ಎರಡನೇ ಪೂರ್ವಕಾಲವೃತ್ತಾಂತ 29:1-36

  • ಹಿಜ್ಕೀಯ ಯೆಹೂದದ ರಾಜನಾದ (1, 2)

  • ಹಿಜ್ಕೀಯ ಮಾಡಿದ ಸುಧಾರಣೆ (3-11)

  • ಆಲಯದ ಶುದ್ಧೀಕರಣ (12-19)

  • ಆಲಯದ ಸೇವೆಗಳು ಮತ್ತೆ ಆರಂಭ (20-36)

29  ಹಿಜ್ಕೀಯ+ ರಾಜ ಆದಾಗ ಅವನಿಗೆ 25 ವರ್ಷ. ಅವನು ಯೆರೂಸಲೇಮಿಂದ 29 ವರ್ಷ ಆಳಿದ. ಅವನ ತಾಯಿ ಹೆಸ್ರು ಅಬೀಯ. ಅವಳು ಜೆಕರ್ಯನ ಮಗಳು.+  ಹಿಜ್ಕೀಯ ತನ್ನ ಪೂರ್ವಜ ದಾವೀದನ+ ತರಾನೇ ಯೆಹೋವನಿಗೆ ಇಷ್ಟ ಆಗೋದನ್ನೇ ಮಾಡಿದ.+  ಅವನ ಆಳ್ವಿಕೆಯ ಮೊದಲನೇ ವರ್ಷದ, ಮೊದಲನೇ ತಿಂಗಳಲ್ಲಿ ಅವನು ಯೆಹೋವನ ಆಲಯದ ಬಾಗಿಲುಗಳನ್ನ ತೆಗೆದು ದುರಸ್ತಿ ಮಾಡಿಸಿದ.+  ಆಮೇಲೆ ಅವನು ಪುರೋಹಿತರನ್ನ ಮತ್ತು ಲೇವಿಯರನ್ನ ಕರೆಸಿ ಅವ್ರನ್ನ ಪೂರ್ವದ ಚೌಕದಲ್ಲಿ ಸೇರಿಸಿದ.  ಅವನು ಅವ್ರಿಗೆ “ಲೇವಿಯರೇ, ನಾನು ಹೇಳೋದನ್ನ ಕೇಳಿಸ್ಕೊಳ್ಳಿ. ನಿಮ್ಮನ್ನ ಪವಿತ್ರ ಮಾಡ್ಕೊಳ್ಳಿ.+ ಜೊತೆಗೆ ನಿಮ್ಮ ಪೂರ್ವಜರ ದೇವರಾದ ಯೆಹೋವನ ಆಲಯವನ್ನೂ ಪವಿತ್ರ ಮಾಡಿ. ಅಶುದ್ಧ ಆಗಿರೋದನ್ನ ಈ ಪವಿತ್ರ ಸ್ಥಳದಿಂದ ತೆಗೆದುಹಾಕಿ.+  ಯಾಕಂದ್ರೆ ನಮ್ಮ ಅಪ್ಪಂದಿರು ನಮ್ಮ ದೇವರಾದ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದಾಗಿದ್ದನ್ನೇ ಮಾಡಿ ನಂಬಿಕೆ ದ್ರೋಹಿಗಳಾದ್ರು.+ ಅವರು ಯೆಹೋವನ ಪವಿತ್ರ ಡೇರೆಗೆ ಗೌರವ ಕೊಡಲಿಲ್ಲ. ಆತನನ್ನ ಬಿಟ್ಟು, ಆತನಿಗೆ ಬೆನ್ನು ಹಾಕಿದ್ರು.+  ಅಷ್ಟೇ ಅಲ್ಲ ಅವರು ಮಂಟಪದ ಬಾಗಿಲುಗಳನ್ನ+ ಮುಚ್ಚಿ, ದೀಪಗಳನ್ನ+ ಆರಿಸಿದ್ರು. ಇಸ್ರಾಯೇಲ್‌ ದೇವರ ಪವಿತ್ರ ಸ್ಥಳದಲ್ಲಿ ಧೂಪ ಹಾಕೋದನ್ನ+ ಮತ್ತು ಸರ್ವಾಂಗಹೋಮ ಬಲಿ+ ಕೊಡೋದನ್ನ ನಿಲ್ಲಿಸಿಬಿಟ್ರು.  