಲ್ಲಿದ್ದ ಅರಬಿಯರ+ ಮತ್ತು ಮೆಯನೀಮ್ಯರ ವಿರುದ್ಧ ಯುದ್ಧ ಮಾಡೋಕೆ ಸತ್ಯ ದೇವರು ಅವನಿಗೆ ಸಹಾಯಮಾಡ್ತಾನೇ ಇದ್ದನು.  ಅಮ್ಮೋನಿಯರು+ ಉಜ್ಜೀಯನಿಗೆ ಕಪ್ಪ ಕೊಡೋಕೆ ಶುರುಮಾಡಿದ್ರು. ಅವನು ತುಂಬ ಶಕ್ತಿಶಾಲಿ ಆಗಿದ್ರಿಂದ ಅವನು ಈಜಿಪ್ಟಿನ ತನಕ ಪ್ರಸಿದ್ಧನಾದ.  ಅಷ್ಟೇ ಅಲ್ಲ ಉಜ್ಜೀಯ ಯೆರೂಸಲೇಮಿನ ‘ಮೂಲೆಬಾಗಿಲಿನ’+ ಹತ್ರ, ‘ತಗ್ಗಿನ ಬಾಗಿಲಿನ’+ ಹತ್ರ, ‘ಆಧಾರ ಗೋಡೆಯ’ ಹತ್ರ ಗೋಪುರಗಳನ್ನ ಕಟ್ಟಿಸಿ+ ಅವನ್ನ ಬಲಪಡಿಸಿದ. 10  ಆಮೇಲೆ ಅವನು ಕಾಡಲ್ಲಿ ಗೋಪುರಗಳನ್ನ+ ಕಟ್ಟಿಸಿದ ಮತ್ತು ಬಾವಿಗಳನ್ನ ತೋಡಿಸಿದ* (ಯಾಕಂದ್ರೆ ಅವನ ಹತ್ರ ತುಂಬ ಪ್ರಾಣಿಗಳಿದ್ವು). ಷೆಫೆಲಾ ಮತ್ತು ಬಯಲಿನಲ್ಲೂ* ಹಾಗೇ ಮಾಡಿಸಿದ. ಅವನಿಗೆ ವ್ಯವಸಾಯ ಅಂದ್ರೆ ತುಂಬ ಇಷ್ಟ. ಹಾಗಾಗಿ ಬೆಟ್ಟ ಪ್ರದೇಶಗಳಲ್ಲಿ ಮತ್ತು ಕರ್ಮೆಲಿನಲ್ಲಿ ರೈತರನ್ನ ಮತ್ತು ದ್ರಾಕ್ಷಿತೋಟದ ಕೆಲಸಗಾರರನ್ನ ನೇಮಿಸಿದ. 11  ಉಜ್ಜೀಯನ ಹತ್ರ ಯುದ್ಧಕ್ಕೆ ಯಾವಾಗ್ಲೂ ಸಿದ್ಧವಾಗಿದ್ದ ಒಂದು ಸೈನ್ಯ ಇತ್ತು. ಅವರು ಬೇರೆಬೇರೆ ದಳಗಳಾಗಿ ಯುದ್ಧಕ್ಕೆ ಹೋಗ್ತಿದ್ರು. ರಾಜನ ಕೈಕೆಳಗಿದ್ದ ಅಧಿಕಾರಿಗಳಲ್ಲಿ ಒಬ್ಬನಾಗಿದ್ದ ಹನನ್ಯ ಹೇಳಿದ ಹಾಗೇ ಕಾರ್ಯದರ್ಶಿಯಾಗಿದ್ದ+ ಯೆಗೀಯೇಲ್‌ ಮತ್ತು ಅಧಿಕಾರಿಯಾಗಿದ್ದ ಮಾಸೇಯ ಅವ್ರನ್ನ ಲೆಕ್ಕ ಮಾಡಿ ಪಟ್ಟಿಮಾಡಿದ್ರು.+ 12  ಕುಲದ ಮುಖ್ಯಸ್ಥರು ಈ ವೀರ ಸೈನಿಕರ ಸೇನಾಪತಿಗಳಾಗಿದ್ರು. ಅವ್ರ ಸಂಖ್ಯೆ 2,600 ಆಗಿತ್ತು. 13  ಅವ್ರ ಕೈಕೆಳಗೆ ಯುದ್ಧಕ್ಕೆ ಸಿದ್ಧರಾಗಿದ್ದ 3,07,500 ಸೈನಿಕರಿದ್ರು. ರಾಜನ ಪರವಾಗಿ ಶತ್ರುವಿನ ವಿರುದ್ಧ ಹೋರಾಡ್ತಿದ್ದ ಈ ಸೈನಿಕರು ತುಂಬ ಶಕ್ತಿಶಾಲಿಗಳಾಗಿದ್ರು.