ಹಾಗಾಗಿ ಯೆಹೋವನಿಗೆ ಯೆಹೂದ ಮತ್ತು ಯೆರೂಸಲೇಮಿನ ಮೇಲೆ ತುಂಬ ಕೋಪ ಬಂತು.+ ಆತನು ಅವ್ರಿಗೆ ಎಂಥ ಗತಿ ತಂದ ಅಂದ್ರೆ ಅವ್ರ ಪರಿಸ್ಥಿತಿ ನೋಡಿ ಜನ ಭಯಪಟ್ರು, ಆಶ್ಚರ್ಯಪಟ್ರು, ಅಣಕಿಸಿದ್ರು. ನೀವು ಈಗ ಅದನ್ನ ನಿಮ್ಮ ಕಣ್ಣಾರೆ ನೋಡ್ತಿದ್ದೀರ.+  ಇದ್ರಿಂದ ನಮ್ಮ ಪೂರ್ವಜರು ಕತ್ತಿಯಿಂದ ಸತ್ತು ಹೋದ್ರು.+ ನಮ್ಮ ಮಕ್ಕಳು ಮತ್ತು ನಮ್ಮ ಹೆಂಡತಿಯರು ಕೈದಿಗಳಾಗಿ ಹೋಗಬೇಕಾಯ್ತು.+ 10  ಇಸ್ರಾಯೇಲ್‌ ದೇವರಾದ ಯೆಹೋವನ ಜೊತೆ ಒಂದು ಒಪ್ಪಂದ ಮಾಡ್ಕೊಳ್ಳೋ ಮೂಲಕ ಆತನ ಕೋಪ ನಮ್ಮನ್ನ ಬಿಟ್ಟು ಹೋಗಬೇಕು ಅನ್ನೋದು ನನ್ನ ಆಸೆ.+ 11  ನನ್ನ ಜನ್ರೇ ಅರಾಮಾಗಿ ಇರೋ ಸಮಯ ಇದಲ್ಲ. ಯಾಕಂದ್ರೆ ಯೆಹೋವ ನಿಮ್ಮನ್ನ ಆರಿಸ್ಕೊಂಡಿದ್ದಾನೆ. ನೀವು ಆತನ ಮುಂದೆ ನಿಂತು ಆತನ ಸೇವೆ ಮಾಡಬೇಕು+ ಮತ್ತು ಆತನಿಗಾಗಿ ಬಲಿಗಳನ್ನ ಅರ್ಪಿಸಿ ಅದ್ರ ಹೊಗೆ ಮೇಲೆ ಏರೋ ಹಾಗೆ ಮಾಡಬೇಕು+ ಅಂತ ಆರಿಸ್ಕೊಂಡಿದ್ದಾನೆ” ಅಂದನು. 12  ಆಗ ಲೇವಿಯರು ಎದ್ದು ನಿಂತು ತಮ್ಮ ಕೆಲಸ ಶುರುಮಾಡಿದ್ರು. ಅವರು ಯಾರಂದ್ರೆ, ಕೆಹಾತ್ಯರಲ್ಲಿ+ ಅಮಾಸೈಯ ಮಗ ಮಹತ್‌, ಅಜರ್ಯನ ಮಗ ಯೋವೇಲ, ಮೆರಾರೀಯರಲ್ಲಿ+ ಅಬ್ದಿಯ ಮಗ ಕೀಷ್‌, ಯೆಹಲ್ಲೆಲೇಲನ ಮಗ ಅಜರ್ಯ, ಗೆರ್ಷೋನ್ಯರಲ್ಲಿ+ ಜಿಮ್ಮನ ಮಗ ಯೋವ ಮತ್ತು ಯೋವನ ಮಗ ಏದೆನ್‌, 13  ಎಲೀಚಾಫಾನನ ಮಕ್ಕಳಲ್ಲಿ ಶಿಮ್ರಿ ಮತ್ತು ಯೆಯೂವೇಲ್‌. ಆಸಾಫನ+ ಮಕ್ಕಳಲ್ಲಿ ಜೆಕರ್ಯ ಮತ್ತು ಮತ್ತನ್ಯ, 14  ಹೇಮಾನನ+ ಮಕ್ಕಳಲ್ಲಿ ಯೆಹೀಯೇಲ್‌ ಮತ್ತು ಶಿಮ್ಮಿ. ಯೆದುತೂನನ+ ಮಕ್ಕಳಲ್ಲಿ ಶೆಮಾಯ ಮತ್ತು ಉಜ್ಜೀಯೇಲ್‌. 15  ಅವರು ತಮ್ಮ ಅಣ್ಣತಮ್ಮಂದಿರನ್ನ ಒಟ್ಟುಸೇರಿಸಿದ್ರು. ಆಮೇಲೆ ಅವ್ರೆಲ್ಲ ತಮ್ಮನ್ನ ಪವಿತ್ರ ಮಾಡ್ಕೊಂಡು ಯೆಹೋವನ ಮಾತಿನ ಪ್ರಕಾರ ರಾಜ ಆಜ್ಞೆ ಕೊಟ್ಟ ಹಾಗೆ ಯೆಹೋವನ ಆಲಯವನ್ನ ಶುದ್ಧಮಾಡೋಕೆ ಬಂದ್ರು.+ 16  ಪುರೋಹಿತರು ಯೆಹೋವನ ಆಲಯವನ್ನ ಶುದ್ಧ ಮಾಡೋಕೆ ಒಳಗೆ ಹೋದ್ರು. ಯೆಹೋವನ ಆಲಯದಲ್ಲಿ ಕಾಣಿಸಿದ ಎಲ್ಲ ಅಶುದ್ಧ ವಸ್ತುಗಳನ್ನ ಹೊರಗೆ ತಂದು, ಯೆಹೋವನ ಆಲಯದ ಅಂಗಳದಲ್ಲಿಟ್ರು.+ ಆಮೇಲೆ ಲೇವಿಯರು ಅವನ್ನ ಕಿದ್ರೋನ್‌ ಕಣಿವೆಗೆ ತಗೊಂಡು ಹೋದ್ರು.+ 17  ಹೀಗೆ ಅವರು ಮೊದಲನೇ ತಿಂಗಳಿನ ಮೊದಲನೇ ದಿನದಲ್ಲಿ ಆಲಯವನ್ನ ಪವಿತ್ರ ಮಾಡೋಕೆ ಶುರುಮಾಡಿದ್ರು. ಪವಿತ್ರ ಮಾಡ್ತಾ ಅದೇ ತಿಂಗಳಿನ ಎಂಟನೇ ದಿನ ಯೆಹೋವನ ಮಂಟಪದ+ ತನಕ ಬಂದ್ರು. ಅವರು ಇನ್ನೂ ಎಂಟು ದಿನದ ತನಕ ಯೆಹೋವನ ಆಲಯವನ್ನ ಪವಿತ್ರ ಮಾಡಿದ್ರು. ಹೀಗೆ ಅವರು ಆ ಕೆಲಸವನ್ನ ಮೊದಲನೇ ತಿಂಗಳಿನ 16ನೇ ದಿನ ಮುಗಿಸಿದ್ರು. 18  ಆಮೇಲೆ ಅವರು ರಾಜ ಹಿಜ್ಕೀಯನ ಹತ್ರ ಹೋಗಿ “ನಾವು ಯೆಹೋವನ ಆಲಯವನ್ನ, ಸರ್ವಾಂಗಹೋಮ ಬಲಿಯ ಯಜ್ಞವೇದಿಯನ್ನ+ ಮತ್ತು ಅದಕ್ಕೆ ಬಳಸೋ ಎಲ್ಲ ಪಾತ್ರೆಗಳನ್ನ,+ ಅರ್ಪಣೆಯ ರೊಟ್ಟಿ ಇಡೋ ಮೇಜನ್ನ+ ಮತ್ತು ಅದಕ್ಕೆ ಬಳಸೋ ಎಲ್ಲ ಪಾತ್ರೆಗಳನ್ನ ಪೂರ್ತಿ ಶುದ್ಧ ಮಾಡಿದ್ವಿ. 19  ರಾಜ ಆಹಾಜ ಆಳ್ತಿದ್ದಾಗ ದೇವರಿಗೆ ನಂಬಿಕೆದ್ರೋಹ ಮಾಡಿ+ ಪಕ್ಕಕ್ಕೆ ಇಟ್ಟುಬಿಟ್ಟಿದ್ದ ಎಲ್ಲ ಪಾತ್ರೆಗಳನ್ನೂ ಸಿದ್ಧಮಾಡಿದ್ದೀವಿ ಮತ್ತು ಅವುಗಳನ್ನ ಪವಿತ್ರ ಮಾಡಿದ್ದೀವಿ.