+ 14  ಉಜ್ಜೀಯ ಇಡೀ ಸೈನ್ಯಕ್ಕೆ ಗುರಾಣಿ, ಈಟಿ,+ ಶಿರಸ್ತ್ರಾಣ, ಯುದ್ಧ ಕವಚ,+ ಬಿಲ್ಲು ಮತ್ತು ಕವಣೆಗಳನ್ನ+ ಕೊಟ್ಟಿದ್ದ. 15  ಅಷ್ಟೇ ಅಲ್ಲ ಅವನು ಯೆರೂಸಲೇಮಿನಲ್ಲಿ ನಿಪುಣರ ಕೈಗಳಿಂದ ಯುದ್ಧ ಯಂತ್ರಗಳನ್ನ ಮಾಡಿಸಿದ. ಅವನ್ನ ಗೋಪುರಗಳ+ ಮೇಲೆ, ಗೋಡೆಗಳ ಮೂಲೆಗಳಲ್ಲಿ ಇಡಿಸಿದ. ಅವುಗಳಿಂದ ಬಾಣಗಳನ್ನ ಬಿಡಬಹುದಿತ್ತು ಮತ್ತು ದೊಡ್ಡದೊಡ್ಡ ಕಲ್ಲುಗಳನ್ನ ಎಸಿಬಹುದಿತ್ತು. ಉಜ್ಜೀಯನಿಗೆ ದೇವರು ತುಂಬಾ ಸಹಾಯಮಾಡಿದ್ರಿಂದ ಮತ್ತು ಅವನು ಶಕ್ತಿಶಾಲಿ ಆಗಿದ್ರಿಂದ ಅವನು ದೂರದೂರದ ತನಕ ಪ್ರಸಿದ್ಧನಾದ. 16  ಆದ್ರೆ ಅವನು ಶಕ್ತಿಶಾಲಿ ಆದ್ಮೇಲೆ ಅವನ ಹೃದಯ ಅಹಂಕಾರದಿಂದ ತುಂಬಿಕೊಳ್ತು. ಅದು ಅವನನ್ನ ನಾಶಕ್ಕೆ ನಡೆಸ್ತು. ಅವನು ಧೂಪವೇದಿ ಮೇಲೆ ಧೂಪ ಹಾಕೋಕೆ ಯೆಹೋವನ ಆಲಯದ ಒಳಗೆ ಹೋದ. ಹಾಗೆ ಮಾಡಿ ಅವನು ತನ್ನ ದೇವರಾದ ಯೆಹೋವನಿಗೆ ನಂಬಿಕೆದ್ರೋಹ ಮಾಡಿದ.+ 17  ತಕ್ಷಣ ಪುರೋಹಿತ ಅಜರ್ಯ ಮತ್ತು ಧೈರ್ಯವಂತರಾಗಿದ್ದ ಯೆಹೋವನ ಬೇರೆ 80 ಪುರೋಹಿತರು ಅವನ ಹಿಂದೆನೇ ಹೋದ್ರು. 18  ಅವರು ರಾಜ ಉಜ್ಜೀಯನನ್ನ ತಡೀತಾ ಅವನಿಗೆ “ಉಜ್ಜೀಯನೇ, ಯೆಹೋವನಿಗೆ ಧೂಪ ಹಾಕೋದು ನಿನ್ನ ಕೆಲಸ ಅಲ್ಲ!+ ಅದು ಪುರೋಹಿತರ ಕೆಲಸ. ಅವರು ಮಾತ್ರ ಧೂಪ ಹಾಕಬೇಕು. ಯಾಕಂದ್ರೆ ಅವರು ಆರೋನನ ವಂಶದವರು,+ ದೇವರು ಆರಿಸಿಕೊಂಡವರು. ಹಾಗಾಗಿ ಈ ಪವಿತ್ರ ಸ್ಥಳದಿಂದ ಹೊರಗೆ ಹೋಗು. ನೀನು ನಂಬಿಕೆದ್ರೋಹ ಮಾಡ್ತಿದ್ದೀಯ. ನೀನು ಮಾಡಿದ ಈ ಕೆಲಸಕ್ಕೆ ನಿನ್ನ ದೇವರಾದ ಯೆಹೋವ ನಿನಗೆ ಏನೂ ಒಳ್ಳೇದು ಮಾಡಲ್ಲ” ಅಂದ್ರು. 