+ ಈಗ ಅವು ಯೆಹೋವನ ಯಜ್ಞವೇದಿ ಮುಂದೆ ಇವೆ” ಅಂದ್ರು. 20  ರಾಜ ಹಿಜ್ಕೀಯ ಬೆಳಿಗ್ಗೆ ಬೇಗ ಎದ್ದು, ಪಟ್ಟಣದ ಎಲ್ಲ ಅಧಿಕಾರಿಗಳನ್ನ ಒಟ್ಟುಸೇರಿಸಿ, ಅವ್ರ ಜೊತೆ ಯೆಹೋವನ ಆಲಯಕ್ಕೆ ಹೋದ. 21  ಅವರು ರಾಜ್ಯಕ್ಕಾಗಿ, ಆರಾಧನ ಸ್ಥಳಕ್ಕಾಗಿ ಮತ್ತು ಯೆಹೂದದ ಜನ್ರಿಗಾಗಿ ಏಳು ಹೋರಿ, ಏಳು ಟಗರು, ಏಳು ಕುರಿಮರಿ ಮತ್ತು ಏಳು ಆಡುಗಳನ್ನ ಪಾಪಪರಿಹಾರಕ ಬಲಿಯಾಗಿ ಕೊಡೋಕೆ ತಂದ್ರು.+ ರಾಜ ಆರೋನನ ವಂಶದ ಪುರೋಹಿತರಿಗೆ, ಈ ಪಶುಗಳನ್ನ ಯೆಹೋವನ ಯಜ್ಞವೇದಿಯ ಮೇಲೆ ಅರ್ಪಿಸೋಕೆ ಹೇಳಿದ. 22  ಪುರೋಹಿತರು ಹೋರಿಗಳನ್ನ ಕಡಿದು+ ಅವುಗಳ ರಕ್ತ ತಗೊಂಡು ಯಜ್ಞವೇದಿ ಮೇಲೆ ಚಿಮಿಕಿಸಿದ್ರು.+ ಆಮೇಲೆ ಟಗರುಗಳನ್ನ ಕಡಿದು ಅವುಗಳ ರಕ್ತ ತಗೊಂಡು ಯಜ್ಞವೇದಿ ಮೇಲೆ ಚಿಮಿಕಿಸಿದ್ರು. ಆಮೇಲೆ ಅವರು ಕುರಿಮರಿಗಳನ್ನ ಕಡಿದು ಅವುಗಳ ರಕ್ತ ತಗೊಂಡು ಯಜ್ಞವೇದಿ ಮೇಲೆ ಚಿಮಿಕಿಸಿದ್ರು. 23  ಕೊನೆಗೆ ಅವರು ಪಾಪಪರಿಹಾರಕ ಬಲಿಗಾಗಿ ತಂದಿದ್ದ ಆಡುಗಳನ್ನ ರಾಜನ ಮತ್ತು ಸಭೆ ಮುಂದೆ ತಗೊಂಡು ಬಂದ್ರು. ಪುರೋಹಿತರು ಅವುಗಳ ತಲೆ ಮೇಲೆ ಕೈ ಇಟ್ರು. 24  ಸರ್ವಾಂಗಹೋಮ ಬಲಿಯನ್ನ ಮತ್ತು ಪಾಪಪರಿಹಾರಕ ಬಲಿಯನ್ನ ಎಲ್ಲ ಇಸ್ರಾಯೇಲ್ಯರ ಪರವಾಗಿ ಅರ್ಪಿಸಬೇಕು ಅಂತ ರಾಜ ಹೇಳಿದ್ದ. ಹಾಗಾಗಿ ಪುರೋಹಿತರು ಇಡೀ ಇಸ್ರಾಯೇಲಿನ ಪಾಪಗಳಿಗಾಗಿ ಪ್ರಾಯಶ್ಚಿತ್ತ ಮಾಡೋಕೆ ಅವನ್ನ ಕಡಿದು, ರಕ್ತವನ್ನ ಯಜ್ಞವೇದಿ ಮೇಲೆ ಸುರಿದು ಪಾಪಪರಿಹಾರಕ ಬಲಿಯನ್ನ ಕೊಟ್ರು. 25  ಅದೇ ಸಮಯಕ್ಕೆ ರಾಜ ಲೇವಿಯರಿಗೆ ಝಲ್ಲರಿಗಳನ್ನ ಮತ್ತು ತಂತಿವಾದ್ಯಗಳನ್ನ+ ಕೈಯಲ್ಲಿ ಹಿಡಿದು ಯೆಹೋವನ ಆಲಯದಲ್ಲಿ ನಿಂತ್ಕೊಳ್ಳೋಕೆ ಹೇಳಿದ. ರಾಜ ದಾವೀದ,+ ಅವನ ದರ್ಶಿಯಾಗಿದ್ದ ಗಾದ+ ಮತ್ತು ಪ್ರವಾದಿ ನಾತಾನ+ ಇವರು ಕೊಟ್ಟಿದ್ದ ಆಜ್ಞೆ ಪ್ರಕಾರನೇ ಲೇವಿಯರು ನಿಂತ್ಕೊಂಡ್ರು. ಈ ಆಜ್ಞೆನ ಯೆಹೋವ ತನ್ನ ಪ್ರವಾದಿಗಳ ಮೂಲಕ ಕೊಟ್ಟಿದ್ದನು. 26  ಹಾಗಾಗಿ ಲೇವಿಯರು ದಾವೀದನ ಸಂಗೀತ ಉಪಕರಣಗಳನ್ನ ಮತ್ತು ಪುರೋಹಿತರು ತುತ್ತೂರಿಗಳನ್ನ ಹಿಡ್ಕೊಂಡು ನಿಂತಿದ್ರು.+ 27  ಆಮೇಲೆ ಹಿಜ್ಕೀಯ ಯಜ್ಞವೇದಿ ಮೇಲೆ ಸರ್ವಾಂಗಹೋಮ ಬಲಿಯನ್ನ ಅರ್ಪಿಸೋಕೆ ಆಜ್ಞೆ ಕೊಟ್ಟ.+ ಆ ಬಲಿಗಳನ್ನ ಕೊಡೋಕೆ ಶುರುಮಾಡಿದ ತಕ್ಷಣ ಇಸ್ರಾಯೇಲಿನ ರಾಜ ದಾವೀದನ ಸಂಗೀತ ವಾದ್ಯಗಳನ್ನ ಅನುಸರಿಸ್ತಾ ಯೆಹೋವನಿಗಾಗಿ ಹಾಡನ್ನ ಹಾಡೋಕೆ ಮತ್ತು ತುತ್ತೂರಿಗಳನ್ನ ಊದೋಕೆ ಶುರುಮಾಡಿದ್ರು. 28  ಹಾಡನ್ನ ಹಾಡ್ತಿದ್ದಾಗ, ತುತ್ತೂರಿ ಊದುತ್ತಿದ್ದಾಗ ಸಭೆಯಲ್ಲಿದ್ದ ಜನ್ರೆಲ್ಲ ನೆಲದ ತನಕ ಬಗ್ಗಿ ನಮಸ್ಕರಿಸಿದ್ರು. ಸರ್ವಾಂಗಹೋಮ ಬಲಿಗಳನ್ನ ಕೊಡೋದು ಮುಗಿಯೋ ತನಕ ಎಲ್ರೂ ಹೀಗೇ ಮಾಡ್ತಾ ಇದ್ರು. 29  ಅವರು ಬಲಿ ಕೊಡೋದು ಮುಗಿದ ಮೇಲೆ, ರಾಜ ಮತ್ತು ಅವನ ಜೊತೆ ಇದ್ದವರು ಎಲ್ರೂ ನೆಲದ ತನಕ ಬಗ್ಗಿ ನಮಸ್ಕರಿಸಿದ್ರು. 30  ಲೇವಿಯರಿಗೆ ದಾವೀದನ ಕೀರ್ತನೆಗಳಿಂದ+ ಮತ್ತು ದರ್ಶಿ ಆಸಾಫನ ಕೀರ್ತನೆಗಳಿಂದ+ ಯೆಹೋವನನ್ನ ಹಾಡಿ ಹೊಗಳೋಕೆ ರಾಜ ಹಿಜ್ಕೀಯ ಮತ್ತು ಅಧಿಕಾರಿಗಳು ಹೇಳಿದ್ರು. ಹಾಗಾಗಿ ಅವರು ಖುಷಿಖುಷಿಯಾಗಿ ಹಾಡಿ ಹೊಗಳ್ತಾ ನೆಲದ ತನಕ ಬಗ್ಗಿ ನಮಸ್ಕರಿಸಿದ್ರು. 