19  ಆದ್ರೆ ಧೂಪ ಹಾಕೋಕೆ ಕೈಯಲ್ಲಿ ಧೂಪದ ಪಾತ್ರೆ ಹಿಡ್ಕೊಂಡಿದ್ದ ಉಜ್ಜೀಯನಿಗೆ ಆ ಪುರೋಹಿತರ ಮೇಲೆ ತುಂಬ ಕೋಪ ಬಂತು.+ ಹೀಗೆ ಅವನು ಕೋಪ ಮಾಡಿಕೊಳ್ತಿರುವಾಗ್ಲೇ ಅವನ ಹಣೆ ಮೇಲೆ ಕುಷ್ಠ+ ಬಂತು. ಇದೆಲ್ಲ ಯೆಹೋವನ ಆಲಯದಲ್ಲಿ, ಧೂಪ ಹಾಕೋ ಧೂಪವೇದಿ ಹತ್ರ ಆ ಪುರೋಹಿತರ ಕಣ್ಮುಂದೆನೇ ನಡಿತು. 20  ಮುಖ್ಯ ಪುರೋಹಿತ ಅಜರ್ಯ ಮತ್ತು ಬೇರೆ ಎಲ್ಲ ಪುರೋಹಿತರು ಅವನ ಕಡೆ ನೋಡಿದಾಗ ಅವನ ಹಣೆ ಮೇಲೆ ಕುಷ್ಠ ಬಂದಿರೋದು ಕಾಣಿಸ್ತು. ಯೆಹೋವ ಅವನಿಗೆ ಕುಷ್ಠ ಬರೋ ತರ ಮಾಡಿದ್ರಿಂದ ತಕ್ಷಣ ಅವರು ಅವನನ್ನ ಅಲ್ಲಿಂದ ಹೊರಗೆ ಕರ್ಕೊಂಡು ಹೋದ್ರು. ಅವನೂ ಬೇಗ ಹೊರಗೆ ಬಂದ. 21  ಸಾಯೋ ತನಕ ರಾಜ ಉಜ್ಜೀಯ ಕುಷ್ಠರೋಗಿಯಾಗೇ ಇದ್ದ. ಅವನು ಬೇರೆ ಮನೆ ಮಾಡ್ಕೊಂಡ.+ ಯಾಕಂದ್ರೆ ಅವನಿಗೆ ಯೆಹೋವನ ಆಲಯದ ಒಳಗೆ ಹೋಗೋಕೆ ಅನುಮತಿ ಇರಲಿಲ್ಲ. ಆ ಸಮಯದಲ್ಲಿ ಅವನ ಮಗ ಯೋತಾಮ ರಾಜನ ಅರಮನೆಯನ್ನ ನೋಡಿಕೊಳ್ತಾ ಜನ್ರಿಗೆ ತೀರ್ಪು ಕೊಡ್ತಿದ್ದ.+ 22  ಉಜ್ಜೀಯನ ಇಡೀ ಜೀವನಚರಿತ್ರೆ ಬಗ್ಗೆ ಆಮೋಚನ ಮಗ ಪ್ರವಾದಿ ಯೆಶಾಯ ಬರಿದಿದ್ದಾನೆ.+ 23  ಕೊನೆಗೆ ಉಜ್ಜೀಯ ತೀರಿಹೋದ. ಅವನ ಪೂರ್ವಜರ ತರ ಅವನಿಗೂ ಸಮಾಧಿಮಾಡಿದ್ರು. “ಅವನೊಬ್ಬ ಕುಷ್ಠರೋಗಿ” ಅಂತ ಹೇಳ್ತಾ ಅವರು ಅವನನ್ನ ರಾಜರ ಸಮಾಧಿಯ ಪಕ್ಕದಲ್ಲಿದ್ದ ಹೊಲದಲ್ಲಿ ಹೂಣಿಟ್ರು. ಅವನ ನಂತ್ರ ಅವನ ಮಗ ಯೋತಾಮ+ ರಾಜನಾದ.

ಪಾದಟಿಪ್ಪಣಿ

ಅದು, ಅವನ ತಂದೆ ಅಮಚ್ಯ.
ಅಥವಾ “ಪ್ರಸ್ಥಭೂಮಿಯಲ್ಲೂ.”
ಅಥವಾ “ಕೊರೆದ.” ಬಹುಶಃ ಬಂಡೆಯನ್ನ.