31  ಆಮೇಲೆ ಹಿಜ್ಕೀಯ “ಈಗ ನೀವು ಯೆಹೋವನಿಗಾಗೇ ಇದ್ದೀರ. ಹಾಗಾಗಿ ಯೆಹೋವನ ಆಲಯಕ್ಕೆ ಬಲಿಗಳನ್ನ ಮತ್ತು ಕೃತಜ್ಞತಾ ಅರ್ಪಣೆಗಳನ್ನ ತಗೊಂಡು ಹೋಗಿ” ಅಂದ. ಆಗ ಇಡೀ ಸಭೆಯವರು ಬಲಿಗಳನ್ನ ಮತ್ತು ಕೃತಜ್ಞತಾ ಬಲಿಗಳನ್ನ ತಗೊಂಡು ಹೋಗೋಕೆ ಶುರುಮಾಡಿದ್ರು. ಪ್ರತಿಯೊಬ್ಬರು ಸ್ವಇಷ್ಟದಿಂದ ಸರ್ವಾಂಗಹೋಮ ಬಲಿಗಳನ್ನ ತಗೊಂಡು ಬಂದ್ರು.+ 32  ಸರ್ವಾಂಗಹೋಮ ಬಲಿಗಾಗಿ ಸಭೆಯವರು 70 ಹೋರಿ, 100 ಟಗರು, 200 ಕುರಿಮರಿಗಳನ್ನ ತಂದ್ರು. ಇವೆಲ್ಲ ಯೆಹೋವನಿಗೆ ಸರ್ವಾಂಗಹೋಮ ಬಲಿಯಾಗಿ ತಂದಿದ್ರು.+ 33  ಪವಿತ್ರ ಅರ್ಪಣೆಗಾಗಿ 600 ಹೋರಿ ಮತ್ತು 3,000 ಕುರಿ ತಂದಿದ್ರು. 34  ಆದ್ರೆ ಸರ್ವಾಂಗಹೋಮ ಬಲಿಗಾಗಿ ತಂದಿದ್ದ ಪಶುಗಳ ಚರ್ಮ ಸುಲಿಯೋಕೆ ಸಾಕಷ್ಟು ಪುರೋಹಿತರು ಇರಲಿಲ್ಲ. ಹಾಗಾಗಿ ಅವ್ರ ಅಣ್ಣತಮ್ಮಂದಿರಾದ ಲೇವಿಯರು ಅವ್ರಿಗೆ ಸಹಾಯ ಮಾಡಿದ್ರು.+ ಆ ಕೆಲಸ ಮುಗಿಯೋ ತನಕ ಮತ್ತು ಪುರೋಹಿತರು ತಮ್ಮನ್ನೇ ಪವಿತ್ರ ಮಾಡ್ಕೊಳ್ಳೋ ತನಕ ಲೇವಿಯರು ಅವ್ರಿಗೆ ಸಹಾಯ ಮಾಡಿದ್ರು.+ ಪುರೋಹಿತರಿಗಿಂತ ಹೆಚ್ಚಾಗಿ ಲೇವಿಯರು ತಮ್ಮನ್ನ ಪವಿತ್ರ ಮಾಡ್ಕೊಳ್ಳೋದ್ರಲ್ಲಿ ಒಂದು ಹೆಜ್ಜೆ ಮುಂದೆನೇ ಇದ್ರು. 35  ಇದ್ರ ಜೊತೆ ತುಂಬ ಸರ್ವಾಂಗಹೋಮ ಬಲಿಗಳನ್ನ,+ ಸಮಾಧಾನ ಬಲಿಗಳ+ ಕೊಬ್ಬಿದ ಭಾಗಗಳನ್ನ ಮತ್ತು ಸರ್ವಾಂಗಹೋಮ ಬಲಿಗಾಗಿರೋ ಪಾನ ಅರ್ಪಣೆಗಳನ್ನ+ ಕೊಡೋದು ಬಾಕಿ ಇತ್ತು. ಹೀಗೆ ಯೆಹೋವನ ಆಲಯದಲ್ಲಿ ಸೇವೆಗಳನ್ನ ಮತ್ತೆ ಶುರುಮಾಡಲಾಯ್ತು. 36  ಸತ್ಯ ದೇವರು ಜನ್ರಿಗಾಗಿ ಮಾಡಿದ ವಿಷ್ಯಗಳಿಗಾಗಿ ಹಿಜ್ಕೀಯ ಮತ್ತು ಎಲ್ಲ ಜನ್ರು ತುಂಬ ಖುಷಿಪಟ್ರು.+ ಯಾಕಂದ್ರೆ ಈ ಎಲ್ಲ ವಿಷ್ಯಗಳು ಬೇಗಬೇಗ ನಡೆದ್ವು.

ಪಾದಟಿಪ್ಪಣಿ